ಚುನಾವಣಾ ಆಯೋಗದ ಬಳಿ ದಾಖಲೆ ಕೇಳುತ್ತಿರುವ ಮತದಾರರು!

PC: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ದೇಶಾದ್ಯಂತ ಮತದಾರರ ಪೌರತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಿ ದಾಖಲೆ ಕೇಳಲು ಮುಂದಾಗಿರುವ ಭಾರತೀಯ ಚುನಾವಣಾ ಆಯೋಗ ಇದೀಗ ದೇಶದ ಜನತೆಗೆ ಸ್ವತಃ ತನ್ನ ಪೌರತ್ಸವ ದಾಖಲೆಗಳನ್ನು ನೀಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. "ದೇಶಾದ್ಯಂತ ಮತಗಳ್ಳತನದಲ್ಲಿ ಚುನಾವಣಾ ಆಯೋಗ ನೇರವಾಗಿ ಶಾಮೀಲಾಗಿದೆ' ಎಂದು ದಾಖಲೆಗಳ ಸಹಿತ ರಾಹುಲ್ ಗಾಂಧಿಯವರು ಆರೋಪಗಳನ್ನು ಮಾಡಿದ ಬೆನ್ನಿಗೆ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನೆಗೊಳಗಾಗಿದೆ. ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸದೇ ಇದ್ದರೆ, ಚುನಾವಣಾ ಆಯೋಗ ಚುನಾವಣೆಯನ್ನು ನಡೆಸುವ ಅರ್ಹತೆಯನ್ನೇ ಕಳೆದುಕೊಳ್ಳುತ್ತದೆ. ಒಂದು ವೇಳೆ ಚುನಾವಣೆ ನಡೆಸಿದರೂ, ಆಯ್ಕೆಯಾದ ಸರಕಾರ ಈ ದೇಶದ ಜನತೆಯನ್ನು ನಿಜಕ್ಕೂ ಪ್ರತಿನಿಧಿಸುತ್ತದೆಯೆ ಎನ್ನುವ ಪ್ರಶ್ನೆ ಉಳಿದೇ ಬಿಡುತ್ತದೆ. ಯಾವುದೇ ಅಕ್ರಮಗಳಿಲ್ಲದೆ ಯಶಸ್ವಿಯಾಗಿ ಚುನಾವಣೆ ನಡೆಯುವಂತೆ ನೋಡಿಕೊಳ್ಳುವುದು ಚುನಾವಣಾ ಆಯೋಗದ ಹೊಣೆಗಾರಿಕೆಯಾಗಿದೆ. ಆದರೆ ಸ್ವತಃ ಚುನಾವಣಾ ಆಯೋಗವೇ ಅಕ್ರಮಗಳಿಗೆ ನೆರವಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಮೊದಲು ಆಯೋಗ ತನ್ನ 'ಪ್ರಾಮಾಣಿಕತೆ'ಯ ದಾಖಲೆಗಳನ್ನು ದೇಶದ ಮುಂದಿಡುವುದು ಅತ್ಯಗತ್ಯವಾಗಿದೆ.
ದೇಶದಲ್ಲಿ ಚುನಾವಣಾ ಆಯೋಗ ಮೊದಲ ಬಾರಿಗೆ ಚರ್ಚೆಗೆ ಬಂದದ್ದು ಟಿ.ಎನ್. ಶೇಷನ್ ಅವರು ಚುನಾವಣಾ ಆಯುಕ್ತರಾಗಿದ್ದಾಗ, ಅವರು ಚುನಾವಣಾ ಪ್ರಕ್ರಿಯೆಯಲ್ಲಿ ನಡೆಸಿದ ಕ್ರಾಂತಿಕಾರಿ ಕಾರ್ಯಾಚರಣೆಯ ಕಾರಣಗಳಿಗಾಗಿ, ತನ್ನ ಸೀಮಿತ ಶಕ್ತಿಯನ್ನು ಬಳಸಿಕೊಂಡು ಅವರು ಆಯೋಗದ ಘನತೆಯನ್ನು ಎತ್ತಿ ಹಿಡಿದರು. ಚುನಾವಣಾ ಆಯೋಗ ಆಳುವವರ ಕೈಗೊಂಬೆಯಲ್ಲ ಎನ್ನುವುದನ್ನು ನಿರೂಪಿಸಿದರು. ಆಯೋಗಕ್ಕೂ ಇಷ್ಟೊಂದು ಶಕ್ತಿಯಿದೆಯೆ ಎಂದು ಜನರು ಸಂಭ್ರಮಿಸುವಂತಾಯಿತು. ಶೇಷನ್ ಅವರ ನಿಷ್ಠುರ ವ್ಯಕ್ತಿತ್ವಕ್ಕೆ ರಾಜಕೀಯ ಪಕ್ಷಗಳ ಮುಖಂಡರು ಕಂಪಿಸತೊಡಗಿದರು. ಚುನಾವಣೆಗಳ ಅಕ್ರಮಗಳಿಂದ ಬೇಸತ್ತಿದ್ದ ದೇಶದ ಜನತೆ, ಶೇಷನ್ ಮೂಲಕ ಪ್ರಜಾಸತ್ತೆಗೆ ಹೊಸ ದಿಕ್ಕೊಂದು ಸಿಕ್ಕಿದಂತೆ ಸಂಭ್ರಮಿಸಿದರು. ಅವರ ಬಳಿಕ ಬಂದ ಒಂದೆರಡು ಆಯುಕ್ತರು ಶೇಷನ್ ಮಾರ್ಗದಲ್ಲಿ ಮುನ್ನಡೆದರು. ಆದರೆ ಯಾವಾಗ ಇವಿಎಂ ದೇಶದ ಮತದಾನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿತೋ ಅಲ್ಲಿಂದ ಚುನಾವಣಾ ಆಯೋಗ ತನ್ನ ಅಳಿದುಳಿದ ಸ್ವಾಯತ್ತೆಯನ್ನು ಕಳೆದುಕೊಂಡಿತು. ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ದಿನದಿಂದ, ಎಲ್ಲ ತನಿಖಾ ಸಂಸ್ಥೆಗಳು ಕೇಂದ್ರ ಸರಕಾರದ ಜೀತಕ್ಕೆ ತೊಡಗಿದವು. ಚುನಾವಣಾ ಆಯೋಗವೂ ಈ ಜೀತಕ್ಕಾಗಿ ಸ್ಪರ್ಧೆಗೆ ಬಿತ್ತು. ಇಂದು ಚುನಾವಣಾ ಆಯೋಗ ಕೇಂದ್ರ ಸರಕಾರದ ವಕ್ತಾರನಾಗಿ ಕೆಲಸ ಮಾಡುತ್ತಿದೆ. ಆಯೋಗದ ಕಾರ್ಯವೈಖರಿಯ ಬಗ್ಗೆ ವಿರೋಧ ಪಕ್ಷಗಳು ತಕರಾರು ಎತ್ತಿದಾಗ ಅದರ ಬಗ್ಗೆ ಸ್ಪಷ್ಟಿಕರಣ ನೀಡುವ, ಆತ್ಮವಿಮರ್ಶೆ ನಡೆಸುವ ಬದಲಿಗೆ ವಿಮರ್ಶೆ ಟೀಕೆಗಳನ್ನು ದಮನಿಸತೊಡಗಿತು. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರಗಳನ್ನು 'ಆಪರೇಷನ್ ಕಮಲ'ದ ಹೆಸರಿನಲ್ಲಿ ಬಿಜೆಪಿ ಉರುಳಿಸುತ್ತಿದ್ದಾಗ ಚುನಾವಣಾ ಆಯೋಗ ಜಾಣ ಕುರುಡುತನವನ್ನು ಪ್ರದರ್ಶಿಸತೊಡಗಿತು. ವಿಶ್ವಾಸಾರ್ಹತೆಯ ಕೊರತೆಯನ್ನು ಎದುರಿಸುತ್ತಿರುವ ಚುನಾವಣಾ ಆಯೋಗದ ನೇತೃತ್ವದಲ್ಲಿ ನಡೆಯುವ ಚುನಾವಣೆಯಿಂದ ಆಯ್ಕೆಯಾದ ಸರಕಾರ ಇಂದು ಈ ದೇಶದ ಹಣೆಬರಹವನ್ನು ತಿದ್ದುತ್ತಿದೆ. ಇವಿಎಂನ ಅಕ್ರಮ ಕೂಸು ಎಂಬ ಹಣೆ ಪಟ್ಟಿ ಹೊತ್ತ ಸರಕಾರ, ದೇಶದ ಮತದಾರರ ಪೌರತ್ವವನ್ನು ಅನುಮಾನಿಸುವ ದಾಷ್ಟ್ಯಕ್ಕೆ ಇಳಿದಿದೆ.
