ಆನೆಯನ್ನು ಗೆದ್ದ ಇರುವೆಗಳು!

Photo: PTI
ಇರುವೆಗಳು ಸಂಘಟಿತವಾಗಿ ನಿಂತರೆ ಆನೆಯನ್ನೂ ಮಣಿಸಬಹುದು ಎನ್ನುವುದಕ್ಕೆ ಉದಾಹರಣೆಯಾಗಿದೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ. ಈ ದೇಶದ ಯುವ ಆರ್ಟಿಐ ಕಾರ್ಯಕರ್ತರನ್ನು, ಸ್ವತಂತ್ರ ಪತ್ರಕರ್ತ ಯುವಕರನ್ನು ಉದ್ಯೋಗವಿಲ್ಲದ ಜಿರಳೆಗಳು ಎಂಬ ಸುಪ್ರೀಂಕೋರ್ಟ್ನ ನ್ಯಾಯ ಮೂರ್ತಿ ಸೂರ್ಯಕಾಂತ್ ಅವರ ನಿಂದನೆಗೆ, ದೇಶದ ಯುವಕರು, ವಿದ್ಯಾರ್ಥಿಗಳು, ಸ್ವತಂತ್ರ ಪತ್ರಕರ್ತರು ಸಂಘಟಿತವಾಗಿ ಉತ್ತರ ನೀಡಿದ್ದಾರೆ. ಭ್ರಷ್ಟ ಸರಕಾರದ ಪರವಾಗಿ ಈ ದೇಶದ ಸರ್ವೋಚ್ಚ ನ್ಯಾಯಾಲಯವೇ ವಕಾಲತ್ತಿಗೆ ನಿಂತಿರುವ ಹೊತ್ತಿನಲ್ಲಿ, ಅದಕ್ಕೆ ಬೆದರದೆ ಹೊಸತಲೆಮಾರಿನ ಯುವಕರು ತಮ್ಮದೇ ಹೊಸ ಭಾಷೆಯಲ್ಲಿ ಪ್ರತಿಭಟನೆ ನಡೆಸಿ, ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಕೇಂದ್ರ ಸಚಿವ ರಾಜೀನಾಮೆ ನೀಡಲೇ ಬೇಕಾದ ಸ್ಥಿತಿಯನ್ನು ನಿರ್ಮಾಣ ಮಾಡಿದರು ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಪರೀಕ್ಷೆಗಳಲ್ಲಿ ಆಮೂಲಾಗ್ರ ಸುಧಾರಣೆಗಳನ್ನು ತರಲೇಬೇಕಾದ ಒತ್ತಡವನ್ನು ಸರಕಾರಕ್ಕೆ ನಿರ್ಮಿಸಿದರು. ಪ್ರಧಾನಿ ರಾತ್ರೋ ರಾತ್ರಿ ಎರಡೆರಡು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡು ಜೆನ್ಝಿಗಳನ್ನು ಉದ್ದೇಶಿಸಿ ಮಾತನಾಡುವಂತಾಯಿತು. ಈ ಹಿಂದೆ, ಸಾಲು ಸಾಲು ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ವಿಪಕ್ಷಗಳು ಕೇಂದ್ರ ಸಚಿವರ ರಾಜೀನಾಮೆಗೆ ಒತ್ತಾಯಿಸಿದಾಗ, ಹಿರಿಯ ಬಿಜೆಪಿ ನಾಯಕ ರಾಜನಾಥ್ ಸಿಂಗ್, ‘‘ಆರೋಪ ಬಂದಾಕ್ಷಣ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ನಮ್ಮದು ಯುಪಿಎ ಸರಕಾರವಲ್ಲ. ಇದು ಎನ್ಡಿಎ ಸರಕಾರ’’ ಎಂದಿದ್ದರು. ಮೋದಿ ನೇತೃತ್ವದ ಎನ್ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಭ್ರಷ್ಟಾಚಾರದ ನೈತಿಕ ಹೊಣೆ ಹೊತ್ತು ಮಂತ್ರಿಯೊಬ್ಬರು ರಾಜೀನಾಮೆ ನೀಡಿದ್ದಾರೆ. ತಮ್ಮನ್ನು ತಾವು ‘ಜಿರಳೆ’ಗಳು ಎಂದು ಘೋಷಿಸಿಕೊಂಡೇ ಯುವ ಸಮೂಹ ಭ್ರಷ್ಟ ಆನೆಯನ್ನು ಖೆಡ್ಡಾಕ್ಕೆ ಕೆಡವಿತು. ನಿರುದ್ಯೋಗಿ ಯುವಕರನ್ನು , ಸ್ವತಂತ್ರ ಪತ್ರಕರ್ತರನ್ನು ಜಿರಳೆಗಳೆಂದು ನಿಂದಿಸಿದ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಯವರನ್ನು ಬೆನ್ನು ಮುಟ್ಟಿ ನೋಡಿಕೊಳ್ಳುವಂತೆ ಮಾಡಿದೆ.
