ಕ್ರಾಂತಿಯೋ ಭ್ರಾಂತಿಯೋ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ನವೆಂಬರ್ ಕ್ರಾಂತಿ’ ಇತ್ತೀಚೆಗೆ ಮಾಧ್ಯಮಗಳಲ್ಲಿ ಹೆಚ್ಚು ಪ್ರಾಧಾನ್ಯತೆಯನ್ನು ಪಡೆಯುತ್ತಿದೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದೊಳಗೆ ನವೆಂಬರ್‌ನಲ್ಲಿ ನಡೆಯಬಹುದಾದ ಅಧಿಕಾರ ಬದಲಾವಣೆಗಳ ಹಿನ್ನೆಲೆಯಲ್ಲಿ ಈ ಎರಡು ಪದಗಳು ಮುನ್ನೆಲೆಗೆ ಬಂದಿವೆ. ವಿಪರ್ಯಾಸವೆಂದರೆ, ಈ ಕ್ರಾಂತಿಯ ಬಗ್ಗೆ ಬಿಜೆಪಿಯ ನಾಯಕರೇ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನದ ಕುರಿತಂತೆ ಇರುವ ಗೊಂದಲಗಳನ್ನು ಪರಿಹರಿಸಲು ಈವರೆಗೂ ವಿಫಲಾಗಿರುವ ಬಿಜೆಪಿಯ ರಾಜ್ಯ ನಾಯಕರು ಕಾಂಗ್ರೆಸ್‌ನೊಳಗಿರುವ ಭಿನ್ನಮತಗಳ ಬಗ್ಗೆ ಅದೆಷ್ಟು ಮಾತನಾಡಿದರೂ ರಾಜ್ಯದ ಜನತೆ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಇಷ್ಟಕ್ಕೂ ನವೆಂಬರ್ ಕ್ರಾಂತಿಯ ಬಗ್ಗೆ ವದಂತಿಗಳು ಹರಡುತ್ತಿವೆಯೇ ಹೊರತು, ಸರಕಾರದೊಳಗಿರುವ ಯಾವುದೇ ಸಚಿವರು ನೇರವಾಗಿ, ಸ್ಪಷ್ಟವಾಗಿ ಹೇಳಿಕೆಗಳನ್ನು ನೀಡುತ್ತಿಲ್ಲ. ‘ಹೈಕಮಾಂಡ್ ತೀರ್ಮಾನಿಸಿದರೆ ನಾನೇ ಮುಖ್ಯಮಂತ್ರಿ’ ಎನ್ನುವ ಮೂಲಕ ಸಿದ್ದರಾಮಯ್ಯ ಈ ಕ್ರಾಂತಿಯನ್ನು ಪರೋಕ್ಷವಾಗಿ ನಿರಾಕರಿಸಿದ್ದಾರೆ. ಅಂದರೆ ಹೈಕಮಾಂಡ್ ಸಮ್ಮತಿಯಿಲ್ಲದೆ ಇದ್ದರೆ ನಾನು ಮುಖ್ಯಮಂತ್ರಿಯಾಗಿ ಮುಂದುವರಿಯುವುದಿಲ್ಲ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಹೈಕಮಾಂಡ್ ಒತ್ತಡ ಹಾಕಿದರೂ ನಾನು ಕುರ್ಚಿಯಿಂದ ಕೆಳಗಿಳಿಯುವುದಿಲ್ಲ ಎಂದು ಮುಖ್ಯಮಂತ್ರಿ ಹಟ ಹಿಡಿದು ಕೂತಾಗಷ್ಟೇ ಕ್ರಾಂತಿಯ ಅಗತ್ಯ ಬರುತ್ತದೆ. ಆಗ ನಡೆಸುವ ಬದಲಾವಣೆಗಳು ಸರಕಾರದೊಳಗೆ ಹಲವು ಪಲ್ಲಟಗಳಿಗೆ ಕಾರಣವಾಗಬಹುದು. ಇತ್ತ ಮುಖ್ಯಮಂತ್ರಿ ಹುದ್ದೆಯ ಪ್ರತಿಸ್ಪರ್ಧಿ ಎಂದು ಗುರುತಿಸಲ್ಪಡುವ ಡಿ.ಕೆ. ಶಿವಕುಮಾರ್ ಕೂಡ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ‘ಹೈಕಮಾಂಡ್ ಹೇಳುವುದಕ್ಕೆ ಬದ್ಧ’ ಎನ್ನುವ ನಿಲುವು ಈಗಲೂ ರಾಜ್ಯ ಕಾಂಗ್ರೆಸ್‌ನೊಳಗೆ ಸ್ಪಷ್ಟವಾಗಿರುವಾಗ ಯಾವುದೇ ಬದಲಾವಣೆಗಳನ್ನು ‘ಕ್ರಾಂತಿ’ ಎಂದು ಕರೆಯುವುದು ಹೇಗೆ?
