ಬಾಂಗ್ಲಾದಲ್ಲಿ ಮತ್ತೆ ಪ್ರಜಾಸತ್ತೆಯ ಗಾಳಿ

PC: x.com/unumihaimedia
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪ್ರಜಾಸತ್ತೆಯ ದಿಕ್ಕಿನತ್ತ ಬಾಂಗ್ಲಾ ಮತ್ತೆ ಮುಖ ಮಾಡಿದೆ. 2024ರಲ್ಲಿ ಶೇಕ್ ಹಸೀನಾರ ಹದಿನೈದು ವರ್ಷಗಳ ಆಡಳಿತದ ವಿರುದ್ಧ್ದ ಯುವಜನರ ದಂಗೆಯು ಬಾಂಗ್ಲಾದಲ್ಲಿ ಅರಾಜಕತೆಯನ್ನು ಸೃಷ್ಟಿ ಮಾಡಿತ್ತು. ಪ್ರಜಾಸತ್ತೆಯನ್ನು ದುರುಪಯೋಗಪಡಿಸಿಕೊಂಡು, ಶೇಕ್ ಹಸೀನಾ ನೇತೃತ್ವದ ಸರಕಾರ ಬಾಂಗ್ಲಾಕ್ಕೆ ಮಾಡಿದ ಮೋಸ ಅಂತಿಮವಾಗಿ ಅವರು ದೇಶವನ್ನು ತೊರೆಯುವ ಸ್ಥಿತಿ ನಿರ್ಮಾಣ ಮಾಡಿತ್ತು. ಕಳೆದ ಎರಡು ವರ್ಷಗಳಲ್ಲಿ ಬಾಂಗ್ಲಾ ಆರ್ಥಿಕವಾಗಿ ಜರ್ಜರಿತವಾಗಿದೆ. ಈ ಅರಾಜಕತೆ ಬಾಂಗ್ಲಾದ ಉದ್ಯಮ ವಲಯದ ಮೇಲೆಯೂ ತೀವ್ರ ಪರಿಣಾಮಗಳನ್ನು ಬೀರಿದೆ. ಇಂತಹ ಸಂದರ್ಭದಲ್ಲಿ, ಮತ್ತೆ ಪ್ರಜಾಸತ್ತಾತ್ಮಕ ವ್ಯವಸ್ಥೆ ಪುನರ್ ಸ್ಥಾಪನೆಯಾಗುವುದು ಬಾಂಗ್ಲಾದ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯವಾಗಿತ್ತು. ಬಾಂಗ್ಲಾದ ರಾಜಕೀಯ ಸ್ಥಿತಿಗತಿಗಳು ಭಾರತದ ಮೇಲೂ ದುಷ್ಪರಿಣಾಮಗಳನ್ನು ಬೀರ ತೊಡಗಿತ್ತು. ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಯ ಕಡೆಗೆ ಬೆರಳು ತೋರಿಸಿ, ಭಾರತದೊಳಗಿರುವ ಹಿಂದುತ್ವವಾದಿ ತೀವ್ರವಾದಿಗಳು ತಮ್ಮ ರಾಜಕೀಯಗಳಿಗೆ ಅದನ್ನು ಬಳಸಿಕೊಳ್ಳಲಾರಂಭಿಸಿದ್ದರು. ಇದೇ ಸಂದರ್ಭದಲ್ಲಿ ಶ್ರೀಮಂತ ದೇಶಗಳು ಭಾರತ ಉಪಖಂಡ ಸೇರಿದಂತೆ ಅಭಿವೃದ್ಧಿ ಶೀಲ ದೇಶಗಳ ಮೇಲೆ ಬೇರೆ ಬೇರೆ ರೀತಿಯಲ್ಲಿ ಆರ್ಥಿಕ, ರಾಜಕೀಯ ಒತ್ತಡಗಳನ್ನು ಹಾಕತೊಡಗಿದ್ದವು. ಅಮೆರಿಕದ ಸುಂಕ ಹೇರಿಕೆಯೂ ಭಾರತಕ್ಕೆ ಮಾತ್ರವಲ್ಲ ಇಡೀ ಉಪಖಂಡದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರ ತೊಡಗಿದೆ. ಹೀಗಿರುವಾಗ, ಭಾರತದ ನೆರೆ ರಾಷ್ಟ್ರಗಳಲ್ಲಿ ಅರಾಜಕತೆ ಹೆಚ್ಚಿದಂತೆಯೇ ಅದು ಬೇರೆ ಬೇರೆ ರೀತಿಯಲ್ಲಿ ಭಾರತದ ಮೇಲೂ ಪರಿಣಾಮವನ್ನು ಬೀರತೊಡಗುತ್ತದೆ. ಶೇಕ್ ಹಸೀನಾಗೆ ಭಾರತ ಆಶ್ರಯ ಕೊಟ್ಟದಿನದಿಂದ ಬಾಂಗ್ಲಾ-ಭಾರತದ ನಡುವಿನ ಸಂಬಂಧ ಸಂಪೂರ್ಣ ಹಳಸಿದೆ. ಒಂದು ಪ್ರಜಾಸತ್ತಾತ್ಮಕ ಸುಭದ್ರ ಸರಕಾರ ಬಾಂಗ್ಲಾದಲ್ಲಿ ರಚನೆಯಾಗುವುದೇ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿತ್ತು. ಈ ನಿಟ್ಟಿನಲ್ಲಿ ನೆರೆಯ ಬಾಂಗ್ಲಾದ ಚುನಾವಣಾ ರಾಜಕೀಯ ಬೆಳವಣಿಗೆಗಳು ಸ್ವಾಗತಾರ್ಹವಾಗಿದೆ.
ಈ ಚುನಾವಣಾ ಫಲಿತಾಂಶವು ಬಾಂಗ್ಲಾವನ್ನು ಹೊಸ ದಿಕ್ಕಿಗೆ ಮುನ್ನಡೆಸುತ್ತದೆ ಎಂದು ಪೂರ್ಣವಾಗಿ ನಂಬುವಂತಿಲ್ಲ. 2024ರಲ್ಲಿ ನಡೆದ ಯುವಜನರ ಕ್ರಾಂತಿಯ ಹೊರತಾಗಿಯೂ ಬಾಂಗ್ಲಾದಲ್ಲಿ ಈ ಬಾರಿ ಅಧಿಕಾರಕ್ಕೇರಿದ್ದು ಒಂದು ಕಾಲದಲ್ಲಿ ಬಾಂಗ್ಲಾವನ್ನು ಭ್ರಷ್ಟಾಚಾರಕ್ಕಾಗಿ ಕುಖ್ಯಾತಿಯನ್ನಾಗಿ ಮಾಡಿದ ಬಿಎನ್ಪಿ ಪಕ್ಷ ಎನ್ನುವುದನ್ನು ಮರೆಯುವುದಕ್ಕಾಗುವುದಿಲ್ಲ. ಹಸೀನಾ ಕುಟುಂಬದ ಕೈಯಿಂದ ಬಿಡಿಸಿಕೊಂಡ ಬಾಂಗ್ಲಾ ಮತ್ತೆ ಝಿಯಾ ಕುಟುಂಬದ ತೆಕ್ಕೆಗೆ ಬಿದ್ದಿದೆ. ಭರ್ಜರಿ ಬಹುಮತದ ಮೂಲಕ ಪ್ರಧಾನಿಯಾಗಲು ಹೊರಟಿರುವ ಬಿಎನ್ಪಿ ನಾಯಕ ತಾರೀಕುರ್ರಹ್ಮಾನ್ ಕೂಡ ಖಾಲಿದಾ ಝಿಯಾ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರಕ್ಕಾಗಿ ಕುಖ್ಯಾತಿಯನ್ನು ಪಡೆದಿದ್ದರು. ಆ ಸಂದರ್ಭದಲ್ಲಿ ಪ್ರಜಾಸತ್ತೆಯನ್ನು ದುರುಪಯೋಗ ಪಡಿಸಿಕೊಂಡ ಕಾರಣಕ್ಕಾಗಿ ಜೈಲು ಶಿಕ್ಷೆಯನ್ನ್ನೂ ಅನುಭವಿಸಿದ್ದರು. ಬಳಿಕ ಬಾಂಗ್ಲಾ ತೊರೆದು ಲಂಡನ್ನಲ್ಲಿ ಆಶ್ರಯ ಪಡೆಯಬೇಕಾಯಿತು. ಸುಮಾರು 17 ವರ್ಷಗಳ ಕಾಲ ಲಂಡನ್ನಲ್ಲಿ ಅವರು ತರೆಮರೆಸಿಕೊಂಡು, ಅಲ್ಲಿಂದಲೇ ಬಿಎನ್ಪಿಯನ್ನು ನಿಯಂತ್ರಿಸ ತೊಡಗಿದರು. ಅಂದು ಖಾಲಿದಾ ಝಿಯಾ ಅವರ ಭ್ರಷ್ಟಾಚಾರ ಸಹಿತ ಆಡಳಿತದಿಂದ ಮುಕ್ತಿ ಪಡೆಯಲು ಹಸೀನಾರನ್ನು ನೆಚ್ಚಿಕೊಂಡಿದ್ದ ಬಾಂಗ್ಲಾ ಇದೀಗ ಅನಿವಾರ್ಯವಾಗಿ ಮತ್ತೆ ಬಿಎನ್ಪಿಯನ್ನು ಆಶ್ರಯಿಸಿದೆ. ಇಷ್ಟು ವರ್ಷಗಳ ರಾಜಕೀ ಯ ಏಳುಬೀಳುಗಳಿಂದ ಒಂದಿಷ್ಟು ಪಾಠವನ್ನು ಬಿಎನ್ಪಿ ಕಲಿತಿದೆಯೆಂದಾದರೆ ಅದು ಬಾಂಗ್ಲಾದ ಜನರ ಅದೃಷ್ಟ. ಬಾಂಗ್ಲಾದಲ್ಲಿ ಪ್ರಜಾಸತ್ತೆ ಬೇರೂರುವುದಕ್ಕೆ ಖಾಲಿದಾ ಝಿಯಾ ಅವರ ಕೊಡುಗೆ ಬಹುದೊಡ್ಡದು. ತಮ್ಮ ಪತಿಯ ಹತ್ಯೆಯ ಬಳಿಕ ಪಕ್ಷದ ನೇತೃತ್ವ ವಹಿಸಿ ಅವರು ನಡೆಸಿದ ಸುದೀರ್ಘ ಹೋರಾಟದ ಫಲವಾಗಿ ಬಾಂಗ್ಲಾದ ಮೊದಲ ಮಹಿಳಾ ಪ್ರಧಾನಿಯಾಗಿ ಗುರುತಿಸಲ್ಪಟ್ಟರು. ಆದರೆ ಇವರ ಆಡಳಿತದಲ್ಲಿ ಬಾಂಗ್ಲಾ ಭ್ರಷ್ಟಾಚಾರ ಸೂಚ್ಯಂಕದಲ್ಲಿ ಅಗ್ರ ಸ್ಥಾನ ತಲುಪಿತ್ತು. ಅದರ ಲಾಭವನ್ನು ಪಡೆದು ಹಸೀನಾ ಅಧಿಕಾರಕ್ಕೇರಿದರು ಮಾತ್ರವಲ್ಲ ಸುಮಾರು 15 ವರ್ಷಗಳ ಸುದೀರ್ಘ ಕಾಲ ಅಧಿಕಾರದಲ್ಲಿ ಮುಂದುವರಿದರು. ಇದೀಗ ಹಸೀನಾ ಅವರಿಗೆ ಒದಗಿದ ಸ್ಥಿತಿಯನ್ನು ಜಗತ್ತು ನೋಡಿದೆ. ಇಂದು ಹಸೀನಾ ಅವರ ವಿರುದ್ಧ ನಡೆದಿರುವುದು ನಾಳೆ ನನ್ನ ವಿರುದ್ಧವೂ ನಡೆಯಬಹುದು ಎನ್ನುವ ಎಚ್ಚರಿಕೆಯ ಜೊತೆಗೆ ತಾರೀಕುರ್ರಹ್ಮಾನ್ ರಾಜಕೀಯವಾಗಿ ಹೆಜ್ಜೆಗಳನ್ನಿಡಬೇಕಾಗಿದೆ.