ಈ ಹೋರಾಟ ಸ್ವತಂತ್ರ ಅಥವಾ ಪರ್ಯಾಯ ಮಾಧ್ಯಮಗಳ ಗೆಲುವೂ ಹೌದು. ನರೇಂದ್ರ ಮೋದಿ ನೇತೃತ್ವ ಸರಕಾರ ಕಳೆದ ಹತ್ತು ವರ್ಷಗಳಿಂದ ತನ್ನೆಲ್ಲ ವೈಫಲ್ಯಗಳನ್ನು ಸಮರ್ಥಿಸಿಕೊಳ್ಳುತ್ತಿರುವುದು ಮಾಧ್ಯಮಗಳ ಬಲದಿಂದ. ಬಹುತೇಕ ಮುಖ್ಯ ಮಾಧ್ಯಮಗಳು ತಮ್ಮನ್ನು ತಾವು ಮಾರಿಕೊಂಡಿರುವುದರಿಂದ, ಇಂದು ಸರಕಾರದ ಭ್ರಷ್ಟಾಚಾರಗಳ ಕಡೆಗೆ ಬೆರಳು ತೋರಿಸುವುದಕ್ಕೆ ಪತ್ರಕರ್ತರೇ ಇಲ್ಲ ಎನ್ನುವಂತಹ ಸನ್ನಿವೇಶವಿದೆ. ಮುದ್ರಣ ಪತ್ರಿಕೆಗಳು, ಟಿ.ವಿ. ವಾಹಿನಿಗಳು ತಮ್ಮನ್ನು ತಾವು ಮೋದಿಯನ್ನು ಹೊಗಳುವುದಕ್ಕೆ, ಅವರ ಅಕ್ರಮಗಳನ್ನು ಮುಚ್ಚಿ ಹಾಕುವುದಕ್ಕೆ ಸೀಮಿತವಾಗಿವೆ. ತಳಸ್ತರದ ಜನರಲ್ಲಿ ಸರಕಾರದ ಬಗ್ಗೆ ಭ್ರಮೆಗಳನ್ನು ಹುಟ್ಟಿಸಿ ಹಾಕಿರುವುದು ಈ ಮಾಧ್ಯಮಗಳೇ ಆಗಿವೆ. ಜನ ಸಾಮಾನ್ಯರೆಡೆಗೆ ಸರಕಾರದ ವೈಫಲ್ಯಗಳನ್ನು ತಲುಪಿಸುವ ವಿರೋಧಪಕ್ಷಗಳ ಎಲ್ಲ ಪ್ರಯತ್ನಗಳನ್ನು ಸರಕಾರ ವಿಫಲಗೊಳಿಸುತ್ತಿರುವುದು ಈ ಮಾಧ್ಯಮಗಳ ಬಲದ ಮೂಲಕವೇ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳು, ಯೂಟ್ಯೂಬ್ಗಳು, ಇನ್ಷ್ಟಾಗ್ರಾಂಗಳ ಮೂಲಕ ಹೊರ ಹೊಮ್ಮಿದ ಪರ್ಯಾಯ ಮಾಧ್ಯಮಗಳು ಈ ಬಲಾಢ್ಯ ಮಾಧ್ಯಮಗಳಿಗೆ ಸೆಡ್ಡು ಹೊಡೆದಿವೆ. ಬಲಾಢ್ಯ ಮಾಧ್ಯಮಗಳ ಕೆಲಸವನ್ನು ಈ ಪರ್ಯಾಯ ಮಾಧ್ಯಮಗಳೆಂಬ ಇರುವೆಗಳು ಸಂಘಟಿತವಾಗಿ ಮಾಡಿವೆ. ರೀಲ್ಸ್ಗಳಲ್ಲಿ,
ಇನ್ಸ್ಟಾಗ್ರಾಂಗಳಲ್ಲಿ ಮಿಂಚುತ್ತಿದ್ದ ಹೊಸ ತಲೆಮಾರಿನ ಯುವಕರೆಲ್ಲ ಅತ್ಯುತ್ಸಾಹದಿಂದ ಜಂತರ್ ಮಂತರ್ನಲ್ಲಿ ತಮ್ಮ ಕೆಲಸವನ್ನು ಮುಂದುವರಿಸಿದರು. ಅವರ ಪ್ರತಿಭಟನೆಯಲ್ಲಿರುವ ಜೀವಂತಿಕೆಯೇ ಇಡೀ ದೇಶವನ್ನು ಸೆಳೆಯಿತು. ಜಂತರ್ ಮಂತರ್ಗಳೇ ನೂರಾರು ರೀಲ್ಸ್ಗೆ ವೇದಿಕೆಯಾಯಿತು. ಅಲ್ಲಿಂದಲೇ ಈ ಯುವಕರು ಲಕ್ಷಾಂತರ ಚಂದಾದಾರರನ್ನು ತಮ್ಮದಾಗಿಸಿಕೊಂಡರು.
