ಹುಲಿ-ದನ ಆಟ!

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಮೃತಪಟ್ಟ 5 ಹುಲಿಗಳ ಅಂತ್ಯಕ್ರಿಯೆ ಅದೇ ಸ್ಥಳದಲ್ಲಿ ನಡೆಸಲಾಯಿತು.
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ 5 ಹುಲಿಗಳು ಒಟ್ಟಿಗೆ ಮೃತಪಟ್ಟಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಒಂದು ತಾಯಿ ಹುಲಿ ಮತ್ತು ಅದರ ನಾಲ್ಕು ಮರಿಗಳು ಮೃತಪಟ್ಟಿದ್ದು, ಪ್ರಾಥಮಿಕ ತನಿಖೆಯಲ್ಲಿ ವಿಷ ಪ್ರಾಶನಗೊಂಡ ದನವನ್ನು ತಿಂದ ಪರಿಣಾಮವಾಗಿ ಹುಲಿಗಳು ಸತ್ತಿರಬಹುದು ಎಂದು ಅನುಮಾನಿಸಲಾಗಿದೆ. ಹುಲಿಗಳಿಗಾಗಿ ರಾಜ್ಯವು ದೇಶದಲ್ಲೇ ಎರಡನೇ ಸ್ಥಾನದಲ್ಲಿ ಗುರುತಿಸಲ್ಪಡುತ್ತಾ ಬಂದಿದೆ. ಇದೀಗ ಐದು ಹುಲಿಗಳ ಮಾರಣ ಹೋಮ ರಾಜ್ಯಕ್ಕೆ ಕಳಂಕವನ್ನು ತಂದಿದೆ. ಘಟನೆ ಬಹಿರಂಗವಾದ ಬೆನ್ನಿಗೇ ಸಚಿವ ಈಶ್ವರ ಖಂಡ್ರೆ ಅವರು ಹಿರಿಯ ಅಧಿಕಾರಿಗಳ ತಂಡದ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಿದ್ದಾರೆ. ‘‘ತನಿಖೆಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿದ್ದು, ಖುದ್ದು ಸ್ಥಳ ತನಿಖೆ ಕೈಗೊಂಡು ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸಲು ಆದೇಶ ನೀಡಿದ್ದೇನೆ. ಮೂರು ದಿನಗಳ ಒಳಗಾಗಿ ವರದಿ ಸಲ್ಲಿಕೆಯಾಗಬೇಕು’’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಈಗಾಗಲೇ ಕೆಲವು ದನಗಾಹಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಅಂತಿಮವಾಗಿ ಈ ದನಗಾಹಿಗಳನ್ನೇ ತನಿಖೆಯ ಹೆಸರಿನಲ್ಲಿ ಹುಲಿಬಾಯಿಗೆ ಕೊಡುವ ಸಾಧ್ಯತೆಗಳಿವೆ. ಕೆಲವು ದನಗಾಹಿಗಳು ವಿಷಪ್ರಾಶಣ ಮಾಡಿರುವುದು ಹುಲಿಯ ಸಾವಿಗೆ ಕಾರಣವಾಗಿರಬಹುದು, ಇದೇ ಸಂದರ್ಭದಲ್ಲಿ ಅಂತಹ ಕೃತ್ಯಕ್ಕೆ ಅವರನ್ನು ಪ್ರೇರೇಪಿಸಿದವರು ಯಾರು? ಇದರಲ್ಲಿ ಅರಣ್ಯ ಇಲಾಖೆಯ ಪಾತ್ರ ಎಷ್ಟು ಎನ್ನುವುದು ತನಿಖೆಗೊಳಗಾದಾಗ ಮಾತ್ರ ಇಂತಹ ಅನಾಹುತಗಳು ಇನ್ನೊಮ್ಮೆ ಘಟಿಸದೇ ಇರಲು ಸಾಧ್ಯ.
