ನೋಟು ರದ್ದತಿಯ ‘ದಶಮಾನೋತ್ಸವ’

ಭಾರತದ ಚರಿತ್ರೆಯಲ್ಲಿಯೇ ಅತ್ಯಂತ ಕಟುವಾದ ಟೀಕೆ ಮತ್ತು ವೈಫಲ್ಯಕ್ಕೆ ಗುರಿಯಾದ ಪ್ರಧಾನಿ ನರೇಂದ್ರ ಮೋದಿ ಅವರ ನೋಟು ರದ್ದತಿಯ ನಿರ್ಧಾರಕ್ಕೆ ಈ 8ನೇ ತಾರೀಕಿಗೆ ಒಂದು ದಶಕವಾಗುತ್ತದೆ. ನಿರ್ಧಾರದ ಯಶಸ್ಸು ಮತ್ತು ವೈಫಲ್ಯಗಳು ವಿಭಿನ್ನ ಕಾರಣಗಳಿಂದ ಆಗುತ್ತವೆ. ಆದರೆ ಆ ನಿರ್ಧಾರವು ಬಹು ಮಂದಿಗೆ ಹಾನಿಯನ್ನು ಒದಗಿಸಿದಾಗ ಅದು ಮತ್ತೆ ಮತ್ತೆ ನೆನಪಾಗುತ್ತದೆ-ಇದರ ಉದ್ದೇಶ ದೋಷ ಕಂಡುಹುಡುಕುವುದಲ್ಲ, ಬದಲಾಗಿ ಇಂತಹ ನಿರ್ಧಾರಗಳ ಬಗ್ಗೆ ಆಡಳಿತವರ್ಗವು ಸದಾ ಎಚ್ಚರವಹಿಸುವ ಅಗತ್ಯವನ್ನು ಒತ್ತಿ ಹೇಳುವುದು.
ನವೆಂಬರ್ 8, 2016ರ ರಾತ್ರಿ 8 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾ ನರೇಂದ್ರ ಮೋದಿಯವರು ಕಾಳಧನಕ್ಕೆ ಹೊಡೆತ ಮತ್ತು ಆ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ. ಉಗ್ರಗಾಮಿಗಳಿಗೆ ಹಣ ಪೂರೈಕೆಗೆ ಕಡಿತ ಮತ್ತು ಕಳ್ಳನೋಟುಗಳ ಚಲಾವಣೆಯನ್ನು ನಿಲ್ಲಿಸುವ ಉದ್ದೇಶಗಳಿಂದ ನೋಟು ರದ್ದತಿಯನ್ನು ಮಾಡಲಾಗಿದೆ ಎಂದರು. 500 ಮತ್ತು 1,000 ರೂ. ಮುಖಬೆಲೆಯ ನೋಟುಗಳು ಆ ದಿನ ನಡುರಾತ್ರಿಯಿಂದ ಮೌಲ್ಯರಹಿತವಾದವು. ಆ ಮೂಲಕ ಒಟ್ಟು ಚಲಾವಣೆಯಲ್ಲಿರುವ ನೋಟುಗಳ (ಕರೆನ್ಸಿಯ) ಸುಮಾರು ಶೇ. 86 ಭಾಗ ಬೆಲೆಯನ್ನು ಕಳಕೊಂಡವು.
ಜನಸಾಮಾನ್ಯರನ್ನು ನೋಟು ರದ್ದತಿಯು ಗೊಂದಲ, ಭೀತಿ ಮತ್ತು ತೀವ್ರವಾದ ಸಂಕಷ್ಟಗಳಿಗೆ ನೂಕಿತು. ಅಗತ್ಯಕ್ಕೆಂದು ಮನೆಯಲ್ಲಿ ಇರಿಸಿಕೊಂಡ ಕರೆನ್ಸಿಗಳ ಬದಲಾವಣೆಗೆ ಬ್ಯಾಂಕುಗಳ ಶಾಖೆಗಳಿಗೆ ಹೋಗಬೇಕಿತ್ತು. ನಗರ ಮತ್ತು ಪಟ್ಟಣಗಳಲ್ಲಿ ಉದ್ದ ಉದ್ದದ ಕ್ಯೂಗಳಲ್ಲಿ ವೃದ್ಧರು, ಮಕ್ಕಳನ್ನು ಎತ್ತಿಕೊಂಡ ಮಹಿಳೆಯರು, ಗಂಟೆಗಟ್ಟಲೆ ಕಾದು ನಿಲ್ಲಬೇಕಾಗಿ ಬಂತು. ಭಾರತೀಯರ ಪದ್ಧತಿಯಂತೆ ಜೋಪಾನವಾಗಿ ಆಪದ್ಧನವಾಗಿ ಇರಿಸಿಕೊಂಡ ನೋಟುಗಳ ಮೌಲ್ಯ ತಮಗೆ ಸಿಗುತ್ತದೆಯೋ ಇಲ್ಲವೋ ಎಂಬ ಭೀತಿ ಅನೇಕರನ್ನು ಕಾಡಿತು. ಮದುವೆ, ಮುಂಜಿ ಮುಂತಾದ ಕೌಟುಂಬಿಕ ಕಾರ್ಯಕ್ರಮಗಳಿಗೆ ಬೇಕೆಂದು ತಂದಿರಿಸಿದ ನೋಟುಗಳು ಅಮಾನ್ಯವಾದಾಗ ಆಗುವ ಸಂಕಷ್ಟ ಅನುಭವಿಸಿದವರಿಗೇ ಗೊತ್ತು.
