ಈ ‘ತಪ್ಪುಕಾಣಿಕೆ’ ಮಾದರಿ ನಮಗೆ ಮೇಲ್ಪಂಕ್ತಿ ಆಗಬಾರದು

Photo: x.com/AJEnglish
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ವಾಣಿಜ್ಯ ಅಪರಾಧಗಳ ‘ಡಿಕ್ರಿಮಿನಲೈಸೇಷನ್’ ಬಹುತೇಕ ಎಲ್ಲ ಉದಾರೀಕೃತ ವ್ಯವಸ್ಥೆಗಳ ಮೂಲ ತತ್ವಗಳಲ್ಲಿ ಒಂದು. ವ್ಯಾಪಾರವೇ ಧರ್ಮ ಆದಾಗ ಇದೆಲ್ಲ ಸಹಜ ಎಂಬುದು ಉದಾರೀಕೃತ ವ್ಯವಸ್ಥೆಗಳಲ್ಲಿ ಒಪ್ಪಿತ. 1998ರಲ್ಲಿ, ತಂಬಾಕು ಆರೋಗ್ಯಕ್ಕೆ ಹಾನಿಕರ ಎಂಬ ಸಾರ್ವಜನಿಕ ಕೂಗು ನ್ಯಾಯಾಲಯವನ್ನು ತಲುಪಿದಾಗ, ಅಮೆರಿಕದ ನಾಲ್ಕು ದೊಡ್ಡ ತಂಬಾಕು ಕಂಪೆನಿಗಳು 20,600 ಕೋಟಿ ಡಾಲರ್ ತಪ್ಪುಕಾಣಿಕೆಯನ್ನು ಅಲ್ಲಿನ ಸರಕಾರಕ್ಕೆ ಕಟ್ಟಿ, ತಮ್ಮ ವ್ಯಾಪಾರವನ್ನು ‘ನೈತಿಕ’ಗೊಳಿಸಿಕೊಂಡಿದ್ದವು.
ಈ ತಪ್ಪುಕಾಣಿಕೆಯೊಂದಿಗೆ ನೈತಿಕ ಹಾದಿ ತುಳಿಯುವ ಮಾದರಿ ಎಲ್ಲೆಲ್ಲಿ ಉದಾರೀಕರಣ ತಲುಪಿದೆಯೋ ಅಲ್ಲೆಲ್ಲ ತಲೆ ಎತ್ತುತ್ತಿದೆ. ಭಾರತದಲ್ಲೇ ರಾಷ್ಟ್ರೀಯ ಹಸಿರು ನ್ಯಾಯಪೀಠವು (ಎನ್ಜಿಟಿ) ದೇಶದಾದ್ಯಂತ ವಾತಾವರಣ ಕಲುಷಿತಗೊಳಿಸುತ್ತಿರುವ ಕೈಗಾರಿಕೆಗಳಿಗೆ ‘Polluter pays’ ತತ್ವದಡಿ ದಂಡ ವಿಧಿಸಿ, ಅದರ ಅಪರಾಧಕ್ಕೊಂದು ನೈತಿಕ ಮುಸುಕು ತೊಡಿಸುತ್ತಿದೆ. ಕರಾವಳಿಯಲ್ಲೇ ಅದಾನಿ ಉಷ್ಣವಿದ್ಯುತ್ ಸ್ಥಾವರಕ್ಕೆ, ಈ ಪ್ರದೇಶದ ಜನರ ಆರೋಗ್ಯಕ್ಕೆ ಹಾನಿ ಮಾಡಿದ್ದಕ್ಕಾಗಿ ಎನ್ಜಿಟಿಯು 2022ರಲ್ಲಿ 52 ಕೋಟಿ ರೂ.ಗಳ ತಪ್ಪುಕಾಣಿಕೆ ವಿಧಿಸಿತ್ತು.
