ರಾಜ್ಯದಲ್ಲಿ ಎಸ್ಐಆರ್: ವಿರೋಧ ಪಕ್ಷಗಳ ಮೊಸಳೆ ಕಣ್ಣೀರು

ಸಾಂದರ್ಭಿಕ ಚಿತ್ರ : Photo: x.com/aajtak
ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಆರಂಭವಾದ ಬೆನ್ನಿಗೇ ಜನರ ನಡುವೆ ಆತಂಕ, ಗೊಂದಲ, ವದಂತಿಗಳು ಸಾಂಕ್ರಾಮಿಕ ವೈರಸ್ನಂತೆ ಹರಡುತ್ತಿವೆ. ಒಂದು ಕಡೆ ಮತದಾರರು ಎಲ್ಲಿ ತಮ್ಮ ಹೆಸರು ಮತದಾರರ ಪಟ್ಟಿಯಿಂದ ಹೊರ ಬೀಳುತ್ತದೋ ಎನ್ನುವ ಆತಂಕದಲ್ಲಿದ್ದರೆ, ಎಸ್ಐಆರ್ ಸಿಬ್ಬಂದಿ ಕೆಲಸದ ಒತ್ತಡಗಳಿಂದ ತತ್ತರಿಸಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಬಿಎಲ್ಒಗಳ ಕಾರ್ಯನಿರ್ವಹಣೆಯ ಬಗ್ಗೆ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಹಾಗೆಯೇ ತಾಂತ್ರಿಕ ಅಡಚಣೆಗಳ ಬಗ್ಗೆಯೂ ಜನರು ದೂರುತ್ತಿದ್ದಾರೆ. ಮುಖ್ಯವಾಗಿ ಇದರ ಹೊಣೆಯನ್ನು ಯಾರು ಹೊತ್ತುಕೊಳ್ಳಬೇಕು ಎನ್ನುವುದರ ಬಗ್ಗೆ ಯಾರಲ್ಲೂ ಸ್ಪಷ್ಟತೆಯಿಲ್ಲ. ರಾಜ್ಯದ ವಿರೋಧ ಪಕ್ಷದ ನಾಯಕರು ಎಸ್ಐಆರ್ನ ಲೋಪದೋಷಗಳಿಗೆ ರಾಜ್ಯ ಸರಕಾರವನ್ನು ಹೊಣೆ ಮಾಡುತ್ತಿದ್ದರೆ, ಇತ್ತ ರಾಜ್ಯ ಸರಕಾರ ಎಲ್ಲವನ್ನು ಚುನಾವಣಾ ಆಯೋಗದ ತಲೆಗೆ ಕಟ್ಟುತ್ತಿದೆ. ಬಿಹಾರ, ಪಶ್ಚಿಮಬಂಗಾಳದಂತಹ ರಾಜ್ಯಗಳಲ್ಲಿ ಸೃಷ್ಟಿಯಾದ ಗೊಂದಲಗಳೇ ಕರ್ನಾಟಕದಲ್ಲೂ ಮುಂದುವರಿದಿವೆ. ಇಲ್ಲಿನ ಬಹುತೇಕ ಗೊಂದಲಗಳಿಗೆ ಚುನಾವಣಾ ಆಯೋಗ ಅಳವಡಿಸಿಕೊಂಡಿರುವ ನೀತಿಗಳು ಕಾರಣವಾಗಿರುವುದರಿಂದ, ರಾಜ್ಯ ಸರಕಾರ ಬಹುತೇಕ ವಿಷಯಗಳಲ್ಲಿ ಅಸಹಾಯಕವಾಗಿದೆ. ಒಟ್ಟು ಪ್ರಕ್ರಿಯೆಯ ವಿರುದ್ಧ ರಾಜ್ಯ ಸರಕಾರ ಈಗಾಗಲೇ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ ಮಾತ್ರವಲ್ಲ, ಎಸ್ಐಆರ್ನ ಕೆಲವೊಂದು ಅಂಶಗಳನ್ನು ವಿರೋಧಿಸಿ ನ್ಯಾಯಾಲಯದ ಮೊರೆ ಹೋಗುವುದಕ್ಕೂ ತೀರ್ಮಾನಿಸಿದೆ. ಎಸ್ಐಆರ್ ಪ್ರಕ್ರಿಯೆ ಬಗ್ಗೆ ಹರಡುತ್ತಿರುವ ವದಂತಿಗಳು, ಗೊಂದಲಗಳಿಗೆ ಚುನಾವಣಾ ಆಯೋಗ ಸ್ಪಷ್ಟೀಕರಣ ನೀಡಬೇಕಾಗುತ್ತದೆ. ಎಸ್ಐಆರ್ ಬಗ್ಗೆ ಮತದಾರರಲ್ಲಿ ಹೆಚ್ಚುತ್ತಿರುವ ಆತಂಕಗಳಿಗೆ ಚುನಾವಣಾ ಆಯೋಗದ ಮಾನದಂಡಗಳೇ ಮುಖ್ಯ ಕಾರಣವಾಗಿದೆ. ಸರಕಾರವನ್ನು ಟೀಕಿಸುವ ವಿರೋಧಪಕ್ಷಗಳು ಇದೇ ಸಂದರ್ಭದಲ್ಲಿ ಚುನಾವಣಾ ಆಯೋಗದ ನಿಲುವುಗಳ ಬಗ್ಗೆ ಮೌನವಾಗಿದೆ.
ವಿರೋಧ ಪಕ್ಷದ ನಾಯಕರು ರಾಜ್ಯ ಸರಕಾರದ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಎಸ್ಐಆರ್ನ್ನು ರಾಜ್ಯ ಸರಕಾರ ದುರುಪಯೋಗ ಪಡಿಸುತ್ತಿದೆ, ಮತದಾರರ ಪಟ್ಟಿ ತಿರುಚುತ್ತಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ನಕಲಿ ಮತದಾರರನ್ನು ಉಳಿಸುವುದಕ್ಕೆ ಯತ್ನ ನಡೆಯುತ್ತಿದೆ ಎಂದೂ ಆರೋಪಿಸಿದ್ದಾರೆ. ಆದರೆ ಈಗಾಗಲೇ ಇರುವ ಅಸಲಿ ಮತದಾರರ ಆತಂಕಗಳಿಗೆ ಧ್ವನಿಯಾಗಲು ಅವರು ಮುಂದಾಗಿಲ್ಲ. ಅಸಲಿ ಮತದಾರರು ಯಾವ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗೆ ಹೋಗಬಾರದು ಎಂದು ಸರಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳೇ ಬಿಜೆಪಿ ಮತ್ತು ಸಂಘಪರಿವಾರಕ್ಕೆ ಸಮಸ್ಯೆಯಾದಂತಿದೆ. ಚುನಾವಣಾ ಆಯೋಗ ನಡೆಸುತ್ತಿರುವ ಎಸ್ಐಆರ್ನ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಅಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು, ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಹೊರ ಬಿದ್ದಿವೆ ಎಂದು ಅವರು ಆರೋಪಿಸಿದ್ದಾರೆ. ಎಸ್ಐಆರ್ನ ಅಕ್ರಮಗಳ ವಿರುದ್ಧ ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ತನ್ನ ಪ್ರತಿರೋಧವನ್ನು ವ್ಯಕ್ತಪಡಿಸಿವೆ. ಆ ಸಂದರ್ಭದಲ್ಲಿ ರಾಜ್ಯ ಬಿಜೆಪಿ ನಾಯಕರು ಎಸ್ಐಆರ್ನ ಪರವಾಗಿ ಧ್ವನಿಯೆತ್ತಿದ್ದರು. ಮತದಾರರ ಪಟ್ಟಿ ಪರಿಷ್ಕರಣೆಯಾಗುವುದು ಕಾಂಗ್ರೆಸ್ಗೆ ಬೇಕಾಗಿಲ್ಲ ಎಂದು ವ್ಯಂಗ್ಯವಾಡಿದ್ದರು. ಇದೀಗ ರಾಜ್ಯದಲ್ಲಿ ಎಸ್ಐಆರ್ ನಡೆಯುತ್ತಿರುವಾಗ, ಎಸ್ಐಆರ್ ದುರುಪಯೋಗವಾಗುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ನಿಜಕ್ಕೂ ಎಸ್ಐಆರ್ನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಯಾರು? ರಾಜ್ಯ ಸರಕಾರವೋ? ಅಥವಾ ಚುನಾವಣಾ ಆಯೋಗವೋ? ಚುನಾವಣಾ ಆಯೋಗದ ಮೂಗುದಾರ ಯಾರ ಕೈಯಲ್ಲಿದೆ ಎನ್ನುವುದು ರಾಜ್ಯ ಬಿಜೆಪಿ ನಾಯಕರಿಗೆ ಗೊತ್ತಿಲ್ಲದೇ ಇರುವುದೇನೂ ಅಲ್ಲ. ನಿಜಕ್ಕೂ ಬಿಜೆಪಿ ನಾಯಕರು ತಮ್ಮ ಅಸಮಾಧಾನವನ್ನು ಕೇಂದ್ರ ಸರಕಾರದ ಮುಂದಿಡಬೇಕು.
