ಟೆಕ್ಕಾವತಾರಿ ‘ಸರ್ವಜ್ಞರ’ ಸಮಸ್ಯೆಗಳು

ಸಾಂದರ್ಭಿಕ ಚಿತ್ರ
ನಿಮ್ಮಲ್ಲೊಂದು ಸಮಸ್ಯೆ ಇದ್ದರೆ, ಅವರಲ್ಲಿ ಅದಕ್ಕೊಂದು ಪರಿಹಾರ ಇರುತ್ತದೆ. ಅದು ಶುದ್ಧ ಲಾಜಿಕಲ್ ಪರಿಹಾರ. ಈ ಲಾಜಿಕ್ಕಿಗೆ ಹೃದಯವಾಗಲಿ, ಬೇರೆ ಜ್ಞಾನೇಂದ್ರಿಯಗಳಾಗಲಿ ಇರುವುದಿಲ್ಲ. ಇದು ನಮ್ಮ ಭಾರತೀಯ ಟೆಕ್ ಪರಂಪರೆ. ಆ ಕಾರಣಕ್ಕಾಗಿಯೇ ಭಾರತ ಈವತ್ತಿಗೂ ಸೇವಾದಾತ ಗುತ್ತಿಗೆದಾರ ದೇಶ ಆಗಿ ಉಳಿದಿದೆಯೇ ಹೊರತು, ಸ್ವಂತ ಟೆಕ್ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಿ ಗೆಲ್ಲಬಲ್ಲ ದೇಶ ಆಗಿ ಉಳಿದಿಲ್ಲ. ಟೆಕ್ಕಿಗಳ ಪರಿಹಾರಗಳೆಲ್ಲ ಹೇಗಿರುತ್ತವೆ ಎಂದರೆ, ಮೊದಲು ಎಲ್ಲರೆದುರು ಬಹಳ ಆತ್ಮವಿಶ್ವಾಸದಿಂದ ದೊಪ್ಪೆಂದು ನೀರಿಗೆ ಧುಮುಕುವುದು ಮತ್ತು ಆ ಬಳಿಕ ಈಜು ಕಲಿಯುವ ಮ್ಯಾನುವಲ್ ಎಲ್ಲಿದೆ ಎಂದು ಹುಡುಕತೊಡಗುವುದು!
ಮೊನ್ನೆ ದಿಲ್ಲಿಯಲ್ಲಿ ನಡೆದ ಬ್ಲೂಮ್ಬರ್ಗ್ ನ್ಯೂ ಇಕಾನಮಿ ಫೋರಂ 2026 ಸಮಾವೇಶದ ಸಂವಾದ ಕಾರ್ಯಕ್ರಮವೊಂದರಲ್ಲಿ, ಭಾರತದ ಸರಕಾರಗಳ ಖಾಯಂ ಟ್ರಬಲ್ ಶೂಟರ್ ಇನ್ ಚೀಫ್ (ಟೆಕ್) ಆಗಿರುವ ನಂದನ್ ನಿಲೇಕಣಿ ಅವರು ‘‘ನೀಟ್ನಂತಹ ಪರೀಕ್ಷೆಗಳಿಗೆ ಪ್ರಶ್ನೆಪತ್ರಿಕೆ ಏಕೆ ಬೇಕು? ಪ್ರಶ್ನೆ ಪತ್ರಿಕೆ ಅಂತ ಒಂದಿದ್ದರೆ ಅಲ್ವಾ ಅದನ್ನು ಮಾರೋಕಾಗೋದು? ಅದರ ಬದಲು ದೊಡ್ಡ ಪ್ರಶ್ನೆ ಬ್ಯಾಂಕ್ ಒಂದನ್ನು ಸಿದ್ಧಪಡಿಸಿ, ಕೃತಕ ಬುದ್ಧಿಮತ್ತೆ ಸಹಾಯದಿಂದ ಕೊನೆಯ ನಿಮಿಷದಲ್ಲಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಬೇಕು ಮತ್ತು ಪರೀಕ್ಷೆಗಳನ್ನು ಕಂಪ್ಯೂಟರ್ ಆಧರಿತವಾಗಿ ಯಾವುದೇ ಗಾತ್ರದಲ್ಲಿ ನಡೆಸುವುದು ಸಾಧ್ಯ ಆಗಬೇಕು’’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅವರ ಈ ಸಲಹೆ, ಜಗತ್ತಿನ ಎಲ್ಲ ವಿಷಯಗಳಿಗೂ ಕರೆಕರೆದು ಬಿಟ್ಟಿ ‘ಗ್ಯಾನ್’ ಕೊಡುವ ಅವರ ಮಾಜಿ ಸಹೋದ್ಯೋಗಿಯೊಬ್ಬರ ಸಲಹೆಯಂತಹದಲ್ಲ. ನಿಲೇಕಣಿ ಅವರ ಸಲಹೆಗೆ ಒಂದು ಅಧಿಕೃತ ಮಗ್ಗುಲು ಇದೆ. ಏಕೆಂದರೆ, ಜುಲೈ ಹೊತ್ತಿಗೆ ನೀಟ್ ಪರೀಕ್ಷೆಯ ಪೇಪರ್ ಲೀಕ್ ಗದ್ದಲ ದೇಶದಲ್ಲಿಡೀ ಸದ್ದು ಮಾಡುತ್ತಿದ್ದಾಗ, ಅದಕ್ಕೆ ಪರಿಹಾರ ರೂಪದಲ್ಲಿ ಪರೀಕ್ಷಾ ಸುಧಾರಣೆಗಳಿಗೆ ಉನ್ನತಾಧಿಕಾರದ ಟಾಸ್ಕ್ ಫೋರ್ಸ್ ಒಂದನ್ನು ಪ್ರಧಾನಮಂತ್ರಿಯವರು ಜುಲೈ 28ರಂದು ರಚಿಸಿದ್ದರು. ಆ ಟಾಸ್ಕ್ ಫೋರ್ಸ್ನ ಅಧ್ಯಕ್ಷರು ನಂದನ್ ನಿಲೇಕಣಿ. ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್, ಗುಪ್ತಚರ (ಐಬಿ) ನಿರ್ದೇಶಕ ತಪನ್ ಡೇಕಾ, ಚೆನ್ನೈ ಐಐಟಿಯ ಪ್ರೊ. ವಿ. ಕಾಮಕೋಟಿ, ಶಿಕ್ಷಣ ಇಲಾಖೆ ಕಾರ್ಯದರ್ಶಿ ಅನಿತಾ ಅಗರ್ವಾಲ್, ಲಾಜಿಸ್ಟಿಕ್ಸ್ ಪರಿಣತ ಅಮಿತ್ ಲಾಲ್ ಮೀನಾ ಈ ಸಮಿತಿಯ ಸದಸ್ಯರು. ಈ ಟಾಸ್ಕ್ ಫೋರ್ಸ್ ಅಕ್ಟೋಬರ್ ಕೊನೆಯಲ್ಲಿ ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕಾಗಿದೆ.
