ತನಿಖಾ ಸಂಸ್ಥೆಗಳ ಕಿವಿ ಹಿಂಡಿದ ಸುಪ್ರೀಂ ಕೋರ್ಟ್

Photo credit: PTI
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯಕ್ಕೆ (ಈ.ಡಿ.) ಸಿಕ್ಕಿರುವ ಅಪಾರ ಅಧಿಕಾರ ಮತ್ತು ಇತ್ತೀಚಿನ ವರ್ಷಗಳಲ್ಲಿ ಅದರ ದುರುಪಯೋಗವಾಗುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹವಾಗಿದೆ. ನ್ಯಾಯಮೂರ್ತಿಗಳಾದ ಎಂ. ಎಂ. ಸುಂದರೇಶ್ ಮತ್ತು ಎನ್.ಕೆ.ಸಿಂಗ್ ಪೀಠ ನೀಡಿರುವ ತೀರ್ಪು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಾಂವಿಧಾನಿಕ ಹಕ್ಕುಗಳ ರಕ್ಷಣೆ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಯಾವುದೇ ಕಾನೂನು ಎಷ್ಟೇ ಕಠಿಣವಾಗಿರಲಿ, ಆರೋಪಿ ಎಂಥವನೇ ಆಗಿರಲಿ ಜನತಂತ್ರದ ಮೂಲಭೂತ ತತ್ವವಾದ ನ್ಯಾಯ ಸಮ್ಮತ ವಿಚಾರಣೆಯ ಹಕ್ಕನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಯಾವುದೇ ಒಂದು ಆರ್ಥಿಕ ಅಪರಾಧದ ಪ್ರಕರಣವನ್ನು ವಿಶೇಷ ನ್ಯಾಯಾಲಯ ವಿಚಾರಣೆಗೆ ತೆಗೆದುಕೊಳ್ಳುವ ಮುನ್ನ ಆರೋಪಿಯ ವಾದವನ್ನು ಕೇಳುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಸೂಕ್ತವಾಗಿದೆ. ಇದರಿಂದ ಏಕಪಕ್ಷೀಯ ತನಿಖೆ ಮತ್ತು ದೌರ್ಜನ್ಯಕ್ಕೆ ದೊಡ್ಡ ಪೆಟ್ಟು ನೀಡಿದಂತಾಗಿದೆ. ಪಿಎಂಎಲ್ಎ ಒಂದು ಸ್ವತಂತ್ರ ಕಾಯ್ದೆಯನ್ನು ಹೊಂದಿರುವುದರಿಂದ ಅದಕ್ಕೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಸಿಆರ್ಪಿಸಿ ನಿಯಮಗಳು ಅನ್ವಯಿಸುವುದಿಲ್ಲ ಎಂಬ ಈ.ಡಿ. ವಾದವನ್ನು ತಳ್ಳಿ ಹಾಕಿದ ಸುಪ್ರೀಂ ಕೋರ್ಟ್ ತನಿಖಾ ಸಂಸ್ಥೆಗಳ ಇಂತಹ ವಾದಗಳು ವ್ಯಕ್ತಿಯೊಬ್ಬನ ಮೂಲಭೂತ ಹಕ್ಕುಗಳನ್ನೇ ದೋಚುವ ಅಪಾಯದ ಅಂಶಗಳನ್ನು ಹೊಂದಿರುವುದನ್ನು ಸೂಕ್ಷ್ಮವಾಗಿ ಅವಲೋಕಿಸಿದೆ.
ಯಾವುದೇ ಕಾನೂನಿನಲ್ಲಿ ಕಡ್ಡಾಯ ಎಂಬ ಪದವಿದ್ದರೆ ಅದನ್ನು ಚಾಚೂ ತಪ್ಪದೆ ಪಾಲಿಸಬೇಕು. ಯಾವುದೇ ಆರೋಪಿಯ ವಾದವನ್ನು ಕೇಳದೆ ನ್ಯಾಯಾಲಯ ವಿಚಾರಣೆ ಆರಂಭಿಸಿದರೆ ಅದು ಅಸಿಂಧು ಎನಿಸಿಕೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್ನ ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ. ಈ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆಗಳು ಹಾಗೂ ವಿಶೇಷ ನ್ಯಾಯಾಲಯಗಳು ಹೆಚ್ಚಿನ ಹೊಣೆಗಾರಿಕೆಯಿಂದ ವರ್ತಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇತ್ತೀಚಿನ ವರ್ಷಗಳಲ್ಲಿ ಅದರಲ್ಲೂ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ತನಿಖಾ ಸಂಸ್ಥೆಗಳನ್ನು ಮನ ಬಂದಂತೆ ಬಳಸಿಕೊಳ್ಳಲಾಗುತ್ತಿದೆ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜಕೀಯ ವಿರೋಧಿಗಳನ್ನು ಮಾತ್ರವಲ್ಲ ಆನಂದ್ ತೇಲ್ತುಂಬ್ಡೆ, ಕವಿ ವರವರರಾವ್ ಅವರಂತಹ ಹೆಸರಾಂತ ಲೇಖಕರನ್ನು ಹತ್ತಿಕ್ಕಲು ಜೈಲಿಗೆ ಹಾಕಿ ಕಿರುಕುಳ ಕೊಟ್ಟಿರುವುದು ಎಲ್ಲರೂ ತಿಳಿದ ಸಂಗತಿಯಾಗಿದೆ. ಬಿಜೆಪಿಯಲ್ಲಿ ಭ್ರಷ್ಟಾಚಾರದ ದುರ್ವಾಸನೆ ಬರುತ್ತಿದ್ದರೂ ಅದನ್ನು ಮುಚ್ಚಿ ಹಾಕಿ ಪ್ರತಿಪಕ್ಷ ನಾಯಕರ ಸಣ್ಣಪುಟ್ಟ ಪ್ರಕರಣಗಳನ್ನು ದೊಡ್ಡದು ಮಾಡಿ ಸಿಬಿಐ, ಜಾರಿ ನಿರ್ದೇಶನಾಲಯ, ಎನ್ಐಎ ಮೊದಲಾದ ತನಿಖಾ ಸಂಸ್ಥೆಗಳ ಮೂಲಕ ಅವರ ಮೇಲೆ ದಾಳಿ ಮಾಡುವುದು ಸಾಮಾನ್ಯವಾಗಿದೆ.ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದವರೂ ಬಿಜೆಪಿ ಸೇರಿದರೆ ಅವರನ್ನು ದೋಷ ಮುಕ್ತ ಗೊಳಿಸಲಾಗುತ್ತದೆ. ಇಂತಹ ಆರೋಪವಿರುವ ನಾರಾಯಣ ರಾಣೆ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ವಿರುದ್ಧದ ಸಿಬಿಐ ತನಿಖೆಯನ್ನು ಕೈ ಬಿಡಲಾಗಿದೆ.
ಇಂತಹ ಸಂದರ್ಭದಲ್ಲಿ ಸಂವಿಧಾನದ 21ನೇ ವಿಧಿಯ ಪ್ರಕಾರ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದು ಜನಸಾಮಾನ್ಯರಿಗೆ ನ್ಯಾಯಾಂಗದ ಮೇಲೆ ಭರವಸೆಯನ್ನು ಹೆಚ್ಚಿಸಿದೆ.
