ಅಸುರಕ್ಷಿತ ಅಪಾಯಕಾರಿ ಆಹಾರ

ಸಾಂದರ್ಭಿಕ ಚಿತ್ರ (AI)
ಅಸುರಕ್ಷಿತ ಆಹಾರದ ಬಗ್ಗೆ ತೀವ್ರ ಆತಂಕಗಳು ವ್ಯಕ್ತಪಡಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಬಳಸಿದ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುವುದನ್ನು ನಿಯಂತ್ರಿಸಲು ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗುತ್ತಿದ್ದು ನೂತನ ವ್ಯವಸ್ಥೆಯನ್ನು ಮೂರು ತಿಂಗಳೊಳಗೆ ಅನುಷ್ಠಾನಕ್ಕೆ ತರುವುದಾಗಿ ಹೇಳಿದ್ದಾರೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗವು ಈ ಆ್ಯಪ್ ಅಳವಡಿಸಿಕೊಳ್ಳಲು ಮುಂದಾಗಿದೆ ಎಂದು ಅವರು ತಿಳಿಸಿದ್ದಾರೆ. ಜನಸಾಮಾನ್ಯರು ಅನಾರೋಗ್ಯಕ್ಕೆ ಒಳಗಾಗುವುದನ್ನು ತಡೆಯಲು, ನೂತನ ವ್ಯವಸ್ಥೆ ಉಪಯೋಗವಾಗಲಿದೆ. ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್ಎಸ್ಎಸ್ಎಐ) ಪ್ರಕಾರ ಅಡುಗೆ ಎಣ್ಣೆಯನ್ನು ಮರು ಬಳಕೆ ಮಾಡುವಂತಿಲ್ಲ. ಈ ದಿಸೆಯಲ್ಲಿ ಜಾರಿ ಮಾಡುತ್ತಿರುವ ನೂತನ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಅನುಷ್ಠಾನಕ್ಕೆ ತರಲಾಗುವುದೆಂದು ಸಚಿವರು ಹೇಳಿದ್ದಾರೆ.
ನಗರೀಕರಣದ ಪ್ರಕ್ರಿಯೆ ಹೆಚ್ಚಾಗುತ್ತಿದ್ದಂತೆ ಜನಸಾಮಾನ್ಯರ ಬದುಕಿನಲ್ಲಿ ಹೋಟೆಲ್, ರೆಸ್ಟೋರೆಂಟ್ಗಳ ಮೇಲಿನ ಅವಲಂಬನೆ ಹೆಚ್ಚಾಗುತ್ತಿದೆ.ಸಣ್ಣಪುಟ್ಟ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಹೋಟೆಲ್ಗಳ ಪಾತ್ರ ಮುಖ್ಯವಾಗಿದೆ. ಆದರೆ ಹಣ ತೆತ್ತು ಆಹಾರ ಸಾಮಗ್ರಿಗಳನ್ನು ಹೋಟೆಲ್ಗಳಲ್ಲಿ ಖರೀದಿಸಿ ಸೇವಿಸುವ ಜನರಿಗೆ ಎಂಥ ಆಹಾರ ಸಿಗುತ್ತಿದೆ? ಎಂಥ ವಾತಾವರಣದಲ್ಲಿ ಈ ಆಹಾರವನ್ನು ತಯಾರಿಸಲಾಗುತ್ತದೆ ಎಂಬ ಬಗ್ಗೆ ಕೂಡ ಸರಕಾರ ನಿಗಾ ವಹಿಸಬೇಕಾಗಿದೆ. ಇದು ಕರ್ನಾಟಕ ಇಲ್ಲವೇ ಯಾವುದೇ ರಾಜ್ಯದ, ಪ್ರದೇಶದ ಪ್ರಶ್ನೆಯಲ್ಲ. ದೇಶವ್ಯಾಪಿ ಇದೇ ಪರಿಸ್ಥಿತಿ ಇದೆ. ಇತ್ತೀಚೆಗೆ ಗುಜರಾತ್ನ ಅಹಮದಾಬಾದ್ ಮಹಾನಗರ ಪಾಲಿಕೆ ತನ್ನ ವ್ಯಾಪ್ತಿಯ ೧೧,೦೦೦ ಹೋಟೆಲ್ಗಳ ಅಡುಗೆ ಮನೆಯಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ಗ್ರಾಹಕರ ಕಣ್ಣಿಗೆ ಕಾಣುವಂತೆ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಿದೆ. ನಾಗರಿಕರ ಆರೋಗ್ಯ ಹಾಗೂ ನೈರ್ಮಲ್ಯದ ದೃಷ್ಟಿಯಿಂದ ಇದು ಶ್ಲಾಘನೀಯ ಕ್ರಮವಾಗಿದೆ.
ಅಡುಗೆ ಎಣ್ಣೆಯ ಮರು ಬಳಕೆ ಮಾತ್ರವಲ್ಲ, ಗಿರಾಕಿಗಳ ನಾಲಿಗೆಯ ರುಚಿ ಹೆಚ್ಚಿಸುವ ಸಲುವಾಗಿ ಅಪಾಯಕಾರಿ ರಾಸಾಯನಿಕಗಳನ್ನು, ಬಣ್ಣಗಳನ್ನು ಹೋಟೆಲ್ ತಿಂಡಿಗಳಲ್ಲಿ ಬಳಸಲಾಗುತ್ತದೆ ಎಂಬ ದೂರುಗಳೂ ಇವೆ. ಈ ಬಣ್ಣವನ್ನು ಬಳಸಿ ಮಾಡಿದ ತಿಂಡಿಗಳು ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಉಂಟು ಮಾಡುತ್ತವೆ. ಗೋಬಿ ಮಂಚೂರಿಯಂತಹ ಯುವಕ-ಯುವತಿಯರು ಬಯಸುವ ತಿಂಡಿಯಲ್ಲಿ ಬಣ್ಣ ಮತ್ತು ರುಚಿ ಹೆಚ್ಚಿಸುವ ರಾಸಾಯನಿಕಗಳನ್ನು ಬಳಸಲಾಗುತ್ತದೆ ಎಂಬುದು ಸಚಿವರಿಗೂ ಗೊತ್ತಿದೆ. ಹೋಟೆಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ತಾವು ತಿನ್ನುವ ಆಹಾರವನ್ನು ಹೇಗೆ ಸಿದ್ಧಪಡಿಸಲಾಗುತ್ತದೆ ಎಂಬುದನ್ನು ತಿಳಿಯುವ ಹಕ್ಕು ಪ್ರತಿಯೊಬ್ಬ ಗ್ರಾಹಕನಿಗೂ ಇದೆ.
ಬಹುತೇಕ ಯಾವುದೇ ಹೋಟೆಲ್ಗೆ ಹೋದರೂ ಅಲ್ಲಿ ‘ಅಡುಗೆ ಮನೆಗೆ ಪ್ರವೇಶವಿಲ್ಲ’ ಎಂಬ ಬೋರ್ಡು ಕಣ್ಣಿಗೆ ಕಾಣುತ್ತದೆ. ಹೀಗಾಗಿ ಅಲ್ಲಿ ಆಹಾರ ಸಾಮಗ್ರಿಗಳು ಹೇಗೆ ತಯಾರಾಗುತ್ತವೆ ಎಂಬುದು ಗ್ರಾಹಕರಿಗೆ ಗೊತ್ತಾಗುವುದಿಲ್ಲ. ಆದರೆ ಭಾರತೀಯ ಆಹಾರ ಸುರಕ್ಷತೆಯ ಮಾನದಂಡಗಳ ಪ್ರಾಧಿಕಾರ (ಎಫ್ಎಸ್ಎಸ್ಎಐ) ಹಾಗೂ ವಿವಿಧ ರಾಜ್ಯಗಳ ಆಹಾರ ಮತ್ತು ಔಷಧ ಆಡಳಿತ (ಎಫ್ಡಿಎ)ಅಧಿಕಾರಿಗಳು ದೇಶದ ಹಲವಾರು ಕಡೆ ಪ್ರಸಿದ್ಧ ಹೋಟೆಲ್ಗಳ ಮೇಲೆ ನಡೆಸಿದ ದಿಢೀರ್ ದಾಳಿಗಳು ಸಾರ್ವಜನಿಕರ ಗಮನವನ್ನು ಸೆಳೆದಿವೆ. ಈ ಹೆಸರಾಂತ ಹೋಟೆಲ್ಗಳ ಒಳಗೆ ಶೋಧಿಸಿದಾಗ ಕೊಳೆತ ತರಕಾರಿಗಳು ಅಪಾಯಕಾರಿ ಬಣ್ಣದ ಮಿಶ್ರಣಗಳು, ನೊಣ, ಜಿರಳೆಗಳು ಕಂಡವು.
ಬಹುತೇಕ ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಅತ್ಯಂತ ದುಬಾರಿ ಹಣವನ್ನು ತೆತ್ತರೂ ಗ್ರಾಹಕರಿಗೆ ಪರಿಶುದ್ಧ ಆಹಾರ ಸಿಗುತ್ತಿಲ್ಲ. ಹೋಟೆಲ್ಗಳ ಅಡುಗೆ ಮನೆಯ ವಾತಾವರಣ ಹೇಗಿದೆ ಎಂಬುದು ಗ್ರಾಹಕರಿಗೂ ಗೊತ್ತಿರುವುದಿಲ್ಲ. ಹಾಗಾಗಿಯೇ ಹೋಟೆಲ್ಗಳ ಅಡುಗೆ ಮನೆಗಳಲ್ಲಿ ಸಿಸಿಟಿವಿ ಅಳವಡಿಸಿ ಡೈನಿಂಗ್ ಜಾಗದಲ್ಲಿರುವ ಗ್ರಾಹಕರಿಗೆ ಕಾಣುವಂತೆ ಸಣ್ಣ ಎಲ್ಇಡಿ ಪರದೆಗಳಲ್ಲಿ ಅಡುಗೆ ಮನೆಯ ನೇರ ದೃಶ್ಯಾವಳಿಯನ್ನು ಪ್ರದರ್ಶಿಸುವುದರಿಂದ ಹೋಟೆಲ್ಗಳ ಆಡಳಿತ ಮಂಡಳಿ ಹಾಗೂ ಅಡುಗೆ ಮಾಡುವ ಬಾಣಸಿಗರಲ್ಲಿ ಎಚ್ಚರಿಕೆ ಮತ್ತು ಜವಾಬ್ದಾರಿ ಹೆಚ್ಚುತ್ತದೆ. ಹೋಟೆಲ್ ಮಾಲಕರ ಲಾಭಕೋರತನ, ದುರಾಸೆ ಹಾಗೂ ಹೊಣೆಗೇಡಿತನಕ್ಕೆ ಕಡಿವಾಣ ಹಾಕಿದಂತಾಗುತ್ತದೆ. ಅಡುಗೆ ತಯಾರು ಮಾಡುವ ಸ್ಥಳ, ತರಕಾರಿ ತೊಳೆಯುವ ವಿಧಾನ ಹಾಗೂ ಅಡುಗೆಗೆ ಉಪಯೋಗಿಸುವ ಪಾತ್ರೆಗಳ ನೈರ್ಮಲ್ಯ ಪಾರದರ್ಶಕವಾಗಿ ಗ್ರಾಹಕರ ಕಣ್ಣಿಗೆ ಕಾಣಿಸಿದಾಗ ಹೋಟೆಲ್ ಸಿಬ್ಬಂದಿ ಕೂಡ ಕಟ್ಟುನಿಟ್ಟಿನ ನೈರ್ಮಲ್ಯ ನಿಯಮಗಳನ್ನು ಪಾಲಿಸಲೇಬೇಕಾಗುತ್ತದೆ. ಇದರಿಂದ ಗ್ರಾಹಕರ ಹಕ್ಕುಗಳ ರಕ್ಷಣೆ ಮಾತ್ರವಲ್ಲದೆ ಹೋಟೆಲ್ ಉದ್ಯಮದ ಮೇಲಿನ ಸಾರ್ವಜನಿಕರ ವಿಶ್ವಾಸ ಕೂಡ ಹೆಚ್ಚಾಗುತ್ತದೆ.
