ಸ್ಫೋಟಕ ಸ್ಥಿತಿಯಲ್ಲಿ ಹಾರ್ಮುಝ್ ಸಂಧಿ!

Photo Credit : NDTV
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಇರಾನ್-ಅಮೆರಿಕ ನಡುವಿನ ಮಾತುಕತೆ ವಿಫಲಗೊಂಡಿದ್ದು, ಮಧ್ಯಪ್ರಾಚ್ಯ ಸಂಘರ್ಷ ಇನ್ನಷ್ಟು ಉಲ್ಬಣಿಸುವ ಸೂಚನೆಗಳು ಕಾಣಿಸುತ್ತಿವೆ. ಈವರೆಗೆ ಅಮೆರಿಕ-ಇರಾನ್-ಇಸ್ರೇಲ್ಗೆ ಸೀಮಿತವಾಗಿದ್ದ ಯುದ್ಧ ಟ್ರಂಪ್ ಅವರ ಇತ್ತೀಚಿನ ಘೋಷಣೆಯಿಂದ ಇತರ ದೇಶಗಳಿಗೂ ವಿಸ್ತರಿಸುವ ಸಾಧ್ಯತೆಗಳಿವೆ. ಇರಾನ್ನ ಬಂದರುಗಳಿಗೆ ಸಾಗುವ ಸಮುದ್ರ ಮಾರ್ಗಗಳನ್ನು ನಿರ್ಬಂಧಿಸಲು ಅಮೆರಿಕ ಮುಂದಾಗಿದೆ. ಇರಾನ್ಗೆ ಸುಂಕ ಪಾವತಿಸುವ ಯಾವುದೇ ಹಡಗನ್ನು ಅಂತರ್ರಾಷ್ಟ್ರೀಯ ಸಮುದ್ರದಲ್ಲಿ ತಡೆಯಲು ಹೊರಟಿದೆ. ಇರಾನ್ ವಿರುದ್ಧದ ಯುದ್ಧದಲ್ಲಿ ಇತರ ದೇಶಗಳು ತನ್ನ ಜೊತೆಗೆ ಸೇರಿಕೊಳ್ಳಬೇಕು ಎನ್ನುತ್ತಿದ್ದ ಅಮೆರಿಕ, ಇದೀಗ ಹಾರ್ಮುಝ್ ಜಲಸಂಧಿಗೆ ತಾನೂ ದಿಗ್ಬಂಧನವನ್ನು ಹೇರಿ ತಟಸ್ಥ ದೇಶಗಳನ್ನು ‘ಬ್ಲಾಕ್ಮೇಲ್’ ಮಾಡಲು ಹೊರಟಿದೆ. ಇರಾನ್ನಿಂದ ತೈಲ ಖರೀದಿಸುತ್ತಿದ್ದ ದೇಶಗಳು ಈ ಯುದ್ಧದಲ್ಲಿ ಅನಿವಾರ್ಯವಾಗಿ ಭಾಗಿಯಾಗಬೇಕಾದ ಸನ್ನಿವೇಶ ಸೃಷ್ಟಿಸುತ್ತಿದೆ. ಈಗಾಗಲೇ ಅಮೆರಿಕದ ನಿರ್ಧಾರವನ್ನು ಚೀನಾ ವಿರೋಧಿಸಿದೆ. ‘‘ಇರಾನ್ನೊಂದಿಗೆ ಚೀನಾದ ಸಂಬಂಧಗಳಲ್ಲಿ ಅಮೆರಿಕ ಮಧ್ಯ ಪ್ರವೇಶಿಸಬಾರದು. ನಮ್ಮ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬೇಡಿ. ಇರಾನ್ನೊಂದಿಗೆ ವ್ಯಾಪಾರ ಮತ್ತು ಇಂಧನ ಬದ್ಧತೆಗಳನ್ನು ಚೀನಾ ಗೌರವಿಸುತ್ತದೆ. ಹಾರ್ಮುಝ್ ಪ್ರದೇಶದಲ್ಲಿ ಬಾಹ್ಯ ಹಸ್ತಕ್ಷೇಪವನ್ನು ಸಹಿಸುವುದಿಲ್ಲ ’’ಎಂದು ಚೀನಾ ಹೇಳಿಕೊಂಡಿದೆ. ಚೀನಾದ ಹಡಗುಗಳ ಮೇಲೇನಾದರೂ ಅಮೆರಿಕ ದಾಳಿ ನಡೆಸಿದ್ದೇ ಆದರೆ, ಯುದ್ಧದ ಸ್ವರೂಪ ಇನ್ನಷ್ಟು ಭೀಕರವಾಗಬಹುದಾಗಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಮೂರನೇ ಮಹಾಯುದ್ಧವೊಂದಕ್ಕೆ ವೇದಿಕೆಯನ್ನು ಸೃಷ್ಟಿಸಲು ಹೊರಟಿದ್ದಾರೆಯೇ ಎಂದು ವಿಶ್ವ ಆತಂಕ ಪಡುವಂತಾಗಿದೆ.
ಅಮೆರಿಕದ ಪಾಲಿಗೆ ಮಾತುಕತೆಯೆಂದರೆ, ತಾನು ಶರತ್ತುಗಳನ್ನು ವಿಧಿಸುವುದು ಮತ್ತು ಇರಾನ್ ಅದನ್ನು ಒಪ್ಪಿಕೊಳ್ಳುವುದು. ಮಾತುಕತೆಯಿಂದ ಯುದ್ಧವನ್ನು ತಡೆಯಬಹುದು ಎನ್ನುವುದಾಗಿದ್ದರೆ ಒಮಾನ್ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆ ವಿಫಲವಾಗುತ್ತಿರಲಿಲ್ಲ. ಈ ಮಾತುಕತೆಯಲ್ಲಿ ಅಮೆರಿಕ ಒಡ್ಡಿದ ಬಹುತೇಕ ಶರತ್ತುಗಳನ್ನು ಇರಾನ್ ಒಪ್ಪಿತ್ತು. ಆದರೆ ಮಾತುಕತೆಯು ಯಶಸ್ವಿಯಾಗುವುದು ಸ್ವತಃ ಅಮೆರಿಕಕ್ಕಾಗಲಿ, ಇಸ್ರೇಲ್ಗಾಗಲಿ ಬೇಕಾಗಿರಲಿಲ್ಲ. ಮಾತುಕತೆ ತಾರ್ಕಿಕ ಹಂತ ತಲುಪುವ ಮುನ್ನವೇ ಇಸ್ರೇಲ್ ಇರಾನ್ನ ಮೇಲೆ ದಾಳಿ ನಡೆಸಿತು. ಆ ದಾಳಿಯ ಉದ್ದೇಶ, ಇರಾನ್ನ ಸರ್ವೋಚ್ಚ ನಾಯಕ ಸೇರಿದಂತೆ ಮೇಲ್ ಸ್ತರದ ಎಲ್ಲ ನಾಯಕರನ್ನು ಕೊಂದು ತಮಗೆ ಬೇಕಾದ ಸರಕಾರವನ್ನು ರಚಿಸಿ ಇರಾನ್ ಮೇಲೆ ನಿಯಂತ್ರಣವನ್ನು ಸಾಧಿಸುವುದಾಗಿತ್ತು. ಆದರೆ ಅಮೆರಿಕದ ಲೆಕ್ಕಾಚಾರ ಬುಡಮೇಲಾಯಿತು. ತನ್ನೆಲ್ಲ ನಾಯಕರನ್ನು ಕಳೆದುಕೊಂಡ ಬಳಿಕವೂ ಇರಾನ್ ಶರಣಾಗಲಿಲ್ಲ ಮಾತ್ರವಲ್ಲ, ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಂಘಟಿತವಾಗಿ ಅಮೆರಿಕಕ್ಕೆ ಉತ್ತರಿಸಿತು. ಹಾರ್ಮುಝ್ ಜಲಸಂಧಿಯನ್ನು ಮುಂದಿಟ್ಟುಕೊಂಡು ಇರಾನ್ ಹೂಡಿದ ಯುದ್ಧ ತಂತ್ರ ಅಮೆರಿಕವನ್ನು ಇಕ್ಕಟ್ಟಿಗೆ ಸಿಲುಕಿಸಿತು. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯು, ಇರಾನ್ನ್ನು ತನ್ನ ಮೂಗಿನ ನೇರಕ್ಕೆ ಬಗ್ಗಿಸಲು ಅಮೆರಿಕ ಮಾಡಿದ ಮುಂದುವರಿದ ಪ್ರಯತ್ನವಾಗಿತ್ತು. ಇರಾನ್-ಅಮೆರಿಕದ ನಡುವಿನ ಯುದ್ಧಕ್ಕೆ ಪಾಕಿಸ್ತಾನ ಮಧ್ಯಸ್ಥಿಕೆಯನ್ನು ವಹಿಸಿಕೊಳ್ಳುವ ಯಾವುದೇ ನೈತಿಕ ಅರ್ಹತೆಯನ್ನು ಹೊಂದಿರಲಿಲ್ಲ. ಸ್ವತಃ ಭಯೋತ್ಪಾದನೆಯ ಸಂತ್ರಸ್ತ ದೇಶವಾಗಿರುವ, ಇರಾನ್ ವಿರುದ್ಧದ ಯುದ್ಧದಲ್ಲಿ ಮಾನಸಿಕವಾಗಿ ಅಮೆರಿಕದ ಜೊತೆಗಿರುವ ಪಾಕಿಸ್ತಾನವನ್ನು ಇರಾನ್ ಪೂರ್ಣ ಪ್ರಮಾಣದಲ್ಲಿ ನಂಬಿಯೂ ಇಲ್ಲ. ಆದರೆ ಯುದ್ಧವನ್ನು ನಿಲ್ಲಿಸುವ ಯಾವುದೇ ಪ್ರಯತ್ನಗಳನ್ನು ಸ್ವಾಗತಿಸುವುದು ಇರಾನ್ಗೆ ಅನಿವಾರ್ಯವಾಗಿತ್ತು. ಆದರೆ ಮಾತುಕತೆಯ ಹೆಸರಿನಲ್ಲಿ ಅಮೆರಿಕ ಮತ್ತೆ ಶರತ್ತುಗಳನ್ನು ಮುಂದಿಟ್ಟಿತು. ಅದನ್ನು ಯಥಾವತ್ ಪಾಲಿಸುವ ಮೂಲಕ ಯುದ್ಧ ನಿಲ್ಲಿಸುವುದಾಗಿದ್ದರೆ ಇರಾನ್ನ ಈವರೆಗಿನ ಬಲಿದಾನಗಳಿಗೆ ಯಾವ ಅರ್ಥವೂ ಉಳಿಯುವುದಿಲ್ಲ. ಇದೀಗ ಟ್ರಂಪ್ ಈ ಯುದ್ಧವನ್ನು ಪ್ರತಿಷ್ಠೆಯ ಪ್ರಶ್ನೆಯಾಗಿಸಿಕೊಂಡು ಇನ್ನಷ್ಟು ದಯನೀಯ ಸ್ಥಿತಿಗೆ ತಲುಪಿದ್ದಾರೆ. ಅಮೆರಿಕ ಯುದ್ಧಕ್ಕೆ ಸಂಬಂಧಿಸಿ ಜಗತ್ತಿನ ಅನುಕಂಪವನ್ನು ಸಂಪೂರ್ಣ ಕಳೆದುಕೊಂಡಿದೆ ಮಾತ್ರವಲ್ಲ, ನಿಧಾನಕ್ಕೆ ಬೇರೆ ಬೇರೆ ದೇಶಗಳಿಂದ ಪ್ರತಿರೋಧದ ಮಾತುಗಳನ್ನು ಎದುರಿಸುತ್ತಿದೆ.
ಯುದ್ಧದ ವಿರುದ್ಧ ಪೋಪ್ ನೀಡಿದ ಹೇಳಿಕೆಯನ್ನು ವಿರೋಧಿಸುವ ಭರದಲ್ಲಿ ತನ್ನನ್ನು ತಾನೇ ಜೀಸಸ್ನ ಅವತಾರವಾಗಿ ಬಿಂಬಿಸಲು ಹೊರಟು ಟ್ರಂಪ್ ಜಗತ್ತಿನ ಮುಂದೆ ತಮಾಷೆಗೀಡಾಗಿದ್ದಾರೆ. ಇರಾನ್ನಲ್ಲಿ 150ಕ್ಕೂ ಅಧಿಕ ಮಕ್ಕಳ ಸಹಿತ 2000ಕ್ಕೂ ಅಧಿಕ ನಾಗರಿಕರನ್ನು ಕೊಂದು ಆ ಕಳಂಕವನ್ನು ಟ್ರಂಪ್ ಜೀಸಸ್ನ ಮುಖಕ್ಕೆ ಒರೆಸುವ ಪ್ರಯತ್ನ ನಡೆಸಿದ್ದು ಜಾಗತಿಕವಾಗಿ ಕ್ರೈಸ್ತರನ್ನು ಆಕ್ರೋಶಕ್ಕೀಡು ಮಾಡಿದೆ. ಟ್ರಂಪ್ ಪೋಪ್ಗಷ್ಟೇ ಅಲ್ಲ, ಸ್ವತಃ ಜೀಸಸ್ನ್ನೂ ಅವಮಾನಿಸಿದ್ದಾರೆ. ಇಟಲಿಯೂ ಟ್ರಂಪ್ ಹೇಳಿಕೆಯನ್ನು ಟೀಕಿಸಿದೆ. ಮಾತ್ರವಲ್ಲ, ಇಸ್ರೇಲ್ ಜೊತೆಗಿನ ರಕ್ಷಣಾ ಒಪ್ಪಂದದ ನವೀಕರಣವನ್ನು ಸ್ಥಗಿತಗೊಳಿಸಿದೆ. ನೇಟೋ ದೇಶಗಳ ಮೌನವೂ ಅಮೆರಿಕದ ಪಾಲಿಗೆ ಒಂದು ಪ್ರತಿರೋಧವೇ ಆಗಿದೆ. ಆ ಮೌನವನ್ನು ಮುರಿಯುವುದಕ್ಕಾಗಿಯೇ ಟ್ರಂಪ್ ಹಾರ್ಮುಝ್ ಮೇಲೆ ನಿಯಂತ್ರಣವನ್ನು ಘೋಷಿಸಿದ್ದಾರೆ. ಆದರೆ ಈ ಘೋಷಣೆ ಟ್ರಂಪ್ಗೆ ಇನ್ನಷ್ಟು ಸವಾಲುಗಳನ್ನು ಒಡ್ಡಲಿದೆ. ನಾಳೆ ಚೀನಾ ಹಡಗುಗಳ ಮೇಲೇನಾದರೂ ಅಮೆರಿಕ ದಾಳಿ ನಡೆಸಿದ್ದೇ ಆದರೆ, ಚೀನಾವು ನೇರವಾಗಿಯೇ ಇರಾನ್ ಪರವಾಗಿ ಯುದ್ಧಕ್ಕೆ ಇಳಿಯಲಿದೆ. ಬರೇ ಇರಾನ್ನ ದಾಳಿಯಿಂದಲೇ ಸುಸ್ತಾಗಿ ಕೂತಿರುವ ಅಮೆರಿಕವು, ದಾರಿಯಲ್ಲಿ ಹೋಗುವ ಚೀನಾವನ್ನು ತಾನಾಗಿಯೇ ಮೈಮೇಲೆ ಎಳೆದುಕೊಳ್ಳಲು ಮುಂದಾಗಿದೆ. ಹಾರ್ಮುಝ್ನಲ್ಲಿ ಯಾವುದೇ ಹಡಗುಗಳು ಹಾದು ಹೋಗಲು ಅಮೆರಿಕ ಅಡ್ಡಿಯಾದರೆ ರಶ್ಯ ಕೂಡ ಮಾತನಾಡುವುದು ಅನಿವಾರ್ಯವಾಗುತ್ತದೆ. ಟ್ರಂಪ್ ಲೆಕ್ಕಾಚಾರ ಮತ್ತೆ ಬುಡಮೇಲಾಗುವ ಎಲ್ಲ ಸಾಧ್ಯತೆಗಳಿವೆ.
ಈ ಯುದ್ಧದಲ್ಲಿ ಇತರ ದೇಶಗಳು ನೇರವಾಗಿ ಪಾಲುಗೊಳ್ಳದೇ ಇದ್ದರೂ, ಅದರ ಪರಿಣಾಮವನ್ನು ಈಗಾಗಲೇ ಅನುಭವಿಸುತ್ತಿವೆ. ಈ ಸಂಘರ್ಷದ ಪರಿಣಾಮವಾಗಿ ವಿಶ್ವಾದ್ಯಂತ ಬಡತನಕ್ಕೆ ತಳ್ಳಲ್ಪಡುವವರ ಸಂಖ್ಯೆ ಸುಮಾರು 88 ಲಕ್ಷಕ್ಕೆ ಏರುವ ಸಾಧ್ಯತೆಗಳಿವೆ ಎಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ. ದಕ್ಷಿಣ ಏಶ್ಯದಲ್ಲಿ ಅತ್ಯಂತ ಹೆಚ್ಚು ಅಂದರೆ 80 ಲಕ್ಷಕ್ಕೂ ಅಧಿಕ ಜನರು ಬಡತನದ ಸುಳಿಯಲ್ಲಿ ಸಿಲುಕಲಿದ್ದಾರೆ ಎಂದು ಅದು ಹೇಳುತ್ತಿದೆ. ಭಾರತವೊಂದರಲ್ಲೇ 25 ಲಕ್ಷ ಭಾರತೀಯರನ್ನು ಬಡತನದ ಕೂಪಕ್ಕೆ ತಳ್ಳುವ ಸಾಧ್ಯತೆಯಿದೆ. ಇದು ಆರಂಭ ಮಾತ್ರ. ಟ್ರಂಪ್ ಹುಚ್ಚಾಟಗಳಿಗೆ ಜಗತ್ತು ಕಡಿವಾಣ ಹಾಕದೇ ಇದ್ದರೆ ಇದು ಇನ್ನಷ್ಟು ಭೀಕರವಾಗಲಿದೆ. ಸ್ವತಃ ಅಮೆರಿಕ ಕೂಡ ಇದರ ಫಲವನ್ನು ಉಣ್ಣುವ ಸ್ಥಿತಿ ನಿರ್ಮಾಣವಾಗಬಹುದು. ಇತಿಹಾಸದಲ್ಲಿ ಹಿಟ್ಲರ್ನ ಸ್ಥಾನವನ್ನು ತುಂಬಲು ಆತುರದಲ್ಲಿರುವ ಟ್ರಂಪ್, ಇಡೀ ಜಗತ್ತನ್ನೇ ಶಿಲಾಯುಗದ ಕಡೆಗೆ ಕೊಂಡೊಯ್ಯುವ ಆತುರದಲ್ಲಿದ್ದಾರೆ.






