ಪ್ರಧಾನಿ ಮೋದಿ ಸತ್ಯ ಹೇಳಿದ್ದಾರೆ. ಆದರೆ...

Photo: screengrab/x.com/narendramodi
ಪರಿಸರ ಮತ್ತು ಕ್ಲೈಮೇಟ್ ಡೈನಾಮಿಕ್ಸ್ನ ಭವಿಷ್ಯದ ಕುರಿತು ರಾಷ್ಟ್ರೀಯ ಹಸಿರು ನ್ಯಾಯಪೀಠವು (ಎನ್ಜಿಟಿ) ಆಯೋಜಿಸಿದ್ದ ಅಂತರ್ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದ (ಸೆ.19) ಪ್ರಧಾನಿ ಮೋದಿಯವರು ‘‘ಹಲವಾರು ದಶಕಗಳಿಂದ ಹವಾಮಾನ ವೈಪರೀತ್ಯಕ್ಕೆ ಅಭಿವೃದ್ಧಿಶೀಲ ದೇಶಗಳೇ ಕಾರಣ ಎಂದು ದೂರಲಾಗುತ್ತಿದೆ. ಆದರೆ, ತಲಾವಾರು ಲೆಕ್ಕಾಚಾರದಲ್ಲಿ ಹವಾಮಾನ ವೈಪರೀತ್ಯಗಳಿಗೆ ಶ್ರೀಮಂತ ದೇಶಗಳ ಕೊಡುಗೆಯೇ ಹೆಚ್ಚು’’ ಎಂದು ಹೇಳಿದ್ದರು. ‘‘ಜಾಗತಿಕ ಇಂಗಾಲ ಹೊರಸೂಸುವಿಕೆಯ ಸಮಸ್ಯೆಗಳಿಗೆ ಭಾರತವನ್ನು ದೋಷಿ ಎಂದು ಪರಿಗಣಿಸಬಾರದು. ಇಂಗಾಲ ಹೊರಸೂಸುವಿಕೆಯ ಜಾಗತಿಕ ಸರಾಸರಿಗೆ ಹೋಲಿಸಿದರೆ ಭಾರತದ ಪಾಲು ಅರ್ಧಕ್ಕರ್ಧ ಕಡಿಮೆ ಇದೆ. ಅದೇ ವೇಳೆಗೆ ಶ್ರೀಮಂತ ದೇಶಗಳ ಪಾಲು ಸರಾಸರಿಯ ಆರು ಪಟ್ಟು ಹೆಚ್ಚಿದೆ’’ ಎಂದು ಪ್ರಧಾನ ಮಂತ್ರಿಯವರು ತಮ್ಮ ಭಾಷಣದಲ್ಲಿ ಹೇಳಿದ್ದರು.
2021ರ COP26 ಗ್ಲಾಸ್ಗೊ ಶೃಂಗಸಭೆಯ ನಿರ್ಣಯದಂತೆ, ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸಿಕೊಳ್ಳಲು, ಭಾರತವು 2070ರ ಅಂತಿಮ ಗಡುವನ್ನು ತನಗೆ ತಾನೇ ವಿಧಿಸಿಕೊಂಡಿದ್ದು, ಅದಕ್ಕಾಗಿ ‘ಪಂಚಮಿತ್ರ’ ಸಂಕಲ್ಪಗಳನ್ನು ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮೋದಿಯವರು ಬಿಚ್ಚಿಟ್ಟಿರುವ ವಾಸ್ತವಾಂಶಗಳು ಮಹತ್ವದ್ದಾಗಿವೆ. ಅಸಲಿ ವಿಷಯ ಏನೆಂದರೆ, ಜಗತ್ತಿನ ಅಭಿವೃದ್ಧಿಶೀಲ ದೇಶಗಳಿಗೆ ಹಾಲಿ ತಮ್ಮಲ್ಲಿರುವಂತಹ ಇಂಗಾಲ ಕಾರುವ ಕಲ್ಲಿದ್ದಲು ಉಷ್ಣವಿದ್ಯುತ್ ಸ್ಥಾವರಗಳು, ಪೆಟ್ರೋಲ್-ಡೀಸೆಲ್ ವಾಹನಗಳು... ಇತ್ಯಾದಿಗಳನ್ನೆಲ್ಲ ಬದಿಗೆ ಸರಿಸಿ, ನವೀಕರಿಸಬಲ್ಲ ಇಂಧನಮೂಲಗಳು, ವಿದ್ಯುತ್ ಅಥವಾ ಹೈಡ್ರೋಜನ್ ಚಾಲಿತ ವಾಹನಗಳು, ಮಾಲಿನ್ಯ ರಹಿತ ಕೈಗಾರಿಕೆಗಳನ್ನೆಲ್ಲ ಏಕಾಏಕಿ ಮರುರೂಪಿಸಿಕೊಳ್ಳಲು ಅಪಾರ ಹಣದ ಅಗತ್ಯವಿದೆ. ಒಂದು ಅಂದಾಜಿನ ಪ್ರಕಾರ, 2050ರ ಹೊತ್ತಿಗೆ ಜಗತ್ತಿಗೆ, ನೆಟ್ ಝೀರೊ ಸಾಧಿಸಿಕೊಳ್ಳಲು 125 ಲಕ್ಷ ಕೋಟಿ ಡಾಲರುಗಳ ಅಗತ್ಯವಿದೆ. ಕೇವಲ ಭಾರತಕ್ಕೇ 2070ರ ಹೊತ್ತಿಗೆ 2.5 ಲಕ್ಷ ಕೋಟಿ ಡಾಲರುಗಳ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ, ಅಭಿವೃದ್ಧಿಶೀಲ ದೇಶಗಳೆಲ್ಲ ಶ್ರೀಮಂತ ದೇಶಗಳ ಜೊತೆ ಚೌಕಾಶಿಗೆ ತೊಡಗಿಕೊಂಡಿವೆ. ತಮಗಿಂತ ಹೆಚ್ಚಿನ ತಲಾವಾರು ಮಾಲಿನ್ಯ ಹೊಂದಿರುವ ಶ್ರೀಮಂತ ದೇಶಗಳು ತಮ್ಮ ನೆಟ್ ಝೀರೊ ವೆಚ್ಚದಲ್ಲಿ ಪಾಲು ಭರಿಸಬೇಕೆಂಬುದು ಬಡ ಮತ್ತು ಅಭಿವೃದ್ಧಿಶೀಲ ದೇಶಗಳ ವಾದ. ಮೋದಿಯವರೂ ಇದೇ ವಾದವನ್ನು ಜಾಗತಿಕ ಫೋರಂಗಳಲ್ಲಿ ಮುಂದಿಡುತ್ತಿದ್ದಾರೆ.
ಅವರು ಇನ್ನೂ ಮುಂದುವರಿದು, ಶ್ರೀಮಂತ ರಾಷ್ಟ್ರಗಳವರು ತಮಗೆ ರಾಜಕೀಯವಾಗಿ ಸಮಸ್ಯೆ ಮಾಡಬಹುದಾದ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಶೀಲ ದೇಶಗಳು ಬಳಸಿಕೊಳ್ಳಲು ಅಡ್ಡಿ ಮಾಡುತ್ತಿದ್ದಾರೆ. ಹಾಗಾಗಿ ಭಾರತದಲ್ಲಿ ನ್ಯೂಕ್ಲಿಯರ್ ವಿದ್ಯುತ್ ಸಾಮರ್ಥ್ಯ ವಿಸ್ತರಣೆಗೆ ತಡೆಯಾಗುತ್ತಿದೆ. ತಮ್ಮ ರಾಜಕೀಯ ಎದುರಾಳಿಗಳು ಈ ವಿಚಾರದಲ್ಲಿ ನ್ಯಾಯಾಂಗದ ಕದ ತಟ್ಟುತ್ತಿದ್ದಾರೆ ಎಂದು ತಮ್ಮ ಭಾಷಣದಲ್ಲಿ ಮೋದಿಯವರು ಹೇಳಿದ್ದರು. ಎನ್ಜಿಟಿ ಆಯೋಜಿಸಿ, ಸ್ವತಃ ಭಾರತದ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ನ್ಯಾ. ಸೂರ್ಯಕಾಂತ್, ಎನ್ಜಿಟಿಯ ಅಧ್ಯಕ್ಷ ನ್ಯಾ. ಪ್ರಕಾಶ್ ಶ್ರೀವಾಸ್ತವ ಅವರು ಹಾಜರಿದ್ದ ಆ ಸಭೆಯಲ್ಲಿ ಪ್ರಧಾನಿಯವರ ಈ ಹೇಳಿಕೆ ಮಹತ್ವದ್ದೆನ್ನಿಸುತ್ತದೆ.
