ಸಾರ್ವಜನಿಕ ಆರೋಗ್ಯ ಅವ್ಯವಸ್ಥೆ

ಸಾಂದರ್ಭಿಕ ಚಿತ್ರ
ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು ಸರಕಾರ ಪ್ರತೀ ವರ್ಷ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಿದೆ. ಆದರೆ ಇದರ ಸದುಪಯೋಗ ಆಗುತ್ತಿದೆಯೇ ಎಂಬ ಪ್ರಶ್ನೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಹಣಕಾಸಿನ ಅನುಕೂಲಗಳಿಲ್ಲದ ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನಸಾಮಾನ್ಯರ ಆರೋಗ್ಯ ರಕ್ಷಣೆಗಾಗಿ ಸರಕಾರವೇನೋ ಹಣ ಖರ್ಚು ಮಾಡುತ್ತದೆ. ಆದರೆ ಅದು ತಲುಪಬೇಕಾದವರಿಗೆ ತಲುಪುತ್ತಲೇ ಇಲ್ಲ. ಗ್ರಾಮೀಣ ಆರೋಗ್ಯ ಕೇಂದ್ರಗಳು ಮತ್ತು ನಗರ ಪ್ರದೇಶದ ಸರಕಾರಿ ಆಸ್ಪತ್ರೆಗಳಿಂದ ಬಡ ಜನರಿಗೆ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ. ನೂತನ ಆರೋಗ್ಯ ಸಚಿವ ಖಾದರ್ ಅವರು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸರಿಪಡಿಸಲು ಅತ್ಯುತ್ಸಾಹ ತೋರಿಸುತ್ತಿದ್ದಾರೆ. ಹಲವಾರು ಕ್ರಮಗಳನ್ನೂ ಕೈಗೊಂಡಿದ್ದಾರೆ. ಆದರೂ ಇದನ್ನು ಸುಧಾರಿಸುವುದು ಅವರು ಅಂದುಕೊಂಡಷ್ಟು ಸುಲಭದ ಸಂಗತಿಯಲ್ಲ.
ಬಡ ಜನರಿಗೆ ಸರಕಾರಿ ಆಸ್ಪತ್ರೆಗಳನ್ನು ಬಿಟ್ಟರೆ ಬೇರೆ ಗತಿ ಇಲ್ಲ. ಇಲ್ಲಿ ಬರುವ ಬಡವರಿಗಾಗಿ ಉಚಿತವಾಗಿ ನೀಡಲು ಸರಕಾರದಿಂದ ಬರುವ ಕೋಟ್ಯಂತರ ರೂಪಾಯಿ ಮೌಲ್ಯದ ಔಷಧಿಗಳು ಅದರಲ್ಲೂ ಜೀವ ರಕ್ಷಕ ಔಷಧಿಗಳು ಅಗತ್ಯ ಇರುವವರಿಗೆ ಸಿಗುತ್ತಿಲ್ಲ ಎಂಬ ದೂರುಗಳು ಮೊದಲಿನಿಂದಲೂ ಬರುತ್ತಲೇ ಇವೆ. ಈ ಸರಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತವಾಗಿ ಸಿಗಬೇಕಿದ್ದ ಕೋಟ್ಯಂತರ ರೂ. ಮೌಲ್ಯದ ಜೀವ ರಕ್ಷಕ ಔಷಧಿಗಳು, ಮಾತ್ರೆಗಳು ಗೋದಾಮುಗಳಲ್ಲೇ ಕೊಳೆತು ಅವಧಿ ಮೀರಿ ರಸ್ತೆಗೆ ಚೆಲ್ಲಲ್ಪಟ್ಟಿರುವ ಹಗರಣವೊಂದು ಇತ್ತೀಚೆಗೆ ಬಯಲಿಗೆ ಬಂದಿದೆ.
ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳಿಗೆ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ (ಕೆಎಸ್ಎಂಎಸ್ಸಿಎಲ್) ಮೂಲಕ ಜೀವ ರಕ್ಷಕ ಔಷಧಿಗಳನ್ನು ಪೂರೈಸುತ್ತದೆ. ಆದರೆ ಆತಂಕದ ಸಂಗತಿ ಎಂದರೆ ಕಳೆದ ನಾಲ್ಕು ವರ್ಷಗಳಲ್ಲಿ 79 ಕೋಟಿ ರೂ. ಮೌಲ್ಯದ 375 ವಿಧದ ಔಷಧಿಗಳು ಬಳಕೆಯಾಗದೆ ನಾಶವಾಗಿದೆ. ಇದಕ್ಕಿಂತ ಬೇಜವಾಬ್ದಾರಿ ಹಾಗೂ ಅಮಾನವೀಯ ಕೃತ್ಯ ಇನ್ಯಾವುದೂ ಇರಲು ಸಾಧ್ಯವಿಲ್ಲ. ಈ ಔಷಧಿ ಸರಬರಾಜು ನಿಗಮ ಪ್ರತೀ ವರ್ಷ ನೂರಾರು ಕೋಟಿ ರೂ. ಮೌಲ್ಯದ ಔಷಧಿ, ಬ್ಯಾಂಡೇಜ್ ಬಟ್ಟೆ, ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲಿ ಬಳಸುವ ಕಾಟನ್, ಸರ್ಜಿಕಲ್ ಗ್ಲೌಸ್, ಆ್ಯಂಟಿ ಬಯೋಟಿಕ್ ಮಾತ್ರೆಗಳು ಮತ್ತು ವೈದ್ಯಕೀಯ ಸಲಕರಣೆಗಳು ಸೇರಿ ವಿವಿಧ ಜೀವ ರಕ್ಷಕ ಔಷಧಿಗಳನ್ನು ಖರೀದಿ ಮಾಡಿ ಜಿಲ್ಲೆಗಳ ಮತ್ತು ತಾಲೂಕುಗಳ ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ಹಾಗೂ ನಗರ ಪ್ರದೇಶದ ಆರೋಗ್ಯ ಕೇಂದ್ರಗಳಿಗೆ ಪೂರೈಸುವ ಹೊಣೆಗಾರಿಕೆಯನ್ನು ಹೊತ್ತಿದೆ. ಇಂಥ ಮಹತ್ವದ ಜವಾಬ್ದಾರಿ ನಿರ್ವಹಿಸಬೇಕಾದ ಅದು ಕರ್ತವ್ಯ ಲೋಪ ಎಸಗುವುದು ಕ್ಷಮಾರ್ಹ ಲೋಪವಲ್ಲ, ಇದು ಅತ್ಯಂತ ಹೀನಾಯ ಅಪರಾಧ.
ಸರಕಾರ ಜನಸಾಮಾನ್ಯರ ಆರೋಗ್ಯ ರಕ್ಷಣೆಗಾಗಿ ಕೋಟ್ಯಂತರ ರೂ. ಖರ್ಚು ಮಾಡಿದರೂ ಸರಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಪ್ಯಾರಸಿಟಮಲ್ ಸೇರಿದಂತೆ ತುರ್ತು ಚಿಕಿತ್ಸೆಯ ಜೀವ ರಕ್ಷಕ ಔಷಧಿ ಮತ್ತು ಚುಚ್ಚುಮದ್ದುಗಳ ಕೊರತೆ ಮಿತಿ ಮೀರಿದೆ. ಹೀಗಾಗಿ ಅಸಹಾಯಕ ವೈದ್ಯರು ಖಾಸಗಿ ಔಷಧಿ ಅಂಗಡಿಗಳಿಗೆ ಚೀಟಿ ಬರೆದು ಕೊಡುತ್ತಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧಿಗಳಿಗಾಗಿ ಕೈಯಲ್ಲಿ ಕಾಸಿಲ್ಲದೆ ಪರದಾಡುವ ಬಡ ಜನರ ಗೋಳು ಮತ್ತು ಆಕ್ರಂದನ ಅರಣ್ಯ ರೋದನವಾಗಿದೆ. ಸರಕಾರಿ ಆಸ್ಪತ್ರೆಗಳಿಗೆ ಬರುವ ಬಡವರಿಗೆಂದು ತೆರಿಗೆದಾರರ ಹಣದಲ್ಲಿ ಖರೀದಿ ಮಾಡಿದ ಔಷಧಿಗಳು ಮತ್ತು ಇತರ ವೈದ್ಯಕೀಯ ಉಪಕರಣಗಳು ಸಕಾಲಕ್ಕೆ ಸರಕಾರಿ ದವಾಖಾನೆಗೆ ತಲುಪದೇ ಗೋದಾಮುಗಳಲ್ಲಿ ಧೂಳು ಹಿಡಿದು ನಾಶವಾಗುತ್ತಿರುವುದಕ್ಕೆ ಯಾರು ಹೊಣೆ? ಇದು ಔಷಧಿಗಾಗಿ ಪರದಾಡುವ ಬಡವರಿಗೆ ಮಾಡಿದ ದ್ರೋಹವಲ್ಲವೇ?
