ಛಡ್ಡಾ ಕಂಸಾಲಿಂಗನ!

ರಾಘವ್ ಛಡ್ಡಾ PC : PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘‘ಅರವಿಂದ ಕೇಜ್ರಿವಾಲ್ ಅವರು ಶ್ರೀಕೃಷ್ಣನಾದರೆ ಬಿಜೆಪಿಯು ಕಂಸ’’ ಮೂರು ವರ್ಷಗಳ ಹಿಂದೆ ಹೀಗೊಂದು ಹೇಳಿಕೆ ನೀಡಿದ್ದ, ಆಮ್ ಆದ್ಮಿಯ ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿದ್ದ ರಾಘವ್ ಛಡ್ಡಾ ಕೊನೆಗೂ ಕಂಸನನ್ನು ಆಲಂಗಿಸಿಕೊಂಡಿದ್ದಾರೆ. ‘‘ಶ್ರೀ ಕೃಷ್ಣ ತನ್ನನ್ನು ನಾಶ ಮಾಡುತ್ತಾನೆ ಎಂದು ಕಂಸನಿಗೆ ತಿಳಿದಿತ್ತು. ಆದುದರಿಂದ ಕೃಷ್ಣನನ್ನು ಕೊಲ್ಲಲು ಕಂಸ ಹಲವು ಸಂಚುಗಳನ್ನು ನಡೆಸಿದ್ದ. ಆದರೆ ಶ್ರೀಕೃಷ್ಣನ ತಲೆಯ ಒಂದು ಕೂದಲನ್ನು ಕೊಂಕಿಸಲು ಕೂಡ ಆತನಿಗೆ ಸಾಧ್ಯವಾಗಲಿಲ್ಲ. ಅದೇ ರೀತಿ ತನ್ನ ಅವನತಿಗೆ ಆಪ್ ಕಾರಣವಾಗುತ್ತದೆ ಎಂದು ಬಿಜೆಪಿಗೆ ಗೊತ್ತಿದೆ’’ ಎಂಬಂತಹ ಹೇಳಿಕೆ ನೀಡಿದ್ದ ಛಡ್ಡಾ, ಇದೀಗ ಇತರ ಆರು ಸಂಸದರೊಂದಿಗೆ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಲಿದ್ದೇನೆ ಎಂದು ಪ್ರಕಟಿಸಿದ್ದಾರೆ. ಕೊನೆಗೂ ಛಡ್ಡಾ ಅವರಿಗೆ ಕೃಷ್ಣನ ಸಹವಾಸಕ್ಕಿಂತ ಕಂಸನ ಸಹವಾಸವೇ ವಾಸಿ ಎನ್ನುವುದು ಅರ್ಥವಾಗಿದೆ.
ವಿಪರ್ಯಾಸವೆಂದರೆ ತನ್ನ ಈ ಪಕ್ಷಾಂತರವನ್ನು ಸಮರ್ಥಿಸಿಕೊಳ್ಳಲು ಅವರು ಮತ್ತೆ ‘ತತ್ವ, ಮೌಲ್ಯ, ನೈತಿಕತೆ’ ಎಂಬಿತ್ಯಾದಿ ಪದಗಳನ್ನು ಬಳಸಿಕೊಂಡಿರುವುದು. ‘‘ಆಪ್ ತನ್ನ ಮೂಲ ತತ್ವಗಳು, ಮೌಲ್ಯಗಳು ಮತ್ತು ನೈತಿಕತೆಯಿಂದ ದೂರವಾಗಿದೆ. ಈ ಪಕ್ಷವು ಈಗ ರಾಷ್ಟ್ರದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿಲ್ಲ. ಬದಲಾಗಿ ಅದರ ವೈಯಕ್ತಿಕ ಲಾಭಕ್ಕಾಗಿ ಕೆಲಸ ಮಾಡುತ್ತಿದೆ. ಕಳೆದ ಕೆಲವು ವರ್ಷಗಳಿಂದ ನಾನು ತಪ್ಪು ಪಕ್ಷದಲ್ಲಿ ಇದ್ದ ಸರಿಯಾದ ವ್ಯಕ್ತಿ ಎಂದು ನನಗೆ ಅನ್ನಿಸುತ್ತಿದೆ’’ ಎಂದು ಅವರು ಮಾಧ್ಯಮದ ಜೊತೆಗೆ ಹಂಚಿಕೊಂಡಿದ್ದಾರೆ. ಆಪ್ ನೈತಿಕತೆಯಿಂದ, ಮೂಲತತ್ವಗಳಿಂದ ದೂರವಾಗಿದೆ ಎನ್ನುವ ಛಡ್ಡಾ ಮಾತುಗಳನ್ನು ನಾವು ಒಪ್ಪಿಕೊಳ್ಳೋಣ. ಆದರೆ ಬಿಜೆಪಿಯಲ್ಲಿ ಯಾವ ನೈತಿಕ ಮೌಲ್ಯಗಳನ್ನು ಅವರು ಕಂಡುಕೊಂಡರು? ಈವರೆಗೆ ಬಿಜೆಪಿಯ ಸಂವಿಧಾನ ವಿರೋಧಿ ನೀತಿಗಳನ್ನು ಟೀಕಿಸುತ್ತಿದ್ದ ಛಡ್ಡಾ ಅವರನ್ನು ಬಿಜೆಪಿ ಸೇರ್ಪಡೆಯಾಗುವಂತೆ ಪ್ರೇರೇಪಿಸಿದ ಬಿಜೆಪಿಯೊಳಗಿನ ಮೌಲ್ಯಗಳು ಯಾವುವು? ಎನ್ನುವುದನ್ನು ಅವರು ಸ್ಪಷ್ಟಪಡಿಸಿಲ್ಲ. ಇಂದು ಜನತೆ ಅವರನ್ನು ಪ್ರಶ್ನಿಸುತ್ತಿರುವುದು ಆಪ್ ಪಕ್ಷವನ್ನು ತೊರೆಯುತ್ತಿರುವ ಕಾರಣಕ್ಕಾಗಿಯಲ್ಲ, ಬಿಜೆಪಿಯ ಕುರಿತಂತೆ ಅವರಲ್ಲಿ ಮೂಡಿದ ಭರವಸೆಗಾಗಿ.
ಆಮ್ ಆದ್ಮಿ ಪಕ್ಷ ಹುಟ್ಟಿಕೊಂಡದ್ದು ಬಿಜೆಪಿ ಮತ್ತು ಕಾಂಗ್ರೆಸ್ಗೆ ಪರ್ಯಾಯವಾಗಿ. ಅಣ್ಣಾ ಹಝಾರೆ ನೇತೃತ್ವದಲ್ಲಿ ಆರಂಭವಾದ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಬಳಸಿಕೊಂಡು ಆಮ್ ಆದ್ಮಿ ಪಕ್ಷ ತಲೆಯೆತ್ತಿತ್ತು. ವಿದ್ಯಾವಂತರು, ಸುಶಿಕ್ಷಿತರು ಎಲ್ಲಕ್ಕಿಂತ ಮುಖ್ಯವಾಗಿ ಯುವ ತಲೆಮಾರುಗಳ ಮೂಲಕ ಈ ಪಕ್ಷ ಜನರನ್ನು ಸೆಳೆಯಿತು. ಬಹುಶಃ ಭಾರತದಲ್ಲಿ ಯಾವುದೇ ಸ್ವತಂತ್ರ ಪಕ್ಷ ಹುಟ್ಟಿದ ಬೆನ್ನಿಗೇ ಒಂದು ರಾಜ್ಯದ ಅಧಿಕಾರ ಹಿಡಿದ ಉದಾಹರಣೆಗಳಿಲ್ಲ. ಆ ಸಂದರ್ಭದಲ್ಲಿ ಆಮ್ಆದ್ಮಿ ಪಕ್ಷದ ಬಗ್ಗೆ ಅನುಮಾನ ವ್ಯಕ್ತ ಪಡಿಸಿದವರ ಸಂಖ್ಯೆಯೂ ದೊಡ್ಡದಿತ್ತು. ಮುಖ್ಯವಾಗಿ ಆಮ್ ಆದ್ಮಿ ಪಕ್ಷಕ್ಕೆ ಹಣದ ಮೂಲ ಎಲ್ಲಿಂದ ಎನ್ನುವುದು ಒಂದು ಪ್ರಶ್ನೆಯಾಗಿತ್ತಾದರೆ, ಇದರ ನಿಯಂತ್ರಣ ಯಾರ ಕೈಯಲ್ಲಿದೆ ಎನ್ನುವುದು ಇನ್ನೊಂದು ಪ್ರಶ್ನೆಯಾಗಿತ್ತು. ಆದರೆ ಕೇಜ್ರಿವಾಲ್ ನೇತೃತ್ವದಲ್ಲಿ ಮೋದಿಯ ಜನವಿರೋಧಿ ನೀತಿಗಳ ವಿರುದ್ಧ ಈ ಪಕ್ಷ ದೊಡ್ಡ ಧ್ವನಿಯಲ್ಲಿ ಮಾತನಾಡಿತು. ಬಿಜೆಪಿಯನ್ನು ಎದುರಿಸಲು ಅನಿವಾರ್ಯವಾಗಿ ಕಾಂಗ್ರೆಸನ್ನು ನೆಚ್ಚಿಕೊಂಡವರಿಗೆ ಆಮ್ ಆದ್ಮಿ ಪಕ್ಷ ಪರ್ಯಾಯವಾಯಿತು. ಪ್ರಧಾನಿ ಮೋದಿಯವರ ಪಾಲಿಗೆ ಕೇಜ್ರಿವಾಲ್ ಕಾಂಗ್ರೆಸ್ ನಾಯಕರಿಗಿಂತ ದೊಡ್ಡ ತಲೆನೋವಾದರು. ಅತಿ ಕಡಿಮೆ ಅವಧಿಯಲ್ಲಿ ಬೆಳೆದ ಅರವಿಂದ ಕೇಜ್ರಿವಾಲ್ರ ರಾಜಕೀಯ ವರ್ಚಸ್ಸು, ದಿಲ್ಲಿಯಲ್ಲಿ ಕೇಜ್ರಿವಾಲ್ ಸರಕಾರ ಮಾಡಿದ ಸುಧಾರಣೆಗಳು, ಪ್ರಧಾನಿ ಮೋದಿಯ ವಿರುದ್ಧ ಅವರ ನೇರ ಟೀಕೆಗಳು ಬಿಜೆಪಿಗೆ ತೀವ್ರ ಇರಿಸು ಮುರಿಸು ಉಂಟು ಮಾಡಿದ್ದವು. ಆದರೆ ದಿಲ್ಲಿ, ಪಂಜಾಬ್ನಲ್ಲಿ ಅಧಿಕಾರ ಹಿಡಿದ ಬಳಿಕ ಕೇಜ್ರಿವಾಲ್ ಹೆಸರೂ ಭ್ರಷ್ಟಾಚಾರದಲ್ಲಿ ಸಿಲುಕಿಕೊಂಡವು. ಇದನ್ನು ಬಳಸಿಕೊಂಡು ತನಿಖಾ ಸಂಸ್ಥೆಗಳ ಮೂಲಕವೇ ಪ್ರಧಾನಿ ಮೋದಿಯವರು ಆಮ್ ಆದ್ಮಿಯನ್ನು ಬಗ್ಗುಬಡಿಯಲು ಪ್ರಯತ್ನಿಸಿದರು. ಅದರಲ್ಲಿ ಭಾಗಶಃ ಯಶಸ್ವಿಯಾದರು. ಕೇಜ್ರಿವಾಲ್, ಸಿಸೋಡಿಯಾ ಸೇರಿದಂತೆ ಹಲವು ಪ್ರಮುಖ ನಾಯಕರು ಜೈಲು ಸೇರುವಂತಹ ಸ್ಥಿತಿ ನಿರ್ಮಾಣವಾಯಿತು. ಈ.