ಜಗತ್ತನ್ನು ಅಣ್ವಸ್ತ್ರ ತೆಕ್ಕೆಗೆ ತಳ್ಳಿದ ಟ್ರಂಪ್ ಹೇಳಿಕೆ

PC: x.com/NoLieWithBTC
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಇತ್ತೀಚಿನ ದಿನಗಳಲ್ಲಿ ಜಗತ್ತು ತಾಪಮಾನ ಹೆಚ್ಚಳದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುತ್ತಿದೆ. ತಾಪಮಾನ ಹೆಚ್ಚಳಕ್ಕೆ ಅಮೆರಿಕದಂತಹ ಶ್ರೀಮಂತ ದೇಶಗಳ ಕೊಡುಗೆಯನ್ನು ಯಾರೂ ಪ್ರಶ್ನೆ ಮಾಡುತ್ತಿಲ್ಲ. ತಾಪಮಾನ ಹೆಚ್ಚಳವನ್ನು ತಡೆಯುವ ಸಂಪೂರ್ಣ ಹೊಣೆಗಾರಿಕೆ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ತಲೆಗೆ ಕಟ್ಟಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಾಚಾಳಿತನವೇ ವಿಶ್ವದ ತಾಪಮಾನದ ಮೇಲೆ ತೀವ್ರ ಪರಿಣಾಮಗಳನ್ನು ಬೀರತೊಡಗಿವೆ. ಅಧಿಕಾರಕ್ಕೆ ಬಂದ ದಿನದಿಂದ ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು, ನೀಡುತ್ತಿರುವ ಹೇಳಿಕೆಗಳು ಜಗತ್ತನ್ನು ಶೀತಲ ಯುದ್ಧದೆಡೆಗೆ ತಳ್ಳಿದೆ. ಇಸ್ರೇಲನ್ನು ಮುಂದಿಟ್ಟುಕೊಂಡು ಮಧ್ಯಪ್ರಾಚ್ಯದ ಮೇಲೆ ನಡೆಸಿದ ದಾಳಿ, ಇರಾನ್ ವಿರುದ್ಧ ಸುರಿಸಿದ ಬಾಂಬ್ಗಳು ಜಗತ್ತಿಗೆ ಮೂರನೇ ಮಹಾಯುದ್ಧದ ಸೂಚನೆಗಳನ್ನು ನೀಡಿದ್ದವು. ಸುಂಕ ಹೇರಿಕೆಯ ಮೂಲಕ, ಜಗತ್ತಿನ ಇತರ ದೇಶಗಳ ಮೇಲೆ ನಿಯಂತ್ರಣವನ್ನು ಹೊಂದಲು ಅಮೆರಿಕ ನಡೆಸುತ್ತಿರುವ ಪ್ರಯತ್ನವೂ ಪರೋಕ್ಷ ಯುದ್ಧವೊಂದಕ್ಕೆ ವೇದಿಕೆ ನಿರ್ಮಾಣ ಮಾಡಿದೆ. ಭಾರತವನ್ನು ಅದು ನೇರವಾಗಿಯೇ ಬ್ಲ್ಯಾಕ್ ಮೇಲ್ ಮಾಡುತ್ತಾ, ರಶ್ಯದ ತೈಲ ಖರೀದಿ ಮಾಡದಂತೆ ಒತ್ತಡಗಳನ್ನು ಹಾಕುತ್ತಿದೆ. ಟ್ರಂಪ್ನ ಈ ಎಲ್ಲ ನಿರ್ಧಾರಗಳು ವಿಶ್ವವನ್ನು ಯಾವ ಕ್ಷಣದಲ್ಲಾದರೂ ಆಪತ್ತಿಗೆ ತಳ್ಳಬಹುದಾಗಿದ್ದು, ಇದರ ವಿರುದ್ಧ ಅಮೆರಿಕದಲ್ಲೇ ತೀವ್ರ ಆಕ್ಷೇಪಗಳು ಕೇಳಿ ಬರುತ್ತಿವೆ.
