ಕೈಗಾರಿಕೀಕರಣದ ಬೆನ್ನೆಲುಬಾಗಿದ್ದ ಐಡಿಬಿಐ ಬ್ಯಾಂಕಿನ ಖಾಸಗೀಕರಣ

ಸಾಂದರ್ಭಿಕ ಚಿತ್ರ Photo: PTI
ಅಕ್ಟೋಬರ್ 14, 2026ರಂದು ಕೇಂದ್ರ ಸರಕಾರವು ತನ್ನ ಒಡೆತನದಲ್ಲಿದ್ದ ಐಡಿಬಿಐ ಬ್ಯಾಂಕನ್ನು ಕೆನಡಾದ ಪ್ರೇಮ್ ವತ್ಸ ಅವರ ಫೇರ್ ಫೇಕ್ಸ್ ಫೈನಾನ್ಶಿಯಲ್ ಹೋಲ್ಡಿಂಗ್ ಕಂಪೆನಿಗೆ ಮಾರಾಟ ಮಾಡಲು ಒಪ್ಪಿಗೆ ನೀಡಿತು. ಸರಕಾರ ಮತ್ತು ಜೀವವಿಮಾ ನಿಗಮದ ಹಿಡಿತದಲ್ಲಿದ್ದ ಶೇ. 60.72ರಷ್ಟು ಶೇರುಗಳನ್ನು ಕೆನಡಾದ ಕಂಪೆನಿಯು ರೂ. 52,878 ಕೋಟಿಗೆ ಖರೀದಿಸಲಿದೆ. ಈ ಪ್ರಕ್ರಿಯೆಯಿಂದ ಸುಮಾರು 60 ವರ್ಷ ಸರಕಾರದ ಅಧೀನದಲ್ಲಿದ್ದ ಹಣಕಾಸು ಸಂಸ್ಥೆಯನ್ನು ವಿದೇಶಿ ಮೂಲದ ಮಾಲಕರಿಗೆ ಹಸ್ತಾಂತರಿಸಲಿದೆ.
ಸ್ವಾತಂತ್ರ್ಯೋತ್ತರ ದಿನಗಳಲ್ಲಿ ಅತ್ಯಂತ ಹಿಂದುಳಿದ ಆರ್ಥಿಕತೆಗಳಲ್ಲಿ ಒಂದಾಗಿದ್ದ ಭಾರತದಲ್ಲಿ ದ್ರುತ ಗತಿಯ ಪ್ರಗತಿಗೆ ಆಧುನಿಕ ಕೈಗಾರಿಕೆಗಳು ಅಗತ್ಯ ಎಂಬುದನ್ನು ಅಂದಿನ ರಾಜಕೀಯ ನಾಯಕರು ಮನಗಂಡಿದ್ದರು. ಇದಕ್ಕೆ ಪೂರಕವಾದ ಹಣಕಾಸನ್ನು ಸರಕಾರವು ಒದಗಿಸಬೇಕಿತ್ತು. ಈ ಅಗತ್ಯದ ಹಿನ್ನೆಲೆಯಲ್ಲಿ 1948ರಲ್ಲಿ ಭಾರತೀಯ ಕೈಗಾರಿಕಾ ಹಣಕಾಸು ಸಂಸ್ಥೆಯನ್ನು (ಐಎಫ್ಸಿಐ) ಸ್ಥಾಪಿಸಲಾಯಿತು. 1950ರ ದಶಕದಲ್ಲಿ ಸ್ಟೇಟ್ ಬ್ಯಾಂಕು ಮತ್ತು ಜೀವ ವಿಮೆಯನ್ನು ರಾಷ್ಟ್ರೀಕರಣಗೊಳಿಸಲಾಯಿತು, ಮಾತ್ರವಲ್ಲ ಪ್ರತೀ ರಾಜ್ಯದಲ್ಲಿಯೂ ರಾಜ್ಯ ಹಣಕಾಸು ಕಾರ್ಪೊರೇಶನ್ (ಎಸ್ಎಫ್ಸಿ) ಅನ್ನು ಆರಂಭಿಸಿ ಕೈಗಾರಿಕಾ ರಂಗಕ್ಕೆ ಎಲ್ಲಾ ಮಟ್ಟದಲ್ಲಿಯೂ ಹಣಕಾಸು ಸುಲಭದಲ್ಲಿ ಸಿಗುವಂತೆ ಮಾಡಲಾಯಿತು. ಅದೇ ದಶಕದಲ್ಲಿ ಖಾಸಗಿ ಮತ್ತು ಸರಕಾರದ ಸಹಭಾಗಿತ್ವದಲ್ಲಿ ಇಂಡಸ್ಟ್ರಿಯಲ್ ಕ್ರೆಡಿಟ್ ಆಂಡ್ ಇನ್ವೆಸ್ಟ್ಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ (ಐಸಿಐಸಿಐ) ಎಂಬ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಮುಖ್ಯವಾಗಿ ಕೈಗಾರಿಕೆಗಳ ಅಭಿವೃದ್ಧಿಗೆ ಸಾಲ ಒದಗಿಸುವ ಈ ರಂಗವನ್ನು ಅಭಿವೃದ್ಧಿ ಹಣಕಾಸು ರಂಗವೆಂದು ಗುರುತಿಸಿ ಅದರ ಬೆಳವಣಿಗೆ ಮತ್ತು ನಿಯಂತ್ರಣಕ್ಕೋಸ್ಕರ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ ಎಂಬ ಹೊಸತೊಂದು ಕೇಂದ್ರ ಹಣಕಾಸು ಸಂಸ್ಥೆಯನ್ನು 1964ರಲ್ಲಿ ಸಂಸತ್ತಿನ ಶಾಸನದ (ಐಡಿಬಿಐ ಆಕ್ಟ್) ಮೂಲಕ ಸ್ಥಾಪಿಸಲಾಯಿತು.
