ನ್ಯಾಯದಾನ ವ್ಯವಸ್ಥೆಗೆ ಬೇಕಿದೆ ಕಾಯಕಲ್ಪ

ಸಾಂದರ್ಭಿಕ ಚಿತ್ರ (AI)
ನಮ್ಮ ನ್ಯಾಯದಾನ ಪದ್ಧತಿ ವಿಪರೀತ ವಿಳಂಬದಿಂದ ಕೂಡಿದೆ ಎಂಬ ಮಾತು ಜನಜನಿತವಾದುದು. ನ್ಯಾಯಾಲಯದ ಮೆಟ್ಟಿಲೇರಿದರೆ ವ್ಯಾಜ್ಯ ಇತ್ಯರ್ಥಗೊಳ್ಳಲು ಕೆಲವೊಮ್ಮೆ ದಶಕಗಳೇ ಬೇಕು. ಕೋರ್ಟ್ ಕಟ್ಟೆ ಏರಿ ಗೆದ್ದವ ಸೋತ, ಸೋತವ ಸತ್ತ ಎಂಬ ಮಾತು ಚಲಾವಣೆಗೆ ಬಂದಿರುವುದು ಈ ಕಾರಣಕ್ಕಾಗಿಯೇ. ಕೋರ್ಟ್ಗೆ ಅಲೆದು ಅಲೆದು ಕಕ್ಷಿದಾರರು ಹೈರಾಣ ಆಗಿರುತ್ತಾರೆ. ನ್ಯಾಯದಾನ ಪ್ರಕ್ರಿಯೆಯ ಆಮೆ ನಡಿಗೆ ಎಲ್ಲರನ್ನೂ ಸುಸ್ತು ಮಾಡಿಸುತ್ತದೆ. ಹಾಗೆಂದು ಕೋರ್ಟ್ ಮೆಟ್ಟಿಲೇರುವವರ ಸಂಖ್ಯೆಯೇನೂ ಕಡಿಮೆ ಆಗಿಲ್ಲ. ಬದಲಾದ ಸಾಮಾಜಿಕ ಸ್ಥಿತಿಗತಿ ಹಾಗೂ ಶಿಕ್ಷಣ, ತಿಳಿವಳಿಕೆಯ ಕಾರಣದಿಂದ ನ್ಯಾಯಾಲಯಗಳ ಕದ ತಟ್ಟುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಪ್ರಕರಣಗಳ ತ್ವರಿತ ವಿಲೇವಾರಿಗೆ ಮಾಡಬಹುದಾದ ವ್ಯವಸ್ಥೆಗಳನ್ನು ಮಾಡಲಾಗಿದೆಯೇ ಎಂಬ ಪ್ರಶ್ನೆ ಕೇಳಿಕೊಂಡರೆ ಸಿಗುವ ಉತ್ತರ ನಿರಾಶಾದಾಯಕ. ನ್ಯಾಯದಾನ ವಿಳಂಬವು ನ್ಯಾಯ ನಿರಾಕರಣೆಗೆ ಸಮ ಎಂಬ ಮಾತುಗಳು ಪದೇ ಪದೇ ಕೇಳಿಬರುತ್ತಿವೆಯಾದರೂ ಪರಿಹಾರ ಮಾರ್ಗಗಳು ಮಾತ್ರ ನಿರೀಕ್ಷಿತ ಮಟ್ಟದಲ್ಲಿ ತೆರೆದುಕೊಂಡಿಲ್ಲ ಎಂಬುದು ದುರದೃಷ್ಟದ ಸಂಗತಿ.
