ಚುನಾವಣಾ ಆಯೋಗದ ಮುಷ್ಟಿಯೊಳಗಿರುವ ಪ್ರಜಾಸತ್ತೆಯೆಂಬ ಗುಬ್ಬಚ್ಚಿ

Photo : PTI
ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಮಂಗಳವಾರದಿಂದ ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಆರಂಭಗೊಂಡಿದೆ. ಯಶಸ್ವಿ ಚುನಾವಣೆಯ ದೃಷ್ಟಿಯಿಂದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಅವಶ್ಯವಾಗಿ ನಡೆಯಬೇಕು. ದೇಶಾದ್ಯಂತ ನಡೆಯಲೇ ಬೇಕಾಗಿರುವ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಯಾರೂ ಆಕ್ಷೇಪಿಸುತ್ತಿಲ್ಲ. ಆದರೆ ಈ ಪರಿಷ್ಕರಣೆಯ ಹೆಸರಿನಲ್ಲಿ ಚುನಾವಣಾ ಆಯೋಗದ ಮೂಲಕ ಸರಕಾರ ನಡೆಸುತ್ತಿರುವ ಪೌರತ್ವ ಪರಿಷ್ಕರಣೆಯ ಬಗ್ಗೆ ವ್ಯಾಪಕ ಆಕ್ಷೇಪಗಳು ವ್ಯಕ್ತವಾಗಿವೆ. ಎಸ್ಐಆರ್ ಸಂದರ್ಭದಲ್ಲಿ ಚುನಾವಣಾ ಆಯೋಗದ ಮುಂದೆ ಈ ದೇಶದ ಪ್ರಜೆಗಳು ತಮ್ಮ ಪೌರತ್ವವನ್ನು ಸಾಬೀತು ಮಾಡಬೇಕಾಗಿದೆ. ಎಸ್ಐಆರ್ಗಾಗಿ ಚುನಾವಣಾ ಆಯೋಗ ಕೇಳುತ್ತಿರುವ ದಾಖಲೆಗಳನ್ನು ಈ ದೇಶದ ತಳಸ್ತರದ ಜನರು ಒದಗಿಸುವುದು ಕಷ್ಟಸಾಧ್ಯವಾಗಿದೆ. ಈ ಕಾರಣಕ್ಕಾಗಿಯೇ ಬಿಹಾರ, ಪಶ್ಚಿಮಬಂಗಾಳದಲ್ಲಿ ಲಕ್ಷಾಂತರ ಜನರು ಎಸ್ಐಆರ್ನಿಂದ ಹೊರಗೆ ಬಿದ್ದಿದ್ದಾರೆ. ಹಾಗೆಂದು ಇವರನ್ನು ಸರಕಾರ ನುಸುಳುಕೋರರು ಎಂದೂ ಘೋಷಿಸಿಲ್ಲ. ಚುನಾವಣಾ ಆಯೋಗದ ಪ್ರಕಾರ ಇವರಿಗೆ ಯಾವುದೇ ಮತದಾನದ ಹಕ್ಕಿಲ್ಲ. ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಇವರಿಗೆ ಸರಕಾರದ ಕಲ್ಯಾಣ ಯೋಜನೆಗಳೂ ದೊರಕುವುದಿಲ್ಲ. ಎಸ್ಐಆರ್ ಮೂಲಕ ತಮ್ಮದೇ ದೇಶದ ಪ್ರಜೆಗಳನ್ನು ದಾಖಲೆಗಳು ಒದಗಿಸಲು ವಿಫಲರಾದ ಕಾರಣಕ್ಕೆ, ವಿದೇಶಿ ನುಸುಳುಕೋರರು ಎನ್ನುವ ಪರೋಕ್ಷ ಹಣೆ ಪಟ್ಟಿಯನ್ನು ನೀಡಲು ಚುನಾವಣಾ ಆಯೋಗ ಹೊರಟಿದೆ. ಆದುದರಿಂದಲೇ ಈ ಪರಿಷ್ಕರಣೆಯ ವಿರುದ್ಧ್ದ ಹೋರಾಟಗಳು ನಡೆಯುತ್ತಿವೆ. ದೇಶಾದ್ಯಂತ ಬೀದಿ ಪ್ರತಿಭಟನೆಗಳು ಇದರ ವಿರುದ್ಧ ನಡೆಯುತ್ತಿವೆ. ಇನ್ನೊಂದೆಡೆ ನ್ಯಾಯಾಲಯದಲ್ಲೂ ಹೋರಾಟ ಮುಂದುವರಿದಿದೆ. ಆದರೆ ಸುಪ್ರೀಂಕೋರ್ಟ್ ಎಸ್ಐಆರ್ನ್ನು