ಐಡಿಬಿಐ ಎಂದು ಖ್ಯಾತಿ ಪಡೆದ ಈ ಹಣಕಾಸು ಸಂಸ್ಥೆ ಮುಂದಿನ ದಶಕಗಳಲ್ಲಿ ದೇಶದ ಕೈಗಾರಿಕೆಗಳ ವಿಕಾಸದಲ್ಲಿ ಅನನ್ಯವಾದ ಪಾತ್ರವನ್ನು ವಹಿಸಿತು. ಅಭಿವೃದ್ಧಿ ಹಣಕಾಸು ಸಂಸ್ಥೆಗಳ ನಿಯಂತ್ರಣವೂ ಅಲ್ಲದೆ, ಐಡಿಬಿಐಯು ತಾನೇ ಸ್ವತಃ ದೊಡ್ಡ ದೊಡ್ಡ ಹೊಸ ಉದ್ದಿಮೆಗಳಿಗೆ ಅಗತ್ಯವಿದ್ದ ಸಾಲವನ್ನು ನೀಡುತ್ತಿತ್ತು. ಅವುಗಳಿಗೆ ಬೇಕಾದ ತಾಂತ್ರಿಕ ಮತ್ತು ಹಣಕಾಸಿಗೆ ಸಂಬಂಧಿಸಿದ ಸಲಹೆಗಳನ್ನು ಕೊಡುವ ಕೌಶಲವನ್ನು ಸಂಸ್ಥೆ ಬೆಳೆಸಿತ್ತು. ಹೀಗೆ ಹಣಕಾಸು ಒದಗಿಸುವ ಸಂಸ್ಥೆಯಾಗಿ, ನಿಯಂತ್ರಕನಾಗಿ ಮತ್ತು ಸಲಹಾ ಸಂಸ್ಥೆಯಾಗಿ ಮಹತ್ವವಾದ ಪಾತ್ರವನ್ನು ಐಡಿಬಿಐಯು ವಹಿಸಿತ್ತು. ಮುಂದೆ ದೇಶದ ಆರ್ಥಿಕ ಪ್ರಗತಿಗೆ ಬ್ಯಾಂಕುಗಳು ತಮ್ಮಲ್ಲಿರುವ ಸಂಪನ್ಮೂಲಗಳನ್ನು ವಿನಿಯೋಗಿಸಬೇಕೆಂಬ ಉದ್ದೇಶದಿಂದ 1969ರಲ್ಲಿ ಅವುಗಳ ರಾಷ್ಟ್ರೀಕರಣವೂ ಆಯಿತು. ಆ ಬಳಿಕವೂ ಐಡಿಬಿಐಯು ಕೈಗಾರಿಕಾ ವಿಕಾಸದಲ್ಲಿ ತನ್ನದೇ ಛಾಪನ್ನು ಉಳಿಸಿಕೊಂಡಿತು.
