ವ್ಯರ್ಥವಾಗದ ಖಾಮಿನೈ ಕುಟುಂಬದ ಬಲಿದಾನ!

Photo: x.com/TehranTimes
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಅಮೆರಿಕ-ಇಸ್ರೇಲ್ ವಾಯುದಾಳಿಗೆ ಬಲಿಯಾದ 130 ದಿನಗಳ ಬಳಿಕ ಇರಾನ್ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶೋಕತಪ್ತ ಜನಸಾಗರದ ನಡುವೆ ನೆರವೇರಿತು. ಅವರ ಜೊತೆಗೆ ಕುಟುಂಬದ ಇತರ ನಾಲ್ವರು ಸದಸ್ಯರ ಪಾರ್ಥಿವ ಶರೀರಗಳ ಅಂತ್ಯಕ್ರಿಯೆಯೂ ನಡೆದಿದೆ. ಅಲ್ಲಿದ್ದ 14 ತಿಂಗಳ ಖಾಮಿನೈ ಮೊಮ್ಮಗಳ ಮೃತದೇಹದ ಸಣ್ಣ ಪೆಟ್ಟಿಗೆ ಜಗತ್ತಿನ ಆತ್ಮಸಾಕ್ಷಿಯನ್ನು ಚುಚ್ಚುವಂತಿತ್ತು. ಮೃತ ದೇಹ ಪೆಟ್ಟಿಗೆಗಳಲ್ಲಿ ಅದು ಅತಿ ಸಣ್ಣ ಪೆಟ್ಟಿಗೆಯಾಗಿದ್ದರೂ, ಅದರ ಭಾರವನ್ನು ಭರಿಸುವ ಶಕ್ತಿ ಈ ಜಗತ್ತಿನ ಯಾವುದೇ ಹೆಗಲಿಗಿರಲಿಲ್ಲ ಎನ್ನುವ ಕಹಿಸತ್ಯಕ್ಕೆ ಜಗತ್ತಿನ ಎಲ್ಲ ನಾಯಕರು ಸಾಕ್ಷಿಯಾಗಿದ್ದರು. ಇರಾನ್ ಸಾರ್ವಭೌಮತೆಯ ಉಳಿವಿಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಈ ನಾಯಕರ ಅಂತ್ಯಕ್ರಿಯೆ ಪ್ರಕ್ರಿಯೆ ಕಳೆದ ಶುಕ್ರವಾರ ಟೆಹರಾನ್ನಲ್ಲಿ ಆರಂಭಗೊಂಡಿತ್ತು. ಈ ಒಂದು ವಾರದ ಅವಧಿಯ ವಿದಾಯ ಕಾರ್ಯಕ್ರಮದಲ್ಲಿ ಅಂತರ್ರಾಷ್ಟ್ರೀಯ ನಾಯಕರು ಉಪಸ್ಥಿತರಿದ್ದರು. ಲಕ್ಷಾಂತರ ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಖಾಮಿನೈ ಅವರಿಗೆ ಶೋಕ ವ್ಯಕ್ತಪಡಿಸಿರುವುದಷ್ಟೇ ಅಲ್ಲ, ಇಸ್ರೇಲ್, ಅಮೆರಿಕದ ವಿರುದ್ಧ ಆಕ್ರೋಶದ ಘೋಷಣೆಗಳನ್ನು ಮೊಳಗಿಸಿದರು. ಇದೊಂದು ಶೋಕತಪ್ತ ವಿದಾಯ ಮಾತ್ರವಾಗಿರಲಿಲ್ಲ. ಅಮೆರಿಕದ ಮುಖವಾಡಗಳನ್ನು ಕಿತ್ತು ಹಾಕಲು ಇರಾನ್ ಈ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿತು. ಯಾರು ನಾಯಕರು, ಯಾರು ಖಳನಾಯಕರು ಎನ್ನುವುದನ್ನು ಜಗತ್ತಿನ ಮುಂದೆ ಘಂಟಾಘೋಷವಾಗಿ ಘೋಷಿಸಿತು.
