ದೀಪಾವಳಿಯ ಬೆಳಕಿನೆಡೆಗೆ ತೆರೆದ ದಾರಿ ಈರೋಡ್

ವೆಲ್ಲೋಡ್ ಪಕ್ಷಿಧಾಮ Photo: screengrab/ PTI
ದೀಪಗಳ ಹಬ್ಬ ದೀಪಾವಳಿಯನ್ನು ಪಟಾಕಿ ಸುಡುತ್ತ ಕಲುಷಿತಗೊಳಿಸಿರುವ ಹೊತ್ತಿನಲ್ಲಿ, ಪಟಾಕಿ ರಾಜಧಾನಿ ಶಿವಕಾಶಿಯಿಂದ ಬರೀ ನಾಲ್ಕೂವರೆ ಗಂಟೆ ಪ್ರಯಾಣದ ಅಂತರದಲ್ಲಿರುವ ತಮಿಳುನಾಡಿನ ಈರೋಡ್ ಜಿಲ್ಲೆಯ ವೆಲ್ಲೋಡ್ ಪಕ್ಷಿಧಾಮದ ಸುತ್ತಮುತ್ತಲ ಹಳ್ಳಿಗಳಲ್ಲಿ ಕಳೆದಿಪ್ಪತ್ತು ವರ್ಷಗಳಿಂದಲೂ ಪಟಾಕಿ ಸದ್ದೇ ಇಲ್ಲ. ಆದರೂ ಆ ಹಳ್ಳಿಗಳ ಜನರ ಹಬ್ಬದ ಸಂಭ್ರಮಕ್ಕೆ ಕಿಂಚಿತ್ತೂ ಕುಂದು ಬಂದಿಲ್ಲ.
ಈರೋಡ್ ಜಿಲ್ಲೆಯ ವೆಲ್ಲೋಡ್ ಪಕ್ಷಿಧಾಮದ ಸುತ್ತಮುತ್ತಲಿನ ಹನ್ನೆರಡಕ್ಕೂ ಹೆಚ್ಚು ಹಳ್ಳಿಗಳ ಜನರು, ಸಾವಿರಾರು ಪಕ್ಷಿಗಳ ಸಂತಾನೋತ್ಪತ್ತಿಗೆ ತೊಂದರೆಯಾಗದಿರಲೆಂದೇ ಇಂಥದೊಂದು ನಿಯಮವನ್ನು ತಮಗೆ ತಾವೇ ಹಾಕಿಕೊಂಡಿದ್ದಾರೆ. ಅವರ ಬದ್ಧತೆ ಈ ವರ್ಷವೂ ಮುಂದುವರಿದಿದೆ. ಮೆಟ್ಟುಪಾಳ್ಯಂ, ಪುಂಗಂಬಾಡಿ, ಎಲ್ಲಪಾಳ್ಯಂ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನರು ಎರಡು ದಶಕಗಳ ಹಿಂದೆಯೇ ಸ್ವಯಂಪ್ರೇರಿತವಾಗಿ ಪಟಾಕಿಗಳನ್ನು ನಿಷೇಧಿಸಿದರು. ಇದಕ್ಕೆ ಅವರಿಗೆ ಯಾವುದೇ ಸರಕಾರದ, ನ್ಯಾಯಾಲಯದ ಆದೇಶ ಬೇಕಾಗಲಿಲ್ಲ. ಅದನ್ನೂ ಮೀರಿ ಅವರೊಳಗಿನ ಆತ್ಮಸಾಕ್ಷಿ ತಮ್ಮೂರಿನ ಮಡಿಲಿಗೆ ಬರುವ ಹಕ್ಕಿಗಳನ್ನು ಕಾಯಲು ನಿಂತಿತು. ಸ್ಥಳೀಯ ಹಕ್ಕಿ ಪ್ರಭೇದಗಳಲ್ಲದೆ, ಸೈಬೀರಿಯಾ, ರಶ್ಯ, ಆಸ್ಟ್ರೇಲಿಯ ಮತ್ತು ನ್ಯೂಝಿಲ್ಯಾಂಡ್ನಥ ದೂರದ ದೇಶಗಳಿಂದ ವಲಸೆ ಬರುವ ನೂರಾರು ಜಾತಿಯ ಹಕ್ಕಿಗಳಿಗೆ ಅಕ್ಟೋಬರ್ನಿಂದ ಮಾರ್ಚ್ವರೆಗಿನ ಅವಧಿ ಸಂತಾನೋತ್ಪತ್ತಿ ಋತುವಾಗಿದೆ. 240 ಎಕರೆ ಪ್ರದೇಶದ ಈ ಪಕ್ಷಿಧಾಮದಲ್ಲಿನ 30 ಅಡಿ ಆಳದವರೆಗೆ ನೀರಿರುವ, ಹೇರಳ ಮೀನುಗಳಿರುವ 50 ಎಕರೆ ವಿಸ್ತೀರ್ಣದ ಕೆರೆ ಮಾತ್ರವಲ್ಲದೆ, ಜನರ ತಾಯಿಪ್ರೀತಿಯೂ ಇಲ್ಲಿ ಹಕ್ಕಿಗಳಿಗೆ ಅಬಾಧಿತ ವಾತಾವರಣವನ್ನು ಕಟ್ಟಿಕೊಟ್ಟಿದೆ. ಪಕ್ಷಿಗಳ ಕಲರವಕ್ಕೆ ಮನಸ್ಸು ತೆರೆದಿಟ್ಟು, ಆ ಕಾಳಜಿಯಲ್ಲೇ ಹಬ್ಬದ ಬೆಳಕನ್ನು ಕಾಣುವ ಈ ಗ್ರಾಮಸ್ಥರು ಹೊಸ ಬಟ್ಟೆ ಧರಿಸಿ, ಸಿಹಿಯುಂಡು ಸಂಭ್ರಮಿಸುತ್ತಾರೆ. ಪಕ್ಷಿಗಳಿಗೆ ನೆಮ್ಮದಿಯೊದಗಿಸಿ, ತಮ್ಮ ನೆಮ್ಮದಿಯನ್ನೂ ಕಂಡುಕೊಂಡಿದ್ದಾರೆ.
ಪಟಾಕಿಗಳಿಂದ ವಾತಾವರಣ ಎಷ್ಟು ಕೆಡುತ್ತದೆ ಎಂಬುದರ ಬಗ್ಗೆ ಅಧ್ಯಯನಗಳು ಏನೇ ಎಚ್ಚರಿಸಿದರೂ ಬುದ್ಧಿ ಬಾರದವರಿಗೆ ಈ ಹಳ್ಳಿಗಳ ಜನರ ಆದರ್ಶವಾದರೂ ಪಾಠವಾಗಬೇಕಿದೆ. ದೀಪಾವಳಿ ವೇಳೆ ಪಟಾಕಿಗಳನ್ನು ಸುಡುವುದರಿಂದ ದೇಶಾದ್ಯಂತ ವಾಯುಮಾಲಿನ್ಯ ತೀವ್ರ ಏರುತ್ತದೆ. ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಂಕಿI) ಅಪಾಯಕಾರಿ ಮಟ್ಟ ಮುಟ್ಟುತ್ತದೆ. ಪಟಾಕಿಗಳು ಪ್ರಕಾಶಮಾನವಾದ ಬಣ್ಣ ಮತ್ತು ಸ್ಫೋಟಕ ಶಕ್ತಿ ಪಡೆಯುವುದು ಭಾರ ಲೋಹಗಳು ಮತ್ತು ವಿಷಕಾರಿ ರಾಸಾಯನಿಕಗಳಿಂದ. ಅಧ್ಯಯನಗಳ ಪ್ರಕಾರ, ಪಟಾಕಿ ಸಿಡಿಸುವ ಅವಧಿಯಲ್ಲಿ ಗಾಳಿಯಲ್ಲಿರುವ Pಒ2.5 ಮತ್ತು Pಒ10 ಕಣಗಳ ಪ್ರಮಾಣ ಸಾಮಾನ್ಯಕ್ಕಿಂತ ಹಲವು ಪಟ್ಟು ಹೆಚ್ಚಾಗುತ್ತದೆ. ಕೆಲ ಮೆಟ್ರೋ ನಗರಗಳಲ್ಲಿ ಹಬ್ಬದ ರಾತ್ರಿ ಇದು ಸುರಕ್ಷಿತ ಮಿತಿಗಿಂತ 800ಶೇ. ಕ್ಕೂ
ಹೆಚ್ಚಾಗಿರುವುದು ದಾಖಲಾಗಿದೆ. ಸಲ್ಫರ್ ಡೈಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್ ಮತ್ತು ಬೇರಿಯಂ, ಸ್ಟ್ರಾನ್ಷಿಯಂನಂಥ ಭಾರ ಲೋಹದ ಲವಣಗಳು ಗಾಳಿಯಲ್ಲಿ ಸೇರುತ್ತವೆ. ಇವು ನರಮಂಡಲದ ಮೇಲೆ ಪ್ರಭಾವ ಬೀರುತ್ತವೆ. ದೀಪಾವಳಿ ಸಾಮಾನ್ಯವಾಗಿ ಚಳಿಗಾಲದ ಆರಂಭವಾಗಿದ್ದು, ಗಾಳಿಯ ವೇಗ ಕಡಿಮೆ ಮತ್ತು ಹವಾಮಾನ ತಂಪಾಗಿರುವುದು ವಿಷಕಾರಿ ಪಟಾಕಿ ಮಬ್ಬನ್ನು ಹಲವು ದಿನಗಳವರೆಗೆ ನೆಲಕ್ಕೆ ಹತ್ತಿರದಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ಹೊಗೆ ತೀವ್ರ ಉಸಿರಾಟದ ತೊಂದರೆ, ಕಣ್ಣು ಮತ್ತು ಗಂಟಲಿನ ಕಿರಿಕಿರಿಗೆ ಕಾರಣವಾಗುತ್ತದೆ. ಇದು ಮಕ್ಕಳು, ವೃದ್ಧರು ಮತ್ತು ಹೃದಯ ಅಥವಾ ಶ್ವಾಸಕೋಶ ಸಮಸ್ಯೆ ಇರುವವರಿಗೆ ಅಪಾಯಕಾರಿ. ಆರೋಗ್ಯ ತಜ್ಞರು ಎಚ್ಚರಿಸುವಂತೆ, ಕಳಪೆ ವಾಯು ಗುಣಮಟ್ಟ ಮಕ್ಕಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತರಬಹುದು. ಅಲ್ಲದೆ, ಸಾಮಾನ್ಯ ಸುರಕ್ಷತಾ ಮಿತಿಗಳನ್ನು ಮೀರಿದ ಜೋರಾದ ಡೆಸಿಬಲ್ ಮಟ್ಟ ಪ್ರಾಣಿಗಳು, ಸಾಕುಪ್ರಾಣಿಗಳು ಮತ್ತು ಪಕ್ಷಿಗಳಲ್ಲಿ ತೀವ್ರ ಭೀತಿ, ಆಘಾತ ಮತ್ತು ದಿಗ್ಭ್ರಮೆಗೆ ಕಾರಣವಾಗುತ್ತದೆ.
ಮಾಲಿನ್ಯ ತೀವ್ರತೆ ತಗ್ಗಿಸಲು ಸುಪ್ರೀಂ ಕೋರ್ಟ್ ಸಾಂಪ್ರದಾಯಿಕ ರಾಸಾಯನಿಕ ಪಟಾಕಿಗಳನ್ನು ನಿಷೇಧಿಸಿದೆ. ನಿಗದಿತ ಸಮಯ ಮಿತಿಯಲ್ಲಷ್ಟೇ, ಸಾಮಾನ್ಯ ಪಟಾಕಿಗಳಿಗಿಂತ 30ಶೇ. ರಷ್ಟು ಕಡಿಮೆ ಮಾಲಿನ್ಯ ಉಂಟುಮಾಡುವ ಪ್ರಮಾಣೀಕೃತ ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶವಿದೆ. ಹಸಿರು ಪಟಾಕಿ ಎಂಬ ಹೆಸರಲ್ಲಿ ಬರುವುದೆಲ್ಲವೂ ಮಾಲಿನ್ಯ ಮುಕ್ತವಲ್ಲ. ಅವು ಸೂಕ್ಷ್ಮ ಕಣಗಳು ಮತ್ತು ಭಾರ ಲೋಹಗಳನ್ನು ಬಿಡುಗಡೆ ಮಾಡುತ್ತವೆ ಎಂದು ಅಧ್ಯಯನಗಳು ಹೇಳುತ್ತವೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸಲು ರಾತ್ರಿ 8ರಿಂದ 10 ಗಂಟೆಯವರೆಗಷ್ಟೇ ಅವಕಾಶವಿದ್ದು, ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆ ನಿಯಮ ಜಾರಿಯಲ್ಲಿದೆ.
