ನಕಲಿಗಳಿಗೆ ಬಲಿಯಾಗುತ್ತಿರುವ ಅಸಲಿ ಆಡಳಿತ ವ್ಯವಸ್ಥೆ
ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಕಳ್ಳಾಟಗಳ ಸ್ವರೂಪವನ್ನು ಅರ್ಥೈಸಿಕೊಂಡು, ಅವುಗಳಿಗಿಂತ ಒಂದು ಹೆಜ್ಜೆಯಾದರೂ ಮುಂದಿರದಿದ್ದರೆ, ಈವತ್ತಿನ ಕೃತಕ ಬುದ್ಧಿಮತ್ತೆಯ ದಿನಗಳಲ್ಲಿ ಸರಕಾರಗಳು ಇಕ್ಕಟ್ಟಿಗೆ ಸಿಲುಕಿಕೊಳ್ಳುವುದು ಬಹಳ ಸುಲಭ. ಅಂತಹ ಘಟನೆಗಳು ಮತ್ತೆ ಮತ್ತೆ ನಡೆಯತೊಡಗಿದರೆ, ಅದು ಕಣ್ತಪ್ಪಿನಿಂದ ಸಂಭವಿಸಿದ್ದಲ್ಲ, ಬದಲಾಗಿ ನಿರ್ಲಕ್ಷ್ಯದಿಂದ ಅಥವಾ ಬೇಜವಾಬ್ದಾರಿಯಿಂದ ಸಂಭವಿಸಿದ್ದು ಎಂದೇ ಪರಿಗಣಿಸಬೇಕಾಗುತ್ತದೆ.
ಇತ್ತೀಚೆಗೆ ಪ್ರಧಾನಮಂತ್ರಿಯವರ ಕಚೇರಿಯು ದೇಶದ ಟೆಲಿಕಾಂ ಕಾರ್ಯದರ್ಶಿಯವರನ್ನು ಕರೆಸಿ, ಅವರ ಇಲಾಖೆಯಿಂದ ಆಗಿರುವ ಪ್ರಮಾದವೊಂದರ ಕುರಿತು ಸ್ಪಷ್ಟನೆ ಕೇಳಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಆಗಿರುವುದು ಏನೆಂದರೆ, ನ್ಯಾಯಾಲಯದ್ದೆಂದು ಹೇಳಿಕೊಂಡ ನಕಲಿ ಆದೇಶಗಳನ್ನು ಮುಂದಿಟ್ಟುಕೊಂಡು ಟೆಲಿಕಾಂ ಇಲಾಖೆಯ ಅಧಿಕಾರಿಗಳು ಸುಮಾರು 129 ಅಕ್ರಮ ಬೆಟ್ಟಿಂಗ್ ಸೈಟ್ಗಳನ್ನು ನಿರ್ಬಂಧಿಸುವಂತೆ ಇಂಟರ್ನೆಟ್ ಸೇವಾದಾತ ಸಂಸ್ಥೆಗಳಿಗೆ ಆದೇಶ ನೀಡಿದ್ದರು.