2022ರ ಕೇಂದ್ರ ಸರಕಾರದ ಹುಲಿಗಣತಿ ವರದಿ ಬಿಡುಗಡೆಯಾದಾಗ ರಾಜ್ಯದ ಒಟ್ಟು ಹುಲಿಗಳ ಸಂಖ್ಯೆ 563 ಇತ್ತು. ಮಧ್ಯ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕವು ಹುಲಿಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿತ್ತು. ಅದಕ್ಕೂ ಹಿಂದೆ 2018ರ ವರದಿಯಲ್ಲೂ ಕೂಡ ಕರ್ನಾಟಕ ಎರಡನೇ ಸ್ಥಾನವನ್ನು ಕಾದುಕೊಂಡಿತ್ತು. 2022ರ ಗಣತಿಯಲ್ಲಿ ರಾಜ್ಯದಲ್ಲಿ ಈ ಹಿಂದಿಗಿಂತ 39 ಹುಲಿಗಳು ಹೆಚ್ಚಾಗಿದ್ದವು. ಮಧ್ಯ ಪ್ರದೇಶ 785 ಹುಲಿಗಳನ್ನು ಹೊಂದಿದ್ದರೆ, ಕರ್ನಾಟಕ 563, ಉತ್ತರಾ ಖಂಡ 560 ಮತ್ತು ಮಹಾರಾಷ್ಟ್ರ 444 ಹುಲಿಗಳನ್ನು ಹೊಂದಿತ್ತು. ಇಡೀ ದೇಶದಲ್ಲೇ ಹುಲಿಗಳ ಸಂಖ್ಯೆಯು ಹೆಚ್ಚಳವಾಗಿರುವುದನ್ನು 2022ರ ಗಣತಿಯು ಹೇಳುತ್ತಿತ್ತು. ಇದೇ ಸಂದರ್ಭದಲ್ಲಿ ದೇಶದ ಹುಲಿ ಅಭಯಾರಣ್ಯಗಳಲ್ಲಿ ನಡೆದ ವಾರ್ಷಿಕ ಮೇಲ್ವಿಚಾರಣಾ ಸಮೀಕ್ಷೆಯ ಭಾಗವಾಗಿ ರಾಜ್ಯದ ನಾಗರಹೊಳೆೆ, ಬಂಡೀಪುರ, ಭದ್ರಾ, ಬಿಳಿಗಿರಿ ಮತ್ತು ಕಾಳಿ ಅಭಯಾರಣ್ಯದಲ್ಲಿ 2023ರ ನವೆಂಬರ್ ಮತ್ತು 2024ರ ಫೆಬ್ರವರಿಯ ಮಧ್ಯೆ ನಡೆಸಿದ ಸಮೀಕ್ಷೆಯಲ್ಲಿ ಐದು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಟ್ಟು 393 ಹುಲಿಗಳಿರುವುದು ದಾಖಲಾಗಿತ್ತು. ಕೆಲವು ಹುಲಿಗಳು ಸಂರಕ್ಷಿತ ಪ್ರದೇಶಗಳಿಂದ ಇತರ ಹುಲಿ ವಾಸಸ್ಥಾನ ಪ್ರದೇಶಗಳತ್ತ ವಲಸೆ ಹೋಗುತ್ತಿರುವುದನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಹುಲಿಗಳ ಸಂರಕ್ಷಣೆಗೆ, ಅವುಗಳ ಕಣ್ಗಾವಲಿಗೆ ಸರಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾ ಬರುತ್ತಿದೆ. ಕಾಡಿನ ಸಮತೋಲನ, ಜೀವವೈವಿಧ್ಯಗಳ ರಕ್ಷಣೆಯ ಹಿನ್ನೆಲೆಯಲ್ಲಿ ಹುಲಿಯನ್ನು ರಕ್ಷಿಸುವುದು ಅತ್ಯಗತ್ಯ ಎಂದು ಪರಿಸರತಜ್ಞರು ಅಭಿಪ್ರಾಯ ಪಡುತ್ತಾರೆ. ಈ ಹಿನ್ನೆಲೆಯಲ್ಲಿ ಐದು ಹುಲಿಗಳು ಏಕಾಏಕಿ ಒಟ್ಟಿಗೆ ಕೊಲ್ಲಲ್ಪಡುವುದು ಮಹಾಪರಾಧವಾಗಿದೆ. ಈ ನಿಟ್ಟಿನಲ್ಲಿ ತನಿಖೆಯಾಗಿ ಅಪರಾಧಿಗಳಿಗೆ ಶಿಕ್ಷೆಯಾಗುವುದು ಮಾತ್ರವಲ್ಲ, ಇಂತಹ ಕೃತ್ಯ ಯಾವ ಕಾರಣಕ್ಕೂ ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯವಾಗಿದೆ.
ಐದು ವರ್ಷಗಳ ಹಿಂದೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಅನಾನಸ್ ಹಣ್ಣಿನಲ್ಲಿ ಪಟಾಕಿ ಇಟ್ಟು ತಿನ್ನಲು ನೀಡಿ ಗರ್ಭಿಣಿ ಆನೆಯೊಂದನ್ನು ಹತ್ಯೆ ಮಾಡಿರುವುದು ದೇಶಾದ್ಯಂತ ಸುದ್ದಿಯಾಗಿತ್ತು ಮಾತ್ರವಲ್ಲ ಈ ಕೃತ್ಯಕ್ಕಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಬಾಲಿವುಡ್ ನಟಿಯರಾದ ಅನುಷ್ಕಾ ಶರ್ಮಾ, ಆಲಿಯಾ ಭಟ್, ಶ್ರದ್ಧಾ ಕಪೂರ್ ಮೊದಲಾದವರು ಈ ಕೃತ್ಯಕ್ಕೆ ನೊಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಕರ್ನಾಟಕದಲ್ಲಿ ನಡೆದಿರುವ ಘಟನೆ ಅದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಅಲ್ಲಿ ಸತ್ತಿರುವುದು ಒಂದು ಗರ್ಭಿಣಿ ಆನೆಯಾದರೆ, ಇಲ್ಲಿ ತನ್ನ ನಾಲ್ಕು ಮರಿಗಳ ಜೊತೆಗೆ ತಾಯಿ ಹುಲಿ ಸತ್ತಿದೆ. ಬಹುಶಃ ಈ ಘಟನೆ ಕೇರಳದಲ್ಲಿ ನಡೆದಿದ್ದರೆ ತಕ್ಷಣ ಪ್ರಧಾನಿ ಮೋದಿಯವರೂ ತಮ್ಮ ಖಂಡನೆ ವ್ಯಕ್ತಪಡಿಸುತ್ತಿದ್ದರೋ ಏನೋ.
ನಾಡಿನಲ್ಲಿ ದನಗಳ ಹೆಸರಿನಲ್ಲಿ ಮನುಷ್ಯರನ್ನೇ ಕೊಲ್ಲುವ ದುಷ್ಕರ್ಮಿಗಳನ್ನು ವೀರರು, ಶೂರರು ಎಂದು ಬಣ್ಣಿಸುವ ವಾತಾವರಣವಿರುವಾಗ, ಹುಲಿಗಳಿಗೆ ವಿಷಪ್ರಾಶಣ ಮಾಡಿದ ದನಗಾಹಿಗಳನ್ನು ಗಲ್ಲಿಗೇರಿಸುವ ಯಾವ ನೈತಿಕತೆಯೂ ಇಂದು ನಾಗರಿಕ ಸಮಾಜಕ್ಕೆ ಇಲ್ಲ. ಯಾಕೆಂದರೆ, ಕಾಡು ಮತ್ತು ನಾಡಿಗೆ ನಡೆಯುತ್ತಿರುವ ಪರೋಕ್ಷ ಸಂಘರ್ಷದ ಇನ್ನೊಂದು ಮುಖವನ್ನು ಇದರಲ್ಲಿ ನಾವು ಕಾಣಬಹುದಾಗಿದೆ.