ಯುದ್ಧದಲ್ಲಿ ಬಲಿದಾನಗೈದ ನಾಯಕರ ಅಂತ್ಯಸಂಸ್ಕಾರಕ್ಕೆ ಇರಾನ್ ಸಿದ್ಧತೆ ನಡೆಸುತ್ತಿದ್ದಂತೆಯೇ ಇತ್ತ ಅಮೆರಿಕ ಸ್ವತಃ ತನ್ನದೇ ಅಂತ್ಯಕ್ರಿಯೆ ನಡೆಯುತ್ತದೆಯೋ ಎನ್ನುವಂತೆ ವರ್ತಿಸ ತೊಡಗಿತ್ತು. ಈ ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ಲಕ್ಷಾಂತರ ಜನರು ಭಾಗವಹಿಸುವ ಸೂಚನೆಗಳು ಅದಕ್ಕೆ ಆಗಲೇ ದೊರಕಿತ್ತು. ಆದುದರಿಂದ ಈ ಕಾರ್ಯಕ್ರಮ ಜರುಗದಂತೆ ನೋಡುವ ಗರಿಷ್ಠ ಪ್ರಯತ್ನವನ್ನು ಅದು ಮಾಡಿತ್ತು. ಒಂದೆಡೆ ಯುದ್ಧ ವಿರಾಮದ ಮಾತನಾಡುತ್ತಾ ಮತ್ತೊಂದೆಡೆ ಪರೋಕ್ಷ ದಾಳಿಗಳನ್ನು ನಡೆಸುತ್ತಿದ್ದ ಅಮೆರಿಕಕ್ಕೆ ಇರಾನ್ ಒಡ್ಡಿದ ಹೊಸ ಸವಾಲನ್ನು ಎದುರಿಸುವುದು ತೀರಾ ಕಷ್ಟವಾಗಿತ್ತು. ಯಾಕೆಂದರೆ, ಖಾಮಿನೈ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಇರಾನ್ನ ಲಕ್ಷಾಂತರ ಜನ ನಾಗರಿಕರು ಭಾಗವಹಿಸಲಿದ್ದಾರೆ ಮಾತ್ರವಲ್ಲ, ಜಾಗತಿಕ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿರುವುದು ಅಮೆರಿಕಕ್ಕೆ ಜೀರ್ಣಿಸಲಾಗದ ಸಂಗತಿಯಾಗಿತ್ತು. ಇರಾನ್ನ ಸರ್ವೋಚ್ಚ ನಾಯಕ ಖಾಮಿನೈ ಅವರನ್ನು ಸರ್ವಾಧಿಕಾರಿ, ಜನವಿರೋಧಿ ಎಂದು ಬಿಂಬಿಸಿ ಅಮೆರಿಕ ದಾಳಿ ಶುರು ಮಾಡಿತ್ತು. ತಾನು ಮಾಡುತ್ತಿರುವ ಯುದ್ಧ ಇರಾನ್ನ ಮಹಿಳೆಯರು ಮತ್ತು ನಾಗರಿಕರ ಪರವಾಗಿದೆ ಎಂದು ಅದು ಹೇಳಿಕೊಂಡಿತ್ತು. ಆದರೆ ಸರ್ವೋಚ್ಚ ನಾಯಕರ ಬಲಿದಾನಗಳು ಅಮೆರಿಕದ ಸುಳ್ಳಿನ ಕ್ಷಿಪಣಿಗಳನ್ನೆಲ್ಲ ಧ್ವಂಸ ಮಾಡಿತು.
ಖಾಮಿನೈ ಹತ್ಯೆಯು ಇರಾನ್ ಯುದ್ಧವನ್ನು ಕೊನೆಗೊಳಿಸಲಿಲ್ಲ. ಬದಲಿಗೆ ಅಮೆರಿಕ ಮತ್ತು ಇಸ್ರೇಲ್ನ ಪಾಲಿಗೆ ಯುದ್ಧವನ್ನು ಇನ್ನಷ್ಟು ಭೀಕರವಾಗಿಸಿತು. ಎಲ್ಲ ನಾಶ, ನಷ್ಟಗಳ ನಡುವೆಯೂ ಇರಾನ್ ಭಾರೀ ಪ್ರತಿರೋಧವನ್ನು ವ್ಯಕ್ತಪಡಿಸಿತು. ಇರಾನ್ನ ನಾಗರಿಕರ ಪರವಾಗಿ, ಮಹಿಳೆಯರ ಪರವಾಗಿ ಮಾತನಾಡುತ್ತಿದ್ದ ಅಮೆರಿಕವೇ ಅಲ್ಲಿನ ಆಸ್ಪತ್ರೆ, ಶಾಲೆಗಳ ಮೇಲೆ ದಾಳಿ ನಡೆಸಿತ್ತು. ನೂರಾರು ವಿದ್ಯಾರ್ಥಿನಿಯರ ಕಗ್ಗೊಲೆಗಳನ್ನು