ಇದೀಗ ಟ್ರಂಪ್ ಇನ್ನೊಂದು ಬಾಂಬ್ ಸ್ಫೋಟಿಸಿದ್ದು, ವಿಶ್ವದ ‘ಯುದ್ಧ ಕಾರ್ಮೋಡದ ತಾಪಮಾನವನ್ನು’ ಇನ್ನಷ್ಟು ಹೆಚ್ಚಿಸಿದ್ದಾರೆ. ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ, ‘‘ಭಾರತದ ಶತ್ರು ದೇಶವಾಗಿರುವ ಪಾಕಿಸ್ತಾನ ಸದ್ದಿಲ್ಲದೆ ಅಣ್ವಸ್ತ್ರ ಪರೀಕ್ಷೆ ನಡೆಸುತ್ತಿದೆ’’ ಎಂದು ಹೇಳಿರುವ ಅವರು, ‘‘ರಶ್ಯ, ಚೀನಾ ಮತ್ತಿತರ ದೇಶಗಳು ಗುಟ್ಟಾಗಿ ಅಣ್ವಸ್ತ್ರ ಪರೀಕ್ಷೆ ನಡೆಸುತ್ತಲೇ ಇವೆ. ಅವರು ಗುಟ್ಟಾಗಿ ನಡೆಸಿದರೆ ನಾವು ಬಹಿರಂಗವಾಗಿ ಹೇಳಿಯೇ ನಡೆಸುತ್ತೇವೆ’’ ಎಂದು ಜಗತ್ತಿಗೆ ಸವಾಲು ಹಾಕಿದ್ದಾರೆ. ಅಣ್ವಸ್ತ್ರಗಳ ಪರೀಕ್ಷೆ ನಡೆಸಲು ರಕ್ಷಣಾ ಇಲಾಖೆ ನೀಡಿದ ಇತ್ತೀಚಿನ ಆದೇಶವನ್ನು ಅವರು ಈ ಸಂದರ್ಭದಲ್ಲಿ ಸಮರ್ಥಿಸಿಕೊಂಡರು. ‘‘ರಶ್ಯ, ಚೀನಾ ಸೇರಿ ಹಲವು ದೇಶಗಳು ಗೌಪ್ಯವಾಗಿ ಅಣ್ವಸ್ತ್ರ ಪರೀಕ್ಷೆ ನಡೆಸುತ್ತಿವೆ. ಪಾಕಿಸ್ತಾನ, ಉತ್ತರ ಕೊರಿಯಾದಂತಹ ಪುಟ್ಟ ದೇಶಗಳು ಅಣ್ವಸ್ತ್ರ ಪರೀಕ್ಷೆ ನಡೆಸುತ್ತಿರುವಾಗ ಅಮೆರಿಕ ಏಕೆ ನಡೆಸಬಾರದು? ದೇಶದ ಭದ್ರತೆ, ಇಂಧನ ರಕ್ಷಣೆಗೆ ಅಗತ್ಯವಿರುವ ಅಣ್ವಸ್ತ್ರಗಳ ಪರೀಕ್ಷೆಯನ್ನು ನಡೆಸಲು ಅಮೆರಿಕ ಸಹ ಮುಂದಾಗಿದೆ’’ ಎಂದು ಅವರು ಹೇಳಿಕೊಂಡಿದ್ದಾರೆ.‘‘ಅಮೆರಿಕ ವಿಶ್ವದಲ್ಲೇ ಹೆಚ್ಚು ಅಣ್ವಸ್ತ್ರಗಳನ್ನು ಹೊಂದಿದ್ದು, ನಮ್ಮಲ್ಲಿರುವ ಅಣುಬಾಂಬ್ಗಳನ್ನು ಬಳಸಿ ಇಡೀ ಜಗತ್ತನ್ನು 150 ಬಾರಿ ಸ್ಫೋಟಿಸಬಹುದು’’ ಎಂದು ಯಾವುದೇ ಕೀಳರಿಮೆ ಇಲ್ಲದೆಯೇ ಅವರು ಕೊಚ್ಚಿಕೊಂಡಿದ್ದಾರೆ. ಈ ಮೂಲಕ ನಿಜಕ್ಕೂ ಜಗತ್ತಿನ ಶಾಂತಿಗೆ ಅತ್ಯಂತ ಅಪಾಯಕಾರಿ ದೇಶ ಯಾವುದು ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಟ್ರಂಪ್ ಹೇಳಿಕೆ ಭಯೋತ್ಪಾದನೆಗೆ ಸರಿಗಟ್ಟುವಂತಹದ್ದಾಗಿದೆ. ಒಂದೆಡೆ ತಾನು ಪರಮಾಣು ಪರೀಕ್ಷೆಗಳನ್ನು ಮಾಡುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಲೇ, ಇರಾನ್ನಂತಹ ದೇಶಗಳು ಪರಮಾಣು ಶಕ್ತಿಯನ್ನು ಹೊಂದಬಾರದು ಎಂದು ಆದೇಶ ನೀಡುವ ಅಮೆರಿಕದ ಸೋಗಲಾಡಿತನ ಈ ಮೂಲಕ ಬಟಾಬಯಲಾಗಿದೆ.
