ಕೇಂದ್ರ ಬಜೆಟ್ ಮಂಡನೆ: ರಾಜ್ಯಗಳ ಬೆನ್ನಿಗೆ ಚೂರಿ ಹಾಕಲು ಸಿದ್ಧತೆ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ತಮ್ಮ 9ನೇ ಕೇಂದ್ರ ಬಜೆಟನ್ನು ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್ ಬೇರೆ ಬೇರೆ ಕಾರಣಗಳಿಗಾಗಿ ವಿಶೇಷವಾಗಲಿದೆ ಎಂದು ಮಾಧ್ಯಮಗಳು ತುತ್ತೂರಿ ಊದಲಾರಂಭಿಸಿವೆ. ಹಾಗೆಂದು, ಈ ಬಾರಿಯ ಬಜೆಟ್ ದೇಶದ ಆರ್ಥಿಕತೆಯ ದಿಕ್ಕನ್ನು ಬದಲಿಸಲಿದೆ ಎನ್ನುವ ನಿರೀಕ್ಷೆಯನ್ನು ಯಾರೂ ಇಟ್ಟುಕೊಂಡಿಲ್ಲ. ಈ ಹಿಂದೆ ಸೀತಾರಾಮನ್ ಅವರು ಬಜೆಟ್ ಮಂಡನೆಯ ಸಂದರ್ಭದಲ್ಲಿ ಉಟ್ಟ ಸೀರೆಯನ್ನೇ ಮಾಧ್ಯಮಗಳು ಬಗೆ ಬಗೆಯಾಗಿ ಮಂಡಿಸಿ, ಅದನ್ನೇ ಬಜೆಟ್ ವಿಶೇಷವೆಂದು ಜನರನ್ನು ನಂಬಿಸುವಲ್ಲಿ ಯಶಸ್ವಿಯಾಗಿದ್ದವು. ಈ ಬಾರಿ ಬಜೆಟನ್ನು ಫೆಬ್ರವರಿ 1 ಅಂದರೆ ರವಿವಾರ ಮಂಡಿಸಲಿರುವುದು ಮಾಧ್ಯಮಗಳ ಪಾಲಿಗೆ ಒಂದು ವಿಶೇಷವಾಗಿದೆ. ರವಿವಾರ ರಜಾ ದಿನವಾಗಿರುವುದರಿಂದ ಆ ದಿನ ಬಜೆಟ್ ಮಂಡನೆ ಮಾಡಲಾಗುತ್ತದೆಯೋ ಇಲ್ಲವೋ ಎನ್ನುವುದು ಚರ್ಚೆಯಲ್ಲಿತ್ತು. ರವಿವಾರ ಬಜೆಟ್ ಮಂಡನೆ ಭಾರತಕ್ಕೆ ಹೊಸತೇನೂ ಅಲ್ಲ. 1999ರಲ್ಲಿ ಯಶವಂತ ಸಿನ್ಹಾ ಅವರು ಫೆ. 28ರಂದು ರವಿವಾರವೇ ಬಜೆಟ್ ಮಂಡನೆ ಮಾಡಿದ್ದರು. 2017ರ ಆಂತರ ಫೆ.1ರಂದು ಬಜೆಟ್ ಮಂಡನೆ ಮಾಡುತ್ತಾ ಬರಲಾಗಿದ್ದು, ಇದೀಗ ಮೊದಲ ಬಾರಿಗೆ ರವಿವಾರದಂದು ಬಜೆಟ್ ಮಂಡನೆ ಮಾಡುವ ಸಂದರ್ಭ ಬಂದಿದೆ. ಇರುವ ಕಲಾಪಗಳನ್ನು ದೇಶದ ಅಭಿವೃದ್ಧಿಗೆ ಸಂಬಂಧಿಸಿದ ಚರ್ಚೆಗೆ ಬಳಸದೆ ‘ವಂದೇ ಮಾತರಂ’ ಚರ್ಚೆಗೆ ಮೀಸಲಿರಿಸಿ ವ್ಯರ್ಥಗೊಳಿಸಿದ ಹೆಗ್ಗಳಿಕೆಯನ್ನು ಹೊಂದಿರುವ ಸರಕಾರ, ರವಿವಾರ ಬಜೆಟ್ ಮಂಡನೆ ಮಾಡುವುದರಿಂದ ದೇಶದ ಆರ್ಥಿಕತೆಗೆ ವಿಶೇಷ ಲಾಭವಾಗುತ್ತದೆ ಎಂದು ನಿರೀಕ್ಷಿಸಲು ಸಾಧ್ಯವೆ? ಉಳಿದಂತೆ, ಈ ಬಾರಿ ಕೇಂದ್ರ ಬಜೆಟ್ ಹೊಸ ‘ಕರ್ತವ್ಯ ಭವನ’ದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಾದರೂ, ವಿತ್ತ ಸಚಿವರು ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ, ಜನಪರವಾಗಿ ನಿಭಾಯಿಸುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ. ಹಣಕಾಸು ಸಚಿವಾಲಯದಲ್ಲಿ ಬಹಳಷ್ಟು ಬದಲಾವಣೆಗಳಾಗಿದ್ದು, ಮೊತ್ತ ಮೊದಲ ಬಾರಿಗೆ ಬಜೆಟ್ ರೂಪಿಸುವಾಗ ನಿರ್ಮಲಾ ಸೀತಾರಾಮನ್ ನಿಯೋಜಿತ ಹಣಕಾಸು ಕಾರ್ಯದರ್ಶಿಯ ಹೊರತಾಗಿ ಕೆಲಸ ಮಾಡಲಿದ್ದಾರೆ. ಬಜೆಟ್ ಸಿದ್ಧಪಡಿಸಲು ವಿವಿಧ ತಂಡಗಳ ಜೊತೆಗಿನ ಸಮನ್ವಯವನ್ನು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಹೊರಲಿದ್ದಾರೆ. ಕೋರ್ ಸಮಿತಿಯಲ್ಲಿ ಅನುಭವಿ ತಲೆಗಳು ಮಾತ್ರವಲ್ಲ ಹೊಸ ಮುಖಗಳೂ ಇವೆ. ಇವೆಲ್ಲವೂ ಬಜೆಟ್‌ನ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ದೇಶದ ಆರ್ಥಿಕತೆ ಭಾರೀ ಸಂಕಟದಲ್ಲಿರುವ ಸಮಯ. ಅಮೆರಿಕ ಹೇರುತ್ತಿರುವ ಸುಂಕ ಮತ್ತು ಇನ್ನಿತರ ಬೆದರಿಕೆಗಳು ಭಾರತದ ಆರ್ಥಿಕತೆಯ ಮೇಲೆ ಭಾರೀ ದುಷ್ಪರಿಣಾಮಗಳನ್ನು ಬೀರುತ್ತಿವೆ. ಆಮದು ರಫ್ತುಗಳಲ್ಲಾಗಿರುವ ಏರುಪೇರುಗಳು ದೇಶದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಸುವ ಸಾಧ್ಯತೆಗಳಿವೆ. ಒಂದೆಡೆ ಬೆಲೆಯೇರಿಕೆ, ಮಗದೊಂದೆಡೆ ರಫ್ತಿನಲ್ಲಾಗಿರುವ ಇಳಿಕೆಯಿಂದಾಗಿ ಎದುರಾಗಿರುವ ನಿರುದ್ಯೋಗಗಳು ಭಾರತವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಇರಾನ್ ಮತ್ತು ರಶ್ಯದ ಜೊತೆಗೆ ಯಾವುದೇ ವ್ಯವಹಾರಿಕ ಸಂಬಂಧಗಳನ್ನು ಇಟ್ಟುಕೊಳ್ಳುವುದಕ್ಕೆ ಅಮೆರಿಕ ಅಡ್ಡಿಯಾಗಿದೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ಬಂಡವಾಳ ಹೂಡಿಕೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇವೆಲ್ಲವುಗಳನ್ನು ಹಣಕಾಸು ಸಚಿವರು ತನ್ನ ಬಜೆಟ್‌ನಲ್ಲಿ ಹೇಗೆ ನಿಭಾಯಿಸುತ್ತಾರೆ ಎನ್ನುವುದರ ಮೇಲೆ ಭಾರತದ ಆರ್ಥಿಕತೆಯ ಭವಿಷ್ಯ ನಿಂತಿದೆ. ಪ್ರಧಾನಿ ಮೋದಿಯ ತೂತ್ತೂರಿಯ ಬಣ್ಣ ಕರಗಿದೆ. ಅವರು ವಂದೇಮಾತರಂ, ಸೋಮನಾಥ ದೇವಾಲಯ ಎಂದು ತನ್ನ ವರ್ಚಸ್ಸನ್ನು ಉಳಿಸಿಕೊಳ್ಳಲು ಭಾವನಾತ್ಮಕ ವಿಷಯಗಳ ಮೊರೆ ಹೋಗಿದ್ದಾರೆ. ಆದರೆ, ಈ ಪಲಾಯನ ವಾದ ಭಾರತದ ಆರ್ಥಿಕತೆಯನ್ನು ಇನ್ನಷ್ಟು ಕಂಗೆಡಿಸಲಿದೆ. ಈ ನಿಟ್ಟಿನಲ್ಲಿ ವಿತ್ತ ಸಚಿವರ ಮೇಲೆ ಭಾರೀ ಒತ್ತಡಗಳಿವೆ. ರೈತರ ಕನಿಷ್ಠ ಬೆಂಬಲ ಬೆಲೆಯೂ ಸೇರಿದಂತೆ ನನೆಗುದಿಯಲ್ಲಿರುವ ರೈತರ ಬೇಡಿಕೆಗಳಿಗೆ ಹೇಗೆ ಸ್ಪಂದಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು. ಸ್ವದೇಶಿ ಉದ್ಯಮಗಳಿಗೆ ಉತ್ತೇಜನ ನೀಡಲು ಸರಕಾರ ಏನೇನು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ ಎನ್ನುವುದು ಕೂಡ ಮುಖ್ಯವಾಗುತ್ತದೆ.
