ತೆರಿಗೆ ಹಂಚಿಕೆ: ಕರ್ನಾಟಕಕ್ಕೆ ಮತ್ತೆ ಅನ್ಯಾಯ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ತೆರಿಗೆ ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಮತ್ತೆ ಅನ್ಯಾಯವಾಗಿದೆ. ತೆರಿಗೆ ಪಾಲು, ನೆರೆ ಪರಿಹಾರ, ಅನುದಾನ ಹಂಚಿಕೆಯಲ್ಲಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ (ಎನ್‌ಡಿಎ) ಸರಕಾರ ಸತತವಾಗಿ ಅನ್ಯಾಯ ಮಾಡುತ್ತಲೇ ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡದಿರುವ ಬಗೆಗೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಇದೇ ರೀತಿ ಅನ್ಯಾಯವಾದಾಗ ಕರ್ನಾಟಕ ಸರಕಾರ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಈ ಸಲ ಮತ್ತೆ ಅದರ ಪುನರಾವರ್ತನೆಯಾಗಿದೆ.ಅನುದಾನ ಹಂಚಿಕೆಯ ಸಂಬಂಧದಲ್ಲಿ ಮೋದಿ ಸರಕಾರ ಯಾವ ರೀತಿ ಅನ್ಯಾಯ ಮಾಡುತ್ತಿದೆ ಎಂಬುದು ಗುಟ್ಟಿನ ಸಂಗತಿಯಾಗಿ ಉಳಿದಿಲ್ಲ.
ಕರ್ನಾಟಕ ತೆರಿಗೆ ರೂಪದಲ್ಲಿ ೪.೫ ಲಕ್ಷ ಕೋಟಿ ರೂ.ಗಳನ್ನು ಕೇಂದ್ರಕ್ಕೆ ನೀಡಿದೆ. ಇದರಲ್ಲಿ ಕರ್ನಾಟಕಕ್ಕೆ ವಾಪಸ್ ಬರುತ್ತಿರುವುದು ಒಂದು ರೂಪಾಯಿಗೆ ೧೪ ಪೈಸೆ ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂಕಿ ಅಂಶಗಳ ಸಮೇತ ಬಯಲುಗೊಳಿಸಿದ್ದಾರೆ. ಉತ್ತರ ಪ್ರದೇಶಕ್ಕೆ ಶೇ. ೧೮ರಷ್ಟು ಅನುದಾನ ನೀಡಿದರೆ, ಕರ್ನಾಟಕಕ್ಕೆ ಬಂದಿರುವುದು ಶೇ. ೩.೫ರಷ್ಟು ಮಾತ್ರ. ಬೆಂಗಳೂರಿನ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಶೇ. ೫೦:೫೦ ಅನುದಾನದ ಅಡಿಯಲ್ಲಿ ಮೆಟ್ರೋ ಯೋಜನೆಯನ್ನು ರೂಪಿಸಲಾಯಿತು. ಇದಕ್ಕೆ ಕರ್ನಾಟಕ ಶೇ. ೮೭ರಷ್ಟು ಹಣ ವಿನಿಯೋಗ ಮಾಡಿದೆ. ಕೇಂದ್ರ ಸರಕಾರ ಕಾಟಾಚಾರಕ್ಕೆ ಎಂಬಂತೆ ಅತ್ಯಂತ ಕಡಿಮೆ ಹಣವನ್ನು ನೀಡಿದೆ. ಮುಂಬೈ, ದಿಲ್ಲಿಯ ನಂತರ ಅತ್ಯಂತ ಹೆಚ್ಚು ತೆರಿಗೆ ಕೊಡುವ ನಗರವಾದ ಬೆಂಗಳೂರಿಗೆ ಮೋದಿ ಸರಕಾರದಿಂದ ನ್ಯಾಯ ಸಮ್ಮತವಾದ ನೆರವು ಸಿಗುತ್ತಿಲ್ಲ.
ನಮ್ಮ ದೇಶದಲ್ಲಿ ಇರುವುದು ಒಕ್ಕೂಟ ವ್ಯವಸ್ಥೆ. ಕೇಂದ್ರದಲ್ಲಿ ಯಾವುದೇ ಪಕ್ಷದ ಸರಕಾರವಿರಲಿ, ಬೇರೆ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಬಗ್ಗೆ ಪಕ್ಷಪಾತ ಮಾಡಬಾರದು. ಆದರೆ ಈಗಿರುವ ಕೇಂದ್ರದ ಸರಕಾರ ಕಳೆದ ಹನ್ನೊಂದು ವರ್ಷಗಳಿಂದ ಕರ್ನಾಟಕ ಸೇರಿದಂತೆ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಬಗ್ಗೆ ತಾರತಮ್ಯವನ್ನು ಮಾಡುತ್ತಲೇ ಬಂದಿದೆ.ಇಷ್ಟು ಮಾತ್ರವಲ್ಲ, ಈಗಿನ ಕೇಂದ್ರ ಸರಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ೧೫ನೇ ಹಣಕಾಸು ಆಯೋಗದಿಂದ ಕರ್ನಾಟಕಕ್ಕೆ ನಿಗದಿಪಡಿಸಿದ್ದ ಅನುದಾನವನ್ನು ಕೂಡ ರದ್ದುಗೊಳಿಸಿದ್ದಾರೆ. ಇಂಥವರನ್ನು ನಾವು ಚುನಾಯಿಸಿ ರಾಜ್ಯಸಭೆಗೆ ಕಳಿಸಿದ್ದೇವೆ. ಅಲ್ಲಿ ಕರ್ನಾಟಕದ ಹಿತರಕ್ಷಣೆ ಮಾಡಬೇಕಾದವರು ಅದಕ್ಕೆ ದ್ರೋಹ ಎಸಗುತ್ತಲೇ ಬಂದಿದ್ದಾರೆ. ‘ಒಂದು ರಾಷ್ಟ್ರ, ಒಂದೇ ಧರ್ಮ, ಒಂದೇ ಭಾಷೆ’ಯ ಹೆಸರಿನಲ್ಲಿ ರಾಜ್ಯಗಳ ಸ್ವಾಯತ್ತ ಅಧಿಕಾರಕ್ಕೆ ಧಕ್ಕೆ ತರಬಾರದು. ೧೫ನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ಕೆರೆಗಳ ಅಭಿವೃದ್ಧಿಗೆ ೩,೦೦೦ ಕೋಟಿ ರೂ., ರಸ್ತೆಗಳ ಅಭಿವೃದ್ಧಿಗೆ ೩,೦೦೦ ಕೋಟಿ ರೂ., ಭದ್ರಾ ಮೇಲ್ದಂಡೆ ಯೋಜನೆಗೆ ೫,೦೦೦ ಕೋಟಿ ರೂ. ಅನುದಾನ ರಾಜ್ಯಕ್ಕೆ ಬಂದಿಲ್ಲ. ಇದಲ್ಲದೆ ಹಣಕಾಸು ಆಯೋಗ ನಿಗದಿಪಡಿಸಿದ್ದ ೫,೪೯೦ ಕೋಟಿ ರೂ. ಅನುದಾನವನ್ನು ಕೂಡ ರದ್ದು ಪಡಿಸಲಾಗಿದೆ. ಈ ಸಂಬಂಧದಲ್ಲಿ ಹಲವಾರು ಬಾರಿ ಮನವಿಯನ್ನು ಸಲ್ಲಿಸಲಾಗಿದ್ದರೂ ಪ್ರಯೋಜನವಾಗಿಲ್ಲ ಎಂದು ರಾಜ್ಯ ಸರಕಾರದ ಆಕ್ಷೇಪವಾಗಿದೆ. ಕರ್ನಾಟಕ ಮಾತ್ರವಲ್ಲ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ತಮಿಳುನಾಡು, ತೆಲಂಗಾಣ, ಕೇರಳ, ಪ.ಬಂಗಾಳ ಮೊದಲಾದ ರಾಜ್ಯಗಳಿಗೂ ತೆರಿಗೆ ಹಂಚಿಕೆಗೆ ಸಂಬಂಧಿಸಿದಂತೆ ನ್ಯಾಯವಾದ ಪಾಲು ನೀಡದೆ ಸತಾಯಿಸಲಾಗುತ್ತಿದೆ. ಕೇಂದ್ರದ ಏಜೆಂಟರಂತಿರುವ ರಾಜ್ಯಪಾಲರ ಮೂಲಕ ಕಿರುಕುಳ ನೀಡಲಾಗುತ್ತಿದೆ. ಇಂಥ ಮಲತಾಯಿ ಧೋರಣೆ ಒಕ್ಕೂಟ ವ್ಯವಸ್ಥೆಗೆ ಮಾರಕವಾದುದು. ಅದರಲ್ಲೂ ಅತ್ಯಂತ ಹೆಚ್ಚಿನ ತೆರಿಗೆ ಪಾಲನ್ನು ಕೇಂದ್ರಕ್ಕೆ ನೀಡುವ ದಕ್ಷಿಣದ ರಾಜ್ಯಗಳ ಬಗ್ಗೆ ಕೇಂದ್ರ ಸರಕಾರದ ನೀತಿ ಬದಲಾಗಬೇಕಾಗಿದೆ.