ನಿರ್ಧಾರವನ್ನು ಕೈಗೊಳ್ಳುವ ಪೂರ್ವಭಾವಿಯಾಗಿ ಸರಕಾರವು ಆರ್‌ಬಿಐ ಜೊತೆ ಅಗತ್ಯದ ಚರ್ಚೆ ಮಾಡದೆ, ತನ್ನ ನಿರ್ಧಾರಕ್ಕೆ ಸಹಿ ಹಾಕಲು ಆ ಸಂಸ್ಥೆಯನ್ನು ಒತ್ತಾಯಿಸಿತ್ತು. ಆ ಮೂಲಕ ಆರ್‌ಬಿಐಯ ಸ್ವಾಯತ್ತತೆಗೂ ಮಸಿ ಬಳಿಯಲಾಗಿತ್ತು. ಇದರ ಜೊತೆಗೆ ಕರೆನ್ಸಿಯ ನಿಯಂತ್ರಕನ ನೆಲೆಯಲ್ಲಿ ರಿಸರ್ವ್ ಬ್ಯಾಂಕು ದಿನಕ್ಕೆ ಒಂದರಂತೆ ಹೊಸ ಹೊಸ ನಿಯಮಗಳನ್ನು ಬ್ಯಾಂಕುಗಳಿಗೆ ಕಳುಹಿಸುತ್ತಿತ್ತು; ಅವುಗಳು ಶಾಖೆಗಳ ಸಿಬ್ಬಂದಿಗಳಲ್ಲಿ ಗೊಂದಲವನ್ನು ಹುಟ್ಟುಹಾಕಿದವು.
ನೋಟು ರದ್ದತಿಯು ದೇಶದ ಅರ್ಥವ್ಯವಸ್ಥೆಯನ್ನು ಸಂಪೂರ್ಣ ಅಲ್ಲೋಲಕಲ್ಲೋಲ ಮಾಡಿತು. ಅದರಲ್ಲಿಯೂ ಮುಖ್ಯವಾಗಿ ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದ ಅಸಂಘಟಿತ ವಲಯದಲ್ಲಿರುವ ಸಣ್ಣ ಉದ್ದಿಮೆಗಳು, ವ್ಯಾಪಾರಿಗಳು ಮತ್ತು ಸೇವಾ ಕೇಂದ್ರಗಳು ತೀವ್ರವಾದ ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿದವು. ಕಚ್ಚಾ ವಸ್ತುಗಳನ್ನು ನಗದಿನಲ್ಲಿ ಮತ್ತು ಕೆಲವೊಮ್ಮೆ ಸಾಲದಲ್ಲಿ ಪಡಕೊಂಡು ಸಿದ್ಧವಸ್ತುಗಳನ್ನು ಉತ್ಪಾದಿಸುತ್ತಿದ್ದ ಘಟಕಗಳು ವಹಿವಾಟು ನಡೆಸಲು ಸಾಧ್ಯವಾಗದೆ ನಷ್ಟ ಅನುಭವಿಸಿದವು. ನಗದಿನ ಕೊರತೆಯಿಂದಾಗಿ ತಾವು ಉತ್ಪಾದಿಸಿದ ಸಿದ್ಧವಸ್ತುಗಳ ಮಾರಾಟಕ್ಕೆ ವಿಘ್ನವುಂಟಾಯಿತು. ವರದಿಗಳ ಪ್ರಕಾರ ನೋಟು ರದ್ದತಿಯ ಘೋಷಣೆಯ ಬಳಿಕದ ಐದು ತಿಂಗಳಿನಲ್ಲಿ ವ್ಯವಹಾರದಲ್ಲಿ ಆದ ನಷ್ಟವನ್ನು ಭರಿಸಲು ಅಸಾಧ್ಯವಾಗಿ ಲಕ್ಷಾಂತರ ಸಣ್ಣ ಉದ್ದಿಮೆಗಳು ಬಾಗಿಲು ಹಾಕಿದವು. ಎಂಎಸ್‌ಎಂಇ ವಲಯದ ಉದ್ದಿಮೆಗಳು ಶೇ. 60 ಉದ್ಯೋಗಗಳನ್ನು ಕಡಿತಮಾಡಿದವು. ಇದರಿಂದ ನೋಟು ರದ್ದತಿಯ ದುಷ್ಪರಿಣಾಮದ ತೀವ್ರತೆಯನ್ನು ಅರ್ಥಮಾಡಿಕೊಳ್ಳಬಹುದು. ಇವುಗಳನ್ನೆಲ್ಲ ಗಮನದಲ್ಲಿಟ್ಟುಕೊಂಡೇ ದಿವಂಗತ ಮನಮೋಹನ್ ಸಿಂಗ್ ಅವರು ನೋಟು ರದ್ದತಿಯು ದೇಶದ ಆರ್ಥಿಕತೆಯನ್ನು ಶೇ. 2ರಷ್ಟು ಕುಗ್ಗಿಸಲಿದೆ ಎಂದು ಕರಾರುವಾಕ್ಕಾಗಿ ಭವಿಷ್ಯ ನುಡಿದಿದ್ದರು.
