Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಎರಡು ಮಕ್ಕಳ ನೀತಿ: ಮಕ್ಕಳ ಪಾಲಿಗೆ...

ಎರಡು ಮಕ್ಕಳ ನೀತಿ: ಮಕ್ಕಳ ಪಾಲಿಗೆ ಉರುಳಾದರೆ?

ವಾರ್ತಾಭಾರತಿವಾರ್ತಾಭಾರತಿ4 Feb 2026 8:30 AM IST
share
ಎರಡು ಮಕ್ಕಳ ನೀತಿ: ಮಕ್ಕಳ ಪಾಲಿಗೆ ಉರುಳಾದರೆ?

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಮುಖೇಡ್ ತಾಲೂಕಿನ ಕೆರೂರು ಗ್ರಾಮದ ನಿವಾಸಿ ಪಾಂಡುರಂಗ ಕೊಂಡ್ಮಂಗಲೆ ಎಂಬಾತ ತನ್ನ ಆರು ವರ್ಷದ ಪುತ್ರಿಯನ್ನು ಕಾಲುವೆಯೊಂದಕ್ಕೆ ತಳ್ಳಿ ಕೊಂದು ಹಾಕಿದ್ದಾನೆ. ಸ್ವಂತ ಮಗಳನ್ನೇ ಕೊಂದು ಹಾಕುವಂತಹ ಸ್ಥಿತಿ ಆತನಿಗೆ ಯಾಕೆ ನಿರ್ಮಾಣವಾಯಿತು? ಎಂದು ತನಿಖೆ ನಡೆಸಿದಾಗ ಆಘಾತಕಾರಿ ಅಂಶ ಬೆಳಕಿಗೆ ಬಂತು. ಪಾಂಡುರಂಗನಿಗೆ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶವಿತ್ತು. ಆದರೆ ಅದಕ್ಕೆ ಸ್ವಂತ ಮಕ್ಕಳೇ ಅಡ್ಡಿಯಾಗಿದ್ದರು. ಮಹಾರಾಷ್ಟ್ರದಲ್ಲಿ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಬೇಕಾದರೆ ಕಡ್ಡಾಯವಾಗಿ ಎರಡು ಮಕ್ಕಳನ್ನಷ್ಟೇ ಹೊಂದಿರಬೇಕು. ಈತನೂ ಎರಡಕ್ಕಿಂತ ಅಧಿಕ ಮಕ್ಕಳನ್ನು ಹೊಂದುವ ಉದ್ದೇಶವನ್ನು ಹೊಂದಿರಲಿಲ್ಲ. ಆದರೆ ಒಬ್ಬ ಗಂಡು ಮಗುವಿನ ಬಳಿಕ ಅವಳಿ ಮಕ್ಕಳು ಹುಟ್ಟಿದರು. ಇಬ್ಬರು ಮಕ್ಕಳ ನೀತಿಯಿಂದಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವೇ ಇಲ್ಲ ಎಂದಾಗ ಆತನಿಗೆ ಒಂದು ಮಗುವನ್ನು ಕೊಂದು ಹಾಕುವ ದುರಾಲೋಚನೆ ಹುಟ್ಟಿತು. ಸ್ಥಳೀಯ ಗ್ರಾಮದ ಸರಪಂಚ ಕೂಡ ಈತನ ದುರಾಲೋಚನೆಗೆ ಸಹಭಾಗಿಯಾದ. ಕೊನೆಗೂ ಮಗಳನ್ನು ಕೊಂದು ಅದನ್ನು ಅಪಘಾತವೆಂದು ಬಿಂಬಿಸಲು ಪ್ರಯತ್ನ ಪಟ್ಟು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಈ ಕೃತ್ಯ ಇದೀಗ ಪಂಚಾಯತ್ ಮಟ್ಟದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಎರಡು ಮಕ್ಕಳನ್ನಷ್ಟೇ ಹೊಂದಿರುವುದು ಅಗತ್ಯ ಎಂಬ ನೀತಿಯ ಬಗ್ಗೆ ಮತ್ತೆ ಚರ್ಚೆಯನ್ನು ಹುಟ್ಟಿಸಿ ಹಾಕಿದೆ.