ಪರಮಾಣು ನಿಶ್ಯಸ್ತ್ರೀಕರಣದ ಬಗ್ಗೆ ಜಗತ್ತು ಬೇಡಿಕೆ ಮಂಡಿಸುತ್ತಲೇ ಇದೆ. ಕನಿಷ್ಠ ಹೊಸ ಅಣ್ವಸ್ತ್ರ ಪರೀಕ್ಷೆಯನ್ನು ಮಾಡುವುದನ್ನಾದರೂ ನಿಲ್ಲಿಸಬೇಕು ಎನ್ನುವ ಕಾರಣಕ್ಕಾಗಿ ಸಮಗ್ರ ಪರಮಾಣು ಪರೀಕ್ಷಾ ನಿಷೇಧ ಒಪ್ಪಂದ (ಸಿಟಿಬಿಟಿ)ವನ್ನು 1996ರಲ್ಲಿ ಅಂಗೀಕರಿಸಲಾಯಿತು. 187 ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ. ತಮ್ಮ ರಕ್ಷಣಾ ಹಿತಾಸಕ್ತಿಯ ಕಾರಣವನ್ನು ಮುಂದೊಡ್ಡಿ ಭಾರತ, ಪಾಕಿಸ್ತಾನ, ಉ.ಕೊರಿಯಾ ದೇಶಗಳು ಇದಕ್ಕೆ ಸಹಿ ಹಾಕಿಲ್ಲ. ಅಮೆರಿಕ, ಚೀನಾ, ಇರಾನ್, ಇಸ್ರೇಲ್, ಈಜಿಪ್ಟ್ ಸಹಿ ಹಾಕಿದರೂ ಒಪ್ಪಂದವನ್ನು ಅನುಮೋದಿಸಿಲ್ಲ. ಈ ಕಾರಣದಿಂದ ಸಿಟಿಬಿಟಿ ಒಪ್ಪಂದ ಅಣ್ವಸ್ತ್ರ ಹೊಂದಿದ ದೇಶಗಳ ಹಿಪಾಕ್ರಸಿಗೆ ಹಿಡಿದ ಕನ್ನಡಿಯಂತೆ ಅಸ್ತಿತ್ವದಲ್ಲಿದೆ. ಒಂದೆಡೆ ಅಣ್ವಸ್ತ್ರ ನಿಶ್ಯಸ್ತ್ರೀಕರಣದ ಬಗ್ಗೆ ಮಾತನಾಡುತ್ತಲೇ ರಶ್ಯ, ಚೀನಾ, ಅಮೆರಿಕ ಒಳಗಿಂದೊಳಗೆ ಪರೀಕ್ಷೆ ನಡೆಸುತ್ತಲೇ ಇವೆ. ಇದೀಗ ಅಮೆರಿಕ ಬಹಿರಂಗವಾಗಿಯೇ ಅಣ್ವಸ್ತ್ರ ಪರೀಕ್ಷೆಯ ಬಗ್ಗೆ ಹೇಳಿಕೆ ನೀಡಿ, ಜಗತ್ತಿಗೆ ಸವಾಲು ಹಾಕಿದೆ. ಅಣ್ವಸ್ತ್ರ ನಿಶ್ಯಸ್ತ್ರೀಕರಣದ ಕುರಿತಂತೆ ಇರುವ ಅಳಿದುಳಿದ ನಿರೀಕ್ಷೆಗಳನ್ನು ಈ ಮೂಲಕ ಕಮರುವಂತೆ ಮಾಡಿದೆ. ತನ್ನಲ್ಲಿರುವ ಅಣ್ವಸ್ತ್ರಗಳ ಶಕ್ತಿಯನ್ನು ಜಗತ್ತಿನ ಮುಂದಿಡುತ್ತಿರುವ ಇದೇ ಅಮೆರಿಕ ಅಭಿವೃದ್ಧಿಶೀಲ ದೇಶಗಳು ಅಣ್ವಸ್ತ್ರ ಪರೀಕ್ಷೆಗೆ ಇಳಿದಾಗ ಅವುಗಳನ್ನು ತಡೆಯುವುದರ ಹಿಂದಿರುವುದು ಜಗತ್ತಿನ ಶಾಂತಿಯ ಕುರಿತಂತೆ ಇರುವ ಕಾಳಜಿಯಲ್ಲ. ಸಣ್ಣ ಪುಟ್ಟ ದೇಶಗಳು ಅಣ್ವಸ್ತ್ರವನ್ನು ಹೊಂದಿದ್ದೇ ಆದರೆ, ಅವುಗಳ ಮೇಲೆ ತನಗೆ ನಿಯಂತ್ರಣ ಸಾಧಿಸಲು ಕಷ್ಟ ಎನ್ನುವುದೇ ಅಸಲಿ ಕಾರಣ.