ಜನಸಂಖ್ಯೆಗೆ ತಕ್ಕಷ್ಟು ಪ್ರಮಾಣದಲ್ಲಿ ನಮ್ಮಲ್ಲಿ ನ್ಯಾಯಾಲಯಗಳು ಇಲ್ಲ. ಹತ್ತು ಲಕ್ಷ ಜನಸಂಖ್ಯೆಗೆ 50 ನ್ಯಾಯಾಧೀಶರಿರಬೇಕು ಎಂದು ಕಾನೂನು ಆಯೋಗವು ಶಿಫಾರಸು ಮಾಡಿದೆ. ಗೃಹ ವ್ಯವಹಾರಗಳಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯೂ 2002ರಲ್ಲಿ ಇದರ ಅಗತ್ಯವನ್ನು ಒತ್ತಿಹೇಳಿದೆ. ಆದರೆ ನಮ್ಮಲ್ಲಿ ಈಗ ಹತ್ತು ಲಕ್ಷ ಜನಸಂಖ್ಯೆಗೆ ಇರುವ ಕಾರ್ಯನಿರತ ನ್ಯಾಯಾಧೀಶರ ಸಂಖ್ಯೆ ಬರೀ 15. ‘‘ನ್ಯಾಯವನ್ನು ಅಪೇಕ್ಷಿಸಿ ಬರುವ ಅರ್ಜಿಗಳ ಸಂಖ್ಯೆ ತೀವ್ರವಾಗಿ ಏರುತ್ತಿದೆ. ಇವುಗಳ ವಿಚಾರಣೆಗೆ ಅಗತ್ಯವಾದಷ್ಟು ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸಿ ಎಂದು ಅನೇಕ ವರ್ಷಗಳಿಂದ ಹೇಳುತ್ತಲೇ ಇದ್ದೇವೆ. ಆದರೆ ಯಾವ ಸರಕಾರವೂ ಈ ಬೇಡಿಕೆಗೆ ಕಿವಿಗೊಟ್ಟಿಲ್ಲ’’ ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಟಿ.ಎಸ್. ಠಾಕೂರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಎದುರೇ ಭಾವುಕರಾಗಿ ಹೇಳಿದ್ದರು. ಈ ವಿದ್ಯಮಾನವು ಸಮಸ್ಯೆಯ ಗಹನತೆಯನ್ನು ಬಿಂಬಿಸುತ್ತದೆ. ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವ ವಿಚಾರ ಒತ್ತಟ್ಟಿಗಿರಲಿ, ವಿವಿಧ ಹಂತಗಳ ನ್ಯಾಯಾಲಯಗಳಲ್ಲಿ ಮಂಜೂರಾದ ಹುದ್ದೆಗಳೂ ಕಾಲಕಾಲಕ್ಕೆ ಭರ್ತಿಯಾಗುತ್ತಿಲ್ಲ ಎಂಬುದು ಸಮಸ್ಯೆಯ ಮತ್ತೊಂದು ಮಗ್ಗುಲನ್ನು ತೆರೆದಿಡುತ್ತದೆ.
ದೇಶದಾದ್ಯಂತ ಇರುವ ಜಿಲ್ಲಾ ನ್ಯಾಯಾಲಯಗಳಲ್ಲಿ 7,300 ಹುದ್ದೆಗಳು ಖಾಲಿ ಇವೆ. ವಿವಿಧ ರಾಜ್ಯಗಳ ಹೈಕೋರ್ಟ್ಗಳಲ್ಲಿ ಸುಮಾರು 300 ನ್ಯಾಯಾಧೀಶರ ಹುದ್ದೆಗಳು ಖಾಲಿ ಉಳಿದಿವೆ. ಅಂದರೆ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಮಂಜೂರಾದ ಹುದ್ದೆಗಳಲ್ಲಿ ಶೇ. 25ರಷ್ಟು ಭರ್ತಿಯಾಗದೆ ಖಾಲಿ ಉಳಿದಿವೆ. ಇತ್ಯರ್ಥವಾಗದೆ ಉಳಿದಿರುವ ಒಟ್ಟು ಪ್ರಕರಣಗಳ ಸಂಖ್ಯೆ 5.8 ಕೋಟಿ ಮೀರಿದೆ. ವಿವಿಧ ಹೈಕೋರ್ಟ್ಗಳಲ್ಲಿ 64 ಲಕ್ಷದಿಂದ 65.5 ಲಕ್ಷದಷ್ಟು ಪ್ರಕರಣಗಳು ಇತ್ಯರ್ಥಕ್ಕೆ ಕಾದಿವೆ. ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ (ಎನ್ಜೆಡಿಜಿ) ಕ್ರೋಡೀಕರಿಸಿದ ಮಾಹಿತಿಯನ್ನು ಆಧಾರವಾಗಿ ಇರಿಸಿಕೊಂಡು ಈ ಸಂಬಂಧ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿವೆ. ಕಕ್ಷಿದಾರರ ಬವಣೆಯನ್ನು ಹೆಚ್ಚಿಸುವಂತಹ ಮಾಹಿತಿ ನಿಜಕ್ಕೂ ಕಳವಳಕಾರಿ. ಹೈಕೋರ್ಟ್ಗಳಲ್ಲಿ ಹಾಗೂ ಕೆಳ ಹಂತದ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಹಾಗೂ ಇತರ ಸಿಬ್ಬಂದಿಯ ಕೊರತೆ ತೀವ್ರವಾಗಿ ಇರುವಾಗ ಪ್ರಕರಣಗಳ ವಿಲೇವಾರಿ ತ್ವರಿತವಾಗಿ ಆಗಲು ಹೇಗೆ ಸಾಧ್ಯ? ನ್ಯಾಯಾಧೀಶರ ಕೊರತೆಯ ಕಾರಣ ಕೆಲಸದ ಒತ್ತಡ ಸಹಜವಾಗಿಯೇ ಹೆಚ್ಚಾಗುತ್ತದೆ. ಅದರ ಪರಿಣಾಮವು ಒಟ್ಟಾರೆ ನ್ಯಾಯದಾನ ಪ್ರಕ್ರಿಯೆ ಮೇಲೂ ಉಂಟಾಗುತ್ತದೆ. ನ್ಯಾಯ ನಿರ್ಣಯ ತ್ವರಿತವಾಗಿ ಆಗದೇ ಇದ್ದರೆ ಅದರ ಬವಣೆ ನೇರವಾಗಿ ತಟ್ಟುವುದು ಕಕ್ಷಿದಾರನಿಗೆ. ಜೈಲುಗಳಲ್ಲಿ ಕೊಳೆಯುತ್ತಿರುವ ಲಕ್ಷಾಂತರ ಮಂದಿ ವಿಚಾರಣಾಧೀನ ಕೈದಿಗಳ ಬದುಕು-ಭವಿಷ್ಯ ಅತಂತ್ರ ಸ್ಥಿತಿಯಲ್ಲಿ ಉಳಿಯುತ್ತದೆ. ನ್ಯಾಯ ನಿರ್ಣಯ ಪ್ರಕ್ರಿಯೆಯಲ್ಲಿನ ವಿಳಂಬವು ದೊಡ್ಡ ಮಟ್ಟದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ಹೊಂದಿರುತ್ತದೆ. ನ್ಯಾಯದಾನ ವ್ಯವಸ್ಥೆಯ ಬಗ್ಗೆ ಜನರು ಹೊಂದಿರುವ ವಿಶ್ವಾಸಕ್ಕೆ ಅದರಿಂದ ಕುಂದು ಉಂಟಾಗುತ್ತದೆ. ವ್ಯವಸ್ಥೆಯ ಬಗೆಗಿನ ನಂಬಿಕೆ ಕುಸಿದರೆ ಅದು ಮುಂದೊಂದು ದಿನ ಅರಾಜಕತೆಗೆ ದಾರಿ ಮಾಡಿಕೊಡುತ್ತದೆ ಎಂಬ ಎಚ್ಚರ ಆಳುವ ವರ್ಗಕ್ಕೆ ಇರಬೇಕಾದುದು ಅಗತ್ಯ.
ನ್ಯಾಯದಾನ ಪ್ರಕ್ರಿಯೆಯಲ್ಲಿನ ವಿಳಂಬಕ್ಕೆ ಬೇರೆ ಬೇರೆ ಕಾರಣಗಳಿವೆ. ಅದಕ್ಕೆ ನ್ಯಾಯಾಧೀಶರ ಕೊರತೆಯೊಂದೇ ಕಾರಣವಾಗಲಾರದು. ಆದರೆ, ನ್ಯಾಯಾಧೀಶರ ಹುದ್ದೆಗಳು ಖಾಲಿ ಉಳಿಯಲು ನೇಮಕಾತಿ ವ್ಯವಸ್ಥೆಯಲ್ಲಿನ ವೈಫಲ್ಯವೇ ಪ್ರಧಾನ ಕಾರಣ. ನ್ಯಾಯಾಧೀಶರ ನಿವೃತ್ತಿ ಗುಟ್ಟಿನ ಸಂಗತಿಯೇನಲ್ಲ. ನ್ಯಾಯಾಧೀಶರ ಸೇವಾ ಅವಧಿ ಯಾವಾಗ ಮುಗಿಯುತ್ತದೆ ಎಂಬುದು ಮುಂಚಿತವಾಗಿಯೇ ತಿಳಿದಿರುತ್ತದೆ. ಒಬ್ಬರು ನಿವೃತ್ತರಾಗುತ್ತಲೇ ಮತ್ತೊಬ್ಬರು ಆ ಸ್ಥಾನ ತುಂಬುವ ರೀತಿಯಲ್ಲಿ ನೇಮಕಾತಿಯು ಕಾಲಕಾಲಕ್ಕೆ ವ್ಯವಸ್ಥಿತವಾಗಿ ನಡೆಯಬೇಕು. ಅದು ಆಗದಿರುವುದರಿಂದಲೇ ಹುದ್ದೆಗಳು ಖಾಲಿ ಉಳಿಯುತ್ತಿವೆ. ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದಂತೆ ಎಡರುತೊಡರುಗಳಿದ್ದಲ್ಲಿ ಅವುಗಳನ್ನು ಗುರುತಿಸಿ ಸರಿಪಡಿಸುವ ಕೆಲಸ ಆದ್ಯತೆಯ ಮೇರೆಗೆ ಆಗಬೇಕು. ನ್ಯಾಯದಾನ ವ್ಯವಸ್ಥೆಗೆ ಕಾಯಕಲ್ಪ ಬೇಕು. ಇದಕ್ಕೆ ಬೇಕಾದ ಮೂಲಸೌಕರ್ಯ, ಸಿಬ್ಬಂದಿಯ ನೇಮಕ, ತಂತ್ರಜ್ಞಾನದ ಅಳವಡಿಕೆಗೆ ಮೀನಮೇಷ ಎಣಿಸುವುದು ತರವಲ್ಲ. ಶಾಸಕಾಂಗ ಮತ್ತು ನ್ಯಾಯಾಂಗ ಸಮನ್ವಯದಿಂದ ಕೆಲಸ ಮಾಡಿದರೆ ಮಾತ್ರ ಇದು ಸಾಧ್ಯ. ಯಾವುದೇ ಒಂದು ಅಂಗ ಪ್ರತಿಷ್ಠೆಗೆ ಅಂಟಿಕೊಂಡರೂ ಅದರಿಂದ ಉಂಟಾಗುವ ಬವಣೆ ಅನುಭವಿಸಬೇಕಾಗಿರುವುದು ಸಾರ್ವಜನಿಕರು. ನ್ಯಾಯ ಬಯಸಿ ನ್ಯಾಯಾಲಯಗಳ ಮೆಟ್ಟಿಲೇರುವ ಜನರಿಗೆ ತ್ವರಿತವಾಗಿ ನ್ಯಾಯ ಸಿಗಬೇಕೆಂಬ ಕಾಳಜಿಯು ಸರಕಾರ, ಶಾಸಕಾಂಗ, ನ್ಯಾಯಾಂಗ, ವಕೀಲರು ಈ ಎಲ್ಲರಿಗೂ ಇರಬೇಕು. ಬಾಕಿ ಇರುವ ಪ್ರಕರಣಗಳ ಹೊರೆ ಇಳಿಸಿಕೊಳ್ಳಲು ಹೊಸ ಮಾರ್ಗೋಪಾಯಗಳನ್ನು ಶೋಧಿಸಬೇಕು ಮತ್ತು ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಜರುಗಿಸಬೇಕು. ಇದು ಕಾಲದ ಅಗತ್ಯವೂ ಹೌದು. ವ್ಯವಸ್ಥೆಯ ಬಗೆಗೆ ಜನರು ನಂಬಿಕೆ ಉಳಿಸಿಕೊಳ್ಳಲು ಮಾಡಬೇಕಿರುವ ತುರ್ತು ಕೆಲಸವೂ ಹೌದು. ನ್ಯಾಯಾಂಗ ಮತ್ತು ಸರಕಾರಗಳು ಈ ದಿಸೆಯಲ್ಲಿ ಗಂಭೀರವಾಗಿ ಯೋಚಿಸಬೇಕು.