ಇಲ್ಲವಾದರೆ ಒಕ್ಕೂಟ ವ್ಯವಸ್ಥೆ ಕ್ರಮೇಣ ದುರ್ಬಲವಾಗುತ್ತ ಹೋಗುತ್ತದೆ. ಪ್ರತ್ಯೇಕತೆಯ ಕೂಗು ಕೇಳಬೇಕಾಗುತ್ತದೆ. ಹಾಗಾಗದಂತೆ ನೋಡಿಕೊಳ್ಳುವುದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಜವಾಬ್ದಾರಿಯಾಗಿದೆ.
ಕರ್ನಾಟಕಕ್ಕೆ ಇಂಥ ಅನ್ಯಾಯವಾಗಿರುವ ಸಂದರ್ಭದಲ್ಲಿ ಸಂಸತ್ತಿನಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಪಕ್ಷಭೇದ ಮರೆತು ಒಂದಾಗಿ ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕಾಗಿದೆ. ಕೇರಳ ಮತ್ತು ತಮಿಳುನಾಡಿನ ಸಂಸದರು ತಮ್ಮ ರಾಜ್ಯಕ್ಕೆ ಅನ್ಯಾಯವಾದಾಗ ಪಕ್ಷಭೇದ ಬದಿಗಿಟ್ಟು ಒಂದುಗೂಡಿ ಪ್ರತಿಭಟನೆ ಮಾಡುತ್ತಾರೆ. ಆದರೆ ಕರ್ನಾಟಕದ ಬಿಜೆಪಿ ಸಂಸದರು ಹಾಗೂ ಕೇಂದ್ರ ಸಚಿವ ಸಂಪುಟದಲ್ಲಿ ಇರುವ ರಾಜ್ಯದ ಮಂತ್ರಿಗಳು ಎಲ್ಲಿ ಮೋದಿ ಕೋಪಗೊಳ್ಳುತ್ತಾರೋ ಎಂದು ಹೆದರಿ ಬಾಯಿಗೆ ಬೀಗ ಹಾಕಿಕೊಂಡಿರುತ್ತಾರೆ.ಸಂಸತ್ತಿನ ಉಭಯ ಸದನಗಳಲ್ಲಿ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾತಾಡುವಂಥ ಸಮರ್ಥ ಸಂಸದರೂ ಈಗ ಇಲ್ಲದಂತಾಗಿದೆ.
ಜಿಎಸ್‌ಟಿ ದರವನ್ನು ಕಡಿಮೆ ಮಾಡಿರುವುದಾಗಿ ಸಂಭ್ರಮದ ಉತ್ಸವವನ್ನು ನಡೆಸುತ್ತಿರುವ ಕೇಂದ್ರ ಸರಕಾರ ಕಳೆದ ಎಂಟು ವರ್ಷಗಳ ಕಾಲಾವಧಿಯಲ್ಲಿ ಅಂದರೆ ಜಿಎಸ್‌ಟಿ ಜಾರಿಗೆ ಬಂದಾಗಿನಿಂದ ಜನರಿಂದ, ರಾಜ್ಯಗಳಿಂದ ವಸೂಲಿ ಮಾಡಿದ್ದೆಷ್ಟು? ಕಡಿಮೆ ಮಾಡಿರುವುದೆಷ್ಟು? ಎಂಬ ಬಗ್ಗೆ ಅಸಲಿ ವಿವರಣೆಯನ್ನು ನೀಡಲಿ. ಈಗ ಒಮ್ಮಿಂದೊಮ್ಮೆಲೇ ಕಡಿಮೆ ಮಾಡಿರುವುದರಿಂದ ರಾಜ್ಯಗಳಿಗೆ ಅನ್ಯಾಯವಾಗಿದೆ. ವಾಸ್ತವವಾಗಿ ಕರ್ನಾಟಕ ಸರಕಾರ ಕಡಿಮೆ ಅನುದಾನದ ನಡುವೆಯೂ ಗ್ಯಾರಂಟಿ ಯೋಜನೆಗಳ ಖರ್ಚು ಭರಿಸಿ ಆರ್ಥಿಕತೆಯನ್ನು ನಿಭಾಯಿಸುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರ ತನ್ನ ಮಲತಾಯಿ ಧೋರಣೆಯನ್ನು ಕೈ ಬಿಡಬೇಕು.