ಮಾಡಿತು. ಮೊದಲ ದಾಳಿಯಲ್ಲೇ ಖಾಮಿನೈ ಹತ್ಯೆಯಾಗಿದ್ದರೂ, ಮುಂದಿನ ಇಡೀ ಯುದ್ಧವನ್ನು ಮುನ್ನಡೆಸಿದ್ದು ಅವರ ಬಲಿದಾನವೇ ಆಗಿತ್ತು ಎನ್ನುವುದು ವಾಸ್ತವವಾಗಿದೆ. ಆ ಬಲಿದಾನಗಳ ಸ್ಫೂರ್ತಿಯಿಂದ ಇರಾನ್ ನಾಗರಿಕರು ಅಮೆರಿಕದ ವಿರುದ್ಧ ಸಂಘಟಿತ ರಾದರು. ಇರಾನ್ನ ಮೂಲಭೂತ ಸೌಕರ್ಯಗಳ ಮೇಲೆ, ಸೇತುವೆಗಳ ಮೇಲೆ ದಾಳಿ ನಡೆಸುತ್ತೇನೆ ಎಂದು ಬೆದರಿಕೆಯೊಡ್ಡಿದಾಗ ಅಲ್ಲಿನ ನಾಗರಿಕರು ಅಂಜದೆ ಬೀದಿಗಿಳಿದು ಅಮೆರಿಕದ ಕ್ಷಿಪಣಿಗಳಿಗೆ ಎದೆಯೊಡ್ಡಿ ನಿಂತರು.
ಖಾಮಿನೈಯ ಈ ಸಾರ್ವಜನಿಕ ವಿದಾಯ ಕಾರ್ಯಕ್ರಮ ನಡೆಯದಂತೆ ನೋಡಿಕೊಳ್ಳಲು ಅಮೆರಿಕ ತನ್ನ ಗರಿಷ್ಠ ಪ್ರಯತ್ನ ಮಾಡಿತಾದರೂ, ಅದರಲ್ಲಿ ಸಂಪೂರ್ಣ ವಿಫಲವಾಯಿತು. ಏಕಾಏಕಿ ಮತ್ತೆ ಯುದ್ಧ ಸ್ಥಿತಿಯನ್ನು ನಿರ್ಮಾಣ ಮಾಡುವುದರ ಹಿಂದೆ ಈ ಬೃಹತ್ ಕಾರ್ಯಕ್ರಮವನ್ನು ವಿಫಲಗೊಳಿಸುವ ಉದ್ದೇಶವೂ ಇತ್ತು. ಇರಾನ್ನಲ್ಲಿ ಮತ್ತೆ ಯುದ್ಧದ ಸನ್ನಿವೇಶ ಸೃಷ್ಟಿಯಾದರೆ ಅಂತ್ಯಕ್ರಿಯೆಯಲ್ಲಿ ನಾಗರಿಕರು ಭಾಗವಹಿಸಲಾರರು ಮತ್ತು ಜಾಗತಿಕ ನಾಯಕರು ಸ್ಪಂದಿಸಲಾರರು ಎಂದು ಟ್ರಂಪ್ ಭಾವಿಸಿದ್ದರು. ಹತಾಶೆಯ ಭರದಲ್ಲಿ ಅವರು, ವಿದಾಯ ಕಾರ್ಯಕ್ರಮಕ್ಕೆ ನೆರೆದ ಜನರ ಮೇಲೆ ದಾಳಿ ನಡೆಸಿ ಎಲ್ಲರನ್ನು ಸರ್ವನಾಶ ಮಾಡುವ ಬೆದರಿಕೆಯನ್ನೂ ಒಡ್ಡಿದರು. ಆದರೆ ಇರಾನ್ ಅದಕ್ಕೆ ಮಣಿಯದೆ ‘‘ನೀವು ಜನರನ್ನು ಕೊಲ್ಲಬಹುದು. ಆದರೆ ಅವರ ಆದರ್ಶಗಳನ್ನು ಕೊಲ್ಲಲು ಸಾಧ್ಯವಿಲ್ಲ. ನೀವು ಖಾಮಿನೈ ಅವರನ್ನು ಹತ್ಯೆ ಮಾಡಿದ್ದೀರಿ. ಆದರೆ ವಾಸ್ತವದಲ್ಲಿ ನೀವು ಎಲ್ಲೆಡೆ ಪರಿಮಳ ಹರಡುವ ಸುಗಂಧದ ಬಾಟಲಿಯನ್ನು ಒಡೆದಿದ್ದೀರಿ. ಆದರೆ ನಾಗರಿಕತೆ, ಗೌರವ ಇವೆಲ್ಲದರ ಅರಿವಿಲ್ಲದ ನಿಮಗೆ ಇದು ಅರ್ಥವಾಗುವುದಿಲ್ಲ’’ ಎಂದು ಹೇಳಿತು. ಖಾಮಿನೈ ಬಲಿದಾನದ ಮಹತ್ವವನ್ನು ಎತ್ತಿ ಹಿಡಿಯುವ ಅರ್ಥಪೂರ್ಣವಾದ ರೂಪಕ ಇದಾಗಿದೆ. ಆ ಬಲಿದಾನದ ಪರಿಮಳವನ್ನು ತನ್ನ ಬೊಗಸೆಯಲ್ಲಿ ಬಂಧಿಸಿಡಲು ಅಮೆರಿಕ ಪ್ರಯತ್ನಿಸಿ ಜಗತ್ತಿನ ಮುಂದೆ ನಗೆಪಾಟಲಿಗೀ ಡಾಯಿತು.
ಖಾಮಿನೈ ಬಲಿದಾನ ಯುದ್ಧವನ್ನು ಮುನ್ನಡೆಸಿ ಇರಾನನ್ನು ಗೆಲ್ಲಿಸಿದೆ ಮಾತ್ರವಲ್ಲ, ಭವಿಷ್ಯದ ಇರಾನ್ನ ಪುನರ್ನಿರ್ಮಾಣದಲ್ಲೂ ಅದು ಪಾತ್ರವಹಿಸುವ ಸೂಚನೆಗಳು ಕಾಣಿಸುತ್ತಿವೆ. ಸರ್ವೋಚ್ಚ ನಾಯಕ ಖಾಮಿನೈ ಆಡಳಿತದಲ್ಲಿ ಇರಾನ್ ಶ್ರೇಷ್ಠ ದೇಶವೇನೂ ಆಗಿರಲಿಲ್ಲ. ಎಲ್ಲ ದೇಶಗಳಂತೆಯೇ ಅಲ್ಲೂ ಭ್ರಷ್ಟಾಚಾರ, ಅಕ್ರಮಗಳು ತುಂಬಿತುಳುಕುತ್ತಿತ್ತು. ಪ್ರತಿಭಟನೆಗಳನ್ನು ದಮನ ಮಾಡಲಾಗುತ್ತಿತ್ತು. ಆದರೆ ಟ್ರಂಪ್ ಎನ್ನುವ ಭೀಕರ ಸರ್ವಾಧಿಕಾರಿ ಇರಾನ್ನ ಮೇಲೆ ಎಸಗಿದ ದೌರ್ಜನ್ಯದ ಮುಂದೆ ಖಾಮಿನೈಯ ಆಡಳಿತದ ವೈಫಲ್ಯಗಳೆಲ್ಲ ಮರೆಗೆ ಸರಿಯಿತು. ತನ್ನ ದೇಶಕ್ಕಾಗಿ ಅವರು ಮಾಡಿದ ತ್ಯಾಗ, ಬಲಿದಾನ ಮುನ್ನೆಲೆಗೆ ಬಂತು. ಇರಾನ್ನ ಮಕ್ಕಳ ಮೇಲೆ, ಮಹಿಳೆಯರ ಮೇಲೆ, ನಾಗರಿಕರ ಮೇಲೆ ನಡೆದ ದಾಳಿಗಳಿಂದಾಗಿ ಅಮೆರಿಕ ಮತ್ತು ಇಸ್ರೇಲ್ ವಿಶ್ವದ ಮುಂದೆ ಬೆತ್ತಲಾಗಿವೆ. ಭಯೋತ್ಪಾದನೆಯ ಬಗ್ಗೆ, ಸರ್ವಾಧಿಕಾರದ ಬಗ್ಗೆ ಮಾತನಾಡುವ ನೈತಿಕತೆಯನ್ನು ಅದು ಸಂಪೂರ್ಣ ಕಳೆದುಕೊಂಡು ಜಗತ್ತಿನಲ್ಲಿ ಒಂಟಿಯಾಗಿದೆ. ಈ ಯುದ್ಧದಲ್ಲಿ ಇರಾನ್ನ ಅತಿ ದೊಡ್ಡ ಗೆಲುವು ಇದುವೇ ಆಗಿದೆ. ಇರಾನ್ ಪಾಲಿಗೆ ಖಾಮಿನೈ ಈ ಮೂಲಕ ಹುತಾತ್ಮರಾಗಿಯೂ ಅಲ್ಲಿನ ಜನಮನದಲ್ಲಿ ಜೀವಂತವಾಗಿದ್ದಾರೆ.






