ಅಸುರಕ್ಷಿತ ಆಹಾರ ಆರೋಗ್ಯಕ್ಕೆ ಮಾರಕ

ಸಾಂದರ್ಭಿಕ ಚಿತ್ರ (AI)
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಲಾಭಕೋರ ಬಂಡವಾಳಶಾಹಿ ವ್ಯವಸ್ಥೆಯಲ್ಲಿ, ಅದರಲ್ಲೂ ಮಾರುಕಟ್ಟೆ ಆರ್ಥಿಕತೆಯನ್ನು ಹೊಂದಿರುವ ಇಂದಿನ ದಿನಗಳಲ್ಲಿ ಆಹಾರ ಪದಾರ್ಥಗಳು ಸೇರಿದಂತೆ ಯಾವುದೇ ಪದಾರ್ಥದ ಉತ್ಪಾದನೆ ಕೇವಲ ಲಾಭದ ದೃಷ್ಟಿಯನ್ನು ಹೊಂದಿರುತ್ತದೆ. ಜನ ಸಾಮಾನ್ಯರ ಅಗತ್ಯ ಮತ್ತು ಆರೋಗ್ಯ ಇಲ್ಲಿ ಮುಖ್ಯವಾಗುವುದಿಲ್ಲ. ಇದಕ್ಕೆ ತೀರಾ ಇತ್ತೀಚಿನ ಉದಾಹರಣೆ ಎಂದರೆ ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ರಾಜಧಾನಿ ಬೆಂಗಳೂರಿನಲ್ಲಿ ನಡೆದ ದಾಳಿಗಳಿಂದ ಅನೇಕ ಕಹಿ ಸತ್ಯಗಳು ಬಯಲಿಗೆ ಬಂದಿವೆ.
ರಸ್ತೆ ಬದಿಯಲ್ಲಿ ಸಣ್ಣ ಅಂಗಡಿಗಳಲ್ಲಿ ಮಾರಾಟ ಮಾಡಲಾಗುವ ಆಹಾರ ಪದಾರ್ಥಗಳು ಮಾತ್ರವಲ್ಲ ಹೆಚ್ಚು ಹಣ ತೆತ್ತು ಸುರಕ್ಷಿತವೆಂದು ಖರೀದಿಸಿ ಸೇವಿಸುವ ದುಬಾರಿ ಪಂಚತಾರಾ ಹೋಟೆಲ್ಗಳಲ್ಲಿ ಸೇವಿಸುವ ಆಹಾರ ಕೂಡ ವಿಷಕಾರಿ ಎಂಬುದು ಈಗ ಸಾಬೀತಾಗಿದೆ. ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು 26 ಪಂಚತಾರಾ ಹೋಟೆಲ್ಗಳ ಮೇಲೆ ನಡೆಸಿರುವ ದಿಢೀರ್ ದಾಳಿಯಲ್ಲಿ ಇದು ಸಾಬೀತಾಗಿದೆ.
ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಕಳೆದ ವಾರ ದಾಳಿ ನಡೆಸಿದಾಗ ಅವಧಿ ಮೀರಿದ ಮಾಂಸ, ಕೊಳೆತ ತರಕಾರಿಗಳು ಹಾಗೂ ಈ ಮಾಂಸಾಹಾರದಲ್ಲಿ ಹಾಗೂ ಸಸ್ಯಾಹಾರದಲ್ಲಿ ಹುಳಗಳು ಕಂಡು ಬಂದಿವೆ. ಜನಸಾಮಾನ್ಯರು ಸುರಕ್ಷಿತವೆಂದು ಬ್ರಾಂಡ್ ಹೆಸರನ್ನು ನೋಡಿ ದುಬಾರಿ ಹಣವನ್ನು ನೀಡಿ ಆಹಾರ ಪದಾರ್ಥಗಳನ್ನು ಖರೀದಿಸಿ ಮೋಸ ಹೋಗುತ್ತಾರೆ. ಇದು ಹೋಟೆಲ್ಗಳ ಮಾಲಕರ ಲಾಭಕೋರತನ ಹಾಗೂ ಧನ ದಾಹಕ್ಕೆ ಸಾಕ್ಷಿಯಾಗಿದೆ. ಈ ವ್ಯವಸ್ಥೆಯಲ್ಲಿ ದುಬಾರಿ ಹಣವನ್ನು ತೆತ್ತು ಕೊಳ್ಳುವ ಆಹಾರ ಪದಾರ್ಥಗಳು ಕೂಡ ಸುರಕ್ಷಿತವಾಗಿರುವುದಿಲ್ಲ ಎಂಬುದು ಇದರಿಂದ ಸಾಬೀತಾಗಿದೆ. ಹೀಗಾಗಿ ಬಡವರು, ಜನಸಾಮಾನ್ಯರು ಹಾಗೂ ಕೋಟ್ಯಧೀಶರು ಕೂಡಾ ಹೋಟೆಲ್, ರೆಸ್ಟೋರೆಂಟ್ಗಳು ಸೇರಿದಂತೆ ಎಲ್ಲಾ ಕಡೆ ಒಂದೇ ತರದ ವಿಷಕಾರಿ ಆಹಾರ ಸೇವಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಇಂಥ ಆಹಾರವನ್ನು ಸೇವಿಸಿ, ಅಜೀರ್ಣ ಮತ್ತು ಕರುಳಿನ ಸೋಂಕಿನಂಥ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಜನರು ಬಳಲುತ್ತಿದ್ದಾರೆ.
ಆಹಾರ ಸುರಕ್ಷತಾ ಇಲಾಖೆಯಲ್ಲಿ ದಕ್ಷ ಪ್ರಾಮಾಣಿಕ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರೆ ಇಂಥ ಅಕ್ರಮಗಳನ್ನು ತಡೆಯಬಹುದು. ಮಹಾರಾಷ್ಟ್ರದಲ್ಲಿ ಆಹಾರ ಸುರಕ್ಷತಾ ಇಲಾಖೆಯಲ್ಲಿ ತುಕಾರಾಮ ಮುಂಡೆ ಎಂಬ ಅಧಿಕಾರಿ ಇದ್ದುದರಿಂದ ಕಟ್ಟುನಿಟ್ಟಿನ ಕಾರ್ಯಾಚರಣೆಯಿಂದ ಹಲವಾರು ಅಕ್ರಮಗಳು ಬಯಲಿಗೆ ಬಂದಿದ್ದವು. ಕರ್ನಾಟಕದಲ್ಲೂ ಇಂಥ ಪ್ರಯತ್ನಗಳು ನಡೆಯಬೇಕಾಗಿದೆ.
ಸಣ್ಣಪುಟ್ಟ ಅಂಗಡಿ, ಹೋಟೆಲ್ಗಳಲ್ಲಿ ಮಾತ್ರ ತಪಾಸಣೆ ಕಾರ್ಯಾಚರಣೆ ನಡೆದರೆ ಸಾಲದು, ಪಂಚತಾರಾ ಹೋಟೆಲ್ಗಳ ಜೊತೆಗೆ ಕ್ಲಬ್ಗಳು, ಸರಕಾರಿ ಕ್ಯಾಂಟಿನ್ಗಳಲ್ಲಿ ಕೂಡ ಕಾರ್ಯಾಚರಣೆ ನಡೆಯಬೇಕಾಗಿದೆ. ಆಹಾರ ಸುರಕ್ಷತಾ ತಪಾಸಣೆಗಳು ಆಗೊಮ್ಮೆ, ಈಗೊಮ್ಮೆ, ನೆನಪಾದಾಗೊಮ್ಮೆ ಕಾಟಾಚಾರಕ್ಕಾಗಿ ನಡೆಸದೆ ನಿರಂತರವಾಗಿ ನಡೆಯುತ್ತಲೇ ಇರಬೇಕು. ಅಡುಗೆ ಮನೆಯಲ್ಲಿನ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ, ಚರಂಡಿ ವ್ಯವಸ್ಥೆಯನ್ನು ಪರಿಶೀಲನೆ ಮಾಡುವುದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಹೊಣೆಗಾರಿಕೆಯಾಗಿದೆ.