ನ.11ರಂದು ಸುದ್ದಿಸಂಸ್ಥೆ ರಾಯ್ಟರ್ ವರದಿಗಾರರಾದ ಮುನ್ಸಿಫ್ ವೆಂಗತ್ತಿಲ್ ಮತ್ತು ಆದಿತ್ಯ ಕಾಲ್ರಾ ಅವರು ಒಂದು ತನಿಖಾ ವರದಿಯನ್ನು ಪ್ರಕಟಿಸಿದ್ದರು. ಅದರಲ್ಲಿ, ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಪೀಠ ಹಾಗೂ ರಾಜಸ್ಥಾನದ ಜೈಪುರ ಪೀಠಗಳದ್ದೆನ್ನಲಾದ ‘ಫೇಕ್’ ಆದೇಶಗಳನ್ನು ಮುಂದಿಟ್ಟುಕೊಂಡು ಟೆಲಿಕಾಂ ಇಲಾಖೆಯು ಈವರ್ಷ 129 ಅಕ್ರಮ ಬೆಟ್ಟಿಂಗ್ ವೆಬ್ಸೈಟ್ಗಳನ್ನು ನಿರ್ಬಂಧಿಸುವಂತೆ ಟೆಲಿಕಾಂ ಸೇವಾದಾತರಿಗೆ ನಿರ್ದೇಶಿಸಿದೆ. ಅಷ್ಟೇ ಅಲ್ಲ, ಆ ಇಮೇಲ್ ಕಳುಹಿಸಿದ ವಂಚಕರು ಮತ್ತೆ ಮತ್ತೆ ಇಮೇಲ್ ಮೂಲಕ ‘ಕ್ರಮ ತೆಗೆದುಕೊಂಡ ಬಗ್ಗೆ ವರದಿ ನೀಡಿ’ ಎಂದೂ ಇಲಾಖೆಗೆ ಕೇಳಿದ್ದಾರೆ, ಅದಕ್ಕೆ ಟೆಲಿಕಾಂ ಇಲಾಖೆ ಪ್ರತಿಕ್ರಿಯಿಸಿದೆ. ಆದರೆ ಅಂತಹ ಹೈಕೋರ್ಟ್ ಆದೇಶಗಳೇ ಇಲ್ಲ. ಅವು ಫೇಕ್ ಆದೇಶಗಳು ಎಂದು ವರದಿ ಹೇಳಿತ್ತು.
ಕೃತಕ ಬುದ್ಧಿಮತ್ತೆ ಬಳಸಿ ಸಿದ್ಧಪಡಿಸಲಾದ ನ್ಯಾಯಾಲಯ ದಾಖಲೆಗಳು ಯಾರೋ ವಕೀಲರ ಹೆಸರಿನಲ್ಲಿ ಟೆಲಿಕಾಂ ಇಲಾಖೆಗೆ ಇಮೇಲ್ ಮೂಲಕ ತಲುಪಿದ್ದವು. ಇ ಮೇಲ್ ಕಳುಹಿಸಿದ ‘ಆರ್ಯನ್ ಚೌಧರಿ’ ತಾನು ಅಡ್ವೊಕೇಟ್-ಆನ್-ರೆಕಾರ್ಡ್ ಎಂದು ಹೇಳಿಕೊಂಡಿದ್ದರು. ಆ ಇಮೇಲ್ ಐಡಿ ಫೇಕ್ ಎಂದು ಗೊತ್ತಾದ ಹಿನ್ನೆಲೆಯಲ್ಲಿ ಸುದ್ದಿಸಂಸ್ಥೆಯು ಅಲಹಾಬಾದ್ ಹಾಗೂ ಜೈಪುರದ ಹೈಕೋರ್ಟ್ ಪೀಠಗಳನ್ನು ಸಂಪರ್ಕಿಸಿದಾಗ, ಇದು ಫೇಕ್ ತೀರ್ಪು ಎಂದು ಪತ್ತೆ ಆಗಿತ್ತು.
ಈ ವಾಸ್ತವ ಗೊತ್ತಾದ ಬಳಿಕ, ಟೆಲಿಕಾಂ ಇಲಾಖೆ 95 ವೆಬ್ಸೈಟ್ಗಳ ನಿರ್ಬಂಧ ತೆಗೆದುಹಾಕಲು ಹೇಳಿದೆ. ಈ ಘಟನೆಯಲ್ಲಿ ದೇಶದ ಇಂಟರ್ನೆಟ್ ಕಂಟೆಂಟ್ ನಿರ್ಬಂಧ ವ್ಯವಸ್ಥೆಯು ಯಾವರೀತಿಯಲ್ಲಿ ಉತ್ತರದಾಯಿತ್ವ ಇಲ್ಲದೇ ಕಾರ್ಯನಿರ್ವಹಿಸುವುದು ಸಾಧ್ಯ ಇದೆ ಎಂಬುದು ಬಟಾಬಯಲಾಗಿದೆ. ಯಾವುದೋ ವ್ಯವಹಾರ ವೈರತ್ವ, ರಾಜಕೀಯ ಮೇಲಾಟ ಕೂಡ ಇಂತಹ ಚಟುವಟಿಕೆಗಳಿಗೆ ಹಾದಿ ತೆರೆಯತೊಡಗಿದರೆ, ಇದನ್ನೆಲ್ಲ ಸಕ್ಷಮ ಆಡಳಿತ ವ್ಯವಸ್ಥೆ ಎಂದು ಕರೆಯುವುದು ಹೇಗೆ?
