ವಿಧಾನ ಪರಿಷತ್ ಚುನಾವಣೆ: ಬೇಸ್ತು ಬಿದ್ದ ವಿರೋಧ ಪಕ್ಷ

ರಾಜ್ಯದಲ್ಲಿ ವಿಧಾನಪರಿಷತ್‌ನ 7 ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ ತನ್ನ ಐದನೇ ಅಭ್ಯರ್ಥಿಯನ್ನು ಕಾಂಗ್ರೆಸ್ ಗೆಲ್ಲಿಸಿಕೊಳ್ಳುತ್ತದೆಯೋ ಎನ್ನುವುದು ರಾಜಕೀಯ ವಲಯದ ಚರ್ಚೆಯ ಕೇಂದ್ರಬಿಂದುವಾಗಿತ್ತು. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದ ಡಿ. ಕೆ. ಶಿವಕುಮಾರ್ ಐದನೇ ಅಭ್ಯರ್ಥಿಯ ಗೆಲವನ್ನು ಸವಾಲಾಗಿ ತೆಗೆದುಕೊಂಡಿದ್ದರು. ಐದು ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪಕ್ಷದಲ್ಲಿ ತನ್ನ ಸಾಮರ್ಥ್ಯವನ್ನು ವರಿಷ್ಠರಿಗೆ ಸಾಬೀತು ಪಡಿಸುವುದು ಅತ್ಯಗತ್ಯವಿತ್ತು. ಇದೀಗ ಐದನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಪ್ರಕಾಶ್ ಅವರು ಅತ್ಯಧಿಕ ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಐದು ಸ್ಥಾನಗಳನ್ನೂ ಪಡೆದುಕೊಂಡಿದ್ದರೆ, ಬಿಜೆಪಿ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್‌ನ ಏಕೈಕ ಅಭ್ಯರ್ಥಿ ಹೀನಾಯವಾಗಿ ಸೋಲು ಕಂಡಿದ್ದಾರೆ. ಚಲಾವಣೆಯಾಗಿರುವ 222 ಮತಗಳಲ್ಲಿ ಒಂದು ಮತ ಅಸಿಂಧುವಾಗಿದೆ. ವಿಪರ್ಯಾಸವೆಂದರೆ, ವಿರೋಧ ಪಕ್ಷಗಳ 11 ಮಂದಿ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. ಈ ಎಲ್ಲ ಅಡ್ಡ ಮತಗಳು ನೇರವಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಬಿದ್ದಿವೆ. ವಿಧಾನಪರಿಷತ್ ಎಂದರೆ ಮೇಲ್ಮನೆ. ಇಲ್ಲಿ ಪಕ್ಷಾಧಾರಿತವಾಗಿ ಚುನಾವಣೆ ನಡೆಯುತ್ತದೆಯಾದರೂ, ಆತ್ಮಸಾಕ್ಷಿಯನ್ನು ಮುಂದಿಟ್ಟುಕೊಂಡು ಮತ ಚಲಾಯಿಸುವುದು ಅತ್ಯಗತ್ಯವಾಗಿದೆ. ಯಾಕೆಂದರೆ, ಮೇಲ್ಮನೆಯೆನ್ನುವುದು ಕೆಳ ಮನೆಗೆ ಮಾರ್ಗದರ್ಶನವನ್ನು ನೀಡಬೇಕಾದ ಮುತ್ಸದ್ದಿ ಸದಸ್ಯರನ್ನು ಹೊಂದಿರಬೇಕು. ಈ ಹಿನ್ನೆಲೆಯಲ್ಲಿ ಪಕ್ಷ ಭೇದವನ್ನು ಮರೆತು ಅರ್ಹತೆಯನ್ನು ಪರಿಗಣಿಸಿ ಶಾಸಕರು ಮತ ಚಲಾಯಿಸಿದರೆ ಅದನ್ನು ತಿರಸ್ಕರಿಸುವುದಕ್ಕಾಗುವುದಿಲ್ಲ. ಪ್ರತಿಯೊಬ್ಬ ಶಾಸಕನು ತಾನು ಎಂತಹ ಅಭ್ಯರ್ಥಿಯನ್ನು ಮೇಲ್ಮನೆಗೆ ಕಳುಹಿಸಿಕೊಡಬೇಕು ಎನ್ನುವ ಬಗ್ಗೆ ಸ್ವಂತವಾದ ಅಭಿಪ್ರಾಯವನ್ನು ಇಟ್ಟುಕೊಂಡಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ. ಈ ಬಾರಿ ಏಳನೇ ಅಭ್ಯರ್ಥಿಯ ಆಯ್ಕೆಯು ಕಗ್ಗಂಟಾಗಿದ್ದುದರಿಂದ ಎಲ್ಲ ಪಕ್ಷಗಳು ತಮ್ಮ ಶಾಸಕರನ್ನು ಬಿಗಿ ಬಂದೋಬಸ್ತಿನಲ್ಲಿಟ್ಟಿದ್ದರು. ಆದರೆ ಎಲ್ಲ ಕೋಟೆಯನ್ನು ಭೇದಿಸಿ ಇತರ ಪಕ್ಷಗಳ ಶಾಸಕರನ್ನು ತನ್ನೆಡೆಗೆ ಸೆಳೆದುಕೊಳ್ಳುವಲ್ಲಿ ಡಿ. ಕೆ. ಶಿವಕುಮಾರ್ ಯಶಸ್ವಿಯಾಗಿದ್ದಾರೆ.
‘‘ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಬೇಕು ಎಂದು ನಾವು ಅಭ್ಯರ್ಥಿಯನ್ನು ಹಾಕಿದ್ದಲ್ಲ. ನಮ್ಮ ಪಕ್ಷದ ಶಾಸಕರ ನಂಬಿಕೆ ಪರೀಕ್ಷೆ ಮಾಡಲಷ್ಟೇ ಅಭ್ಯಥಿಯನ್ನು ಹಾಕಿದ್ದು’’ ಎಂದು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಸ್ಪಷ್ಟೀಕರಣ ನೀಡಿದ್ದಾರೆ. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತಿದೆ ಅವರ ಮಾತು. ಗೆಲ್ಲಿಸುವುದಕ್ಕಾಗಿ ಅಭ್ಯರ್ಥಿಯನ್ನು ಹಾಕಲಿಲ್ಲ, ತಮ್ಮ ಶಾಸಕರನ್ನು ಪರೀಕ್ಷೆ ಮಾಡುವುದಕ್ಕೆ ಎಂದೇ ಇಟ್ಟುಕೊಳ್ಳೋಣ. ಆ ಪರೀಕ್ಷೆಯಲ್ಲೂ ಜೆಡಿಎಸ್ ಶಾಸಕರು ವಿಫಲರಾದರಲ್ಲ, ಇದು ನೇರವಾಗಿ ಜೆಡಿಎಸ್‌ನ ಸೋಲೇ ಅಲ್ಲವೆ? ನಿಜಕ್ಕೂ ಪರೀಕ್ಷೆಯಲ್ಲಿ ಸೋತದ್ದು ಜೆಡಿಎಸ್ ಶಾಸಕರಲ್ಲ, ಜೆಡಿಎಸ್‌ನ ಮುಖಂಡ ಕುಮಾರಸ್ವಾಮಿ. ಶಾಸಕರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಯಾವುದೇ ಅಡ್ಡಮತದಾನವಾಗದಂತೆ ನೋಡಿಕೊಳ್ಳುವುದು ಕುಮಾರಸ್ವಾಮಿಯವರ ಹೊಣೆಗಾರಿಕೆಯಾಗಿತ್ತು. ‘ನಾಲ್ಕು ಶಾಸಕರು ಅಡ್ಡ ಮತದಾನ ಮಾಡಿದ್ದಾರೆ’ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಇದು ಜೆಡಿಎಸ್‌ನ ಅತಿ ದೊಡ್ಡ ಸೋಲಾಗಿದೆ. ಈ ಸೋಲಿಗೆ ಕಾರಣವನ್ನು ಅವರು ತನ್ನೊಳಗೇ ಹುಡುಕಿಕೊಳ್ಳಬೇಕು. ಪಕ್ಷದ ಸ್ವಂತಿಕೆಯನ್ನು ಬಿಜೆಪಿಗೆ ಅಡವಿಟ್ಟ ಪರಿಣಾಮವಾಗಿ, ಇಂದು ಜೆಡಿಎಸ್ ಎನ್ನುವುದು ಅರ್ಧ ಬಿಜೆಪಿಗೆ, ಅರ್ಧ ಜೆಡಿಎಸ್‌ಗೆ ಎನ್ನುವಂತಾಗಿದೆ. ತನ್ನ ಗುರಿ 2028ರ ಚುನಾವಣೆ ಎಂದು ಅವರು ಹೇಳಿದ್ದಾರೆ. ಆದರೆ ಅಷ್ಟರ ಒಳಗೆ ಪಕ್ಷವೆನ್ನುವುದು ಅಸ್ತಿತ್ವದಲ್ಲಿರುತ್ತದೆಯೋ ಎನ್ನುವ ಅನುಮಾನ ಕಾರ್ಯಕರ್ತರಲ್ಲಿ ಸೃಷ್ಟಿಯಾಗಿದೆ. ಜೆಡಿಎಸ್ ಶಾಸಕರ ನಡೆ ಪರೋಕ್ಷವಾಗಿ ಬಿಜೆಪಿಗೂ ಮುಜುಗರ ತಂದಿದೆ. ಯಾಕೆಂದರೆ, ಕುಮಾರಸ್ವಾಮಿಯವರು ಬಿಜೆಪಿಯೊಂದಿಗೆ ಮೈತ್ರಿಮಾಡಿಕೊಂಡು ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಆದರೆ ಜೆಡಿಎಸ್‌ನ ಶಾಸಕರು ಬಿಜೆಪಿಯನ್ನು ಕೈ ಬಿಟ್ಟು ಕಾಂಗ್ರೆಸನ್ನು ನೆಚ್ಚಿಕೊಂಡಿದ್ದಾರೆ. ತನ್ನ ಜೊತೆಗಿರುವ ಶಾಸಕರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳಲು ವಿಫಲರಾಗಿರುವಾಗ 2028 ಚುನಾವಣೆಯಲ್ಲಿ ಕುಮಾರಸ್ವಾಮಿ ನಿರೀಕ್ಷಿಸುವುದಾದರೂ ಏನನ್ನು?
ಇತ್ತ ಬಿಜೆಪಿಯು ತನ್ನ ಮುಖ ಉಳಿಸಿಕೊಳ್ಳಲು ಸತ್ಯಶೋಧನಾ ತಂಡವನ್ನು ರಚಿಸಿದೆ. ಸಿ. ಟಿ. ರವಿ, ಎನ್. ಮಹೇಶ್ ಮತ್ತು ಮಹೇಶ್ ಟೆಂಗಿನ ಕಾಯಿ ಈ ಸತ್ಯಶೋಧನ ತಂಡದ ಸದಸ್ಯರಂತೆ. ಸುಳ್ಳುಗಳನ್ನೇ ಹೊದ್ದುಕೊಂಡು ಓಡಾಡುವ ಈ ನಾಯಕರು ಅಡ್ಡಮತದಾನದ ಸತ್ಯವನ್ನು ಹುಡುಕಿ ತೆಗೆಯುತ್ತಾರೆ ಎನ್ನುವುದೇ ತಮಾಷೆಯ ವಿಷಯವಾಗಿದೆ. ‘‘ಪಕ್ಷದೊಳಗಿರುವ ಮೀರ್ ಸಾದಿಕ್‌ಗಳ ಬಗ್ಗೆ ಹೈಕಮಾಂಡ್‌ಗೆ ಮಾಹಿತಿ ನೀಡುತ್ತೇನೆ. ಅವರ ವಿರುದ್ಧ ಕ್ರಮ ನಿಶ್ಚಿತ’’ ಎಂಬ ಹೇಳಿಕೆ ನೀಡುವ ಮೂಲಕ ತನ್ನನ್ನು ತಾನು, ವಂಚನೆಗೆ ಬಲಿಯಾಗಿರುವ ಟಿಪ್ಪುಸುಲ್ತಾನ್‌ಗೆ ಹೋಲಿಸಿಕೊಂಡಿದ್ದಾರೆ. ಅಡ್ಡಮತದಾನದಿಂದ ಲಾಭ ಪಡೆದದ್ದು ಕಾಂಗ್ರೆಸ್ ಆದರೂ, ಮತಹಾಕಿದವರ ಗುರಿ ಪಕ್ಷದ ನಾಯಕತ್ವವೇ ಆಗಿತ್ತು. ಬಿಜೆಪಿಯೊಳಗಿರುವ ಅಸಮಾಧಾನ, ಭಿನ್ನಮತ ಮತ್ತೊಮ್ಮೆ ಹೊರಗೆ ಬಿದ್ದಿದೆ. ರಾಜ್ಯದ ಬಿಜೆಪಿ ನಾಯಕತ್ವದ ಕುರಿತಂತೆ ಅಸಮಾಧಾನಗಳಿವೆ ಎನ್ನುವುದನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊಳ್ಳಲು ಕೆಲವು ಶಾಸಕರು ಈ ಸಂದರ್ಭವನ್ನು ಬಳಸಿಕೊಂಡಿದ್ದಾರೆ. ಬಿಜೆಪಿಯೊಗೆ ಕಪ್ಪು ಕುರಿಗಳನ್ನು ಹುಡುಕುವ ಕೆಲಸ ನಡೆಯುತ್ತಿದೆಯಾದರೂ, ವಿಜಯೇಂದ್ರ ನಾಯಕತ್ವದ ವಿರುದ್ಧ ಅಸಮಾಧಾನ ಹೊಂದಿದವರೆಲ್ಲ ಈ ಅಡ್ಡಮತದಾನದ ಹಿಂದಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನೂ ಇಲ್ಲ.