ಚುನಾವಣೆಯ ಜೊತೆ ಜೊತೆಗೇ ‘ಜುಲೈ ನ್ಯಾಶನಲ್ ಚಾರ್ಟರ್’ ಎಂದು ಕರೆಯಲಾಗಿರುವ 84 ಅಂಶಗಳ ಸುಧಾರಣಾ ಪ್ಯಾಕೇಜ್ನ ಅನುಷ್ಠಾನಕ್ಕಾಗಿ ಜನಾಭಿಪ್ರಾಯವನ್ನೂ ಸಂಗ್ರಹಿಸಲಾಗಿತ್ತು. ಶೇ.60ರಷ್ಟು ಮತದಾರರು ಇದಕ್ಕೆ ಅನುಮೋದನೆಯನ್ನು ನೀಡಿದ್ದಾರೆ. ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಆಡಳಿತವು ಸಾಂಸ್ಥಿಕ ಸುಧಾರಣೆಗಳ ಮೂಲಕ ಪ್ರಜಾತಾಂತ್ರಿಕ, ಉತ್ತಮ ಆಳ್ವಿಕೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಹಲವಾರು ಸುಧಾರಣಾ ಕ್ರಮಗಳನ್ನು ರೂಪಿಸುವ ಸನದನ್ನು ಸಿದ್ಧಪಡಿಸಿತ್ತು. ಮಹಿಳೆಯರಿಗೆ ಸಂಸತ್ನಲ್ಲಿ ಅಧಿಕ ಪ್ರಾತಿನಿಧ್ಯ, ಪ್ರಧಾನಿ ಹುದ್ದೆಯ ಅವಧಿಗಳಿಗೆ ಮಿತಿಯನ್ನು ವಿಧಿಸುವುದು, ಸಂಸತ್ನಲ್ಲಿ ಮೇಲ್ಮನೆಯನ್ನು ಸೃಷ್ಟಿಸುವುದು, ನ್ಯಾಯಾಂಗಕ್ಕೆ ಸ್ವಾತಂತ್ರ್ಯ ಮೊದಲಾದ ಅಂಶಗಳನ್ನು ಈ ಸುಧಾರಣೆಗಳು ಹೊಂದಿವೆ. ನೂತನ ಸರಕಾರ ಈ ಸುಧಾರಣೆಗಳಿಗೆ ಹೇಗೆ ಸ್ಪಂದಿಸಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಇದೇ ಸಂದರ್ಭದಲ್ಲಿ ಭಾರತ-ಬಾಂಗ್ಲಾ ಸಂಬಂಧ ಮರುನವೀಕರಣಗೊಳ್ಳಬೇಕಾಗಿದೆ. ಈಗಾಗಲೇ ಪ್ರಧಾನಿ ಅಭ್ಯರ್ಥಿ ತಾರೀಕುರ್ರಹ್ಮಾನ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ಆದರೆ, ಬಿಎನ್ಪಿಯು ಭರ್ಜರಿ ಬಹುಮತ ಪಡೆಯುತ್ತಲೇ ‘‘ಹಸೀನಾರನ್ನು ಬಾಂಗ್ಲಾಕ್ಕೆ ಹಸ್ತಾಂತರಿಸಿ’ ಎಂದು ಮನವಿ ಮಾಡಿದೆ. ಒಂದೆಡೆ ಪಶ್ಚಿಮಬಂಗಾಳ, ಅಸ್ಸಾಮ್ನಲ್ಲಿರುವ ಕಾರ್ಮಿಕರನ್ನು ‘ಬಾಂಗ್ಲಾ ನುಸುಳುಕೋರರು’ ಎಂದು ಹಣೆಪಟ್ಟಿ ಕಟ್ಟಿ ಅವರ ಮೇಲೆ ದೌರ್ಜನ್ಯ ಎಸಗುತ್ತಿರುವ ಪ್ರಕರಣಗಳು ಭಾರತದಲ್ಲಿ ಹೆಚ್ಚುತ್ತಿವೆ. ಇದೇ ಹೊತ್ತಿಗೆ ಬಾಂಗ್ಲಾದಲ್ಲಿ ಭ್ರಷ್ಟಾಚಾರ, ಹಿಂಸಾಚಾರಕ್ಕೆ ಕಾರಣವಾಗಿದ್ದಾರೆ ಎಂಬ ಆರೋಪ ಹೊತ್ತಿರುವ ಹಸೀನಾ ಅವರಿಗೆ ‘ಮಾನವೀಯತೆ’ಯ ನೆಲೆಯಲ್ಲಿ ಆಶ್ರಯ ನೀಡಿದ್ದೇವೆ ಎನ್ನುವ ಭಾರತದ ಹೇಳಿಕೆಯ ಪ್ರಾಮಾಣಿಕತೆ ಪ್ರಶ್ನೆಗೆ ಒಳಗಾಗುತ್ತಿದೆ. ತನ್ನದೇ ನೆಲದ ಪೌರರನ್ನು ಬಾಂಗ್ಲಾ ವಲಸಿಗರು ಎಂದು ಅನುಮಾನಿಸುವ ಭಾರತಕ್ಕೆ ಬಾಂಗ್ಲಾದಿಂದ ಪಲಾಯನಗೊಂಡಿರುವ ಹಸೀನಾ ಅವರಿಗೆ ಆಶ್ರಯ ನೀಡುವ ನೈತಿಕತೆಯಿದೆಯೇ ಎಂದು ವಿರೋಧ ಪಕ್ಷ ನಾಯಕರು ಕೇಳುತ್ತಿದ್ದಾರೆೆ. ಬಾಂಗ್ಲಾದ ಆಂತರಿಕ ವಿಷಯಗಳ ಮೇಲೆ ಭಾರತವು ಅನಗತ್ಯವಾಗಿ ಮೂಗುತೂರಿಸುವುದನ್ನು ನಿಲ್ಲಿಸಬೇಕು ಎನ್ನುವುದು ಬಿಎನ್ಪಿಯ ಮತ್ತೊಂದು ಆಗ್ರಹವೂ ಆಗಿದೆ. ಅಲ್ಪಸಂಖ್ಯಾತರನ್ನು ಬಾಂಗ್ಲಾ ಸರಕಾರದ ವಿರುದ್ಧ ಪ್ರಚೋದಿಸುವ ಕೆಲಸವನ್ನು ಭಾರತ ಮಾಡುತ್ತಿದೆ ಎಂಬ ಆರೋಪವನ್ನು ಬಾಂಗ್ಲಾ ಮಾಡುತ್ತಿದೆ. ಇದೇ ಸಂದರ್ಭದಲ್ಲಿ ಬಾಂಗ್ಲಾ ನುಸುಳುಕೋರರ ಹೆಸರಿನಲ್ಲಿ ಭಾರತದೊಳಗಿನ ಹಿಂದುತ್ವವಾದಿ ಶಕ್ತಿಗಳು ಎಸಗುತ್ತಿರುವ ದಾಳಿ, ದೌರ್ಜನ್ಯಗಳು ಉಭಯ ದೇಶಗಳ ಸಂಬಂಧದ ಮೇಲೆ ಪರಿಣಾಮ ಬೀರಿವೆ. ನೂತನ ಸರಕಾರ ಇವೆಲ್ಲವುಗಳನ್ನು ಹೇಗೆ ನಿಭಾಯಿಸಲಿದೆ ಎನ್ನುವುದರ ಮೇಲೆ ಬಾಂಗ್ಲಾ-ಭಾರತ ನಡುವಿನ ಸಂಬಂಧಗಳು ಮುಂದುವರಿಯಲಿದೆ.