ಇದೇ ಸಂದರ್ಭದಲ್ಲಿ ರಾಜ್ಯ ಸರಕಾರಗಳು ಕೇಂದ್ರದಿಂದ ಭಾರೀ ನಿರೀಕ್ಷೆಯಲ್ಲಿವೆ. ಜಿಎಸ್‌ಟಿ ವ್ಯವಸ್ಥೆಯ ಸರಳೀಕರಣದ ಬಳಿಕ ರಾಜ್ಯಗಳ ಆದಾಯ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿವೆ. ಬಿಜೆಪಿಯೇತರ ಸರಕಾರಗಳಿರುವ ರಾಜ್ಯಗಳ ಜೊತೆಗೆ ಕೇಂದ್ರ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎನ್ನುವ ವ್ಯಾಪಕ ಆರೋಪಗಳಿವೆ. ಅತಿ ಹೆಚ್ಚು ಜಿಎಸ್‌ಟಿ ತೆರಿಗೆ ಪಾವತಿಸುವ ರಾಜ್ಯಗಳಿಗೆ ಕೇಂದ್ರ ಸರಕಾರ ಅನ್ಯಾಯ ಮಾಡುತ್ತಿದೆ ಎನ್ನುವ ಆಕ್ರೋಶ ದಕ್ಷಿಣ ರಾಜ್ಯಗಳದ್ದಾಗಿವೆ. ದಕ್ಷಿಣ ರಾಜ್ಯಗಳು ಕಟ್ಟುವ ತೆರಿಗೆಯ ಹಣವನ್ನು ಕೇಂದ್ರ ಸರಕಾರ ಉತ್ತರ ಭಾರತದ ರಾಜ್ಯಗಳಿಗೆ ಸುರಿಯುತ್ತಿವೆ. ಈ ಹಣ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗದೆ ಮಂದಿರ, ಪ್ರತಿಮೆ, ಪಾರ್ಕ್ ಎಂದು ಭಾವನಾತ್ಮಕ ರಾಜಕೀಯಗಳಿಗೆ ದುರ್ಬಳಕೆಯಾಗುತ್ತಿದೆ. ಕರ್ನಾಟಕ ಸರಕಾರವಂತೂ ತನ್ನ ಆಕ್ರೋಶವನ್ನು ಹಲವು ಬಾರಿ ವ್ಯಕ್ತಪಡಿಸಿದೆ. ಮಾತ್ರವಲ್ಲ ದಿಲ್ಲಿಯಲ್ಲಿ ಪ್ರತಿಭಟನೆಗಳನ್ನೂ ನಡೆಸಿವೆ. ರಾಜ್ಯಗಳಿಗೆ ಬಲವಾದ ಆದಾಯ ಸಂರಕ್ಷಣಾ ಕಾರ್ಯವಿಧಾನ ರೂಪಿಸಬೇಕು, ಜಿಎಸ್‌ಟಿ ಪರಿಹಾರ ಸೆಸ್‌ನಂತೆಯೇ ಆದಾಯ ನಷ್ಟಕ್ಕೆ ಸಂಪೂರ್ಣ ಪರಿಹಾರ ನೀಡಬೇಕು ಎಂದು ಕರ್ನಾಟಕ ಸರಕಾರ ಕೇಂದ್ರವನ್ನು ಒತ್ತಾಯಿಸಿದೆ. ಹಣಕಾಸಿನ ಸಮಾನತೆ ಮತ್ತು ಸಹಕಾರಿ ಒಕ್ಕೂಟ ಪುನಃಸ್ಥಾಪಿಸಲು ತಂಬಾಕಿನ ಮೇಲಿನ ಅಬಕಾರಿ ಸುಂಕ ಮತ್ತು ಪಾನ್ ಮಸಾಲಾ ಮೇಲಿನ ಸೆಸ್‌ನ್ನು 50ಃ50 ಅನುಪಾತದಲ್ಲಿ ಕೇಂದ್ರ ಹಾಗೂ ರಾಜ್ಯ ಹಂಚಿಕೊಳ್ಳಬೇಕು ಎಂಬ ಬೇಡಿಕೆಯನ್ನು ವಿತ್ತ ಸಚಿವರ ಮುಂದಿಟ್ಟಿದೆ.