ಆರ್ಥಿಕತೆ ಮಾತ್ರವಲ್ಲ ಸಾಂಸ್ಕೃತಿಕವಾಗಿಯೂ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳ ಅಸ್ಮಿತೆಯನ್ನು ಅಳಿಸಿ ಹಾಕಲು ಕೇಂದ್ರದ ಮೋದಿ ನೇತೃತ್ವದ ಸರಕಾರ ಮುಂದಾಗಿದೆ. ‘ಒಂದೇ ರಾಷ್ಟ್ರ, ಒಂದೇ ಭಾಷೆ’ ಹೆಸರಿನಲ್ಲಿ ಹಿಂದಿಯನ್ನು ಬಲವಂತವಾಗಿ ದಕ್ಷಿಣದ ರಾಜ್ಯಗಳ ಮೇಲೆ ಹೇರಲು ನಾನಾ ಮಸಲತ್ತುಗಳನ್ನು ಮಾಡುತ್ತಲೇ ಇದೆ. ಅದಕ್ಕೆ ಪೂರಕವಾಗಿ ಕರ್ನಾಟಕದ ಬಿಜೆಪಿಯ ಕೆಲವು ನಾಯಕರು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಹಿಂದಿಯನ್ನು ಜಾರಿಗೆ ತರಬೇಕೆಂದು ಆಗ್ರಹಿಸುತ್ತಿದ್ದಾರೆ. ಇದು ಈಗ ಹಿಂದಿಯನ್ನು ಜಾರಿಗೆ ತಂದಂತೆ ಮಾಡಿ ಕ್ರಮೇಣ ಆರೆಸ್ಸೆಸ್‌ನ ಸರಸಂಘಚಾಲಕರಾಗಿದ್ದ ಗೋಳ್ವಾಲ್ಕರ್ ಬಯಕೆಯಂತೆ ಹಿತ್ತಲ ಬಾಗಿಲಿನಿಂದ ಸಂಸ್ಕೃತವನ್ನು ರಾಷ್ಟ್ರ ಭಾಷೆಯನ್ನಾಗಿ ಮಾಡುವ ಹುನ್ನಾರದಂತಿದೆ. ಕನ್ನಡಿಗರು ಒಂದಾಗಿ ಇಂತಹ ಭಾಷಾ ಹೇರಿಕೆಯನ್ನು ಒಕ್ಕೊರಲಿನಿಂದ ವಿರೋಧಿಸಬೇಕಾಗಿದೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಹ ಇಂಥ ಹುನ್ನಾರಗಳು ಅಂತಿಮವಾಗಿ ಭಾರತದ ಏಕತೆ, ಸಮಗ್ರತೆಗೆ ಧಕ್ಕೆ ಉಂಟು ಮಾಡುತ್ತವೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೆರಿಗೆ ಹಂಚಿಕೆಯ ಅನ್ಯಾಯದ ಬಗ್ಗೆ ಮಾತಾಡಿದ್ದಾರೆ. ಇದು ಅವರ ವೈಯಕ್ತಿಕ ಪ್ರತಿರೋಧದ ಅಭಿಪ್ರಾಯ ಮಾತ್ರವಾಗಿರದೆ ಕರ್ನಾಟಕದ ೬ ಕೋಟಿ ಜನರ ನಿಲುವೂ ಆಗಿದೆ ಎಂಬುದನ್ನು ಕೇಂದ್ರದ ಮೋದಿ ನೇತೃತ್ವದ ಸರಕಾರ ಅರಿತುಕೊಳ್ಳಬೇಕಾಗಿದೆ.