ಇಂದು ಅಣ್ವಸ್ತ್ರ ಹೊಂದಿರುವ ದೇಶಗಳು ಅಣ್ವಸ್ತ್ರ ಹೊಂದಿಲ್ಲದ ದೇಶಗಳೊಂದಿಗೆ ಯಾವ ರೀತಿಯಲ್ಲಿ ವರ್ತಿಸಿವೆ ಎನ್ನುವುದನ್ನು ಗಮನಿಸಿದರೆ ಸಾಕು, ಸಣ್ಣ ಪುಟ್ಟ ದೇಶಗಳು ಕೂಡ ಯಾಕೆ ಅಣ್ವಸ್ತ್ರ ಹೊಂದಲು ಒದ್ದಾಡುತ್ತಿವೆ ಎನ್ನುವುದು ಗೊತ್ತಾಗಿ ಬಿಡುತ್ತದೆ. ಉಕ್ರೇನ್ ಹೊಸ ದೇಶವಾಗಿ ಸ್ಥಾಪನೆಯಾದಾಗ ತನ್ನಲ್ಲಿರುವ ಅಣ್ವಸ್ತ್ರವನ್ನು ನಿಶ್ಶಸ್ತ್ರಗೊಳಿಸಿತು. ಅದರ ಪರಿಣಾಮವನ್ನು ಇದೀಗ ಅನುಭವಿಸುತ್ತಿದೆ. ಉಕ್ರೇನ್ ಬಳಿ ಅಣ್ವಸ್ತ್ರವಿಲ್ಲ ಎನ್ನುವ ಧೈರ್ಯದಿಂದಲೇ ರಶ್ಯ ಅಲ್ಲಿ ಮಾರಣಹೋಮ ನಡೆಸುತ್ತಿದೆ. ಯಾವ ದೇಶವೂ ಇಂದು ಉಕ್ರೇನ್ ನೆರವಿಗೆ ಬರುತ್ತಿಲ್ಲ. ಬದಲಿಗೆ ಅದರ ಅಸಹಾಯಕತೆಯನ್ನೇ ಬಳಸಿಕೊಂಡು ಅಮೆರಿಕ ತನಗೆ ಬೇಕಾದ ಒಪ್ಪಂದಗಳಿಗೆ ಉಕ್ರೇನ್ನಿಂದ ಸಹಿ ಹಾಕಿಸಿಕೊಂಡಿದೆ. ರಾಸಾಯನಿಕ ಅಸ್ತ್ರಗಳಿವೆ ಎನ್ನುವ ನೆಪಗಳನ್ನು ಮುಂದಿಟ್ಟುಕೊಂಡು ಅಮೆರಿಕವು ಇರಾಕ್ನ ಮೇಲೆ ದಾಳಿ ನಡೆಸಿತ್ತು. ರಾಸಾಯನಿಕ ಅಸ್ತ್ರವಾಗಲಿ, ಅಣ್ವಸ್ತ್ರವಾಗಲಿ ತನ್ನ ಬಳಿ ಇಲ್ಲ ಎನ್ನುವ ಕಾರಣದಿಂದಲೇ ಇರಾಕ್ ಸರ್ವನಾಶವಾಯಿತು. ಭಾರತ-ಪಾಕ್ ನಡುವೆ ಎಂದೋ ಸ್ಫೋಟಿಸಬಹುದಾಗಿದ್ದ ಯುದ್ಧ ನಡೆಯದೇ ಇರುವುದಕ್ಕೆ, ಇತ್ತೀಚೆಗೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಏಕಾಏಕಿ ಸ್ಥಗಿತಗೊಳ್ಳುವುದಕ್ಕೆ ಮುಖ್ಯ ಕಾರಣವೇ ಉಭಯ ದೇಶಗಳು ಅಣ್ವಸ್ತ್ರ ಹೊಂದಿರುವುದು. ಅಣ್ವಸ್ತ್ರ ಹೊಂದಿರುವ ಯಾವುದೇ ದೇಶಗಳ ಮೇಲೆ ದಾಳಿ ನಡೆಸುವುದಕ್ಕೆ ಬಲಿಷ್ಠ ದೇಶಗಳು ಹಿಂಜರಿಯುತ್ತವೆ. ಅಣ್ವಸ್ತ್ರ ಹೊಂದಿಲ್ಲದ ದೇಶಗಳು ಸದಾ ಯುದ್ಧಭೀತಿಯಿಂದ ಕಳೆಯಬೇಕಾದ ಅಥವಾ ಶ್ರೀಮಂತ ದೇಶಗಳ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿಯಿದೆ.
ಪಾಕಿಸ್ತಾನ ರಹಸ್ಯ ಪರಮಾಣು ಪರೀಕ್ಷೆ ನಡೆಸುತ್ತಿದೆ ಎನ್ನುವ ಟ್ರಂಪ್ ಹೇಳಿಕೆಯ ಹಿಂದೆ ದುರುದ್ದೇಶವಿರುವುದು ಸ್ಪಷ್ಟ. ಈ ಮೂಲಕ ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ ಅಸಮಾಧಾನದ ಬೆಂಕಿಗೆ ಅಮೆರಿಕ ಇನ್ನಷ್ಟು ತೈಲ ಸುರಿದಿದೆ. ಉಭಯ ದೇಶಗಳು ಯುದ್ಧ ಭೀತಿಯಿಂದ ಶಸ್ತ್ರಾಸ್ತ್ರ ಸಂಗ್ರಹದ ಪೈಪೋಟಿ ನಡೆಸಿದಾಗಷ್ಟೇ ಅಮೆರಿಕದಂತಹ ದೇಶಗಳು ಲಾಭದ ಕೊಯ್ಲನ್ನು ಕೊಯ್ಯಬಹುದು. ರಶ್ಯದ ಸ್ನೇಹವನ್ನು ತೊರೆಯುವಂತೆ ಅಮೆರಿಕ ಭಾರತದ ಮೇಲೆ ಒತ್ತಡ ಹಾಕುತ್ತಲೇ ಬರುತ್ತಿದೆ. ಇದೀಗ ಪಾಕಿಸ್ತಾನವನ್ನು ಮುಂದಿಟ್ಟುಕೊಂಡು ಅಮೆರಿಕ ಭಾರತವನ್ನು ಬ್ಲ್ಯಾಕ್ಮೇಲ್ ಮಾಡುವುದಕ್ಕೆ ಮುಂದಾಗಿದೆ. ಟ್ರಂಪ್ ನೀಡಿರುವ
ಬೇಜವಾಬ್ದಾರಿ ಹೇಳಿಕೆಯು ಜಗತ್ತನ್ನು ಮತ್ತೆ ಅಣ್ವಸ್ತ್ರದ ತೆಕ್ಕೆಗೆ ತಳ್ಳಿರುವುದು ಸ್ಪಷ್ಟ. ಇವರ ಈ ಹೇಳಿಕೆಯು ಸಿಟಿಬಿಟಿ ಒಪ್ಪಂದದ ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆಯಾಗಿದೆ.







