ಶಾಸನಗಳ ರಚನೆಯಲ್ಲಿ ಪ್ರಬುದ್ಧತೆಯ ಅಗತ್ಯ

Photo Credit : PTI
ದಿಲ್ಲಿಯ ಪಿಆರ್ಎಸ್ ಲೆಜಿಸ್ಲೇಟಿವ್ ರಿಸರ್ಚ್ (ಪಿಆರ್ಎಸ್) ಸಂಸ್ಥೆಯು ವಿವಾದಾತ್ಮಕ ರೀತಿಯಲ್ಲಿ ಆಗಸ್ಟ್ 13ಕ್ಕೆ ಕೊನೆಗೊಂಡ ದೇಶದ ಸಂಸತ್ತಿನ ಮುಂಗಾರು ಅಧಿವೇಶನದ ಕಾರ್ಯಕಲಾಪದ ದಕ್ಷತೆಯ ಬಗ್ಗೆ ವರದಿಯನ್ನು ಹೊರತಂದಿದೆ. ಅದರ ಪ್ರಕಾರ ಸಂಸತ್ತಿನಲ್ಲಿ ಮಂಡಿಸಲಾದ 11 ಮಸೂದೆಗಳಲ್ಲಿ 9 ಯಾವುದೇ ಚರ್ಚೆಯಿಲ್ಲದೆ ಅಂಗೀಕಾರವಾದವು. ನ್ಯಾಯ ಮಂಡಳಿಗಳಿಗೆ ನೇಮಕಾತಿ, ಕೇರಳ ರಾಜ್ಯದ ಮರುನಾಮಕರಣ, ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ, ವಿದೇಶಿ ದೇಣಿಗೆಯ ನಿಯಂತ್ರಣ ಕಾನೂನು ತಿದ್ದುಪಡಿ, ಗಣಿ ಮತ್ತು ಖನಿಜಗಳ ಕಾಯ್ದೆಯ ತಿದ್ದುಪಡಿ, ಎಂಎಸ್ಎಂಇ-ಹೀಗೆ ಕೆಲವು ಮಹತ್ವಪೂರ್ಣ ವಿಷಯಗಳ ಬಗ್ಗೆ ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಲಾಗಿತ್ತು.
ವಿರೋಧ ಪಕ್ಷಗಳ ಪ್ರತಿಭಟನೆಗಳಿಂದ ಮತ್ತು ಅಸಹಕಾರದಿಂದ ಸಂಸತ್ತಿನ ಅಮೂಲ್ಯವಾದ ಸಮಯ ವ್ಯರ್ಥವಾಯಿತು ಎಂಬ ಕಾರಣವನ್ನು ನೀಡಿದ ಸರಕಾರವು, ಅಗತ್ಯದ ಶಾಸನಗಳನ್ನು ಚರ್ಚೆಗಳಿಲ್ಲದೆ ಅಂಗೀಕರಿಸಬೇಕಾಯಿತು ಎಂದು ಹೇಳಿಕೊಂಡಿದೆ. ಆದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನತೆಯ ಮೇಲೆ ಪ್ರಭಾವ ಬೀರಬಲ್ಲ ಕಾನೂನುಗಳನ್ನು ರೂಪಿಸುವ ಮೊದಲು ಜನಪ್ರತಿನಿಧಿಗಳ ಮಟ್ಟದಲ್ಲಿ ಮುಕ್ತ ಚರ್ಚೆಯು ಅಗತ್ಯ. ಚರ್ಚೆಯು ಸುಗಮವಾಗುವಂತೆ ಮತ್ತು ಅದಕ್ಕೆ ಬೇಕಾದ ಕಾಲಾವಕಾಶ ದೊರಕುವಂತೆ ಮಾಡುವ ಜವಾಬ್ದಾರಿ ಆಳುವ ಪಕ್ಷದ ಮೇಲಿದೆ.
ಶಾಸನಗಳನ್ನು ರಚಿಸುವುದು ಸಂಸತ್ತಿನ ಮುಖ್ಯವಾದ ಒಂದು ಕಾರ್ಯ. ಪ್ರಜಾಪ್ರಭುತ್ವದಲ್ಲಿ ಶಾಸನಗಳನ್ನು ರಚಿಸುವಾಗ ವಿಭಿನ್ನ ಹಿತಾಸಕ್ತಿಗಳ ಅಭಿಪ್ರಾಯಗಳನ್ನು ಅರಿತುಕೊಂಡು ಅವುಗಳಿಗೆ ಸ್ಪಂದಿಸಿ ಮಸೂದೆಯನ್ನು ಸೂಕ್ತವಾಗಿ ಪರಿಷ್ಕರಿಸುವುದು ಅತೀ ಅಗತ್ಯ. ಇದು ಸಾಧ್ಯವಾಗುವುದು ಸಂಸತ್ತಿನ ಸದನಗಳಲ್ಲಿ ಆಗುವ ಚರ್ಚೆಗಳ ಮೂಲಕ.