ಸಮಾಜದಲ್ಲಿ ಅಪರಾಧಗಳು ನಡೆಯದಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯ. ಅದಕ್ಕಾಗಿ ವಿಶೇಷ ಕಾನೂನುಗಳನ್ನು ರಚಿಸಲು ಯಾರ ಅಭ್ಯಂತರವೂ ಇಲ್ಲ. ಆದರೆ ಅಪರಾಧ ತಡೆಯಲು ರೂಪಿಸಿದ ಕಾನೂನುಗಳನ್ನು ಮಾನವ ಹಕ್ಕು ಪರ ಹೋರಾಟಗಾರರನ್ನು, ಅಮಾಯಕ ನಾಗರಿಕರನ್ನು ಹಾಗೂ ಪ್ರಭುತ್ವದ ಲೋಪ ದೋಷಗಳನ್ನು ಟೀಕಿಸುವ ಕವಿ, ಸಾಹಿತಿಗಳನ್ನು ವಿಚಾರಣೆಯಿಲ್ಲದೆ ಜೈಲಿಗೆ ತಳ್ಳಲು ದುರ್ಬಳಕೆ ಮಾಡಿಕೊಳ್ಳಬಾರದು. ಅಪರಾಧಿ ಎಂಬ ಆರೋಪ ಹೊತ್ತ ವ್ಯಕ್ತಿ ಅಪರಾಧ ಮಾಡಿದ್ದಾನೋ ಅಥವಾ ನಿರಾಪರಾಧಿಯೋ ಎಂಬುದನ್ನು ತೀರ್ಮಾನಿಸಲು ನ್ಯಾಯಾಲಯಕ್ಕೆ ಮುಕ್ತ ಅವಕಾಶ ಇರಬೇಕು. ಅದಕ್ಕೂ ಮೊದಲು ಪ್ರತಿಯೊಬ್ಬ ನಾಗರಿಕನಿಗೂ ಸಿಗಬೇಕಾದ ಕನಿಷ್ಠ ಮಾನವ ಹಕ್ಕು ಮತ್ತು ಶಾಸನಾತ್ಮಕ ರಕ್ಷಣೆಯನ್ನು ಖಾತರಿಪಡಿಸುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಅನಿವಾರ್ಯ. ಈ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಅಧಿಕಾರದಲ್ಲಿ ಇರುವ ಪಕ್ಷದ ಕೈಗೊಂಬೆಯಂತೆ ವರ್ತಿಸುವ ತನಿಖಾ ಸಂಸ್ಥೆಗಳ ಪ್ರಜಾಪ್ರಭುತ್ವ ವಿರೋಧಿಯಾದ ಅತಿರೇಕದ ವರ್ತನೆಗೆ ಕಡಿವಾಣ ಹಾಕಿದಂತಾಗಿದೆ.
ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಸ್ವತಂತ್ರ ತನಿಖಾ ಸಂಸ್ಥೆಗಳನ್ನು ಒಂದೆಡೆ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇನ್ನೊಂದೆಡೆ ಚುನಾವಣಾ ಆಯೋಗದಂತಹ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಗಳನ್ನು ರಾಜಕೀಯ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿದೆ. ಚುನಾವಣಾ ಆಯೋಗಕ್ಕೆ ಆಯುಕ್ತರ ನೇಮಕ ಮಾಡಲು ಈ ವರೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಮೂವರು ಸದಸ್ಯರ ಆಯ್ಕೆ ಸಮಿತಿ ಇತ್ತು. ಈಗ ಈ ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ತೆಗೆದು ಹಾಕಲಾಗಿದೆ. ಸದ್ಯ ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಸಂವಿಧಾನವನ್ನು ಇಟ್ಟುಕೊಂಡೇ ಅದನ್ನು ಯಾರಿಗೂ ಗೊತ್ತಾಗದಂತೆ ನಾಶ ಮಾಡುವ ಹಾಗೂ ಮನುವಾದಿ ಹಿಂದೂ ರಾಷ್ಟ್ರ ನಿರ್ಮಿಸುವ ಮಸಲತ್ತು ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ. ತಮ್ಮ ವ್ಯಕ್ತಿ ಸ್ವಾತಂತ್ರ್ಯ ಮತ್ತು ಜನತಂತ್ರದ ಉಳಿವಿಗಾಗಿ ಜನರು ಎಚ್ಚೆತ್ತು ಬೀದಿಗೆ ಬರಬೇಕಾಗಿದೆ. ಮತದಾರರ ಪಟ್ಟಿಯ ಪರಿಷ್ಕರಣೆಯ ಹೆಸರಿನಲ್ಲಿ ಭಾರತೀಯರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಹುನ್ನಾರ ನಡೆದಿದೆ. ಈ ಅಪಾಯಕಾರಿ ಸನ್ನಿವೇಶದಲ್ಲಿ ಜನರು ಒಂದಾಗಿ ಧ್ವನಿಯೆತ್ತದಿದ್ದರೆ ಪ್ರಜಾಪ್ರಭುತ್ವಕ್ಕೆ ಅಪಾಯ ಕಾದಿದೆ.






