ನ್ಯಾಯಾಂಗದಲ್ಲಿ ಪಕ್ಷಪಾತ ಸಲ್ಲದು

ಬ್ರಿಜ್ ಭೂಷಣ್ ಸಿಂಗ್ | PC : PTI
ಭಾರತ ಪ್ರಜಾಪ್ರಭುತ್ವ ಆಡಳಿತ ಪದ್ಧತಿಯನ್ನು ಹೊಂದಿದ್ದರೂ ಜಾತಿ, ಮತ ಭೇದವಿಲ್ಲದೆ ಎಲ್ಲರಿಗೂ ಸಂವಿಧಾನದ ರಕ್ಷಣೆ ಇದ್ದರೂ ಹಣ, ಅಧಿಕಾರ ಮತ್ತು ಪ್ರಭಾವವನ್ನು ಹೊಂದಿರುವವರ ಎದುರು ಇದ್ಯಾವುದೂ ಇಲ್ಲದವರು ಹಾಗೂ ಕಡಿಮೆ ಸಂಪನ್ಮೂಲಗಳನ್ನು ಹೊಂದಿರುವವರು ಗೆಲ್ಲುವುದು ಸುಲಭವಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಇದಕ್ಕೆ ನ್ಯಾಯಾಂಗವೂ ಹೊರತಲ್ಲ.
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಿಜೆಪಿ ನಾಯಕ ಹಾಗೂ ಭಾರತೀಯ ಕುಸ್ತಿ ಫೆಡರೇಶನ್ನ ಹಿಂದಿನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಎಂಬವರನ್ನು ದಿಲ್ಲಿಯ ನ್ಯಾಯಾಲಯ ದೋಷ ಮುಕ್ತಗೊಳಿಸಿರುವ ಪ್ರಕರಣ ಸಹಜವಾಗಿ ತೀವ್ರ ಆತಂಕವನ್ನು ಉಂಟು ಮಾಡುತ್ತದೆ. ಇದೇನು ಮೊದಲ ಸಲವಲ್ಲ. ಲೈಂಗಿಕ ಕಿರುಕುಳ ಆರೋಪದ ಪ್ರಕರಣಗಳಲ್ಲಿ ಅದರಲ್ಲೂ ವಿಶೇಷವಾಗಿ ಪ್ರಭಾವಿ ವ್ಯಕ್ತಿಗಳು ಆರೋಪಿಗಳಾಗಿರುವ ಅನೇಕ ಪ್ರಕರಣಗಳಲ್ಲಿ ಅಪರಾಧಿಗಳಾಗಿದ್ದರೂ ನಿರ್ದೋಷಿಗಳಾಗಿ ಹೊರ ಬಂದ ಉದಾಹರಣೆಗಳು ಸಾಕಷ್ಟಿವೆ. ಬ್ರಿಜ್ ಭೂಷಣ್ ವಿರುದ್ಧ ಆರೋಪ ಮಾಡಿರುವವರು ಕೂಡ ಸಾಮಾನ್ಯ ವ್ಯಕ್ತಿಗಳಲ್ಲ. ಭಾರತದ ವಿಖ್ಯಾತ ಕುಸ್ತಿಪಟುಗಳು ಹಾಗೂ ಕ್ರೀಡಾ ರಂಗದಲ್ಲಿ ಉನ್ನತ ಸ್ಥಾನಮಾನ ಹಾಗೂ ವಿಶ್ವಾಸಾರ್ಹತೆಯನ್ನು ಹೊಂದಿದವರಾಗಿದ್ದಾರೆ. ಬ್ರಿಜ್ ಭೂಷಣ್ ಮೇಲಿರುವ ಆರೋಪಗಳು ಸಾಮಾನ್ಯವಾದವುಗಳಲ್ಲ. ಲೈಂಗಿಕ ಕಿರುಕುಳ, ಬೆದರಿಕೆ ಹಾಗೂ ಮಹಿಳೆಯರ ಘನತೆಗೆ ಧಕ್ಕೆ ತರುವಂಥ ಕೃತ್ಯಗಳ ಆರೋಪಗಳು ಅವರ ಮೇಲಿದ್ದವು. ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಆರು ಮಂದಿ ಮಹಿಳಾ ಕುಸ್ತಿಪಟುಗಳು ಆರೋಪಗಳನ್ನು ದಾಖಲಿಸಿದ್ದರು.ಆದರೆ ಸಾಕ್ಷ್ಯಾಧಾರಗಳ ಕೊರತೆ ಮತ್ತು ಸಾಕ್ಷಿಗಳ ಹೇಳಿಕೆಗಳಲ್ಲಿನ ವೈರುಧ್ಯದ ಕಾರಣ ನೀಡಿ ನ್ಯಾಯಾಲಯ ಆರೋಪಗಳನ್ನು ತಳ್ಳಿ ಹಾಕಿದೆ.
ಸಾಮಾನ್ಯವಾಗಿ ಬಹುತೇಕ ಲೈಂಗಿಕ ಕಿರುಕುಳದ ಪ್ರಕರಣಗಳು ದಂಡನೆಯಲ್ಲಿ ಕೊನೆಗೊಳ್ಳುವುದಿಲ್ಲ. ಆರೋಪಿಗಳು ಹಣವಂತರು ಹಾಗೂ ಪ್ರಭಾವಿಗಳು ಆಗಿದ್ದರೆ ಅವರಿಗೆ ಶಿಕ್ಷೆಯಾಗುವ ಸಾಧ್ಯತೆ ತುಂಬಾ ಕಡಿಮೆ. ದಿಲ್ಲಿ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಬಿಜೆಪಿಯ ಸಂಸತ್ ಸದಸ್ಯರು, ಬಿಜೆಪಿ ದೇಶದ ಆಡಳಿತ ಪಕ್ಷ. ಸರಕಾರ ಹಾಗೂ ಪಕ್ಷ ಎರಡರಲ್ಲೂ ಈತ ಪ್ರಭಾವ ಹೊಂದಿರುವ ಹಾಗೂ ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿರುವ ವ್ಯಕ್ತಿ. ಹಾಗಾಗಿಯೇ ಇಂಥ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನ್ಯಾಯ ಸಿಗುವುದು ಸುಲಭದ ಸಂಗತಿಯಲ್ಲ.
ಪ್ರಭಾವಶಾಲಿಯಾದ ಬ್ರಿಜ್ ಭೂಷಣ್ ಸಿಂಗ್ ಅಂಥವರ ವಿರುದ್ಧ ಹೋರಾಡುವುದೆಂದರೆ ಇಡೀ ವ್ಯವಸ್ಥೆಯನ್ನು ಎದುರಿಸಿ ನಿಲ್ಲುವ ಧೈರ್ಯಶಾಲಿಗಳಾಗಿರಬೇಕು. ಬ್ರಿಜ್ ಭೂಷಣ್ ಮೇಲೆ ಎಫ್ಐಆರ್ ದಾಖಲಿಸುವುದೂ ಸುಲಭವಾಗಿರಲಿಲ್ಲ. ಅಷ್ಟು ಪ್ರಭಾವಶಾಲಿಯಾಗಿದ್ದ ಈ ವ್ಯಕ್ತಿಯ ಪರವಾಗಿ ಹಾಗೂ ರಕ್ಷಣೆಗಾಗಿ ಇಡೀ ಬಿಜೆಪಿ ಸರಕಾರವೇ ನಿಂತಿತ್ತು. ಕೊನೆಗೆ ನೊಂದ ಮಹಿಳಾ ಕ್ರೀಡಾಪಟುಗಳು ಬೇರೆ ದಾರಿ ಕಾಣದೆ ಸುಪ್ರೀಂ ಕೋರ್ಟ್ ಮೊರೆ ಹೋದರು. ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶದ ನಂತರ ಎಫ್ಐಆರ್ ದಾಖಲಾಯಿತು. ಅಪ್ರಾಪ್ತ ವಯಸ್ಕ ಕುಸ್ತಿಪಟುವೊಬ್ಬರು ಬ್ರಿಜ್ ಭೂಷಣ್ ವಿರುದ್ಧದ ದೂರನ್ನು ವಾಪಸ್ ಪಡೆದ ಪರಿಣಾಮವಾಗಿ ಅವರ ಮೇಲೆ ಪೊಕ್ಸೊ ಕಾಯ್ದೆಯ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಕೈ ಬಿಡಲಾಯಿತು.