ಸಂಸತ್ತಿನಲ್ಲಿ ಮಸೂದೆಗಳು ಹೇಗೆ ಮಂಡನೆಯಾಗುತ್ತವೆ ಮತ್ತು ಯಾವ ಕ್ರಮದಲ್ಲಿ ಚರ್ಚೆಯಾಗಿ ಕೊನೆಗೆ ಅನುಮೋದನೆಯಾಗುತ್ತವೆ ಎಂಬುದರ ಬಗ್ಗೆ ಸರಳವಾದ ಮಾಹಿತಿಯು ಇಲ್ಲಿ ಪ್ರಸ್ತುತವಾಗುತ್ತದೆ. ಯಾವುದೇ ಹೊಸ ಕಾನೂನನ್ನು ತರುವ ಅಥವಾ ಊರ್ಜಿತದಲ್ಲಿರುವ ಒಂದು ಶಾಸನವನ್ನು ತಿದ್ದುಪಡಿಮಾಡುವ ಅಧಿಕಾರವು ಆ ವಿಷಯಕ್ಕೆ ಸಂಬಂಧಪಟ್ಟ ಕೇಂದ್ರ ಮಂತ್ರಿಗಳದ್ದು. ಅವರ ವಿಭಾಗವು ಕರಡು ರೂಪದಲ್ಲಿ ಮಸೂದೆಯನ್ನು ಸಿದ್ಧಪಡಿಸುತ್ತದೆ. ಕರಡು ಮಸೂದೆಯನ್ನು ಕಾನೂನು ಮಂತ್ರಾಲಯದ ಪರಿಶೀಲನೆಯ ಬಳಿಕ ಮಂತ್ರಿಗಳು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಭಾಧ್ಯಕ್ಷರ ಅನುಮತಿ ಪಡೆದು ಮಂಡಿಸುತ್ತಾರೆ. ತದನಂತರ ಮಸೂದೆಯು ವಿಸ್ತೃತವಾದ ಚರ್ಚೆಗೆ ಒಳಗಾಗುತ್ತದೆ. ಗಂಭೀರ ಮತ್ತು ಕ್ಲಿಷ್ಟ ವಿಷಯವಾದರೆ ಮಸೂದೆಯನ್ನು ಸಂಸತ್ತಿನ ನಿರ್ಣಯದ ಮೂಲಕ ಒಂದು ಸಂಸದೀಯ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗುತ್ತದೆ. ಆ ನಿರ್ಧಾರವು ಸಂಸತ್ತಿನದ್ದು ಆದರೂ ಅದರ ಬಗ್ಗೆ ಸರಕಾರವೇ ಮುತುವರ್ಜಿ ವಹಿಸಬೇಕಾಗುತ್ತದೆ. ಸದನದಲ್ಲಿ ಶಾಸಕರು ಒತ್ತಾಯ ಮಾಡಿದ ಸನ್ನಿವೇಶದಲ್ಲಿಯೂ ಸಮಿತಿಯನ್ನು ರಚಿಸಬಹುದು. ಸಂಸದೀಯ ಸಮಿತಿಯಲ್ಲಿ ಆಳುವ ಮತ್ತು ವಿರೋಧ ಪಕ್ಷಗಳ ಸದಸ್ಯರು ಅವುಗಳ ಬಲಾಬಲಕ್ಕೆ ಅನುಗುಣವಾಗಿ ಸದಸ್ಯರನ್ನು ಹೊಂದಿರುತ್ತಾರೆ.