ಒಟ್ಟಿನಲ್ಲಿ ವಿಧಾನವರಿಷತ್ ಚುನಾವಣೆಯ ಮೂಲಕ, ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಬೇರನ್ನು ಇನ್ನಷ್ಟು ಗಟ್ಟಿಮಾಡಿಕೊಂಡಿದೆ. ಸರಕಾರದ ವೈಫಲ್ಯಗಳ ವಿರುದ್ಧ ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪಗಳನ್ನ ಸ್ವತಃ ಅವರದೇ ಶಾಸಕರು ನಿರಾಕರಿಸಿದಂತಾಗಿದೆ. ‘‘ಪಕ್ಷಾತೀತವಾಗಿ ಸರಕಾರಕ್ಕೆ ಬೆಂಬಲ ಸಿಕ್ಕಿದೆ. ಸರಕಾರದ ಅಭಿವೃದ್ಧಿ ಕಾರ್ಯಗಳ ಜೊತೆಗೆ ನಾವಿದ್ದೇವೆ ಎಂದು ಸರ್ವ ಪಕ್ಷಗಳ ಶಾಸಕರೂ ಘೋಷಿಸಿದಂತಾಗಿದೆ’’ ಎಂದು ಸ್ವತಃ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಗೆಲುವನ್ನು ವ್ಯಾಖ್ಯಾನಿಸಿದ್ದಾರೆ. ಇತರ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಶಾಸಕರನ್ನೇ ಖರೀದಿಸಿ ತಮ್ಮ ಪಕ್ಷಕ್ಕೆ ಸೇರಿಸುವಲ್ಲಿ ನಿರತರಾಗಿರುವ ಬಿಜೆಪಿ ವರಿಷ್ಠರು ಈ ಅಡ್ಡಮತದಾನಕ್ಕಾಗಿ ಕಾಂಗ್ರೆಸನ್ನು ಹೇಗೆ ಟೀಕಿಸುವುದು ಎನ್ನುವ ಗೊಂದಲದಲ್ಲಿದ್ದಾರೆ. ಅಡ್ಡಮತದಾನ ಮಾಡಿದ ಆರೋಪದ ಹೆಸರಿನಲ್ಲಿ ಪಕ್ಷದ ಶಾಸಕರ ಮೇಲೆ ಕ್ರಮ ತೆಗೆದುಕೊಳ್ಳುವ ಸ್ಥಿತಿಯಲ್ಲಿಯೂ ಅದರ ನಾಯಕರು ಇಲ್ಲ. ಈ ವಿಷಯವನ್ನು ಎಳೆದಷ್ಟೂ ಪಕ್ಷಕ್ಕೆ ಇನ್ನಷ್ಟು ಧಕ್ಕೆಯಾಗುತ್ತದೆ. ಇದೇ ಸಂದರ್ಭದಲ್ಲಿ ವಿಧಾನಪರಿಷತ್ ಚುನಾವಣೆಯ ಈ ಗೆಲುವಿನ ಎಲ್ಲ ಹೆಗ್ಗಳಿಕೆಯೂ ಮುಖ್ಯಮಂತ್ರಿಯ ಸಂಘಟನಾ ಚಾತುರ್ಯಕ್ಕೆ ಸಲ್ಲಬೇಕಾಗಿದೆ.ಈ ಗೆಲುವಿನ ಮೂಲಕ ಡಿ. ಕೆ. ಶಿವಕುಮಾರ್ ಪಕ್ಷದಲ್ಲಿ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಂಡಿದ್ದಾರೆ.






