ವಿಶೇಷ ಸಂಪಾದಕೀಯ | ಮೂಕನಾಯಕರ ಧ್ವನಿ ಮೊಳಗುತಿದೆ ಕಲ್ಯಾಣ ಭೂಮಿಯಿಂದ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಇಂದಿನ ದಿನವನ್ನು ಐತಿಹಾಸಿಕವೆಂದು ಪರಿಗಣಿಸಿ ಸಂಭ್ರಮಿಸುವುದಕ್ಕೆ ಕಾರಣಗಳ ಸರಮಾಲೆಯೇ ಇದೆ. ಜನಪ್ರಿಯ ಕನ್ನಡ ದೈನಿಕ ವಾರ್ತಾಭಾರತಿಯ ನಾಲ್ಕನೆಯ ಮುದ್ರಣ ಆವೃತ್ತಿಯು ಇಂದು ಬಿಡುಗಡೆಯಾಗುತ್ತಿದೆ. ಇದು ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳನ್ನೊಳಗೊಂಡ ಸುಂದರ, ಐತಿಹಾಸಿಕ ಕಲ್ಯಾಣ ಕರ್ನಾಟಕದಲ್ಲಿ, ‘ಕಲ್ಯಾಣಕರ್ನಾಟಕದ ಆವೃತ್ತಿ’ಯಾಗಿ ಹೊರಬರುತ್ತಿದೆ ಎಂಬುದು ಇಂದಿನ ದಿನದ ಹಲವು ಅನನ್ಯ ವಿಶೇಷತೆಗಳ ಪೈಕಿ ಒಂದು.
21ನೇ ಶತಮಾನದ ಉದಯದೊಂದಿಗೆ ಮುದ್ರಣ ಮಾಧ್ಯಮದ ಅಸ್ತಮಾನವಾಗಿ ಬಿಡುತ್ತದೆಂಬ ನಿರಾಶಾದಾಯಕ ವದಂತಿಗಳ ದಟ್ಟ ಕಾರ್ಮೋಡ, ಕಳೆದ ಶತಮಾನದ ಕೊನೆಯಲ್ಲಿ ಮೂಡಿತ್ತು. ಅಂತಹ ನಿರಾಶಾದಾಯಕ ವದಂತಿಗಳ ಹೊರತಾಗಿಯೂ 21ನೇ ಶತಮಾನದಲ್ಲೇ (2003ರಲ್ಲಿ) ಜನಿಸಿ, ಎಲ್ಲ ಭವಿಷ್ಯವಾಣಿಗಳನ್ನು ಸುಳ್ಳಾಗಿಸಿ, ನವಯುಗದ ಕೊಡುಗೆಗಳನ್ನೆಲ್ಲಾ ಬಳಸಿಕೊಂಡು, ಸತತವಾಗಿ ಬೆಳೆದ ಮಾಧ್ಯಮ ಈ ನಿಮ್ಮ ‘ವಾರ್ತಾಭಾರತಿ’. ಕಳೆದ 22 ವರ್ಷಗಳಲ್ಲಿ ಯಾವುದೇ ಜಾತಿ, ಧರ್ಮ, ಸರಕಾರ, ಪಕ್ಷ, ಪಂಗಡ ಅಥವಾ ಉದ್ಯಮಿಯ ಕೃಪೆಯನ್ನು ಅವಲಂಬಿಸದೆ, ಆಶ್ರಯಿಸದೆ, ಯಾರದೇ ಮಡಿಲಲ್ಲಿ ವಿಶ್ರಮಿಸದೆ, ಕೇವಲ ಜನಬೆಂಬಲದಿಂದ, ಅದರಲ್ಲೂ ವಿಶೇಷವಾಗಿ ವಂಚಿತ, ದಮನಿತ, ಉಪೇಕ್ಷಿತ ಜನವರ್ಗಗಳ ಬೆಂಬಲದಿಂದ ಬೆಳೆದ ಮಾಧ್ಯಮ ಇದು. ಇಂತಹ ಮಾಧ್ಯಮವು ಇದೀಗ 2025ರಲ್ಲಿ, ಅಂದರೆ ಅದೇ 21ನೇ ಶತಮಾನದ 25ನೇ ವರ್ಷದಲ್ಲಿ ತನ್ನ ನಾಲ್ಕನೆಯ ಆವೃತ್ತಿಯನ್ನು ಹೊರತರುತ್ತಿದೆ ಎಂಬುದು ನಿಷ್ಪಕ್ಷ ಮಾಧ್ಯಮದ ಕಿಮ್ಮತ್ತು ಬಲ್ಲವರೆಲ್ಲರಿಗೆ ಅಪಾರ ಸಂಭ್ರಮ ತಂದಿರುವ ಬೆಳವಣಿಗೆಯಾಗಿದೆ. ವಸ್ತುತಃ ಕಲಬುರಗಿಯಲ್ಲಿ ವಾರ್ತಾಭಾರತಿಯ ಹೊಸ ಆವೃತ್ತಿಯ ಆಗಮನವು ಕನ್ನಡ ಪತ್ರಿಕಾ ಮಾಧ್ಯಮದ ಅತಂತ್ರ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದ ಅನೇಕರಿಗೆ ನೆಮ್ಮದಿ ನೀಡಿರುವ ಒಂದು ಗಣ್ಯ ಮುನ್ನಡೆಯಾಗಿದೆ.
ವಾರ್ತಾಭಾರತಿಯನ್ನು ಕೇವಲ ಇನ್ನೊಂದು ಪತ್ರಿಕೆಯಾಗಿ ಕಾಣದೆ ಅದನ್ನು ಜನಧ್ವನಿಯ ಸಾರಥಿಯಾಗಿ, ಕಾರ್ಮಿಕರು, ರೈತರು, ಕೃಷಿಕರು, ಸಣ್ಣ ವ್ಯಾಪಾರಿಗಳು, ಬಳಕೆದಾರರು ಮುಂತಾದವರ ಪ್ರತಿನಿಧಿಯಾಗಿ ಪರಿಗಣಿಸುವ ಅಸಂಖ್ಯ ಕನ್ನಡಿಗರು ಕಲ್ಯಾಣಕರ್ನಾಟಕದಲ್ಲಿದ್ದಾರೆ. ತಮ್ಮ ನೆಲದಲ್ಲಿ ವಾರ್ತಾಭಾರತಿ ಅರಳುವುದನ್ನು ಕಾಣಲು ಬಹುಕಾಲದಿಂದ ಕಾದಿದ್ದ ಅವರ ಕಾತರ ಇಂದು ಸಾಕ್ಷಾತ್ಕಾರಗೊಳ್ಳುತ್ತಿದೆ. ಹಾಗೆಯೇ ಇದು, ವಾರ್ತಾಭಾರತಿಯನ್ನು ದಲಿತರು, ಶೋಷಿತರು, ಬಡವರು ಮತ್ತು ದುರ್ಬಲರಲ್ಲಿ ಅವರ ಹಕ್ಕುಗಳ ಬಗ್ಗೆ, ಸಾಮಾಜಿಕ ಹಾಗೂ ಆರ್ಥಿಕ ನ್ಯಾಯದ ಬಗ್ಗೆ ಮತ್ತು ಅವರ ಮುಂದಿರುವ ನೈಜ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವ ಆಂದೋಲನವಾಗಿ ಕಾಣುವ ಈ ಭೂಭಾಗದ ಕನ್ನಡಿಗರಿಗೆ ತೃಪ್ತಿ ತಂದ ಬೆಳವಣಿಗೆಯಾಗಿದೆ.
ಪತ್ರಿಕೆ ಎಂಬುದು, ಪ್ರತಿದಿನ ಹಾಗೂ ನಮ್ಮ ಯುಗದಲ್ಲಿ ಅನುಕ್ಷಣ, ಸಮಾಜವನ್ನು ಘಟನೆ ಮತ್ತು ಬೆಳವಣಿಗೆಗಳ ಜಗತ್ತಿಗೆ ಮಾತ್ರವಲ್ಲ ವಿಚಾರ, ಸಾಹಿತ್ಯ, ವಿಮರ್ಶೆ ಮತ್ತು ವಿಶ್ಲೇಷಣೆಗಳ ಜಗತ್ತಿಗೆ ಕೂಡಾ ಕರೆದೊಯ್ಯುವ ವಾಹನವಾಗಿರುತ್ತದೆ. ಕನ್ನಡ ಮಾಧ್ಯಮರಂಗದಲ್ಲಿ ವಾರ್ತಾಭಾರತಿಯ ಸಂಪಾದಕೀಯ ಹಾಗೂ ಅದರ ಸಂಪನ್ನ ವೈಚಾರಿಕ ಪುಟಗಳಿಗೆ ತನ್ನದೇ ಆದ ವಿಶೇಷ ಗೌರವ ಹಾಗೂ ಮಾನ್ಯತೆ ಇದೆ. ಸುದ್ದಿಗಳಲ್ಲಿ ಯಾವುದಕ್ಕೆ ಎಲ್ಲಿ ಎಷ್ಟು ಸ್ಥಾನ ನೀಡಬೇಕೆಂಬ ವಿಷಯದಲ್ಲಿ ವಾರ್ತಾಭಾರತಿಯು ಅನುಸರಿಸುತ್ತಾ ಬಂದಿರುವ ಪ್ರಬುದ್ಧ ಜನಪರ ಧೋರಣೆಗೆ ವ್ಯಾಪಕ ಮನ್ನಣೆ ಪ್ರಾಪ್ತವಾಗಿದೆ.
