ಹೂಳು ತುಂಬಿದ ಕೆರೆ, ಜಲಾಶಯಗಳು

ಕೊಂಚ ತಡವಾಗಿಯಾದರೂ ಮುಂಗಾರು ಮಳೆ ರಾಜ್ಯದ ಕರಾವಳಿ ಮತ್ತು ಮಲೆನಾಡು ಸೇರಿದಂತೆ ಅಲ್ಲಲ್ಲಿ ಸುರಿಯುತ್ತಿದೆ. ಆದರೂ ಉತ್ತರ ಮತ್ತು ಮಧ್ಯ ಕರ್ನಾಟಕದ ಕೆಲವೆಡೆ ಈವರೆಗೆ ನಿರೀಕ್ಷಿಸಿದಷ್ಟು ಮಳೆಯಾಗಿಲ್ಲ. ಇಂಥ ಸಂದರ್ಭದಲ್ಲಿ ಪ್ರತೀ ಊರಿನಲ್ಲಿ ಇರುವ ಕೆರೆಗಳು ಕೃಷಿಯ ಸಂಪೂರ್ಣ ಅಗತ್ಯವನ್ನು ಪೂರೈಸಲಾಗದಿದ್ದರೂ ಜನರ, ಜಾನುವಾರುಗಳ, ಸಕಲ ಜೀವ ಜಂತುಗಳ ಬಾಯಾರಿಕೆಯನ್ನು ಇಂಗಿಸುತ್ತಾ ಬಂದಿವೆ. ನೂರಾರು ವರ್ಷಗಳ ಕಾಲದಿಂದಲೂ ನಮ್ಮ ಪೂರ್ವಜರು ನಿರ್ಮಿಸಿದ ಕೆರೆಗಳು ಮಳೆಯ ಕೊರತೆಯಾದಾಗಲೂ ಅದರ ಬಿಸಿ ತಾಗದಂತೆ ಕಾಪಾಡುತ್ತಾ ಬಂದಿವೆ. ಆದರೆ ಈಗ ಕಾಲ ಬದಲಾಗಿದೆ. ಹಿಂದಿನವರು ಜೋಪಾನವಾಗಿ ಉಳಿಸಿಕೊಂಡು ಬಂದ ಕೆರೆಗಳು ಈಗ ಅಳಿವಿನ ಅಂಚಿನಲ್ಲಿವೆ. ನಗರ ಪ್ರದೇಶಗಳಲ್ಲಿ ಕೆರೆಗಳು ಒತ್ತುವರಿಯಾಗಿ ಮನೆ ಮಾರುಗಳು ನಿರ್ಮಾಣವಾಗಿವೆ. ಇನ್ನು ಅನೇಕ ಕಡೆ ಕೆರೆಗಳ ಸಮಾಧಿಯ ಮೇಲೆ ಬಡಾವಣೆಗಳು ತಲೆ ಎತ್ತಿ ನಿಂತಿವೆ. ಒಂದೆಡೆ ಮಳೆಯ ಕೊರತೆ, ಇನ್ನೊಂದೆಡೆ ಕೆರೆ ಕಟ್ಟೆಗಳ ಒತ್ತುವರಿ ಮತ್ತು ಆಕ್ರಮಣ, ಇದರಿಂದಾಗಿ ರಾಜ್ಯದಲ್ಲಿ ಅಂತರ್ಜಲ ಪ್ರಮಾಣ ಕುಸಿಯುತ್ತಿದೆ.
ಬೆಂಗಳೂರು, ಹುಬ್ಬಳ್ಳಿ, ಕಲಬುರಗಿಯಂಥ ಮಹಾ ನಗರಗಳಲ್ಲಿ ಮಾತ್ರವಲ್ಲ, ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಕೆರೆ ಕಟ್ಟೆಗಳು ದುರವಸ್ಥೆಯಲ್ಲಿವೆ. ನಮ್ಮ ಹಿರಿಯರು ಒಂದು ಊರಿಗೆ ಒಂದೇ ಕೆರೆಯನ್ನು ನಿರ್ಮಿಸುತ್ತಿರಲಿಲ್ಲ. ಒಂದು ಊರಿಗೆ ಒಂದು ದೊಡ್ಡ ಕೆರೆ, ಇನ್ನೊಂದು ಸಣ್ಣ ಕೆರೆ ಎಂದು ಎರಡೆರಡು ಕೆರೆಗಳನ್ನು ನಿರ್ಮಿಸುತ್ತಿದ್ದರು. ಬೇಸಿಗೆ, ಚಳಿಗಾಲದಲ್ಲೂ ಈ ಕೆರೆಗಳು ಜನರ, ಪ್ರಾಣಿ-ಪಕ್ಷಿಗಳ ಬಾಯಾರಿಕೆಯನ್ನು ಇಂಗಿಸುತ್ತಿದ್ದವು. ಒಂದು ಕೆರೆಯ ನೀರು ಬತ್ತಿ ಹೋದರೆ ಇನ್ನೊಂದು ಕೆರೆಯ ನೀರನ್ನು ಬಳಸಿಕೊಳ್ಳಲಾಗುತ್ತಿತ್ತು. ಈ ಕೆರೆಗಳು ಕೇವಲ ಬಾಯಾರಿಕೆಯನ್ನು ಮಾತ್ರ ಇಂಗಿಸುತ್ತಿರಲಿಲ್ಲ. ಇವು ಅಂತರ್ಜಲವನ್ನು ಮರುಪೂರಣಗೊಳಿಸುವ ಶ್ವಾಸಕೋಶಗಳಾಗಿದ್ದವು. ಶ್ವಾಸಕೋಶಗಳಾದ ಈ ಕೆರೆಗಳನ್ನೇ ಒತ್ತುವರಿ ಮಾಡಿಕೊಂಡು, ಮುಚ್ಚಿ ಹಾಕಿದ ಮೇಲೆ ಅಂತರ್ಜಲ ಸುರಕ್ಷಿತವಾಗಿ ಇರಲು ಹೇಗೆ ಸಾಧ್ಯ? ಮಳೆ ನೀರು ಕೊಯ್ಲುನಂಥ ಹಲವಾರು ಯೋಜನೆಗಳು ಕೇವಲ ಕಾಗದದಲ್ಲಿ ಇವೆ. ಅವುಗಳ ಅನುಷ್ಠಾನದ ಬಗ್ಗೆ ಆಸಕ್ತಿ ಜನ ಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳು ಮಾತ್ರವಲ್ಲ, ಸಾರ್ವಜನಿಕರಿಗೂ ಇಲ್ಲ.
ಒಂದೆಡೆ ಕೆರೆಗಳ ಪರಿಸ್ಥಿತಿ ಇದಾದರೆ, ಇವುಗಳಿಗಿಂತ ಮುಖ್ಯವಾಗಿ ಕೆರೆಗಳು ಮಾತ್ರವಲ್ಲ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಹೂಳು ತುಂಬಿ ಕೊಂಡಿದೆ. ಈ ಹೂಳನ್ನು ತೆರವು ಮಾಡಿದರೆ ನದಿಗಳಿಗೆ ವ್ಯರ್ಥವಾಗಿ ಹರಿಯುವ ನೀರು ಜಲಾಶಯಗಳಲ್ಲೇ ಸಂಗ್ರಹವಾಗಿ ಉಳಿಯುತ್ತದೆ. ದೇಶದಲ್ಲಿ ಇರುವ 6,600ರಷ್ಟು ಜಲಾಶಯಗಳಲ್ಲಿ ಶೇಕಡಾ 15ರಷ್ಟು ಪ್ರಮಾಣದಲ್ಲಿ ಹೂಳು ತುಂಬಿಕೊಂಡಿವೆ. ಇದಕ್ಕೆ ಕರ್ನಾಟಕ ರಾಜ್ಯವೂ ಹೊರತಲ್ಲ. ಈ ಬಗ್ಗೆ ಈ ವರೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಗಮನ ಕೊಟ್ಟಿದ್ದು ಕಡಿಮೆ. ಜಲಾಶಯಗಳಲ್ಲಿನ ಹೂಳು ತೆಗೆಯುವುದು ತುಂಬ ಖರ್ಚಿನ ಕೆಲಸ ಎಂದು ಕೇಂದ್ರ ಮಾತ್ರವಲ್ಲ, ರಾಜ್ಯ ಸರಕಾರಗಳು ಕೂಡಾ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಈ ಬಗ್ಗೆ ತೀರಾ ಇತ್ತೀಚೆಗೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಆಸಕ್ತಿ ತೋರಿಸಿರುವುದರಿಂದ ಕೇಂದ್ರ ಸರಕಾರ ಕೂಡ ಸ್ಪಂದಿಸಿದೆ.
