ವಿಶೇಷ ಸಂಪಾದಕೀಯ | ಬದಲಾದ ಪ್ರಭುಗಳು, ಬಲಪಡೆದ ಸರಪಣಿಗಳು

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ವಾರ್ತಾಭಾರತಿ ಆಂದೋಲನವು ಇಂದು ತನ್ನ ಸಾಹಸ ಪ್ರಯಾಣದ 22 ವರ್ಷಗಳನ್ನು ಸಾರ್ಥಕವಾಗಿ ಪೂರ್ತಿಗೊಳಿಸಿ 23ನೇ ವರ್ಷಕ್ಕೆ ಹೆಜ್ಜೆ ಇಡುತ್ತಿದೆ. ಈ ಸಂಭ್ರಮದ ಸಂದರ್ಭದಲ್ಲಿ ನಮ್ಮ ಸಹಪ್ರಯಾಣಿಕರಾಗಿದ್ದ ನಮ್ಮೆಲ್ಲಾ ಓದುಗರು, ಶ್ರೋತೃಗಳು, ವೀಕ್ಷಕರು, ಬೆಂಬಲಿಗರು ಮತ್ತು ಪೋಷಕರಿಗೆ, ವಾರ್ತಾಭಾರತಿ ತಂಡದ ಸರ್ವ ಸದಸ್ಯರ ಪರವಾಗಿ ಮನದಾಳದ ಅಭಿನಂದನೆಗಳು ಮತ್ತು ಕೃತಜ್ಞತೆಗಳು.
ಪ್ರತಿ ವರ್ಷದಂತೆ ಈ ಬಾರಿಯೂ ಈ ಸಂದರ್ಭದಲ್ಲಿ ನಮ್ಮ ಸಮಾಜದ ಮುಂದಿರುವ ಮತ್ತು ಮಾಧ್ಯಮಗಳ ಜೊತೆ ನೇರ ಸಂಬಂಧ ಇರುವ ಕೆಲವು ಕಳವಳದಾಯಕ ವಾಸ್ತವಗಳನ್ನು ನೆನಪಿಸಿಕೊಳ್ಳುವುದು ಅವಶ್ಯಕವೆನಿಸುತ್ತಿದೆ.
ಭಾರತವೆಂಬ ಜಗತ್ತಿನ ಅತಿದೊಡ್ಡ ಪ್ರಜಾಸತ್ತೆಯಲ್ಲಿ ಪ್ರಜಾಪ್ರಭುತ್ವವೇ ಕೊನೆಯುಸಿರೆಳೆಯುತ್ತಿದೆ ಮತ್ತು ಅಷ್ಟೆಲ್ಲ ತ್ಯಾಗ ಬಲಿದಾನಗಳನ್ನು ನೀಡಿ ಪ್ರಜೆಗಳು ಗಳಿಸಿದ ಹಕ್ಕು ಅಧಿಕಾರಗಳೆಲ್ಲಾ ಕ್ರಮೇಣ ಇಲ್ಲವಾಗುತ್ತಿವೆ ಎಂಬ ದೂರು ಸಮಾಜದ ಕೆಲವು ಜಾಗೃತ ವಲಯಗಳಲ್ಲಿ ಕೇಳಿಬರುತ್ತಿದೆ. ನಿಜವಾಗಿ ಇದು ಎಲ್ಲೆಲ್ಲೂ ಹಾಹಾಕಾರ ಮೆರೆಯಬೇಕಾಗಿದ್ದ ಆಘಾತಕಾರಿ ಬೆಳವಣಿಗೆಯಾಗಿದೆ. ಆದರೆ ದುರದೃಷ್ಟವಶಾತ್ ನಮ್ಮ ಸಮಾಜಕ್ಕೆ ಮತ್ತು ವಿಶೇಷವಾಗಿ ನಮ್ಮ ಹೊಸ ತಲೆಮಾರಿಗೆ ಈ ಬೆಳವಣಿಗೆಯ ಕಡೆಗೆ ಗಂಭೀರವಾಗಿ ಗಮನ ಹರಿಸುವುದಕ್ಕೂ ಪುರುಸೊತ್ತಾಗಿಲ್ಲ. ಯಾವುದೇ ಸುದೀರ್ಘ, ಕಠಿಣ ಹೋರಾಟದ ಅನುಭವ ಇಲ್ಲದ, ಉಚಿತವಾಗಿಯೇ ಪ್ರಜಾಪ್ರಭುತ್ವವೆಂಬ ಅಮೂಲ್ಯ ಸಂಪತ್ತಿನ ವಾರಸುದಾರರಾಗಿ ಬಿಟ್ಟ ತಲೆಮಾರು, ಈ ರೀತಿ ಮಂಪರಿನಲ್ಲಿರುವುದು ಸ್ವಾಭಾವಿಕ. ಇಂತಹ ಸನ್ನಿವೇಶದಲ್ಲಿ, ಪ್ರಜಾಪ್ರಭುತ್ವದ ಮಹತ್ವದ ಕುರಿತಾಗಿ ಮತ್ತು ಪ್ರಜೆಗಳಿಂದ ಅವರ ಪ್ರಭುತ್ವವನ್ನು ಕಿತ್ತುಕೊಳ್ಳುತ್ತಿರುವವರು ಮತ್ತವರ ಸಂಚುಗಳ ಕುರಿತಾಗಿ ಸಮಾಜದಲ್ಲಿ ಜಾಗೃತಿ ಬೆಳೆಸಿ ಸಾಮೂಹಿಕ ಪ್ರತಿರೋಧ ಮತ್ತು ಹೋರಾಟಕ್ಕೆ ಜನಾಭಿಪ್ರಾಯವನ್ನು ರೂಪಿಸುವ ಹೊಣೆಯು ಮಾಧ್ಯಮ ಎಂಬ ‘ನಾಲ್ಕನೇ ಸ್ತಂಭ’ಕ್ಕೆ ಸೇರಿದೆ. ಆದರೆ ದುರದೃಷ್ಟವಶಾತ್ ಇಂದು ಆ ಸ್ತಂಭ ಕೂಡಾ ಪ್ರಜಾಪ್ರಭುತ್ವದ ಕೊಲೆಗಡುಕರ ಕೈಯಲ್ಲಿ ಕೊಡಲಿಯಾಗಿಬಿಟ್ಟಿದೆ.
