ಸಂವಿಧಾನಕ್ಕಿದು ಶೋಭೆಯಲ್ಲ!

Screengrabs: X
‘ಕಾನೂನು ಪಾಲಿಸ ಬೇಕಾದವರು ಕಾನೂನನ್ನು ಕೈಗೆತ್ತಿಕೊಂಡರೆ’ ಏನಾಗಬಹುದು, ಅದು ಸಮಾಜದ ಮೇಲೆ ಎಂತಹ ಪರಿಣಾಮವನ್ನು ಬೀರಬಹುದು ಎನ್ನುವುದಕ್ಕೆ ‘ಬಿ. ಆರ್. ಗವಾಯಿ ಮೇಲೆ ಶೂ ಎಸೆದ’ ಪ್ರಕರಣ ಅತ್ಯುತ್ತಮ ಉದಾಹರಣೆಯಾಗಿದೆ. ನ್ಯಾಯಮೂರ್ತಿ ಬಿ. ಆರ್. ಗವಾಯಿ ಅವರು ಸಿಜೆಐ ಆಗಿದ್ದಾಗ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಯ ವೇಳೆ ಹಿರಿಯ ವಕೀಲ ರಾಕೇಶ್ ಕಿಶೋರ್ ಪೀಠದ ಕಡೆಗೆ ಶೂ ಎಸೆದು ಸುದ್ದಿಯಾಗಿದ್ದರು.ಇದೀಗ ಅದೇ ರಾಕೇಶ್ ಕಿಶೋರ್ಗೆ ಅಪರಿಚಿತನೊಬ್ಬ ದಿಲ್ಲಿಯ ನ್ಯಾಯಾಲಯವೊಂದರ ಸಂಕೀರ್ಣದಲ್ಲೇ ಚಪ್ಪಲಿಯಿಂದ ಥಳಿಸಿದ್ದಾನೆ. ಹಲವರು ಈ ಕೃತ್ಯವನ್ನು ಖಂಡಿಸಿದರೆ, ಕೆಲವರು ‘ಮಾಡಿದ್ದುಣ್ಣೋ ಮಹಾರಾಯ’ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಸಂವಿಧಾನವನ್ನು ಓದಿದ ಒಬ್ಬ ಹಿರಿಯ ವಕೀಲ ನ್ಯಾಯಾಲಯದೊಳಗೆ ನ್ಯಾಯಾಧೀಶರ ಮೇಲೆ ಚಪ್ಪಲಿ ತೂರುವುದು ತಪ್ಪಲ್ಲವಾದರೆ, ಸಂವಿಧಾನದ ಬಗ್ಗೆ ಅಧ್ಯಯನ ಮಾಡದ ಶ್ರೀಸಾಮಾನ್ಯ ಅದಕ್ಕೆ ಪ್ರತಿಯಾಗಿ ಚಪ್ಪಲಿ ಏಟು ನೀಡಿದರೆ ಏನು ತಪ್ಪು ಎಂದು ಸಾರ್ವಜನಿಕರು ಆಡಿಕೊಳ್ಳುವಂತಾಗಿದೆ. ಒಂದು ರೀತಿಯಲ್ಲಿ ಹಿರಿಯ ವಕೀಲ ರಾಕೇಶ್ ಕಿಶೋರ್ ತಾವೇ ಬಿತ್ತಿದ್ದನ್ನು ಕೊಯ್ದುಕೊಂಡಿದ್ದಾರೆ.