ಆಹಾರ ಸುರಕ್ಷತೆಯ ಮಾರ್ಗಸೂಚಿಯನ್ನು ಹೋಟೆಲ್ಗಳು, ರೆಸ್ಟೋರೆಂಟ್ಗಳು, ಕ್ಯಾಟರಿಂಗ್ ಸಂಸ್ಥೆಗಳು, ವಿವಿಧ ಸಂಸ್ಥೆಗಳ ಕ್ಯಾಂಟೀನ್ಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಬಂಧಿಸಿದ ಇಲಾಖೆಗಳು ನಿಗಾ ವಹಿಸಬೇಕು. ಆಹಾರ ಸಾಮಗ್ರಿಗಳ ಸಂಗ್ರಹದ ವ್ಯವಸ್ಥೆ, ಶೀತಲೀಕರಣ, ಕೀಟ ನಿಯಂತ್ರಣ, ಹಸಿ ಹಾಗೂ ಬೇಯಿಸಿದ ಆಹಾರ ಪದಾರ್ಥಗಳನ್ನು ಪ್ರತ್ಯೇಕವಾಗಿ ಇರಿಸುವುದು ಇವೆಲ್ಲವುಗಳಲ್ಲಿ ವ್ಯತ್ಯಯವಾಗದಂತೆ ಎಚ್ಚರ ವಹಿಸಬೇಕು. ಗ್ರಾಹಕರ ಆರೋಗ್ಯವನ್ನು ಅಪಾಯಕ್ಕೆ ತಳ್ಳುವ ಲೋಪ ನಡೆಯದಂತೆ ನೋಡಿಕೊಳ್ಳಬೇಕು. ಎಲ್ಲವನ್ನೂ ಸಂಬಂಧಿಸಿದ ಸರಕಾರಿ ಇಲಾಖೆಯ ಅಧಿಕಾರಿಗಳೇ ಮಾಡಬೇಕೆಂದಿಲ್ಲ. ಸಂಬಂಧಿಸಿದ ಹೋಟೆಲ್, ರೆಸ್ಟೋರೆಂಟ್ಗಳ ಮಾಲಕರ ಹೊಣೆಗಾರಿಕೆ ಕೂಡ ಮಹತ್ವದ್ದಾಗಿದೆ ಎಂಬುದನ್ನು ಮರೆಯಬಾರದು.
ಗ್ರಾಹಕರಿಗೆ ಸುರಕ್ಷಿತ ಆಹಾರ ಪದಾರ್ಥಗಳನ್ನು ಪೂರೈಸುವುದು ಆಹಾರೋದ್ಯಮಿಗಳ ಕರ್ತವ್ಯವಾಗಿದೆ. ಪ್ರತಿನಿತ್ಯ ಆಂತರಿಕ ತಪಾಸಣೆ, ಅಡುಗೆ ಮನೆಗಳ ಸ್ವಚ್ಛತೆ ನಡೆಯುತ್ತಲೇ ಇರಬೇಕು. ಹಾಗೆಂದು ಸಂಬಂಧಿಸಿದ ಸರಕಾರಿ ಇಲಾಖೆಗಳು ನಿರ್ಲಕ್ಷ್ಯ ಮಾಡುವಂತಿಲ್ಲ, ಹಾಗೆಂದು ಸಣ್ಣಪುಟ್ಟ ತಪ್ಪುಗಳಿಗಾಗಿ ಸರಕಾರಿ ಅಧಿಕಾರಿಗಳು ಹೋಟೆಲ್ಗಳಿಗೆ ಕಿರಿಕಿರಿಯನ್ನುಂಟು ಮಾಡಬಾರದು.