ಎಲ್ಲವೂ ಆರಂಭವಾದದ್ದು ಸ್ವತಂತ್ರ ಮಾಧ್ಯಮಗಳನ್ನು ಬಳಸಿಕೊಂಡು ಕೆಲಸ ಮಾಡುವ ಯುವಕರು, ಆರ್ಟಿಐ ಕಾರ್ಯಕರ್ತರನ್ನು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಯೊಬ್ಬರು ‘ಜಿರಳೆ’ಗಳೆಂದು ನಿಂದಿಸುವ ಮೂಲಕ. ಅದು ಕಾಕ್ರೋಚ್ ಜನತಾ ಪಾರ್ಟಿಯ ಉದಯಕ್ಕೆ ಕಾರಣವಾಯಿತು ಮಾತ್ರವಲ್ಲ, ನೀಟ್ ಅಕ್ರಮಗಳ ವಿರುದ್ಧದ ಹೋರಾಟದ ನೇತೃತ್ವವನ್ನು ವಹಿಸಿಕೊಂಡಿತು. ಜಂತರ್ ಮಂತರ್ನಲ್ಲಿ ಯುವಕರನ್ನು ಸಂಘಟಿಸುವಲ್ಲಿಯೂ ಈ ಕಾರ್ಯಕರ್ತರು ಸ್ವತಂತ್ರ ಮಾಧ್ಯಮಗಳನ್ನೇ ನೆಚ್ಚಿಕೊಂಡರು. ಅಲ್ಲಿ ನೆರೆದವರಲ್ಲಿ ನೂರಾರು ಇನ್ಫ್ಲುಯೆನ್ಸರ್ಗಳಿದ್ದರು. ಯೂಟ್ಯೂಬರ್ಗಳಿದ್ದರು. ಇನ್ಸ್ಟಾಗ್ರಾಂ, ಫೇಸ್ಬುಕ್ ಹೀಗೆ ಸ್ವತಂತ್ರ ಮಾಧ್ಯಮಗಳನ್ನು ಬಳಸಿಕೊಂಡು ಸಕ್ರಿಯರಾದವರೆಲ್ಲ ಅಲ್ಲಿ ನೆರೆದರು. ವಿಷಾದನೀಯ ವಿಷಯವೆಂದರೆ, ಬಲಾಢ್ಯ ಮಾಧ್ಯಮಗಳು ಈ ಯುವಕರ ಹೋರಾಟಕ್ಕೆ ಕಳಂಕವನ್ನು ತರಲು, ಅವರ ವಿಶ್ವಾಸಾರ್ಹತೆಯನ್ನು ಕೆಡಿಸಲು ಗರಿಷ್ಠ ಪ್ರಯತ್ನ ನಡೆಸಿದವು. ಗರಿಷ್ಠ ಮಟ್ಟದಲ್ಲಿ ಅಪಪ್ರಚಾರಗಳನ್ನು ನಡೆಸಿದವು. ಆದರೆ ಅವೆಲ್ಲ ಪ್ರಯತ್ನಗಳನ್ನು ವಿಫಲಗೊಳಿಸುವಲ್ಲಿ ಸ್ವತಂತ್ರ ಮಾಧ್ಯಮಗಳು ಯಶಸ್ವಿಯಾದವು. ಬದಲಿಗೆ ಈ ಬಲಾಢ್ಯ ಮಾಧ್ಯಮಗಳ ಅಸಲಿಯತ್ತುಗಳನ್ನು ಈ ಸ್ವತಂತ್ರ ಮಾಧ್ಯಮಗಳು ದೇಶದ ಮುಂದಿಟ್ಟವು. ತಮ್ಮನ್ನು ಸಂದರ್ಶಿಸಲು ಬಂದ ಮುಖ್ಯ ವಾಹಿನಿಯ ಪತ್ರಕರ್ತರನ್ನೇ ತಮ್ಮ ಮೊಬೈಲ್ಗಳಲ್ಲಿ ಸೆರೆಹಿಡಿದು ಅವರ ಅಜ್ಞಾನವನ್ನು, ಮೋದಿ ಭಟ್ಟಂಗಿತನವನ್ನು, ಭ್ರಷ್ಟ ವ್ಯವಸ್ಥೆಯ ಜೊತೆಗಿನ ಅವರ ಸಂಬಂಧಗಳನ್ನು ಬಟಾಬಯಾಲಾಗಿಸಿದರು. ಈ ಹೋರಾಟದಲ್ಲಿ ಸರಕಾರ ಮಾತ್ರವಲ್ಲ, ಎಲ್ಲ ಬಲಾಢ್ಯ ಮಾಧ್ಯಮಗಳೂ ದೇಶದ ಮುಂದೆ ಬೆತ್ತಲಾಗಿವೆ. ಇಂದು ಈ ಬಲಾಢ್ಯಗಳು ತಮಗೆ ಮಾಡುತ್ತಿರುವ ವಂಚನೆಗಳು ಇದೀಗ ದೇಶಕ್ಕೆ ಅರ್ಥವಾಗತೊಡಗಿದೆೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಕೂಡ ‘ಜಿರಳೆ’ಗಳ ಮುಂದೆ ಮಂಡಿಯೂರಿದ್ದಾರೆ. ‘‘ತನ್ನ ಹೇಳಿಕೆಯ ಉದ್ದೇಶ ಬೇರೆಯೇ ಆಗಿತ್ತು’’ ಎಂದು ಸಮಜಾಯಿಷಿಯನ್ನು ನೀಡಿದ್ದಾರೆ. ನ್ಯಾಯವ್ಯವಸ್ಥೆಯ ಅತ್ಯುನ್ನತ ಸ್ಥಾನದಲ್ಲಿ ಕುಳಿತಿರುವ ವ್ಯಕ್ತಿ ಆಡುವ ಮಾತು ತಪ್ಪು ಧ್ವನಿಯನ್ನು ಕೊಟ್ಟರೆ ಅದರ ಪರಿಣಾಮ ಏನಾಗುತ್ತದೆ ಎನ್ನುವ ಅರಿವು ಅವರಿಗಿರಬೇಕಾಗಿತ್ತು. ಇನ್ನಾದರೂ ಆ ಅರಿವು ಅವರಲ್ಲಿ ಮೂಡಬಹುದು ಎಂದು ಭಾವಿಸೋಣ. ಈ ಸ್ವತಂತ್ರ ಮಾಧ್ಯಮಗಳನ್ನು ಎದುರಿಸಲಾಗದೆ, ಕಟ್ಟಕಡೆಗೆ ಪ್ರಧಾನಿ ಮೋದಿಯವರು ರಾತ್ರೋ ರಾತ್ರಿ ಎರಡೆರಡು ಬಾರಿ ಇನ್ಸ್ಟಾಗ್ರಾಂನಲ್ಲಿ ಕಾಣಿಸಿಕೊಳ್ಳಬೇಕಾಯಿತು. ಇವರ ಭಾಷಣವೇ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅಣಕದ ವಿಷಯವಾಯಿತು. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಆನೆಗಳಷ್ಟೇ ಅಲ್ಲ, ಈ ವ್ಯವಸ್ಥೆಯ ಭಾಗವಾಗಿರುವ ಜಿರಳೆ, ಇರುವೆಗಳನ್ನು ನಿರ್ಲಕ್ಷಿಸುವಂತಿಲ್ಲ ಎನ್ನುವ ಪಾಠವನ್ನು ಜೆನ್ ಝಿಯು ಮೋದಿ ಸರಕಾರಕ್ಕೆ ಬೋಧಿಸಿದೆ.