ಡಿ. ದಾಳಿಗಳು ತೀವ್ರವಾದಂತೆಯೇ ಆಪ್ನ ಒಳಗಿರುವ ನಾಯಕರ ಬಣ್ಣ ಕರಗತೊಡಗಿದವು. ‘ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನ ಯುಪಿಎ ಸರಕಾರವನ್ನು ಗುರಿಯಾಗಿಸಿಕೊಂಡಿತ್ತೇ ಹೊರತು, ಭ್ರಷ್ಟಾಚಾರವನ್ನಲ್ಲ. ಅದು ಯುಪಿಎಯನ್ನು ಅಧಿಕಾರದಿಂದ ಇಳಿಸಿ ಬಿಜೆಪಿಯನ್ನು ಅಧಿಕಾರಕ್ಕೇರಿಸುವ ದುರುದ್ದೇಶವನ್ನು ಹೊಂದಿತ್ತು’ ಎನ್ನುವ ಆರೋಪಗಳಿಗೆ ಪುಷ್ಟಿ ನೀಡುವಂತೆ ಆಪ್ನೊಳಗಿರುವ ಹಲವು ನಾಯಕರು ಕೆಲವೇ ವರ್ಷಗಳಲ್ಲಿ ಬಿಜೆಪಿಗೆ ಪಕ್ಷಾಂತರವಾದರು. ದಿಲ್ಲಿಯ ಗಲಭೆಯ ಸಂದರ್ಭದಲ್ಲಿ ಕೇಜ್ರಿವಾಲ್ ಸರಕಾರ ಮೃದು ಹಿಂದುತ್ವ ನೀತಿಯನ್ನು ಅನುಸರಿಸಿತ್ತು ಎನ್ನುವುದು ಆಪ್ ಮೇಲೆ ಇರುವ ಇನ್ನೊಂದು ಆರೋಪ. ಇದೀಗ, ರಾಘವ್ ಛಡ್ಡಾ ಇತರ ಆರು ಸಂಸದರ ಜೊತೆಗೆ ಬಿಜೆಪಿಯೊಳಗೆ ವಿಲೀನವಾಗುವ ಘೋಷಣೆ ಮಾಡಿದ್ದಾರೆ. ಆಪ್ನ ಪಾಲಿಗೆ ಇದು ಬಹುದೊಡ್ಡ ಹಿನ್ನಡೆಯಾಗಿದೆ. ಬರೇ ಆಪ್ ಎಂದಲ್ಲ, ಸುಕ್ಷಿತ ಹೊಸ ತಲೆಮಾರಿನ ನಾಯಕತ್ವದ ಮೇಲೆ ವಿಶ್ವಾಸವಿಟ್ಟ ಜನರಿಗೆ ಈ ಮೂಲಕ ಇವರು ದ್ರೋಹವೆಸಗಿದ್ದಾರೆ. ಆಮ್ ಆದ್ಮಿ ಪಕ್ಷದ ವಿಶ್ವಾಸಾರ್ಹತೆಗೆ ಭಾರೀ ಧಕ್ಕೆಯುಂಟಾಗಿದೆ. ಕೋಮುವಾದಿ ಶಕ್ತಿಗಳನ್ನು ಅಧಿಕಾರಕ್ಕೇರಿಸುವ ಉದ್ದೇಶದಿಂದಲೇ ಆಮ್ ಆದ್ಮಿ ಎನ್ನುವ ಪಕ್ಷವನ್ನು ಶೂನ್ಯದಿಂದ ಆರೆಸ್ಸೆಸ್ ಸೃಷ್ಟಿಸಿತು ಎನ್ನುವ ಅನುಮಾನಗಳಿಗೆ ಚಡ್ಡಾ ಗುಂಪು ಇನ್ನಷ್ಟು ಇಂಧನ ಸುರಿದಿದೆ.