ಇಂತಹ ಅವಾಂತರಗಳೇನೂ ಹೊಸದಲ್ಲ. ಇದೇ ವರ್ಷ ಜುಲೈನಲ್ಲಿ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿಯು (NCLT) ಅಸ್ತಿತ್ವದಲ್ಲೇ ಇಲ್ಲದ, ಎಐ ಮೂಲಕ ಸೃಜಿಸಲಾದ ಹಳೆಯ ತೀರ್ಪೊಂದರ ಸೈಟೇಷನ್ ಆಧರಿಸಿ ತೀರ್ಪು ನೀಡಿತ್ತು. ಕಡೆಗೆ ಪ್ರಕರಣ ಸುಪ್ರೀಂಕೋರ್ಟ್ಗೆ ಹೋಗಿ, ಸುಪ್ರೀಂಕೋರ್ಟ್ (Civil Appeal No. ೧೧೯೫೦ of ೨೦೨೫) NCLT ತೀರ್ಪನ್ನು ರದ್ದುಪಡಿಸಿದ್ದಲ್ಲದೆ, ಈ ಫೇಕ್ ಸೈಟೇಷನ್ಗಳ ವಿಚಾರದಲ್ಲಿ ಆತಂಕ ವ್ಯಕ್ತಪಡಿಸಿತ್ತು.
ಇನ್ನೂ ತಮಾಷೆಯ ಸಂಗತಿ ಎಂದರೆ, ಗುಜರಾತಿನ ಸೂರತ್ನಲ್ಲಿ ಕಳೆದ ತಿಂಗಳು ನಡೆದ ರಾಜ್ಯಮಟ್ಟದ ಆಯುರ್ವೇದ ವೈದ್ಯರ ಸಮ್ಮೇಳನವೊಂದರಲ್ಲಿ ಅಲ್ಲಿನ ಗೃಹಸಚಿವ ಹರ್ಷ ಸಾಂಘ್ವಿ, ಸಚಿವ ಪ್ರಫುಲ್ ಪನ್ಷೇರಿಯಾ ಅವರಿದ್ದ ವೇದಿಕೆಯಲ್ಲಿ ಒಬ್ಬ ವ್ಯಕ್ತಿಗೆ ‘ಆಯುರ್ವೇದ ಸೇವಾರತ್ನ’ ಪ್ರಶಸ್ತಿ ನೀಡಲಾಗಿತ್ತು. ಇದಾದ ಬಳಿಕ ಕೆಲವರು ವೈದ್ಯರು ಭಾರತೀಯ ವೈದ್ಯಕೀಯ ಪದ್ಧತಿಗಳ ರಾಷ್ಟ್ರೀಯ ಆಯೋಗಕ್ಕೆ (NCISM) ಪತ್ರ ಬರೆದು, ಪ್ರಶಸ್ತಿ ಸ್ವೀಕರಿಸಿದ ವ್ಯಕ್ತಿ ವೈದ್ಯನೇ ಅಲ್ಲ ಎಂದು ತಿಳಿಸಿದ್ದರು. ಸ್ವತಃ ಗುಜರಾತ್ ಸರಕಾರದ ಅಧೀನದಲ್ಲಿರುವ ಗುಜರಾತ್ ಆಯುರ್ವೇದ ಮತ್ತು ಯುನಾನಿ ಪದ್ಧತಿಗಳ ವೈದ್ಯಕೀಯ ಮಂಡಳಿ (GCAU) ಹಾಗೂ ದಕ್ಷಿಣ ಗುಜರಾತ್ ಚೇಂಬರ್ ಆಫ್ ಕಾಮರ್ಸ್(SGCCI) ಜೊತೆಯಾಗಿ ಆಯೋಜಿಸಿದ್ದ ಈ ಸಮ್ಮೇಳನದಲ್ಲಿ 1200 ಮಂದಿ ವೈದ್ಯರು ರಾಜ್ಯದಾದ್ಯಂತದಿಂದ ಪಾಲ್ಗೊಂಡಿದ್ದರು. ಅಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ನೀಡುವುದಕ್ಕೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಈ ವೈದ್ಯನೇ ಅಲ್ಲದ ವ್ಯಕ್ತಿಯ ಆಯ್ಕೆಯಿಂದ ನಗೆಪಾಟಲಿಗೀಡಾಗಿತ್ತು.