ಹಾಲಿ ಸರಕಾರವು 2014ರಿಂದೀಚೆಗೆ ಜನವಿಶ್ವಾಸ ತಿದ್ದುಪಡಿ ಶಾಸನಗಳ ಮೂಲಕ ಇಂಚಿಂಚಾಗಿ ವಾಣಿಜ್ಯ ಅಪರಾಧಗಳನ್ನೆಲ್ಲ ‘ಡಿಕ್ರಿಮಿನಲೈಸ್’ ಮಾಡುತ್ತಾ ಬಂದಿದೆ. ಇಲ್ಲಿಯ ತನಕ ಜೈಲು ಶಿಕ್ಷೆಯ ಜೊತೆ ಆರ್ಥಿಕ ದಂಡನೆ ಇದ್ದ ಅಪರಾಧಗಳಿಗೆ ಈಗ ಕೇವಲ ಆರ್ಥಿಕ ದಂಡನೆ ಮಾತ್ರ ಶಿಕ್ಷೆ ಎಂದು ತಿದ್ದುಪಡಿ ಆಗಿದೆ. ಈ ತಿದ್ದುಪಡಿಗಳನ್ನು ಸಾರಾಸಗಟು ಮಾಡಿರುವುದರಿಂದ, ಪ್ರತಿಯೊಂದು ತಿದ್ದುಪಡಿಯ ಪರಿಣಾಮಗಳ ವಿಶ್ಲೇಷಣೆ ಇನ್ನೂ ಆಗಿಲ್ಲ. ಸ್ವತಃ ಪ್ರಧಾನಿಯವರೇ ತನ್ನ ಆರಂಭದ ದಿನಗಳಲ್ಲಿ, ದೇಶದೊಳಗೆ ಅನಗತ್ಯವಾದ ಕಾನೂನುಗಳು ಸಿಕ್ಕಾಪಟ್ಟೆ ಇವೆ. ದಿನಕ್ಕೊಂದು ಕಾನೂನನ್ನು ಕಿತ್ತೆಸೆಯುವ ಮೂಲಕ ‘Ease of living, Ease of doing business’ ಸಾಕ್ಷಾತ್ಕಾರಗೊಳಿಸುತ್ತೇನೆಂದು ಹೇಳಿಕೊಂಡಿದ್ದರು. ಆ ನಿಟ್ಟಿನಲ್ಲಿ ಈಗ ಸಾಕಷ್ಟು ಕೆಲಸಗಳಾಗಿವೆ. ಇಲ್ಲಿಯ ತನಕ 1,000ಕ್ಕೂ ಮಿಕ್ಕಿ ಅಪರಾಧಗಳನ್ನು ಡಿಕ್ರಿಮಿನಲೈಸ್ ಮಾಡಲಾಗಿದೆ.
ಈ ಚರ್ಚೆ ಈಗ ಯಾಕೆ ಪ್ರಸ್ತುತ ಎಂದರೆ, ಕಳೆದ ವಾರ, ಅಮೆರಿಕದಲ್ಲಿ ಬಿಗ್ಟೆಕ್ ಕಂಪೆನಿ ಮೆಟಾಕ್ಕೆ ಅಲ್ಲಿನ ನ್ಯಾಯಾಲಯವೊಂದು 1,800 ಕೋಟಿ ಡಾಲರ್ ತಪ್ಪುಕಾಣಿಕೆ ಕಟ್ಟಲು ಸೂಚಿಸಿದೆ. ಮೆಟಾ ನಡೆಸುವ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಪ್ಲಾಟ್ಫಾರ್ಮ್ಗಳು ಮಕ್ಕಳಿಗೆ ಅದರ ಚಟ ಹತ್ತಿಸುತ್ತಿವೆ ಎಂದು ಆರೋಪಿಸಿ, ಅಮೆರಿಕದ ಪ್ರಾಂತೀಯ ಸರಕಾರಗಳು ನ್ಯಾಯಾಲಯದ ಮೊರೆ ಹೋಗಿದ್ದವು. ಈ ಹಿನ್ನೆಲೆಯಲ್ಲಿ, ಮೆಟಾ ಈಗ ತನ್ನ ಪ್ಲಾಟ್ಫಾರ್ಮ್ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ತಪ್ಪುಕಾಣಿಕೆ ಕಟ್ಟಬೇಕಾಗಿದೆ.