ಇದು, ಯಾವ ಅಥವಾ ಯಾರ ಪಕ್ಷ ಅಧಿಕಾರದಲ್ಲಿದೆ ಎಂಬುದನ್ನು ಲೆಕ್ಕಿಸದೆ, ಅಧಿಕಾರಸ್ಥರ ಪ್ರಸನ್ನತೆಯನ್ನಾಗಲಿ ಪುರಸ್ಕಾರಗಳನ್ನಾಗಲಿ ನಿರೀಕ್ಷಿಸದೆ ಸದಾ ಪರಿಣಾಮಕಾರಿ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವ ಮಾಧ್ಯಮವಾಗಿದೆ. ಅಧಿಕಾರಸ್ಥರು ಮತ್ತು ಪ್ರಬಲ ಪಕ್ಷ, ಪಂಥಗಳು ಕೆಂಗಣ್ಣಿನಿಂದ ನೋಡುವ ಹಲವು ಪ್ರತಿಭಾವಂತ, ಸಾಹಸಿ ಸಾಹಿತಿಗಳ, ಬರಹಗಾರರ, ದೈತ್ಯರ ದಿಟ್ಟ, ಮುಕ್ತ ವಿಚಾರಗಳು ಮತ್ತು ಕಟು ವಿಮರ್ಶೆಗಳು ವಾರ್ತಾಭಾರತಿಯಲ್ಲಿ ನಿತ್ಯ ಪ್ರಕಟವಾಗುತ್ತಿರುತ್ತವೆ. ಜನಸಾಮಾನ್ಯರನ್ನು ಗೊಂದಲಕ್ಕೆ ಕೆಡವಿರುವ ವಿಷಯಗಳಲ್ಲಿ ಅವರಲ್ಲಿ ಸ್ಪಷ್ಟತೆ ಮೂಡಿಸುವ ಮತ್ತು ಅವರ ಹಿತ ಯಾವುದರಲ್ಲಿದೆ ಎಂದು ಮಾರ್ಗದರ್ಶನ ಮಾಡುವ ಬರಹಗಳು ‘ವಿಚಾರಭಾರತಿ’ ಪುಟಗಳಲ್ಲಿ ನಿತ್ಯ ಮೆರೆಯುತ್ತವೆ. ವಿವಿಧ ವಿಷಯಗಳಲ್ಲಿ ಅನೇಕ ಓದುಗರು ‘ವಿಚಾರಭಾರತಿ’ ಯಿಂದ ಮಾರ್ಗದರ್ಶನವನ್ನು ನಿರೀಕ್ಷಿಸುತ್ತಾರೆ. ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಕಲೆ, ಜಾನಪದ, ಗ್ರಾಮೀಣ ಬದುಕು, ಯಾರೂ ಕೇಳರಿಯದ ಪುಟ್ಟ ಬುಡಕಟ್ಟುಗಳ ವ್ಯಾಕುಲಗಳು, ನಾಡಿಗಿನ್ನೂ ಪರಿಚಿತವಾಗಿಲ್ಲದ ಕಸುಬುಗಳು, ಕೌಶಲ್ಯಗಳು, ವಿವಿಧ ಕ್ಷೇತ್ರಗಳಲ್ಲಿ ನಡೆದಿರುವ ನವೀನ ಪ್ರಯೋಗಗಳು, ಕ್ರಾಂತಿಕಾರಿ ಸುಧಾರಣೆಗಳು.... ಹೀಗೆ ಅನೇಕಾರು ವಿಷಯಗಳ ಕುರಿತಾದ ಚರ್ಚೆ, ಸಂವಾದ ಮತ್ತು ಸಂಶೋಧನೆಗಳು ವಾರ್ತಾಭಾರತಿ ವೈಚಾರಿಕ ಪುಟಗಳ ಮೂಲಕ ಸಮಾಜದಲ್ಲಿ ಚರ್ಚೆಗೆ ಬರುತ್ತವೆ.