ಯಾರೇ ಆಗಲಿ ಕಾನೂನನ್ನು ಕೈಗೆತ್ತಿಕೊಳ್ಳುವುದು ತಪ್ಪು. ಕಾರಣ ಏನೇ ಇರಲಿ, ರಾಕೇಶ್ ಕಿಶೋರ್ ಎನ್ನುವ ಹಿರಿಯ ವಕೀಲರ ಮೇಲೆ ನ್ಯಾಯಾಲಯದ ಆವರಣದಲ್ಲಿ ಚಪ್ಪಲಿಯಿಂದ ಥಳಿಸಿರುವುದು ಯಾವ ಕಾರಣಕ್ಕೂ ಸಮರ್ಥನೀಯವಲ್ಲ. ಹೀಗೆ ‘ಕಣ್ಣಿಗೆ ಕಣ್ಣು’ ನ್ಯಾಯವನ್ನು ಪಾಲಿಸುತ್ತಾ ಹೋದರೆ ಎಲ್ಲರೂ ಕಣ್ಣುಗಳಿಲ್ಲದೆ ಕುರುಡರಾಗಬೇಕಾಗಬಹುದು. ಒಂದು ತಪ್ಪನ್ನು ಪ್ರಶ್ನಿಸುವುದಿದ್ದರೂ ಅದನ್ನು ಸಂವಿಧಾನದ ಮಾರ್ಗದಲ್ಲೇ ಪ್ರಶ್ನಿಸಬೇಕು. ಈ ನಿಟ್ಟಿನಲ್ಲಿ ಮೊದಲು ತಪ್ಪನ್ನು ಎಸಗಿರುವುದು ರಾಕೇಶ್ ಕಿಶೋರ್. ನ್ಯಾಯಾಲಯದಲ್ಲಿ ಗವಾಯಿ ಅವರು ನೀಡುವ ತೀರ್ಪಿನ ಬಗ್ಗೆ ಅಸಮಾಧಾನವಿದ್ದರೆ ಅದನ್ನು ನ್ಯಾಯಾಲಯದ ವ್ಯಾಪ್ತಿಯಲ್ಲೇ ಪ್ರಶ್ನಿಸಲು ಸಾಕಷ್ಟು ಆವಕಾಶಗಳಿವೆ. ವಕೀಲಿ ವೃತ್ತಿಯಲ್ಲಿ ಸಾಕಷ್ಟು ಅನುಭವವುಳ್ಳ ರಾಕೇಶ್ ಕಿಶೋರ್ ಅವರಿಗೆ ಇದು ತಿಳಿಯದ್ದೇನೂ ಅಲ್ಲ. ಗವಾಯಿಯ ಮೇಲೆ ಹಲ್ಲೆ ನಡೆಸಲು ಅವರ ಮುಂದೆ ಸ್ಪಷ್ಟ ಕಾರಣಗಳೂ ಇದ್ದಿರಲಿಲ್ಲ. ಹಲ್ಲೆ ನಡೆಸಿದ ಬಳಿಕ ‘ಸನಾತನ ಧರ್ಮಕ್ಕೆ ಜೈ’ ಎಂದಿರುವ ರಾಕೇಶ್ ಕಿಶೋರ್ಗೆ ಸಂವಿಧಾನಕ್ಕಿಂತ ಮನುಶಾಸ್ತ್ರದ ಮೇಲೆ ಹೆಚ್ಚು ನಂಬಿಕೆಯಿದೆ ಎನ್ನುವುದು ಸ್ಪಷ್ಟ. ನ್ಯಾಯಮೂರ್ತಿ ಗವಾಯಿ ಅವರು ದಲಿತ ಸಮುದಾಯದಿಂದ ಬಂದಿರುವವರು. ತನಗಿಂತ ಅತ್ಯುನ್ನತ ಸ್ಥಾನದಲ್ಲಿ ಕುಳಿತಿರುವ ಗವಾಯಿಯವರ ಬಗ್ಗೆ ಅಸೂಯೆಯಿಂದ ಅವರು ಈ ಕೃತ್ಯವನ್ನು ಎಸಗಿರುವ ಸಾಧ್ಯತೆಗಳಿವೆ. ಯಾವುದೋ ಆವೇಶದಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದೂ ಹೇಳುವಂತಿಲ್ಲ. ಯಾಕೆಂದರೆ, ಕೃತ್ಯ ಎಸಗಿದ ಬಳಿಕ ಮಾಧ್ಯಮಗಳಲ್ಲಿ ತಾನು ಎಸಗಿದ ಕೃತ್ಯವನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಈ ಸಮರ್ಥನೆ ಕೃತ್ಯ ಎಸಗಿದ್ದಕ್ಕಿಂತಲೂ ಗಂಭೀರವಾದುದು, ಕ್ಷಮೆ ಇಲ್ಲದ್ದು. ತಕ್ಷಣವೇ ಅವರ ಮೇಲೆ ಕ್ರಮ ತೆಗೆದುಕೊಳ್ಳುವುದು ಕಾನೂನು ವ್ಯವಸ್ಥೆಯ ಹೊಣೆಗಾರಿಕೆಯಾಗಿತ್ತು. ಆದರೆ ಅಂತಹ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಿಲ್ಲ. ಇದೀಗ ಚಪ್ಪಲಿ ಏಟು ತಿನ್ನುವ ಹೊತ್ತಿನಲ್ಲೂ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅದೇ ಸನಾತನ ಧರ್ಮದ ಪರವಾಗಿರುವ ಘೋಷಣೆಯನ್ನು ಪುನರಾವರ್ತಿಸಿದ್ದಾರೆ. ಈ ಮೂಲಕ ತನ್ನ ಕೃತ್ಯವನ್ನು ಅವರು ತನ್ನ ಧರ್ಮದ ತಲೆಗೆ ಕಟ್ಟಿದ್ದಾರೆ.