ಆರಂಭದಲ್ಲಿ ವಿರೋಧ ಪಕ್ಷಗಳು 'ಇವಿಎಂ' ಬಗ್ಗೆ ಚುನಾವಣಾ ಆಯೋಗದ ಬಳಿ ದೂರ ತೊಡಗಿದ್ದವು. ಆದರೆ ಆಯೋಗವು ಈ ಆರೋಪವನ್ನು ಸಾರಾಸಗಟಾಗಿ ನಿರಾಕರಿಸುತ್ತಾ ಬಂತು. ಇಂದಿಗೂ ಬಿಎಸ್ಪಿಯಂತಹ ಪಕ್ಷಗಳು 'ಇವಿಎಂನಿಂದಾಗಿ ತನ್ನ ಪಕ್ಷ ನಿರಂತರ ಸೋಲುತ್ತಾ ಬಂದಿದೆ' ಎಂದು ಆರೋಪಿಸುತ್ತಲೇ ಇವೆ. ವಿರೋಧಪಕ್ಷಗಳು ಒಂದಾಗಿ ಚುನಾವಣಾ ಆಯೋಗದ ಮುಂದೆ ಮನವಿ ಸಲ್ಲಿಸಿದರೂ ಅದನ್ನು ಆಯೋಗ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಅತಿ ಶೀಘ್ರದಲ್ಲಿ ಚುನಾವಣಾ ಪ್ರಕ್ರಿಯೆ ಮುಗಿಯುತ್ತದೆ ಎಂದು ಇವಿಎಂನ್ನು ಸಮರ್ಥಿಸುವ ಆಯೋಗ, ಚುನಾವಣೆಯನ್ನು ಪಾರದರ್ಶಕವಾಗಿ, ಅಕ್ರಮರಹಿತವಾಗಿ ನಡೆಸುವುದೂ ತನ್ನ ಕರ್ತವ್ಯ ಎನ್ನುವುದನ್ನು ಮರೆತು ಬಿಟ್ಟಿದೆ. ವಿರೋಧ ಪಕ್ಷಗಳು ಆರೋಪಿಸುವಂತೆ ಬಿಜೆಪಿಯ ಅಂಗ ಪಕದಂತೆ ಆಯೋಗ ಕಾರ್ಯನಿರ್ವಹಿಸತೊಡಗಿದೆ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಅದಾದ ಬಳಿಕ ಹರ್ಯಾಣ, ಮಹಾರಾಷ್ಟ್ರ ಚುನಾವಣೆಗಳಲ್ಲಿ ಈ ಆರೋಪಗಳು ಇನ್ನಷ್ಟು ತೀವ್ರಗೊಂಡವು, ಮಹಾರಾಷ್ಟ್ರ ಚುನಾವಣೆಯಲ್ಲಿ ನಡೆದಿರುವ ಅಕ್ರಮಗಳ, ಮತಗಳ ವ್ಯತ್ಯಾಸಗಳ ಬಗ್ಗೆ ದಾಖಲೆಗಳನ್ನು ಒದಗಿಸಿದರೂ ಆ ದಿಕ್ಕಿಗೆ ಕಣ್ಣು ಹೊರಳಿಸಿಯೂ ಚುನಾವಣಾ ಆಯೋಗ ನೋಡಲಿಲ್ಲ. ಇದೀಗ ರಾಹುಲ್ ಗಾಂಧಿಯವರು ಬಹಿರಂಗಪಡಿಸಿರುವ ದಾಖಲೆಗಳು, ಈ ಅಕ್ರಮಗಳಲ್ಲಿ ಚುನಾವಣಾ ಆಯೋಗ ನೇರವಾಗಿ ಶಾಮೀಲಾಗಿದೆ ಎನ್ನುವ ಅನುಮಾನಗಳಿಗೆ ಇನ್ನಷ್ಟು ಪುಷ್ಟಿ ನೀಡಿದೆ.