ಎಐ ಆಧರಿತ ಪರೀಕ್ಷೆ ನಡೆಸುವ ನಿಲೇಕಣಿಯವರ ಸಲಹೆಯೇನೋ ಹೊರನೋಟಕ್ಕೆ ಚೆನ್ನಾಗಿ ಕಾಣಿಸುತ್ತಿದೆ. ಆದರೆ, ಅವರ ಎಲ್ಲ ಈ ಹಿಂದಿನ ತೀರ್ಮಾನಗಳ ರೀತಿಯಲ್ಲೇ, ಈ ಸಲಹೆಯೂ ಭಾರತವನ್ನು ಮೇಲು ಮಧ್ಯಮ ವರ್ಗದಿಂದ ಮೇಲುಭಾಗಕ್ಕೆ ಮಾತ್ರ ಸೀಮಿತಗೊಳಿಸಿರುವುದಾಗಿದೆ. ಆ ಭಾರತದಲ್ಲಿ ‘ಟೆಕ್ ಜಗತ್ತಿನಿಂದ ಹೊರಗುಳಿದಿರುವ’ ಬಡ ಜನಸಮುದಾಯಗಳಿಗೆ ಅಸ್ತಿತ್ವವೇ ಇಲ್ಲ. ಜೊತೆಗೆ, ಒಂದು ಪ್ರಶ್ನೆಪತ್ರಿಕೆ ತಯಾರಿ ಮಾಡುವಾಗ, ಅದರಲ್ಲಿ ಶಿಕ್ಷಕರ ಪರಿಣತಿ, ಸಿಲೆಬಸ್ಸಿನ ವ್ಯಾಪ್ತಿ, ಪ್ರಶ್ನೆಗಳ ಕ್ಲಿಷ್ಟತೆಯ ಮಾನದಂಡ.. ಇತ್ಯಾದಿಗಳೆಲ್ಲ ಇರುತ್ತವೆ. ಅದನ್ನೆಲ್ಲ ಶ್ರಮ ಹಾಕಿ ಎಐಗೆ ಕಲಿಸಿಕೊಟ್ಟ ಮೇಲೂ, ಭಾರತದ ಮೂಲೆಮೂಲೆಗಳಿಗೆ ಅದು ಸಕಾಲದಲ್ಲಿ ತಲುಪುವ, ತಲುಪಿದ ಬಳಿಕ ಡೌನ್ಲೋಡ್ ಆಗುವ, ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಲಭ್ಯ ಆಗುವ ಸಾಧ್ಯತೆಗಳು ಎಷ್ಟು? ಅತ್ಯಂತ ದುಸ್ತರ ಬಾಟಲ್ ನೆಕ್ ಹೊಂದಿರುವ ನೀಟ್ ಪರೀಕ್ಷೆಗಳು ಒಟ್ಟು ಪರೀಕ್ಷಾ ವ್ಯವಸ್ಥೆಯ ಮೇಲೆ ಉಂಟುಮಾಡುವ ಒತ್ತಡವನ್ನು ಪರಿಗಣನೆಗೆ ತೆಗೆದುಕೊಂಡರೆ, ಈ ಟೆಕ್ ‘ಅತಿ ಅವಲಂಬಿತ’ ಪರೀಕ್ಷಾ ವ್ಯವಸ್ಥೆ ಎಲ್ಲಿಗೆ ತಲುಪಬಹುದೆಂದು ಊಹಿಸಬಹುದು.
ನಿಲೇಕಣಿ ಅವರ ಈ ಹಿಂದಿನ ಎಲ್ಲ ‘ಸುಧಾರಣಾ ಕ್ರಮ’ಗಳನ್ನು ಗಮನಿಸುತ್ತಾ ಬನ್ನಿ. ಆಧಾರ್, ದೇಶದ ಜನರ ಖಾಸಗಿತನಕ್ಕೆ ಧಕ್ಕೆ ತರುತ್ತದೆಂಬ ದೂರಿನ ಹಿನ್ನೆಲೆಯಲ್ಲಿ DPDP ಕಾಯ್ದೆ ಹೊರಬರಲು ಕಾರಣ ಆಯಿತು; ಯುಪಿಐ ಬಂದ ಬಳಿಕ ದೇಶದಾದ್ಯಂತ ಸುಶಿಕ್ಷಿತ ಜನರನ್ನು ಹಾಡಹಗಲೇ ದೋಚಬಲ್ಲ ಡಿಜಿಟಲ್ ದರೋಡೆಕೋರರು ಹುಟ್ಟಿಕೊಂಡರು; ಜಿಎಸ್ಟಿ ವ್ಯವಸ್ಥೆಯಲ್ಲಿ ಇನ್ನೂ ಸುಧಾರಣೆಗಳ ಸರಮಾಲೆಯೇ ಮುಗಿದಿಲ್ಲ; ಇಂಡಿಯಾ ಸ್ಟ್ಯಾಕ್ ಹೆಸರಿನಲ್ಲಿ ರೂಪುಗೊಳ್ಳುತ್ತಿರುವ ‘ಡಿಜಿಟಲ್ ಪಬ್ಲಿಕ್ ಮೂಲಸೌಕರ್ಯ’ಗಳು ದೇಶದ ಜನರ ಡೇಟಾಗಳನ್ನು ಯಾವುದೇ ತಳಪಾಯವಾಗಲೀ, ಸುರಕ್ಷತೆಯ ಚೌಕಟ್ಟಾಗಲೀ ಇಲ್ಲದೇ ಹಾಡಹಗಲೇ ಲೂಟಿ ಮಾಡುತ್ತಿವೆ... ಹೀಗೆ ಪ್ರತಿಯೊಂದು ಸುಧಾರಣೆ ಕೂಡ ಏನೋ ಒಂದು ಹಠಾತ್ ಹೊಳೆದ ಲಾಜಿಕ್ ಜೊತೆ ಆರಂಭಗೊಂಡು, ಅಧ್ವಾನವಾಗಿ, ಆಗಿರುವ ಲೋಪಗಳ ಸುಧಾರಣೆ ಹೇಗೆಂಬ ಚಿಂತೆಯಲ್ಲೇ ಕೊನೆಗೊಂಡಿದೆ. ಈಗ ಪರೀಕ್ಷಾ ಸುಧಾರಣೆಗಳೂ ಅದೇ ಹಾದಿಯಲ್ಲಿ ಸಾಗಬೇಕೇ?