ಮೊದಲು ಈ ಪ್ರಕರಣ ದಿಲ್ಲಿಯ ಆಚೆ ಯಾರಿಗೂ ಗೊತ್ತಿರಲಿಲ್ಲ. 2023ರಲ್ಲಿ ದಿಲ್ಲಿಯ ಜಂತರ್ ಮಂತರ್ನಲ್ಲಿ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಸೇರಿದಂತೆ ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ಆರಂಭಿಸಿದಾಗ ಈ ಪ್ರಕರಣ ಇಡೀ ದೇಶದ ಗಮನವನ್ನು ಸೆಳೆಯಿತು, ಜಗತ್ತಿನಾದ್ಯಂತ ಸುದ್ದಿಯಾಯಿತು. ಸಂಸತ್ ಭವನದತ್ತ ಮೆರವಣಿಗೆ ಹೊರಡಲು ಕುಸ್ತಿ ಪಟುಗಳು ಮುಂದಾದಾಗ ಪೊಲೀಸರು ಅವರನ್ನು ತಡೆದರು. ಮಾತ್ರವಲ್ಲದೆ ಬಲವಂತವಾಗಿ ಪ್ರತಿಭಟನಾ ಸ್ಥಳದಿಂದ ಹೊರಗೆ ದಬ್ಬಿದರು. ಇದರಿಂದ ರೋಸಿ ಹೋದ ಕೆಲವು ಕುಸ್ತಿಪಟುಗಳು ಬೇರೆ ದಾರಿ ಕಾಣದೆ ತಾವು ಗೆದ್ದಿದ್ದ ಪದಕಗಳನ್ನು ಹರಿದ್ವಾರದಲ್ಲಿ ಗಂಗಾ ನದಿಗೆ ಎಸೆಯಲೂ ಹಿಂಜರಿಯಲಿಲ್ಲ.ಏತನ್ಮಧೆ ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳ ಪರಾಮರ್ಶೆಗಾಗಿ ಕೇಂದ್ರ ಕ್ರೀಡಾ ಸಚಿವಾಲಯ ಮೇಲ್ವಿಚಾರಣಾ ಸಮಿತಿಯನ್ನು ರಚಿಸಿತು.ಅದರೆ ಈ ಸಮಿತಿಯ ವರದಿ ಬಹಿರಂಗವಾಗಲಿಲ್ಲ.
ದುರಂತವೆಂದರೆ ತಮ್ಮದು ಚಾರಿತ್ರ್ಯವಂತರ ಪಕ್ಷ ಮತ್ತು ಸಂಘಟನೆ ಎಂದು ಹೇಳಿಕೊಳ್ಳುವವರೇ ಅಧಿಕಾರದಲ್ಲಿ ಇರುವಾಗ ರಾಷ್ಟ್ರದ ಘನತೆ, ಗೌರವವನ್ನು ಎತ್ತಿ ಹಿಡಿಯುವ ಮಹಿಳಾ ಕುಸ್ತಿಪಟುಗಳು ಇಂಥ ಯಾತನೆಯನ್ನು ಅನುಭವಿಸಬೇಕಾಗಿ ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರು ಇದೆಲ್ಲ ನಡೆದಿದ್ದರೂ ಜಾಣ ಮೌನವನ್ನು ತಾಳಿದರು. ಗೃಹ ಸಚಿವ ಅಮಿತ್ಶಾ ಅವರ ಬಗ್ಗೆ ಹೇಳುವುದೇ ಬೇಡ. ಕೊನೆಗೆ ಸದಾ ಸಂಸ್ಕೃತಿಯ ಬಗ್ಗೆ ಮಾತಾಡುವ, ಮಹಿಳೆಯರನ್ನು ಮಾತೆಯರು ಎಂದು ಕರೆಯುವ ನಾಗಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗುರುಗಳಾದರೂ ಕ್ರೀಡಾಪಟು ಹೆಣ್ಣು ಮಕ್ಕಳ ನೆರವಿಗೆ ಧಾವಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಅವರೂ ಬರಲಿಲ್ಲ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಮಕ್ಕಳಿಗಿಂತ ಬ್ರಿಜ್ ಭೂಷಣ್ ಹಿತಾಸಕ್ತಿ ಅವರಿಗೆ ಮುಖ್ಯವಾಯಿತು.