ಈ ಸಲ ಜೂನ್ ತಿಂಗಳಲ್ಲಿ ಮುಂಗಾರು ಮಳೆ ನಿರೀಕ್ಷಿಸಿದಷ್ಟು ಸುರಿಯಲಿಲ್ಲ. ಹಲವೆಡೆ ಬರಗಾಲದ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಉಂಟಾಗಿದೆ. ಜಲಾಶಯಗಳಲ್ಲಿ ಹೂಳು ತುಂಬಿರದಿದ್ದರೆ ಅಧಿಕ ಪ್ರಮಾಣದ ನೀರಿನ ಸಂಗ್ರಹ ಇರುತ್ತಿತ್ತು. ಬರಗಾಲದಂಥ ಪರಿಸ್ಥಿತಿಯಲ್ಲಿ ತುಂಬಾ ಉಪಯುಕ್ತವಾಗುತ್ತಿತ್ತು. ಆದರೆ ತುಂಬಿದ ಹೂಳನ್ನು ತೆರವುಗೊಳಿಸುವುದೇ ಈಗ ದೊಡ್ಡ ಸಮಸ್ಯೆಯಾಗಿದೆ.
ರಾಜ್ಯದಲ್ಲಿ ಒಟ್ಟು 15 ಬೃಹತ್ ಜಲಾಶಯಗಳು ಸೇರಿದಂತೆ 230ಕ್ಕೂ ಹೆಚ್ಚು ಮಧ್ಯಮ ಹಾಗೂ ಸಣ್ಣ ಪುಟ್ಟ ಜಲಾಶಯಗಳು, ಕಿರು ಅಣೆಕಟ್ಟುಗಳು ಮತ್ತು ಬ್ಯಾರೇಜುಗಳಿವೆ. ಆದರೆ ಎಲ್ಲಾ ಕಡೆ ಎದುರಾದ ಸಮಸ್ಯೆ ಹೂಳು ತುಂಬಿರುವುದು. ಹೂಳಿನ ಮೂಲ ಯಾವುದೆಂದರೆ ನದಿ ಪಾತ್ರದಲ್ಲಿ ಕೃಷಿ ಚಟುವಟಿಕೆ ಮತ್ತು ಗಣಿಗಾರಿಕೆ ಹಾಗೂ ಉದ್ದಿಮೆಗಳು. ಇವುಗಳಿಂದಾಗಿ ಮಳೆ ನೀರಿನ ಜೊತೆಗೆ ಅಧಿಕ ಪ್ರಮಾಣದಲ್ಲಿ ಹೂಳು ಜಲಾಶಯಗಳಿಗೆ ಹರಿದು ಬರುತ್ತದೆ. ರಾಜ್ಯದ ಜಲಾಶಯಗಳ ಪೈಕಿ ತುಂಗಭದ್ರಾ ಜಲಾಶಯದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹೂಳು ತುಂಬಿದೆ. ಒಂದು ಅಂದಾಜಿನ ಪ್ರಕಾರ 31 ಟಿಎಂಸಿ ಅಡಿಯಷ್ಟಿದೆ. ಕೇಂದ್ರ ಜಲ ಆಯೋಗ ನಡೆಸಿದ ಹೈಡ್ರೋಗ್ರಾಫಿಕ್ ಸಮೀಕ್ಷೆಯ ಪ್ರಕಾರ ರಾಜ್ಯದ 11 ಪ್ರಮುಖ ಜಲಾಶಯಗಳಲ್ಲಿ 129 ಅಡಿಯಷ್ಟು ಹೂಳು ತುಂಬಿಕೊಂಡಿದೆ. ಇದರಿಂದಾಗಿ 129 ಟಿಎಂಸಿಯಷ್ಟು ನೀರು ಸಂಗ್ರಹ ಪ್ರಮಾಣ ಕಡಿಮೆಯಾದಂತಾಗಿದೆ. ಬರಗಾಲದಂಥ ಪರಿಸ್ಥಿತಿಯಲ್ಲಿ ಇಷ್ಟು ದೊಡ್ಡ ಪ್ರಮಾಣದ ನೀರು ಜನ, ಜಾನುವಾರುಗಳು ಹಾಗೂ ಕೃಷಿಗೆ ಲಭ್ಯವಾಗದೆ ವ್ಯರ್ಥವಾದಂತಾಗಿದೆ.