ಇಷ್ಟಕ್ಕೂ ಕ್ರಾಂತಿಯು ಜನಪರ ಬದಲಾವಣೆಗಳನ್ನು ಗುರಿಯಾಗಿಸಿಕೊಂಡಿರುತ್ತದೆ. ಸರಕಾರದೊಳಗೆ ಅಧಿಕಾರಕ್ಕಾಗಿ ನಡೆಯುವ ಜಗ್ಗಾಟಗಳನ್ನು ಕ್ರಾಂತಿಯೆಂದು ಬಣ್ಣಿಸುವುದು ‘ಕ್ರಾಂತಿ’ಗೆ ಮಾಡುವ ಅವಮಾನ. ಹೆಚ್ಚೆಂದರೆ ಈ ರಾಜಕೀಯ ಒಳಜಗಳಗಳನ್ನು, ಅಧಿಕಾರಕ್ಕಾಗಿ ನಡೆಯುವ ಪೈಪೋಟಿಗಳನ್ನು ಭಿನ್ನಮತ, ಬಂಡಾಯ ಎಂದು ಕರೆಯಬಹುದು. ಆದರೆ, ಅಂತಹ ಬಂಡಾಯಗಳು ನಡೆಯುವ ಸಾಧ್ಯತೆಗಳು ಸದ್ಯಕ್ಕೆ ಕಾಣುತ್ತಿಲ್ಲ. ಹೈಕಮಾಂಡ್ ಸೂಚನೆ ನೀಡಿದರೆ ಅದನ್ನು ಪಾಲಿಸಲು ನಾವೆಲ್ಲರೂ ಸಿದ್ಧರಿದ್ದೇವೆ ಎನ್ನುವ ನಿಲುವಿಗೆ ಎಲ್ಲಿಯವರೆಗೆ ಸರಕಾರದ ಒಳಗಿರುವ ನಾಯರು ಬದ್ಧರಾಗಿರುತ್ತಾರೆಯೋ ಅಲ್ಲಿಯವರೆಗೆ ಕ್ರಾಂತಿ, ಬಂಡಾಯ, ಭಿನ್ನಮತಗಳು ಕೆಲವು ಮಾಧ್ಯಮ ಮಂದಿಗಳ ಮನಸ್ಸಿನ ಮಂಡಿಗೆಯಷ್ಟೇ. ಇಷ್ಟಕ್ಕೂ ಕ್ರಾಂತಿ ಯಾವಾಗ ಸಂಭವಿಸುತ್ತದೆ? ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಭ್ರಷ್ಟಾಚಾರ ತಾರಕಕ್ಕೆ ತಲುಪಿದಾಗ ಬಿಜೆಪಿಯ ವರಿಷ್ಠರುಗಳೇ ಜೊತೆ ಸೇರಿ ಅವರನ್ನು ಬಲವಂತವಾಗಿ ಕೆಳಗಿಳಿಸಿದ್ದನ್ನು ಒಂದು ‘ಕಿರು ಕ್ರಾಂತಿ’ಯಾಗಿ ಭಾವಿಸಬಹುದು. ಅದು ರಾಜ್ಯ ರಾಜಕೀಯದಲ್ಲಿ ಹಲವು ರೀತಿಯ ಪರಿಣಾಮಗಳನ್ನು ಬೀರಿತು. ಕಳೆದ ಬೊಮ್ಮಾಯಿ ನೇತೃತ್ವದ ಭ್ರಷ್ಟ ಸರಕಾರವನ್ನು ರಾಜ್ಯದ ಜನತೆ ತಿರಸ್ಕರಿಸಿ, ಸಿದ್ದರಾಮಯ್ಯ ಅವರನ್ನು ಬಹುಮತದಿಂದ ಗದ್ದುಗೆಗೇರಿಸಿದ್ದು ಕೂಡ ಒಂದು ದೊಡ್ಡ ಬದಲಾವಣೆಯೇ ಆಗಿದೆ.