ಈ ಇಡೀ ಹಗರಣದ ದೋಷ ಖರೀದಿ ವ್ಯವಹಾರದಲ್ಲಿದೆ. ಎಷ್ಟು ಔಷಧಿ ಅಗತ್ಯವಿದೆ, ಎಷ್ಟು ಬೇಡಿಕೆ ಇದೆ ಎಂಬ ಬಗ್ಗೆ ಖಚಿತ ಅಂದಾಜಿಲ್ಲದೆ ಕೇವಲ ಕಮಿಶನ್ಗಾಗಿ ಭಾರೀ ಪ್ರಮಾಣದ ಔಷಧಿ ಮತ್ತು ವೈದ್ಯಕೀಯ ಉಪಕರಣಗಳನ್ನು ಖರೀದಿಸುವ ಕೆಟ್ಟ ದಂಧೆಯೇ ಇದಕ್ಕೆಲ್ಲ ಕಾರಣ.ಗೋದಾಮುಗಳಿಗೆ ಬಂದು ಬೀಳುವ ಔಷಧಿಗಳ ದಾಸ್ತಾನನ್ನು ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಗೆ ಸಕಾಲದಲ್ಲಿ ಸಮರ್ಪಕವಾಗಿ ಹಂಚಿಕೆ ಮಾಡುವ ದಕ್ಷ, ಸಮರ್ಥ ವಿತರಣಾ ವ್ಯವಸ್ಥೆ ಇಲ್ಲದಿರುವುದೇ ಈ ಅವ್ಯವಸ್ಥೆಗೆ ಇನ್ನೊಂದು ಕಾರಣವೆಂದರೆ ತಪ್ಪಿಲ್ಲ.
ಈ ಪ್ರಕರಣದಲ್ಲಿ ಸಂಬಂಧಿಸಿದವರ ಬೇಜವಾಬ್ದಾರಿತನ ಹಾಗೂ ಉತ್ತರದಾಯಿತ್ವದ ಕೊರತೆ ಎದ್ದು ಕಾಣುತ್ತದೆ. ಅವಧಿ ಮುಗಿಯುವ ಹಂತದಲ್ಲಿ ಇರುವ ಔಷಧಿಗಳನ್ನು ಮೊದಲೇ ಗುರುತಿಸಿ ಬಳಸುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸದಿರುವುದು ಇಂಥ ಅವಾಂತರಕ್ಕೆ ಕಾರಣ. ಇದರ ನಿಜವಾದ ಹಗರಣ ಬಯಲಿಗೆ ಬರಬೇಕಾಗಿದೆ. ಕೇವಲ ಕಾಟಾಚಾರಕ್ಕಾಗಿ ಇಲಾಖೆಯ ಮಟ್ಟದ ತನಿಖೆಯ ನೆಪ ಮುಂದೆ ಮಾಡಿ ಸಣ್ಣಪುಟ್ಟ ಸಿಬ್ಬಂದಿಯ ತಲೆಗೆ ಈ ಹಗರಣವನ್ನು ಕಟ್ಟಿ ತಿಮಿಂಗಿಲಗಳು ಪಾರಾಗುವುದಕ್ಕೆ ಅವಕಾಶ ನೀಡಬಾರದು. ಈ ಭಾರೀ ಪ್ರಮಾಣದ ನಷ್ಟ ಮತ್ತು ಜೀವ ವಿರೋಧಿ ನಿರ್ಲಕ್ಷ್ಯಕ್ಕೆ ಯಾರು ಕಾರಣರು? ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ. ಇಂಥ ದುಷ್ಕೃತ್ಯ ಎಸಗಿದವರು ಎಷ್ಟೇ ಪ್ರಭಾವಶಾಲಿಗಳಾಗಿರಲಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕು.
ಕೋಟ್ಯಂತರ ರೂ. ಮೊತ್ತದ ಔಷಧಿ ಹಾಗೂ ವೈದ್ಯಕೀಯ ಉಪಕರಣಗಳ ಖರೀದಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಅಗತ್ಯ. ಅದಕ್ಕೆ ಗಣಕೀಕೃತ ವ್ಯವಸ್ಥೆ ಜಾರಿಗೆ ಬರಬೇಕಾಗಿದೆ. ಯಾವುದೇ ಔಷಧಿಗಳು ಗೋದಾಮಿನಿಂದ ನೇರವಾಗಿ ರೋಗಿಗಳ ಕೈ ಸೇರಬೇಕು. ಅದರ ಬದಲಿಗೆ ಕಸದ ತೊಟ್ಟಿಗೆ ಸೇರಬಾರದು. ಇದರ ಜೊತೆಗೆ ಇನ್ನೊಂದು ಮಹತ್ವದ ವಿಷಯದ ಬಗ್ಗೆ ಸರಕಾರ ಗಮನಿಸಬೇಕು. ಕೆಲವು ಕಂಪೆನಿಗಳ ನಕಲಿ ಹಾಗೂ ಕಳಪೆ ಔಷಧಿಗಳನ್ನು ವಿತರಿಸುವ ಖಾಸಗಿ ಕಂಪೆನಿಗಳ ಕರಾಳ ಜಾಲ ವಿಸ್ತರಿಸುತ್ತಿವೆ. ಜನಸಾಮಾನ್ಯರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನಕಲಿ ಹಾಗೂ ಕಳಪೆ ಔಷಧಿಗಳನ್ನು ಕಂಪೆನಿಗಳ ವಿರುದ್ಧವೂ ಸರಕಾರ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುವುದು ತುರ್ತು ಅಗತ್ಯವಾಗಿದೆ.