ನೋಟುರದ್ದತಿಯ ಘನ ಉದ್ದೇಶವಾದ ಕಾಳಧನದ ಬಳಕೆಯು 2016ರ ನಂತರ ಕಡಿಮೆಯಾದುದರ ಬಗ್ಗೆ ವರದಿಗಳು ಇಲ್ಲ; ಬದಲಾಗಿ ಚುನಾವಣಾ ಆಯೋಗದ ಅಧಿಕಾರಿಗಳು ಚುನಾವಣೆಗಳ ಸಂದರ್ಭದಲ್ಲಿ ಕಳ್ಳಹಣವನ್ನು ಪತ್ತೆ ಹಚ್ಚಿ ಮುಟ್ಟುಗೋಲು ಹಾಕಿದ ಘಟನೆಗಳು ಚುನಾವಣೆಯಿಂದ ಚುನಾವಣೆಗೆ ಹೆಚ್ಚುತ್ತಲೇ ಇವೆ. ರಾಜಕಾರಣಿಗಳನ್ನು ಅಕ್ರಮಸಂಪತ್ತನ್ನು ಹೊಂದಿದ್ದಾರೆಂಬ ಆರೋಪದಲ್ಲಿ ಪ್ರವರ್ತನ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ ಘಟನೆಗಳು ಹೆಚ್ಚಾಗಿವೆ-ಅವರು ಆಳುವ ಪಕ್ಷಕ್ಕೆ ಹಾರಿದರೆ ಆರೋಪಗಳು ತನ್ನಿಂದ ತಾನೇ ಬಿದ್ದೂ ಹೋಗುತ್ತವೆ.
ಚಲಾವಣೆಯಲ್ಲಿರುವ ಕರೆನ್ಸಿಯ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ಏರುತ್ತಾ ಹೋಗಿದೆ. 2016ರಲ್ಲಿ ಇದ್ದುದರ ಎರಡು ಪಟ್ಟು ನೋಟುಗಳು ಇಂದು ಚಲಾವಣೆಯಲ್ಲಿ ಇವೆ. ನೋಟು ರದ್ದತಿಯ ಬಳಿಕ ಪುನಃ ಬಿಡುಗಡೆ ಮಾಡಿದ ರೂ.500ರ ಮುಖಬೆಲೆಯ ನೋಟುಗಳ ಪ್ರಮಾಣವೇ ಎಲ್ಲಕ್ಕಿಂತ ಅಧಿಕವಿದೆ. ಇನ್ನೊಂದು ಮಾನಕವೂ ಗಮನಾರ್ಹ. ಚಲಾವಣೆಯಲ್ಲಿರುವ ನೋಟುಗಳು 2016ರ ಸಮಯದಲ್ಲಿ ದೇಶದ ಜಿಡಿಪಿಯ ಸುಮಾರು ಶೇ.12.1 ಇತ್ತು. 2017ರಲ್ಲಿ ಅದು ಶೇ.8.7ಕ್ಕೆ ಕುಸಿದು ಆ ಬಳಿಕ ನಿರಂತರ ವೃದ್ಧಿಸಿ ಈಗ ಶೇ.12ಕ್ಕೆ ಮತ್ತೆ ತಲಪಿದೆ. ಅದರ ಅರ್ಥ ನೋಟು ರದ್ದತಿಯಿಂದ ಕರೆನ್ಸಿಯ ಬಳಕೆ ಕಡಿಮೆಯಾಗುವುದರ ಬದಲಿಗೆ ಹೆಚ್ಚಾಗಿದೆ.
