ವಿದೇಶಗಳಲ್ಲಿ ಹೆಚ್ಚುತ್ತಿರುವ ಜನಾಂಗೀಯ ದ್ವೇಷ : ನಾವೆಷ್ಟು ಹೊಣೆ?

ಸಾಂದರ್ಭಿಕ ಚಿತ್ರ | Photo credit : Ai chatgpt
ಅಮೆರಿಕದ ಫಿಲಡೆಲ್ಫಿಯಾದಲ್ಲಿ ತೆಲಂಗಾಣ ಮೂಲದ 28 ವರ್ಷದ ಯುವಕನ ಬರ್ಬರ ಹತ್ಯೆಯಾಗಿದೆ. ಪಿಝ್ಝಾ ಆರ್ಡರ್ ನೆಪದಲ್ಲಿ ಕರೆಸಿಕೊಂಡ ದುಷ್ಕರ್ಮಿಗಳು ಗುಂಡು ಹಾರಿಸಿ ಯುವಕನನ್ನು ಹತ್ಯೆಗೈದಿದ್ದಾರೆ. ಮೃತ ಅಂಶುಲ್ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಹೆಚ್ಚುವರಿ ಆದಾಯಕ್ಕಾಗಿ ವಾರಾಂತ್ಯಗಳಲ್ಲಿ ಪಿಝ್ಝಾ ಡೆಲಿವರಿ ಸಿಬ್ಬಂದಿಯಾಗಿ ಅರೆಕಾಲಿಕ ಕೆಲಸ ಮಾಡುತ್ತಿದ್ದ ಎಂದು ಕುಟುಂಬ ಮೂಲಗಳು ಹೇಳಿವೆ. ಯಾವುದೇ ದರೋಡೆ ನಡೆದಿಲ್ಲದ ಕಾರಣಕ್ಕಾಗಿ, ಜನಾಂಗೀಯ ಕಾರಣಕ್ಕಾಗಿಯೇ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದ ದಿನದಿಂದ ಅಮೆರಿಕ ಜನಾಂಗೀಯ ಹಲ್ಲೆ, ಹತ್ಯೆಗಳಿಗೆ ಕುಖ್ಯಾತವಾಗುತ್ತಿದೆ. ಟ್ರಂಪ್ ಆಡಳಿತವೇ ಜನಾಂಗೀಯವಾದಿ ನಿಲುವನ್ನು ಹೊಂದಿದೆ ಎನ್ನುವ ಆರೋಪವಿರುವಾಗ, ಇಂತಹ ಕೃತ್ಯಗಳು ಹೆಚ್ಚುತ್ತಿರುವುದರಲ್ಲಿ ಅಚ್ಚರಿಯೇನೂ ಇಲ್ಲ. ಅಂಶುಲ್ ಅವರು ಕಳೆದ ನಾಲ್ಕು ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದರು. ಆತನ ಸಹೋದರಿ ಹೇಳುವಂತೆ ‘‘ಇದೊಂದು ಜನಾಂಗೀಯ ಹತ್ಯೆಯಾಗಿದೆ. ಅಮೆರಿಕಕ್ಕೆ ಹೋಗುವುದು ಬೇಡವೆಂದು ನಾವು ಒತ್ತಡ ಹಾಕಿದ್ದರೂ ಆತ ಮಹತ್ವಾಕಾಂಕ್ಷೆಯಿಂದ ದೇಶ ತೊರೆದಿದ್ದ. ಕನಸುಗಳನ್ನು ಹೊತ್ತು ಅಮೆರಿಕ ತೆರಳುವವರಿಗೆಲ್ಲ ಇದು ಪಾಠವಾಗಿದೆ. ದಯವಿಟ್ಟು ನಿಮ್ಮ ಮಕ್ಕಳನ್ನು ಅಮೆರಿಕಕ್ಕೆ ಕಳುಹಿಸಬೇಡಿ’’ ಎಂದು ಗೋಗರೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅಮೆರಿಕ ಮಾತ್ರವಲ್ಲ, ಇತರ ಹಲವು ದೇಶಗಳಲ್ಲಿ ಭಾರತೀಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಜಾಗತಿಕವಾಗಿ ಹೆಚ್ಚುತ್ತಿರುವ ಆರ್ಥಿಕ ಬಿಕ್ಕಟ್ಟು, ಹೆಚ್ಚುತ್ತಿರುವ ನಿರುದ್ಯೋಗ ಇವೆಲ್ಲವೂ ಸ್ಥಳೀಯರಲ್ಲಿ ಜನಾಂಗೀಯವಾದ ಹೆಚ್ಚುವುದಕ್ಕೆ ಕಾರಣವಾಗಿರಬಹುದು. ಬೇರೆ ದೇಶಗಳಿಂದ ಬಂದ ಜನರು ತಮ್ಮ ಉದ್ಯೋಗ, ಸಂಪನ್ಮೂಲಗಳನ್ನು ಕಸಿಯುತ್ತಿರುವುದೇ ತಮ್ಮ ಸ್ಥಿತಿಗೆ ಕಾರಣ ಎಂದು ಅವರು ತಪ್ಪು ತಿಳಿದುಕೊಂಡು ವಲಸಿಗರನ್ನು ದ್ವೇಷಿಸಬಹುದು. ವಿದೇಶಗಳಲ್ಲಿ ಇತ್ತೀಚೆಗೆ ಭಾರತೀಯರ ಮೇಲೆ ನಡೆಯುತ್ತಿರುವ ಹಿಂಸಾಚಾರದಲ್ಲಿ ತೀವ್ರ ಹೆಚ್ಚಳವಾಗಿರುವುದನ್ನು ಭಾರತ ಒಪ್ಪಿಕೊಂಡಿದೆ. ಆದರೆ ಇದಕ್ಕೆ ಜನಾಂಗೀಯ ದ್ವೇಷವೇ ಕಾರಣ ಎನ್ನುವಂತಿಲ್ಲ ಎಂದೂ ಸರಕಾರ ಅಭಿಪ್ರಾಯ ಪಡುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ವಿದೇಶಗಳಲ್ಲಿ ರಸ್ತೆ ಅಪಘಾತಗಳಲ್ಲಿ 1,622 ಜನರು ಮೃತಪಟ್ಟಿದ್ದರೆ, 1,736 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿಂಸಾಚಾರದ ಕಾರಣದಿಂದ 136 ಮಂದಿ ಮೃತಪಟ್ಟಿದ್ದಾರೆ ಎಂದು ಸರಕಾರಿ ದಾಖಲೆಗಳು ಹೇಳುತ್ತವೆ. ಈ ಹಿಂಸಾಚಾರದಲ್ಲಿ ದರೋಡೆಗಳಿಗೂ ಬಲಿಯಾದವರಿದ್ದಾರೆ. ವಿದೇಶಗಳಲ್ಲಿ 2019ರಿಂದ ಜನಾಂಗೀಯ ದಾಳಿಗಳು ತೀವ್ರವಾಗಿ ಹೆಚ್ಚಳಗೊಂಡಿವೆ. ಕಳೆದ ಹತ್ತು ವರ್ಷಗಳಲ್ಲಿ ಕೆನಡಾದಲ್ಲಿ ಜನಾಂಗೀಯ ಕಾರಣಕ್ಕಾಗಿ ನಡೆದ ದಾಳಿಗೆ ಸಂಬಂಧಿಸಿ 40ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಅಮೆರಿಕದಲ್ಲಿ 15 ಪ್ರಕರಣಗಳು ದಾಖಲಾಗಿದ್ದರೆ, ಜರ್ಮನಿಯಲ್ಲಿ 14 ಪ್ರಕರಣಗಳು ದಾಖಲಾಗಿವೆ. ಸಿಂಗಾಪುರದಲ್ಲಿ ಭಾರತೀಯ ಸಮುದಾಯವನ್ನೇ ಗುರಿಯಾಗಿಸಿಕೊಂಡು ಆನ್ಲೈನ್ನಲ್ಲಿ ಜನಾಂಗೀಯ ದ್ವೇಷ ಮತ್ತು ಪ್ರಚೋದನಕಾರಿ ವೀಡಿಯೊಗಳನ್ನು ಹರಡಲಾಗುತ್ತಿರುವ ಬಗ್ಗೆ ವರದಿಯಾಗಿವೆ. ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುತ್ತಿದ್ದ ಇಂತಹ 14 ವೀಡಿಯೊ ಪೋಸ್ಟ್ಗಳನ್ನು ಸಿಂಗಾಪುರ ಸರಕಾರ ಇತ್ತೀಚೆಗೆ ಬ್ಲಾಕ್ ಮಾಡಲು ಆದೇಶಿದೆ. 2025ರ ಅಂಕಿಅಂಶಗಳ ಪ್ರಕಾರ ವಿದೇಶಗಳಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳಿಂದ ದಾಖಲಾದ ಒಟ್ಟು ದೂರುಗಳ ಸಂಖ್ಯೆ 350 ದಾಟಿದೆ. ಕೇವಲ ಮಾಸ್ಕೊದಿಂದಲೇ ಅತಿ ಹೆಚ್ಚು ಅಂದರೆ 201 ದೂರುಗಳು ದಾಖಲಾಗಿರುವ ಬಗ್ಗೆ ಮಾಹಿತಿಗಳಿವೆ.
ಕಳೆದ ಹತ್ತು ವರ್ಷಗಳಲ್ಲಿ ಭಾರತೀಯರ ಕುರಿತಂತೆ ವಿದೇಶಗಳಲ್ಲಿ ಅಸಹನೆ ಹೆಚ್ಚುವುದಕ್ಕೆ ಕಾರಣಗಳನ್ನು ಕಂಡುಕೊಳ್ಳುವುದು ಅತ್ಯಗತ್ಯವಾಗಿದೆ. ಸಾವಿರಾರು ಯುವಕರು ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಒಂದು ಕಾಲದಲ್ಲಿ ಭಾರತೀಯ ಪ್ರತಿಭೆಗಳ ಬಗ್ಗೆ ವಿದೇಶಗಳಲ್ಲೂ ಸಾಕಷ್ಟು ಗೌರವವಿತ್ತು. ಆದರೆ ಇಂದು ಭಾರತೀಯ ವಿದ್ಯಾರ್ಥಿಗಳು ಮತ್ತು ಯುವಕರ ಬಗ್ಗೆ ವಿದೇಶಗಳಲ್ಲಿ ಪೂರ್ವಾಗ್ರಹ ಹೆಚ್ಚುತ್ತಿದೆ. ಇದಕ್ಕಾಗಿ ವಿದೇಶಗಳಲ್ಲಿ ಹೆಚ್ಚುತ್ತಿರುವ ಜನಾಂಗೀಯ ದ್ವೇಷವನ್ನಷ್ಟೇ ಹೊಣೆ ಮಾಡಿ ನಾವು ನುಣುಚಿಕೊಳ್ಳುವಂತಿಲ್ಲ. ಈ ಜನಾಂಗೀಯ ದ್ವೇಷಗಳಿಗೆ ಭಾರತೀಯರ ಕೊಡುಗೆಗಳೂ ಇವೆ. ಕಳೆದ ಹತ್ತು ವರ್ಷಗಳಲ್ಲಿ ಭಾರತದ ವರ್ಚಸ್ಸು ವಿದೇಶಗಳಲ್ಲಿ ಇಳಿಕೆಯಾಗುತ್ತಿರುವುದು ಇಂತಹ ದಾಳಿ ಹೆಚ್ಚುವುದಕ್ಕೆ ಪ್ರಮುಖ ಕಾರಣವಾಗಿದೆ. ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಿಗೆ ವಲಸೆ ಹೋಗುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚುತ್ತಿರುವುದು ಮತ್ತು ಅಕ್ರಮವಾಗಿ ವಲಸೆ ಹೋಗುವವರ ಸಂಖ್ಯೆಯೂ ಅಧಿಕವಾಗಿರುವುದು ಸ್ಥಳೀಯರಲ್ಲಿ ಅಸಹನೆ ಹೆಚ್ಚುವುದಕ್ಕೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ಹೆಚ್ಚುತ್ತಿರುವ ಕೋಮು ಹಿಂಸಾಚಾರ, ಅಸಹನೆ, ಜಾತೀಯತೆ ಇತ್ಯಾದಿಗಳಿಂದಾಗಿ ಭಾರತದ ಬಗ್ಗೆ ವಿದೇಶಿಯರಲ್ಲಿ ತುಚ್ಛೀಕಾರ ಭಾವನೆಗಳು ಹೆಚ್ಚುತ್ತಿವೆ. ಇಂದು ಭಾರತ ಎಂದರೆ ವಿದೇಶಿಯರ ಕಣ್ಣಿಗೆ ರಾಚುತ್ತಿರುವುದು ಗುಜರಾತ್ ಹತ್ಯಾಕಾಂಡ, ಮಣಿಪುರ ಹಿಂಸಾಚಾರ, ಕಾಶ್ಮೀರ ಹಿಂಸಾಚಾರ, ಗೋವಿನ ಹೆಸರಿನಲ್ಲಿ ನಡೆಯುವ ದೌರ್ಜನ್ಯ ಇತ್ಯಾದಿಗಳು. ಇಲ್ಲಿ ಅಲ್ಪಸಂಖ್ಯಾತರು ಮತ್ತು ದಲಿತರ ಮೇಲೆ ಹೆಚ್ಚುತ್ತಿರುವ ದಾಳಿಗಳು ಭಾರತೀಯರ ಬಗ್ಗೆ ಪೂರ್ವಾಗ್ರಹ ಹೆಚ್ಚುವುದಕ್ಕೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಭಾರತೀಯರ ಜೊತೆ ಜೊತೆಗೇ ಇಲ್ಲಿನ ಜಾತೀಯವಾದವೂ ವಿದೇಶಗಳಿಗೆ ವಲಸೆ ಹೋಗುತ್ತಿದೆ. ಇದು ಅಮೆರಿಕದಂತಹ ದೇಶಗಳೂ ಈ ಜಾತಿ ವ್ಯವಸ್ಥೆಯ ವಿರುದ್ಧ ಕಾನೂನು ರೂಪಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೇ ಆರೆಸ್ಸೆಸ್ ಸೇರಿದಂತೆ ಬಲಬಪಂಥೀಯ ಉಗ್ರವಾದಿ ಸಂಘಟನೆಗಳು ವಿದೇಶದಲ್ಲಿ ಬೇರೂರುತ್ತಿರುವ ಬಗ್ಗೆ ಅಲ್ಲಿನ ಸರಕಾರಗಳು ಪದೇ ಪದೇ ಕಳವಳ ವ್ಯಕ್ತಪಡಿಸುತ್ತಿವೆ. ಇವೆಲ್ಲವೂ ಜನಾಂಗೀಯ ದ್ವೇಷಕ್ಕೆ ಇನ್ನಷ್ಟು ಇಂಧನಗಳನ್ನು ಸುರಿಯುತ್ತಿವೆ.