ಕರ್ನಾಟಕದ ಮಹದೇವ ಪುರದಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳು ಕಳ್ಳತನವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ಒಬ್ಬನೇ ಮತದಾರನ ಹೆಸರು ಹಲವು ಬಾರಿ ನಮೂದಾಗಿರುವುದು, ಒಬ್ಬನೇ ಮತದಾರನ ಹೆಸರು ಹಲವು ರಾಜ್ಯಗಳ ಮತದಾರರ ಪಟ್ಟಿಯಲ್ಲಿ ಪ್ರಕಟ, ವಿಳಾಸವಿಲ್ಲದ ಮತದಾರರು, ಒಂದೇ ವಿಳಾಸದಲ್ಲಿ 80ಕ್ಕೂ ಅಧಿಕ ಮತದಾರರು, ಗುರುತೇ ಸಿಗದ ಫೊಟೋಗಳು, ಅರ್ಜಿಗಳ ದುರ್ಬಳಕೆ ಹೀಗೆ ಆರೋಪಗಳ ಸರಣಿ ಸ್ಫೋಟಗಳನ್ನು ಮಾಡಿದ್ದಾರೆ ರಾಹುಲ್ ಗಾಂಧಿ. ಇವುಗಳಿಗೆ ಸ್ಪಷ್ಟನೆ ನೀಡಲು ಸಾಧ್ಯವಾಗದೆ ಆಯೋಗ ತಡವರಿಸುತ್ತಿದೆ. ಕನಿಷ್ಠ ರಾಹುಲ್ ಗಾಂಧಿಯವರು ಕೇಳಿದ ಕಳೆದ ಹತ್ತು ವರ್ಷಗಳ ಮತದಾರರ ವಿವರಗಳು ಮತ್ತು ಮತದಾನ ಮಾಡುತ್ತಿರುವ ವೀಡಿಯೊ ದಾಖಲೆಗಳನ್ನು ಆಯೋಗ ಬಹಿರಂಗ ಪಡಿಸಿ ತನ್ನ ಅಳಿದುಳಿದ ಮಾನವನ್ನು ಉಳಿಸಿಕೊಳ್ಳಬೇಕಾಗಿದೆ. 'ದೂರು ನೀಡಿ' ಎಂದು ಚುನಾವಣಾ ಆಯೋಗ ರಾಹುಲ್ ಗಾಂಧಿಗೆ ಸಲಹೆ ನೀಡುತ್ತಿದೆ. ಈ ಹಿಂದಿನ ದೂರುಗಳ ಸ್ಥಿತಿ ಏನಾಗಿದೆ ಎಂದು ಗೊತ್ತಿರುವವರಿಗೆ ಚುನಾವಣಾ ಆಯೋಗದ ಉದ್ದೇಶ ಅರ್ಥವಾಗಿ ಬಿಡುತ್ತದೆ. ಚುನಾವಣಾ ಆಯೋಗವನ್ನೇ ಕಳ್ಳ ಎಂದು ಕರೆಯುತ್ತಿರುವಾಗ, ಅದೇ ಕಳ್ಳನ ಬಳಿ ದೂರುಗಳನ್ನು ನೀಡುವುದರಿಂದ ನ್ಯಾಯ ಸಿಗುತ್ತದೆಯೇ? ಬಿಹಾರದಲ್ಲಿ ಮತದಾರರ ದಾಖಲೆಗಳನ್ನು ಕೇಳಿ ಸಹಸ್ರಾರು ಮತದಾರರನ್ನು ಮತದಾನದಿಂದ ಹೊರಗಿಟ್ಟ ಚುನಾವಣಾ ಆಯೋಗದ ಬಳಿ ದೇಶದ ಜನತೆ ದಾಖಲೆ ಕೇಳುತ್ತಿದ್ದಾರೆ. ಚುನಾವಣಾ ಆಯೋಗ ದಾಖಲೆಗಳನ್ನು ನೀಡಿ ತನ್ನ ಪೌರತ್ವವನ್ನು ದೇಶಕ್ಕೆ ಸಾಬೀತು ಪಡಿಸುವ ಸಮಯ ಬಂದಿದೆ.







