ಬಲಪ್ರಯೋಗ: ಹೊಣೆಗಾರಿಕೆ ನಿಗದಿಯಾಗಲಿ

ಸಾಹಿಲ್ ಲೋಚಬ್ | Photo Credit : PTI
ಕಾನೂನು ತನ್ನ ಕೆಲಸ ತಾನು ಮಾಡುತ್ತದೆ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬಂಥ ನುಡಿಮುತ್ತುಗಳು ರಾಜಕಾರಣಿಗಳ ಭಾಷಣಗಳಲ್ಲಿ, ಶಾಸನಸಭೆ ಕಲಾಪಗಳಲ್ಲಿ, ಸಿನೆಮಾಗಳಲ್ಲಿ... ಹೀಗೆ ಬೇರೆ ಬೇರೆ ವೇದಿಕೆಗಳಲ್ಲಿ ಸಂದರ್ಭಾನುಸಾರ ಕೇಳಿಬರುತ್ತಲೇ ಇರುತ್ತವೆ. ಆದರೆ ವಸ್ತುಸ್ಥಿತಿ ಬೇರೆಯೇ ಇದೆ. ಆದರ್ಶದ ಮಾತುಗಳು ಭಾಷಣಗಳಿಗೆ, ಪುಸ್ತಕಗಳಿಗೆ, ವೇದಿಕೆಗಳಿಗೆ ಸೀಮಿತವಾಗಿವೆ ಎಂಬ ಭಾವನೆಯನ್ನು ಮತ್ತಷ್ಟು ದೃಢಪಡಿಸುವಂಥ ನಿದರ್ಶನಗಳು ಬೇರೆ ಬೇರೆ ರೂಪಗಳಲ್ಲಿ ಕಾಣಸಿಗುತ್ತವೆ. ದಿಲ್ಲಿಯ ಜಂತರ್ ಮಂತರ್ನಲ್ಲಿ ಜುಲೈ 20ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಸಂದರ್ಭದಲ್ಲಿ ಒಬ್ಬ ಯುವಕನ ಮೇಲೆ ನಡೆದ ಪೆಲೆಟ್ ಗನ್ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ ದಾಖಲಿಸಲು ಸತಾಯಿಸಿದ ಪರಿ, ಕಾನೂನು ತನ್ನ ಕೆಲಸ ತಾನು ಮಾಡುತ್ತದೆ ಎಂಬ ನುಡಿಗಟ್ಟನ್ನು ಅಣಕಿಸುವ ರೀತಿಯಲ್ಲಿ ಇತ್ತು. ಪೆಲೆಟ್ ಗುಂಡು ದಾಳಿಯ ಪ್ರಕರಣದಲ್ಲಿ ದಿಲ್ಲಿ ಪೊಲೀಸರ ಎದುರು ನ್ಯಾಯಯುತವಾದ ಒಂದು ಸಣ್ಣ ಬೇಡಿಕೆ ಇತ್ತು. ಆ ಬೇಡಿಕೆಗೆ ಸ್ಪಂದಿಸಲು ಪೊಲೀಸರು ಮೀನಮೇಷ ಎಣಿಸಿದರು, ಒಪ್ಪಿಕೊಳ್ಳಲು ನಿರಾಕರಿಸಿದರು. ಸಹಜವಾಗಿ ಮತ್ತು ಯಾವುದೇ ಸದ್ದುಗದ್ದಲ ಇಲ್ಲದೆ ನಡೆಯಬೇಕಾಗಿದ್ದ ಒಂದು ಕಾನೂನು ಪ್ರಕ್ರಿಯೆಯನ್ನು ಪೊಲೀಸರು ಹಾದಿಬೀದಿ ರಂಪವಾಗುವಂತೆ ಹಾಗೂ ಅದಕ್ಕೆ ರಾಜಕೀಯ ರಾಡಿ ಮೆತ್ತಿಕೊಳ್ಳುವಂತೆ ಮಾಡಿದರು.