ಭ್ರಷ್ಟಾಚಾರದ ವಿರುದ್ಧದ ಆಂದೋಲನದಲ್ಲಿ ಹುಟ್ಟಿಕೊಂಡ ಆಮ್ ಆದ್ಮಿ ಪಕ್ಷ ಇಂದು ಸ್ವತಃ ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿಕೊಂಡಿರುವುದು ನಿಜವೇ ಆಗಿದೆ. ಆದರೆ ಇಂದು ಆ ಭ್ರಷ್ಟಾಚಾರದ ಕಡೆ ಬೆಟ್ಟು ಮಾಡಿ ಪಕ್ಷ ತೊರೆಯುತ್ತಿರುವ ಚಡ್ಡಾ ಮತ್ತು ಆತನ ಸಂಗಾತಿಗಳು ಸೇರ್ಪಡೆಯಾಗುತ್ತಿರುವುದು ಪರಮ ಭ್ರಷ್ಟವಾಗಿರುವ, ಈವರೆಗೆ ಅವರು ಯಾವ ಪಕ್ಷದ ಭ್ರಷ್ಟಾಚಾರದ ಜೊತೆಗೆ ಗುದ್ದಾಡಿಕೊಂಡು ಬಂದಿದ್ದರೋ ಅದೇ ಬಿಜೆಪಿಗೆ. ಆದುದರಿಂದಲೇ, ಅವರ ನಡೆ ಪ್ರಶ್ನಾರ್ಹವಾಗಿದೆ. ಆಮ್ ಆದ್ಮಿಯಿಂದ ಇವರಿಗೆ ಭ್ರಮನಿರಸನವಾಗಿದ್ದರೆ ಪರ್ಯಾಯ ಪಕ್ಷವೊಂದನ್ನು ಕಟ್ಟಿಕೊಳ್ಳುವ ಅಥವಾ ಇರುವುದರಲ್ಲಿ ಜಾತ್ಯತೀತವಾಗಿರುವ, ಕಡಿಮೆ ಭ್ರಷ್ಟವಾಗಿರುವ ಪಕ್ಷದೊಂದಿಗೆ ಸೇರ್ಪಡೆಗೊಳ್ಳುವ ಅವಕಾಶವಿತ್ತು. ಆದರೆ ಇವರು ನೇರವಾಗಿ ಬಿಜೆಪಿಯೊಂದಿಗೆ ಶಾಮೀಲಾಗಲು ಹೊರಟಿದ್ದಾರೆ.
ಯಾವುದೇ ಸುದೀರ್ಘ ಜನಚಳವಳಿಯ ಹಿನ್ನೆಲೆಯಿಲ್ಲದ, ತಳಸ್ತರದ ಜನರೊಂದಿಗೆ ಸಂಬಂಧ ಬೆಸೆದುಕೊಳ್ಳದ, ಒಂದು ಮಳೆಗೆ ಹುಟ್ಟಿಕೊಂಡ ಅಣಬೆಗಳಂತಹ ಸುಶಿಕ್ಷಿತ ಯುವ ನಾಯಕರ ದೊಡ್ಡ ಪಡೆಯೇ ಆಮ್ ಆದ್ಮಿ ಪಕ್ಷದಲ್ಲಿದೆ. ಇವರು ಯಾವತ್ತು ಬೇಕಾದರೂ ಬಿಜೆಪಿ ಸೇರಿಕೊಳ್ಳಬಹುದು ಎಂಬ ಸ್ಥಿತಿಯಿದೆ. ಬಿಜೆಪಿಯಿಂದ ‘ಆಪರೇಷನ್ ಕಮಲ’ ಎಂದು ಟೀಕಿಸುವ ನೈತಿಕತೆಯನ್ನೂ ಆಪ್ ಕಳೆದುಕೊಂಡಿದೆ. ಬಿಜೆಪಿಯ ಆಪರೇಷನ್ಗೆ ಆಪ್ನೊಳಗಿರುವ ನಾಯಕರು ಸುಲಭದಲ್ಲಿ ಬಲಿಯಾಗುತ್ತಾರೆ ಎಂದಾದರೆ ಅವರ ಪಕ್ಷಕ್ಕೂ ಉಳಿದ ಪಕ್ಷಕ್ಕೂ ಏನು ವ್ಯತ್ಯಾಸ ಉಳಿಯಿತು? ಚಡ್ಡಾ ಗುಂಪು ಎಸಗಿದ ಜನದ್ರೋಹ ಕೃತ್ಯದ ಹೊಣೆಯನ್ನು ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿಯೇ ಹೊತ್ತುಕೊಳ್ಳಬೇಕಾಗಿದೆ ಮತ್ತು ಜನರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ.