ನೋಟು ರದ್ದತಿಯ ಮೂಲಕ ನಗದು ವ್ಯವಹಾರದ ಬದಲು ಡಿಜಿಟಲ್ ಮಾಧ್ಯಮದ ಬಳಕೆ ಹೆಚ್ಚಾಗುವಂತೆ ಮಾಡುವುದು ಆ ಬಳಿಕ ಸೇರಿಸಿದ ಇನ್ನೊಂದು ಉದ್ದೇಶವಾಗಿತ್ತು. ಯುಪಿಐ ಮೂಲಕ ಪಾವತಿಗಳು ಹೋದ 10 ವರ್ಷಗಳಲ್ಲಿ ಬಹಳಷ್ಟು ಜನಪ್ರಿಯವಾಗಿವೆ; ಈ ಸಾಧನೆಯನ್ನು ಅಲ್ಲಗಳೆಯುವಂತಿಲ್ಲ. ಆದರೆ ಸರಕಾರದ ಇತ್ತೀಚೆಗಿನ ನಿರ್ಧಾರದ ಪ್ರಕಾರ ರೂ. 2,000 ಮತ್ತು ಹೆಚ್ಚಿನ ಪಾವತಿಗಳ ಮೇಲೆ ಶುಲ್ಕವನ್ನು ವ್ಯಾಪಾರಸ್ಥರ ಮೇಲೆ ಹೇರಲಾಗುತ್ತದೆ. ಇದರ ಬಗ್ಗೆ ಈಗಾಗಲೇ ಸಾಕಷ್ಟು ಟೀಕೆಗಳು ಬಂದಿವೆ. ಆರಂಭದಲ್ಲಿ ಉಚಿತ ಸೇವೆಯನ್ನು ಒದಗಿಸಿ ಅದನ್ನು ಬಳಸುತ್ತಾ ಹೋದಂತೆ ಸೇವಾ ಶುಲ್ಕವನ್ನು ಹೇರುವುದು ಎಷ್ಟು ಸಮಂಜಸ?
ದೇಶದ ಆರ್ಥಿಕ ಚರಿತ್ರೆಯಲ್ಲಿಯೇ ಒಂದು ಕರಾಳ ಘಟನೆ ಅಂದರೆ 2016ರ ನೋಟು ರದ್ದತಿ. ಅತ್ಯಂತ ಗಂಭೀರವಾದ ದುಷ್ಪರಿಣಾಮವನ್ನು ಜನಸಾಮಾನ್ಯರ ಜೀವನದ ಮೇಲೆ ಬೀರುವ ಕಾರಣಕ್ಕಾಗಿಯೇ ಪ್ರಜಾತಂತ್ರಕ್ಕೆ ಬದ್ಧವಾದ ರಾಷ್ಟ್ರಗಳು ಈ ನೋಟುರದ್ದತಿಯ ದಾರಿಯನ್ನು ಹಿಡಿಯುವುದಿಲ್ಲ. ಭಾರತದಲ್ಲಿಯೂ 1946ರ ಬ್ರಿಟಿಷರ ಆಳ್ವಿಕೆಯ ಸಂದರ್ಭದಲ್ಲಿ ಮತ್ತು ಮುಂದೆ 1978ರಲ್ಲಿ ಮಾಡಿದ ನೋಟು ರದ್ದತಿಗಳು ಕಳ್ಳಹಣವನ್ನು ಹೊರತರುವಲ್ಲಿ ಫಲಕಾರಿಯಾಗಿರಲಿಲ್ಲ. ಆದರೆ ಆಗ ರದ್ದತಿಯಾದ ನೋಟುಗಳ ಪ್ರಮಾಣ ಶೇ.1ಕ್ಕಿಂತ ಕಡಿಮೆ ಇದ್ದು ಜನಸಾಮಾನ್ಯರಿಗೆ ಸಂಕಷ್ಟಗಳಾಗಿರಲಿಲ್ಲ. ಇದಕ್ಕೆ ವಿರುದ್ಧವಾಗಿ ನರೇಂದ್ರ ಮೋದಿಯವರ 2016ರ ನೋಟು ರದ್ದತಿಯು ಅತ್ಯಂತ ಅಪಕ್ವ ಮತ್ತು ಅಪ್ರಬುದ್ಧ ಆರ್ಥಿಕ ನಿರ್ಧಾರವೇ ಆಗಿತ್ತು. ನೋಟು ರದ್ದತಿಗೆ ದಶಕ ಸಲ್ಲುವ ಹಿನ್ನೆಲೆಯಲ್ಲಿ ಅರ್ಥವ್ಯವಸ್ಥೆಗೆ ಅದರಿಂದಾದ ಹಾನಿ ಮತ್ತು ಜನಸಾಮಾನ್ಯರಿಗೆ ಒದಗಿದ ಸಂಕಷ್ಟಗಳನ್ನು ನೆನಪಿಸಿಕೊಳ್ಳುವ ಅಗತ್ಯವಿದೆ.