ರಾಜ್ಯ ಸರಕಾರ ನಕಲಿ ಮತದಾರರನ್ನು ಉಳಿಸಲು ಪ್ರಯತ್ನಿಸುತ್ತಿದೆ ಎನ್ನುವುದೇ ಬಿಜೆಪಿಯ ಮೊದಲ ಆರೋಪ. ಅಸಲಿ ಮತದಾರರು ಪಟ್ಟಿಯಿಂದ ಹೊರ ಬೀಳುತ್ತಿರುವುದರ ಬಗ್ಗೆ ಅವರಿಗೆ ಯಾವುದೇ ಕಾಳಜಿಯಿದ್ದಂತಿಲ್ಲ. ಇಂದು ರಾಜ್ಯಾದ್ಯಂತ ಸಾವಿರಾರು ಅರ್ಹ ಮತದಾರರು ಚುನಾವಣಾ ಆಯೋಗ ಕೇಳುತ್ತಿರುವ ದಾಖಲೆಗಳನ್ನು ಸಲ್ಲಿಸಲು ವಿಫಲರಾಗುತ್ತಿದ್ದಾರೆ. ಇದರ ಬಗ್ಗೆ ಬಿಜೆಪಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿಲ್ಲ. ಎಸ್ಐಆರ್ ಪ್ರಕ್ರಿಯೆ ಇನ್ನೇನೂ ಆರಂಭವಾಗಿದೆಯಷ್ಟೇ. ಅಷ್ಟರಲ್ಲೇ, ನಕಲಿ ಮತದಾರರನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಬಿಜೆಪಿ ಯಾವ ಆಧಾರದಲ್ಲಿ ಆರೋಪ ಮಾಡುತ್ತದೆ? ಬಿಜೆಪಿ ಬಳಿ ಆ ಬಗ್ಗೆ ಯಾವ ದಾಖಲೆಗಳಿವೆ? ಇತರ ರಾಜ್ಯಗಳಲ್ಲಿ ಮಾಡಿದಂತೆಯೇ ಕರ್ನಾಟಕದಲ್ಲೂ ಸಂಘಪರಿವಾರ ಕೆಲವು ನಿರ್ದಿಷ್ಟ ಸಮುದಾಯದ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಹೊರಗಿಡಲು ಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿ ಬಿಎಲ್ಒಗಳನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಆರೋಪಗಳು ಕೇಳಿ ಬಂದಿವೆ. ಆದರೆ ಸರಕಾರ ತೆಗೆದುಕೊಂಡ ಕೆಲವು ಕಠಿಣ ಕ್ರಮಗಳಿಂದಾಗಿ ಬಿಎಲ್ಒಗಳ ಕೈಗಳನ್ನು ಕಟ್ಟಿ ಹಾಕಲಾಗಿದೆ. ಇದನ್ನೇ, ‘ನಕಲಿ ಮತದಾರರನ್ನು ಉಳಿಸಿಕೊಳ್ಳುವ ಪ್ರಯತ್ನ’ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಕಲಿ ಮತದಾರರನ್ನು ಉಳಿಸಿಕೊಳ್ಳುವ ಪ್ರಯತ್ನಗಳು ಚುನಾವಣಾ ಆಯೋಗದ ಸಹಕಾರವಿಲ್ಲದೆ ನಡೆಯಲು ಸಾಧ್ಯವಿಲ್ಲ. ಆದುದರಿಂದ ಅಂತಹ ಅಕ್ರಮಗಳು ನಡೆದರೆ ಮೊದಲು ಕ್ರಮ ತೆಗೆದುಕೊಳ್ಳಬೇಕಾದುದು ಚುನಾವಣಾ ಆಯೋಗದ ವಿರುದ್ದ. ಬಿಜೆಪಿ ನಾಯಕರು ಸದ್ಯಕ್ಕೆ ಈ ದೇಶದ ಅಸಲಿ ಮತದಾರರ ಜೊತೆಗೆ ನಿಲ್ಲಬೇಕು. ಯಾವುದೇ ತಾಂತ್ರಿಕ ಅಡಚಣೆಗಳಿಂದ ಅಥವಾ ರಾಜಕೀಯ ಕಾರಣಗಳಿಂದ ಒಬ್ಬನೇ ಒಬ್ಬ ಅಸಲಿ ಮತದಾರ ಎಸ್ಐಆರ್ನಿಂದ ಹೊರ ಹೋಗದಂತೆ ನೋಡಿಕೊಳ್ಳಬೇಕಾದುದು ವಿರೋಧ ಪಕ್ಷಗಳ ನಾಯಕರ ಕರ್ತವ್ಯವಾಗಿದೆ. ಆಗ ಮಾತ್ರ ಅವರು ನಕಲಿ ಮತದಾರರ ಬಗ್ಗೆ ಮಾತನಾಡುವ ನೈತಿಕತೆಯನ್ನು ತಮ್ಮದಾಗಿಸಿಕೊಳ್ಳುತ್ತಾರೆ.
ಇದೇ ಸಂದರ್ಭದಲ್ಲಿ ಕೆಲಸದ ಒತ್ತಡದಿಂದ ರಾಜ್ಯದಲ್ಲಿ ನಾಲ್ವರು ಬಿಎಲ್ಒಗಳು ಮೃತಪಟ್ಟ ಆರೋಪಗಳಿವೆ. ಪಶ್ಚಿಮಬಂಗಾಳದಲ್ಲಿ ಕೆಲಸದ ಒತ್ತಡವನ್ನು ಭರಿಸಲಾಗದೆ ಕೆಲವು ಬಿಎಲ್ಒಗಳು ಆತ್ಮಹತ್ಯೆಯನ್ನೇ ಮಾಡಿಕೊಂಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಚುನಾವಣಾ ಆಯೋಗ ಆತುರಾತುರವಾಗಿ ಎಸ್ಐಆರ್ ಪ್ರಕ್ರಿಯೆಯನ್ನು ನಡೆಸಲು ಮುಂದಾಗಿರುವುದು. ಬಿಎಲ್ಒಗಳಿಗೆ ತೀರಾ ಕಡಿಮೆ ಸಮಯವನ್ನು ನೀಡಿರುವುದು. ಈ ಒತ್ತಡ ಎಸ್ಐಆರ್ನ ಮೇಲೂ ತೀವ್ರ ಪರಿಣಾಮ ಬೀರಲಿದೆೆ. ಹತ್ತು ಹಲವು ತಪ್ಪುಗಳು ನುಸುಳುವುದಕ್ಕೂ ಕಾರಣವಾಗಲಿವೆ. ಈ ಕಾಲಮಿತಿಯನ್ನು ವಿಸ್ತರಿಸುವುದಕ್ಕೆ ವಿರೋಧ ಪಕ್ಷಗಳು ಚುನಾವಣಾ ಆಯೋಗಕ್ಕೆ ಒತ್ತಡವನ್ನು ಹೇರಬೇಕು. ಚುನಾವಣಾ ಆಯೋಗದ ನಿಯಂತ್ರಣ ಕೇಂದ್ರ ಸರಕಾರದ ಕೈಯಲ್ಲಿರುವುದರಿಂದ ರಾಜ್ಯ ಬಿಜೆಪಿ ನಾಯಕರ ನಿಯೋಗವು ಕೇಂದ್ರ ಸರಕಾರಕ್ಕೆ ಒತ್ತಡವನ್ನು ಹಾಕಬೇಕು. ಎಸ್ಐಆರ್ನ ವಿರುದ್ಧ ವಿರೋಧ ಪಕ್ಷಗಳ ಮೊಸಳೆ ಕಣ್ಣೀರು ಮತದಾರರಿಗೆ ನ್ಯಾಯವನ್ನು ಒದಗಿಸದೇ ಇನ್ನಷ್ಟು ಅನ್ಯಾಯವನ್ನೇ ಮಾಡಬಹುದು.