ಮಧ್ಯರಾತ್ರಿಯ ಬಳಿಕ ಮಕ್ಕಳಿಗೆ ಪ್ಲಾಟ್ಫಾರ್ಮ್ ಪ್ರವೇಶ ನಿಷೇಧ, ಶಾಲಾ ಅವಧಿಯಲ್ಲಿ ಸೈಲೆನ್ಸ್ ನೊಟಿಫಿಕೇಷನ್, ಮಕ್ಕಳಿಗೆ ದಿನಕ್ಕೆ 2 ಗಂಟೆಗಳ ಬಳಕೆ ಮಿತಿ, ಅಪರಿಮಿತ ಫೀಡ್ಗಳಿಗೆ ನಿಯಂತ್ರಣ, ಮಕ್ಕಳಿಗೆ ಲೈಕ್ ಲೆಕ್ಕಾಚಾರ ಸಿಗದಂತೆ ಏರ್ಪಾಡು, ಅತಿರೇಕದ ಮೇಕ್ಅಪ್ ಫಿಲ್ಟರುಗಳ ನಿಯಂತ್ರಣ, ಸತತ 15 ನಿಮಿಷಕ್ಕಿಂತ ಹೆಚ್ಚು ಸಮಯ ಲಾಗಿನ್ ಆಗಿದ್ದರೆ ನೊಟಿಫಿಕೇಷನ್ ಇತ್ಯಾದಿ ನಿಯಂತ್ರಣಗಳನ್ನು ಮಕ್ಕಳ ಸಂದರ್ಭದಲ್ಲಿ ಹೇರಲು ಒಪ್ಪಿರುವ ಮೆಟಾ, ತಾನು ತೆರಬೇಕಾದ 1,800 ಕೋಟಿ ಡಾಲರುಗಳ ಪೈಕಿ 1,270 ಕೋಟಿ ಡಾಲರುಗಳನ್ನು ಎಳೆಯರ ಆನ್ಲೈನ್ ಸುರಕ್ಷೆ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಒದಗಿಸುವುದಾಗಿ ಹೇಳಿದೆ. ಆದರೆ ಉಳಿದ ಶೇ. 30 ಮೊತ್ತವನ್ನು ತಾನು ಪಾವತಿಸಬೇಕಾದರೆ, ಯುಟ್ಯೂಬ್, ಟಿಕ್ಟಾಕ್, ಸ್ನ್ಯಾಪ್ ಮತ್ತಿತರ ತನ್ನಂತಹದೇ ಪ್ಲಾಟ್ಫಾರ್ಮ್ ಹೊಂದಿರುವ ಕಂಪೆನಿಗಳು ಕೂಡ ಇಂತಹದೇ ಕ್ರಮಗಳನ್ನು ಕೈಗೊಳ್ಳಲು ಒಪ್ಪಬೇಕು ಎಂದು ವರಾತ ತೆಗೆದಿರುವುದಲ್ಲದೆ, ಅಮೆರಿಕದ ಪತ್ರಿಕೆಗಳಲ್ಲಿ ಆ ಕುರಿತು ಜಾಹೀರಾತು ನೀಡಿ, ಆ ಕಂಪೆನಿಗಳನ್ನು ಒತ್ತಾಯಿಸಿದೆ.
ಆರ್ಥಿಕ ಬಲಾಢ್ಯತೆಯಲ್ಲಿ ಸರಕಾರಗಳನ್ನೂ ಮೀರಿ ನಿಲ್ಲಬಲ್ಲ ಗಾತ್ರದ ಮೆಟಾದಂತಹ ಕಂಪೆನಿಗಳು ನ್ಯಾಯಾಂಗದ ತೀರ್ಪುಗಳ ಮೇಲೂ ಸವಾರಿ ಮಾಡಬಲ್ಲವು. ಒಟ್ಟು 1.47 ಲಕ್ಷ ಕೋಟಿ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿರುವ ಮೆಟಾದ ಒಂದು ತ್ರೈಮಾಸಿಕದ ಆದಾಯವೇ 6,080 ಕೋಟಿ ಡಾಲರ್ಗಳು. ಅದರಲ್ಲಿ 1,800 ಕೋಟಿ ಡಾಲರ್ ದಂಡ ಎಸೆದು ಬೀಸುವ ಕತ್ತಿ ತಪ್ಪಿಸಿಕೊಂಡರೆ, ತಮ್ಮ ಕೆಲಸ ಮುಂದುವರಿಸುವುದು ಅದಕ್ಕೆ ಸಲೀಸು. ಇತ್ತೀಚೆಗೆ, ಇನ್ನೊಂದು ಬಿಗ್ಟೆಕ್ ಕಂಪೆನಿ ಆಂಥ್ರೋಪಿಕ್ ಕೂಡ ತಾನು ಮಾಡಿದ ಬೌದ್ಧಿಕ ಹಕ್ಕು ಕಳ್ಳತನಕ್ಕೆ 1,500 ಕೋಟಿ ಡಾಲರ್ ತಪ್ಪುಕಾಣಿಕೆ ತೆತ್ತು, ನ್ಯಾಯಾಲಯದ ಹೊರಗೇ ಪ್ರಕರಣ ಇತ್ಯರ್ಥ ಮಾಡಿಕೊಂಡಿತ್ತು.
ಭಾರತದಲ್ಲಿ ಮೆಟಾಕ್ಕೆ ಇತ್ತೀಚೆಗೆ, ಅದರ ವಾಟ್ಸ್ಆ್ಯಪ್ ಪ್ಲಾಟ್ಫಾರ್ಮ್ನಲ್ಲಿ ಡೇಟಾ ಸಂಗ್ರಹ ವಿಧಾನಕ್ಕೆ ಸಂಬಂಧಿಸಿದ ಪ್ರಕರಣ ವೊಂದರಲ್ಲಿ CCIಯು 213.14 ಕೋಟಿ ರೂ. ದಂಡ ವಿಧಿಸಿತ್ತು. ಭಾರತದಲ್ಲಿ ಇನ್ನೂ ಎಳೆಯರ ಸಾಮಾಜಿಕ ಮಾಧ್ಯಮ ಬಳಕೆಯ ಸೂಕ್ಷ್ಮಗಳತ್ತ ಗಮನ ಸಾಕಷ್ಟು ಹರಿದಿಲ್ಲ. ಅಕಸ್ಮಾತ್ ಹರಿದರೂ ಇಲ್ಲಿನ ಕಾನೂನು ವಿಧಿಸುವ ಒಂದೆರಡು ಕೋಟಿ ರೂ. ದಂಡಗಳೆಲ್ಲ ಈ ಬಿಗ್ಟೆಕ್ಗಳಿಗೆ ಕಾಲಕಸ. ತಪ್ಪುಕಾಣಿಕೆ ಕಟ್ಟಿ ತಪ್ಪು ಮಾಡುವುದನ್ನು ಮುಂದುವರಿಸುವ, ಅಡ್ಡ ಹಾದಿಯಲ್ಲಿ ಲಾಭಗಳಿಸುವ ಮತ್ತು ತಾವು ವ್ಯವಸ್ಥೆಗಿಂತ ದೊಡ್ಡವರೆಂದು ನಂಬಿರುವ ಇಂತಹ ಕಂಪೆನಿಗಳ ಅಸಡ್ಡಾಳತನಕ್ಕೆ ದೀರ್ಘಕಾಲಿಕ ನೆಲೆಯಲ್ಲಿ ಮದ್ದು ಅರೆಯದಿದ್ದರೆ, ಇವು ಸರಕಾರಗಳನ್ನೂ ನುಂಗಿ ನೊಣೆಯುವುದಕ್ಕೆ ಹೇಸಲಾರವು. ಭಾರತ ಸರಕಾರಕ್ಕಿದು ಎಚ್ಚರಿಕೆಯ ಗಂಟೆಯಾಗಲಿ.






