ಇ100 ನೀತಿಯ ಮುಂದಿರುವ ಸವಾಲು

ಸಾಂದರ್ಭಿಕ ಚಿತ್ರ (AI)
ಇ20 ಬಳಕೆ ಮತ್ತು ಅದರ ಪರಿಣಾಮಗಳ ಬಗ್ಗೆಯೇ ಚರ್ಚೆ ಇನ್ನೂ ಮುಗಿದಿಲ್ಲ; ಭಾರತ ಸರಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಇಲಾಖೆಯು ಇತ್ತೀಚೆಗೆ (ಅಕ್ಟೋಬರ್ 26) ಕೇಂದ್ರ ಮೋಟರ್ ವಾಹನ ನಿಯಮಗಳಲ್ಲಿ ಪ್ರಮುಖ ಬದಲಾವಣೆಯೊಂದನ್ನು ಪ್ರಕಟಿಸಿದ್ದು, ಫ್ಲೆಕ್ಸ್-ಫ್ಯುಯೆಲ್ (ಅರ್ಥಾತ್ ತನ್ನ ಇಂಧನ ಟಾಂಕಿಯಲ್ಲಿ ಎಂದಿನ ಪೆಟ್ರೋಲ್, ಎಥೆನಾಲ್ ಅಥವಾ ಎಥೆನಾಲ್-ಪೆಟ್ರೋಲ್ ಮಿಶ್ರಣವನ್ನು ಬಳಸುವ ಸಾಮರ್ಥ್ಯ ಹೊಂದಿರುವ) ವಾಹನಗಳಲ್ಲಿ ಇ100 ಅರ್ಥಾತ್ ಶುದ್ಧ ಎಥೆನಾಲ್ ಬಳಸುವುದಕ್ಕೆ ಅವಕಾಶ ಕಲ್ಪಿಸಿದೆ.
ಈ ನೀತ್ಯಾತ್ಮಕ ಬದಲಾವಣೆಯ ಕಾರಣದಿಂದ ವಾಹನಗಳಲ್ಲಿ ಬಳಸಬಹುದಾದ ಇಂಧನಗಳ ವ್ಯಾಪ್ತಿ ಹಿಗ್ಗಲಿದೆ; ಅದರ ಪರಿಣಾಮವಾಗಿ ಫ್ಲೆಕ್ಸ್ ವಾಹನಗಳ-ಅವುಗಳ ಬಿಡಿ ಭಾಗಗಳ ಉತ್ಪಾದನೆ, ಎಥೆನಾಲ್ ಉತ್ಪಾದನೆ, ಅದಕ್ಕೆ ಅಗತ್ಯ ಇರುವ ಮೂಲಸೌಕರ್ಯಗಳ ನಿರ್ಮಾಣಕ್ಕೆ ಕಾನೂನಿನ ಅವಕಾಶಗಳು ಮುಕ್ತವಾಗಿ ಲಭ್ಯ ಆಗಲಿವೆ. ಈಗ ಫ್ಲೆಕ್ಸ್ ಫ್ಯುಯೆಲ್ ವಾಹನಗಳಾಗಿ ನಿರ್ಮಾಣ ಆಗಿರುವ ವಾಹನಗಳಲ್ಲಿ ಮಾತ್ರ ಇ85 ಅಥವಾ ಇ100 ಇಂಧನ ಬಳಕೆ ಸಾಧ್ಯ ಆಗುತ್ತಿದೆ. ಇ20 ಬಳಸುತ್ತಿರುವ ವಾಹನಗಳು ಸದ್ಯಕ್ಕೆ ಇ100 ಇಂಧನ ಬಳಸುವುದು ಸಾಧ್ಯ ಆಗುವುದಿಲ್ಲ. ಇ100 ಬಳಕೆಗೆಂದು ಸಿದ್ಧಗೊಂಡಿರುವ ವಾಹನಗಳಲ್ಲಿ ಈಗ ಸಾರ್ವಜನಿಕವಾಗಿ ಚರ್ಚೆ ಆಗುತ್ತಿರುವ ‘ಹೊಂದಾಣಿಕೆ ಸಮಸ್ಯೆಗಳು’ ಇರುವುದಿಲ್ಲ. ವಾಹನಗಳ ಮಾಲಕರು ತಮ್ಮ ವಾಹನಗಳ ಸ್ವರೂಪಕ್ಕೆ ಅನುಸಾರವಾಗಿ ಬಂಕುಗಳಲ್ಲಿ ತಮ್ಮ ಇಂಧನವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಸಚಿವಾಲಯದ ವಿವರಣೆ ಹೇಳುತ್ತಿದೆ.