ರಾಜಧಾನಿ ಬೆಂಗಳೂರು ಮಾತ್ರವಲ್ಲ, ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳ ತಾಲೂಕು ಕೇಂದ್ರಗಳಲ್ಲಿ ಮತ್ತು ಪಟ್ಟಣಗಳಲ್ಲಿ ಇರುವ ಹೋಟೆಲ್ಗಳು, ರೆಸ್ಟೋರೆಂಟ್ಗಳಲ್ಲಿ ಸುರಕ್ಷಿತ ಆಹಾರ ಪದಾರ್ಥಗಳು ಸಿಗುತ್ತಿಲ್ಲ. ಇದರಿಂದಾಗಿ ನೂರೆಂಟು ಆರೋಗ್ಯ ಸಮಸ್ಯೆಗಳು ಉಲ್ಬಣಿಸುತ್ತಿವೆ. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಆಹಾರ ಸುರಕ್ಷತಾ ಇಲಾಖೆಯೂ ಕೂಡ ಸರಿಯಾಗಿ ತಪಾಸಣೆ ನಡೆಸುತ್ತಿಲ್ಲ ಎಂಬ ದೂರುಗಳಿವೆ. ಹಾಗಾಗಿ ರಾಜ್ಯ ಸರಕಾರ ಈ ಬಗ್ಗೆ ಎಚ್ಚರ ವಹಿಸಿ ಹೋಟೆಲ್, ರೆಸ್ಟೋರೆಂಟ್ಗಳನ್ನೇ ಆಶ್ರಯಿಸಿದ ಸಾರ್ವಜನಿಕರಿಗೆ ಒಳ್ಳೆಯ ಪರಿಶುದ್ಧ ಆಹಾರ ಲಭಿಸುವಂತೆ ಕ್ರಮ ಕೈಗೊಳ್ಳಬೇಕು. ಇದರ ಬಗ್ಗೆ ನಿಗಾ ವಹಿಸಲು ವಿಶೇಷ ಕಾರ್ಯಪಡೆಯನ್ನು ರಚಿಸುವುದು ಅಗತ್ಯವಾಗಿದೆ. ಆಹಾರೋದ್ಯಮಿಗಳು ಸುರಕ್ಷತಾ ನಿಯಮಗಳ ಪಾಲನೆಗೆ ಬದ್ಧರಾಗಿರಬೇಕು. ಆಹಾರ ಸುರಕ್ಷತೆಯನ್ನು ಖಾತರಿ ಪಡಿಸಬೇಕು. ಗ್ಯಾಸ್ ಸಿಲಿಂಡರ್ ಸೇರಿ ಎಲ್ಲಾ ದವಸ ಧಾನ್ಯಗಳು ದುಬಾರಿಯಾಗಿರುವ ಇಂದಿನ ದಿನಗಳಲ್ಲಿ ಜನರಿಗೆ ಸುರಕ್ಷಿತ ಆಹಾರ ಒದಗಿಸುವುದು ಕಷ್ಟಕರವಾದರೂ ತಮ್ಮ ಲಾಭಾಂಶವನ್ನು ಕೊಂಚ ಕಡಿಮೆ ಮಾಡಿಕೊಂಡು ಆಹಾರ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು. ಸರಕಾರವೂ ಕೂಡ ಹೋಟೆಲ್, ರೆಸ್ಟೋರೆಂಟ್ಗಳಿಗೆ ರಿಯಾಯಿತಿ ದರದಲ್ಲಿ ಸಿಲಿಂಡರ್ ಮೊದಲಾದ ಅವಶ್ಯಕ ಸಾಮಗ್ರಿಗಳನ್ನು ಒದಗಿಸಬೇಕು.