ಒಂದು ಟಿಎಂಸಿ ಅಡಿಯಷ್ಟು ಹೂಳು ತೆಗೆಯಲು ಕನಿಷ್ಠ 500 ಕೋಟಿ ರೂಪಾಯಿ ವ್ಯಯವಾಗುತ್ತದೆ. ಉದಾಹರಣೆಗೆ ತುಂಗ ಭದ್ರಾ ಜಲಾಶಯದಲ್ಲಿನ 31 ಟಿಎಂಸಿ ಅಡಿಯಷ್ಟು ಹೂಳನ್ನು ತೆಗೆಯಲು ಕನಿಷ್ಠ 15,500 ಕೋಟಿಗೂ ಹೆಚ್ಚು ಹಣ ಬೇಕಾಗುತ್ತದೆ. ಹೂಳು ತೆಗೆಯಲು ಇಷ್ಟು ಖರ್ಚು ಮಾಡುವ ಹಣದಲ್ಲಿ ಹೊಸ ಅಣೆಕಟ್ಟನ್ನೇ ಕಟ್ಟಿಸಬಹುದು ಎಂದು ತಜ್ಞರು ಸಲಹೆ ನೀಡಿದ ನಂತರ ಸರಕಾರಗಳು ಹೂಳು ತೆಗೆಯುವ ಕೆಲಸವನ್ನು ಕೈ ಬಿಟ್ಟವು. ಆದರೂ ಇದೀಗ ಕೇಂದ್ರ ಸರಕಾರ ಜಲಾಶಯಗಳ ಹೂಳು ತೆಗೆಯುವ ನಿಟ್ಟಿನಲ್ಲಿ ಕೊಂಚ ಆಸಕ್ತಿ ತೋರಿಸಿರುವುದರಿಂದ ಹೊಸ ಭರವಸೆ ಮೂಡಿದಂತಾಗಿದೆ.
ವಾಸ್ತವವಾಗಿ ಜಲಾಶಯಗಳಲ್ಲಿ ಹೂಳು ಅಥವಾ ರಾಡಿ ಸಂಗ್ರಹವಾಗುವುದು ಸಹಜ. ಆದರೆ ಅದನ್ನು ತೆರವುಗೊಳಿಸುವ ಪ್ರಯತ್ನ ಈವರೆಗೆ ನಡೆದಿರಲಿಲ್ಲ. ಈಗ ಕೇಂದ್ರ ಸರಕಾರ ಇದರ ಬಗ್ಗೆ ಆಸಕ್ತಿ ತೋರಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೂಳು ತೆಗೆಯುವ ಕಾರ್ಯಾಚರಣೆಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕಾಗಿದೆ. ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಹೂಳು ತುಂಬಿಕೊಂಡಿರುವ ಜಲಾಶಯಗಳಲ್ಲಿ ಮೈಸೂರು ಸಮೀಪದ ಕೃಷ್ಣರಾಜ ಸಾಗರ ಜಲಾಶಯವೂ ಒಂದು.ಇದಕ್ಕೆ ಕಾರಣ ವಿಶಿಷ್ಟ ವಿನ್ಯಾಸದ ತಂತ್ರಜ್ಞಾನವಾಗಿದೆ. ಆದರೆ ಆನಂತರ ನಿರ್ಮಾಣಗೊಂಡ ಅಣೆಕಟ್ಟುಗಳಲ್ಲಿ ಇದಿಲ್ಲ. ಹಾಗಾಗಿ ಇನ್ನು ಮುಂದೆ ನಿರ್ಮಾಣವಾಗುವ ಅಣೆಕಟ್ಟುಗಳಲ್ಲಿ ಈ ತಂತ್ರಜ್ಞಾನ ಬಳಸಿಕೊಳ್ಳುವ ಬಗ್ಗೆ ಸರಕಾರ ಯೋಚಿಸಬೇಕಾಗಿದೆ.