ದೇಶದಾದ್ಯಂತ ಇಂದು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ, ಬ್ಯಾಂಕ್ ಅಧಿಕಾರಿಗಳ ಹೆಸರಿನಲ್ಲಿ ಜನರನ್ನು ಸುಲಿದು ತಿನ್ನುವ ನಕಲಿ ವ್ಯವಸ್ಥೆಯೊಂದು ಯಾವುದೇ ಭಯ ಇಲ್ಲದೆ ಕಾರ್ಯಾಚರಿಸುತ್ತಿದೆ. ಹೀಗೆ ದೇಶದ ಉದ್ದಗಲಕ್ಕೂ ಅಸಲಿಗಳಿಗಿಂತ ನಕಲಿಗಳದೇ ಕಾರುಬಾರು ಹೆಚ್ಚಾಗತೊಡಗಿದಾಗ, ಜನಸಾಮಾನ್ಯರಿಗೆ ಯಾವುದು ಅಸಲಿ ಯಾವುದು ನಕಲಿ ಎಂಬ ಗೊಂದಲ ಮೂಡುವುದು ಸಹಜ. ಸರಕಾರಿ ವ್ಯವಸ್ಥೆಗಳು ಈ ಮಟ್ಟಕ್ಕೆ ನಂಬಿಗಸ್ಥಿಕೆ ಕಳೆದುಕೊಳ್ಳತೊಡಗಿದರೆ, ಅದನ್ನು ಆಡಳಿತ ಕೌಶಲದ ಕೊರತೆ ಎಂದೇ ಪರಿಗಣಿಸಬೇಕಾಗುತ್ತದೆ. ಪ್ರತೀಬಾರಿಯೂ ಮಾಡಿದ ತಪ್ಪಿನಿಂದ ಕಲಿತುಕೊಳ್ಳುವುದನ್ನು ಬಿಟ್ಟು ಮತ್ತೆ ಮತ್ತೆ ಅಂತಹ ತಪ್ಪುಗಳು ನಡೆಯುತ್ತಿವೆ ಎಂದರೆ, ಇದರಲ್ಲಿ ಆಡಳಿತವ್ಯವಸ್ಥೆಗೂ ಪಾಲಿರಬಹುದೇ ಎಂಬ ಸಂಶಯ ಹುಟ್ಟಿದರೂ ಅಚ್ಚರಿ ಇಲ್ಲ.
ಈಗ ವೆಬ್ಸೈಟ್ ನಿರ್ಬಂಧ ಪ್ರಕರಣದಲ್ಲಿ ಟೆಲಿಕಾಂ ಇಲಾಖೆಯ ಕಾರ್ಯದರ್ಶಿಗೆ ಪ್ರಧಾನಮಂತ್ರಿ ಕಚೇರಿಯಿಂದ ಸ್ಪಷ್ಟನೆ ಕೇಳಿ ಬುಲಾವ್ ಬಂದಿದೆ. ಇನ್ನಾದರೂ ಭಾರತ ಸರಕಾರ ತನ್ನ ಆಡಳಿತ ವ್ಯವಸ್ಥೆಯನ್ನು ಬಿಗಿಗೊಳಿಸಿಕೊಳ್ಳಲಿ. ಅಗತ್ಯ ಇರುವಲ್ಲಿ ಕ್ರಮಗಳನ್ನು ತೆಗೆದುಕೊಳ್ಳದೇ ಅನಗತ್ಯ ವಿಚಾರಗಳಲ್ಲಿ ಮೂಗು ತೂರಿಸಿಕೊಂಡು, ಅವುಗಳ ಗದ್ದಲದಲ್ಲೇ ದಿನಕಳೆಯುವ ಪರಿಪಾಠವನ್ನು ಯಾರೂ ‘ಆಡಳಿತ ಕೌಶಲ’ ಎಂದು ಕರೆಯಲಾಗದು.