ತನಗೆ ನ್ಯಾಯ ಸಿಗಲಿಲ್ಲ ಎಂದು ಒಬ್ಬ ಶ್ರೀಸಾಮಾನ್ಯ ನ್ಯಾಯಾಧೀಶರತ್ತ ಚಪ್ಪಲಿ ತೂರಿದರೆ ಆತನ ಗತಿ ಏನಾಗಬಹುದು? ಕಾನೂನು ವ್ಯವಸ್ಥೆ ಆತನನ್ನು ಮನೆಗೆ ತೆರಳಲು ಅವಕಾಶ ನೀಡುತ್ತದೆಯೆ? ಹೀಗಿರುವಾಗ, ರಾಕೇಶ್ ಕಿಶೋರ್ ಅವರು ಚಪ್ಪಲಿ ತೂರಿದಾಗ ನಮ್ಮ ನ್ಯಾಯವ್ಯವಸ್ಥೆ ಯಾಕೆ ಮೌನವಿತ್ತು? ಈ ಪ್ರಶ್ನೆಗೆ ಈವರೆಗೆ ಯಾವ ನ್ಯಾಯಪಾಲಕರೂ ಉತ್ತರಿಸಿಲ್ಲ. ‘‘ನಾನು ಅವರನ್ನು ಕ್ಷಮಿಸಿದ್ದೇನೆ’’ ಎಂದು ಗವಾಯಿ ತಕ್ಷಣ ಹೇಳಿಕೆ ನೀಡಿದ್ದರು. ಹಾಗೆ ಕ್ಷಮಿಸುವ ಅಧಿಕಾರವನ್ನು ಗವಾಯಿಗೆ ನೀಡಿದವರು ಯಾರು? ಎಲ್ಲೋ ಸಾರ್ವಜನಿಕ ಸ್ಥಳದಲ್ಲಿ ವೈಯಕ್ತಿಕವಾಗಿ ರಾಕೇಶ್ ಕಿಶೋರ್ ಈ ದಾಳಿಯನ್ನು ಮಾಡಿದ್ದರೆ ಗವಾಯಿ ಅವರು ಕ್ಷಮಿಸಬಹುದಾಗಿತ್ತು. ಆದರೆ ಅವರು ಶೂ ಎಸೆದಿರುವುದು ಈ ದೇಶದ ಅತ್ಯುನ್ನತ ಪೀಠಕ್ಕೇ ಹೊರತು, ಒಬ್ಬ ವ್ಯಕ್ತಿಗಲ್ಲ. ಅವರು ಅವಮಾನಿಸಿದ್ದು ಸಂವಿಧಾನವನ್ನು. ಅವರ ವರ್ತನೆಯನ್ನು ಇತರರು ತಮಗೆ ಮಾದರಿಯಾಗಿ ತೆಗೆದುಕೊಂಡರೆ ನ್ಯಾಯಪೀಠದ ಘನತೆ ಏನಾಗಬೇಕು? ಘಟನೆಯ ಆನಂತರ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಕಿಶೋರ್ ಅವರ ವಕೀಲ ವೃತ್ತಿ ಪರವಾನಿಗೆಯನ್ನು ಅಮಾನತುಗೊಳಿಸಿತ್ತು. ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಶನ್ ಕೂಡ ಆತನ ಸದಸ್ಯತ್ವವನ್ನು ರದ್ದು ಮಾಡಿತ್ತು. ಆದರೆ ಇದಾವುದೂ ಆತ ಎಸಗಿದ ಕೃತ್ಯಕ್ಕೆ ಶಿಕ್ಷೆಯಲ್ಲ. ಅಟಾರ್ನಿ ಜನರಲ್ ನ್ಯಾಯಾಂಗ ನಿಂದನೆ ಕ್ರಮಕ್ಕೆ ಅನುಮತಿ ನೀಡಿದ್ದರೂ, ಆನಂತರ ಪೀಠವು ಪ್ರಕರಣವನ್ನು ಮುಂದುವರಿಸಲು ಆಸಕ್ತಿ ತೋರಿಸಲಿಲ್ಲ. ಗವಾಯಿಯವರು ಈ ಕೃತ್ಯವನ್ನು ಕ್ಷಮಿಸಿರಬಹುದು. ಆದರೆ ಸಂವಿಧಾನವನ್ನು ಗೌರವಿಸುವ ಯಾವೊಬ್ಬ ನಾಗರಿಕನೂ ರಾಕೇಶ್ ಕಿಶೋರ್ ಎಸಗಿದ ಕೃತ್ಯವನ್ನು ಕ್ಷಮಿಸಲಾರ.
