ಪಾನ್ಮಸಾಲಾಗೆ ಅರೆಯಬೇಕಾಗಿದೆ ಕಾನೂನಿನ ಖಾರ ಮಸಾಲೆ

ಸಾಂದರ್ಭಿಕ ಚಿತ್ರ: Gemini AI
‘ಕಾನೂನು ಚಾಪೆಯಡಿ ತೂರಿದರೆ, ತಂಬಾಕು ರಂಗೋಲಿಯಡಿ ತೂರಿತು’ ಎನ್ನುವ ರೀತಿಯಲ್ಲಿ ತಂಬಾಕು ಈ ದೇಶದ ಕಾನೂನಿನ ಜೊತೆಗೆ ಕಣ್ಣು ಮುಚ್ಚಾಲೆಯಾಡುತ್ತಾ ಬಂದಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ಬೇರೆ ಬೇರೆ ರಾಜ್ಯಗಳು ತಂಬಾಕು, ಗುಟ್ಕಾಗಳ ಮೇಲೆ ಕ್ರಮ ತೆಗೆದುಕೊಳ್ಳಲು ಪ್ರಯತ್ನ ನಡೆಸುತ್ತಾ ಬಂದಿವೆಯಾದರೂ, ಇಂದಿಗೂ ದೇಶದಲ್ಲಿ ತಂಬಾಕಿನ ಮೇಲೆ ನಿಯಂತ್ರಣವನ್ನು ಸಾಧಿಸುವುದಕ್ಕೆ ಸಾಧ್ಯವಾಗಿಲ್ಲ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮಾವಳಿ ಪ್ರಕಾರ ಯಾವುದೇ ಆಹಾರ ಉತ್ಪನ್ನಗಳಲ್ಲಿ ತಂಬಾಕು ಅಥವಾ ನಿಕೋಟಿನನ್ನು ಸಾಮಗ್ರಿಯಾಗಿ ಬಳಸುವುದನ್ನು ದೇಶದಲ್ಲಿ ಸಂಪೂರ್ಣ ನಿಷೇಧಿಸಲಾಗಿದೆ. ಆಹಾರ ಪದಾರ್ಥಗಳ ವ್ಯಾಪ್ತಿಗೆ ಪಾನ್ಮಸಾಲಾ, ಗುಟ್ಕಾ ಬರುವುದರಿಂದ ತಂಬಾಕು ಉದ್ಯಮದ ಅರ್ಜಿಗಳನ್ನು ವಜಾಗೊಳಿಸಿ, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಇವುಗಳ ಮೇಲಿನ ನಿಷೇಧವನ್ನು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ಗಳು ಕೂಡ ಎತ್ತಿ ಹಿಡಿದಿವೆ. ಹೀಗಿದ್ದರೂ ಈ ದೇಶದಲ್ಲಿ ರಾಜ್ಯಗಳು ಪಾನ್ ಮಸಾಲಾ-ಗುಟ್ಕಾಗಳಿಗೆ ಸಂಪೂರ್ಣ ನಿಷೇಧವನ್ನು ಹೇರಲು ವಿಫಲವಾಗುತ್ತಾ ಬಂದಿವೆೆ. ನಿಷೇಧ ಜಾರಿಯಾದ ಬೆನ್ನಿಗೇ ಇವುಗಳು ಬಹುರೂಪಿ ವೇಷಗಳಲ್ಲಿ ಮತ್ತೆ ಮಾರುಕಟ್ಟೆಯನ್ನು ಪ್ರವೇಶಿಸುತ್ತವೆೆ. ಸರಕಾರ ಇದನ್ನು ಕಂಡೂ ಕಾಣದಂತೆ ಇರುತ್ತದೆ ಅಥವಾ ಅವುಗಳ ತಂತ್ರಗಾರಿಕೆಯ ಮುಂದೆ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತದೆ.
ರಾಜ್ಯದಲ್ಲಿ ಈ ಹಿಂದೆಯೂ ಗುಟ್ಕಾ, ಪಾನ್ ಮಸಾಲಾವನ್ನು ನಿಷೇಧಿಸುವ ಪ್ರಯತ್ನ ನಡೆದಿತ್ತು. ಆದರೆ ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಿಂದ ಎನ್ನುತ್ತಿತ್ತು ತಂಬಾಕು. ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರಕಾರ ಮತ್ತೆ ಪಾನ್ ಮಸಾಲಾಕ್ಕೆ ಮಸಾಲೆ ಅರೆಯಲು ಹೊರಟಿದೆ. ಅದರ ಭಾಗವಾಗಿ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾವನ್ನು ರಾಜ್ಯಾದ್ಯಂತ ನಿಷೇಧಿಸಿ ಆಹಾರ ಸುರಕ್ಷತಾ ಇಲಾಖೆ ಆದೇಶ ಹೊರಡಿಸಿದೆ. ಆಗಸ್ಟ್ 10ರಂದು ಹೊರಡಿಸಲಾದ ಈ ಆದೇಶ ಒಂದು ವರ್ಷದ ಅವಧಿಗೆ ಜಾರಿಯಲ್ಲಿರಲಿದೆ. ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಸಾಗಣೆ, ವಿತರಣೆ ಮತ್ತು ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಆದೇಶ ತಿಳಿಸಿದೆ. ಈ ಹಿಂದೆ ಗುಟ್ಕಾ, ಪಾನ್ ಮಸಾಲಾವನ್ನು ನಿಷೇಧಿಸಿದಾಗ, ಅಡಿಕೆ ಪುಡಿ ಮತ್ತು ತಂಬಾಕನ್ನು ಬೇರೆ ಬೇರೆ ಪ್ಯಾಕೆಟ್ಗಳಲ್ಲಿ ಮಾರಾಟ ಮಾಡುವ ತಂತ್ರವನ್ನು ಗುಟ್ಕಾ ವ್ಯಾಪಾರಿಗಳು ಮಾಡಿದ್ದರು. ಗ್ರಾಹಕರೇ ಅವುಗಳನ್ನು ಮಿಶ್ರಣ ಮಾಡಿ ಗುಟ್ಕಾ ರೂಪದಲ್ಲಿ ಸೇವಿಸುತ್ತಿದ್ದರು. ಆದರೆ ಈ ಬಾರಿ, ಪ್ರತ್ಯೇಕವಾಗಿ ತಂಬಾಕನ್ನು ಪೊಟ್ಟಣ ರೂಪದಲ್ಲಿ ಮಾರಾಟ ಮಾಡುವುದನ್ನೂ ಸರಕಾರ ನಿಷೇಧಿಸಿದೆ. ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲಾವನ್ನು ಪೌಚ್, ಪೊಟ್ಟಣ, ಕಂಟೇನರ್ ಸೇರಿ ಯಾವುದೇ ವಿಧಾನಗಳಲ್ಲಿ ಸಂಗ್ರಹ ಮತ್ತು ಮಾರಾಟಕ್ಕೆ ಅವಕಾಶವಿಲ್ಲ ಎಂದು ಇಲಾಖೆ ತಿಳಿಸಿದೆ.
ಗುಟ್ಕಾದ ವಿರುದ್ಧ ಕಾನೂನು ತನ್ನ ಬಾಣವನ್ನು ಪ್ರಯೋಗಿಸಿದಾಗೆಲ್ಲ ಈ ಗುಟ್ಕಾ ಮಾಫಿಯಾ ಅಡಿಕೆ ಬೆಳೆಗಾರರನ್ನು ಗುರಾಣಿಯನ್ನಾಗಿ ಮಾಡಿಕೊಂಡು ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿತ್ತು. ಗುಟ್ಕಾ, ಪಾನ್ಮಸಾಲಾ ನಿಷೇಧ ಮಾಡಿದ್ದೇ ಆದರೆ ಅಡಿಕೆ ಬೆಳೆಗಾರರಿಗೆ ತೊಂದರೆಯಾಗುತ್ತದೆ ಎನ್ನುವ ಕಳವಳ ಬಹಳ ಹಿಂದಿನದು. ಕರ್ನಾಟಕದಲ್ಲಿ ಅಡಿಕೆ ಬೆಳೆಗಾರರ ರಾಜಕೀಯ ಪ್ರಭಾವ ದೊಡ್ಡ ಮಟ್ಟದಲ್ಲಿದೆ. ಅಡಿಕೆ ವಾಣಿಜ್ಯ ಬೆಳೆಯಾಗಿದ್ದರೂ ಆದನ್ನು ಆಹಾರ ಬೆಳೆಯಾಗಿ ಬಿಂಬಿಸುವಲ್ಲಿ ಈಗಾಗಲೇ ಅವರು ಯಶಸ್ವಿಯಾಗಿದ್ದಾರೆ. ಅಡಿಕೆ ಬೆಲೆಯ ಏರಿಳಿತ ಪರೋಕ್ಷವಾಗಿ ರಾಜಕೀಯ ವಲಯದ ಮೇಲೂ ಪರಿಣಾಮಗಳನ್ನು ಬೀರುತ್ತದೆ. ಪಾನ್ಮಸಾಲಾ, ಗುಟ್ಕಾಗಳು ನಿಷೇಧವಾದರೆ ಅಡಿಕೆಯ ಬೇಡಿಕೆ ಇಳಿಮುಖವಾಗುತ್ತದೆ ಎನ್ನುವ ಆತಂಕ ಅಡಿಕೆ ಕೃಷಿಕರಲ್ಲಿದೆ. ಇವರ ಆತಂಕದ ಲಾಭವನ್ನು ಗುಟ್ಕಾ ಮತ್ತು ತಂಬಾಕು ವ್ಯಾಪಾರಿಗಳು ತಮ್ಮದಾಗಿಸುತ್ತಾ ಬಂದಿದ್ದಾರೆ. ಅಡಿಕೆ ಮತ್ತು ತಂಬಾಕಿನ ನಡುವಿನ ಸಂಬಂಧ ಅನೈತಿಕವಾದುದು. ಅಡಿಕೆಯನ್ನು ಸಂಸ್ಕೃತಿಯ ಭಾಗವಾಗಿ ಒಪ್ಪಿಕೊಳ್ಳುವುದಕ್ಕೆ ಯಾವ ಅಡ್ಡಿಯೂ ಇಲ್ಲ. ಅದು ನಮ್ಮ ಆಹಾರ ಸಂಸ್ಕೃತಿಯ ಭಾಗವೂ ಹೌದು. ಆದರೆ ಅದು ತಂಬಾಕಿನ ಜೊತೆಗೆ ಸಖ್ಯವನ್ನು ಬೆಳೆಸಿ ಗ್ರಾಮೀಣ ಪ್ರದೇಶದ ಜನರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಎನ್ನುವುದು ಕಟು ವಾಸ್ತವ. ಅಡಿಕೆ ಪುಡಿಯನ್ನು ಯಾವುದೇ ತಂಬಾಕಿನ ಸಖ್ಯವಿಲ್ಲದೆ ಮಾರಾಟ ಮಾಡಲು ಸಾಧ್ಯ ಎಂದಾದರೆ ಅದಕ್ಕೆ ಸರಕಾರ ಪೂರ್ಣ ಪ್ರಮಾಣದಲ್ಲಿ ಬೆಂಬಲವನ್ನು ನೀಡಬೇಕು. ಹಾಗೆಯೇ ಅಡಿಕೆಯನ್ನು ಬಳಸಿಕೊಂಡು ಬೇರೆ ಬೇರೆ ರೀತಿಯ ಖಾದ್ಯಗಳನ್ನು ಮಾಡುವ ಪ್ರಯತ್ನವೂ ನಡೆದಿದೆ. ಅದರಲ್ಲಿ ಹಲವರು ಯಶಸ್ವಿಯೂ ಆಗಿದ್ದಾರೆ. ತಂಬಾಕಿಲ್ಲದೆ ಅಡಿಕೆಯನ್ನು ಮಾರಾಟ ಮಾಡಲು ಸಾಧ್ಯವಿಲ್ಲ ಎನ್ನುವುದು ಅಡಿಕೆ ಸಂಸ್ಕೃತಿಗೆ ಮಾಡುವ ಅವಮಾನವಾಗಿದೆ. ‘ಹಾಗಾದರೆ ಬೀಡಿ, ಸಿಗರೇಟುಗಳನ್ನು ಮಾರಾಟ ಮಾಡುವುದು ಎಷ್ಟು ಸರಿ?’ ಎನ್ನುವ ಪ್ರಶ್ನೆಯನ್ನು ಎತ್ತಿ ಗುಟ್ಕಾವನ್ನು ಸಮರ್ಥಿಸುವ ಗುಂಪೂ ಇದೆ. ಬೀಡಿ, ಸಿಗರೇಟುಗಳು ಆಹಾರ ಪದಾರ್ಥವಲ್ಲ. ಅಡಿಕೆಯನ್ನು ಆಹಾರ ಪದಾರ್ಥವೆಂದು ನಂಬಿಸಿ ಅದರ ಮೂಲಕ ತಂಬಾಕನ್ನು ಹಂಚಲಾಗುತ್ತದೆ. ಬೀಡಿ, ಸಿಗರೇಟು ಕೂಡ ಹಾನಿಕಾರಕವೇ ಹೌದು. ಆದರೆ ತಂಬಾಕು ಜಗಿಯುವ ಮೂಲಕ, ನೇರವಾಗಿ ಬಾಯಿ ಕ್ಯಾನ್ಸರ್ಗೆ ತಳಸ್ತರದ ಜನರು ಮೊದಲ ತುತ್ತಾಗುತ್ತಿದ್ದಾರೆ.
ಭಾರತದಲ್ಲಿ ದಾಖಲಾಗುವ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ. 30ರಷ್ಟು ಪ್ರಕರಣಗಳು ತಂಬಾಕು ಬಳಕೆಯಿಂದಲೇ ಉಂಟಾಗುತ್ತವೆ ಎಂದು ವರದಿ ಹೇಳುತ್ತದೆ. ಪುರುಷರಲ್ಲಿ ಕಂಡು ಬರುವ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು ತಂಬಾಕು ಸಂಬಂಧಿತವಾಗಿರುತ್ತವೆ. ಮಹಿಳೆಯರಲ್ಲೂ ತಂಬಾಕು ಬಳಕೆಯಿಂದ ಕಂಡು ಬರುವ ಕ್ಯಾನ್ಸರ್ ಹೆಚ್ಚುತ್ತಿವೆ. ಗುಟ್ಕಾ, ಪಾನ್ಮಸಾಲಾದಂತಹ ಚಟಗಳಿಗೆ ಬಲಿಯಾಗುವ ಜನರಲ್ಲಿ ತಳಸ್ತರದ ಕಾರ್ಮಿಕ ವರ್ಗವೇ ಅಧಿಕ ಎನ್ನುವುದು ಗಮನಾರ್ಹ ಸಂಗತಿಯಾಗಿದೆ. ರಾಜ್ಯದಲ್ಲಿ ವಲಸೆ ಕಾರ್ಮಿಕರು ಈ ಉತ್ಪನ್ನದ ಪ್ರಮುಖ ಗ್ರಾಹಕರಾಗಿದ್ದಾರೆ. ಉತ್ತರ ಭಾರತದಿಂದ ಆಗಮಿಸುವ ವಲಸೆ ಕಾರ್ಮಿಕರು ತಂಬಾಕು ಚಟದೊಂದಿಗೆ ರಾಜ್ಯಕ್ಕೆ ಕಾಲಿಡುತ್ತಾರೆ. ಯಾವುದೇ ಅಕ್ರಮ ದಾರಿಯಲ್ಲಿ ತಂಬಾಕನ್ನು ತಮ್ಮದಾಗಿಸಲು ಇವರು ಸಿದ್ಧರಾಗಿರುತ್ತಾರೆ. ಇವರ ದೌರ್ಬಲ್ಯಗಳನ್ನು ತಂಬಾಕು ಕಂಪೆನಿಗಳು ಬಳಸಿಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಒಂದು ರಾಜ್ಯವಷ್ಟೇ ತಂಬಾಕಿನ ಮೇಲೆ ಕಠಿಣ ಕ್ರಮ ತೆಗೆದುಕೊಂಡರೆ ಸಾಕಾಗುವುದಿಲ್ಲ. ಎಲ್ಲ ರಾಜ್ಯಗಳು ಸಂಘಟಿತವಾಗಿ ತಂಬಾಕಿನ ವಿರುದ್ಧ ದಾಳಿಯನ್ನು ನಡೆಸಿದಾಗ ಮಾತ್ರ ಇದಕ್ಕೆ ಅಂತ್ಯವನ್ನು ಕಾಣಿಸಲು ಸಾಧ್ಯ. ಇಲ್ಲದೇ ಇದ್ದರೆ ಇಂತಹ ಆದೇಶಗಳು ನಮ್ಮ ರಾಜಕೀಯ ನಾಯಕರಿಗೆ ತಂಬಾಕು ಮಾಫಿಯಾದ ಜೊತೆಗೆ ಹಣದ ವ್ಯವಹಾರ ಕುದುರಿಸುವುದಕ್ಕಷ್ಟೇ ಸಹಾಯವಾಗಬಹುದು.






