ಸರಕಾರಕ್ಕೆ ಪರಿಷ್ಕರಣೆಯ ಪರೀಕ್ಷೆ

ಶನಿವಾರ ರಾಜ್ಯದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆಗೆ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಮುಖ್ಯವಾದುದು ಗೃಹಲಕ್ಷ್ಮಿಗೆ ಹೊಸ ಅರ್ಜಿಗಳನ್ನು ಸಲ್ಲಿಸಬೇಕು ಎನ್ನುವುದು. ಗೃಹಲಕ್ಷ್ಮಿ ಜಾರಿಯಾಗಿ ಮೂರು ವರ್ಷಗಳಾಗುತ್ತಾ ಬರುತ್ತಿರುವುದರಿಂದ ಅತ್ಯವಶ್ಯವಾಗಿ ಪರಿಷ್ಕರಣೆ ನಡೆಯಬೇಕಾಗಿದೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಲ್ಲಿ ಹಲವರು ಈಗಾಗಲೇ ನಿಧನರಾಗಿದ್ದು ಅವರ ಹೆಸರಿನಲ್ಲಿ ಇತರರು 100 ಕೋಟಿ ರೂಪಾಯಿಗೂ ಹೆಚ್ಚು ಹಣ ಪಡೆದಿರುವುದು ಗಮನಕ್ಕೆ ಬಂದಿದೆ, ಈ ಕಾರಣಕ್ಕಾಗಿ ಪರಿಷ್ಕರಣೆ ನಡೆಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸ್ಪಷ್ಟೀಕರಣ ನೀಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಕುಟುಂಬದ ಹಿರಿಯ ಮಹಿಳೆ. ಇವರ ದುರ್ಬಳಕೆಯ ಸಾಧ್ಯತೆಯೂ ಇಲ್ಲದಿಲ್ಲ. ಆದುದರಿಂದ ಪ್ರತೀ ಮೂರು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಇದರ ಪರಿಷ್ಕರಣೆ ನಡೆಸುವುದು ಅತ್ಯಗತ್ಯವೂ ಕೂಡ. ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಲ್ಲೂ ಗೊಂದಲವಿದೆ. ಇದನ್ನು ಪರಿಶೀಲಿಸುವುದು ಅತ್ಯಗತ್ಯ. ಈ ಪರಿಷ್ಕರಣೆ, ಪರಿಶೀಲನೆಯನ್ನು ನಿರಾಕರಿಸುವುದೆಂದರೆ ಪರೋಕ್ಷವಾಗಿ ಯೋಜನೆಯಲ್ಲಿ ನಡೆಯುವ ಅಕ್ರಮಗಳನ್ನು ಸಮರ್ಥಿಸಿಕೊಳ್ಳುವುದು ಎಂದು ಅರ್ಥ.
ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಕೂಡ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅರ್ಹ ಮತದಾರರಿಗೆ ತೊಡಕುಂಟಾಗದಂತೆ ನೋಡಿಕೊಳ್ಳಲು ವಾಸ ಪ್ರಮಾಣ ಪತ್ರ ವಿತರಣೆಗೂ ಸಿಎಂ ಸೂಚನೆ ನೀಡಿದ್ದಾರೆ. ಎಸ್‌ಐಆರ್ ಪ್ರಕ್ರಿಯೆ ಘೋಷಣೆಯಾದ ದಿನದಿಂದ ಯಾವುದೇ ಮತದಾರರು ಪಟ್ಟಿಯಿಂದ ಹೊರ ಬೀಳದಂತೆ ನೋಡಿಕೊಳ್ಳಲು ರಾಜ್ಯ ಸರಕಾರ ಕ್ರಮವನ್ನು ತೆಗೆದುಕೊಳ್ಳುತ್ತಿದೆಯಾದರೂ, ಇದು ಎಷ್ಟರ ಮಟ್ಟಿಗೆ ಜನಸಾಮಾನ್ಯರಿಗೆ ಅದರಲ್ಲೂ ವಲಸೆ ಕಾರ್ಮಿಕರಂತಹ ತಳಸ್ತರದ ಜನರಿಗೆ ಸಹಾಯಕ್ಕೆ ಬರುತ್ತದೆ ಎನ್ನುವುದರ ಖಚಿತತೆಯಿಲ್ಲ. ವಿರೋಧ ಪಕ್ಷಗಳು ಇಂದು ನಿಜಕ್ಕೂ ಕಾಳಜಿ ವಹಿಸಬೇಕಾಗಿರುವುದು ಗೃಹ ಲಕ್ಷ್ಮಿ ಯೋಜನೆಯ ಪರಿಷ್ಕರಣೆಯ ಕುರಿತಂತೆ ಅಲ್ಲ. ಬದಲಿಗೆ ಮತದಾರರ ಪಟ್ಟಿಯ ಪರಿಷ್ಕರಣೆಯ ಕುರಿತಂತೆ. ಯಾಕೆಂದರೆ, ಈ ಪರಿಷ್ಕರಣೆಯಲ್ಲಿ ಅರ್ಹ ಮತದಾರರು ಹೊರಬಿದ್ದರೆ ಭವಿಷ್ಯದಲ್ಲಿ ಅವರು ಸರಕಾರದ ಕಲ್ಯಾಣ ಯೋಜನೆಗಳಿಂದಲೂ ಹೊರ ಬಿದ್ದಂತೆ. ವಿರೋಧ ಪಕ್ಷದ ನಾಯಕರಿಗೆ ನಿಜಕ್ಕೂ ಜನರ ಬಗ್ಗೆ ಕಾಳಜಿಯಿದ್ದರೆ, ಜನಪರ ಯೋಜನೆಗಳು ಜನಸಾಮಾನ್ಯರನ್ನು ಪೂರ್ಣ ಪ್ರಮಾಣದಲ್ಲಿ ತಲುಪಬೇಕು ಎನ್ನುವ ಉದ್ದೇಶವಿದ್ದರೆ ಅವರು ಎಸ್‌ಐಆರ್ ವಿರುದ್ಧ ಧ್ವನಿಯೆತ್ತಬೇಕು. ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿ, ಆದರೆ ಮತದಾರರು ತಮ್ಮನ್ನು ತಾವು ಮತದಾನಕ್ಕೆ ಅರ್ಹರು ಎಂದು ಸಾಬೀತು ಪಡಿಸುವುದಕ್ಕಿರುವ ನಿಯಮಗಳ ಸಡಿಲಿಕೆಗಾಗಿ ಕೇಂದ್ರ ಸರಕಾರವನ್ನು ಒತ್ತಾಯಿಸಬೇಕು. ಎಸ್‌ಐಆರ್ ಯಾವ ಕಾರಣಕ್ಕೂ ಪೌರತ್ವ ಪರಿಷ್ಕರಣೆಯಾಗಬಾರದು ಎಂದು ಆಗ್ರಹಿಸಬೇಕು. ಆಗ, ಗೃಹ ಲಕ್ಷ್ಮಿ ಪರಿಷ್ಕರಣೆಯ ಬಗ್ಗೆಯೂ ಧ್ವನಿಯೆತ್ತುವ ನೈತಿಕತೆಯನ್ನು ತಮ್ಮದಾಗಿಸಿಕೊಳ್ಳುತ್ತಾರೆ.
ಎಸ್‌ಐಆರ್‌ನಿಂದ ಮತದಾರರು ವಂಚಿತರಾಗದಂತೆ ವಾಸಪ್ರಮಾಣ ಪತ್ರ ವಿತರಣೆಯಿಂದ ಸಮಸ್ಯೆ ಪರಿಹಾರವಾಗುತ್ತದೆ ಎನ್ನುವಂತಿಲ್ಲ. ಅಂತಹ ಪ್ರಮಾಣಪತ್ರ ಮಾನದಂಡವನ್ನು ಪೂರ್ಣವಾಗಿ ಪೂರೈಸುವುದಿಲ್ಲ. ಚುನಾವಣಾ ಆಯೋಗದ ಪ್ರಕಾರ ಬೇಕಾಗಿರುವುದು ಸಕ್ಷಮ ಪ್ರಾಧಿಕಾರವು ನೀಡುವ ಶಾಶ್ವತ ವಾಸಸ್ಥಳ ಪ್ರಮಾಣ ಪತ್ರ. ಸಾಮಾನ್ಯ ವಾಸ ಪ್ರಮಾಣ ಪತ್ರಕ್ಕೂ ಇದಕ್ಕೂ ವ್ಯತ್ಯಾಸವಿದೆ. ಇದನ್ನು ಪಡೆಯಬೇಕಾದರೆ ಆರು ವರ್ಷಕ್ಕೂ ಹೆಚ್ಚು ಕಾಲ ಕರ್ನಾಟಕದಲ್ಲಿ ವಾಸಿಸಿರುವ ದಾಖಲೆಗಳನ್ನು ಕೊಡಬೇಕಾಗುತ್ತದೆ ಅಥವಾ ಆರು ವರ್ಷಕ್ಕೂ ಹೆಚ್ಚು ಕಾಲ ಕರ್ನಾಟಕದಲ್ಲಿ ಶಿಕ್ಷಣ ಪಡೆದಿರುವ ದಾಖಲೆಗಳು ಹೊಂದಿರಬೇಕಾಗುತ್ತದೆ. ಒಂದು ದಾಖಲೆಗಾಗಿ ಇನ್ನೆರಡು ದಾಖಲೆಗಳನ್ನು ಬೆನ್ನುಹತ್ತುವ ಕೆಲಸವಿದು. ಕೂಲಿಕಾರ್ಮಿಕರು, ವಲಸೆ ಕಾರ್ಮಿಕರು, ಆದಿವಾಸಿಗಳು ಇವುಗಳ ಬೆನ್ನುಹತ್ತಿ ಎಸ್‌ಐಆರ್‌ನಲ್ಲಿ ತಮ್ಮ ಹೆಸರು ಉಳಿದುಕೊಳ್ಳುವಂತೆ ನೋಡಿಕೊಳ್ಳುವುದು ಕಷ್ಟ. ಅಷ್ಟೇ ಅಲ್ಲ ವಾಸಸ್ಥಳದ ದಾಖಲೆ ಪಡೆದ ಬಳಿಕವೂ ಹಲವು ನೆಪಗಳನ್ನು ಮುಂದೊಡ್ಡಿ ಜನರನ್ನು ಹೊರ ಹಾಕುವ ಕೆಲಸ ನಡೆಯಬಹುದು. ಎಸ್‌ಐಆರ್ ಕೇಂದ್ರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ದುರ್ಬಳಕೆ ಮಾಡುವ ಕೆಲಸವೂ ವ್ಯಾಪಕವಾಗಿ ನಡೆಯುತ್ತಿದೆ. ಇದರ ಬಗ್ಗೆಯೂ ಸರಕಾರ ಎಚ್ಚರವಿರಬೇಕು. ಸಣ್ಣ ಪುಟ್ಟ ನೆಪಗಳನ್ನು ಮುಂದೊಡ್ಡಿ ಮತದಾರರ ಹೆಸರನ್ನು ಎಸ್‌ಐಆರ್‌ನಿಂದ ಹೊರ ಹಾಕಿರುವ ನೂರಾರು ಪ್ರಕರಣಗಳು ಬಿಹಾರ, ಪಶ್ಚಿಮಬಂಗಾಳದಲ್ಲಿ ನಡೆದಿವೆ. ಇದು ಕರ್ನಾಟಕದಲ್ಲಿ ನಡೆಯದು ಎಂದಿಲ್ಲ. ಆದರೆ ಸದ್ಯಕ್ಕೆ ಎಸ್‌ಐಆರ್ ರದ್ದುಗೊಳಿಸಬೇಕು ಎನ್ನುವ ಧ್ವನಿಯನ್ನು ದಮನಿಸುವಲ್ಲಿ ಕೇಂದ್ರ ಸರಕಾರ ಭಾಗಶಃ ಯಶಸ್ವಿಯಾಗಿದೆ. ನ್ಯಾಯಾಲಯವೂ ಎಸ್‌ಐಆರ್ ಪರವಾಗಿ ತೀರ್ಪು ನೀಡಿರುವುದರಿಂದ, ಈ ಮತದಾರರ ಪಟ್ಟಿ ಪರಿಷ್ಕರಣೆ ಪಾರದರ್ಶಕವಾಗಿ ನಡೆಯಲು ಇನ್ನಷ್ಟು ಕಠಿಣ ಕ್ರಮಗಳನ್ನು ಆಯಾ ರಾಜ್ಯ ಸರಕಾರಗಳು ತೆಗೆದುಕೊಳ್ಳುವುದೊಂದೇ ಉಳಿದಿರುವ ದಾರಿ. ಈ ನಿಟ್ಟಿನಲ್ಲಿ ಡಿ. ಕೆ. ಶಿವಕುಮಾರ್ ನೇತೃತ್ವದ ಸರಕಾರದ ಹೊಣೆಗಾರಿಕೆ ಬಹುದೊಡ್ಡದು. ಯಾಕೆಂದರೆ ಎಸ್‌ಐಆರ್‌ನಲ್ಲಿ ನಡೆಯುವ ವಂಚನೆಗಳ ನೇರ ಫಲಾನುಭವಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಎನ್ನುವ ಎಚ್ಚರಿಕೆ ಅವರಿಗೆ ಇರಬೇಕು.