ನಮ್ಮನ್ನು ದಾಸ್ಯಕ್ಕೆ ತಳ್ಳಿ ನಮ್ಮ ಮೇಲೆ ಸವಾರಿ ನಡೆಸುತ್ತಿರುವ ಅಕ್ರಮ ಪ್ರಭುಗಳ ವಿರುದ್ಧ ಬಂಡೆದ್ದು ಅವರಿಗೆ ಸೋಲುಣಿಸುವ ವಿಷಯದಲ್ಲಿ ನಾವು ಭಾರತೀಯರು ಸಾಕಷ್ಟು ಅನುಭವಸ್ಥರು. ನಮ್ಮನ್ನು ದಾಸ್ಯಕ್ಕೆ ತಳ್ಳಲಾಗಿದೆ ಎಂಬ ಪ್ರಜ್ಞೆ, ದಾಸ್ಯವನ್ನು ಹೇರಿದವರ ವಿರುದ್ಧ ಆಕ್ರೋಶ ಮತ್ತು ದಾಸ್ಯದಿಂದ ಮುಕ್ತರಾಗುತ್ತೇವೆಂಬ ಛಲ - ಇವು ಬ್ರಿಟಿಷರ ಅಕ್ರಮ ಪ್ರಭುತ್ವದ ವಿರುದ್ಧ ನಮ್ಮನ್ನು ಬಂಡಾಯಕ್ಕಿಳಿಸಿದ್ದ ಪ್ರಮುಖ ಪ್ರೇರಕಗಳಾಗಿದ್ದವು. ಅಂದು ಗರಿಷ್ಠ ಆವೇಶದೊಂದಿಗೆ, ಸಾಮೂಹಿಕ ಸ್ತರದಲ್ಲಿ ಬೃಹತ್ತಾಗಿ ಪ್ರಕಟವಾಗಿದ್ದ ನಮ್ಮ ಬಂಡಾಯವು, ಶತಮಾನದಷ್ಟು ದೀರ್ಘಕಾಲ ತನ್ನ ಕಾವನ್ನು ಉಳಿಸಿಕೊಂಡಿತ್ತು ಮತ್ತು ಕೊನೆಯಲ್ಲಿ ವಿಜಯವನ್ನೂ ಸಾಧಿಸಿತ್ತು. ಜಗತ್ತಿಗೆಲ್ಲ ಸ್ಫೂರ್ತಿ ನೀಡಿದ್ದ ಆ ನಮ್ಮ ಸಕ್ರಿಯ, ಸಂಘಟಿತ ಮತ್ತು ಸುದೀರ್ಘ ಬಂಡಾಯದಲ್ಲಿ ನಮ್ಮನ್ನು ದಾಸರಾಗಿಸಿ, ಸ್ವತಃ ಪ್ರಭುಗಳಾಗಿ ಮೆರೆಯುತ್ತಿರುವವರು ಯಾರೆಂಬ ಕುರಿತಾದ ಸ್ಪಷ್ಟತೆಯು ನಿರ್ಣಾಯಕ ಪಾತ್ರ ವಹಿಸಿತ್ತು. ಆ ಕಾಲದಲ್ಲಿ ಮಾಧ್ಯಮಗಳ ಸಾಮರ್ಥ್ಯ ಮತ್ತು ವ್ಯಾಪ್ತಿಯು ತೀರಾ ಸೀಮಿತವಾಗಿತ್ತು. ಸಮಾಜದಲ್ಲಿ ಕೇವಲ ಕೆಲವು ಮಂದಿ ಮಾತ್ರ ಮಾಧ್ಯಮಗಳ ಬಳಕೆದಾರರಾಗಿದ್ದರು. ಆದರೆ ಅಂದಿನ ಮಾಧ್ಯಮಗಳು ಹಾಗೂ ಅವುಗಳ ಆ ಕೆಲವು ಬಳಕೆದಾರರು ಸಮಾಜದ ಗೌರವ ಹಾಗೂ ವಿಶ್ವಾಸಕ್ಕೆ ಪಾತ್ರರಾಗಿದ್ದರಿಂದ ಅವರೇ ಸಮಾಜದ ಮಾರ್ಗದರ್ಶಿಗಳಾಗಿ ಬಿಟ್ಟಿದ್ದರು. ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಹೆಚ್ಚಿನವರೆಲ್ಲಾ ಜನಜಾಗೃತಿಗಾಗಿ ಬಳಸಿದ ಅತ್ಯಂತ ಪರಿಣಾಮಕಾರಿ ಅಸ್ತ್ರ ಪತ್ರಿಕೆಯಾಗಿತ್ತು. ಹಿಂದಿ, ಉರ್ದು, ಪರ್ಷಿಯನ್, ಇಂಗ್ಲಿಷ್ ಮತ್ತು ಹಲವು ಪ್ರಾಂತೀಯ ಭಾಷೆಗಳ ಪತ್ರಿಕೆಗಳು ಎಲ್ಲ ಬಗೆಯ ದಮನ ಮತ್ತು ಬೆದರಿಕೆಗಳ ಮುಂದೆ ಸೆಟೆದು ನಿಂತು ವ್ಯವಸ್ಥೆಯ ವಿರುದ್ಧ ಜನಾಭಿಪ್ರಾಯ ಮೂಡಿಸುವ ಕರ್ತವ್ಯ ನಿರ್ವಹಿಸಿದ್ದವು. ಬಂಡಾಯದ ಪ್ರಕ್ರಿಯೆಯಲ್ಲಿ ಪತ್ರಿಕೆಗಳ ಮಹತ್ವ ಎಷ್ಟಿತ್ತೆಂದರೆ ಆ ಹಂತದಲ್ಲಿ ಜೈಲಿಗೆ ತಳ್ಳಲ್ಪಟ್ಟವರಲ್ಲಿ ಒಂದು ಗಣ್ಯ ಸಂಖ್ಯೆ ಪತ್ರಕರ್ತರದ್ದಾಗಿತ್ತು.
