ಎಸ್ಐಆರ್: ಇದೆಂತಹ ನ್ಯಾಯ?

ಸುಪ್ರೀಂಕೋರ್ಟ್
ಮೊದಲೇ ತೀರ್ಪನ್ನು ಘೋಷಿಸಿ, ಬಳಿಕ ವಿಚಾರಣೆಯ ಪ್ರಹಸನ ನಡೆಸಿದರೆ ಫಲಿತಾಂಶ ಸಿಗುವುದಾದರೂ ಹೇಗೆ? ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಕುರಿತಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪು ದೇಶದ ಜನತೆಗೆ ಅನಿರೀಕ್ಷಿತವಾಗಿರಲಿಲ್ಲ. ಎಸ್ಐಆರ್ನ ಬಗ್ಗೆ ಎದ್ದಿರುವ ಗೊಂದಲ, ಆತಂಕಗಳನ್ನು ಸುಪ್ರೀಂಕೋರ್ಟ್ ನಿಜಕ್ಕೂ ಗಂಭೀರವಾಗಿ ತೆಗೆದುಕೊಂಡಿದ್ದರೆ, ಬಿಹಾರ ವಿಧಾನ ಸಭಾಚುನಾವಣೆಯ ಸಂದರ್ಭದಲ್ಲಿ ಎಸ್ಐಆರ್ಗೆ ಅವಕಾಶ ನೀಡುತ್ತಿರಲಿಲ್ಲ. ಬಿಹಾರದಲ್ಲಾಗಿರುವ ಎಡವಟ್ಟುಗಳನ್ನು ಕಂಡಾದರೂ ಪಶ್ಚಿಮಬಂಗಾಳದಲ್ಲಿ ಎಸ್ಐಆರ್ ನಡೆಯದಂತೆ ನೋಡಿಕೊಳ್ಳುತ್ತದೆ ಎಂದು ಜನರು ಭಾವಿಸಿದ್ದರು. ಆದರೆ ಪಶ್ಚಿಮಬಂಗಾಳದಲ್ಲಿ ನಡೆದ ಪ್ರಮಾದಗಳನ್ನೂ ಸುಪ್ರೀಂಕೋರ್ಟ್ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಬಿಹಾರ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಎಸ್ಐಆರ್ನಲ್ಲಿ ಸೃಷ್ಟಿಯಾದ ಗೊಂದಲಗಳ ಬಳಿಕವೂ ಸುಪ್ರೀಂಕೋರ್ಟ್ ಎಸ್ಐಆರ್ಗೆ ಮಾನ್ಯತೆ ನೀಡಿದೆಯೆಂದರೆ, ಅದರ ಉದ್ದೇಶದ ಬಗ್ಗೆ ಸಹಜವಾಗಿಯೇ ಅನುಮಾನಗಳು ಏಳುತ್ತವೆ. ಒಂದು ವೇಳೆ, ಚುನಾವಣಾ ಆಯೋಗ ನಡೆಸಿರುವ ಎಸ್ಐಆರ್ ವಿರುದ್ಧ ಅದು ತೀರ್ಪು ನೀಡಿದ್ದರೆ ಇಂದು ದೇಶಾದ್ಯಂತ ರಾಜಕೀಯ ವಲಯದಲ್ಲಿ ಭಾರೀ ತಳಮಳ ಸೃಷ್ಟಿಯಾಗುತ್ತಿತ್ತು. ಎಸ್ಐಆರ್ ಅಸಿಂಧುವಾದರೆ, ಬಿಹಾರ, ಪಶ್ಚಿಮಬಂಗಾಳ, ಅಸ್ಸಾಮಿನಲ್ಲಿ ಈಗಾಗಲೇ ರಚನೆಯಾಗಿರುವ ನೂತನ ಸರಕಾರದ ಗತಿಯೇನು ಎನ್ನುವ ಪ್ರಶ್ನೆಯೇಳುತ್ತದೆ. ಮತ್ತು ಅದಕ್ಕೆ ಪರೋಕ್ಷವಾಗಿ ಎಲ್ಲರೂ ಸುಪ್ರೀಂಕೋರ್ಟನ್ನೇ ಹೊಣೆ ಮಾಡುವ ಸಾಧ್ಯತೆಗಳೂ ಇದ್ದವು. ಆದುದರಿಂದಲೇ, ಎಸ್ಐಆರ್ ಕುರಿತಂತೆ ಸುಪ್ರೀಂಕೋರ್ಟ್ನ ವಿರೋಧಾಭಾಸ ಹೇಳಿಕೆಯ ಹಿಂದೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹುನ್ನಾರವೂ ಇದ್ದಂತಿದೆ. ಎಸ್ಐಆರ್ ಬಗ್ಗೆ ಇರುವ ಗೊಂದಲಗಳನ್ನು ತೀರ್ಪು ಪೂರ್ಣ ಪ್ರಮಾಣದಲ್ಲಿ ನಿವಾರಿಸಿಲ್ಲ. ಒಂದು ರೀತಿಯಲ್ಲಿ ಅಡ್ಡ ಗೋಡೆಯ ಮೇಲೆ ಇಟ್ಟ ದೀಪದಂತಿದೆ ಸುಪ್ರೀಂಕೋರ್ಟ್ ತೀರ್ಪು.