ಇಷ್ಟೆಲ್ಲಾ ನಡೆದರೂ ಮಹಿಳಾ ಕುಸ್ತಿಪಟುಗಳು ಹತಾಶರಾಗಿಲ್ಲ. ದಿಲ್ಲಿ ಹೈಕೋರ್ಟ್ನ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ವಿನೇಶ್ ಫೋಗಟ್ ಹೇಳಿದ್ದಾರೆ. ಬಡವರಿರಲಿ ಶ್ರೀಮಂತರಿರಲಿ ನ್ಯಾಯದಾನ ಸಮಾನವಾಗಿರಬೇಕು. ಆದರೆ ತಮ್ಮ ಹಿತಾಸಕ್ತಿಯ ರಕ್ಷಣೆಗಾಗಿ ಬಂಡವಾಳಶಾಹಿಗಳು ಕಟ್ಟಿಕೊಂಡಿರುವ ವ್ಯವಸ್ಥೆಯಲ್ಲಿ ನ್ಯಾಯವನ್ನು ಪಡೆಯುವುದು ಕೂಡ ಸುಲಭದ ಸಂಗತಿಯಲ್ಲ.
ದುಡ್ಡಿನ ದರ್ಪದ ಎದುರು ಸಾಮಾನ್ಯರು ಗೆಲ್ಲುವುದು ಸುಲಭದ ಸಂಗತಿಯಲ್ಲ. ಕೇರಳದಲ್ಲಿ ನಟಿಯೊಬ್ಬಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಹಾಗೂ ಕ್ರೈಸ್ತ ಸನ್ಯಾಸಿನಿಯ ಮೇಲೆ ಪಾದ್ರಿಯೊಬ್ಬ ನಡೆಸಿದ ಅತ್ಯಾಚಾರದ ಪ್ರಕರಣದಲ್ಲೂ ನ್ಯಾಯ ಸಿಗಲಿಲ್ಲ. ಇಂಥ ಪ್ರಕರಣದಲ್ಲಿ ಜನರಿಗೆ ನ್ಯಾಯ ಸಿಗದಿದ್ದರೆ ಅವರು ತಮಗೆ ಸರಿ ಕಂಡ ದಾರಿಯಲ್ಲಿ ಸಾಗುತ್ತಾರೆ. ನ್ಯಾಯಾಲಯಗಳಲ್ಲೂ ನ್ಯಾಯ ಸಿಗದಿದ್ದರೆ ನೊಂದ ಮಹಿಳೆಯರು ದೂರು ಕೊಡಲು ಕೂಡ ಹಿಂಜರಿಯುತ್ತಾರೆ. ಕೋರ್ಟಿಗೆ ಹೋದರೂ ನ್ಯಾಯ ಸಿಗುವುದಿಲ್ಲ ಎಂದು ಗೊತ್ತಾದರೆ ಹೋರಾಟಗಾರರು ವ್ಯವಸ್ಥೆಯಲ್ಲಿ ನಂಬಿಕೆಯನ್ನು ಕಳೆದುಕೊಂಡು ಹೊಸ ದಾರಿಯತ್ತ ಹೊರಳಿ ನಿಲ್ಲುತ್ತಾರೆ.