ಜಿ ರಾಮ್ ಜಿ ಕಾಯ್ದೆಯು ರಾಜ್ಯದ ಮೇಲೆ ಹೆಚ್ಚುವರಿ ಹೊರೆಯನ್ನು ಹಾಕಲಿದೆ. ಜಿ ರಾಮ್‌ಜಿ ಯಶಸ್ವಿಯಾಗಬೇಕಾದರೆ ಕರ್ನಾಟಕಕ್ಕೆ ಸುಮಾರು 2,000 ಕೋಟಿ ರೂಪಾಯಿ ಬೇಕಾಗುತ್ತದೆ. ಇದು ಬರೇ ಕರ್ನಾಟಕ ಮಾತ್ರವಲ್ಲ ಎಲ್ಲ ರಾಜ್ಯಗಳಿಗೂ ಹೆಚ್ಚುವರಿ ಹೊರೆಯಾಗಿದೆ. ಈ ಯೋಜನೆ ಯಶಸ್ವಿಯಾಗಿ ಮುಂದುವರಿಯಬೇಕಾದರೆ ಯೋಜನೆಯನ್ನು ಮರು ಪರಿಶೀಲಿಸುವುದು ಅತ್ಯಗತ್ಯವಾಗಿದೆ. ಇಲ್ಲವಾದರೆ ಹಂತ ಹಂತವಾಗಿ ಉದ್ಯೋಗ ಖಾತ್ರಿ ಯೋಜನೆ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತದೆ. ಒಂದು ವೇಳೆ ಇದು ನಿಂತು ಹೋದರೆ ಗ್ರಾಮೀಣ ಪ್ರದೇಶದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಈ ಹಿಂದೆ ಬಜೆಟ್‌ನಲ್ಲಿ ಘೋಷಿಸಿರುವ ಸಾವಿರಾರು ಕೋಟಿ ರೂಪಾಯಿಗಳನ್ನು ಕೇಂದ್ರ ಸರಕಾರ ಇನ್ನೂ ಬಿಡುಗಡೆ ಮಾಡಿಲ್ಲ. ವಿಪತ್ತು ಪರಿಹಾರ ನಿಧಿಯ ಅನುದಾನಗಳನ್ನು ಉಳಿಸಿಕೊಂಡಿದೆ. ಬಾಕಿ ಉಳಿಸಿರುವ ಹಣವನ್ನು ಕೇಳಿದಾಗಲೆಲ್ಲ ವಿತ್ತ ಸಚಿವರು ಹೊಣೆಗೇಡಿ ಹೇಳಿಕೆಗಳನ್ನು ನೀಡುತ್ತಾ ರಾಜ್ಯಗಳನ್ನು ವಂಚಿಸುತ್ತಾ ಬಂದಿದ್ದಾರೆ. ರಾಜ್ಯಗಳನ್ನು ಯಶಸ್ವಿಯಾಗಿ ವಂಚಿಸುವುದನ್ನೇ ಕೇಂದ್ರ ಬಜೆಟ್ ಎಂದು ಕರೆಯುವುದಾದರೆ ಆ ಬಜೆಟ್ ಮಂಡನೆ ಯಾವ ವಾರ ನಡೆದರೇನು? ಯಾವ ಕಟ್ಟಡದಲ್ಲಿ ನಡೆದರೇನು? ರಾಜ್ಯಗಳ ಜೊತೆಗೆ ಆರ್ಥಿಕ ಸಮನ್ವಯವನ್ನು ಸಾಧಿಸದೇ ವಿತ್ತ ಸಚಿವರು ಮಂಡಿಸುವ ಬಜೆಟ್ ಯಶಸ್ವಿಯಾಗದು ಎನ್ನುವುದನ್ನು ಕೇಂದ್ರ ಅರಿತುಕೊಂಡಷ್ಟು ಒಕ್ಕೂಟ ವ್ಯವಸ್ಥೆಯ ಭವಿಷ್ಯದ ದೃಷ್ಟಿಯಿಂದ ಉತ್ತಮ ವಾಗಿದೆ.