ದೀರ್ಘ ಕಾಲದ ಸಾಮೂಹಿಕ ಬಂಡಾಯದ ಪ್ರತಿಫಲವಾಗಿ ಭಾರತೀಯರಿಗೆ ದಕ್ಕಿದ್ದ ಪ್ರಜಾಪ್ರಭುತ್ವವು ಇಂದು ಕೇವಲ ಔಪಚಾರಿಕವಾಗಿ ಮಾತ್ರ ಉಳಿದು ಕೊಂಡಿದೆ ಮತ್ತು ಅದನ್ನು ಕೂಡಾ ಔಪಚಾರಿಕವಾಗಿಯೇ ಮುಗಿಸಿ ಬಿಡುವುದಕ್ಕೆ ನಮ್ಮ ಕಣ್ಮುಂದೆಯೇ ಭಾರೀ ಶ್ರಮಗಳು ನಡೆಯುತ್ತಿವೆ. ನಮ್ಮ ಪೂರ್ವಜರನ್ನು ತಮ್ಮ ಗೂಡಿನೊಳಗೆ ಕಟ್ಟಿಡುವುದಕ್ಕಾಗಿ ಬ್ರಿಟಿಷರು, ‘ಒಡೆದು ಆಳುವ ನೀತಿ’ಯ ಸಹಿತ ಹತ್ತು ಹಲವು ಸಂಚುಗಳನ್ನು ಹೂಡಿದ್ದರು. ಅವರ ಹೆಚ್ಚಿನ ಸಂಚುಗಳು ಯಶಸ್ವಿಯೂ ಆಗಿದ್ದವು. ಆದರೆ ಗುಲಾಮರ ಮನದಲ್ಲಿ ‘ನಾವೇ ಮಾಲಕರು’ ಎಂಬ ಭ್ರಮೆಯನ್ನು ಮೂಡಿಸಬೇಕೆಂಬ ಚಾಣಕ್ಯ ಸಂಚು ಆ ಬ್ರಿಟಿಷರಿಗೆ ಹೊಳೆಯಲೇ ಇಲ್ಲ. ಒಂದು ವೇಳೆ ಹೊಳೆದಿದ್ದರೆ, ಅವರು ಅಷ್ಟೆಲ್ಲಾ ಜೈಲು, ಲಾಠಿ, ತೋಪು ಮತ್ತು ಫಿರಂಗಿಗಳನ್ನು ಬಳಸುವ ಅಗತ್ಯವೇ ಇರಲಿಲ್ಲ. ನಾವೇ ಈ ನೆಲದ ಮಾಲಕರು ಮತ್ತು ಬ್ರಿಟಿಷರು ನಮಗೆ ಆಧುನಿಕತೆಯನ್ನು ಕಲಿಸಲು ಬಂದಿರುವ ನಮ್ಮ ಹಿತೈಷಿಗಳೇ ಹೊರತು ಅಕ್ರಮ ಪ್ರಭುಗಳಲ್ಲ ಎಂಬ ಭ್ರಮೆಯನ್ನು ಗುಲಾಮರ ತಲೆಯಲ್ಲಿ ಬಿತ್ತಿಬಿಟ್ಟಿದ್ದರೆ ಸಾಕಿತ್ತು. ನಮ್ಮ ಹೆಚ್ಚಿನೆಲ್ಲಾ ಪೂರ್ವಜರು ತಮ್ಮ ಸ್ವತಂತ್ರ ಕೊರಳುಗಳನ್ನು ಸ್ವಪ್ರೇರಣೆಯಿಂದಲೇ ಬ್ರಿಟಿಷರ ಅಧೀನಕ್ಕೊಪ್ಪಿಸಿ, ಅವರ ವಿಧೇಯ ಪ್ರಜೆಗಳಾಗಿರುವುದರಲ್ಲಿ ಧನ್ಯತೆಯನ್ನು ಕಾಣುತ್ತಿದ್ದರು. ದುರಂತವೇನೆಂದರೆ, ಅಂದು ಬ್ರಿಟಿಷರಿಗೆ ಹೊಳೆಯದಿದ್ದ ಆ ಸಂಚು, ಸ್ವತಂತ್ರ ಭಾರತದ ಅನೌಪಚಾರಿಕ ಸಾರಥಿಗಳಾದ ಪುರೋಹಿತರು, ಕಾರ್ಪೊರೇಟ್ ಕುಬೇರರು ಮತ್ತು ಅವರ ದಾಳಗಳಾದ ಪುಢಾರಿಗಳು ಮತ್ತು ಅಧಿಕಾರಶಾಹಿಗಳಿಗೆ ಹೊಳೆದು ಬಿಟ್ಟಿತು.
ಇಂದು ‘ಸೋಷಲಿಸ್ಟ್’ ಮತ್ತು ‘ಸೆಕ್ಯುಲರ್’ ಎಂಬ ಪದಗಳನ್ನು ಭಾರತದ ಸಂವಿಧಾನದಿಂದ ಕಿತ್ತು ಹಾಕಬೇಕೆಂದು ಆಗ್ರಹಿಸುತ್ತಿರುವವರು ಅಭಿನಂದನಾರ್ಹರು. ಏಕೆಂದರೆ ಸಂವಿಧಾನದಲ್ಲಿರುವ ಆ ಪದಗಳಿಗೆ ಕಾರ್ಯತಃ ಇಂದಿನ ಭಾರತೀಯ ವ್ಯವಸ್ಥೆಯಲ್ಲಿ ಮತ್ತು ಇಲ್ಲಿನ ಸಮಾಜದಲ್ಲಿ ಯಾವುದೇ ಪಾತ್ರವಾಗಲಿ ಔಚಿತ್ಯವಾಗಲಿ ಉಳಿದಿಲ್ಲ. ವಿಪರ್ಯಾಸವೇನೆಂದರೆ, 1976 ರಲ್ಲಿ ಸಂವಿಧಾನದಲ್ಲಿ ಆ ಪದಗಳು ಸೇರಿಕೊಳ್ಳುವ ಮುನ್ನ ನಮ್ಮ ಸಮಾಜ ಮತ್ತು ವ್ಯವಸ್ಥೆಯು ಸಮಾಜವಾದಿ ಹಾಗೂ ಸೆಕ್ಯುಲರ್ ಎಂಬ ಗುರಿಗಳಿಂದ ದೂರವಿದ್ದರೂ ಕುಂಟುತ್ತಲಾದರೂ ಆ ದಿಕ್ಕಿನತ್ತ ಮುಖಮಾಡಿ ಮುನ್ನಡೆಯುತ್ತಿತ್ತು. ಸರಕಾರದ ಧೋರಣೆಗಳಲ್ಲಿ, ಪ್ರಾಶಸ್ತ್ಯಗಳಲ್ಲಿ, ಬಜೆಟ್‌ಗಳಲ್ಲಿ, ಯೋಜನೆಗಳಲ್ಲಿ, ಸಮಾಜದ ವಾತಾವರಣದಲ್ಲಿ, ಜನಸಾಮಾನ್ಯರ ನಿತ್ಯ ಜೀವನದಲ್ಲಿ ಮತ್ತು ಪುಢಾರಿಗಳ ಆಶ್ವಾಸನೆ ಮತ್ತು ನಟನೆಗಳಲ್ಲಿ ಆ ಎರಡು ಮೌಲ್ಯಗಳ ಪ್ರಾಬಲ್ಯವಲ್ಲದಿದ್ದರೆ ಕನಿಷ್ಠ ಪಕ್ಷ ಉಪಸ್ಥಿತಿಯಾದರೂ ಎದ್ದು ಕಾಣುತ್ತಿತ್ತು. ಆದರೆ ಕಳೆದ ಕೆಲವು ದಶಕಗಳ ವಿದ್ಯಮಾನಗಳನ್ನು ಹಾಗೂ ತಳಮಟ್ಟದ ವಾಸ್ತವಗಳನ್ನು ನೋಡಿದರೆ, 1976ರಲ್ಲಿ ಸಂವಿಧಾನದಲ್ಲಿ ಅಧಿಕೃತವಾಗಿ ಸೇರಿಸಲಾದದ್ದು ‘ಸಮಾಜವಾದಿ’ ಹಾಗೂ ‘ಸೆಕ್ಯುಲರ್’ ಎಂಬ ಪದಗಳನ್ನೋ ಅಥವಾ ‘ಪೌರೋಹಿತ್ಯ’ ಮತ್ತು ‘ಕ್ಯಾಪಿಟಲಿಸ್ಟ್’ ಎಂಬ ಪದಗಳನ್ನೋ ಎಂದು ಸಂಶಯಿಸುವಂತಾಗಿದೆ. ಮಾತ್ರವಲ್ಲ, ಮೂಲ ಸಂವಿಧಾನದಲ್ಲೇ ಇದ್ದ ‘ಡೆಮಾಕ್ರಟಿಕ್’ ಎಂಬ ಪದ ಕೂಡಾ ತನ್ನೆಲ್ಲ ಚೈತನ್ಯವನ್ನು ಕಳೆದುಕೊಂಡು ತೀರಾ ನಿರ್ಜೀವವಾಗಿ ಬಿಟ್ಟಿದೆ. ಪ್ರಜೆಗಳನ್ನೆಲ್ಲಾ ತಮ್ಮ ಕಾಲಬುಡದಲ್ಲಿಟ್ಟುಕೊಂಡು ತಮ್ಮ ಹಿತಾಸಕ್ತಿಗಳನುಸಾರ ದೇಶವನ್ನು ನಡೆಸುತ್ತಿರುವವರು ಪ್ರಸ್ತುತ ‘ಡೆಮಾಕ್ರಟಿಕ್’ ಎಂಬ ಪದವನ್ನು ‘ನಾವೇ ಮಾಲಕರು’ ಎಂಬ ಭ್ರಮೆಯನ್ನು ಪ್ರಜೆಗಳ ತಲೆಯಲ್ಲಿ ತುರುಕುವ ಮೂಲಕ, ದಾಸ್ಯದ ವಿರುದ್ಧ ಬಂಡಾಯದ ಆಲೋಚನೆ ಕೂಡಾ ಅವರ ಮನಗಳಲ್ಲಿ ಚಿಗುರದಂತೆ ನೋಡಿಕೊಳ್ಳುವುದಕ್ಕಾಗಿ ಬಳಸಿಕೊಂಡಿದ್ದಾರೆ. ಆದ್ದರಿಂದಲೇ ಅಂಬಾನಿ-ಅದಾನಿಗಳಂತಹ ಕುಬೇರರನ್ನು, ಮನುವಾದಿ ಪುರೋಹಿತರನ್ನು ಮತ್ತು ಮೌಢ್ಯವಾದಿ ಬಾಬಾಗಳನ್ನು ಭಾರತದ ಮಾಲಕರಾಗಿಸಿ 140 ಕೋಟಿ ನಾಗರಿಕರನ್ನು ಅವರ ಗುಲಾಮರಾಗಿಸುವ ಪ್ರಕ್ರಿಯೆಯು ಯಾವುದೇ ಪ್ರತಿರೋಧವನ್ನು ಎದುರಿಸದೆ, ಮಾತ್ರವಲ್ಲ, ಯಾವುದೇ ಗಂಭೀರ ಚರ್ಚೆ ಅಥವಾ ಸಂವಾದಕ್ಕೂ ವಸ್ತುವಾಗದೆ, ಬಹಳ ಮೌನವಾಗಿ, ನಾಜೂಕಾಗಿ ನಡೆದು ಬಿಟ್ಟಿದೆ.
ನಾವಿಂದು ಗುಟ್ಟಾಗಿ ನಡೆಯುತ್ತಿರುವ ಜನದ್ರೋಹಗಳನ್ನು ಬದಿಗಿಟ್ಟು, ಕಣ್ಣಮುಂದಿರುವ ವ್ಯಕ್ತ ಸತ್ಯಗಳನ್ನು ಮಾತ್ರ ನೋಡಿದರೂ ನಾವು ಪ್ರಭುಗಳೆಂಬ ನಮ್ಮ ಭ್ರಮೆ ಎಷ್ಟು ಪೊಳ್ಳು ಎಂಬುದನ್ನು ಅಂದಾಜಿಸಬಹುದು. ಅಸ್ಪೃಶ್ಯತೆ ಎಂಬ ನಮ್ಮ ಸಮಾಜದ ಅತ್ಯಂತ ಭಯಾನಕ ಕಳಂಕವು ಇಂದು ಕೂಡಾ ದೇಶದ ಹೆಚ್ಚಿನ ಭಾಗಗಳಲ್ಲಿ ಅನುಷ್ಠಾನದಲ್ಲಿದೆ. 25 ಶೇ.ಕ್ಕಿಂತ ಅಧಿಕ ಮಂದಿ ತಾವು ಅಸ್ಪಶ್ಯತೆಯನ್ನು ಪಾಲಿಸುತ್ತೇವೆಂದು ನಿರ್ಲಜ್ಜವಾಗಿ ಒಪ್ಪಿಕೊಳ್ಳುವ ಧೈರ್ಯ ತೋರುತ್ತಾರೆ. ಜಾತಿಗಳ ಬೇಲಿ ದಾಟಿ ಅಂತರ್ಜಾತೀಯ ವಿವಾಹಗಳನ್ನು ನಡೆಸುವವರ ಸಂಖ್ಯೆ ಕೇವಲ 5 ಶೇ.ರ