ಐಟಿ ರಂಗದಲ್ಲಿ ಪರಿಣತರು, ದೇಶದಲ್ಲಿ ಉದಾರೀಕರಣ ವ್ಯವಸ್ಥೆ ಚಾಲ್ತಿಗೊಂಡ ಬಳಿಕ ಮೊದಲ ಬಾರಿಗೆ ಯಶಸ್ಸಿನ ರುಚಿ ಕಂಡವರು ಎಂಬ ಕಾರಣಕ್ಕೆ, ಈ ಟೆಕ್ ಪರಿಣತರನ್ನು ದೇಶದ ಸರ್ವರೋಗಗಳಿಗೆ ಪರಿಹಾರ ಎಂದು ಭಾವಿಸುವುದೇ ಒಂದು ದೊಡ್ಡ ತಮಾಷೆ. ಇದು ಟೆಕ್ ಪರಿಣತರ ಅತಿ ಆತ್ಮವಿಶ್ವಾಸದ ಮಾರ್ಕೆಟಿಂಗ್ ಕೌಶಲಗಳಿಗಿಂತ, ದೇಶವನ್ನು ಆಳುವವರ ಚಿಂತನೆಗಳ ಬರಡುತನದತ್ತ ಹೆಚ್ಚು ಬೆಟ್ಟು ಮಾಡುತ್ತದೆ.
ಈಗ ಸರಕಾರವನ್ನು ಕಂಗೆಡಿಸಿರುವ ವೈದ್ಯಕೀಯ ಶಿಕ್ಷಣಕ್ಕೆ ನೀಟ್ ಪರೀಕ್ಷೆಗಳ ಅಧ್ವಾನದ ತಾಯಿ ಬೇರು ಇರುವುದು ವೈದ್ಯಕೀಯ ಶಿಕ್ಷಣದ ಖಾಸಗೀಕರಣದಲ್ಲಿ. ಕಾಸಿದ್ದವರಿಗೆ ಮಾತ್ರ ವೈದ್ಯಕೀಯ ಶಿಕ್ಷಣ ಎಂಬ ನೀತಿಯನ್ನು ರೂಪಿಸಿದವರೇ ಸರಕಾರಗಳ ಭಾಗ ಆಗಿರುವ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮಾಲಕರು. ಈ ಹಿತಾಸಕ್ತಿ ಸಂಘರ್ಷ ಕೊನೆಯಾಗದೆ, ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆ ಯಾವುದೇ ‘ಟೆಕ್ ಲಾಜಿಕ್’ ತಂದು ಉದ್ಧರಿಸಿದರೂ, ಅದರ ಲಾಭಾರ್ಥಿಗಳು ಕೇವಲ ಮೆಡಿಕಲ್ ಕಾಲೇಜು ಮಾಲಕ ವರ್ಗ. ಉಳಿದದ್ದೆಲ್ಲ ಕಣ್ಕಟ್ಟು.