ಭಾರತವು ‘ನೆಟ್ ಝೀರೊ’ ಸಾಧಿಸಬೇಕೆಂಬುದೇನೋ ಸರಿ. ಆದರೆ, ನಮ್ಮ ಸನ್ನಿವೇಶ, ಸಂಪನ್ಮೂಲ ಲಭ್ಯತೆ ಇತ್ಯಾದಿಗಳನ್ನೆಲ್ಲ ಪರಿಗಣನೆಗೆ ತೆಗೆದುಕೊಳ್ಳದೆ, ಏಕಾಏಕಿ ಹತ್ತಾರು ದೋಣಿಗಳಿಗೆ ಏಕಕಾಲದಲ್ಲಿ ಕಾಲಿಟ್ಟಾಗ ಮತ್ತು ಈ ಎಲ್ಲ ವಿಚಾರಗಳ ಕುರಿತು ಒಂದು ಸಮಗ್ರ ಚಿಂತನೆ ಇಲ್ಲದಾಗ ಅಪಾಯದ ಸಾಧ್ಯತೆಗಳೇ ಹೆಚ್ಚು. ಉದ್ಯೋಗಾವಕಾಶ ಕಲ್ಪಿಸುವ ಹೆಸರಿನಲ್ಲಿ ಮೊಬೈಲ್ ಫೋನ್ ಅಸೆಂಬ್ಲಿಗೆ ಸರಕಾರಿ ಖರ್ಚಿನಲ್ಲಿ (PLI ಒದಗಿಸಿ) ಭಾರತದೊಳಗೆ ಅವಕಾಶ ಮಾಡಿಕೊಟ್ಟು, ಅದನ್ನು ವಿದೇಶಕ್ಕೆ ರಫ್ತು ಮಾಡುವುದು, ಅದಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸುವುದು; ಹಂತಹಂತವಾಗಿ ತಗ್ಗಿಸಬೇಕಿರುವ ಉಷ್ಣವಿದ್ಯುತ್ ಸ್ಥಾವರಗಳ ಹಾಲಿ 230GW ಸಾಮರ್ಥ್ಯವನ್ನು ತಗ್ಗಿಸುವ ಬದಲು 2035ರ ಹೊತ್ತಿಗೆ 315GWಗೆ ಏರಿಸಲು ನಿರ್ಧರಿಸುವುದು; ಅನಗತ್ಯವಾಗಿ ಅತಿ ವಿದ್ಯುತ್ ಬೇಡುವ ಡೇಟಾ ಸೆಂಟರುಗಳಿಗೆ ಪ್ರೋತ್ಸಾಹ; ಸೂಕ್ತ ಸಿದ್ಧತೆ ಇಲ್ಲದೆ ಎಥೆನಾಲ್ ಮತ್ತು ವಿದ್ಯುತ್ ಚಾಲಿತ ವಾಹನಗಳನ್ನು ಮಾರುಕಟ್ಟೆಗೆ ತುರುಕಿಸುತ್ತಿರುವುದು... ಇವೆಲ್ಲವೂ ದೇಶದ ನೈಸರ್ಗಿಕ ಸಂಪತ್ತುಗಳ ಮೇಲೆ, ಪರಿಸರದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತಿವೆ.