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ ಅರ್ಹತೆಯನ್ನು ನಿರ್ಣಯಿಸುವ ಸೀಮಿತ ಉದ್ದೇಶಕ್ಕಾಗಿ ಮಾತ್ರ ಭಾರತೀಯ ಚುನಾವಣಾ ಆಯೋಗವು ಜನರ ಪೌರತ್ವವನ್ನು ಪರಿಶೀಲಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದೇ ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೊರ ಬಿದ್ದ ಮಾತ್ರಕ್ಕೆ ಓರ್ವ ವ್ಯಕ್ತಿ ಭಾರತದ ಪ್ರಜೆಯಲ್ಲ ಎಂಬ ನಿರ್ಧಾರಕ್ಕೆ ಬರುವಂತಿಲ್ಲ ಎಂದೂ ಕೋರ್ಟ್ ಹೇಳಿದೆ. ಸಂದೇಹಾಸ್ಪದ ಪೌರತ್ವದ ಕಾರಣದಿಂದಾಗಿ ಬಿಹಾರದ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾದ ವ್ಯಕ್ತಿಗಳ ಹೆಸರುಗಳನ್ನು ಚುನಾವಣಾ ಆಯೋಗವು ನಾಲ್ಕು ವಾರಗಳ ಒಳಗಾಗಿ ಕೇಂದ್ರ ಸರಕಾರಕ್ಕೆ ಕಳುಹಿಸಬೇಕು. ಕೇಂದ್ರ ಸರಕಾರವು ಅವರ ಪೌರತ್ವಕ್ಕೆ ಸಂಬಂಧಿಸಿ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಬೇಕು ಎಂದೂ ಸುಪ್ರೀಂಕೋರ್ಟ್ ತಾಕೀತು ಮಾಡಿದೆ. ಮತದಾರರ ಪರಿಷ್ಕರಣೆಯ ಬಗ್ಗೆ ಈ ದೇಶದ ಯಾವ ರಾಜಕೀಯ ನಾಯಕರಿಗಾಗಲಿ, ಪೌರರಿಗಾಗಲಿ ಆಕ್ಷೇಪಗಳಿಲ್ಲ. ಕಾಲಕಾಲಕ್ಕೆ ಮತದಾರರ ಪಟ್ಟಿಯ ಪರಿಷ್ಕರಣೆಯಾಗಲೇಬೇಕು. ಇದನ್ನು ಈ ದೇಶದ ಯಾವ ಮತದಾರರೂ ನಿರಾಕರಿಸುತ್ತಿಲ್ಲ. ಆದರೆ ಮತದಾರರ ಪರಿಷ್ಕರಣೆ ಬೇರೆ, ಪೌರತ್ವ ಪರಿಷ್ಕರಣೆ ಬೇರೆ. ಚುನಾವಣಾ ಆಯೋಗ ಇಲ್ಲಿ ಹೊರಟಿರುವುದು ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ಪೌರತ್ವ ಪರಿಷ್ಕರಣೆಯನ್ನು. ಚುನಾವಣಾ ಆಯೋಗಕ್ಕೆ ಈ ಅಧಿಕಾರವನ್ನು ಕೊಟ್ಟವರು ಯಾರು? ಎಂದು ಜನರು ಕೇಳುತ್ತಿದ್ದಾರೆ. ಚುನಾವಣಾ ಆಯೋಗ ಜನರಲ್ಲಿ ‘ನೀನು ಈ ದೇಶದ ಪೌರ ಎನ್ನುವುದನ್ನು ಸಾಬೀತು ಪಡಿಸುವುದಕ್ಕಿರುವ ದಾಖಲೆಗಳನ್ನು ಮುಂದಿಡು’ ಎಂದು ಕೇಳುತ್ತಿದೆಯೇ ಹೊರತು, ತಾನು ಮತದಾರ ಎಂದು ಸಾಬೀತು ಪಡಿಸುವುದಕ್ಕಿರುವ ದಾಖಲೆಗಳನ್ನಲ್ಲ.