ಇನ್ನುಳಿದಂತೆ ಹಳ್ಳಿಯಿಂದ ವಿಧಾನಸೌಧದವರೆಗೆ 0 ಕಮಿಷನ್ ಜಾರಿಗೊಳಿಸುವ ಗುರಿಯಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಕನಿಷ್ಟ ವಿಧಾನಸೌಧವನ್ನು ಭ್ರಷ್ಟಾಚಾರದಿಂದ ಮುಕ್ತ ಮಾಡಲು ಸಾಧ್ಯವೇ ಎನ್ನುವುದನ್ನು ಮುಖ್ಯಮಂತ್ರಿ ಯೋಚಿಸಬೇಕಾಗಿದೆ. ಭ್ರಷ್ಟಾಚಾರದ ತಾಯಿ ಬೇರು ವಿಧಾನಸೌಧವನ್ನು ಸುತ್ತಿಕೊಂಡಿದೆ. ಈಗಾಗಲೇ ಗುತ್ತಿಗೆದಾರರ ಸಂಘವು ಈ ಕಮಿಷನ್ ಆಡಳಿತದ ವಿರುದ್ಧ ಹಲವು ಆರೋಪಗಳನ್ನು ಮಾಡಿದೆ. ಸಿದ್ದರಾಮಯ್ಯ ಅವಧಿಯಲ್ಲಿ ಅಂದಿನ ಸಚಿವ ನಾಗೇಂದ್ರ ಅವರು ಯಾಕೆ ರಾಜೀನಾಮೆ ನೀಡಬೇಕಾಯಿತು ಎನ್ನುವುದು ಮುಖ್ಯಮಂತ್ರಿಗೆ ತಿಳಿಯದ್ದೇನೂ ಅಲ್ಲ. ಭ್ರಷ್ಟಾಚಾರಕ್ಕೆ ಸಂಬಂಧಿಸಿ ಮೊದಲು ರಾಜಕಾರಣಿಗಳಿಗೆ ಕಡಿವಾಣ ಹಾಕಿದರೆ, ಸರಕಾರಿ ಕಚೇರಿಗಳಲ್ಲಿ, ಇತರ ಇಲಾಖೆಗಳಲ್ಲಿಯೂ ಸುಲಭವಾಗಿ ಕಡಿವಾಣ ಹಾಕಬಹುದು. ಆದುದರಿಂದ ಭ್ರಷ್ಟಾಚಾರ ವಿಷಯದಲ್ಲಿ ತಮ್ಮ ಸಹೋದ್ಯೋಗಿಗಳಿಗೆ ಮುಖ್ಯಮಂತ್ರಿ ಮೂಗುದಾರ ಹಾಕಬೇಕು. ಈ ಹಿಂದೆ ಸಿದ್ದರಾಮಯ್ಯ ಅವರಿಗೆ ಸಾಧ್ಯವಾಗದ್ದು ಶಿವಕುಮಾರ್ ಅವರಿಗೆ ಹೇಗೆ ಸಾಧ್ಯವಾಗುತ್ತದೆ ಎನ್ನುವುದನ್ನು ಕಾದುನೋಡಬೇಕಾಗಿದೆ.