ಭಾರತವು ಇಂಗಾಲ ಹೊರಸೂಸುವಿಕೆಯ ಜಾಗತಿಕ ಸರಾಸರಿಯಲ್ಲಿ ಅರ್ಧಕ್ಕಿಂತ ಕೆಳಗಿದೆ ಎಂಬುದು ಸಮಾಧಾನಕರ ಅಂಶವಾದರೂ, ಜಗತ್ತಿನ ಜನಸಂಖ್ಯೆಯ ಶೇ. 18 ನಮ್ಮಲ್ಲೇ ಇರುವುದರಿಂದ ನಮ್ಮ ಇಂಗಾಲ ಹೊರಸೂಸುವಿಕೆ ಕಿಂಚಿತ್ ಹೆಚ್ಚಿದರೂ, ಅದು ಒಟ್ಟು ಪ್ರಮಾಣದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳೇ ಹೆಚ್ಚು. ಈ ಹಿನ್ನೆಲೆಯಲ್ಲಿ ಒಂದು ಸಂತುಲನವನ್ನು ಕಂಡುಕೊಂಡು ಮುಂದುವರಿಯುವುದು ಸರಕಾರದ ಧರ್ಮವಾಗಬೇಕು.
ಸಂತೆ ಮಾರುಕಟ್ಟೆಯಲ್ಲಿ ಕಂಡದ್ದೆಲ್ಲ ತನಗೂ ಒಂದು ಬೇಕೆಂಬ ಹಪಾಹಪಿ ದೇಶಕ್ಕೆ ಮಾರಕ ಆಗಲಿದೆ. ನಮ್ಮ ತಳಪಾಯ ಗಟ್ಟಿ ಇಲ್ಲದಿದ್ದರೆ, ಈ ಉದಾರೀಕೃತ ಜಗತ್ತಿನಲ್ಲಿ ಜಾಗತಿಕ ಶಕ್ತಿಗಳಿಗೆ ನಮ್ಮ ಉತ್ಪನ್ನಗಳ ಮಾರುಕಟ್ಟೆ ತಗ್ಗಿಸಲು ಅಗತ್ಯವಿರುವ ಹತ್ಯಾರುಗಳನ್ನು ನಾವೇ ಕೈಯಾರೆ ಒಪ್ಪಿಸಿ, ಕೋಲುಕೊಟ್ಟು ಪೆಟ್ಟು ತಿಂದಂತಾಗುತ್ತದೆ. ಬಾಲಕಾರ್ಮಿಕರ ಬಳಕೆ, ಕಾರ್ಮಿಕರ ಬಲವಂತದ ಬಳಕೆ (forced labour), ಪರಿಸರ ಮತ್ತು ಮರುಬಳಕೆ ನಿರ್ವಹಣೆಯಲ್ಲಿ ಲೋಪಗಳು, ಸಬ್ಸಿಡಿ, ತ್ಯಾಜ್ಯ ನಿರ್ವಹಣೆಯಲ್ಲಿ ಲೋಪಗಳು... ಹೀಗೆ ಈಗಾಗಲೇ ಹಲವಾರು ಸಬೂಬುಗಳನ್ನು ಮುಂದಿಟ್ಟು ಭಾರತದ ರಫ್ತು ಚಟುವಟಿಕೆಗಳಿಗೆ ಅಡ್ಡಿ, ತಾರಿಫ್ಗಳ ಹೇರಿಕೆ ನಡೆಯುತ್ತಿದೆ.
ಅವರಿವರು ಮಾಡಿದರೆಂದು ನಾವೂ ಅದನ್ನೇ ಮಾಡಹೊರಡುವ ಫ್ಯಾನ್ಸಿ ತೀರ್ಮಾನಗಳಿಂದ ದೇಶಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದನ್ನು ಭಾರತ ಸರಕಾರ ಅರ್ಥ ಮಾಡಿಕೊಂಡು ಮುಂದಡಿ ಇಡಬೇಕಿದೆ.