ಸಾರ್ವಜನಿಕರಿಗೆ ಪರಿಶುದ್ಧ ಆಹಾರವನ್ನು ಒದಗಿಸುವ ದೃಷ್ಟಿಯಿಂದ ಕೈಗೊಂಡ ಇಂತಹ ಕ್ರಮಗಳನ್ನು ಹೋಟೆಲ್, ರೆಸ್ಟೋರೆಂಟ್ ಉದ್ಯಮಿಗಳು ಒಪ್ಪಿಕೊಂಡು ಸಹಕಾರ ನೀಡಬೇಕು. ಇದನ್ನು ಆಡಳಿತಾತ್ಮಕ ವೆಚ್ಚ ಅಥವಾ ಹೊರೆ ಎಂದು ಭಾವಿಸಬಾರದು. ಇದರಿಂದ ಗ್ರಾಹಕರಿಗೂ, ಹೋಟೆಲ್ ಉದ್ಯಮಿಗಳಿಗೂ ಒಳ್ಳೆಯದಾಗುತ್ತದೆ.
ಆಹಾರ ಸುರಕ್ಷತಾ ಇಲಾಖೆ ಕೂಡ ಕೇವಲ ದೂರುಗಳು ಬಂದಾಗ ಮಾತ್ರ ಕಾಟಾಚಾರದ ಅಪರೂಪದ ದಾಳಿ ನಡೆಸಬಾರದು. ಅಹಮದಾಬಾದ್ನಲ್ಲಿ ನಡೆಸಿದ ಪ್ರಯೋಗವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗಂಭೀರವಾಗಿ ಪರಿಗಣಿಸಿ ದೇಶವ್ಯಾಪಿಯಾಗಿ ಎಲ್ಲ ಸಣ್ಣ ಹಾಗೂ ದೊಡ್ಡ ಕಡ್ಡಾಯಗೊಳಿಸಬೇಕು. ಸಾರ್ವಜನಿಕರ ಆರೋಗ್ಯ ಮತ್ತು ಜೀವದ ರಕ್ಷಣೆ ಎಲ್ಲಕ್ಕಿಂತ ಮುಖ್ಯವಾಗಬೇಕು. ಸ್ವಚ್ಛ ಮತ್ತು ಸುರಕ್ಷಿತ ಆಹಾರವನ್ನು ಪಡೆಯುವದು ನಾಗರಿಕರ ಮೂಲಭೂತ ಹಕ್ಕು. ಆಹಾರ ತಯಾರಿಕೆ ಹಾಗೂ ನೈರ್ಮಲ್ಯದಲ್ಲಿ ಪಾರದರ್ಶಕತೆ ತರುವ ಇಂಥ ಕಟ್ಟುನಿಟ್ಟಿನ ನಿಯಮಗಳನ್ನು ದೇಶವ್ಯಾಪಿಯಾಗಿ ಜಾರಿಗೆ ತರುವ ಮೂಲಕ ನಕಲಿ, ಅನಾರೋಗ್ಯಕರ, ಕಳಪೆ ಅನೈರ್ಮಲ್ಯ ಆಹಾರ ತಯಾರಿಕೆಗೆ ಶಾಶ್ವತ ತಡೆಯನ್ನು ಹಾಕಬೇಕಾಗಿದೆ.