ಇದೇ ಸಂದರ್ಭದಲ್ಲಿ ಪರಿಷ್ಕರಣೆಯ ಸಂದರ್ಭದಲ್ಲಿ ಬಿಎಲ್ಒಗಳು ಎದುರಿಸಿದ ರಾಜಕೀಯ ಒತ್ತಡಗಳನ್ನು , ನಿರ್ದಿಷ್ಟ ಸಮುದಾಯದ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಡಲು ರಾಜಕೀಯ ಶಕ್ತಿಗಳು ನಡೆಸಿದ ಪಿತೂರಿಗಳನ್ನು ಸುಪ್ರೀಂಕೋರ್ಟ್ ಗಂಭೀರವಾಗಿ ತೆಗೆದುಕೊಂಡಿಲ್ಲ. ಮತದಾರರ ಪಟ್ಟಿಯಲ್ಲಿ ಕಂಡು ಬಂದ ಎಡವಟ್ಟುಗಳನ್ನು ಸರಿಪಡಿಸುವುದಕ್ಕೆ ಯಾವುದೇ ನಿರ್ದೇಶನವನ್ನು ಚುನಾವಣಾ ಆಯೋಗಕ್ಕೆ ನೀಡಿಲ್ಲ. ಪೌರತ್ವವನ್ನು ಪರಿಶೀಲಿಸುವ ಅಧಿಕಾರ ಚುನಾವಣಾ ಆಯೋಗಕ್ಕಿದೆ ಎಂದ ಮೇಲೆ, ಯಾರೆಲ್ಲ ಮತದಾನಕ್ಕೆ ಅರ್ಹರಲ್ಲವೋ ಅವರನ್ನೆಲ್ಲ ಪರೋಕ್ಷವಾಗಿ ಈ ದೇಶದ ಪೌರರಲ್ಲ ಎಂದು ಚುನಾವಣಾ ಆಯೋಗ ಘೋಷಿಸಿದಂತೆ ಆಗಲಿಲ್ಲವೇ? ಪೌರರೆಂದು ಮನವರಿಕೆ ಮಾಡಲು ವಿಫಲರಾದ ಕಾರಣ ಮತದಾನಕ್ಕೆ ಅರ್ಹರಲ್ಲ ಎಂದ ಮೇಲೆ, ಪೌರತ್ವ ರದ್ದತಿಯಲ್ಲ ಎನ್ನುವ ಸುಪ್ರೀಂಕೋರ್ಟ್ ಮಾತಿನಿಂದ ಮತದಾನ ವಂಚಿತರಿಗೆ ಯಾವ ರೀತಿಯಲ್ಲಿ ನ್ಯಾಯ ಕೊಟ್ಟಂತಾಯಿತು? ಅಂದರೆ ಸುಪ್ರೀಂಕೋರ್ಟ್ ಮತದಾನ ವಂಚಿತ ಸುಮಾರು 10 ಕೋಟಿ ಜನರನ್ನು ಏನೆಂದು ಕರೆಯುತ್ತದೆ? ಅವರನ್ನು ನುಸುಳುಕೋರರು ಎಂದು ಕರೆಯುತ್ತದೆಯೆ? ಇವರೆಲ್ಲ ಪಾಕಿಸ್ತಾನ ಅಥವಾ ಬಾಂಗ್ಲಾದಿಂದ ಬಂದವರು ಎಂದು ಶಂಕಿಸುತ್ತದೆಯೆ? ದಾಖಲೆಗಳನ್ನು ಒದಗಿಸಲು ಸಾಧ್ಯವಾಗದೇ ಇದ್ದರೆ ಅವರ ಸ್ಥಿತಿಯೇನು?