ಆಸುಪಾಸಿನಲ್ಲಿದೆ. ಎಲ್ಲಾ ಕಾನೂನಾತ್ಮಕ ಪ್ರತಿಬಂಧಗಳ ಹೊರತಾಗಿಯೂ ಕೆಳಜಾತಿಯವರಿಗೆ ಕೆಳಮಟ್ಟದ ಹುದ್ದೆ ಮತ್ತು ಮೇಲ್ಜಾತಿಯವರಿಗೆ ಮೇಲ್ಮಟ್ಟದ ಹುದ್ದೆ ಎಂಬ ಪ್ರಾಚೀನ, ಅಲಿಖಿತ ನಿಯಮವೇ ಹೆಚ್ಚಿನೆಡೆ ಜಾರಿಯಲ್ಲಿದೆ. ಹುದ್ದೆಗಳ ಮಟ್ಟ ಮೇಲೇರುತ್ತಾ ಹೋದಂತೆ ಕೆಳಜಾತಿಯ ಬಹುಜನರ ಪ್ರಾತಿನಿಧ್ಯ ಕಡಿಮೆಯಾಗುತ್ತಾ ಹೋಗುತ್ತದೆ. ಸಬಲೀಕರಣದ ಸಾಧನವಾಗಬೇಕಿದ್ದ ನಿರ್ಣಾಯಕ ಸ್ಥಾನಗಳಲ್ಲಿ ಪ್ರಾತಿನಿಧ್ಯದ ಅನುಪಾತ ಜನಸಂಖ್ಯೆಯ ಅನುಪಾತಕ್ಕೆ ತದ್ವಿರುದ್ಧವಾಗಿದೆ. ದಲಿತರು ಮತ್ತು ಶೂದ್ರರ ವಿರುದ್ಧ ತಾರತಮ್ಯ, ಅಪರಾಧಗಳು, ಹಿಂಸೆ ಮತ್ತು ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಲೇ ಇವೆ. ಪ್ರಭುತ್ವ ಇರುವುದು ಮನುವಾದಿ ಪುರೋಹಿತರ ಕೈಯಲ್ಲೇ ಹೊರತು ಬಹುಜನರ ಕೈಯಲ್ಲಿ ಅಲ್ಲವೆಂದು ಸಾರುವ ಈ ದಾರುಣ ಸ್ಥಿತಿಯನ್ನು ಚರ್ಚಿಸುವುದಿರಲಿ, ಪ್ರಸ್ತಾಪಿಸುವುದಕ್ಕೂ ನಮ್ಮ ‘ಶಿಕ್ಷಕ’ ಮತ್ತು ‘ಮಾರ್ಗದರ್ಶಿ’ ಮಾಧ್ಯಮಗಳು ತಯಾರಿಲ್ಲ.
1922ರಲ್ಲಿ ಬಿಟಿಷರು ನಮ್ಮ ಪ್ರಭುಗಳಾಗಿದ್ದಾಗ ಒಟ್ಟು ರಾಷ್ಟ್ರೀಯ ಆದಾಯದ 13 ಶೇ. ಪಾಲು, ದೇಶದ 1 ಶೇ. ಶ್ರೀಮಂತರ ಮುಷ್ಟಿಯಲ್ಲಿತ್ತು. ಬಹುಜನರು ಭ್ರಮಿಸುವಂತೆ ಅವರೇ ಸ್ವತಂತ್ರ ಭಾರತದ ಪ್ರಭುಗಳಾಗಿದ್ದರೆ, ದೇಶವು ಸ್ವತಂತ್ರವಾಗಿ, ನಮ್ಮದೇ ಸಂವಿಧಾನ ಜಾರಿಯಾಗಿ, ನಾವೇ ಪ್ರಭುಗಳೆಂದು ನಾವು ನಂಬತೊಡಗಿದ ಬೆನ್ನಿಗೇ ಈ ಭೀಕರ ಅಸಮತೋಲನವು ನಿವಾರಣೆಯಾಗಬೇಕಿತ್ತು. ‘ಸೋಷಿಯಲಿಸ್ಟ್’ ಎಂಬ ಪದವು ಸಂವಿಧಾನದ ಭಾಗವಾದ ಬಳಿಕವಂತೂ ಈ ಅಸಮತೋಲನವು ಸಂಪೂರ್ಣ ಕಣ್ಮರೆಯಾಗಿ ದೇಶದ ಸಂಪತ್ತು ಮತ್ತು ಆದಾಯದ ವಿತರಣೆಯು ಬಹುಜನ ಪ್ರಭುಗಳ ಹಿತಾಸಕ್ತಿಗೆ ಪೂರಕವಾಗಿ ನಡೆಯಬೇಕಿತ್ತು. ಆದರೆ ವಾಸ್ತವಸ್ಥಿತಿ ಹೇಗಿದೆ? ಒಂದು ವರದಿಯನುಸಾರ 2022ರಲ್ಲಿ, ಅಂದರೆ ಒಂದು ಶತಮಾನದ ಬಳಿಕ, ‘ಪ್ರಜಾಸತ್ತಾತ್ಮಕ’ ಎಂಬ ಮುಖವಾಡಧಾರಿ ಭಾರತದಲ್ಲಿ ರಾಷ್ಟ್ರೀಯ ಆದಾಯದ 22.6 ಶೇ. ಪಾಲು ಅದೇ 1 ಶೇ. ಶ್ರೀಮಂತರ ಮುಷ್ಟಿಯಲ್ಲಿದೆ. ಅಂದರೆ ಬಹುಜನರ ದಾಸ್ಯವು ಹಿಂದಿಗಿಂತ ಬಹುತೇಕ ದುಪ್ಪಟ್ಟು ಬೆಳೆದಿದೆ. ಆಕ್ಸ್ ಫಾಮ್ ವರದಿಯ ಪ್ರಕಾರ ಇಂದು ನಮ್ಮ ದೇಶದ ಸಂಪತ್ತಿನ 40 ಶೇ. ಪಾಲು ಇಲ್ಲಿನ 1 ಶೇ. ಶ್ರೀಮಂತರ ನಿಯಂತ್ರಣದಲ್ಲಿದೆ ಮತ್ತು 60 ಶೇ. ಸಂಪತ್ತು 5 ಶೇ. ಶ್ರೀಮಂತರ ನಿಯಂತ್ರಣದಲ್ಲಿದೆ. ಕೆಳಸ್ತರದ 50 ಶೇ. ಜನತೆಗೆ ಲಭ್ಯವಿರುವುದು ದೇಶದ ಸಂಪತ್ತಿನ ಕೇವಲ 3 ಶೇ. ಪಾಲು ಮಾತ್ರ. ಅಂದರೆ ಇಲ್ಲಿ ವ್ಯವಸ್ಥೆಯು, ಬಹುಜನರಿಗೆ ಸೇರಬೇಕಾದದ್ದನ್ನೆಲ್ಲ ಬಾಚಿ ಬಾಚಿ ಸೂಪರ್ ಸಿರಿವಂತರ ಜೋಳಿಗೆಗೆ ಹಾಕುವ ಭೀಕರ ಕ್ರಿಯೆಯಲ್ಲಿ ತಲ್ಲೀನವಾಗಿದೆ. ತನ್ನ ಸುಳ್ಳುಗಳಿಗಾಗಿಯೇ ಕುಖ್ಯಾತವಾಗಿರುವ ಸರಕಾರ, 11.28 ಶೇ. ಭಾರತೀಯರು ಅಂದರೆ ಸುಮಾರು 16 ಕೋಟಿ ಜನರು ಬಡತನದ ಕನಿಷ್ಠ ರೇಖೆಗಿಂತ ಕೆಳಗೆ ಬದುಕುತ್ತಿದ್ದಾರೆಂದು ಒಪ್ಪಿಕೊಳ್ಳುತ್ತಿದೆ. ಸಾಲದ ಹೊರೆ ಹೊರಲಾಗದೆ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ದೇಶದಲ್ಲಿ, ಆರ್‌ಬಿಐ ಮಾಹಿತಿ ಪ್ರಕಾರ, ಆರ್ಥಿಕ ವರ್ಷ 2015ರಿಂದ 2024ರ ನಡುವಣ ಅವಧಿಯಲ್ಲಿ ಕಾರ್ಪೊರೇಟ್ ಧಣಿಗಳ 16.35 ಲಕ್ಷ ಕೋಟಿ ರೂ.ಗಳಷ್ಟು ಸಾಲವನ್ನು ಮನ್ನಾ ಮಾಡಲಾಗಿದೆ. ಅಂತಿಮವಾಗಿ ಈ ದೈತ್ಯ ದರೋಡೆಯ ಬೆಲೆಯನ್ನು ದೇಶದ ಜನಸಾಮಾನ್ಯನೇ ತೆರಬೇಕಾಗುತ್ತದೆ. ರಶ್ಯದಿಂದ ಅಗ್ಗದ ಬೆಲೆಗೆ ಕಚ್ಚಾತೈಲ ಆಮದು ಮಾಡಿ ಪರಿಷ್ಕರಿಸಿ ಮಾರಿದ ಅಂಬಾನಿಯ ರಿಲಯನ್ಸ್ ಎಂಬ ಖಾಸಗಿ ಕಂಪೆನಿಯು ಆಮೂಲಕ ಸುಮಾರು 7 ಸಾವಿರ ಕೋಟಿ ರೂಪಾಯಿ ಲಾಭಗಳಿಸಿದ್ದು ಇದೀಗ, ಟ್ರಂಪ್ ಸರಕಾರವು ಹೊರಿಸಿರುವ ದುಬಾರಿ ಸುಂಕದ ರೂಪದಲ್ಲಿ ಅದರ ಬೆಲೆಯನ್ನೂ ದೇಶದ ಜನರೇ ತೆರಬೇಕಾಗಿ ಬಂದಿದೆ. ಖಾಸಗೀಕರಣ ಮತ್ತು ಉದಾರೀಕರಣದ ಹೆಸರಲ್ಲಿ ಬಡ ಬಹುಜನರ ದಿವಾಳೀಕರಣ ಮತ್ತು ಕುಬೇರರ ಏಕಸ್ವಾಮೀಕರಣ ನಡೆದಿದೆ. ಕೆಲವು ವರ್ಷಗಳ ಹಿಂದಷ್ಟೇ, ಭಾರತವು ‘ಫಿಫ್ತ್ ಲಾರ್ಜೆಸ್ಟ್’ ಆರ್ಥಿಕತೆಯಾಗಿ ಬೆಳೆದಿದೆ ಎಂದು ನಮ್ಮನ್ನು ಮನರಂಜಿಸುತ್ತಿದ್ದ ನಮ್ಮ ಮಾನ್ಯ ವಿದ್ಯಾವಂತ ಪ್ರಧಾನಮಂತ್ರಿಯವರು ಇದೀಗ, ನಾವು ‘ಥರ್ಡ್ ಲಾರ್ಜೆಸ್ಟ್’ ಆರ್ಥಿಕತೆಯಾಗಿ ಬೆಳೆದಿದ್ದೇವೆಂದು ಜೋಗುಳ ಹಾಡು ಹಾಡಿ ನಮ್ಮನ್ನು ಅಮಲಿಗೊಡ್ಡುತ್ತಿದ್ದಾರೆ. ಜೊತೆಗೆ, ದೇಶದಲ್ಲಿ ನೂರು ಕೋಟಿ ಡಾಲರ್‌ಗಳಿಗಿಂತ ಹೆಚ್ಚಿನ ಮೌಲ್ಯದ ಆಸ್ತಿಯ ಮಾಲಕರಾಗಿರುವ ಬಿಲಿಯನೇರ್‌ಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ ಎಂಬ ವರದಿಗಳೂ ಬರುತ್ತಿವೆ. ನಿಜವಾಗಿ ಇವೆಲ್ಲಾ ಜನತೆಯ ಸಂಪನ್ನತೆಯ ಬದಲು, ಸಂಪತ್ತಿನ ಜನವಿರೋಧಿ ಧ್ರುವೀಕರಣದ ಪುರಾವೆಗಳಾಗಿವೆ ಮತ್ತು ಜನತೆಯು ಕಟ್ಟೆಚ್ಚರ ವಹಿಸಬೇಕಾದ ಅಪಾಯಕಾರಿ ಸನ್ನಿವೇಶವಾಗಿದೆ.
ಭಾರತದ ಸಂಪನ್ಮೂಲಗಳನ್ನು ಕೊಳ್ಳೆಹೊಡೆಯುತ್ತಿದ್ದಾರೆ ಎಂಬುದು ಬ್ರಿಟಿಷರ ಮೇಲಿನ ಪ್ರಮುಖ ಆರೋಪವಾಗಿತ್ತು. ಆದರೆ ನಾವು ಅಷ್ಟೆಲ್ಲಾ ಹೋರಾಡಿ ಅವರನ್ನು ಓಡಿಸಿದ ಬಳಿಕ, ನಮ್ಮನ್ನು ದೋಚುವ ಕೈಗಳು ಬದಲಾಗಿವೆಯೇ ಹೊರತು ದರೋಡೆ ನಿಂತಿಲ್ಲ. ಪ್ರಜಾಪ್ರಭುತ್ವದ ಹೆಸರಲ್ಲಿ ಪ್ರಜೆಗಳನ್ನು ದೋಚುವ ಕೆಲಸವನ್ನು ವಿದೇಶಿಯರಿಂದ ಕಿತ್ತು ಬೆರಳೆಣಿಕೆಯ ಸ್ವದೇಶಿ ದರೋಡೆಕೋರರಿಗೆ ಒಪ್ಪಿಸಿದಂತಾಗಿದೆ, ಅಷ್ಟೇ. ಇನ್ನಷ್ಟು ಅಪಾಯಕಾರಿ ಬೆಳವಣಿಗೆಯೇನೆಂದರೆ, ಕೆಲವು ದಶಕಗಳಿಂದ ಪ್ರಜಾಪ್ರಭುತ್ವದ ಮುಖವಾಡ ಧರಿಸಿ ಪ್ರಜೆಗಳನ್ನು ದೋಚುವ ಮತ್ತು ದಮನಿಸುವ ಕಾರ್ಯದಲ್ಲಿ ನಿರತರಾಗಿದ್ದ ವ್ಯವಸ್ಥೆಯ ನಿಯಂತ್ರಕರು, ಇಂದು ಪ್ರಜಾಪ್ರಭುತ್ವವನ್ನು ಅಧಿಕೃತವಾಗಿಯೇ ಮುಗಿಸಿಬಿಡುವ ಸಿದ್ಧತೆಯಲ್ಲಿದ್ದಾರೆ. ಪ್ರಜಾಸತ್ತೆಯ ಒಂದೊಂದೇ ಸ್ತಂಭವನ್ನು ಹಾಗೂ ವ್ಯವಸ್ಥೆಯ ರಕ್ಷಣೆಗಿರುವ ಎಲ್ಲ ಸಂಸ್ಥೆಗಳನ್ನು ಕೆಡವಿ ಹಾಕುತ್ತಿದ್ದಾರೆ. ನ್ಯಾಯಾಂಗ, ತನಿಖಾ ಸಂಸ್ಥೆಗಳು ಮಾತ್ರವಲ್ಲ ಸಾಕ್ಷಾತ್ ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಧ್ವಂಸಗೊಳಿಸಿದ್ದಾರೆ. ಪ್ರಜೆಗಳ ಮೂಲಭೂತ ಮಾನವೀಯ ಹಕ್ಕುಗಳನ್ನು, ಪ್ರಜೆಗಳ ಸ್ವಾತಂತ್ರ್ಯ ಮತ್ತು ಪ್ರಾಥಮಿಕ ಅಧಿಕಾರಗಳನ್ನು ಕಿತ್ತುಕೊಳ್ಳುವ ಪ್ರಕ್ರಿಯೆ ಅಬಾಧಿತವಾಗಿ ನಡೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಈ ಜನವಿರೋಧಿ ಪ್ರಕ್ರಿಯೆಯನ್ನು ಪ್ರಬಲವಾಗಿ ವಿರೋಧಿಸುವುದು ಮತ್ತು ಬೇರೆಲ್ಲ ಕೆಲಸಗಳನ್ನು ಬದಿಗಿಟ್ಟು, ಪ್ರಜಾಸತ್ತೆಯ ಪರವಾಗಿ ಜನಾಭಿಪ್ರಾಯವನ್ನು ಮತ್ತು ಆ ಮೂಲಕ ಜನಾಂದೋಲನವನ್ನು ರೂಪಿಸುವುದು ಮಾಧ್ಯಮ ಕ್ಷೇತ್ರದ ಕರ್ತವ್ಯವಾಗಿತ್ತು. ಆದರೆ ಆ ಕ್ಷೇತ್ರದ ಒಂದು ದೊಡ್ಡ ವಿಭಾಗವು ತನ್ನ ಕರ್ತವ್ಯವನ್ನು ಮರೆತು ಜನವಿರೋಧಿ ಸಂಚಿನಲ್ಲಿ ಸಕ್ರಿಯ ಪಾಲುದಾರನಾಗಿ ಬಿಟ್ಟಿದೆ. ಇಂತಹ ಸನ್ನಿವೇಶದಲ್ಲಿ ಮಾಧ್ಯಮಗಳನ್ನು ತಿದ್ದಬೇಕಾದ ಮತ್ತು ಮಡಿಲಮಾಧ್ಯಮಗಳನ್ನು ಮಡಿಲಿಂದ ಇಳಿಸಬೇಕಾದ ಕರ್ತವ್ಯ ಮಾಧ್ಯಮಗಳ ಗ್ರಾಹಕರು ಮತ್ತು ಬಳಕೆದಾರರ ಮೇಲಿದೆ. ವ್ಯವಸ್ಥೆಯನ್ನು ಆರೋಗ್ಯಕರ ಸ್ಥಿತಿಯಲ್ಲಿಡಬೇಕಿದ್ದರೆ ವ್ಯವಸ್ಥೆಯ ಎಲ್ಲ ಹಿತಚಿಂತಕರು ಈ ಕಾರ್ಯದ ಕಡೆಗೆ ತುರ್ತಾಗಿ ಗಮನ ಹರಿಸಬೇಕಾಗಿದೆ.
ಕ್ರಮೇಣ ಮುದ್ರಣ ಮಾಧ್ಯಮಗಳ ಔಚಿತ್ಯವು ಸೀಮಿತವಾಗುತ್ತಿರುವುದನ್ನು ನಿಮ್ಮ ವಾರ್ತಾಭಾರತಿ ತಂಡವು ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದಲೇ ಅದು ತನ್ನ ಕಾರ್ಯಕ್ಷೇತ್ರವನ್ನು ಸಾಮೂಹಿಕ ಸಂವಹನದ ಅತ್ಯಾಧುನಿಕ ಉಪಾಧಿಗಳು ಮತ್ತು ವೇದಿಕೆಗಳಿಗೆ ವಿಸ್ತರಿಸಿಕೊಂಡಿದೆ. ನಮ್ಮ ಅಭಿಮಾನಿ ವಲಯವು ಈಗಾಗಲೇ ಗುರುತಿಸಿರುವಂತೆ, ಇಂದು ವಾರ್ತಾಭಾರತಿಯ ಮುದ್ರಿತ ಪ್ರತಿಗಳಿಗೆ ಹೋಲಿಸಿದರೆ ಅದರ ಡಿಜಿಟಲ್ ಮತ್ತು ಆನ್ ಲೈನ್ ಆವೃತ್ತಿಗಳು ಹತ್ತಾರು ಪಾಲು ಹೆಚ್ಚಿನ ಮಂದಿಗೆ ನಿತ್ಯ ತಲುಪುತ್ತಿವೆ. ನಮ್ಮ ಸಮೀಕ್ಷೆಯ ಪ್ರಕಾರ ಇಂದು ಜಾಗತಿಕ ಕನ್ನಡ ಸಮುದಾಯದ ನಿತ್ಯ ಮಿತ್ರನಾಗಿರುವ ವಾರ್ತಾಭಾರತೀಯ ಓದುಗರಲ್ಲಿ ಹೊಸತಲೆಮಾರಿನವರ ಸಂಖ್ಯೆಯೇ ಅತ್ಯಧಿಕವಾಗಿದೆ. varthabharati.in ವೆಬ್ ಸೈಟ್ ಮೂಲಕ ನಿತ್ಯ ಸರಾಸರಿ ಸುಮಾರು ಒಂದೂವರೆ ಲಕ್ಷ ಮಂದಿ ನಮ್ಮನ್ನು ಓದುತ್ತಾರೆ. english.varthabharati.in ಎಂಬ ನಮ್ಮ ಇಂಗ್ಲಿಷ್ ಆವೃತ್ತಿಯ ಮೂಲಕ ನಾವು ಪ್ರತಿದಿನ ಜಗತ್ತಿನ ಹಲವಾರು ದೇಶಗಳಲ್ಲಿರುವ ಓದುಗರನ್ನು ತಲುಪುತ್ತಿದ್ದೇವೆ. ಫೇಸ್‌ಬುಕ್‌ನಲ್ಲಿ ವಾರ್ತಾಭಾರತಿಗೆ 10 ಲಕ್ಷಕ್ಕಿಂತ ಹೆಚ್ಚಿನ ಮತ್ತು ಇನ್‌ಸ್ಟಾಗ್ರಾಂನಲ್ಲಿ 2 ಲಕ್ಷಕ್ಕಿಂತ ಹೆಚ್ಚು ಫಾಲೊವರ್‌ಗಳಿದ್ದಾರೆ. ಯೂಟ್ಯೂಬ್‌ನಲ್ಲಿ ವಾರ್ತಾಭಾರತಿ ಚಾನೆಲ್‌ನ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ 7.25 ಲಕ್ಷವನ್ನು ಮೀರಿದೆ. ತನ್ನ ಎಕ್ಸ್ ಖಾತೆ, ವಾಟ್ಸ್‌ಆಪ್ ಚಾನೆಲ್, ಟೆಲಿಗ್ರಾಂ ಚಾನೆಲ್ ಮತ್ತು ಪಾಡ್ ಕಾಸ್ಟ್ ಇತ್ಯಾದಿ ವೇದಿಕೆಗಳ ಮೂಲಕವೂ ವಾರ್ತಾಭಾರತಿಯು ಪ್ರತಿದಿನ ಹಲವಾರು ಬಾರಿ ಜಗತ್ತಿನೆಲ್ಲೆಡೆಯ ತನ್ನ ಲಕ್ಷಾಂತರ ಓದುಗರು ಮತ್ತು ವೀಕ್ಷಕರ ಕೈಸೇರುತ್ತಿದೆ. globalkannadiga.com ವೆಬ್‌ಸೈಟ್ ಮೂಲಕ ವಾರ್ತಾ ಭಾರತಿಯು ಜಾಗತಿಕ ಕನ್ನಡಿಗ ಸಮುದಾಯದ ಜೊತೆ ಸತತ ಸಂಪರ್ಕದಲ್ಲಿದೆ.
ಈ ಸಂದರ್ಭದಲ್ಲಿ ನಮ್ಮೆಲ್ಲಾ ಬೆಂಬಲಿಗರು ಸಂಭ್ರಮಿಸುವುದಕ್ಕೆ ಒಂದು ಸಿಹಿಸುದ್ದಿ ಇಲ್ಲಿದೆ. ಉತ್ತರ ಕರ್ನಾಟಕದ ತನ್ನ ಓದುಗರು ಮತ್ತು ಅಭಿಮಾನಿಗಳ ಬಹುಕಾಲದ ಬೇಡಿಕೆಗೆ ಸ್ಪಂದಿಸಿ ವಾರ್ತಾಭಾರತಿಯು ಶೀಘ್ರವೇ ತನ್ನ ಕಲಬುರಗಿ ಆವೃತ್ತಿಯನ್ನು ಬಿಡುಗಡೆಗೊಳಿಸಲಿದೆ. ಅದಕ್ಕಾಗಿ ಸಿದ್ಧತೆಗಳು ಭರದಿಂದ ನಡೆದಿವೆ. ಪತ್ರಿಕೆಯ ಅಭಿಮಾನಿಗಳೆಲ್ಲಾ ಆ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಅದರ ಯಶಸ್ಸಿಗಾಗಿ ನಮ್ಮೆಲ್ಲ ಹಿತೈಷಿಗಳು ಮತ್ತು ವಿಶೇಷವಾಗಿ ಕಲ್ಯಾಣಕರ್ನಾಟಕದ ನಮ್ಮ ಬೆಂಬಲಿಗರು ಸಕ್ರಿಯ ಸಹಾಯ ಮತ್ತು ಸಹಕಾರವನ್ನು ಒದಗಿಸಬೇಕೆಂದು ಕೇಳಿಕೊಳ್ಳುತ್ತಿದ್ದೇವೆ.
22 ವರ್ಷಗಳ ತನ್ನ ಪ್ರಯಾಣದುದ್ದಕ್ಕೂ ಸತ್ಯ ಮತ್ತು ನ್ಯಾಯಕ್ಕೆ ತನ್ನ ಬದ್ಧತೆ, ಜನಪರ ನಿಲುವು, ಸಾಮಾಜಿಕ ಕಳಕಳಿ, ಸಂವೇದನಾಶೀಲತೆ ಮತ್ತು ಸಮಷ್ಟಿ ಹಿತದ ಬಗೆಗಿನ ತನ್ನ ಕಾಳಜಿಗಾಗಿ ಗುರುತಿಸಲ್ಪಟ್ಟಿರುವ ಈ ನಿಮ್ಮ ಸಮಗ್ರ ಮಾಧ್ಯಮ ಮಿತ್ರ, ಮುಂದಿನ ದಿನಗಳಲ್ಲೂ ತನ್ನ ಘೋಷಿತ ಗುರಿಯೆಡೆಗೆ ದಿಟ್ಟವಾಗಿ ಮುನ್ನಡೆಯುತ್ತಿರುತ್ತದೆ. ಈ ಪ್ರಯಾಣದಲ್ಲಿ ಹಿಂದಿನಂತೆ ಮುಂದೆಯೂ ನೀವೆಲ್ಲಾ ಹೆಜ್ಜೆಹೆಜ್ಜೆಗೂ ನಮ್ಮ ತಂಡದ ಜೊತೆಗಿರುತ್ತೀರಿ ಎಂದು ನಿರೀಕ್ಷಿಸುತ್ತೇವೆ.