ಪರೋಕ್ಷವಾಗಿ ಎತ್ತಿ ಹಿಡಿದಿರುವುದರಿಂದ ಎಸ್ಐಆರ್ ಎನ್ನುವ ಉರುಳಿಗೆ ಕೊರಳನ್ನು ಕೊಡದೆ ಬೇರೆ ಉಪಾಯವೇ ಇಲ್ಲ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ನಡೆಯುವ ಎಸ್ಐಆರ್ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರ ಹೊರಗುಳಿಯದಂತೆ ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ಗಮನವನ್ನು ನೀಡುವುದು ಸದ್ಯದ ಅಗತ್ಯವಾಗಿದೆ. ಎಸ್ಐಆರ್ನಿಂದ ಒಬ್ಬನೇ ಒಬ್ಬ ಅರ್ಹ ಮತದಾರ ಹೊರಗುಳಿದು ಬಿಟ್ಟರೆ ಅದು ಈ ದೇಶದ ಪ್ರಜಾಸತ್ತೆಯ ಸೋಲಾಗುತ್ತದೆ. ಸಂವಿಧಾನದ ಸೋಲಾಗುತ್ತದೆ.
ರಾಜ್ಯದಲ್ಲಿ ಎಸ್ಐಆರ್ನ್ನು ಯಶಸ್ವಿಗೊಳಿಸಲು ದುಡಿಯುವುದೆಂದರೆ, ಒಬ್ಬನೇ ಒಬ್ಬ ಮತದಾರನೂ ದಾಖಲೆಗಳನ್ನು ನೀಡಲು ವಿಫಲನಾಗಿ ಮತದಾರರ ಪಟ್ಟಿಯಿಂದ ಹೊರ ಬೀಳದಂತೆ ನೋಡಿಕೊಳ್ಳುವುದು. ಈ ನಿಟ್ಟಿನಲ್ಲಿ ಬಿಹಾರ ಮತ್ತು ಪಶ್ಚಿಮಬಂಗಾಳದಲ್ಲಿ ಹೇಗೆ ಲಕ್ಷಾಂತರ ಮತದಾರರು ಎಸ್ಐಆರ್ನಿಂದ ಹೊರಗುಳಿದಿದ್ದಾರೆ ಎನ್ನುವುದರ ಉದಾಹರಣೆ ನಮ್ಮ ಮುಂದಿದೆ. ಅಲ್ಲಿ ನಡೆದ ಹಸ್ತಕ್ಷೇಪಗಳು, ತಾಂತ್ರಿಕ ಅಡಚಣೆಗಳು, ಒತ್ತಡಗಳು ಇಲ್ಲಿ ನಡೆಯದಂತೆ ನೋಡಿಕೊಳ್ಳುವುದು ಅತ್ಯಗತ್ಯವಾಗಿದೆ. ರಾಜ್ಯ ಸರಕಾರ ಎಸ್ಐಆರ್ ಯಶಸ್ವಿಯಾಗಿ ನಡೆಯುವಂತೆ ನೋಡಿಕೊಳ್ಳಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆಯಾದರೂ, ಎಸ್ಐಆರ್ನ ಯಶಸ್ಸು ಅಧಿಕಾರಿಗಳ ಕೈಯಲ್ಲೇ ಇದೆ. ಇದೊಂದು ರೀತಿಯಲ್ಲಿ ಚುನಾವಣಾ ಆಯೋಗದ ಮುಷ್ಟಿಯೊಳಗಿರುವ ಗುಬ್ಬಚ್ಚಿಯ ಹಾಗೆ. ಬದುಕಿದೆಯೋ ಇಲ್ಲವೋ ಎನ್ನುವುದನ್ನು ಅಂತಿಮವಾಗಿ ಘೋಷಿಸಬೇಕಾದದ್ದು ಚುನಾವಣಾ ಆಯೋಗ. ನಮ್ಮ ಮತದಾನದ ಹಕ್ಕು ಎನ್ನುವ ಗುಬ್ಬಚ್ಚಿ ಬದುಕಿದೆ ಎಂದು ನಾವು ಹೇಳಿದರೆ , ಮುಷ್ಟಿಯೊಳಗೇ ಬಲವಾಗಿ ಅಮುಕಿ ಬಿಟ್ಟು ‘ ಇಲ್ಲ ಸತ್ತಿದೆ’ ಎಂದು ಘೋಷಿಸುವ ಅವಕಾಶ ಚುನಾವಣಾ ಆಯೋಗಕ್ಕಿದೆ. ಗುಬ್ಬಚ್ಚಿಯ ಕತ್ತು ಹಿಸುಕಿ ಸಾಯಿಸಲು ಚುನಾವಣಾ ಆಯೋಗದ ಬಳಿ ಸಾಕಷ್ಟು ನೆಪಗಳಿವೆ ಎನ್ನುವ ಎಚ್ಚರಿಕೆ ಜನರಿಗಿರಬೇಕು.