ಹುಲಿಗಳ ಸಾವಿನ ತನಿಖೆಯಲ್ಲಿ ಮೊದಲು ಬಲಿಪಶುಗಳಾಗುವುದು ತಳಹಂತದ ಸಿಬ್ಬಂದಿ. ‘‘ಕಾಡಿನ ಕಾವಲುಗಾರರು ಏನು ಮಾಡುತ್ತಿದ್ದರು?’’ ಎನ್ನುವ ಪ್ರಶ್ನೆ ಏಳುತ್ತದೆ. ಅವರು ಸರಿಯಾಗಿ ಕರ್ತವ್ಯ ನಿರ್ವಹಿಸದೇ ಇದ್ದ ಕಾರಣದಿಂದ ದುರಂತ ಸಂಭವಿಸಿದೆ ಎಂದು ಷರಾ ಬರೆಯುವುದು ತನಿಖಾ ತಂಡಕ್ಕೆ ಕಷ್ಟವಾಗುವುದಿಲ್ಲ. ಆದರೆ ಒಂದು ಮೂಲದ ಪ್ರಕಾರ, ಅರಣ್ಯ ಇಲಾಖೆಯ ಕೆಳಹಂತದ ನೌಕರರಿಗೆ ಹಲವು ತಿಂಗಳ ವೇತನ ಪಾವತಿಯಾಗಿಲ್ಲ. ಇವರು ಮೊದಲೇ ಕೆಲಸ ಮಾಡುವುದು ಸಣ್ಣ ಮೊತ್ತದ ವೇತನಕ್ಕಾಗಿ. ಅದೂ ಕೂಡ ಸಿಕ್ಕಿಲ್ಲ ಎಂದರೆ ಕೆಲಸ ಮಾಡುವುದು ಹೇಗೆ? ಇಲ್ಲಿರುವ ವಾಚರ್ಸ್ ಗುತ್ತಿಗೆಯಾಧಾರದಲ್ಲಿ ನೇಮಕವಾದವರು. ಗುತ್ತಿಗೆದಾರರಿಗೆ ನೀಡಬೇಕಾದ ದೊಡ್ಡ ಮೊತ್ತದ ಹಣವನ್ನು ಅರಣ್ಯ ಇಲಾಖೆ ಬಾಕಿ ಉಳಿಸಿದೆ ಎನ್ನುವ ಆರೋಪಗಳಿವೆ. ತಳಸ್ತರದ ಸಿಬ್ಬಂದಿಗೆ ವೇತನ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸದೇ ಇದ್ದುದರಿಂದ ಭಾರೀ ನಿರ್ಲಕ್ಷ್ಯ ನಡೆದಿರುವ ಸಾಧ್ಯತೆಗಳಿವೆ. ಸಂದರ್ಭದ ಲಾಭವನ್ನು ದುಷ್ಕರ್ಮಿಗಳು ಪಡೆದುಕೊಂಡಿದ್ದಾರೆ. ಮಲೈ ಮಹದೇಶ್ವರ ಕಾಡಂಚಿನಲ್ಲಿರುವ ನೂರಾರು ಹಳ್ಳಿಗಳ ಜನರು ದೊಡ್ಡ ಸಂಖ್ಯೆಯಲ್ಲಿ ದನಗಳನ್ನು ಸಾಕುತ್ತಾರೆ ಮತ್ತು ಅರಣ್ಯ ಪ್ರದೇಶದಲ್ಲಿ ಇವುಗಳನ್ನು ಮೇಯಲು ಬಿಡುತ್ತಾರೆ. ಈ ಸಂಬಂಧ ಅರಣ್ಯ ಇಲಾಖೆ ಮತ್ತು ಹಳ್ಳಿಗಳ ಜನರ ನಡುವೆ ತಿಕ್ಕಾಟಗಳು ನಡೆಯುತ್ತಲೇ ಇರುತ್ತವೆ. ಇಲ್ಲಿನ ದನಗಾಹಿಗಳು ಹುಲಿಗಳಿಗಿಂತ ಹುಲಿಗಳ ಹೆಸರಿನಲ್ಲಿ ಕೇಸು ದಾಖಲಿಸುವ ಅರಣ್ಯ ಕಾನೂನುಗಳಿಗೆ ಹೆದರುತ್ತಾರೆ. ಈ ಸಂಘರ್ಷ ಅನೇಕ ಸಂದರ್ಭಗಳಲ್ಲಿ ಬೇರೆ ಬೇರೆ ಅನಾಹುತಗಳಿಗೆ ಕಾರಣವಾಗುತ್ತದೆ. ಹುಲಿ ಸಾವಿಗೆ ಈ ಸಂಘರ್ಷವೂ ಕಾರಣವಾಗಿರಬಹುದು ಎಂದು ಅನುಮಾನ ಪಡಲಾಗುತ್ತದೆ. ದನಗಳ ಸೆಗಣಿ, ಹಾಲು ಇತ್ಯಾದಿಗಳನ್ನೇ ಬದುಕಿನ ಆಧಾರವಾಗಿ ಮಾಡಿಕೊಂಡಿರುವ ಕಾಡಂಚಿನ ಜನರನ್ನು ನೇರವಾಗಿ ಆರೋಪಿಗಳು ಎನ್ನುವಂತಿಲ್ಲ. ದನಗಳ ಹೆಸರಿನಲ್ಲಿ ನಾಡಿನೊಳಗೆ ಕೊಲೆ, ದರೋಡೆಗಳನ್ನು ಮಾಡಿ ಜೀವನ ಮಾಡುವ ಸಂಘಪರಿವಾರ ದುಷ್ಕರ್ಮಿಗಳಂತೆ ಇವರು ಅಪಾಯಕಾರಿಗಳಲ್ಲ. ಹುಲಿಗಳ ಮಹತ್ವದ ಬಗ್ಗೆ ಇವರಿಗೆ ಅರಿವು ಮೂಡಿಸುವಲ್ಲೂ ಅರಣ್ಯ ಇಲಾಖೆ ಎಡವಿರಬಹುದು. ಈ ನಿಟ್ಟಿನಲ್ಲಿ ತನಿಖೆ ಹುಲಿಯ ಸಾವಿನ ಹೊಣೆಯನ್ನು ಕಾಡಂಚಿನ ಹಳ್ಳಿಗಳಲ್ಲಿರುವ ದನಗಾಹಿಗಳು ಮತ್ತು ಅರಣ್ಯ ಇಲಾಖೆಯ ತಳಸ್ತರದ ಸಿಬ್ಬಂದಿಯ ತಲೆಗೆ ಕಟ್ಟಿ ಮುಗಿಯುವಂತಾಗಬಾರದು. ಅರಣ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುವ ಕಾವಲುಗಾರರ ವೇತನಗಳನ್ನು ಅರಣ್ಯ ಇಲಾಖೆ ಯಾಕೆ ಹಿಡಿದಿಟ್ಟುಕೊಂಡಿದೆ? ಎನ್ನುವುದು ಕೂಡ ಮುನ್ನೆಲೆಗೆ ಬರಬೇಕು. ಇದೇ ಸಂದರ್ಭದಲ್ಲಿ ಕಾಡಂಚಿನಲ್ಲಿರುವ ದನಗಾಹಿಗಳು, ಅವರ ಬದುಕು ಮತ್ತು ಕಾಡುಗಳ ನಡುವೆ ಸಮನ್ವಯವನ್ನು ಕಾಪಾಡುವ ಕೆಲಸ ಅರಣ್ಯಾಧಿಕಾರಿಗಳಿಂದ ನಡೆಯಬೇಕು. ತನಿಖೆಯ ಹೆಸರಿನಲ್ಲಿ ಸತ್ತು ಹೋದ ಹುಲಿಗಳ ಬಾಯಿಗೆ ಅಮಾಯಕರನ್ನು ಬಲಿಕೊಡುವ ಪ್ರಯತ್ನ ಯಾವತ್ತೂ ನಡೆಯಬಾರದು.