ಎಥೆನಾಲ್ ಬಳಕೆಯಿಂದ ಪೆಟ್ರೋಲಿಗೆ ಹೋಲಿಸಿದರೆ, ವಾಹನಗಳಿಂದ ಇಂಗಾಲದ ಹೊರಹೊಮ್ಮುವಿಕೆ ಕಡಿಮೆ ಆಗಲಿದೆ, ಗ್ರೀನ್ಹೌಸ್ ಅನಿಲಗಳ ಹೊರಹೊಮ್ಮುವಿಕೆ ಕಡಿಮೆ ಆಗಲಿದೆ, ದೇಶದ ಕಚ್ಚಾತೈಲ ಆಮದು ಕಡಿಮೆ ಆಗಲಿದೆ ಎಂಬುದು ಭಾರತ ಸರಕಾರದ ವಾದ. 2070ರ ಹೊತ್ತಿಗೆ ಕಾರ್ಬನ್ ಹೊರಹೊಮ್ಮುವಿಕೆಯನ್ನು ಶೂನ್ಯಕ್ಕಿಳಿಸಿಕೊಳ್ಳಬೇಕೆಂಬ ಅಂತರ್ರಾಷ್ಟ್ರೀಯ ನಿರ್ಣಯದ ಭಾಗವಾಗಿರುವ ಭಾರತಕ್ಕೆ, ಆ ಗುರಿ ತಲುಪುವ ಹೊಣೆ ಇದೆ. ಆದರೆ, ಆ ಗುರಿ ಸಾಧನೆಗಾಗಿ ಸರಕಾರ ರೂಪಿಸಿಕೊಳ್ಳುತ್ತಿರುವ ಮೂಲಸೌಕರ್ಯಗಳು, ಅದಕ್ಕೆ ಈ ವಿಚಾರಗಳಲ್ಲಿ ಒಂದು ಸಮಗ್ರ ಚಿತ್ರಣ ಇಲ್ಲ ಮತ್ತು ತನ್ನದೇ ಒಂದು ತಪ್ಪನ್ನು ಸರಿಪಡಿಸಲು ಇನ್ನೊಂದು ತಪ್ಪು ಮಾಡುವ ಮೂಲಕ ಸರಕಾರವು ತಪ್ಪುಗಳ ಸರಮಾಲೆಗಳನ್ನೇ ರಚಿಸಿಕೊಂಡು, ಅದರ ಜಿಡುಕಿನ ಬಲೆಯ ನಡುವೆ ಸಿಕ್ಕಿಹಾಕಿಕೊಂಡಂತಿದೆ.
ದೇಶದಲ್ಲಿ ಎಥೆನಾಲ್ ಉತ್ಪಾದನೆ ದೊಡ್ಡ ಪ್ರಮಾಣದಲ್ಲಿ ಆರಂಭಗೊಂಡದ್ದೇ ಕೋವಿಡ್ ಸಾಂಕ್ರಾಮಿಕ ವಿರುದ್ಧದ ರಕ್ಷಣೆಗೆ ‘ಸ್ಯಾನಿಟೈಸರ್’ ಬೇಕೆಂಬ ಸ್ಥಿತಿ ಉಂಟಾದಾಗ. ಆ ಸಂದರ್ಭದಲ್ಲಿ, ಸಕ್ಕರೆ ಕಾರ್ಖಾನೆಗಳ ಡಿಸ್ಟಿಲರಿಗಳಲ್ಲಿ, ಕಾಕಂಬಿ ಬಳಸಿ ಅಥವಾ ಗೋಧಿ, ಅಕ್ಕಿ, ಬಳಸಿ ಎಥೆನಾಲ್ ತಯಾರಿಗೆ ಯಥೇಚ್ಛ ಅವಕಾಶ ಕಲ್ಪಿಸಲಾಯಿತು. ಆ ಹಂತದಲ್ಲಿ ಸೂಕ್ತ ನೀತ್ಯಾತ್ಮಕ ತೀರ್ಮಾನಗಳನ್ನು ತೆಗೆದುಕೊಂಡಿದ್ದರೆ, ಎಥೆನಾಲ್ ಉತ್ಪಾದನೆಯನ್ನು ಆವತ್ತಿನ ಅವಶ್ಯಕತೆಗೆ ತಕ್ಕಂತೆ ಸೀಮಿತ ಇರಿಸಿಕೊಳ್ಳಬಹುದಿತ್ತು. ಅದು ಆಗದ ಕಾರಣ, ಈಗ ಸರಕಾರಕ್ಕೆ ಎಥೆನಾಲ್ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸಲು ಹೆಣಗಾಡುವುದು ಅನಿವಾರ್ಯ ಆಗಿದೆ. ಇದು ಎಥೆನಾಲ್ ಇಂಧನವಾಗಿ ಬದಲಾದ ಮೂಲ ಕಥೆ.
