ಅಮೆರಿಕದ ವಿರುದ್ಧ ಇರಾನ್ ನಾಗರಿಕರು ಗೆದ್ದ ಯುದ್ಧ!

Photo Credit : aljazeera.com
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಯುದ್ಧ ಆರಂಭಿಸುವ ಮುನ್ನ ಅಮೆರಿಕ ಸುಳ್ಳುಗಳ ಕ್ಷಿಪಣಿಗಳಿಂದ ಮೊದಲು ದಾಳಿ ಮಾಡುತ್ತದೆ. ಆ ಬಳಿಕ ಬಾಂಬ್ಗಳನ್ನು ಸುರಿಸುತ್ತದೆ. ಇರಾಕ್ನ ವಿರುದ್ಧ ಯುದ್ಧ ಘೋಷಿಸುವ ಸಂದರ್ಭದಲ್ಲಿ ಅಮೆರಿಕ ಮೊದಲು ‘ಇರಾಕ್ನ ಬಳಿ ರಾಸಾಯನಿಕ ಶಸ್ತ್ರಾಸ್ತ್ರಗಳಿವೆ’ ಎಂಬ ಸುಳ್ಳಿನ ಕ್ಷಿಪಣಿಗಳನ್ನು ತೂರಿ ಬಿಟ್ಟಿತು. ಆ ಬಳಿಕ ಇರಾಕ್ನ್ನು ಸುಲಭವಾಗಿ ನಾಶ ಮಾಡಿತು.
ಇರಾನ್ನ ವಿರುದ್ಧವೂ ಅದೇ ತಂತ್ರವನ್ನು ಬಳಸುವ ಪ್ರಯತ್ನವನ್ನು ಅಮೆರಿಕ ನಡೆಸಿತಾದರೂ, ಅಮೆರಿಕದ ಸುಳ್ಳುಗಳ ಕ್ಷಿಪಣಿಗಳೆಲ್ಲ ