ಯುಜಿಸಿ: ದೌರ್ಜನ್ಯ ನಡೆಸುವ ಹಕ್ಕಿಗಾಗಿ ಬೀದಿಗಿಳಿದಿರುವ ಜಾತೀವಾದಿ ಗುಂಪುಗಳು!

PC: x.com/IndiaToday
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಯುಜಿಸಿಯು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಎದುರಿಸಲು ಹೊಸ ನಿಯಮಗಳನ್ನು ಪ್ರಕಟಿಸಿದ ಬೆನ್ನಿಗೇ ಈ ದೇಶದ ಮೇಲ್ಜಾತಿಯ ಕೆಲವು ಗುಂಪುಗಳು ‘ಶೋಷಣೆ ನಡೆಸುವುದು ನಮ್ಮ ಜನ್ಮಸಿದ್ಧ ಹಕ್ಕು’ ಎಂಬಂತೆ ಆ ನಿಯಮಗಳ ವಿರುದ್ಧ ಬೀದಿಗಿಳಿದಿವೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೋಷಿತ ಸಮುದಾಯಗಳ ಮೇಲೆ ದೌರ್ಜನ್ಯಗಳನ್ನು ನಡೆಸುವ ತಮ್ಮ ಹಕ್ಕನ್ನು ರಕ್ಷಿಸಬೇಕೆಂದು ಹೀಗೆ ಬೀದಿಗಿಳಿದವರು ಅನಕ್ಷರಸ್ಥರೇನೂ ಅಲ್ಲ. ಪ್ರೊಫೆಸರ್ಗಳು, ರಾಜಕಾರಣಿಗಳು, ಉನ್ನತ ಅಧಿಕಾರಿಗಳೂ ಇವರಲ್ಲಿ ಸೇರಿದ್ದಾರೆ. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಹಿರಿಯ ಸಂಶೋಧಕರೊಬ್ಬರು ನಿಯಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರೆ, ರಾಜ್ಯ ಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಸಾಮಾಜಿಕ ಮಾಧ್ಯಮಗಳಲ್ಲಿ ಈ ನಿಯಮಗಳ ವಿರುದ್ಧಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ಈ ನಿಯಮದ ವಿರುದ್ಧ ಯುಜಿಸಿಗೆ ಪತ್ರ ಬರೆದಿದ್ದಾರೆ. ಉತ್ತರಾಖಂಡದ ನೈನಿತಾಲ್ನಲ್ಲಿರುವ ಕುಮೌನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘವು ಯುಜಿಸಿಗೆ ಪತ್ರ ಬರೆದು ಖಂಡನೆ ವ್ಯಕ್ತಪಡಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬರೇಲಿ ನಗರ ಮ್ಯಾಜಿಸ್ಟ್ರೇಟ್ ಅಲಂಕಾರ್ ಅಗ್ನಿಹೋತ್ರಿ ಎಂಬವರು ಈ ನಿಯಮದ ವಿರುದ್ಧ್ದ ಪ್ರತಿಭಟನೆಯನ್ನು ವ್ಯಕ್ತಪಡಿಸಿ, ಸೋಮವಾರ ತನ್ನ ಹುದ್ದೆಗೇ ರಾಜೀನಾಮೆ ನೀಡಿದ್ದಾರೆ. ಮೀರತ್ ಜಿಲ್ಲೆಯ ರಜಪೂತ ಸಮುದಾಯಕ್ಕೆ ಸೇರಿದ ಗ್ರಾಮಸ್ಥರು ಯುಜಿಸಿಯ ಈ ನಿಯಮಗಳನ್ನು ಹಿಂದೆಗೆದುಕೊಳ್ಳುವವರೆಗೆ ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಪ್ರತಿಜ್ಞೆ ಮಾಡುವ ವೀಡಿಯೊ ಒಂದು ವೈರಲ್ ಆಗಿದೆ. ಅಲ್ಲಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಗಳನ್ನು ನಡೆಸಿ ನಿಯಮವನ್ನು ಹಿಂದೆಗೆಯುವಂತೆ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ. ಸಂಸತ್ನಲ್ಲೂ ಈ ನಿಯಮ ಚರ್ಚೆಗೊಳಗಾಗಿದೆ.
ಧರ್ಮ, ಲಿಂಗ, ಜಾತಿ ಅಥವಾ ಅಂಗವೈಕಲ್ಯ ಸೇರಿದಂತೆ ವಿವಿಧ ಆಧಾರಗಳ ಮೇಲೆ ಕಾಲೇಜುಗಳಲ್ಲಿ ನಡೆಯುವ ತಾರತಮ್ಯವನ್ನು ಕೊನೆಗೊಳಿಸುವ ಉದ್ದೇಶವನ್ನು ಈ ಹೊಸ ನಿಯಮಗಳು ಹೊಂದಿವೆ. ಮುಖ್ಯವಾಗಿ ದಲಿತ ಸಮುದಾಯಗಳ ಮೇಲೆ ನಡೆಯುವ ಜಾತಿತಾರತಮ್ಯವನ್ನು ನಿಯಮ ವಿರೋಧಿಸುತ್ತದೆ. ಉನ್ನತ ಶಿಕ್ಷಣದಲ್ಲಿ ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ತಾರತಮ್ಯಗಳನ್ನು ಅಳಿಸಿ, ಎಲ್ಲರನ್ನು ಒಳಗೊಳ್ಳುವಂತೆ ಮಾಡುವುದು ನಿಯಮದ ಉದ್ದೇಶವಾಗಿದೆ. ಇದಕ್ಕಾಗಿ ಉನ್ನತ ಶಿಕ್ಷಣ ಸಂಸ್ಥೆಯು ಮೂರು ತಂಡಗಳನ್ನು ರಚಿಸಲಿದೆ. ಮೀಸಲು ವರ್ಗಗಳಿಂದ ಬಂದ ಸದಸ್ಯರು ಸೇರಿದಂತೆ ಅಧ್ಯಾಪಕರು, ಅಧಿಕಾರಿಗಳು ಈ ತಂಡದಲ್ಲಿರುತ್ತಾರೆ. 2012ರ ನಿಯಮಗಳು ಸಲಹೆಯ ರೂಪದಲ್ಲಿದ್ದರೆ, ಇಲ್ಲಿ ಸಲಹೆಯನ್ನು ಅಥವಾ ನಿಯಮಗಳನ್ನು ಪಾಲಿಸದ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರ ಯುಜಿಸಿಗಿದೆ. ನಿಯಮಗಳನ್ನು ಪಾಲಿಸದ ಸಂಸ್ಥೆಗಳು ಕೇಂದ್ರದಿಂದ ಅನುದಾನ ಪಡೆಯುವ ಅರ್ಹತೆಯನ್ನು ಕಳೆದುಕೊಳ್ಳಬಹುದು. ಹೊಸ ನಿಯಮದಲ್ಲಿ ಜಾತಿ ತಾರತಮ್ಯಕ್ಕೆ ಒಬಿಸಿ ವರ್ಗವನ್ನೂ ಸೇರಿಸಲಾಗಿದೆ. ‘‘ಜಾತಿ ಆಧಾರಿತ ತಾರತಮ್ಯ ಎಂದರೆ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ಸದಸ್ಯರ ವಿರುದ್ಧ ಜಾತಿ ಅಥವಾ ಬುಡಕಟ್ಟು ಆಧಾರದ ಮೇಲೆ ಮಾತ್ರ ನಡೆಯುವ ತಾರತಮ್ಯ’’ ಎಂದು ಅಂತಿಮಗೊಂಡ ನಿಯಮಗಳು ಸ್ಪಷ್ಟಪಡಿಸುತ್ತವೆ.
ಉನ್ನತ ಸಂಸ್ಥೆಗಳಲ್ಲಿ ನಡೆಯುತ್ತಿರುವ ಜಾತಿ ತಾರತಮ್ಯ, ದೌರ್ಜನ್ಯಗಳ ಹಿಂದಿರುವ ಶಕ್ತಿಗಳಿಗಷ್ಟೇ ಈ ನಿಯಮಗಳು ಕಹಿಯಾಗಬಹುದು ಮತ್ತು ಆ ಶಕ್ತಿಗಳೇ ಇದೀಗ ಈ ನಿಯಮಗಳ ವಿರುದ್ಧ ಬೀದಿಗಿಳಿದಿವೆ. ಈ ನಿಯಮಗಳನ್ನು ದುರ್ಬಳಕೆ ಮಾಡಿಕೊಂಡು ಭವಿಷ್ಯದಲ್ಲಿ ಮೇಲ್ಜಾತಿ ವಿದ್ಯಾರ್ಥಿಗಳ ವಿರುದ್ಧ ಮತ್ತು ಸಿಬ್ಬಂದಿಯ ವಿರುದ್ಧ ದೌರ್ಜನ್ಯಗಳು ನಡೆಯಬಹುದು ಅಥವಾ ಸುಳ್ಳು ದೂರುಗಳನ್ನು ದಾಖಲಿಸಬಹುದು ಎನ್ನುವುದು ಅವರ ಆತಂಕ. ಭವಿಷ್ಯದಲ್ಲಿ ನಡೆಯಬಹುದಾದ ದೌರ್ಜನ್ಯಗಳನ್ನು ಶಂಕಿಸಿ ಅದರ ವಿರುದ್ಧ ಈ ಜನರು ಈಗ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ನಿಯಮಗಳನ್ನು ಹಿಂದೆಗೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ಪ್ರತಿಭಟನೆಗಳನ್ನು, ಈಗಾಗಲೇ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದೌರ್ಜನ್ಯಗಳನ್ನು ಎದುರಿಸಿ ಶಿಕ್ಷಣವನ್ನು ತೊರೆದಿರುವ ಸಂತ್ರಸ್ತರು, ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಗಳ ಕುಟುಂಬಸ್ಥರು ಮೌನವಾಗಿ ವೀಕ್ಷಿಸುತ್ತಿದ್ದಾರೆ.
ಪ್ರತಿಭಟನೆ ನಡೆಸುವ ವಿದ್ಯಾರ್ಥಿಗಳು, ಪೋಷಕರು ಅಥವಾ ಸಂಘಟನೆಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಿಜಕ್ಕೂ ನಡೆಯುತ್ತಿರುವುದೇನು ಎನ್ನುವುದು ತಿಳಿಯದಿರುವಷ್ಟು ಅಮಾಯಕರೇನೂ ಅಲ್ಲ. ತಮ್ಮನ್ನು ತಾವು ಸಂತ್ರಸ್ತರೆಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಇವರು, ಉನ್ನತ ಸಂಸ್ಥೆಗಳಲ್ಲಿ ನಡೆಯುತ್ತಿರುವ ದೌರ್ಜನ್ಯ, ತಾರತಮ್ಯಗಳಲ್ಲಿ ತಮ್ಮ ಸಮುದಾಯದ ಜನರು ಎಷ್ಟರಮಟ್ಟಿಗೆ ಸಂತ್ರಸ್ತರಾಗಿದ್ದಾರೆ? ಎನ್ನುವ ಅಂಕಿಅಂಶಗಳನ್ನಾದರೂ ದೇಶದ ಮುಂದಿಡಬೇಕು. ಕಳೆದ ಐದು ವರ್ಷಗಳಲ್ಲಿ ಈ ತಾರತಮ್ಯದ ಕಾರಣದಿಂದ 13,500 ದಲಿತ ಹಾಗೂ ಒಬಿಸಿ ಹಿನ್ನೆಲೆಯುಳ್ಳ ವಿದ್ಯಾರ್ಥಿಗಳು ಹತಾಶೆಯಿಂದ ಶಿಕ್ಷಣಕ್ಕೆ ವಿದಾಯ ಹೇಳಿದ್ದಾರೆ. 2007-2011ರ ನಾಲ್ಕು ವರ್ಷಗಳ ಅವಧಿಯಲ್ಲಿ ವೃತ್ತಿ ಪರ ಕೋರ್ಸ್ ವ್ಯಾಸಂಗ ಮಾಡುತ್ತಿರುವ ಸುಮಾರು 20 ದಲಿತ ವಿದ್ಯಾರ್ಥಿಗಳು ಜಾತಿ ದೌರ್ಜನ್ಯಗಳ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಸರಕಾರದ ಅಂಕಿ ಅಂಶಗಳ ಪ್ರಕಾರ ಐಐಟಿ, ಐಐಎಂ, ಎನ್ಐಟಿ ಶಿಕ್ಷಣ ಸಂಸ್ಥೆಗಳಲ್ಲಿ 2014-2021ರ ಅವಧಿಯಲ್ಲಿ 122 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಅಧಿಕೃತ ಅಂಕಿಅಂಶ. ಉಳಿದಂತೆ ಬಹುತೇಕ ಆತ್ಮಹತ್ಯೆ ಪ್ರಕರಣಗಳನ್ನು ಖಿನ್ನತೆ, ವೈಯಕ್ತಿಕ ಸಮಸ್ಯೆ ಎಂದು ಮುಚ್ಚಿ ಹಾಕಲಾಗುತ್ತದೆ. ಮೇಲ್ಜಾತಿಯ ವಿದ್ಯಾರ್ಥಿಗಳಿಂದಷ್ಟೇ ಇಲ್ಲಿ ಶೋಷಣೆಗಳು ನಡೆಯುವುದಿಲ್ಲ, ಉಪನ್ಯಾಸಕರು, ಸಿಬ್ಬಂದಿ ವರ್ಗ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ರಾಜಕಾರಣಿಗಳೂ ಇದರಲ್ಲಿ ಶಾಮೀಲಾಗುತ್ತಾರೆ. ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ, ದಲಿತರು ಶಿಕ್ಷಣ ಸಂಸ್ಥೆಗಳಲ್ಲಿ ಎದುರಿಸುತ್ತಿರುವ ದೌರ್ಜನ್ಯದ ಬೇರೆ ಬೇರೆ ಆಯಾಮಗಳನ್ನು ಈಗಾಗಲೇ ತೆರೆದಿಟ್ಟಿದೆ. ಈ ಕಾರಣದಿಂದಲೇ, ಯುಜಿಸಿಯ ನಿಯಮಗಳ ವಿರುದ್ಧ ಈ ಅಧಿಕಾರಶಾಹಿ ವರ್ಗ ಮತ್ತು ರಾಜಕಾರಣಿಗಳು ಜಂಟಿಯಾಗಿ ಬೀದಿಗಿಳಿದಿರುವುದು.ಯುಜಿಸಿ ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಒತ್ತಡ ಹೇರುವುದಕ್ಕಾಗಿ ನಿಜಕ್ಕೂ ಸಂತ್ರಸ್ತರು ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗಿದೆ. ಆದರೆ ಅದಕ್ಕೆ ಬದಲಾಗಿ, ಶೋಷಕರೇ ಬೀದಿಗಿಳಿದು ಶೋಷಣೆ ನಡೆಸುವ ಹಕ್ಕಿಗಾಗಿ ಪ್ರತಿಭಟನೆ ನಡೆಸಲು ಮುಂದಾಗಿರುವುದು ನಮ್ಮ ಉನ್ನತ ಶಿಕ್ಷಣ ವ್ಯವಸ್ಥೆ ತಲುಪಿರುವ ದುರಂತದ ಆಳವನ್ನು ಹೇಳುತ್ತದೆ. ನಿಯಮಗಳು ಕಠಿಣವಾಗಿ ಜಾರಿಗೊಳ್ಳುವ ಅನಿವಾರ್ಯತೆಯನ್ನು ಈ ಪ್ರತಿಭಟನೆಗಳೇ ಎತ್ತಿ ಹಿಡಿದಿವೆ.