ಪೆಲೆಟ್ ಗುಂಡು ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡು ಕಣ್ಣೊಂದರ ದೃಷ್ಟಿ ನಷ್ಟವಾಗಿದೆ ಎನ್ನಲಾದ ಯುವಕನ ದೂರಿನ ಅನುಸಾರ ಪೊಲೀಸರು ಎಫ್ಐಆರ್ ದಾಖಲಿಸಲು ನಿರಾಕರಿಸಿದರು. ಬಾಧಿತ ವ್ಯಕ್ತಿ ದೂರು ನೀಡಿದಾಗ ಪ್ರಕರಣ ದಾಖಲಿಸಿಕೊಳ್ಳುವುದು ಪೊಲೀಸರ ಕರ್ತವ್ಯವಾಗಿತ್ತು. ಆದರೆ ಅದನ್ನು ಪಾಲಿಸುವಲ್ಲಿ ಅವರು ವಿಫಲರಾದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕಾನೂನಿನ ಆಳ್ವಿಕೆಗೆ ಸಂಬಂಧಿಸಿದ ಜವಾಬ್ದಾರಿಯನ್ನು ಮತ್ತು ಉತ್ತರದಾಯಿತ್ವವನ್ನು ಎತ್ತಿಹಿಡಿಯುವಲ್ಲಿ ಅವರು ಸೋತ ಪರಿಣಾಮವಾಗಿ ಪ್ರತಿಭಟನೆಗಳು ವ್ಯಕ್ತವಾದವು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಆರು ತಾಸುಗಳ ಕಾಲ ಧರಣಿ ನಡೆಸಿದ ಬಳಿಕವಷ್ಟೇ, ಪ್ರಜೆಯೊಬ್ಬನ ಹಕ್ಕಾಗಿರುವ ಸಾಮಾನ್ಯ ಕಾನೂನು ಪ್ರಕ್ರಿಯೆಯ ಪಾಲನೆಗೆ ಪೊಲೀಸರು ಮುಂದಾಗಿದ್ದು ನಮ್ಮ ಕಾನೂನು ಜಾರಿ ವ್ಯವಸ್ಥೆಯ ದಯನೀಯ ಸ್ಥಿತಿಯನ್ನು ಎತ್ತಿ ತೋರಿಸುವಂತಿದೆ. ಪೊಲೀಸರು ಈಗ ಎಫ್ಐಅರ್ ದಾಖಲಿಸಿಕೊಂಡಿರುವುದು ಸಾರ್ವಜನಿಕವಾಗಿ ವ್ಯಕ್ತವಾದ ಒತ್ತಡದಿಂದಲೇ ಹೊರತು ಕಾನೂನು ಆಳ್ವಿಕೆಯ ಹೊಣೆಗಾರಿಕೆಯ ಭಾಗವಾಗಿ ಅಲ್ಲ ಎಂದು ಯಾರಾದರೂ ಭಾವಿಸಿದರೆ ಅದು ಅವರ ತಪ್ಪಲ್ಲ. ಅದಕ್ಕೆ ಕಾರಣರಾದವರು ದಿಲ್ಲಿ ಪೊಲೀಸರು. ಜನತಂತ್ರದ ಆಶಯ ಮತ್ತು ಪಾರದರ್ಶಕ ಆಡಳಿತಕ್ಕೆ ವಿರುದ್ಧವಾದ ಇಂತಹ ನಡೆ ಖಂಡನಾರ್ಹ.