ಆದರೆ, ಪಟಾಕಿ ಮೇಲಿನ ನಿರ್ಬಂಧವೆಂದರೆ ಬಿಜೆಪಿಗೆ ಆಗುವುದಿಲ್ಲ. ಹಿಂದೂ ಹಬ್ಬಗಳನ್ನೇ ಗುರಿ ಮಾಡಲಾಗುತ್ತಿದೆ ಎಂದು ಆರೋಪಿಸಿ, ಇಲ್ಲಿಯೂ ಧರ್ಮದ ಅಮಲಿನ ವಿಷ ಮೆತ್ತಲಾಗುತ್ತದೆ. ಮುಂಬೈನಲ್ಲಿ ಪಟಾಕಿಗಳಿಂದ ಉಂಟಾಗುವ ಮಾಲಿನ್ಯ ತಡೆಯುವಂತೆ ಬಾಂಬೆ ಹೈಕೋರ್ಟ್ ಆದೇಶವಿರುವಾಗಲೂ ಇದೇ ಬಿಜೆಪಿಯ ತಕರಾರಿನಿಂದಾಗಿ, ನಟಿ ದಿಯಾ ಮಿರ್ಝಾ ಹಂಚಿಕೊಂಡಿದ್ದ ಪಟಾಕಿ ವಿರೋಧಿ ಸಂದೇಶದ ವೀಡಿಯೊವನ್ನು ಬಿಎಂಸಿ ಸಾಮಾಜಿಕ ಮಾಧ್ಯಮದಿಂದ ಅಳಿಸಿತ್ತು. ಅದನ್ನು ಬಾಂಬೆ ಹೈಕೋರ್ಟ್ ತೀವ್ರವಾಗಿ ಖಂಡಿಸಿತಲ್ಲದೆ, ತಕ್ಷಣವೇ ಆ ವೀಡಿಯೊವನ್ನು ಪುನಃ ಅಪ್ಲೋಡ್ ಮಾಡುವಂತೆ ಆದೇಶಿಸಿತು. ದಿಲ್ಲಿ ಸೇರಿದಂತೆ ವಿವಿಧೆಡೆ ಪಟಾಕಿಗಳ ಮೇಲಿನ ನಿಷೇಧವನ್ನು ಈ ಹಿಂದೆಯೂ ಬಿಜೆಪಿ ನಾಯಕರು ವಿರೋಧಿಸಿದ್ದಿದೆ. ಕರ್ನಾಟಕದಲ್ಲೂ ಸರಕಾರದ ಕಟ್ಟುನಿಟ್ಟಿನ ಕ್ರಮಕ್ಕೆ ಬಿಜೆಪಿ ಆಕ್ಷೇಪ ತೆಗೆಯುತ್ತಲೇ ಇದೆ. ಹಿರಿಯ ನಟಿ ಸೋನಿ ರಜ್ದ್ದಾನ್ ಚಿಕ್ಕ ಮಕ್ಕಳು ವಾಯುಮಾಲಿನ್ಯದಿಂದ ಎದುರಿಸುವ ಅಪಾಯದ ಬಗ್ಗೆ ಎತ್ತಿಹೇಳುತ್ತ, ದೀಪಾವಳಿಗೆ ಒಂದೇ ಒಂದು ಪಟಾಕಿ ಸಿಡಿಸುವುದು ಕೂಡ ಜೀವ ವಿರೋಧಿ, ಆರೋಗ್ಯ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಎಂದಿದ್ದಾರೆ. ಆದರೆ ದೇಶಭಕ್ತಿಯ ಹೆಸರಲ್ಲಿ ಬೃಹನ್ನಾಟಕವಾಡುವವರಿಗೆ ಇಂಥ ಸೂಕ್ಷ್ಮ್ಮ ಕಾಳಜಿಗಳ ಬೆಲೆ ತಿಳಿಯುವುದಿಲ್ಲ. ಧರ್ಮವನ್ನೂ ಆಯುಧವಾಗಿಸಿಕೊಂಡವರಿಗೆ ಹಬ್ಬವೆಂದರೆ ಸಾಮಾಜಿಕ ಸಾಮರಸ್ಯ ಮತ್ತು ಪರಿಸರ ಸಾಮರಸ್ಯವೆರಡಕ್ಕೂ ಮಡಿಲಾಗಬೇಕು ಎಂಬ ತತ್ವ ಎಲ್ಲಿ ಅರ್ಥವಾದೀತು? ಧರ್ಮದ ಹೆಸರಲ್ಲಿ ವಾತಾವರಣಕ್ಕೆ ವಿಷ ತುಂಬುತ್ತ, ಕಿವಿಗಡಚಿಕ್ಕುವ ಸದ್ದು ಮೊಳಗಿಸುತ್ತ ಉನ್ಮತ್ತರಾಗುವುದು ಮತ್ತು ಅಸಹಿಷ್ಣುತೆ ತೋರಿಸಿ ಅಬ್ಬರಿಸುವುದೇ ಹಬ್ಬವೆಂದುಕೊಂಡವರ ಇಂಥ ರಾಜಕೀಯ ಮತ್ತು ಬೂಟಾಟಿಕೆಯ ಮನಸ್ಥಿತಿ ಪಟಾಕಿಗಿಂತಲೂ ಅಪಾಯಕಾರಿ. ಸಮಾಜವನ್ನು ಒಳಗಿಂದಲೇ ಮುಗಿಸುವ ಈ ಮಾಲಿನ್ಯವನ್ನು ನಿವಾರಿಸುವವರು ಯಾರು?






