ಹಠಾತ್ ಕುಸಿದು ಸಾವು: ನಿಜವಾದ ಅಪರಾಧಿ ಯಾರು?

ಸಾಂದರ್ಭಿಕ ಚಿತ್ರ photo: freepik
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿ ಆರ್ ಬಿ)ಯು ದೇಶದಲ್ಲಿ ಹೆಚ್ಚುತ್ತಿರುವ ಅಪರಾಧ ಸಂಖ್ಯೆಗಳ ಬಗ್ಗೆ ಗಮನ ಸೆಳೆದಿದೆ. ಯಾವ ನಗರಗಳಲ್ಲಿ ಹೆಚ್ಚು ಅಪರಾಧಗಳು ನಡೆಯುತ್ತವೆ, ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಯಾವ ರಾಜ್ಯ ಕುಖ್ಯಾತ, ಎಲ್ಲಿ ಹೆಚ್ಚು ದರೋಡೆಗಳು ಹೆಚ್ಚು ನಡೆದಿವೆ ಇವೆಲ್ಲವುಗಳಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಅದು ಬಿಡುಗಡೆ ಮಾಡಿದೆ. ಇದೇ ಹೊತ್ತಿಗೆ ಈ ದೇಶದಲ್ಲಿ ಸಂಭವಿಸುತ್ತಿರುವ ನಿಗೂಢ ಸಾವುಗಳ ಬಗ್ಗೆಯೂ ಎನ್ಸಿಆರ್ಬಿ ಅಂಕಿಅಂಶಗಳು ಹೊರಬಿದ್ದಿವೆ. ಆದರೆ ಇದನ್ನು ಅಪರಾಧವೆಂದು ಕರೆಯಬೇಕೋ, ಅಪಘಾತವೆಂದು ಕರೆಯಬೇಕೋ ಅಥವಾ ಸಹಜ ಸಾವು ಎಂದು ಗುರುತಿಸಬೇಕೋ ಎನ್ನುವುದರ ಬಗ್ಗೆ ಸರಕಾರದೊಳಗೂ, ವೈದ್ಯಕೀಯ ವಲಯದೊಳಗೂ ಗೊಂದಲಗಳಿವೆ. ಯುವಕರು ಏಕಾಏಕಿ ಕುಸಿದು ಬಿದ್ದು ಸಂಭವಿಸುವ ಸಾವಿನ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗುತ್ತಿದೆಯಾದರೂ, ಇದಕ್ಕಾಗಿ ಯಾರನ್ನು ಹೊಣೆ ಮಾಡಬೇಕು, ಈ ಸಾವಿನ ಹಿಂದಿರುವ ನಿಜವಾದ ಅಪರಾಧಿ ಯಾರು? ಎನ್ನುವುದನ್ನು ತೀರ್ಮಾನಿಸಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ.