ಸಾಂವಿಧಾನಿಕ ಅಧಿಕಾರಗಳು, ಮಾನವೀಯ ಹಕ್ಕು ಮತ್ತು ಸ್ವಾತಂತ್ರ್ಯಗಳು, ಹಸಿದವರು, ದಾರಿದ್ರ್ಯ ಪೀಡಿತರು, ನಿರಾಶ್ರಿತರು, ನಿರ್ವಸಿತರು, ಮೂಲನಿವಾಸಿಗಳು, ನಿರುದ್ಯೋಗಿಗಳು, ಅತಿ ದುಬಾರಿಯಾದ ಕಾರಣಕ್ಕೆ ಶಿಕ್ಷಣ ಮತ್ತು ಆರೋಗ್ಯದಂತಹ ಮೂಲಭೂತ ಸವಲತ್ತುಗಳಿಂದ ವಂಚಿತರಾದವರು, ಕುಬೇರರ ಖಜಾನೆ ತುಂಬಲು ಸರಕಾರ ತಳೆದ ಜನವಿರೋಧಿ ಧೋರಣೆಗಳು, ಆ ಧೋರಣೆಗಳಿಗೆ ಬಲಿಪಶುಗಳಾದ ಕೋಟ್ಯಂತರ ಮುಗ್ಧ ಮೂಕ ಪ್ರಜೆಗಳ ನೋವುಗಳು, ಸಾರ್ವಜನಿಕ ಬೊಕ್ಕಸದಿಂದ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಕಬಳಿಸಿದ ಬೃಹತ್ ಹಗರಣಗಳು, ದೇಶದ ನೆಲದ ಮೇಲೆ ವಿದೇಶಿ ಆಕ್ರಮಣಗಳು, ಕುಸಿದು ಪಾತಾಳಕ್ಕಿಳಿದ ರೂಪಾಯಿ ಮೌಲ್ಯ, ಗಗನಕ್ಕೇರಿದ ಅವಶ್ಯಕ ವಸ್ತುಗಳ ಬೆಲೆಗಳು, ಉಸಿರುಗಟ್ಟಿಸುವ ಪರಿಸರ ಮಾಲಿನ್ಯ, ಬಯಲಾಗುತ್ತಿರುವ ಕಾಡುಗಳು.... ‘ಕಾರ್ಪೊರೇಟ್ ಜಗತ್ತಿನ ತುತ್ತೂರಿ ಮಾಧ್ಯಮಗಳು’ ಸದಾ ಕತ್ತಲ ಲೋಕದಲ್ಲೇ ಭದ್ರವಾಗಿ ಮುಚ್ಚಿಡುವ ಈ ಎಲ್ಲ ವಿಷಯಗಳು ವಾರ್ತಾಭಾರತಿಯಲ್ಲಿ ಸದಾ ಪ್ರಾಶಸ್ತ್ಯವನ್ನು ಪಡೆಯುತ್ತವೆ. ಈ ಕುರಿತಾದ ಸುದ್ದಿ, ಬೆಳವಣಿಗೆಗಳನ್ನು ವಾರ್ತಾಭಾರತಿಯು ಆದ್ಯತೆಯೊಂದಿಗೆ, ಪ್ರಮುಖವಾಗಿ ಪ್ರಕಟಿಸುವುದು ಮಾತ್ರವಲ್ಲ, ಸಮಾಜದಲ್ಲಿ ಈ ಕುರಿತು ಜಾಗೃತಿ ಬೆಳೆಯುವಂತೆ ಹಾಗೂ ಇವೆಲ್ಲಾ ಸಾರ್ವಜನಿಕ ಸ್ತರದಲ್ಲಿ ಚರ್ಚಾವಿಷಯಗಳಾಗುವಂತೆ ನೋಡಿಕೊಳ್ಳುತ್ತದೆ. ಈ ಮೂಲಕ ವಾರ್ತಾಭಾರತಿಯು ಸಮಾಜದ ಗಮನವನ್ನು ಮಿಥ್ಯ ಚರ್ಚಾ ವಿಷಯಗಳ ಮಾಯಾಜಾಲದಿಂದ ಬಿಡುಗಡೆಗೊಳಿಸಲು ನೆರವಾಗಿದೆ.
ಇಂದಿನಿಂದ ವಾರ್ತಾಭಾರತಿಯ ವಿಶೇಷತೆಗಳನ್ನು ಸ್ವತಃ ಪತ್ರಿಕೆಯ ಪುಟಗಳೇ ಕಲ್ಯಾಣಕರ್ನಾಟಕದ ತನ್ನ ಓದುಗರಿಗೆ ನಿತ್ಯ ನೆನಪಿಸಲಿದೆ. ಜೊತೆಗೇ ಪತ್ರಿಕೆಯ ಅಭಿಮಾನಿಗಳು ಯೂಟ್ಯೂಬ್, ಫೇಸ್ ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್‌ಆ್ಯಪ್ ಇತ್ಯಾದಿ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕವೂ ವಾರ್ತಾಭಾರತಿಯ ಅನನ್ಯಕೊಡುಗೆಗಳನ್ನು ಪಡೆಯಬಹುದು.
-ಅಬ್ದುಸ್ಸಲಾಮ್ ಪುತ್ತಿಗೆ, ಪ್ರಧಾನ ಸಂಪಾದಕ