ಮಸೂದೆಯ ಪರಿಶೀಲನೆಯ ಸಂದರ್ಭದಲ್ಲಿ ಸಮಿತಿಯು ಬೇರೆ ಬೇರೆ ತಜ್ಞರ ಅಭಿಪ್ರಾಯಗಳನ್ನು ಸ್ವೀಕರಿಸುವ ವ್ಯವಸ್ಥೆಯಿದೆ. ಆಸಕ್ತ ವರ್ಗದ ಸಾರ್ವಜನಿಕರೂ ತಮ್ಮ ಅಭಿಪ್ರಾಯವನ್ನು ಸಮಿತಿಗೆ ಲಿಖಿತವಾಗಿ ಅಥವಾ ಮೌಖಿಕವಾಗಿ ಸಲ್ಲಿಸಬಹುದು. ಇವುಗಳನ್ನೆಲ್ಲ ಪರಿಶೀಲಿಸಿ ಕರಡು ಮಸೂದೆಯಲ್ಲಿ ಅಗತ್ಯವಿದ್ದ ಬದಲಾವಣೆಗಳನ್ನು ಮಾಡಿ ಅದನ್ನು ಸಂಸತ್ತಿನಲ್ಲಿ ಪುನಃ ಮಂಡಿಸಿ ಮತ್ತೆ ಚರ್ಚೆಯಾಗಿ ಸಂಸತ್ತು ಒಪ್ಪಿಗೆಯನ್ನು ನೀಡುವ ಪದ್ಧತಿ ಸಾಮಾನ್ಯವಾಗಿ ರೂಢಿಯಲ್ಲಿದೆ.
ಪ್ರಮುಖ ಮಸೂದೆಗಳನ್ನು ಸದನದಲ್ಲಿ ಕ್ಯಾಬಿನೆಟ್ ಮಂತ್ರಿಗಳೇ ಮಂಡಿಸುವುದು ಪ್ರಜಾತಂತ್ರದ ಸಂಪ್ರದಾಯ. ಅದು ಸರಕಾರವು ಸಂಸತ್ತಿಗೆ ಸೂಚಿಸುವ ಗೌರವದ ಸಂಕೇತ. ಅಷ್ಟು ಮಾತ್ರವಲ್ಲ, ಮಸೂದೆಯು ಚರ್ಚೆಯಾಗುವ ಸಂದರ್ಭದಲ್ಲಿ ಸಂಬಂಧ ಪಟ್ಟ ಮಂತ್ರಿಗಳು ಹಾಜರಿದ್ದು ಸದಸ್ಯರ ಅಭಿಪ್ರಾಯಗಳನ್ನು ಗ್ರಹಿಸಿ ಅವುಗಳಿಗೆ ಸ್ಪಂದಿಸಬೇಕು. ಎಲ್ಲರ ಅಭಿಪ್ರಾಯಗಳನ್ನು ಸರಕಾರ ಒಪ್ಪಬೇಕಿಲ್ಲ. ಆದರೆ ಚರ್ಚೆಯು ಅತೀ ಅಗತ್ಯ.
ಸಂಸತ್ತಿನಲ್ಲಿ ಮುಕ್ತ ಚರ್ಚೆಯಾದಾಗ ವಿಭಿನ್ನ ಅಭಿಪ್ರಾಯಗಳು ಮುನ್ನೆಲೆಗೆ ಬರುತ್ತವೆ; ಹೊಸ ಕಾನೂನಿನ ಗುಣಾವಗುಣಗಳ ವಿಶ್ಲೇಷಣೆಗೆ ಅವಕಾಶ ಇದೆ. ಮುಂದೆ ಬರಬಹುದಾದ ತೊಡಕುಗಳ ಕುರಿತೂ ಸಂಸದರು ಬೆಳಕು ಚೆಲ್ಲುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಮುಕ್ತ ಚರ್ಚೆಯಿಂದ ದೇಶದ ಶಾಸನಗಳ ಗುಣಮಟ್ಟ ಹೆಚ್ಚುತ್ತದೆ. ಅವುಗಳು ಜನಪ್ರತಿನಿಧಿಗಳ ಸಂಪೂರ್ಣ ಸಮ್ಮತಿಯಿಂದ ಅಂಗೀಕಾರವಾದರೆ ಆ ರೀತಿಯ ಒಮ್ಮತಾಭಿಪ್ರಾಯವು ಪ್ರಜಾತಂತ್ರವನ್ನು ಬಲಗೊಳಿಸುತ್ತದೆ. ಮುಕ್ತ ಚರ್ಚೆಯ ಮೂಲಕ ಶಾಸನಗಳನ್ನು ರಚಿಸುವುದು ಪ್ರಬುದ್ಧ ಪ್ರಜಾಸತ್ತೆಯ ಸಂಕೇತ.
ಹಿಂದಿನ ಅನೇಕ ಅಧಿವೇಶನಗಳಲ್ಲಿ ಆಗುತ್ತಿದ್ದಂತೆ ಈ ಬಾರಿಯ ಮುಂಗಾರು ಅಧಿವೇಶನದಲ್ಲಿಯೂ ಮಸೂದೆಗಳನ್ನು ಮಂಡಿಸುವ ಸಂದರ್ಭದಲ್ಲಿ ಸಂಬಂಧಪಟ್ಟ ಹಿರಿಯ ಮಂತ್ರಿಗಳು ಉಪಸ್ಥಿತರಿರಲಿಲ್ಲ. ಚರ್ಚೆಗಳೂ ಆಗಲಿಲ್ಲ. ಮಾತ್ರವಲ್ಲ, ಅತ್ಯಂತ ಕಡಿಮೆ ಅವಧಿಯಲ್ಲಿ-ಕೆಲವೊಮ್ಮೆ 10-15 ನಿಮಿಷಗಳಲ್ಲಿ ಮಸೂದೆಗಳು ವಿರೋಧಪಕ್ಷಗಳ ಆಕ್ಷೇಪವನ್ನು ಕಡೆಗಣಿಸಿ ಧ್ವನಿಮತದಿಂದ ಅಂಗೀಕಾರಗೊಂಡವು.
ವಿಪಕ್ಷಗಳ ಆಕ್ಷೇಪಗಳು ಬಂದಾಗ ಸಂಸತ್ತಿನ ಕಲಾಪಗಳು ಸುಗಮವಾಗುವಂತೆ ಮಾಡುವ ಹೊಣೆಗಾರಿಕೆ ಆಡಳಿತಪಕ್ಷದ್ದು. ಪ್ರತಿಪಕ್ಷಗಳು ಸಂಸತ್ತಿನ ಕಲಾಪಕ್ಕೆ ತಡೆಯನ್ನು ಒಡ್ಡುತ್ತಿದ್ದಾಗ ಅವರ ವರ್ತನೆಯ ಮೂಲವನ್ನು ಅರಿತು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ವ್ಯವಧಾನವನ್ನು ಮಂತ್ರಿಗಳು ಹೊಂದಿರಬೇಕು. ವಿಪರ್ಯಾಸವೆಂದರೆ ಆಳುವ ಪಕ್ಷದವರೇ ಈ ಬಾರಿ ಸಂಸತ್ತಿನ ಹೊರಗೆ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಪಕ್ಷಗಳ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದ್ದು. ಸಂಧಾನಕ್ಕೆ ಆ ಧೋರಣೆ ಹೇಗೆ ಪೂರಕವಾಗುತ್ತದೆ?
ಈ ಹಿಂದೆ 2021ರ ಮುಂಗಾರು ಅಧಿವೇಶನದಲ್ಲಿ 20 ಮಸೂದೆಗಳು ಚರ್ಚೆಯಿಲ್ಲದೆ ಅಥವಾ ಕನಿಷ್ಠ ಚರ್ಚೆಯ ಬಳಿಕ ಅಂಗೀಕೃತವಾಗಿದ್ದವು. ಈ ಸಲದ ಮುಂಗಾರು ಅಧಿವೇಶನದಲ್ಲಿ ಒಂದರ ಹಿಂದೊಂದು ಮಸೂದೆಯು ಚರ್ಚೆಯೇ ಇಲ್ಲದೆ ತಮಗಿರುವ ಬಹುಮತದ ಆಧಾರದಲ್ಲಿ ಅಂಗೀಕೃತವಾಗುವಂತೆ ಮಾಡಿದ ಪ್ರಕ್ರಿಯೆ ಸತ್ತಾರೂಢ ಪಕ್ಷದ ಮೂಲ ಧೋರಣೆ ತಡೆಯಿಲ್ಲದೆ ಮುಂದುವರಿಯುವುದಕ್ಕೆ ಇನ್ನೊಂದು ನಿದರ್ಶನ.
ಮೋದಿ ಸರಕಾರವು ಶಾಸನಗಳ ರಚನೆಗೆ ಸಂಬಂಧಿಸಿದಂತೆ ಸಂಸತ್ತಿನ ಪಾತ್ರವನ್ನು ಮೊಟಕುಗೊಳಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದೆ. ಪ್ರಜಾಸತ್ತೆಯ ಆಧಾರ ಸ್ತಂಭವಾದ ಸಂಸತ್ತಿನಲ್ಲಿ ಅಗತ್ಯವಾದ ಚರ್ಚೆಗೆ ಅವಕಾಶ ನೀಡದೆ ಶಾಸನಗಳನ್ನು ರೂಪಿಸುವುದು ಆಡಳಿತ ಕೂಟದ ನೀತಿಯಾಗಿ ಹೊರಹೊಮ್ಮಿದೆ. ಇದು ಪ್ರಜಾಸತ್ತೆಯ ಮೇಲೆ ಮಾಡುವ ಗಂಭೀರವಾದ ಪ್ರಹಾರ ಎನ್ನಬೇಕಾಗುತ್ತದೆ.