ಇಂದು ವಿದ್ಯುತ್ ಚಾಲಿತ, ಹೈಡ್ರೋಜನ್ ಚಾಲಿತ ವಾಹನಗಳ ಬಗ್ಗೆ ಜಗತ್ತಿನಾದ್ಯಂತ ಚರ್ಚೆ ನಡೆದಿರುವಾಗ, ಅದಕ್ಕೆ ಸಿದ್ಧತೆಯನ್ನೂ ನಡೆಸಿದ್ದ ಸರಕಾರವು ಈಗ ಎಥೆನಾಲ್ ಬಳಕೆಯನ್ನು ಪ್ರೋತ್ಸಾಹಿಸುವ ಮೂಲಕ ಬೀಸುವ ಕತ್ತಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಇದು ಒಂದರ್ಥದಲ್ಲಿ ಹಿಮ್ಮುಖ ಚಲನೆ. ಸರಕಾರಕ್ಕೆ ತನ್ನ ಗುರಿ, ಗುರಿ ತಲುಪುವ ಹಾದಿಗಳಲ್ಲಿ ಗೊಂದಲ ಇರುವುದಕ್ಕೆ ಈ ಒಟ್ಟೂ ಪ್ರಸಂಗ ಅತ್ಯುತ್ತಮ ಉದಾಹರಣೆ. ಸರಕಾರ ಈಗ ಗಾಳಿ ಬಂದತ್ತ ತೂರಿಕೊಳ್ಳುವ ತಂತ್ರ ಅನುಸರಿಸುತ್ತಿದೆ.
ಇದೆಲ್ಲ ಇಷ್ಟಕ್ಕೇ ಮುಗಿದಿದ್ದರೆ ತೊಂದರೆ ಇಲ್ಲ. ಸರಕಾರ ಇಂದು ಎಥೆನಾಲ್ ಉತ್ಪಾದಕರ ರಕ್ಷಣೆಗಾಗಿ ಅಕ್ಕಿ, ಗೋಧಿ ಇತ್ಯಾದಿಗಳನ್ನು ತನ್ನ ಉಗ್ರಾಣಗಳಿಂದ ಸರಬರಾಜು ಮಾಡಬೇಕಾದ ಅನಿವಾರ್ಯ ಸ್ಥಿತಿಗೆ ತಲುಪಿದೆ. 2024-2026ರ ನಡುವೆ ಸರಕಾರವು ಎಥೆನಾಲ್ ಉತ್ಪಾದನೆಗೆಂದು ಪ್ರತೀ ವರ್ಷ 52 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದ ಉಗ್ರಾಣಗಳಿಂದ ಒದಗಿಸಲಿದೆ ಎಂದು ಅಧಿಕೃತವಾಗಿಯೇ ಸಂಸತ್ತಿನಲ್ಲಿ ಹೇಳಿಕೊಂಡಿದೆ. ಜಾಗತಿಕ ಹಸಿವಿನ ಇಂಡೆಕ್ಸ್ನಲ್ಲಿ, 2026ನೇ ಸಾಲಿಗೆ ಜಗತ್ತಿನ 122 ದೇಶಗಳ ಪೈಕಿ 100ನೇ ಸ್ಥಾನದಲ್ಲಿರುವ ಭಾರತವು, ತನ್ನ ಜನರ ಹಸಿವೆ ತಣಿಸಲು ಅಗತ್ಯ ಇರುವ ಅಕ್ಕಿಯನ್ನು ಎಥೆನಾಲ್ ಉತ್ಪಾದನೆಗೆ ಬಳಸಲು ಹೊರಟಿರುವುದು ಕ್ರೂರ ವ್ಯಂಗ್ಯ.