ಇದೀಗ ಆತನ ಕೃತ್ಯವನ್ನೇ ಮಾದರಿಯಾಗಿಟ್ಟುಕೊಂಡು ಶ್ರೀಸಾಮಾನ್ಯನೊಬ್ಬ ಚಪ್ಪಲಿಯಿಂದ ದಾಳಿ ನಡೆಸಿದ್ದಾನೆ. ಇದನ್ನು ಯಾವ ರೀತಿಯಲ್ಲಿ ಖಂಡಿಸಬೇಕು ಎಂದು ತಿಳಿಯದೆ ವಕೀಲರೆಲ್ಲ ಒದ್ದಾಡುತ್ತಿದ್ದಾರೆ. ರಾಕೇಶ್ ಕಿಶೋರ್ಗೆ ಅಂದೇ ಶಿಕ್ಷೆ ವಿಧಿಸಿದ್ದರೆ ಇಂದು ದುಷ್ಕರ್ಮಿಯೊಬ್ಬ ಕಾನೂನನ್ನು ಕೈಗೆತ್ತಿಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲವೇನೋ. ರಾಕೇಶ್ ಕಿಶೋರ್ ಬಳಿಕ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡು ಮಾಧ್ಯಮಗಳಲ್ಲಿ ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದರು. ಕಾನೂನು ಓದಿದ ಒಬ್ಬ ವ್ಯಕ್ತಿಯೇ ಇಷ್ಟು ಕೇವಲವಾಗಿ ವರ್ತಿಸಿರುವಾಗ, ಶ್ರೀಸಾಮಾನ್ಯನೊಬ್ಬ ಅದಕ್ಕೆ ಪ್ರತಿಕ್ರಿಯಿಸಿ ಪ್ರತಿ ಹಲ್ಲೆ ನಡೆಸಿದರೆ ಆತನಿಗೆ ಏನೆಂದು ಶಿಕ್ಷೆ ವಿಧಿಸಬೇಕು? ಈಗ ದುಷ್ಕರ್ಮಿಯ ಮೇಲೆ ಪೊಲೀಸರು ಕ್ರಮ ತೆಗೆದುಕೊಂಡರೆ, ಈ ದೇಶದಲ್ಲಿ ಹಿರಿಯ ವಕೀಲನಿಗೊಂದು ನ್ಯಾಯ, ಶ್ರೀಸಾಮಾನ್ಯನಿಗೆ ಇನ್ನೊಂದು ನ್ಯಾಯವೆ? ಎಂದು ಜನರು ಕೇಳುವಂತಾಗುವುದಿಲ್ಲವೆ?
ವಕೀಲರು, ನ್ಯಾಯಾಧೀಶರು ಎಂದು ಕರೆಸಿಕೊಳ್ಳುವವರೇ ಸಂವಿಧಾನದ ಹಿರಿಮೆಯನ್ನು ಮರೆತು ಕಾನೂನನ್ನು ಕೈಗೆತ್ತಿಕೊಂಡರೆ ಅದು ಅವರಿಗೇ ತಿರುಗುಬಾಣವಾಗಬಹುದು. ರಾಕೇಶ್ ಕಿಶೋರ್ ಪ್ರಕರಣ ಈ ನಿಟ್ಟಿನಲ್ಲಿ ಎಲ್ಲರಿಗೂ ಒಂದು ಪಾಠವಾಗಬೇಕು. ಇನ್ನಾದರೂ, ಗವಾಯಿ ವಿರುದ್ಧ ಶೂ ಎಸೆದ ರಾಕೇಶ್ ಕಿಶೋರ್ ಮತ್ತು ಈ ಹಿರಿಯ ವಕೀಲರಿಗೆ ಚಪ್ಪಲಿಯಲ್ಲಿ ಥಳಿಸಿದ ದುಷ್ಕರ್ಮಿ ಇಬ್ಬರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭವಾಗಬೇಕು. ಇಂತಹ ಕೃತ್ಯಗಳು ಯಾವ ಕಾರಣಕ್ಕೂ ಪುನರಾವರ್ತಿಸುವಂತಾಗಬಾರದು.