ಪೆಲೆಟ್ ಗುಂಡುಗಳಿಂದ ಗಾಯಗೊಂಡಿರುವ ಸಾಹಿಲ್ ಲೊಚಬ್ ಎನ್ನುವ ವಿದ್ಯಾರ್ಥಿ ಈ ತಿಂಗಳ 14ರಂದು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಳ್ಳುವಂತೆ ಪ್ರತೀ ದಿನ ಮನವಿ ಮಾಡಿಕೊಳ್ಳುತ್ತಿದ್ದರು. ಆದರೆ ಅವರ ಮನವಿಗೆ ಸಕಾರಾತ್ಮಕ ಸ್ಪಂದನ ವ್ಯಕ್ತವಾಗಲೇ ಇಲ್ಲ. ಎಫ್ಐಆರ್ ದಾಖಲಿಸಲು ತೊಡಕಾಗುವಂತಹ ಯಾವ ಸಮರ್ಪಕ ಕಾರಣವೂ ಪೊಲೀಸರಿಗೆ ಇರಲಿಲ್ಲ. ಅಂದಮೇಲೆ ನಿರಾಕರಣೆಯ ಹಿಂದೆ ಯಾರದೋ ಒತ್ತಡ ಇದ್ದಿರಬೇಕು. ಇಲ್ಲವೇ, ಯಾರನ್ನೋ ಮೆಚ್ಚಿಸುವಂತಹ ದುರುದ್ದೇಶ ಅಡಗಿರಬೇಕು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಜಂತರ್ ಮಂತರ್ನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ನೂರಾರು ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಪೊಲೀಸರ ಕೈಗಳು ಭೀಮಬಲ ಪಡೆದಿದ್ದವು. ಆದರೆ ಒಬ್ಬ ನೊಂದ ವಿದ್ಯಾರ್ಥಿಯ ದೂರಿಗೆ ಸ್ಪಂದಿಸಬೇಕಾದಂತಹ ಹೊತ್ತಲ್ಲಿ ಅವರ ಕೈಗಳು ಬಲ ಕಳೆದುಕೊಂಡಿದ್ದವು! ಆ ವೇಳೆ, ವಿದ್ಯಾರ್ಥಿ ಬೇಡಿಕೆಗೆ ಬೆಂಬಲವಾಗಿ ರಾಹುಲ್ ಗಾಂಧಿ ಬೀದಿಗೆ ಇಳಿದಿದ್ದು ಸಮಯೋಚಿತವಾಗಿತ್ತು. ಒಬ್ಬ ವಿರೋಧ ಪಕ್ಷದ ನಾಯಕ ನಡೆದುಕೊಳ್ಳಬೇಕಾದ ರೀತಿಯಲ್ಲೇ ಅವರು ನಡೆದುಕೊಂಡರು. ರಾಹುಲ್ ಅವರು ಅಗ್ಗದ ಪ್ರಚಾರಕ್ಕಾಗಿ ದಿಕ್ಕು ತಪ್ಪಿಸುವ ರಾಜಕಾರಣ ಮಾಡುತ್ತಿದ್ದಾರೆ ಎಂಬ ಟೀಕೆಗಳು ಆಳುವ ವರ್ಗದಿಂದ ವ್ಯಕ್ತವಾದರೂ ಅವುಗಳಲ್ಲಿ ಯಾವುದೇ ಹುರುಳಿರಲಿಲ್ಲ ಎಂಬುದು ಸಾಮಾನ್ಯ ಜನರಿಗೂ ಮನವರಿಕೆಯಾಗುವಂತೆ ಮಾಡಲು ನೆರವಾಗಿದ್ದು ದಿಲ್ಲಿ ಪೊಲೀಸರ ನಿರ್ಲಜ್ಜ ನಡೆ ಎಂಬುದರಲ್ಲಿ ಎರಡು ಮಾತಿಲ್ಲ. ರಾಹುಲ್ ಅವರು ಧರಣಿ ಕುಳಿತುಕೊಳ್ಳುವಂತಹ ಪರಿಸ್ಥಿತಿಯನ್ನು ಸೃಷ್ಟಿಸಿದ್ದೇ ಪೊಲೀಸರು. ಆಡಳಿತ ಪಕ್ಷದ ಮರ್ಜಿ ಕಾಯಲು ಹೋಗಿ ವಿರೋಧ ಪಕ್ಷಕ್ಕೆ ಒಂದಷ್ಟು ರಾಜಕೀಯ ಪ್ರಯೋಜನ ದೊರಕಿಸಿಕೊಟ್ಟರು. ನ್ಯಾಯವನ್ನು ಅಪೇಕ್ಷಿಸಿ ಮಾಡುವ ಪ್ರತಿಭಟನೆಗಳನ್ನು ಹೀಗಳೆಯುವುದು ಮತ್ತು ಅಂತಹ ಪ್ರತಿಭಟನೆಗಳಿಗೆ ಇಲ್ಲಸಲ್ಲದ ಹಣೆಪಟ್ಟಿ ಅಂಟಿಸುವಂತಹ ನಡೆ ತರವಲ್ಲ. ಈ ಬಗೆಯ ಮಾತುಗಳನ್ನು ಅಪ್ರಬುದ್ಧ ಎಂದು ಗುರುತಿಸುವಷ್ಟು ನಮ್ಮ ಜನ ಪ್ರಬುದ್ಧರಾಗಿದ್ದಾರೆ ಎಂದು ಆಡಳಿತ ಪಕ್ಷದ ಮುಖಂಡರು ಇನ್ನಾದರೂ ಗ್ರಹಿಸಬೇಕು.