ರಾಜ್ಯದಲ್ಲಿ ಎಸ್ಐಆರ್ನಿಂದ ಹೊರಬಿದ್ದವರಿಗೆ ಅಂದರೆ ಮತದಾನದ ಹಕ್ಕಿಲ್ಲದವರಿಗೆ ಸರಕಾರದ ಯಾವುದೇ ಕಲ್ಯಾಣ ಯೋಜನೆಗಳು ದೊರಕುವುದಿಲ್ಲ ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಘೋಷಿಸಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಈಗಾಗಲೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಎಸ್ಐಆರ್ನಲ್ಲಿ ಮೋಸಗಳು ನಡೆಯುತ್ತಿವೆ ಎನ್ನುವುದು ಗೊತ್ತಿದ್ದೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಹೇಳಿಕೆಯನ್ನು ಯಾಕೆ ನೀಡುತ್ತಿದ್ದಾರೆ? ಎನ್ನುವ ಪ್ರಶ್ನೆ ಕಾಂಗ್ರೆಸ್ ವಲಯದಲ್ಲೇ ಎದ್ದಿದೆ. ಆದರೆ ಪರಿಷ್ಕರಣೆಯ ಪ್ರಕ್ರಿಯೆಯನ್ನು ಜನರು ಗಂಭೀರವಾಗಿ ತೆಗೆದುಕೊಳ್ಳುವುದಕ್ಕಾಗಿ ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಸದ್ಯಕ್ಕೆ ನಾವು ಭಾವಿಸಬೇಕಾಗಿದೆ. ‘ಎಸ್ಐಆರ್’ನಿಂದ ಹೊರಬಿದ್ದವರಿಗೆ ಮತದಾನದ ಹಕ್ಕಿಲ್ಲ ಎಂದರೆ ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ಈ ನಾಡಿನ ಬಹುತೇಕ ಮಂದಿ ‘ಮತದಾನ’ವನ್ನು ಗಂಭೀರವಾಗಿ ತೆಗೆದುಕೊಂಡೇ ಇಲ್ಲ. ‘ಯಾರು ಗೆದ್ದರೇನು, ಯಾರು ಸೋತರೇನು?’ ಎನ್ನುವ ಮನಸ್ಥಿತಿಯ ಜನರ ಸಂಖ್ಯೆ ಇಲ್ಲಿ ದೊಡ್ಡದಿದೆ. ಕೂಲಿ ಕಾರ್ಮಿಕರು, ರೈತರು, ವಲಸೆ ಕಾರ್ಮಿಕರು ತಮ್ಮ ದೈನಂದಿನ ಕೆಲಸಗಳನ್ನು ಬಿಟ್ಟು ಇದರ ಹಿಂದೆ ಅಲೆದಾಡುವುದಕ್ಕೆ ಸಿದ್ಧರಿರುವುದಿಲ್ಲ. ಆದರೆ ಯಾವಾಗ ‘ಎಸ್ಐಆರ್ನಿಂದ ಹೊರಗೆ ಬಿದ್ದರೆ ಸರಕಾರಿ ಯೋಜನೆಗಳು ದೊರಕುವುದಿಲ್ಲ ’ಎಂದು ಗೊತ್ತಾಗುತ್ತದೆಯೋ ಆಗ ಅನಿವಾರ್ಯವಾಗಿ, ಈ ಪರಿಷ್ಕರಣೆಯನ್ನು ಎಲ್ಲ ವರ್ಗದ ಜನರು ಗಂಭೀರವಾಗಿ ತೆಗೆದುಕೊಳ್ಳಬಹುದು. ಎಸ್ಐಆರ್ನಲ್ಲಿ ಹೆಸರಿಲ್ಲದಿದ್ದರೆ ಗ್ಯಾರಂಟಿ ಯೋಜನೆಗಳು ಕೈತಪ್ಪಬಹುದು ಎಂಬ ಭಯಕ್ಕಾದರೂ ಈ ಪ್ರಕ್ರಿಯೆಯಲ್ಲಿ ಜನರು ಭಾಗವಹಿಸುವುದು ಅತ್ಯಗತ್ಯವಾಗಿದೆ. ಯಾವ ಮೋಸ, ವಂಚನೆ, ತಾಂತ್ರಿಕ ಅಡಚಣೆಗಳಿಲ್ಲದೆ ಎಸ್ಐಆರ್ನ್ನುಯಶಸ್ವಿಯಾಗಿ ನಡೆಸಿ ಯಾವುದೇ ಅರ್ಹ ಮತದಾರರು ಹೊರಬೀಳದಂತೆ ನೋಡಿಕೊಂಡ ಬಳಿಕ ಸರಕಾರಿ ಯೋಜನೆಗಳನ್ನು ಯಾರಿಗೆ ಕೊಡಬೇಕು, ಕೊಡಬಾರದು ಎನ್ನುವುದನ್ನು ಸರಕಾರ ನಿರ್ಧರಿಸಬೇಕು.
ಎಸ್ಐಆರ್ನಿಂದ ಮತದಾರರು ಹೇಗೆಲ್ಲ ಹೊರಗುಳಿದರು ಎನ್ನುವುದಕ್ಕೆ ಬಿಹಾರ, ಪಶ್ಚಿಮಬಂಗಾಳ ಉದಾಹರಣೆಯಾಗಿ ನಮ್ಮ ಮುಂದಿವೆೆ. ಅದರ ಪರಿಣಾಮ ಏನಾಯಿತು ಎನ್ನುವುದನ್ನೂ ಕಂಡಿದ್ದೇವೆ. ಮೊದಲನೆಯದಾಗಿ, ಕೆಲವು ನಿರ್ದಿಷ್ಟ ಸಮುದಾಯವನ್ನು ಉದ್ದೇಶಪೂರ್ವಕವಾಗಿ ಹೊರಗಿಡುವ ಪ್ರಯತ್ನ ನಡೆಯಿತು. ಮುಖ್ಯವಾಗಿ ಮುಸ್ಲಿಮ್ ಸಮುದಾಯವನ್ನೇ ಗುರಿಯಾಗಿಟ್ಟುಕೊಂಡು ಬೇರೆ ಬೇರೆ ನೆಪಗಳನ್ನು ಒಡ್ಡಿ ಅವರನ್ನು ಮತದಾರರ ಪಟ್ಟಿಯಿಂದ ಹೊರಗಿಟ್ಟ ಉದಾಹರಣೆಗಳಿವೆ. ಎರಡನೆಯದಾಗಿ, ಪಟ್ಟಿಯಿಂದ ಹೊರಬಿದ್ದವರು ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು. ತಮ್ಮ ದೈನಂದಿನ ಕೂಲಿ ಕೆಲಸಗಳನ್ನು ಬಿಟ್ಟು ಇದರ ಹಿಂದೆ ಅಲೆದಾಡುವ ಶಕ್ತಿ ಅವರಿಗಿಲ್ಲದ ಕಾರಣ ಎಸ್ಐಆರ್ನಲ್ಲಿ ಅವರು ಸಕ್ರಿಯವಾಗಿ ಭಾಗವಹಿಸಿಲ್ಲ. ಹಾಗೆಯೇ ಈ ವರ್ಗದ ಜನರು ಚುನಾವಣಾ ಆಯೋಗ ಕೇಳುವ ದಾಖಲೆಗಳನ್ನು ಒದಗಿಸಲು ವಿಫಲರಾದರು. ಕರ್ನಾಟಕದಲ್ಲೂ ವಲಸೆ ಕಾರ್ಮಿಕರ ಸಂಖ್ಯೆ ದೊಡ್ಡದಿದೆ. ಇವರೆಲ್ಲ ಬಿಹಾರ, ಮಧ್ಯಪ್ರದೇಶ, ಪಶ್ಚಿಮಬಂಗಾಳದಿಂದ ಬಂದವರಷ್ಟೇ ಅಲ್ಲ. ಉತ್ತರ ಕರ್ನಾಟಕದಿಂದ ಕೃಷಿಯಲ್ಲಿ ಸೋತು ನಗರಕ್ಕೆ ವಲಸೆ ಬಂದವರ ಸಂಖ್ಯೆ ದೊಡ್ಡದಿದೆ. ಇವರೆಲ್ಲ ಆಸಕ್ತಿಯಿಂದ ಎಸ್ಐಆರ್ನಲ್ಲಿ ಭಾಗವಹಿಸುತ್ತಾರೆ ಎನ್ನುವಂತಿಲ್ಲ. ಹಾಗೆಯೇ ಭಾಗವಹಿಸಿದರೂ ಚುನಾವಣಾ ಆಯೋಗ ಕೇಳುವ ಎಲ್ಲ ದಾಖಲೆಗಳನ್ನು ಒದಗಿಸಲು ಯಶಸ್ವಿಯಾಗುತ್ತಾರೆ ಎನ್ನುವಂತೆಯೂ ಇಲ್ಲ. ಹಾಗೆಂದು ಇವರನ್ನು ಸರಕಾರ ಕಲ್ಯಾಣ ಯೋಜನೆಗಳಿಂದ ಹೊರಗಿಟ್ಟರೆ, ಅದಕ್ಕಿಂತ ದೊಡ್ಡ ಸಂವಿಧಾನ ವಿರೋಧಿ ಕೃತ್ಯ ಇನ್ನೊಂದಿದೆಯೆ?
ಇದೇ ಸಂದರ್ಭದಲ್ಲಿ ರಾಜಕೀಯ ಒತ್ತಡಗಳು ಬಿಎಲ್ಒಗಳ ಮೇಲೆ ಬೀಳದಂತೆಯೂ ನೋಡಿಕೊಳ್ಳಬೇಕು. ಬಿಎಲ್ಒಗಳು ನಿರ್ದಿಷ್ಟ ರಾಜಕೀಯ ಅಥವಾ ಕೋಮು ಹಿತಾಸಕ್ತಿಯನ್ನು ಹೊಂದಿದ್ದರೆ ಅವರಿಂದಲೂ ಎಸ್ಐಆರ್ನಲ್ಲಿ ಸಮಸ್ಯೆಯಾಗಬಹುದು. ಇತರ ರಾಜ್ಯಗಳಲ್ಲಿ ಕೆಲಸಗಳ ಒತ್ತಡದಿಂದ ಹಲವು ಬಿಎಲ್ಒಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಹಾಗೆಯೇ ಹೃದಯಾಘಾತಗಳಿಂದಲೂ ಮೃತಪಟ್ಟಿದ್ದರು. ಅಂತಹ ಘಟನೆಗಳು ರಾಜ್ಯಗಳಲ್ಲಿ ನಡೆಯದಂತೆ ನೋಡಿಕೊಳ್ಳುವುದೂ ಸರಕಾರದ ಹೊಣೆಗಾರಿಕೆಯಾಗಿದೆ . ತಾಂತ್ರಿಕ ಅಡಚಣೆಗಳೂ ಎಸ್ಐಆರ್ ಮೇಲೆ ಪರಿಣಾಮ ಬೀರಬಹುದು. ಎಸ್ಐಆರ್ ಎನ್ನುವುದು ಸ್ವಾತಂತ್ರ್ಯೋತ್ತರ ಭಾರತದ ಪಾಲಿನ ಮಹಾ ಚುನಾವಣೆಯೇ ಆಗಿದೆ. ಈ ಚುನಾವಣೆಯ ಗೆಲುವಿನಲ್ಲೇ ಈ ದೇಶದ ಪ್ರಜಾಸತ್ತೆಯ ಅಳಿವು ಉಳಿವು ನಿರ್ಧಾರವಾಗುತ್ತದೆ. ಈ ಚುನಾವಣೆಯಲ್ಲಿ ಪ್ರಜಾಸತ್ತೆಯನ್ನು ಗೆಲ್ಲಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ.