2017ರಿಂದೀಚೆಗೆ ದುಡಿಯುವ ವಯಸ್ಸಿನ ಅಂದರೆ 60 ವರ್ಷದ ಒಳಗಿನ ಪುರುಷರಲ್ಲಿ ಹೃದಯಾಘಾತವಲ್ಲದ, ಹಠಾತ್ ಸಾವಿನ ಪ್ರಕರಣಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ ಎಂದು ಎನ್ಸಿಆರ್ಬಿ ಅಂಕಿಅಂಶಗಳು ಹೇಳುತ್ತವೆ. ದಾಖಲೆಗಳ ಪ್ರಕಾರ ಇದು 9,127ರಿಂದ ಏಕಾಏಕಿ 19,088ಕ್ಕೆ ಏರಿಕೆಯಾಗಿದೆ. ಪ್ರತಿದಿನ 52 ಹಠಾತ್ ಆಗಿ ಸಾಯುವ ಪ್ರಕರಣಗಳು ವರದಿಯಾಗುತ್ತಿವೆ. ಇದು ಹಿಂದೆ ಇದ್ದುದಕ್ಕಿಂತ ಶೇ. 25ರಷ್ಟು ಅಧಿಕ ಎಂದು ವರದಿ ಸ್ಪಷ್ಟಪಡಿಸುತ್ತದೆ. ಹಠಾತ್ ಸಾವಿನ ಪ್ರಕರಣದಲ್ಲಿ 30-60 ವಯೋಗುಂಪಿನಲ್ಲಿ ತೀವ್ರ ಏರಿಕೆಯಾಗಿದೆ. 2024ರಲ್ಲಿ 76,024 ಮಂದಿ ಹಠಾತ್ ಸಾವಿಗೆ ಬಲಿಯಾಗಿದ್ದು, ದಶಕದಲ್ಲೇ ಇದು ಗರಿಷ್ಠವಾಗಿದೆ. ಇವರಲ್ಲಿ 48,999 ಮಂದಿ 30-60 ವರ್ಷದ ಪುರುಷರಾಗಿದ್ದಾರೆ. ಎನ್ಸಿಆರ್ಬಿ ಪ್ರಕಾರ 2023ರಲ್ಲಿ 63,609 ಮಂದಿ ಹಠಾತ್ ಸಾವಿಗೀಡಾಗಿದ್ದರೆ, 2024ರಲ್ಲಿ ಅಂತಹ ಪ್ರಕರಣಗಳಲ್ಲಿ ಶೇ. 20 ಏರಿಕೆಯಾಗಿದೆ. ಹಾಗೆಯೇ ಹೃದಯಾಘಾತದ ಸಾವಿನ ಪ್ರಕರಣಗಳಲ್ಲೂ ತೀವ್ರ ಹೆಚ್ಚಳವಾಗಿರುವುದನ್ನು ವರದಿ ಗುರುತಿಸುತ್ತದೆ. ಇದೇ ವಯಸ್ಸಿನವರಲ್ಲಿ ಹೃದಯಾಘಾತಕ್ಕೆ ಸಂಬಂಧಿಸಿದ ಹಠಾತ್ ಸಾವಿನ ಪ್ರಕರಣಗಳ ಸಂಖ್ಯೆ 14,011ರಿಂದ 23,600ಕ್ಕೆ ಏರಿಕೆಯಾಗಿದೆ. ಸಾಧಾರಣವಾಗಿ ಹೃದಯಾಘಾತದ ವಿಷಯ ಬಂದಾಗಲೆಲ್ಲ ಆಹಾರ ಪದ್ಧತಿಯನ್ನು ಹೊಣೆ ಮಾಡಲಾಗುತ್ತದೆ. ಆಹಾರ ಪದ್ಧತಿಯಲ್ಲಾದ ಬದಲಾವಣೆಗಳೇ ಹೃದಯಾಘಾತ ಹೆಚ್ಚಳಕ್ಕೆ ಕಾರಣ ಎಂದು ವೈದ್ಯರೂ ಅಭಿಪ್ರಾಯ ಪಡುತ್ತಾರೆ. ಹೆಚ್ಚುತ್ತಿರುವ ಒತ್ತಡಗಳು, ವ್ಯಾಯಾಮದ ಕೊರತೆ, ಮನೆಯ ಹೊರಗಿನ ಆಹಾರಗಳ ಸೇವನೆ, ಆಹಾರ ಸೇವನೆಯಲ್ಲಿ ಶಿಸ್ತು ಇಲ್ಲದೇ ಇರುವುದು ಇವೆಲ್ಲವೂ ಹೃದಯಾಘಾತಕ್ಕೆ ಕಾರಣವಾಗುತ್ತಿದೆ ಎಂದು ವೈದ್ಯರು ಹೇಳಿಕೆ ನೀಡುತ್ತಲೇ ಬರುತ್ತಿದ್ದಾರೆ. ಇದರಲ್ಲಿ ಸತ್ಯಾಂಶ ಇದೆ ಕೂಡ. ಇಂದು ಹೃದಯಕ್ಕೆ ಸಂಬಂಧಿಸಿ ಅತಿ ಹೆಚ್ಚು ಸಂಶೋಧನೆಗಳು ನಡೆಯುತ್ತಿವೆ. ಹೃದಯ ಶಸ್ತ್ರಕ್ರಿಯೆಯಲ್ಲೂ ಅಭೂತಪೂರ್ವ ಸಾಧನೆಗಳಾಗಿವೆ. ಇಷ್ಟಾದರೂ ಹೃದಯಾಘಾತಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿವೆ ಎನ್ನುವುದು ಕಳವಳಕಾರಿ ಸಂಗತಿಯಾಗಿದೆ. ಆದರೆ ಇಂದು ಹೆಚ್ಚು ಚರ್ಚೆಯಲ್ಲಿರುವುದು, ಹಠಾತ್ ಕುಸಿದು ಬಿದ್ದು ಸಾಯುವ ಪ್ರಕರಣಗಳು.
