ಶಾಂತಿಯ ತೈಲ ನಿಕ್ಷೇಪಕ್ಕೆ ಕೊಳ್ಳಿ ಇಟ್ಟ ಅಮೆರಿಕ

PC: x.com/faridazmaritim
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ವೆನೆಝುವೆಲಾದ ಮೇಲೆ ಅಮೆರಿಕ ಶನಿವಾರ ಮುಂಜಾನೆ ನಡೆಸಿದ ದಾಳಿ ಅನಿರೀಕ್ಷಿತವಾಗಿರಲಿಲ್ಲ. ಕಳೆದ ಅಕ್ಟೋಬರ್ನಲ್ಲಿ ಶಾಂತಿ ನೊಬೆಲ್ಗೆ ವೆನೆಝುವೆಲಾದ ವಿರೋಧ ಪಕ್ಷದ ನಾಯಕಿ ಮರಿಯಾ ಕೊರಿನಾ ಮಚಾದೋ ಅವರ ಆಯ್ಕೆ ಮಾಡಿದ್ದೇ ಇಂತಹದೊಂದು ದಾಳಿಗೆ ಬೇಕಾದ ವಾತಾವರಣವನ್ನು ನಿರ್ಮಾಣ ಮಾಡಲು. ಕಳೆದ ಶಾಂತಿ ನೊಬೆಲ್ ಸ್ಪರ್ಧೆಯಲ್ಲಿ ಸ್ವತಃ ತನ್ನ ಹೆಸರನ್ನೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿಕೊಂಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಪ್ರಶಸ್ತಿ ವೆನೆಝುವೆಲಾದ ವಿರೋಧ ಪಕ್ಷದ ನಾಯಕಿ ಮರಿಯಾ ಅವರ ಪಾಲಾಯಿತು. ಆದರೆ ಮರಿಯಾ ಅವರು ತನಗೆ ಸಿಕ್ಕಿದ ಗೌರವವನ್ನು ಡೊನಾಲ್ಡ್ ಟ್ರಂಪ್ಗೆ ಅರ್ಪಿಸುವ ಮೂಲಕ, ತನ್ನ ಋಣವನ್ನು ತೀರಿಸಿಕೊಂಡರು. ಮರಿಯಾ ಅವರು ವೆನೆಝುವೆಲಾದ ಸರ್ವಾಧಿಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ ಎನ್ನುವುದು ಶಾಂತಿ ನೊಬೆಲ್ ನೀಡುವುದಕ್ಕೆ ಕಾರಣವಾಗಿತ್ತು. ಆದರೆ ಅದೇ ಹೊತ್ತಿಗೆ ಗಾಝಾದಲ್ಲಿ ಮಕ್ಕಳು, ಮಹಿಳೆಯರ ಮಾರಣ ಹೋಮ ನಡೆಸುತ್ತಿದ್ದ ಸರ್ವಾಧಿಕಾರಿ ಇಸ್ರೇಲ್ನ ಜೊತೆಗೆ ಮರಿಯಾ ಮಚಾದೋ ಆತ್ಮೀಯ ಸಂಬಂಧ ಹೊಂದಿದ್ದರು. ಇಸ್ರೇಲ್-ಟ್ರಂಪ್ ಜೊತೆಗೆ ಕೈ ಜೋಡಿಸಿಕೊಂಡಿರುವ ಮರಿಯಾ ಈ ಜಗತ್ತಿಗೆ ನೀಡುವ ಶಾಂತಿಯ ಸ್ವರೂಪ ಏನು ಎನ್ನುವುದು ಶನಿವಾರ ಮುಂಜಾನೆಯ ಹೊತ್ತಿಗೆ ಜಗತ್ತಿಗೆ ಸ್ಪಷ್ಟವಾಗಿದೆ. ವೆನೆಝುವೆಲಾದ ರಾಜಧಾನಿ ಕ್ಯಾರಕಾಸ್ ಮೇಲೆ ಅಮೆರಿಕವು ಭಾರೀ ವಾಯುದಾಳಿಯನ್ನು ನಡೆಸಿದ್ದು ರಾತ್ರೋರಾತ್ರಿ ಅಲ್ಲಿನ ಅಧ್ಯಕ್ಷರನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದು, ವೆನೆಝುವೆಲಾವನ್ನೂ ಕೈ ವಶ ಮಾಡಿಕೊಂಡಿದೆ. ಅಷ್ಟೇ ಅಲ್ಲ, ‘ವೆನೆಝುವೆಲಾದ ಜನರ ಹಿತಾಸಕ್ತಿಗಳನ್ನು ರಕ್ಷಿಸದೆ ಯಾವುದೇ ನಾಯಕ ಅದನ್ನು ತನ್ನ ಕೈಗೆ ತೆಗೆದುಕೊಳ್ಳಲು ಅಮೆರಿಕ ಅವಕಾಶ ನೀಡುವುದಿಲ್ಲ’ ಎಂದು ಟ್ರಂಪ್ ತಿಳಿಸಿದ್ದಾರೆ. ಅಲ್ಲಿನ ತೈಲ ನಿಕ್ಷೇಪಗಳ ಮೇಲೆ
ನಿಯಂತ್ರಣ ಸಾಧಿಸುವ ಅಮೆರಿಕದ ಮೂರು ದಶಕಗಳ ಪ್ರಯತ್ನ ಕೊನೆಗೂ ಯಶಸ್ವಿಯಾಗಿದೆ.
ಹಿಂದೆ ಇರಾಕ್ನ ಮೇಲೆ ದಾಳಿ ನಡೆಸಲು ಅಮೆರಿಕವು ‘ರಾಸಾಯನಿಕ ಶಸ್ತ್ರಾಸ್ತ್ರ’ದ ನೆಪವನ್ನು ಮುಂದಿಟ್ಟಿತ್ತು. ಇರಾಕನ್ನು ಸರ್ವನಾಶ ಮಾಡಿದ ಬಳಿಕ ಗೊತ್ತಾಯಿತು, ಆ ದೇಶ ಯಾವುದೇ ರಾಸಾಯನಿಕ ಶಸ್ತ್ರಾಸ್ತ್ರವನ್ನು ಹೊಂದಿಲ್ಲ ಎನ್ನುವುದು. ಇದೀಗ ವೆನೆಝುವೆಲಾ ಮೇಲೆ ದಾಳಿ ನಡೆಸಲು ಅಮೆರಿಕವು ‘ಡ್ರಗ್ಸ್ ಭಯೋತ್ಪಾದನೆ’ಯನ್ನು ಮುಂದಿಟ್ಟಿದೆ. ಈ ಹಿಂದೆ ಇಂಥದೇ ಸೇನಾ ಕಾರ್ಯಾಚರಣೆಯ ಮೂಲಕ ಪನಾಮದ ಮಾಜಿ ಸೇನಾ ನಾಯಕ ಮ್ಯಾನುವೆಲ್ ನೊರೀಗಾ ಅವರನ್ನು ಪದಚ್ಯುತಗೊಳಿಸಿತ್ತು. ವೆನೆಝುವೆಲಾದಂತೆ ಲ್ಯಾಟಿನ್ ಅಮೆರಿಕದ ಭಾಗವೇ ಆಗಿರುವ ಪನಾಮದ ಮೇಲೆ ೧೯೮೯ರಲ್ಲಿ ಅಮೆರಿಕದ ಸೇನಾ ಪಡೆಗಳು ದಾಳಿ ನಡೆಸಿ ನೊರೀಗಾ ಅವರನ್ನು ಬಂಧಿಸಿತ್ತು. ಭ್ರಷ್ಟಾಚಾರ ಮತ್ತು ಮಾದಕದ್ರವ್ಯ ದಂಧೆಯನ್ನು ಈ ಕಾರ್ಯಾಚರಣೆಗೆ ನೆಪವಾಗಿ ಬಳಸಿಕೊಂಡಿತ್ತು. ಅಮೆರಿಕವು ವೆನೆಝುವೆಲಾದ ನಾಗರಿಕರ ಹಿತಾಸಕ್ತಿಯ ಬಗ್ಗೆ ಮಾತನಾಡುತ್ತಿದೆಯಾದರೂ, ವೆನೆಝುವೆಲಾದ ಮಧ್ಯಂತರ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಡೆಲ್ಸಿ ರೊಡ್ರಿಗೆಸ್ ಅವರು ಈ ಕಾರ್ಯಾಚರಣೆಯನ್ನು ವಿರೋಧಿಸಿದ್ದಾರೆ ಮಾತ್ರವಲ್ಲ, ಮಡುರೊ ದಂಪತಿಯನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿದ್ದಾರೆ. ದೂರದರ್ಶನದಲ್ಲಿ ಪ್ರಸಾರಗೊಂಡ ಭಾಷಣದಲ್ಲಿ ರೊಡ್ರಿಗೆಸ್, ಈ ದಾಳಿಯು ಅಂತರ್ರಾಷ್ಟ್ರೀಯ ಕಾನೂನು ಮತ್ತು ವೆನೆಝುವೆಲಾದ ಸಾರ್ವಭೌಮತೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ. ‘‘ಈ ದೇಶದಲ್ಲಿ ಒಬ್ಬರೇ ಅಧ್ಯಕ್ಷರಿದ್ದಾರೆ. ಅವರ ಹೆಸರು ನಿಕೋಲಸ್ ಮಡುರೊ’’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಮೆರಿಕ ಈ ವಿಶ್ವದ ಹಲವು ಸರ್ವಾಧಿಕಾರಿ ಪ್ರಭುತ್ವಗಳ ಜೊತೆಗೆ ಕೈ ಜೋಡಿಸಿದೆ. ಸರ್ವಾಧಿಕಾರಿಗಳು ತನ್ನ ಹಿತಾಸಕ್ತಿಗೆ ಪೂರಕವಾಗಿರುವುದು ಅಮೆರಿಕದ ಅಗತ್ಯವಾಗಿದೆ. ಆದುದರಿಂದ, ಅಮೆರಿಕವು ಸರ್ವಾಧಿಕಾರಿ ಅಧ್ಯಕ್ಷನನ್ನು ಕಿತ್ತೊಗೆಯಲು ಈ ಕಾರ್ಯಾಚರಣೆ ನಡೆಸಿತು ಎನ್ನುವುದು ಅಣಕದ ಮಾತು. ಮಾದಕ ದ್ರವ್ಯ ಮಾಫಿಯಾದ ಹಿನ್ನೆಲೆಯಲ್ಲಿ ಇಂತಹ ದಾಳಿ ಅಮೆರಿಕಕ್ಕೆ ಅನಿವಾರ್ಯವಾಯಿತು ಎನ್ನುವುದೂ ಇನ್ನೊಂದು ದೊಡ್ಡ ಸುಳ್ಳಾಗಿದೆ. ವೆನೆಝುವೆಲಾ ಜೊತೆಗೆ ಅಮೆರಿಕದ ಸಂಘರ್ಷ ಇಂದು ನಿನ್ನೆಯದಲ್ಲ. ಅಮೆರಿಕಕ್ಕೆ ಕಣ್ಣಿರುವುದು ವೆನೆಝುವೆಲಾದಲ್ಲಿರುವ ತೈಲ ನಿಕ್ಷೇಪದ ಮೇಲೆ. ವೆನೆಝುವೆಲಾದ ಈ ಹಿಂದಿನ ಅಧ್ಯಕ್ಷ ಹ್ಯೂಗೋ ಚಾವೆಝ್ರನ್ನು ಕಿತ್ತೊಗೆಯುವುದಕ್ಕೂ ಅಮೆರಿಕ ಸಾಕಷ್ಟು ಸಂಚುಗಳನ್ನು ನಡೆಸಿತ್ತು. ಕಳೆದ ವರ್ಷ ಶಾಂತಿ ನೊಬೆಲ್ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದ ಮರಿಯಾ ಮಚಾದೋ ಅವರನ್ನು ಮುಂದಿಟ್ಟು ಅಮೆರಿಕ ನಡೆಸಿದ್ದ ಎಲ್ಲ ಸಂಚುಗಳನ್ನು ಚಾವೆಝ್ ವಿಫಲಗೊಳಿಸಿದ್ದರು. ೨೦೦೧ರಲ್ಲಿ ಚಾವೆಝ್ ಸರಕಾರ ವೆನೆಝುವೆಲಾದಲ್ಲಿರುವ ತೈಲ ಮತ್ತು ಅನಿಲ ನಿಕ್ಷೇಪಗಳ ಮೇಲೆ ಸರಕಾರದ ಹಕ್ಕನ್ನು ಪ್ರತಿಪಾದಿಸಿದ್ದೇ ಅಮೆರಿಕದ ಸಿಟ್ಟಿಗೆ ಕಾರಣವಾಗಿದೆ. ಹೊಸ ನೀತಿಯಂತೆ ತೈಲ ಪರಿಶೋಧನೆ ಮತ್ತು ಹೊರತೆಗೆಯುವಂತಹ ಪ್ರಮುಖ ಕಾರ್ಯಗಳನ್ನು ಸರಕಾರಿ ಕಂಪೆನಿಗಳಿಗೇ ವಹಿಸಲಾಯಿತು. ಖಾಸಗಿ ಮತ್ತು ವಿದೇಶಿ ಕಂಪೆನಿಗಳಿಗೆ ಸಂಸ್ಕರಣೆ, ಮಾರಾಟದಂತಹ ಸೀಮಿತ ಅವಕಾಶಗಳು ಮೀಸಲಾಯಿತು. ೧೯೯೦ರಲ್ಲಿ ಜಾರಿಗೆ ಬಂದ ಉದಾರೀಕರಣವನ್ನು ಬಳಸಿಕೊಂಡು ವೆನೆಝುವೆಲಾದ ತೈಲ ನಿಕ್ಷೇಪಗಳನ್ನು ದೋಚಲು ತುದಿಗಾಲಲ್ಲಿ ನಿಂತಿದ್ದ ಖಾಸಗಿ ಕಂಪೆನಿಗಳಿಗೆ ಹ್ಯೂಗೋ ಚಾವೆಝ್ ಜಾರಿಗೆ ತಂದ ಹೊಸ ಕಾನೂನು ಗಂಟಲ ಮುಳ್ಳಾಯಿತು. ಪರಿಣಾಮವಾಗಿ ಅಮೆರಿಕದ ತೈಲ ಕಂಪೆನಿಗಳು ಚಾವೆಝ್ ಮೇಲೆ ಕ್ರಮ ಕೈಗೊಳ್ಳಲು ಅಮೆರಿಕದ ಮೇಲೆ ಒತ್ತಡ ಹೇರುತ್ತಲೇ ಬಂದಿವೆ. ೨೦೦೨ರಲ್ಲಿ ಅಮೆರಿಕದ ಕುಮ್ಮಕ್ಕಿನಿಂದ ನಡೆದ ದಂಗೆಯೂ ವಿಫಲಗೊಂಡಿತು. ಮರಿಯಾ ಮಚಾದೋ ಮೂಲಕ ನಡೆಸಿದ ಜನಾಂದೋಲನಕ್ಕೂ ಹಿನ್ನಡೆಯಾಯಿತು. ಹ್ಯೂಗೋ ಚಾವೆಝ್
ಅಮೆರಿಕದ ಮಸಲತ್ತುಗಳನ್ನು ಎದುರಿಸುತ್ತಲೇ ಸರಕಾರಿ ಸಂಪತ್ತನ್ನು ಪರಿಣಾಮಕಾರಿಯಾಗಿ ಸಮಾಜವಾದಿ ನೆಲೆಯಲ್ಲಿ ಸಾಮಾಜಿಕ ಅಭಿವೃದ್ಧಿಗೆ ಬಳಸಿದರು. ಆದರೆ ಚಾವೆಝ್ ಮರಣದ ಜೊತೆಗೆ ವೆನೆಝುವೆಲಾ ಬೇರೆ ಬೇರೆ ಅಡೆತಡೆಗಳನ್ನು ಎದುರಿಸುತ್ತಾ ಬಂತು.
೨೦೧೪ರಲ್ಲಿ ಕಚ್ಚಾ ತೈಲ ಬೆಲೆ ತಳಮಟ್ಟಕ್ಕೆ ತಲುಪಿತು. ಪ್ರತಿ ಬ್ಯಾರೆಲ್ಗೆ
೧೦೮ ಡಾಲರ್ ಇದ್ದ ಬೆಲೆ ೨೦೧೫ರ ಹೊತ್ತಿಗೆ ೩೦ ಡಾಲರ್ಗೆ
ತಲುಪಿತು. ತೈಲ ಮಾರಾಟವನ್ನೇ ನೆಚ್ಚಿಕೊಂಡಿದ್ದ ವೆನೆಝುವೆಲಾ ಆರ್ಥಿಕತೆಗೆ ಇದು ಭಾರೀ ಆಘಾತವನ್ನು ನೀಡಿತ್ತು. ಈ ಸಂದರ್ಭವನ್ನು ಅಮೆರಿಕವೂ ತನಗೆ ಪೂರಕವಾಗಿ ಬಳಸಿಕೊಂಡಿತು. ಅಮೆರಿಕವು ಅದಾಗಲೇ ಹೇರಿದ್ದ ನಿರ್ಬಂಧಗಳು ವೆನೆಝುವೆಲಾವನ್ನು ತತ್ತರಿಸುವಂತೆ ಮಾಡಿತು. ಹಣಕಾಸಿನ ನಿರ್ಬಂಧ ಆಂತರಿಕ ವ್ಯಾಪಾರ, ಉದ್ಯಮಗಳ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರಿದವು. ಆರ್ಥಿಕ ಹಿನ್ನಡೆ ಸರಕಾರದ ಮೇಲೂ, ಜನರ ಮೇಲೂ ತೀವ್ರ ಪರಿಣಾಮಗಳನ್ನು ಬೀರಿದವು. ಸರಕಾರದ ವಿರುದ್ಧ ಜನರೇ ಅಸಂತೃಪ್ತಿಯನ್ನು ಹೊಂದಿದರು. ೯೦ರ ದಶಕಕ್ಕೆ ಮರಳುವುದೇ ವೆನೆಝುವೆಲಾ ಬಿಡುಗಡೆಗೆ ಇರುವ ದಾರಿ ಎಂದು ಮರಿಯಾ ಮಚಾದೋ ಜನರಿಗೆ ಕರೆ
ನೀಡಿದರು. ಅಂದರೆ ತೈಲ ನಿಕ್ಷೇಪಗಳ ಮೇಲಿನ ನಿಯಂತ್ರಣಗಳನ್ನು ಹಂತಹಂತವಾಗಿ ಸರಕಾರ ಬಿಟ್ಟುಕೊಡುವುದೇ ವೆನೆಝುವೆಲಾಗೆ ಇರುವ ದಾರಿ ಎಂದು ನಂಬಿಸಲಾಯಿತು. ದೇಶದೊಳಗಿನ ಆರ್ಥಿಕ ಬಿಕ್ಕಟ್ಟು ಅಮೆರಿಕಕ್ಕೆ ವೆನೆಝುವೆಲಾ ಮೇಲೆ ನಿಯಂತ್ರಣ ಸಾಧಿಸುವುದಕ್ಕೆ ಇನ್ನಷ್ಟು ಅನುಕೂಲಗಳನ್ನು ಮಾಡಿತು. ಭ್ರಷ್ಟಾಚಾರ, ಮಾದಕ ದ್ರವ್ಯ ಸಾಗಾಟ ಇವೆಲ್ಲವುಗಳನ್ನು ಮುಂದಿಟ್ಟುಕೊಂಡು ಅಂತಿಮವಾಗಿ ವೆನೆಝುವೆಲಾವನ್ನು ಬಲಿ ಹಾಕುವಲ್ಲಿ ಕೊನೆಗೂ ಯಶಸ್ವಿಯಾಗಿದೆ. ಒಬ್ಬ ಜಾಗತಿಕ ಗೂಂಡಾನಂತೆ ವೆನೆಝುವೆಲಾ ಮೇಲೆ ಅಮೆರಿಕ ಎರಗಿದೆ. ವೆನೆಝುವೆಲಾದ ಜನರ ಹಿತಾಸಕ್ತಿಯನ್ನು ಅಮೆರಿಕದ ಈ ಕಾರ್ಯಾಚರಣೆ ಯಾವತ್ತೂ ಎತ್ತಿ ಹಿಡಿಯದು. ಮುಖ್ಯವಾಗಿ ಅಮೆರಿಕ ವೆನೆಝುವೆಲಾದ ಮೇಲೆ ಮಾತ್ರ ನಿಯಂತ್ರಣ ಸಾಧಿಸಲು ಮುಂದಾಗಿರುವುದಲ್ಲ, ತನಗೆ ಸೆಡ್ಡು ಹೊಡೆಯಲು ಪ್ರಯತ್ನಿಸುವ ಎಲ್ಲ ಸಣ್ಣ ಪುಟ್ಟ ಸಾರ್ವಭೌಮ ದೇಶಗಳಿಗೂ ಈ ಮೂಲಕ ಬೆದರಿಕೆಯನ್ನು ಒಡ್ಡಿದೆ. ಈ ಕಾರಣಕ್ಕೆ ಅಮೆರಿಕದ ಕಾರ್ಯಾಚರಣೆಯನ್ನು ಸ್ಪಷ್ಟ ಮಾತಿನಲ್ಲಿ ಖಂಡಿಸುವ ಮೂಲಕ ಭಾರತವು ತನ್ನ ಸಾರ್ವಭೌಮತೆಯನ್ನು ಎತ್ತಿ ಹಿಡಿಯಬೇಕಾಗಿದೆ.







