ಬಂಗಾಳದ ರೈತರ ಗೋಳು

ಸಾಂದರ್ಭಿಕ ಚಿತ್ರ Photo : x.com/i/grok
ಪಶ್ಚಿಮಬಂಗಾಳದಲ್ಲಿ ಕೇಸರಿ ಯುಗ ಆರಂಭವಾಗಿದೆ ಎನ್ನುವುದನ್ನು ಸ್ಪಷ್ಟ ಪಡಿಸುವ ಉದ್ದೇಶದಿಂದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಹೊಸ ಬಿಜೆಪಿ ಸರಕಾರವು ‘ಪ್ರಾಣಿ ಹತ್ಯೆ ನಿಯಂತ್ರಣ ಕಾಯ್ದೆ’ಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವ ಕೊಡುಗೆಯನ್ನು ಪಶ್ಚಿಮಬಂಗಾಳಕ್ಕೆ ನೀಡಿದೆ. ಈ ಕೊಡುಗೆಯನ್ನು ಯಾವ ಕೈಯಲ್ಲಿ ಸ್ವೀಕರಿಸಬೇಕು ಎನ್ನುವ ಗೊಂದಲದಲ್ಲಿದ್ದಾರೆ ಪಶ್ಚಿಮಬಂಗಾಳದ ರೈತರು. ಮೇಲ್ನೋಟಕ್ಕೆ ಜಾನುವಾರು ಹತ್ಯೆ ನಿಷೇಧ ಕಾಯ್ದೆ ಯಾಗಿದ್ದರೂ, ವಾಸ್ತವದಲ್ಲಿ ರೈತರು ತಮ್ಮ ಜಾನುವಾರುಗಳನ್ನು ಯಾರಿಗೆ ಮಾರಬೇಕು, ಮಾರಬಾರದು ಎನ್ನುವ ಅವರ ಹಕ್ಕನ್ನು ಕಿತ್ತುಕೊಳ್ಳುವ ಕಾಯ್ದೆ ಇದಾಗಿದೆ. ಪ್ರಾಣಿ ಹತ್ಯೆ ನಿಯಂತ್ರಣ ಕಾಯ್ದೆಯ ಹೆಸರಿನಲ್ಲಿ ಜಾನುವಾರು ಮಾರಾಟಕ್ಕೆ ಸಂಬಂಧಿಸಿ ಸರಕಾರವು ಹಲವು ಕಠಿಣ ನಿಬಂಧನೆಗಳನ್ನು ಮಾಡಿದ್ದು, ಇದು ನೇರವಾಗಿ ತಾವು ಸಾಕಿದ ಸಾವಿರಾರು ರೂಪಾಯಿ ಬೆಲೆಬಾಳುವ ಜಾನುವಾರುಗಳನ್ನು ವ್ಯಾಪಾರಿಗಳಿಗೆ ಮಾರಾಟ ಮಾಡದಂತೆ ರೈತರ ಕೈಗಳನ್ನು ಕಟ್ಟಿ ಹಾಕಿದೆ. ಈ ಕಾನೂನನ್ನು ದುರ್ಬಳಕೆ ಮಾಡಿ ಒಂದು ನಿರ್ದಿಷ್ಟ ಸಮುದಾಯದ ಮೇಲೆ ದಾಳಿ ನಡೆಸಲು ಸಂಘಪರಿವಾರದೊಳಗಿನ ನಕಲಿ ಗೋರಕ್ಷಕರು ಸಿದ್ಧತೆ ನಡೆಸುತ್ತಿದ್ದಂತೆಯೇ, ಪಶ್ಚಿಮಬಂಗಾಳದ ಮುಸ್ಲಿಮರು ರೈತರಿಂದ ಗೋವುಗಳನ್ನು ಖರೀದಿಸುವುದಕ್ಕೆ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಇದೀಗ ಪಶ್ಚಿಮಬಂಗಾಳದಲ್ಲಿ ಪರಿಸ್ಥಿತಿ ತಿರುವು ಮುರುವಾಗಿದೆ. ಮುಸ್ಲಿಮರು ಗೋವುಗಳನ್ನು ಖರೀದಿ ಮಾಡಲು ನಿರಾಕರಿಸುತ್ತಿದ್ದರೆ ಅಲ್ಲಿನ ರೈತರು ಜಾನುವಾರುಗಳನ್ನು ಕೊಂಡುಕೊಳ್ಳಿ ಎಂದು ವ್ಯಾಪಾರಿಗಳಲ್ಲಿ ದೀನವಾಗಿ ಕೇಳಿಕೊಳ್ಳುತ್ತಿದ್ದಾರೆ. ಇದರ ಬೆನ್ನಿಗೇ, ಜಮೀಯತ್ ಉಲೇಮಾ ಎ ಹಿಂದ್, ‘‘ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ ಅವುಗಳನ್ನು ರಕ್ಷಿಸಿ’’ ಎಂದು ಕರೆ ನೀಡಿದೆ. ಸರಕಾರದ ನೀತಿಯಿಂದಾಗಿ ತಮ್ಮ ಜಾನುವಾರುಗಳನ್ನು ಮಾರಾಟ ಮಾಡಲಾಗದ ನೂರಾರು ರೈತರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
20ನೇ ಜಾನುವಾರು ಗಣತಿಯ ಪ್ರಕಾರ ಪಶ್ಚಿಮಬಂಗಾಳ ಅತಿ ಹೆಚ್ಚು ಗೋವುಗಳನ್ನು ಹೊಂದಿರುವ ರಾಜ್ಯವಾಗಿದೆ. ಇಲ್ಲಿ 1.90 ಕೋಟಿಗೂ ಅಧಿಕ ಗೋವುಗಳಿವೆ ಎಂದು ಅಂದಾಜಿಸಲಾಗಿದೆ. ಎರಡನೇ ಸ್ಥಾನದಲ್ಲಿ ಉತ್ತರ ಪ್ರದೇಶ ಮತ್ತು ಮೂರನೇ ಸ್ಥಾನದಲ್ಲಿ ಮಧ್ಯಪ್ರದೇಶವಿದೆ. ಪಶ್ಚಿಮಬಂಗಾಳದಲ್ಲಿ ಘೋಷ್ ಸಮುದಾಯ ಗೋಸಾಕಣೆಯನ್ನೇ ನೆಚ್ಚಿಕೊಂಡಿವೆ. ಅವರು ಇದಕ್ಕಾಗಿ ಕೋಟ್ಯಂತರ ರೂಪಾಯಿಯನ್ನು ಹೂಡಿಕೆ ಮಾಡುತ್ತಾರೆ. ಅನುಪಯುಕ್ತ ಗೋವುಗಳನ್ನು ಜಾನುವಾರು ಸಂತೆಗಳಲ್ಲಿ ಮಾರಿ, ಇತರ ಗೋವುಗಳ ಆಹಾರ ವೆಚ್ಚಗಳನ್ನು ಅವರು ಭರಿಸುತ್ತಾರೆ. ಒಂದು ಗೋವು ಏಳರಿಂದ ಎಂಟು ವರ್ಷಗಳವರೆಗೆ ಹಾಲು ನೀಡುತ್ತದೆ. ಹಾಲು ನೀಡುವುದನ್ನು ನಿಲ್ಲಿಸಿದ ಗೋವವನ್ನು 14 ವರ್ಷದವರೆಗೆ ಸಾಕುವುದರಿಂದ ರೈತರಿಗೆ ಸುಮಾರು 7.5 ಲಕ್ಷ ರೂ.ಗಿಂತ ಹೆಚ್ಚು ವೆಚ್ಚವಾಗುತ್ತದೆ ಎನ್ನುವುದು ಪ.ಬಂಗಾಳದ ರೈತರ ಅಳಲು. ಈಬಾರಿ ನೂರಾರು ರೈತರು ಜಾನುವಾರು ಸಂತೆಗೆ ಗೋವುಗಳನ್ನು ಕೊಂಡೊಯ್ದಿದ್ದಾರಾದರೂ ಅವುಗಳನ್ನು ಖರೀದಿ ಮಾಡುವವರಿಲ್ಲದೆ ಅವರು ನಿರಾಶರಾಗಿ ಮರಳಿದ್ದಾರೆ. ‘‘ನೀವು ನಮಗೆ ಗೋವುಗಳನ್ನು ಮಾರಿ ಹಣ ಸಂಪಾದಿಸುತ್ತೀರಿ. ಆದರೆ ಖರೀದಿ ಮಾಡಿದ ನಾವು ಬಳಿಕ ಜೈಲು ಸೇರಬೇಕಾಗುತ್ತದೆ ಅಥವಾ ನಕಲಿ ಗೋರಕ್ಷಕರಿಂದ ಹಲ್ಲೆಗೊಳಗಾಗಬೇಕಾಗುತ್ತದೆ’’ ಎನ್ನುವುದು ಸ್ಥಳೀಯ ಮುಸ್ಲಿಮ್ ವ್ಯಾಪಾರಿಗಳ ಆಕ್ಷೇಪ. ವಿಪರ್ಯಾಸವೆಂದರೆ, ಗೋಸಾಕಣೆಯನ್ನು ನೆಚ್ಚಿಕೊಂಡಿರುವ ಘೋಷ್ ಸಮುದಾಯವು ಈ ಬಾರಿ ಬಿಜೆಪಿಯನ್ನು ಬೆಂಬಲಿಸಿತ್ತು. ಇದೀಗ ಅದೇ ಬಿಜೆಪಿ ಸರಕಾರ ಮಾಡಿರುವ ಕಠಿಣ ನಿಬಂಧನೆಯಿಂದಾಗಿ ಘೋಷ್ ಸಮುದಾಯ ಕಂಗಾಲಾಗಿದೆ. ಘೋಷ್ ಸಮುದಾಯದ ರೈತರು ಗೋಸಾಕಣೆಗಾಗಿ ಲಕ್ಷಾಂತರ ರೂಪಾಯಿಯನ್ನು ಬ್ಯಾಂಕ್ಗಳಿಂದ ಸಾಲ ಮಾಡಿ ಹೂಡಿಕೆ ಮಾಡುತ್ತಾರೆ. ಬಕ್ರೀದ್ ಸಮಯದಲ್ಲಿ ಮಾರುಕಟ್ಟೆಯಲ್ಲಿ ಅನುಪಯುಕ್ತ ಗೋವುಗಳನ್ನು ಮಾರಿ ಅದರಿಂದ ಸಿಗುವ ಹಣವನ್ನು ಸಾಲದ ಕಂತುಗಳನ್ನು ಕಟ್ಟುವುದಕ್ಕೂ ಅವರು ಬಳಸುತ್ತಾರೆ. ಇದೀಗ ಈ ಸಾಲದ ಕಂತುಗಳನ್ನು ಹೇಗೆ ಕಟ್ಟಬೇಕು ಎನ್ನುವ ದಾರಿ ತಿಳಿಯದೆ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಒಂದು ರೀತಿಯಲ್ಲಿ ಇದು ಭಾರತದ ಎಲ್ಲ ರೈತರ ಗೋಳೂ ಹೌದು. ಅನುಪಯುಕ್ತ ಗೋವುಗಳನ್ನು ಮಾರಿ ಅದರಿಂದ ಲಾಭ ಮಾಡಿಕೊಳ್ಳುತ್ತಿದ್ದ ರೈತರೆಲ್ಲರೂ ಗೋಹತ್ಯೆ ನಿಷೇಧ ಕಾನೂನಿನಿಂದಾಗಿ ತಮ್ಮ ಗೋವುಗಳನ್ನು ಮಾರಾಟ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಇದು ಒಟ್ಟು ಹೈನೋದ್ಯಮಗಳ ಮೇಲೆ ಪರಿಣಾಮ ಬೀರುತ್ತಿದೆ. ಇದೇ ಸಂದರ್ಭದಲ್ಲಿ, ಲಾಭಕ್ಕೆ ಮಾರುತ್ತಿದ್ದ ಗೋವುಗಳನ್ನು ಗೋಶಾಲೆಗಳಿಗೆ ಉಚಿತವಾಗಿ ನೀಡಬೇಕು. ಇಲ್ಲಿ ಗೋಶಾಲೆಗಳ ಹೆಸರಿನಲ್ಲೂ ಬೃಹತ್ ಅಕ್ರಮಗಳು ನಡೆಯುತ್ತಿವೆ. ಭಾರತದಲ್ಲಿ ಪಶುಸಂಗೋಪನೆ ಮತ್ತು ಹೈನುಗಾರಿಕಾ ಇಲಾಖೆಯಡಿ ಒಟ್ಟು 7,676 ಅಧಿಕೃತ ನೋಂದಾಯಿತ ಗೋಶಾಲೆಗಳಿವೆ. ಸುಮಾರು 5,500 ಗೋಶಾಲೆಗಳು ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆಗಳಡಿ ಅನುದಾನಗಳನ್ನು ಪಡೆಯುತ್ತಿವೆ. ದೇಶದಲ್ಲೇ ಅತಿ ಹೆಚ್ಚು ಗೋಶಾಲೆಗಳಿರುವುದು ಬಡತನ, ಅಪೌಷ್ಟಿಕತೆಗಳಿಗೆ ಕುಖ್ಯಾತವಾಗಿರುವ ಉತ್ತರ ಪ್ರದೇಶದಲ್ಲಿ. ಇಲ್ಲಿ, 6,000 ಗೋಶಾಲೆಗಳಿವೆ. ಕರ್ನಾಟಕದಲ್ಲಿ 200ಕ್ಕೂ ಅಧಿಕ ಸರಕಾರಿ ಅನುದಾನಿತ ಗೋಶಾಲೆಗಳಿವೆ. ಈ ಗೋಶಾಲೆಗಳ ನಿರ್ವಹಣೆಗೆ ದೇಶ ಪ್ರತಿ ವರ್ಷ ಕೋಟ್ಯಂತರ ಹಣವನ್ನು ವ್ಯಯಿಸುತ್ತದೆ. ಗೋವುಗಳನ್ನು ಮಾರಾಟ ಮಾಡುವ ರೈತರ ಹಕ್ಕುಗಳನ್ನು ಕಿತ್ತುಕೊಂಡ ಕಾರಣದಿಂದಾಗಿ ಈ ಅನುಪಯುಕ್ತ ಗೋವುಗಳನ್ನು ಸಾಕುವ ವೆಚ್ಚ ಜನಸಾಮಾನ್ಯರ ಹೆಗಲೇರಿದೆ. ಒಂದೆಡೆ ರೈತರಿಗೆ ನಷ್ಟ, ಮತ್ತೊಂದೆಡೆ ಜನರ ಹೆಗಲಿಗೆ ಭಾರ. ಹಾಗೆಯೇ ಗೋಶಾಲೆಗಳಲ್ಲಿ ಗೋವುಗಳ ನಿರ್ವಹಣೆಯ ಬಗ್ಗೆ ದೇಶಾದ್ಯಂತ ಟೀಕೆಗಳು ಕೇಳಿ ಬರುತ್ತಿವೆ. ಗೋಶಾಲೆಗಳಲ್ಲಿ ಗೋವುಗಳು ಹಸಿವಿನಿಂದ, ರೋಗಗಳಿಂದ ದಯನೀಯ ರೀತಿಯಲ್ಲಿ ಸಾಯುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಇದೇ ಸಂದರ್ಭದಲ್ಲಿ ಕೆಲವು ಗೋಶಾಲೆಗಳಿಂದ ಅಕ್ರಮವಾಗಿ ಗೋವುಗಳನ್ನು ಬೃಹತ್ ಮಾಂಸ ಸಂಸ್ಕರಣಾ ಘಟಕಗಳಿಗೆ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಇಸ್ಕಾನ್ ವಿರುದ್ಧ ಇಂತಹ ಆರೋಪವನ್ನು ಬಿಜೆಪಿಯ ಹಿರಿಯ ನಾಯಕಿ ಮೇನಕಾಗಾಂಧಿ ಮಾಡಿದ್ದರು.
ಗೋಹತ್ಯೆ ಕಾನೂನಿನ ವಿರುದ್ಧ ಮುಸ್ಲಿಮರು ಮಾತನಾಡಿದಾಗಲೆಲ್ಲ ಅದನ್ನು ಬಿಜೆಪಿ ಮತ್ತು ಸಂಘಪರಿವಾರ ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತದೆ. ಹಾಗೆ ಬಳಸಿಕೊಳ್ಳುವುದಕ್ಕೆ ಮುಸ್ಲಿಮರು ಯಾವ ಕಾರಣಕ್ಕೂ ಅವಕಾಶ ನೀಡಬಾರದು. ಗೋಹತ್ಯೆ ನಿಷೇಧ ಕಾನೂನು ಮುಸ್ಲಿಮರ ಹೆಗಲ ಮೇಲೆ ಕೋವಿಯಿಟ್ಟು, ರೈತರ ಮೇಲೆ ಸರಕಾರ ನಡೆಸಿದ ದಾಳಿಯಾಗಿದೆ. ನಿಜಕ್ಕೂ ಇದರಿಂದ ಸಂಕಷ್ಟಕ್ಕೀಡಾಗುತ್ತಿರುವವರು ಈ ದೇಶದ ರೈತರು. ಆದುದರಿಂದ ಈ ಕಾನೂನಿನ ವಿರುದ್ಧ ಈ ದೇಶದ ರೈತರು ಸಂಘಟಿತರಾಗಿ ಬೀದಿಗಿಳಿದಾಗ ಮಾತ್ರ ಈ ಸಮಸ್ಯೆಗೆ ಪರಿಹಾರ ಸಿಗಬಹುದು.