ಜನಸಂಖ್ಯೆಗೆ ಸಂಬಂಧಿಸಿ ಚೀನಾದಂತಹ ದೇಶವೇ ತನ್ನ ಕಠಿಣ ನೀತಿಯಿಂದ ಹಿಂದೆ ಸರಿದಿರುವ ಕಾಲದಲ್ಲಿ, ಭಾರತ ಎರಡು ಮಕ್ಕಳ ನೀತಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದೆ. ವಿಪರ್ಯಾಸವೆಂದರೆ, ಸಾರ್ವಜನಿಕ ಭಾಷಣದಲ್ಲಿ ಬಿಜೆಪಿ ಮತ್ತು ಹಿಂದುತ್ವವಾದಿ ನಾಯಕರು ತಮ್ಮ ಅನುಯಾಯಿಗಳಿಗೆ ‘ಐದು ಮಕ್ಕಳನ್ನು ಹುಟ್ಟಿಸಿ, ಹತ್ತು ಮಕ್ಕಳನ್ನು ಹುಟ್ಟಿಸಿ’ ಎಂದು ಬೇಜವಾಬ್ದಾರಿಯ ಕರೆಗಳನ್ನು ನೀಡುತ್ತಿದ್ದಾರೆ. ಇದೇ ಹೊತ್ತಿಗೆ, ‘ದೇಶದಲ್ಲಿ ಕಠಿಣ ಜನಸಂಖ್ಯಾ ನೀತಿಯನ್ನು ಜಾರಿಗೊಳಿಸಬೇಕು’ ಎಂದೂ ಆಗ್ರಹಿಸುತ್ತಿರುತ್ತಾರೆ. ಗೋಹತ್ಯೆ, ಮತಾಂತರ ಕಾಯ್ದೆಯಂತೆಯೇ ಜನಸಂಖ್ಯಾನೀತಿಯನ್ನೂ ತಮ್ಮ ದ್ವೇಷ ರಾಜಕಾರಣಕ್ಕೆ ಸಮಿತ್ತಾಗಿ ಬಳಸುತ್ತಾ ಬಂದಿದ್ದಾರೆಯೇ ಹೊರತು, ಅದರ ಬಗ್ಗೆ ಯಾವುದೇ ಪ್ರಾಮಾಣಿಕತೆಯನ್ನು ಹೊಂದಿಲ್ಲ. ಒಂದೆಡೆ ಗೋಹತ್ಯೆಯನ್ನು ನಿಷೇಧಿಸಲು ಒತ್ತಾಯಿಸುತ್ತಲೇ ಬಿಜೆಪಿ ಸರಕಾರ ಮಗದೊದೆಂಡೆ ಗೋಮಾಂಸ ರಫ್ತಿಗೆ ಪ್ರೋತ್ಸಾಹಿಸುತ್ತಾ ಬಂದಿದೆ. ಮತಾಂತರ ಕಾಯ್ದೆಯನ್ನು ಜಾರಿಗೊಳಿಸುತ್ತಾ ಮಗದೊಂದೆಡೆ ‘ಮರಳಿ ಮಾತೃ ಧರ್ಮಕ್ಕೆ’ ಚಳವಳಿಯನ್ನು ಪ್ರೋತ್ಸಾಹಿಸುತ್ತದೆ. ಜನಸಂಖ್ಯಾ ನೀತಿಯನ್ನು ಬಿಜೆಪಿ ಮತ್ತು ಸಂಘಪರಿವಾರ ಮುಸ್ಲಿಮ್ ವಿರೋಧಿ ಘೋಷಣೆಯಾಗಿ ಬಳಸಲು ಯತ್ನಿಸುತ್ತಿದೆಯೇ ಹೊರತು, ನಿಜಕ್ಕೂ ಅದರ ಸಾಧಕ ಬಾಧಕಗಳ ಕುರಿತಂತೆ ಪ್ರಾಮಾಣಿಕ ಉದ್ದೇಶವನ್ನು ಹೊಂದಿಲ್ಲ. ದೇಶದ ಭವಿಷ್ಯದ ದೃಷ್ಟಿಯಿಂದ ನಿರ್ಣಾಯಕ ಎಣಿಸಬಲ್ಲ ಇಂತಹ ನೀತಿಯ ಬಗ್ಗೆ ಈ ಬೇಜವಾಬ್ದಾರಿ ನಿಲುವು ಅತ್ಯಂತ ಅಪಾಯಕಾರಿಯಾಗಿದೆ.

ಪಂಚಾಯತ್ ಮಟ್ಟದಲ್ಲಿ ಎರಡು ಮಕ್ಕಳ ನಿಯಮಗಳ ವಿಷಯದಲ್ಲಿ ಸಾಕಷ್ಟು ವಿರೋಧಾಭಾಸಗಳಿವೆ. ಮುಖ್ಯವಾಗಿ ಈ ನೀತಿ ಕೆಲವು ರಾಜ್ಯಗಳಲ್ಲಿ ಮಾತ್ರ ಜಾರಿಯಲ್ಲಿವೆ. ಅಸ್ಸಾಂ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಮತ್ತು ಹರ್ಯಾಣಗಳಲ್ಲಿ ಸದ್ಯ ಈ ನೀತಿ ಕಟ್ಟು ನಿಟ್ಟಾಗಿ ಅನುಷ್ಠಾನಗೊಂಡಿವೆ. ಅಸ್ಸಾಂ 2021ರಿಂದ ಈ ನೀತಿಯನ್ನು ಜಾರಿಗೆ ತಂದಿದ್ದು, ಸರಕಾರಿ ಕೆಲಸಕ್ಕೂ ಎರಡು ಮಕ್ಕಳ ನೀತಿಯನ್ನು ಅನ್ವಯಗೊಳಿಸಿದೆ. ಮಹಾರಾಷ್ಟ್ರದಲ್ಲಿ ಗ್ರಾಮಪಂಚಾಯತ್ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಹಾಗೂ ಕೆಲವು ನಾಗರಿಕ ಸೇವಾ ಹುದ್ದೆಗಳಿಗೂ ಅವರು ಅನರ್ಹರಾಗುತ್ತಾರೆ. ಒಡಿಶಾದಲ್ಲಿ ಪಂಚಾಯತ್ ಚುನಾವಣೆಗಳಿಗೆ ಎರಡು ಮಕ್ಕಳ ನಿಯಮ ಅನುಷ್ಠಾನದಲ್ಲಿದ್ದರೆ, ರಾಜಸ್ಥಾನದಲ್ಲಿ ಈ ನಿಯಮಗಳನ್ನು ಅಲ್ಪಸ್ವಲ್ಪ ಸಡಿಲಿಸಲಾಗಿದೆ. ಮಧ್ಯ ಪ್ರದೇಶದಲ್ಲಿ ಸರಕಾರಿ ಸೇವೆಗಳಿಗೆ ಸೇರಬೇಕಾದರೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಬಾರದು. ಗುಜರಾತ್ ಮತ್ತು ಹರ್ಯಾಣಗಳು ಪಂಚಾಯತ್‌ನಲ್ಲಿ ಸ್ಪರ್ಧಿಸುವುದಕ್ಕೆ ಈ ನಿಯಮವನ್ನು ಕಡ್ಡಾಯಗೊಳಿಸಿದೆ. ಇದೇ ಸಂದರ್ಭದಲ್ಲಿ ಈ ನಿಯಮಗಳು ಸಾಮಾಜಿಕವಾಗಿ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿರುವ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳು ನಿಯಮದಿಂದ ಹಿಂದೆ ಸರಿದಿವೆ. ಕೆಲವು ರಾಜ್ಯಗಳಲ್ಲಿ ಈ ನಿಯಮಗಳ ವಿರುದ್ಧ ಸಂತ್ರಸ್ತರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ನಿಯಮಗಳು ಇಡೀ ರಾಷ್ಟ್ರಕ್ಕೆ ಅನ್ವಯವಾಗದೆ ಕೆಲವು ರಾಜ್ಯಗಳಲ್ಲಷ್ಟೇ ಅನುಷ್ಠಾನಗೊಂಡಿರುವುದು ಕೆಲವು ಬಿಕ್ಕಟ್ಟುಗಳಿಗೆ ಕಾರಣವಾಗುತ್ತಿದೆ ಎಂಬ ವಾದ ಕೆಲವರದು. ಆದರೆ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಈ ನಿಯಮದ ಪ್ರಸ್ತುತತೆಯನ್ನು ಎತ್ತಿ ಹಿಡಿದಿದೆ.

