ಗ್ಯಾರಂಟಿ ಯೋಜನೆ ಫಲಾನುಭವಿಗಳ ಪರಿಷ್ಕರಣೆ ಅಗತ್ಯ, ಅನಿವಾರ್ಯ

ನೂತನ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಗ್ಯಾರಂಟಿ ಯೋಜನೆಗಳ ಬಗ್ಗೆ ತೆಗೆದುಕೊಳ್ಳುವ ನಿರ್ಧಾರಕ್ಕಾಗಿ ವಿರೋಧ ಪಕ್ಷಗಳು ತುದಿಗಾಲಲ್ಲಿ ನಿಂತು ಕಾಯುತ್ತಿವೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಸಿದ್ದರಾಮಯ್ಯ ಪಾತ್ರ ಮುಖ್ಯವಾಗಿದ್ದು, ಡಿಕೆಶಿ ಮುಖ್ಯಮಂತ್ರಿಯಾದರೆ ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಬೀಳುತ್ತದೆ ಎನ್ನುವ ವದಂತಿಗಳು ಮಾಧ್ಯಮಗಳಲ್ಲಿ ಈ ಹಿಂದೆಯೇ ಹರಿದಾಡುತ್ತಿದ್ದವು. ‘ಗ್ಯಾರಂಟಿ ಯೋಜನೆಗಳನ್ನು ನೂತನ ಮುಖ್ಯಮಂತ್ರಿ ರದ್ದು ಪಡಿಸಿದರೆ’ ಅದನ್ನೇ ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಗದ್ದಲ ಎಬ್ಬಿಸಲಿವೆ. ಮತದಾರರಿಗೆ ಮಾತುಕೊಟ್ಟು ಸರಕಾರ ವಂಚಿಸಿದೆ ಎಂದು ಬೀದಿಗಿಳಿಯುತ್ತವೆ. ಗ್ಯಾರಂಟಿ ಯೋಜನೆಗಳನ್ನು ರದ್ದು ಪಡಿಸದೇ ಇದ್ದರೆ ‘ಅಭಿವೃದ್ಧಿ ಯೋಜನೆಗಳಿಗೆ ಹಣ ಸಾಕಾಗುತ್ತಿಲ್ಲ, ಸರಕಾರ ದಿವಾಳಿಯಾಗಿದೆ’ ಎಂದು ಗದ್ದಲ ಎಬ್ಬಿಸುತ್ತವೆ. ಅಧಿಕಾರಕ್ಕೇರಿದ ಬೆನ್ನಿಗೇ ಡಿಕೆಶಿಯವರು ಶಕ್ತಿಯೋಜನೆಗೆ ಕತ್ತರಿ ಹಾಕುವ ಬದಲು ಉಚಿತ ಬಸ್ ಪ್ರಯಾಣವನ್ನು ಇತರ ವಿದ್ಯಾರ್ಥಿಗಳಿಗೂ ವಿಸ್ತರಿಸಿ ವಿರೋಧ ಪಕ್ಷದ ನಾಯಕರ ಬಾಯಿ ಮುಚ್ಚಿಸಿದರು. ಇದೀಗ ‘ಗೃಹ ಲಕ್ಷ್ಮಿ’ ಯೋಜನೆಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸುವುದಕ್ಕಾಗಿ ಸರಕಾರ ‘ಪರಿಷ್ಕರಣೆ’ಗೆ ಮುಂದಾಗಿದ್ದೇ ತಡ, ವಿರೋಧ ಪಕ್ಷದ ನಾಯಕರು ಹಾಹಾಕಾರ ಎಬ್ಬಿಸ ತೊಡಗಿದ್ದಾರೆ. ಇನ್ನೂ ಪರಿಷ್ಕರಣೆಯ ಪ್ರಕ್ರಿಯೆ ಪೂರ್ಣಗೊಂಡಿಲ್ಲ, ಅಷ್ಟರಲ್ಲೇ ವಿರೋಧ ಪಕ್ಷದ ನಾಯಕರಾಗಿರುವ ಆರ್. ಅಶೋಕ್ ಅವರು ‘‘ಗೃಹ ಲಕ್ಷ್ಮಿ ಈಗ ಅನರ್ಹ ಲಕ್ಷ್ಮಿ’’ ಎಂದು ವ್ಯಂಗ್ಯವಾಡಿದ್ದಾರೆ. ಗ್ಯಾರಂಟಿ ಯೋಜನೆಯ ಮೂಲಕ ಹಣವನ್ನು ಪೋಲು ಮಾಡುತ್ತಿದೆ ಎಂದು ಆರೋಪಿಸಿದವರೇ ಇದೀಗ, 17 ಜಿಲ್ಲೆಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಮಹಿಳೆಯರನ್ನು ಗೃಹ ಲಕ್ಷ್ಮಿಯಿಂದ ಸರಕಾರ ಹೊರದಬ್ಬಲು ಯತ್ನಿಸುತ್ತಿದೆ ಎಂದು ಟೀಕಿಸುತ್ತಿದ್ದಾರೆ.
ಗೃಹ ಲಕ್ಷ್ಮಿ ಯೋಜನೆಗಳನ್ನು ರದ್ದುಗೊಳಿಸುವುದಾಗಿ ಸರಕಾರ ಎಲ್ಲೂ ಹೇಳಿಲ್ಲ. ಗ್ಯಾರಂಟಿ ಯೋಜನೆಗಳು ಎಂದಲ್ಲ, ಯಾವುದೇ ಯೋಜನೆಗಳು ದುರ್ಬಳಕೆಯಾಗಬಾರದು. ಪರಿಷ್ಕರಣೆ ನಡೆಸಿ ಯೋಜನೆಗಳನ್ನು ಅನರ್ಹರು ಕಿತ್ತುಕೊಂಡಿದ್ದರೆ ಅದನ್ನು ಸರಿಪಡಿಸಿ ಅರ್ಹರಿಗೆ ತಲುಪಿಸುವುದು ಸರಕಾರದ ಕರ್ತವ್ಯ. ಇತ್ತೀಚೆಗೆ ಅಕ್ರಮ ಬಿಪಿಎಲ್ ಕಾರ್ಡ್‌ದಾರರನ್ನು ಗುರುತಿಸಿ ಅವರನ್ನು ಹೊರಗಿಡುವ ಕೆಲಸವನ್ನು ಸರಕಾರ ಮಾಡಿದೆ. ಈ ಸಂದರ್ಭದಲ್ಲಿ ಕೆಲವು ಅಧ್ವಾನಗಳು ನಡೆದು ಅರ್ಹ ಕಾರ್ಡ್‌ದಾರರನ್ನು ಹೊರಗಿಟ್ಟ ಪ್ರಸಂಗವೂ ನಡೆದಿದೆಯಾದರೂ ಪರಿಷ್ಕರಣೆಯಂತೂ ನಡೆಯಲೇ ಬೇಕಾದ ಕೆಲಸವಾಗಿತ್ತು. ಗ್ಯಾರಂಟಿ ಯೋಜನೆಗಳು ಆತುರಾತುರವಾಗಿ ಜಾರಿಗೆ ಬಂದಿರುವುದರಿಂದ ಈ ಮೂರು ವರ್ಷಗಳಲ್ಲಿ ಅದರ ಸಾಧಕ ಬಾಧಕಗಳನ್ನು ಗುರುತಿಸುವ ಕೆಲಸ ನಡೆಯಲೇ ಬೇಕು. ಈಗಾಗಲೇ ಮೃತಪಟ್ಟವರ ಹೆಸರಿನಲ್ಲಿ, ಅನರ್ಹರ ಹೆಸರಿನಲ್ಲಿ ಗೃಹ ಲಕ್ಷ್ಮಿ ಯೋಜನೆಗಳ ಲಾಭವನ್ನು ಕೆಲವರು ಪಡೆಯುತ್ತಿರುವ ಆರೋಪಗಳು ಕೇಳಿ ಬಂದಿದ್ದು ಪರಿಷ್ಕರಣೆಯ ಮೂಲಕ ಅರ್ಹರನ್ನು ಗುರುತಿಸುವ ಕೆಲಸವನ್ನು ನಡೆಸುವುದು ಅನಿವಾರ್ಯ. ಈ ಕಾರಣದಿಂದಲೇ ಪರಿಷ್ಕರಣೆಯ ಕೆಲಸಕ್ಕೆ ಸರಕಾರ ಇಳಿದಿದೆ. ಇದನ್ನೇ ಮುಂದಿಟ್ಟುಕೊಂಡು, ಸರಕಾರ ಗೃಹ ಲಕ್ಷ್ಮಿಯೋಜನೆಯನ್ನೇ ರದ್ದುಪಡಿಸಲು ಮುಂದಾಗಿದೆ ಎಂದು ಗುಲ್ಲೆಬ್ಬಿಸಲು ಮುಂದಾಗುವುದು ನ್ಯಾಯವಲ್ಲ. ಸರಕಾರ ಗೃಹ ಲಕ್ಷ್ಮಿ ಯೋಜನೆಯನ್ನು ರದ್ದುಗೊಳಿಸಬೇಕು ಎನ್ನುವ ತಮ್ಮ ಮನದಿಂಗಿತವನ್ನು ಈ ರೀತಿಯಲ್ಲಿ ವಿರೋಧ ಪಕ್ಷ ವ್ಯಕ್ತಪಡಿಸುತ್ತಿದೆ. ಗೃಹಲಕ್ಷ್ಮಿ ಯೋಜನೆಯಿಂದ ಅನರ್ಹರನ್ನು ಕಿತ್ತು ಹಾಕಿದರೆ ಬಿಜೆಪಿಗೆ ಸಮಸ್ಯೆ ಏನು ಎನ್ನುವುದನ್ನು ಅವರು ಇನ್ನೂ ವಿವರಿಸಿಲ್ಲ.