ಇದಷ್ಟೇ ಅಲ್ಲ. ಅಕ್ಕಿ, ಗೋಧಿ, ಕಬ್ಬು ಇತ್ಯಾದಿ ಎಥೆನಾಲ್ ಉತ್ಪಾದನೆಗೆ ಬಳಕೆ ಆಗುವ ಕೃಷಿ ಉತ್ಪನ್ನಗಳೆಲ್ಲವೂ ನೀರಿನ ಅತಿ ಬಳಕೆಯನ್ನು ಬೇಡುವಂತಹವು. ಜಗತ್ತಿನ ದೇಶಗಳೆಲ್ಲ ಅಂತರ್ಜಲ ಸಂರಕ್ಷಣೆಗಾಗಿ ನೀರು ಅತಿ ಬಳಕೆಯಾಗುವ ಕೃಷಿ ಉತ್ಪನ್ನಗಳ ಉತ್ಪಾದನೆಯನ್ನು ಮಿತಗೊಳಿಸಿಕೊಳ್ಳುವ ಹಾದಿಯಲ್ಲಿರುವಾಗ, ಭಾರತ ಅದಕ್ಕೆ ವ್ಯತಿರಿಕ್ತವಾದ ಹಾದಿಯಲ್ಲಿದೆ. ನೀರಿನ ಅತಿ ಬಳಕೆ, ಎಥೆನಾಲ್ ಉತ್ಪಾದನೆಗಳೆಲ್ಲವೂ ಸ್ವತಂತ್ರವಾಗಿಯೇ ಕಾರ್ಬನ್ ಹೊರಹೊಮ್ಮಿಸುವಿಕೆ ಹೆಚ್ಚಿಸುವ ಪ್ರಕ್ರಿಯೆಗಳೇ ಆಗಿವೆ. ಹಾಗಾಗಿ, ಅಂತಹ ಪ್ರಕ್ರಿಯೆಗಳ ಮೂಲಕ ಉತ್ಪಾದಿಸಿದ ಎಥೆನಾಲ್ ಮೂಲಕ ತಾನು ಕಾರ್ಬನ್ ಹೊರಹೊಮ್ಮಿಸುವಿಕೆ ಶೂನ್ಯಗೊಳಿಸಿಕೊಳ್ಳುವತ್ತ ಸಾಗುತ್ತಿದ್ದೇನೆ ಎಂಬ ಸರಕಾರದ ನಿರ್ಧಾರವೇ ವಿಲಕ್ಷಣವಾದದ್ದು.
ಭಾರತ ಸರಕಾರವು ತನ್ನ ಸ್ವಯಂಕೃತ ಅಪರಾಧಗಳನ್ನು ಮುಚ್ಚಿಟ್ಟುಕೊಳ್ಳಲು ಈ ರೀತಿ ತಾತ್ಕಾಲಿಕ ತೇಪೆಗಳನ್ನು ಹಚ್ಚುವುದನ್ನು ನಿಲ್ಲಿಸಬೇಕು. ದೇಶಕ್ಕೆ ಮುಂದಿನ 20-30 ವರ್ಷಗಳ ಸಾರಿಗೆ ಅವಶ್ಯಕತೆಗಳನ್ನು ಸಮಗ್ರವಾಗಿ ಪರಿಗಣನೆಗೆ ತೆಗೆದುಕೊಂಡು, ಅದರ ದೀರ್ಘಕಾಲಿಕ ಪರಿಣಾಮಗಳನ್ನೂ ಯೋಚಿಸಿಕೊಂಡು ಮುಂದಡಿ ಇಡಬೇಕು. ಒಂದು ಸಮಗ್ರ ಸಾರಿಗೆ ಮುಂಗಾಣ್ಕೆ ನೀತಿಯನ್ನು ಸಾಧ್ಯವಾದಷ್ಟು ಶೀಘ್ರವಾಗಿ ಸಾರ್ವಜನಿಕರ ಮುಂದಿಡಬೇಕು. ಹಾಗಾದಾಗ, ಜನಸಾಮಾನ್ಯರಿಗೂ ಕೂಡ ತಾವು ಯಾವ ರೀತಿಯ ಸಾರಿಗೆ ಬಳಸಬೇಕು, ಯಾವ ವಾಹನ ಖರೀದಿಸಬೇಕು ಎಂಬಿತ್ಯಾದಿ ಸಂಗತಿಗಳ ಬಗ್ಗೆ ಒಂದು ಸ್ಪಷ್ಟ ಚಿತ್ರಣ ಒದಗಿಸುತ್ತದೆ. ಇ20, ಇ85, ಇ100 ಇತ್ಯಾದಿಗಳೆಲ್ಲ ಕೇವಲ ತಾತ್ಕಾಲಿಕ ಪರಿಹಾರಗಳು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಇಂತಹ ಕಣ್ಣುಕಟ್ಟುಗಳು ಸರಕಾರವನ್ನು ಎಲ್ಲಿಗೂ ತಲುಪಿಸುವುದಿಲ್ಲ.