1990ರ ದಶಕದಲ್ಲಿ ಆರಂಭವಾದ ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣದ ಶಕೆಯಲ್ಲಿ ದೇಶದ ಹಿತದೃಷ್ಟಿಯಿಂದ, ರಾಷ್ಟ್ರೀಕೃತ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲಿಲ್ಲ; ಆದರೆ ಖಾಸಗಿಯವರ ಒಡೆತನದಲ್ಲಿ ಹೊಸ ಬ್ಯಾಂಕುಗಳು ಮತ್ತು ವಿದೇಶಿ ಬ್ಯಾಂಕುಗಳ ಪ್ರವೇಶಕ್ಕೆ ಉತ್ತೇಜನ ನೀಡಲಾಯಿತು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಮಾಡಿ ಅಭಿವೃದ್ಧಿ ಬ್ಯಾಂಕು ಮತ್ತು ವಾಣಿಜ್ಯ ಬ್ಯಾಂಕು ಎಂಬ ಅಂತರವನ್ನು ಅಳಿಸಿ ಯುನಿವರ್ಸಲ್ ಬ್ಯಾಂಕು ಎಂಬ ಕಲ್ಪನೆಗೆ ಚಾಲನೆ ನೀಡಲಾಯಿತು. ಈ ಬದಲಾವಣೆಯಲ್ಲಿ ಐಡಿಬಿಐ ಮತ್ತು ಐಸಿಐಸಿಐ ಸಂಸ್ಥೆಗಳು ತಮ್ಮ ವ್ಯವಹಾರದ ಮಾದರಿಗಳನ್ನು ಬದಲಾಯಿಸಿ ವಾಣಿಜ್ಯ ಬ್ಯಾಂಕುಗಳಾಗಿ ಕಾರ್ಯನಿರ್ವಹಿಸಲು ಆರಂಭಿಸಿದವು ಮತ್ತು ಅವುಗಳು ಐಡಿಬಿಐ ಬ್ಯಾಂಕು ಮತ್ತು ಐಸಿಐಸಿಐ ಬ್ಯಾಂಕುಗಳಾಗಿ ಪುನರ್ನಾಮಕರಣಗೊಂಡವು.
2000ದ ಮೊದಲ ದಶಕದಲ್ಲಿ ಸರಕಾರದ ಸ್ವಾಮ್ಯದಲ್ಲಿದ್ದ ಐಡಿಬಿಐ ಬ್ಯಾಂಕು ತನ್ನ ಸಾಲನೀಡಿಕೆ ಮತ್ತು ನಿರ್ವಹಣೆಯಲ್ಲಿ ಆಗುತ್ತಿದ್ದ ಪ್ರಶ್ನಾರ್ಹ ನಿರ್ಧಾರಗಳಿಂದ ನಷ್ಟವನ್ನು ಅನುಭವಿಸಿತು. ಆದರೆ 2010ರ ದಶಕದಲ್ಲಿ ವಿಶೇಷಕ್ರಮಗಳನ್ನು ಕೈಗೊಂಡ ಸರಕಾರವು ಹೊಸ ಬಂಡವಾಳವನ್ನೂ ಹೂಡಿ ಬ್ಯಾಂಕು ಮತ್ತೆ ಲಾಭದಾಯಕವಾಗುವಂತೆ ಮಾಡಿತು. 2020-21ಕ್ಕೆ ಅದರ ನಿವ್ವಳ ಲಾಭ ರೂ. 1,359 ಕೋಟಿಯಷ್ಟಾಯಿತು; 2025-26ಕ್ಕೆ ಅದು ರೂ. 9,513 ಕೋಟಿಗೆ ಏರಿತು. ಐಡಿಬಿಐ ಬ್ಯಾಂಕು ತನ್ನ ಹಿಂದಿನ ಆರೋಗ್ಯಕರ ಪರಿಸ್ಥಿತಿಗೆ ಮರಳಿತು.
ಈ ಸನ್ನಿವೇಶದಲ್ಲಿ ಐಡಿಬಿಐ ಬ್ಯಾಂಕನ್ನು ವಿದೇಶಿ ಕಂಪೆನಿಗೆ ಮಾರುವ ಅನಿವಾರ್ಯತೆ ಏನಿತ್ತು ಎಂಬ ಪ್ರಶ್ನೆ ಏಳುತ್ತದೆ. ಸರಕಾರದ ಪ್ರಕಾರ ತಾನು ಹಣಕಾಸು ಸೇರಿದಂತೆ ಯಾವುದೇ ವ್ಯವಹಾರದಲ್ಲಿ ತೊಡಗಬಾರದು. ಅವಕಾಶ ಬಂದಾಗಲೆಲ್ಲ ತನ್ನ ಸ್ವಾಮ್ಯದ ಕಂಪೆನಿಗಳನ್ನು ಖಾಸಗಿ ಉದ್ದಿಮೆದಾರರಿಗೆ ಮಾರಿದರೆ ತನ್ನ ಯೋಜನೆಗಳಿಗೆ ಅಗತ್ಯವಾದ ಸಂಪನ್ಮೂಲಗಳನ್ನು ಕ್ರೋಡೀಕರಿಸಬಹುದು, ಸರಕಾರದ ಆಯವನ್ನು ಹೆಚ್ಚಿಸಬಹುದು ಎಂದು ತರ್ಕಿಸುತ್ತದೆ. ಭಾರತದಂತಹ ದೇಶದಲ್ಲಿ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಅವುಗಳ ಉಪಯೋಗ ಸಮಷ್ಟಿಯ ಒಳಿತಿಗಾಗಿ ನಡೆಯಬೇಕು. ಇದು ಖಾಸಗಿ ರಂಗದಿಂದ ಸಾಧ್ಯವೇ? ಈಗಾಗಲೇ ಖಾಸಗೀಕರಣಕ್ಕೆ ಒಳಗಾದ ರಂಗಗಳಲ್ಲಿರುವ ಕಂಪೆನಿಗಳಲ್ಲಿ ಪ್ರಜೆಗಳ ಸರ್ವಾಂಗೀಣ ಪ್ರಗತಿಗೆ ಎಷ್ಟು ಆದ್ಯತೆ ನೀಡಲಾಗುತ್ತದೆ ಎಂಬ ಪ್ರಶ್ನೆ ಆಗಾಗ ಮುನ್ನೆಲೆಗೆ ಬರುತ್ತದೆ.