ಸಿಲಿಂಡರ್ ಸಬ್ಸಿಡಿಯಿಂದ ಜನರನ್ನು ಹಂತ ಹಂತವಾಗಿ ಹೇಗೆ ಕೇಂದ್ರ ಸರಕಾರ ಹೊರಗಿಟ್ಟಿತು ಎನ್ನುವುದನ್ನು ನಾವು ನೋಡಿದ್ದೇವೆ. ಇತ್ತೀಚೆಗಷ್ಟೇ ಉಜ್ವಲ ಯೋಜನೆಯ ಪ್ರಯೋಜನ ಪಡೆಯುತ್ತಿದ್ದ ಮಹಿಳೆಯರ ಸಿಲಿಂಡರ್‌ಗಳನ್ನು ಕಡಿತಗೊಳಿಸಿತು. ಈ ಸಂದರ್ಭದಲ್ಲಿ ರಾಜ್ಯದ ನಾಯಕರು ಬಾಯಿ ಹೊಲಿದು ಕುಳಿತಿದ್ದರು. ಉಜ್ವಲ ಯೋಜನೆಯ ಹೆಸರಿನಲ್ಲಿ ಬೀದಿ ಬೀದಿಯಲ್ಲಿ ಪ್ರಧಾನಿ ಮೋದಿಯ ಭಾವಚಿತ್ರದ ಜೊತೆಗೆ ಜಾಹೀರಾತು ಕಟೌಟ್‌ಗಳನ್ನು ನಿಲ್ಲಿಸಿ ಪ್ರಚಾರ ಗಿಟ್ಟಿಸಿಕೊಂಡ ಕೇಂದ್ರ ಸರಕಾರ ಇದೀಗ ಕೊಟ್ಟ ಮಾತಿನಿಂದ ಹಿಂದೆ ಸರಿಯುತ್ತಿದೆ. ಉಜ್ವಲ ಫಲಾನುಭವಿಗಳ ಸಬ್ಸಿಡಿ ಎಲ್‌ಪಿಜಿ ಕೋಟಾವನ್ನು ಕೇಂದ್ರ ಸರಕಾರ 9ರಿಂದ ನಾಲ್ಕಕ್ಕಿಳಿಸಿದೆ. ಇದರಿಂದ ದೇಶಾದ್ಯಂತ ಕೋಟ್ಯಂತರ ಮಹಿಳೆಯರು ಸಮಸ್ಯೆಗಳನ್ನು ಎದುರಿಸತೊಡಗಿದ್ದಾರೆ. ಇದರ ವಿರುದ್ಧ ಬಿಜೆಪಿ ನಾಯಕರು ಮಾತನಾಡಬೇಕಾಗಿತ್ತು. ರಾಜ್ಯದ ಸಂತ್ರಸ್ತ ಮಹಿಳೆಯರ ಅಳಲನ್ನು ಕೇಂದ್ರಕ್ಕೆ ತಲುಪಿಸಬೇಕಾಗಿತ್ತು. ಆದರೆ ಅದನ್ನು ಕಂಡೂ ಕಾಣದಂತಿದ್ದಾರೆ.
ಇಡೀ ದೇಶದಲ್ಲಿ ತೀವ್ರ ಪರಿಷ್ಕರಣೆಯ ಹೆಸರಿನಲ್ಲಿ ಜನರನ್ನು ಮತದಾರರ ಪಟ್ಟಿಯಿಂದಲೇ ಹೊರಹಾಕಲಾಗುತ್ತಿದೆ. ಮೂಲಭೂತ ಹಕ್ಕಾಗಿರುವ ಮತದಾನದಿಂದ ಕೋಟ್ಯಂತರ ಜನರು ವಂಚಿತರಾಗುತ್ತಿದ್ದಾರೆ. ಇದರ ವಿರುದ್ಧ ದೇಶಾದ್ಯಂತ ಜನರು ಹೋರಾಟ ನಡೆಸುತ್ತಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಯ ಬಳಿಕ ಹೊರಗುಳಿದ ಸುಮಾರು 6 ಕೋಟಿಗೂ ಅಧಿಕ ಮತದಾರರು ನುಸುಳುಕೋರರು ಆಗಿರುವುದಕ್ಕಂತೂ ಸಾಧ್ಯವಿಲ್ಲ. ಆದರೆ ಕೇಂದ್ರ ಸರಕಾರದ ಕೃಪೆಯಿಂದ ಮತದಾನ ಮಾಡುವ ಹಕ್ಕಿನಿಂದ ಇವರೆಲ್ಲರೂ ವಂಚಿತರಾಗಿದ್ದಾರೆ. ಅಷ್ಟೇ ಅಲ್ಲ, ಈ ಪರಿಷ್ಕರಣೆಯಲ್ಲಿ ಹೊರಗುಳಿದ ಜನರು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಸರಕಾರದ ಎಲ್ಲ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಪಶ್ಚಿಮಬಂಗಾಳ ಮತ್ತು ಬಿಹಾರ ಸರಕಾರ ಎಸ್‌ಐಆರ್‌ನಲ್ಲಿ ಹೆಸರಿಲ್ಲದವರಿಗೆ ಸರಕಾರದ ಯಾವುದೇ ಯೋಜನೆಗಳನ್ನು ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿವೆ. ಎಸ್‌ಐಆರ್ ಪೂರ್ತಿಯಾದರೆ ದೇಶಾದ್ಯಂತ ಕೋಟ್ಯಂತರ ಜನರು ಸರಕಾರದ ಕಲ್ಯಾಣ ಯೋಜನೆಗಳಿಂದ ಹೊರದಬ್ಬಲ್ಪಡುತ್ತಾರೆ. ನಿಜಕ್ಕೂ ಜನರ ಬಗ್ಗೆ, ಬಡವರ ಬಗ್ಗೆ ಬಿಜೆಪಿ ನಾಯಕರಿಗೆ ಕಾಳಜಿಯಿದೆಯಾದರೆ ಅವರು ಮತದಾರರ ಪಟ್ಟಿ ಪರಿಷ್ಕರಣೆಯ ವಿರುದ್ಧ ಮೊದಲು ಧ್ವನಿಯೆತ್ತಬೇಕು. ಆ ಬಳಿಕ, ಗೃಹ ಲಕ್ಷ್ಮಿ ಯೋಜನೆಯ ಪರಿಷ್ಕರಣೆಯ ಬಗ್ಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಬಹುದಾಗಿದೆ.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಸಾಧಕ ಬಾಧಕಗಳ ಅವಲೋಕನ ನಡೆಯುವುದು ಅತ್ಯಗತ್ಯವಾಗಿದೆ. ಈ ಯೋಜನೆಗಳು ದುರುಪಯೋಗವಾದಷ್ಟೂ ಅದರಿಂದ ಅರ್ಹ ಫಲಾನುಭವಿಗಳಿಗೆ ಸಮಸ್ಯೆಯಾಗುತ್ತದೆ. ಆದುದರಿಂದ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಅವರನ್ನು ಹೊರಹಾಕುವ ಕೆಲಸ ಅಗತ್ಯವಾಗಿ ನಡೆಯಬೇಕಾಗಿದೆ. ಹಾಗೆಯೇ ಈ ಗ್ಯಾರಂಟಿಗಳನ್ನು ಇನಷ್ಟು ಪರಿಣಾಮಕಾರಿಯಾಗಿ, ಪಾರದರ್ಶಕವಾಗಿ ಹೇಗೆ ಅನುಷ್ಠಾನಗೊಳಿಸಬಹುದು ಎನ್ನುವುದರ ಬಗ್ಗೆಯೂ ಸರಕಾರ ಯೋಚಿಸಬೇಕು, ಯೋಜನೆ ಹಾಕಿಕೊಳ್ಳಬೇಕು. ಗೃಹಲಕ್ಷ್ಮಿ ಯೋಜನೆಯ ಹಣದಿಂದ ಗ್ರಾಮೀಣ ಪ್ರದೇಶದ ಹಲವು ಮಹಿಳೆಯರು ಸಣ್ಣ ಪುಟ್ಟ ಸ್ವಉದ್ಯೋಗಗಳನ್ನು ಆರಂಭಿಸಿ ಗುರುತಿಸಿಕೊಳ್ಳುತ್ತಿದ್ದಾರೆ. ಈ ಗೃಹಲಕ್ಷ್ಮಿ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಗ್ರಾಮೀಣ ಮಹಿಳೆಯರು ಸ್ವಾವಲಂಬಿಯಾಗುವಂತೆ ನೋಡಿಕೊಳ್ಳಬೇಕು. ಪರಿಷ್ಕರಣೆ ಎಂದರೆ ಇರುವ ಫಲಾನುಭವಿಗಳನ್ನು ರದ್ದುಗೊಳಿಸುವುದಲ್ಲ, ಅರ್ಹ ಫಲಾನುಭವಿಗಳಿಗೆ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಲುಪುವಂತೆ ನೋಡಿಕೊಳ್ಳುವುದು ಎನ್ನುವ ಎಚ್ಚರ ಸರಕಾರಕ್ಕೂ ಇರಬೇಕು.