ದಿಲ್ಲಿಯ ಜಂತರ್ ಮಂತರ್ನಲ್ಲಿ ಜುಲೈ 20ರಂದು ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ಅತಿಯಾದ ಬಲಪ್ರಯೋಗ ನಡೆಸಿದ್ದಾರೆ ಮತ್ತು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನುವ ಆರೋಪಗಳ ತನಿಖೆಗಾಗಿ ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ ಅವರ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ಉನ್ನತ ಮಟ್ಟದ ಸಮಿತಿ ರಚಿಸಿದೆ. ಇದು ಸ್ವಾಗತಾರ್ಹ. ತನಿಖೆಯಿಂದ ಸತ್ಯಾಂಶ ಹೊರಬರಬಹುದೆಂದು ನಿರೀಕ್ಷಿಸೋಣ. ಪ್ರತಿಭಟನೆ ವೇಳೆ ಅತಿಯಾದ ಬಲಪ್ರಯೋಗ ನಡೆದಿದೆ ಎನ್ನುವ ಆರೋಪಗಳನ್ನು ಸರಕಾರ ತಳ್ಳಿಹಾಕಿದೆ. ಆದರೆ ಸಮರ್ಥನೀಯವಲ್ಲದ ರೀತಿಯಲ್ಲಿ ಬಲಪ್ರಯೋಗ ನಡೆದಿರುವುದು ಮತ್ತು ಪೆಲೆಟ್ ಗನ್ಗಳು ಬಳಕೆಯಾಗಿರುವುದು ಮೇಲ್ನೋಟಕ್ಕೇ ಎದ್ದುಕಾಣಿಸುವಂತಿದೆ. ಪೆಲೆಟ್ ಗನ್ಗಳ ಬಳಕೆಯನ್ನು ದಿಲ್ಲಿ ಪೊಲೀಸರು ಆರಂಭದಲ್ಲಿ ನಿರಾಕರಿಸಿದ್ದರು. ಆದರೆ ಪೆಲೆಟ್ ಗನ್ಗಳ ಬಳಕೆ ಬಗ್ಗೆ ಪೊಲೀಸ್ ಡೈರಿಯಲ್ಲಿ ಉಲ್ಲೇಖವಿರುವುದು ಬೆಳಕಿಗೆ ಬಂದಿದೆ. ಪ್ರತಿಭಟನೆಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಅತಿಯಾದ ಬಲಪ್ರಯೋಗದ ಹೊಣೆಗಾರಿಕೆಯನ್ನು ಗೊತ್ತುಪಡಿಸುವುದಕ್ಕೂ ತನಿಖೆ ನೆರವಾಗಬಹುದು. ಶಾಂತಿಯುತ ಪ್ರತಿಭಟನೆಯು ಪ್ರಜೆಯ ಸಾಂವಿಧಾನಿಕ ಹಕ್ಕು. ಆ ಹಕ್ಕಿಗೆ ಕುಂದು ತರುವ ಎಂತಹುದೇ ಪ್ರಯತ್ನವನ್ನು ಪ್ರಜ್ಞಾವಂತ ಸಮಾಜ ಖಂಡಿಸಬೇಕು ಮತ್ತು ದನಿ ಎತ್ತುವ ದಿಟ್ಟತನವನ್ನು ತೋರಬೇಕು. ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವ ಇಂತಹ ಪ್ರಯತ್ನಗಳಿಗೆ ಪಕ್ಷಭೇದ ಇರಬಾರದು.