ಮುಖ್ಯ ಪ್ರಶ್ನೆ, ಗ್ರಾಮಪಂಚಾಯತ್‌ನಲ್ಲಿ ಸ್ಪರ್ಧಿಸುವುದಕ್ಕೆ ಈ ನಿಯಮ ಅನ್ವಯವಾಗುತ್ತದೆಯಾದರೆ ಅದೇ ನಿಯಮವನ್ನು ವಿಧಾನಸಭೆ ಮತ್ತು ಲೋಕಸಭೆಗೆ ಸ್ಪರ್ಧಿಸುವುದಕ್ಕೆ ಯಾಕೆ ಅನ್ವಯಗೊಳಿಸಬಾರದು? ಗ್ರಾಮಮಟ್ಟದಲ್ಲಿ ಚುನಾವಣೆಗೆ ಸ್ಪರ್ಧಿಸುವವರಲ್ಲಿ ಹೆಚ್ಚು ತಿಳುವಳಿಕೆಯಿರುವವರು ಕಡಿಮೆ. ಅವರನ್ನು ರಾಜಕೀಯವಾಗಿ ಜಾಗೃತಗೊಳಿಸಬೇಕು ಮತ್ತು ಕುಟುಂಬ ಯೋಜನೆಗಳ ಬಗ್ಗೆ ಅರಿವನ್ನು ಮೂಡಿಸಬೇಕು. ಆ ಬಳಿಕವಷ್ಟೇ ಈ ನಿಯಮಗಳನ್ನು ಅವರ ಮೇಲೆ ಹೇರಲು ಸರಕಾರ ಮುಂದಾಗಬಹುದಾಗಿದೆ. ಇಂತಹದೊಂದು ಕಠಿಣ ನಿಯಮವನ್ನು ಗ್ರಾಮಪಂಚಾಯತ್ ಮಟ್ಟದಲ್ಲಿ ಹೇರುವುದಕ್ಕೆ ಮುನ್ನ ಅದಕ್ಕೆ ಬೇಕಾದ ಪೂರ್ವ ಸಿದ್ಧತೆ ಅತ್ಯಗತ್ಯ. ಹಾಗೆಯೇ ಗ್ರಾಮಪಂಚಾಯತ್ ಮಟ್ಟದ ಪ್ರತಿನಿಧಿಗಳಿಗೆ ಮಾದರಿಯಾಗಿ ಮೊದಲು ಶಾಸಕರು, ಸಂಸದರು ಅದನ್ನು ತಮ್ಮ ಬದುಕಿನಲ್ಲಿ ಅಳವಡಿಸಬೇಕು. ಗ್ರಾಮಪಂಚಾಯತ್ ಜನಪ್ರತಿನಿಧಿಗಳಿಗೆ ಅನ್ವಯವಾಗುವ ಈ ನಿಯಮವನ್ನು ಶಾಸಕರು, ಸಂಸದರಿಗೆ ಅನ್ವಯ ಮಾಡಿದ್ದೇ ಆದರೆ ಅದೆಷ್ಟೋ ನಾಯಕರು ಚುನಾವಣಾ ಕಣದಿಂದ ನಿವೃತ್ತಿಯನ್ನು ಘೋಷಿಸಬೇಕಾಗುತ್ತದೆ.

ಎರಡು ಮಕ್ಕಳ ನಿಯಮವು ಭವಿಷ್ಯದಲ್ಲಿ ಹಲವು ಬಿಕ್ಕಟ್ಟುಗಳಿಗೆ ಕಾರಣವಾಗಬಹುದು ಎನ್ನುವ ಭೀತಿಯನ್ನು ಈಗಾಗಲೇ ತಜ್ಞರು ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಫರ್ಟಿಲಿಟಿ ಕುಸಿತವು ನಿಧಾನಕ್ಕೆ ಈ ದೇಶದಲ್ಲಿ ಯುವಕರ ಸಂಖ್ಯೆಯನ್ನು ಇಳಿಕೆ ಮಾಡುವ ಮತ್ತು ವೃದ್ಧರ ಸಂಖ್ಯೆಯನ್ನು ಹೆಚ್ಚಿಸುವ ಅಪಾಯವನ್ನು ಹಲವು ವರದಿಗಳು ಬಹಿರಂಗಪಡಿಸಿವೆ. ಚೀನಾದಂತಹ ದೇಶಗಳು ಈಗಾಗಲೇ ಈ ಸಮಸ್ಯೆಯನ್ನು ಎದುರಿಸುತ್ತಿವೆ. ಈ ಕಾರಣಕ್ಕಾಗಿಯೇ ಅದು ತನ್ನ ಕಠಿಣ ನೀತಿಯಿಂದ ಹಿಂದೆ ಸರಿದಿದೆ. ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಯುವಶಕ್ತಿಯಿದೆ. ಕಠಿಣ ಜನಸಂಖ್ಯಾ ನಿಯಮದಿಂದ ಈ ಯುವಶಕ್ತಿಗೆ ಭಾರೀ ಧಕ್ಕೆಯಾಗುವ ಸಾಧ್ಯತೆಗಳಿವೆ. ಹಾಗೆಯ ಒಂದೆಡೆ ರಾಜಕೀಯ ನಾಯಕರು ಸಾರ್ವಜನಿಕ ಭಾಷಣದಲ್ಲಿ ಐದು ಮಕ್ಕಳು, ಹತ್ತು ಮಕ್ಕಳನ್ನು ಹೆರಲು ಕರೆ ನೀಡುವುದು ಜನರನ್ನು ಗೊಂದಲಕ್ಕೆ ತಳ್ಳುತ್ತಿದೆ. ಒಂದು ವೇಳೆ ಕಡ್ಡಾಯ ಎರಡು ಮಕ್ಕಳ ನಿಯಮ ಅನಿವಾರ್ಯವಾದರೆ, ಇಂತಹ ಕರೆಗಳನ್ನು ನೀಡುವ ರಾಜಕೀಯ ನಾಯಕರ ವಿರುದ್ಧ ಸರಕಾರ ಕಾನೂನು ಕ್ರಮವನ್ನು ಜರುಗಿಸಬೇಕು. ಸರಕಾರ ಮತ್ತು ರಾಜಕಾರಣಿಗಳ ಈ ದ್ವಂದ್ವ ನಿಲುವುಗಳೇ ಕೆಲವು ರಾಜ್ಯಗಳಲ್ಲಿ ಎರಡು ಮಕ್ಕಳ ನಿಯಮಗಳು ಪರಿಣಾಮಕಾರಿಯಾಗಿ ಜಾರಿಯಾಗಲು ಅಡ್ಡಿಯಾಗಿದೆ. ಮಹಿಳೆಯರ ಆರೋಗ್ಯಕ್ಕೆ ಈ ನಿಯಮ ಪೂರಕವಾಗಿದೆ ಎಂದು ಹೇಳಲಾಗುತ್ತದೆ. ಆದರೆ ಕೆಲವೊಮ್ಮೆ, ಮೂರನೇ ಮಗುವನ್ನು ಮಹಿಳೆಯೊಬ್ಬಳು ಆಕಸ್ಮಿಕವಾಗಿ ಗರ್ಭ ಧರಿಸಿದ್ದೇ ಮಾನಸಿಕವಾಗಿ ಮತ್ತು ದೈಹಿಕವಾಗಿ ಜರ್ಜರಿತಳಾಗಬೇಕಾಗುವುದು ಮಹಿಳೆಯೇ. ಗರ್ಭಪಾತದಂತಹ ಕೃತ್ಯಕ್ಕೆ ಒಳಗಾಗುವ ಸಂದರ್ಭದಲ್ಲಿ ಅನಾಹುತಗಳು ಸಂಭವಿಸಬಹುದು. ಮಗುವೇನಾದರೂ ಹುಟ್ಟಿ ಬಿಟ್ಟರೆ ಅದು ತಂದೆಯ ಶಾಶ್ವತ ಆಕ್ರೋಶಕ್ಕೂ ಬಲಿಯಾಗಬಹುದು. ಮಹಾರಾಷ್ಟ್ರದಲ್ಲಿ ಇಂತಹದೇ ಒಂದು ಪರಿಸ್ಥಿತಿಯು ತಂದೆಯನ್ನು ಕೊಲೆಗಾರನನ್ನಾಗಿಸಿತು. ಈ ಎರಡು ಮಕ್ಕಳ ನೀತಿಯ ಬಗ್ಗೆ ಇನ್ನಾದರೂ ಸುಪ್ರೀಂಕೋರ್ಟ್ ಗಂಭೀರವಾಗಿ ಚಿಂತಿಸಿ ನಿರ್ಧಾರಕ್ಕೆ ಬರಬೇಕು. ಈ ನಿಯಮ ಮಹಿಳೆಯರು ಮತ್ತು ಮಕ್ಕಳ ಪಾಲಿಗೆ ಉರುಳಾಗದಂತೆ ನೋಡಿಕೊಳ್ಳುವುದು ತಕ್ಷಣದ ಅಗತ್ಯವಾಗಿದೆ.

Tags

two-child policy
share
ವಾರ್ತಾಭಾರತಿ
ವಾರ್ತಾಭಾರತಿ
Next Story
X