ಹಠಾತ್ ಕುಸಿದು ಬಿದ್ದು ಸಾಯುವ ಪ್ರಕರಣಗಳ ಬಗ್ಗೆ ಜನರು ಕಳವಳ ಪಡುವುದಕ್ಕೆ ಕಾರಣಗಳಿವೆ. ಮುಖ್ಯವಾಗಿ ಇವು ಹೃದಯಾಘಾತಗಳಲ್ಲ. ಹಾಗೆಯೇ ಸಾಯುವವರಲ್ಲಿ ಬಹುತೇಕರು ಯುವಕರು, ಮುಖ್ಯವಾಗಿ 40 ವರ್ಷದ ಒಳಗಿನವರು. ಈ ಸಾವುಗಳ ಬಗ್ಗೆ ಸರಕಾರ ಈವರೆಗೆ ಸ್ಪಷ್ಟನೆಯನ್ನು ನೀಡಿಲ್ಲ. ಇಲ್ಲೂ ಬದುಕುವ ಶೈಲಿಯನ್ನೇ ಹೊಣೆ ಮಾಡಿ ತಜ್ಞರು ಸರಕಾರವನ್ನು ರಕ್ಷಿಸುವ ಪ್ರಯತ್ನವನ್ನು ಮಾಡಿದ್ದಾರೆ. ಕೊರೋನೋತ್ತರ ದಿನಗಳಲ್ಲಿ ಇಂತಹ ಸಾವುಗಳು ಯಾಕೆ ಹೆಚ್ಚಾಗುತ್ತಿವೆ ಎನ್ನುವ ಪ್ರಶ್ನೆಯನ್ನು ಹಲವರು ಈಗಾಗಲೇ ಕೇಳಿದ್ದಾರೆ. ಸರಕಾರ ನಿರುತ್ತರವಾಗಿದೆ ಅಥವಾ ಅದರ ಬಗ್ಗೆ ಚರ್ಚಿಸುವುದೇ ಸರಕಾರಕ್ಕೆ ಇಷ್ಟವಿಲ್ಲದ ವಿಷಯವಾಗಿದೆ. ಕೊರೋನದಿಂದ ಚೇತರಿಸಿಕೊಂಡವರು ಇಂತಹ ಸಾವಿಗೆ ಬಲಿಯಾಗಬಹುದು ಎನ್ನುವ ಊಹೆಯನ್ನು ಕೆಲವರು ಮಾಡಿದ್ದಾರೆ. ಆದರೆ ಒಂದು ಗುಂಪು ಇಂತಹ ಸಾವುಗಳಿಗೆ ಸರಕಾರ ನೀಡಿರುವ ಲಸಿಕೆಯೇ ಕಾರಣವಾಗಿರಬಹುದು ಎಂದು ಅನುಮಾನ ಪಡುತ್ತಾ ಬಂದಿದೆ. ಇದಕ್ಕೆ ಕೆಲವು ಸಕಾರಣಗಳೂ ಇವೆ. ಕೊರೋನ ಲಸಿಕೆಗಳಿಂದ ಅಡ್ಡ ಪರಿಣಾಮಗಳಾಗಬಹುದು ಎನ್ನುವುದನ್ನು ಲಸಿಕೆ ತಯಾರಿಕೆಯ ಕಂಪೆನಿಗಳೇ ಒಪ್ಪಿಕೊಂಡಿವೆ. ಭಾರತದಲ್ಲಂತೂ ಆತುರಾತುರವಾಗಿ ಲಸಿಕೆಗಳನ್ನು ಹೊರ ಬಿಡಲಾಯಿತು ಮತ್ತು ಇದನ್ನು ಬಲವಂತವಾಗಿ ಜನರ ಮೇಲೆ ಹೇರಲಾಯಿತು. ‘ಈಗಾಗಲೇ ಕೊರೋನ ಬಂದು ಗುಣಮುಖರಾದವರಲ್ಲಿ ರೋಗ ಪ್ರತಿರೋಧ ಶಕ್ತಿ ಜಾಗೃತವಾಗಿರುತ್ತದೆ. ಅವರಿಗೆ ಲಸಿಕೆ ಅಗತ್ಯವಿಲ್ಲ’ ಎಂದು ತಜ್ಞರು ಹೇಳಿದರೂ ಸರಕಾರ ಅದಕ್ಕೆ ಕಿವಿಗೊಡಲಿಲ್ಲ. ದಾಖಲೆಯ ಲಸಿಕೆ ನೀಡಿರುವುದನ್ನೇ ಸಾಧನೆಯಾಗಿ ಸರಕಾರ ಸಂಭ್ರಮಿಸಿತು. ಆದರೆ ಕೊರೋನೋತ್ತರ ದಿನಗಳಲ್ಲಿ ಯುವಕರು ಯಾವುದೇ ಹೃದಯದ ಸಮಸ್ಯೆ ಇಲ್ಲದೆಯೂ ಕುಸಿದು ಬಿದ್ದು ಮೃತಪಡುವ ಸಂಖ್ಯೆ ಹೆಚ್ಚ ತೊಡಗಿದೆ. ಲಸಿಕೆಯ ದುಷ್ಪರಿಣಾಮದಿಂದ ಇದು ಸಂಭವಿಸುತ್ತಿದೆಯೇ ಎಂದು ತನಿಖೆ ನಡೆಸುವುದಕ್ಕೂ ಸರಕಾರ ಸಿದ್ಧವಿಲ್ಲ.
ಕರ್ನಾಟಕದಲ್ಲೂ ಈ ಹಠಾತ್ ಸಾವು ಸಾಕಷ್ಟು ಸುದ್ದಿ ಮಾಡಿದೆ. ರಾಜ್ಯದಲ್ಲಿ 50ರಿಂದ 70ರಷ್ಟು ಮಂದಿ ಯುವಕರೇ ಪ್ರತೀ ತಿಂಗಳು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಕಳೆದ ವರ್ಷ ಜುಲೈಯಲ್ಲಿ ಹಾಸನ ಜಿಲ್ಲೆಯಲ್ಲಿ ಬರೇ ಒಂದು ತಿಂಗಳಲ್ಲಿ 20ಕ್ಕೂ ಅಧಿಕ ಮಂದಿ ಮೃತಪಟ್ಟು ರಾಜ್ಯದಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿತು. ರಾಜ್ಯ ಸರಕಾರ ತಕ್ಷಣ ಎಚ್ಚೆತ್ತು, ಡಾ. ರವೀಂದ್ರ ನಾಥ್ ನೇತೃತ್ವದಲ್ಲಿ ಹತ್ತು ದಿನಗಳ ಒಳಗೆ ಈ ಸಂಬಂಧ ಒಂದು ವರದಿಯನ್ನು ಕೊಡಲು ಆದೇಶವನ್ನು ನೀಡಿತು. ಆದರೆ ಇಡೀ ದೇಶವನ್ನೇ ಕಳವಳಕ್ಕೀಡು ಮಾಡಿರುವ ಈ ಆರೋಗ್ಯ ಸಂಬಂಧಿತ ವಿಷಯದ ಕುರಿತಂತೆ ಕೇವಲ ಹತ್ತುದಿನಗಳಲ್ಲಿ ಸ್ಪಷ್ಠವಾದ ವರದಿಯನ್ನು ಕೊಡಲು ಹೇಗೆ ಸಾಧ್ಯ? ಸಮಿತಿಯೂ ಅಷ್ಟೇ ಆತುರದಲ್ಲಿ ವರದಿಯನ್ನು ನೀಡಿತು. ಹೃದಯಾಘಾತಗಳಿಗೆ ಜೀವನ ಶೈಲಿಯೇ ಮುಖ್ಯ ಕಾರಣ ಎಂದು ಷರಾ ಬರೆದೇ ಬಿಟ್ಟಿತು. ಅಲ್ಲಿಗೆ ಹಾಸನ ಜಿಲ್ಲೆಯಲ್ಲಿ ಸಂಭವಿಸಿದ ಸರಣಿ ಹೃದಯಾಘಾತಗಳ ಕುರಿತ ಚರ್ಚೆಯ ಬಾಯಿ ಮುಚ್ಚಲ್ಪಟ್ಟಿತು. ಈ ಸಮಿತಿಯು ಹೃದಯಾಘಾತಗಳ ಬಗ್ಗೆ ಮಾತನಾಡಿದೆ. ಆದರೆ ಯಾವುದೇ ಹೃದಯಾಘಾತ ಸಂಭವಿಸದೆ, ಹಠಾತ್ ಕುಸಿದು ಬಿದ್ದು ಸಾಯುವ ಪ್ರಕರಣಗಳ ಬಗ್ಗೆ ಯಾವುದೇ ತಜ್ಞರ ತಂಡ ಅಧ್ಯಯನ ನಡೆಸಿಲ್ಲ. ಕೋವಿಡ್ ಲಸಿಕೆಯು ಹೃದಯಾಘಾತಕ್ಕೆ ಕಾರಣವಾಗುತ್ತಿದೆಯೇ ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಕೇಂದ್ರದ ಸಚಿವರೊಬ್ಬರು ಮೂರು ವರ್ಷಗಳ ಹಿಂದೆ ಹೇಳಿಕೆ ನೀಡಿದ್ದರಾದರೂ ಆ ತನಿಖೆ ಎಲ್ಲಿಯವರೆಗೆ ಬಂತು ಎನ್ನುವುದರ ಯಾವುದೇ ವಿವರಗಳಿಲ್ಲ. ಒಂದು ವೇಳೆ ಕೋವಿಡ್ ಲಸಿಕೆಗಳಿಂದಲೇ ಈ ಸಾವುಗಳು ಸಂಭವಿಸುತ್ತವೆ ಎಂದಾದರೆ ಅದಕ್ಕೆ ಸರಕಾರ ನೇರ ಹೊಣೆಯಾಗುತ್ತದೆ. ಆದುದರಿಂದ ತನ್ನ ವಿರುದ್ಧವೇ ತನಿಖೆ ನಡೆಸಲು ಸರಕಾರ ಆದೇಶ ಹೊರಡಿಸುವುದು ಸಾಧ್ಯವಾಗುವ ಮಾತೆ? ಈ ಪ್ರಶ್ನೆಯ ಮರೆಯಲ್ಲೇ ನಿಜವಾದ ಅಪರಾಧಿ ಕಾನೂನಿನ ಕುಣಿಕೆಯಿಂದ ರಕ್ಷಿಸಲ್ಪಡುತ್ತಿದ್ದಾನೆ.