ಮತದಾನ ವಂಚಿತರ ಪೌರತ್ವ ರದ್ದಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆಯಾದರೂ, ಈಗಾಗಲೇ ಎಸ್ಐಆರ್ನಿಂದ ಹೊರಗೆ ಬಿದ್ದವರಿಗೆ ಸರಕಾರದ ಯೋಜನೆಗಳನ್ನು ನೀಡಲಾಗುವುದಿಲ್ಲ ಎಂದು ಪಶ್ಚಿಮಬಂಗಾಳ ಸರಕಾರ ಹೇಳಿಕೊಂಡಿದೆ. ಸರಕಾರಿ ಯೋಜನೆಗಳಿರುವುದೇ ಬಡವರನ್ನು, ದುರ್ಬಲರನ್ನು ಮೇಲೆತ್ತಲು. ಎಸ್ಐಆರ್ನಲ್ಲಿ ತಮ್ಮ ದಾಖಲೆಗಳನ್ನು ಒದಗಿಸಲು ಸಾಧ್ಯವಾಗದ ದೊಡ್ಡ ಸಂಖ್ಯೆಯ ಜನರು ಬಡವರು, ದುರ್ಬಲ ಜಾತಿಗೆ ಸೇರಿದವರೂ ಆಗಿದ್ದಾರೆ. ಪಶ್ಚಿಮ ಬಂಗಾಳ, ಬಿಹಾರ ಸರಕಾರದ ಪ್ರಕಾರ ಭವಿಷ್ಯದಲ್ಲಿ ಈ ಬಡವರೆಲ್ಲ ಸರಕಾರದ ಯೋಜನೆಗಳನ್ನು ಪಡೆಯುವ ಅರ್ಹತೆಯನ್ನು ಕಳೆದುಕೊಳ್ಳುತ್ತಾರೆ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ ಎನ್ನುವ ಕಾರಣಕ್ಕಾಗಿ ಸರಕಾರದ ಕಲ್ಯಾಣ ಯೋಜನೆಗಳನ್ನು ಪಡೆದುಕೊಳ್ಳುವ ಅವಕಾಶ ಕಿತ್ತುಕೊಳ್ಳಲಾಗುತ್ತದೆ ಎಂದ ಮೇಲೆ ಸುಪ್ರೀಂಕೋರ್ಟ್ ಹೇಳುವ ಪೌರತ್ವಕ್ಕೆ ಏನು ಅರ್ಥ ಉಳಿಯಿತು? ಮತದಾರರ ಪಟ್ಟಿಯಿಂದ ಹೊರ ಬಿದ್ದವರು ಮತ್ತೆ ಕೇಂದ್ರ ಸರಕಾರದಿಂದ ನ್ಯಾಯ ಪಡೆದುಕೊಳ್ಳಬೇಕಾಗಿದೆ. ಆದರೆ ಅದೇ ಕೇಂದ್ರ ಸರಕಾರದ ಸೂಚನೆಯ ಮೇರೆಗೇ ಚುನಾವಣಾ ಆಯೋಗ ಈ ಪರಿಷ್ಕರಣೆಯ ಹೆಸರಿನಲ್ಲಿ ಮತದಾರರನ್ನು ಹೊರ ಹಾಕಿರುವುದನ್ನು ನಾವು ಮರೆಯಬಾರದು. ಒಟ್ಟಿನಲ್ಲಿ ಸುಪ್ರೀಂಕೋರ್ಟ್ ಎಸ್ಐಆರ್ನ್ನು ಸಿಂಧುಗೊಳಿಸುವ ಮೂಲಕ ಈ ದೇಶದ ಕೋಟ್ಯಂತರ ಅರ್ಹ ಮತದಾರರನ್ನು ಅಸಿಂಧುಗೊಳಿಸಿದೆ. ಅಷ್ಟೇ ಅಲ್ಲ, ಪೌರತ್ವವನ್ನು ಪರೋಕ್ಷವಾಗಿ ಅಡಕತ್ತರಿಯಲ್ಲಿ ಸಿಲುಕಿಸಿದೆ. ಇದರ ಪರಿಣಾಮವನ್ನು ಈ ದೇಶದ ಬಡವರು, ದುರ್ಬಲವರ್ಗದ ಜನರು ನೇರವಾಗಿ ಅನುಭವಿಸಬೇಕಾಗಿದೆ. ನ್ಯಾಯದ ಹೆಸರಿನಲ್ಲಿ ಸುಪ್ರೀಂಕೋರ್ಟ್ ತನಗೆ ತಾನೇ ಅನ್ಯಾಯವನ್ನು ಮಾಡಿಕೊಂಡಿದೆ. ಇದು ಚುನಾವಣಾ ವ್ಯವಸ್ಥೆಗೆ, ಪ್ರಜಾಸತ್ತೆಗೆ ಮಾಡಿದ ಅನ್ಯಾಯವೂ ಹೌದು.