ಇದೀಗ ತುರ್ತಾಗಿ ಕ್ರಾಂತಿಯೊಂದು ನಡೆಯುವ ಅಗತ್ಯ ರಾಜ್ಯಕ್ಕಿದೆಯೆ? ಯಾಕೆಂದರೆ, ಕಳೆದ ಎರಡು ವರ್ಷಗಳಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಆಡಳಿತದ ಬಗ್ಗೆ ಜನರ ನಡುವೆ ದೊಡ್ಡ ತಕರಾರುಗಳೇನೂ ಇಲ್ಲ. ಬಿಜೆಪಿ ಎತ್ತಿಕೊಂಡ ಭ್ರಷ್ಟಾಚಾರ ಆರೋಪಗಳೂ ಒಂದೊಂದಾಗಿ ಠುಸ್ಸಾದವು. ‘ಗ್ಯಾರಂಟಿ ಯೋಜನೆಗಳು’ ಸಿದ್ದರಾಮಯ್ಯ ಅವರ ಸರಕಾರವನ್ನು ವರ್ಷದಿಂದ ವರ್ಷಕ್ಕೆ ಜನಪ್ರಿಯ ಗೊಳಿಸುತ್ತಾ ಬಂದಿದೆ. ಅಧಿಕಾರಿ ವಲಯಗಳಲ್ಲಿ ಭ್ರಷ್ಟಾಚಾರ ಹೆಚ್ಚಿದೆ ಎನ್ನುವ ಆರೋಪಗಳಿವೆಯಾದರೂ, ಗ್ಯಾರಂಟಿಗಾಗಿ ಸುರಿಯುತ್ತಿರುವ ದುಡ್ಡು ಆ ಆರೋಪಗಳನ್ನು ಮರೆ ಮಾಡುತ್ತಿದೆ. ಈ ಹಿಂದಿನ ಸರಕಾರಕ್ಕೆ ಹೋಲಿಸಿ, ಈಗಿನ ಸ್ಥಿತಿಯ ಬಗ್ಗೆ ಜನರು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ. ಇದೀಗ ಏಕಾಏಕಿ ಬದಲಾವಣೆ ನಡೆಯಬೇಕಾದರೆ ಅದಕ್ಕೆ ಸ್ಪಷ್ಟ ಕಾರಣಗಳನ್ನು ವರಿಷ್ಠರು ನೀಡುವುದು ಅತ್ಯಗತ್ಯವಾಗುತ್ತದೆ. ಸಿದ್ದರಾಮಯ್ಯ ಅವರನ್ನು ಏಕಾಏಕಿ ಹೈಕಮಾಂಡ್ ಇಳಿಸಿದರೆ, ಅವರು ಎರಡೂವರೆ ವರ್ಷಗಳಲ್ಲಿ ಉತ್ತಮ ಆಡಳಿತ ನೀಡಲು ವಿಫಲರಾಗಿದ್ದಾರೆ ಎನ್ನುವುದನ್ನು ಹೈಕಮಾಂಡ್ ಒಪ್ಪಿಕೊಂಡಂತಾಗುತ್ತದೆ. ಸಿದ್ದರಾಮಯ್ಯ ಅವರು ಯಶಸ್ವೀ ಆಡಳಿತವನ್ನು ನಡೆಸಿದ್ದಾರೆ ಎಂದು ಹೈಕಮಾಂಡ್ ಭಾವಿಸುವುದಾದರೆ, ಅವರನ್ನು ಯಾಕೆ ಕೆಳಗಿಳಿಸಲಾಯಿತು ಎನ್ನುವುದಕ್ಕೆ ಕಾರಣ ನೀಡಬೇಕಾಗುತ್ತದೆ.
ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಬೇಕಾದರೆ ಅವರಿಗಿಂತ ಸಮರ್ಥರು ಅಥವಾ ಅವರಷ್ಟೇ ಸಮರ್ಥರನ್ನು ಆಯ್ಕೆ ಮಾಡುವ ಒತ್ತಡ ಹೈಕಮಾಂಡ್ ಮುಂದಿದೆ. ಇಲ್ಲವಾದರೆ, ಈ ಬದಲಾವಣೆಯ ಉದ್ದೇಶವೇ ಪ್ರಶ್ನೆಗೀಡಾಗಬಹುದು. ಸಿದ್ದರಾಮಯ್ಯ ಅವರ ಬದಲಾವಣೆಯನ್ನು ಬಯಸುವ ಕೆಲವು ನಾಯಕರು ಈ ಕಾರಣಕ್ಕಾಗಿ ಏಕಾಏಕಿ ದಲಿತ ಮುಖ್ಯಮಂತ್ರಿಯ ಅಗತ್ಯವನ್ನು ಮುನ್ನೆಲೆಗೆ ತಂದಿದ್ದಾರೆ ಮತ್ತು ಅದರ ಜೊತೆ ಜೊತೆಗೇ ಮಲ್ಲಿಕಾರ್ಜುನ ಖರ್ಗೆಯವರ ಹೆಸರನ್ನು ತೇಲಿ ಬಿಡುತ್ತಿದ್ದಾರೆ. ಹಾಗೆಯೇ ಅಹಿಂದ ಹಿನ್ನೆಲೆಯ ಇನ್ನೋರ್ವ ದಲಿತ ನಾಯಕನನ್ನೂ ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಯಾಗಿ ಬಿಂಬಿಸಲಾಗುತ್ತಿದೆ. ಈಗಾಗಲೇ ರಾಷ್ಟ್ರರಾಜಕಾರಣದಲ್ಲಿ ಮಿಂಚುತ್ತಿರುವ ಖರ್ಗೆ ಅವರಿಗೆ ಹಿಂಭಡ್ತಿ ನೀಡುವುದು ಎಷ್ಟು ಸರಿ ಎನ್ನುವುದು ಮುಖ್ಯ ಪ್ರಶ್ನೆಯೇ ಆಗಿದೆ. ರಾಷ್ಟ್ರೀಯ ಪಕ್ಷವೊಂದರ ನಾಯಕತ್ವವನ್ನು ಕರ್ನಾಟಕದ ಹಿರಿಯ ಮುಖಂಡರೊಬ್ಬರು ವಹಿಸಿರುವುದು ರಾಜ್ಯದ ಪಾಲಿನ ಹೆಮ್ಮೆಯಾಗಿದೆ. ಮುಂದಿನ ದಿನಗಳಲ್ಲಿ ಖರ್ಗೆ ಪ್ರಧಾನಿ ಅಭ್ಯರ್ಥಿಯಾಗಿ ಪರಿಗಣಿಸಲ್ಪಟ್ಟರೂ ಅಚ್ಚರಿಯಿಲ್ಲ. ಅವರನ್ನು ಮತ್ತೆ ರಾಜ್ಯ ರಾಜಕೀಯಕ್ಕೆ ಸೀಮಿತಗೊಳಿಸುವುದರಿಂದ ದಲಿತರಿಗೂ, ರಾಜ್ಯಕ್ಕೂ ಹಲವು ನಷ್ಟಗಳಿವೆ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರಿಗೆ ಪರ್ಯಾಯವಾಗಿ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆಯಂತಹ ನಾಯಕರನ್ನು ಬೆಳೆಸುವುದು ರಾಜ್ಯ ಕಾಂಗ್ರೆಸ್ ಪಾಲಿಗೆ ಅಗತ್ಯವಾಗಿದೆ. ಸದ್ಯಕ್ಕೆ ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳ ಹುಲಿ ಸವಾರಿ ಮಾಡುತ್ತಿದೆ. ಈ ಹುಲಿ ಸವಾರಿಯಿಂದ ಸಿದ್ದರಾಮಯ್ಯ ಅವರನ್ನು ಇಳಿಸುವುದೆಂದರೆ, ಹುಲಿಯ ಬಾಯಿಗೆ ಸರಕಾರವನ್ನು ಕೊಟ್ಟು ಬಿಟ್ಟಂತೆ. ಸದ್ಯಕ್ಕೆ ಸಿದ್ದರಾಮಯ್ಯ ಅವರನ್ನು ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಸಿ, ಅವರದೇ ನೇತೃತ್ವದಲ್ಲಿ ಮುಂದಿನ ಚುನಾವಣೆಯನ್ನು ಕಾಂಗ್ರೆಸ್ ಎದುರಿಸಬೇಕು. ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ಬರುವಂತೆ ನೋಡಿಕೊಂಡು, ಹೊಸಬರಿಗೆ ಮುಖ್ಯಮಂತ್ರಿ ಸ್ಥಾನವನ್ನು ಹಸ್ತಾಂತರಿಸಿ ಬಳಿಕ ಸಿದ್ದರಾಮಯ್ಯ ತಮ್ಮ ರಾಜಕೀಯ ನಿವೃತ್ತಿಯನ್ನು ಘೋಷಿಸಬೇಕು. ಅದರಿಂದ ರಾಜ್ಯಕ್ಕೂ, ಕಾಂಗ್ರೆಸ್‌ಗೂ ಬಹಳಷ್ಟು ಒಳಿತುಗಳಿವೆ. ಸದ್ಯಕೆ ಮುಖ್ಯಮಂತ್ರಿ ಬದಲಾವಣೆಗಿಂತ ಸಂಪುಟ ವಿಸ್ತರಣೆಯ ಕಡೆಗೆ ಹೈಕಮಾಂಡ್ ಹೆಚ್ಚು ಒತ್ತು ಕೊಟ್ಟರೆ ಸಣ್ಣ ಪುಟ್ಟ ಅಸಮಾಧಾನಗಳನ್ನು, ಬಿರುಕುಗಳನ್ನು ತೇಪೆ ಹಚ್ಚಿ ಮುಚ್ಚಬಹುದಾಗಿದೆ.