ರಿಸರ್ವ್ ಬ್ಯಾಂಕಿನ ನೀತಿಗಳಿಗೆ ಅನುಗುಣವಾಗಿ ಖಾಸಗಿ ಹಣಕಾಸು ಸಂಸ್ಥೆಗಳು ತಮ್ಮ ಸಾಲವ್ಯವಹಾರವನ್ನು ಮಾಡಬೇಕಾಗುತ್ತದೆ. ಆದರೆ ಕಳೆದ ಎರಡು ದಶಕಗಳಲ್ಲಿ ಅನೇಕ ಖಾಸಗಿ ಹಣಕಾಸು ಸಂಸ್ಥೆಗಳು ತೀವ್ರವಾದ ಬಿಕ್ಕಟ್ಟಿಗೆ ಬಲಿಯಾಗಿ ಸರಕಾರ ಇಲ್ಲವೇ ಆರ್ಬಿಐಯ ಪ್ರವೇಶ ಅಗತ್ಯವಾಗಿತ್ತು.
ಈ ನಿರ್ಧಾರದ ಹಿಂದೆ ಸರಕಾರದ ದ್ವಂದ್ವ ನೀತಿಯೂ ಮುನ್ನೆಲೆಗೆ ಬಂದಿದೆ. ಐಡಿಬಿಐಯನ್ನು ಖರೀದಿಸಿದ ಕೆನಡಾದ ಸಂಸ್ಥೆಯು ಈಗಾಗಲೇ ಕೇರಳಂ ಮೂಲದ ಕೆಥೊಲಿಕ್ ಸಿರಿಯನ್ ಬ್ಯಾಂಕನ್ನು (ಸಿಎಸ್ಬಿ) ತನ್ನ ವಶಕ್ಕೆ ಸೇರಿಸಿಕೊಂಡಿದೆ. ಆರ್ಬಿಐ ನೀತಿಯ ಪ್ರಕಾರ ಒಬ್ಬರೇ ಪ್ರವರ್ತಕರು (ಪ್ರೊಮೋಟರ್)ಎರಡು ಬ್ಯಾಂಕುಗಳನ್ನು ಹೊಂದಿರಲು ಸಾಧ್ಯವಿಲ್ಲ. ವಿದೇಶಿ ಮೂಲದ ಫೇರ್ ಫೇಕ್ಸ್ ಕಂಪೆನಿಗೆ ಬೇರೆಯೇ ನೀತಿಯನ್ನು ಮಾಡುವುದು ಎಷ್ಟು ಸರಿ?
ಐಡಿಬಿಐಯು ದೇಶದ ಆರ್ಥಿಕ ಪ್ರಗತಿಯ ಚರಿತ್ರೆಯ ಒಂದು ಪ್ರಮುಖ ಅಧ್ಯಾಯ; ಅದು ಇಂದಿಗೂ ಪ್ರಸ್ತುತವಾಗುತ್ತದೆ. ಐಡಿಬಿಐ ಬ್ಯಾಂಕಿನ ಖಾಸಗೀಕರಣ ಆ ಚಾರಿತ್ರಿಕ ಕೊಡುಗೆಯನ್ನು ಅಳಿಸಿಹಾಕುವ ಒಂದು ಪ್ರಯತ್ನವೂ ಆಗಿದೆ ಎಂದು ಹೇಳಬೇಕಾಗುತ್ತದೆ.