ಅಮೆರಿಕಕ್ಕೆ ಹೋಗಿ ದುಡಿಯುತ್ತಿರುವವರ ಮೇಲೆ ನಡೆಯುತ್ತಿರುವ ಹಲ್ಲೆಗಳ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲೇ ನಮ್ಮದೇ ನೆಲದ ವಲಸೆ ಕಾರ್ಮಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು, ಜನಾಂಗೀಯ ಹಲ್ಲೆಗಳನ್ನು ನಾವು ಎಷ್ಟು ಗಂಭೀರವಾಗಿ ಸ್ವೀಕರಿಸಿದ್ದೇವೆ ಎನ್ನುವುದನ್ನು ನೋಡೋಣ. ಅಸ್ಸಾಂ, ಪಶ್ಚಿಮಬಂಗಾಳ, ಈಶಾನ್ಯ ಭಾರತದಿಂದ ವಲಸೆ ಬಂದ ಕೂಲಿ ಕಾರ್ಮಿಕರನ್ನು ಇತರ ರಾಜ್ಯಗಳು ಹೇಗೆ ನಡೆಸುತ್ತಿವೆ ಎನ್ನುವುದನ್ನು ಆತ್ಮಾವಲೋಕನ ಮಾಡಲು ಸರಿಯಾದ ಸಮಯವಾಗಿದೆ. ವಲಸೆ ಕಾರ್ಮಿಕರನ್ನು ಅನುಮಾನದಿಂದ ನೋಡುವುದು, ಕಳವು ಆರೋಪ ಹೊರಿಸಿ ಅವರನ್ನು ಥಳಿಸಿ ಕೊಲ್ಲುವುದು, ಅವರ ಪೌರತ್ವವನ್ನು ಶಂಕಿಸಿ ಹಲ್ಲೆ ನಡೆಸುವುದು ದಿನನಿತ್ಯ ನಾವು ನೋಡುತ್ತಿದ್ದೇವೆ. ಇದೇ ಹಲ್ಲೆ ದೌರ್ಜನ್ಯಗಳು ವಿದೇಶದಲ್ಲಿರುವ ನಮ್ಮ ಮಕ್ಕಳ ಮೇಲೆ ನಡೆದಾಗ ಮಾತ್ರ, ಆ ದೇಶದ ವಿರುದ್ಧ ವಿಷಕಾರುವುದಕ್ಕೆ ಆರಂಭಿಸುತ್ತೇವೆ. ನಮ್ಮದೇ ನೆಲದ ನಮ್ಮದೇ ಜನರನ್ನು ಭಾಷೆ, ಧರ್ಮ, ಪ್ರಾದೇಶಿಕತೆಯ ಕಾರಣದಿಂದ ದ್ವೇಷಿಸುವ ನಮಗೆ, ವಿದೇಶದಲ್ಲಿ ನಡೆಯುವ ಜನಾಂಗೀಯ ದ್ವೇಷದ ವಿರುದ್ಧ ಮಾತನಾಡುವ ನೈತಿಕ ಹಕ್ಕಿದೆಯೆ? ವಿದೇಶದಲ್ಲಿ ಹೆಚ್ಚುತ್ತಿರುವ ಜನಾಂಗೀಯ ಹಲ್ಲೆಗಳು ನಾವೇ ಬಿತ್ತಿ ಬೆಳೆದ ಹಣ್ಣಿನ ಬೀಜಗಳು ಎನ್ನುವುದನ್ನು ಅರ್ಥ ಮಾಡಿಕೊಂಡ ದಿನ ಇದಕ್ಕೊಂದು ಪರಿಹಾರವನ್ನು ಕಂಡುಕೊಳ್ಳಲು ನಮಗೆ ಸಾಧ್ಯವಾಗಬಹುದು.






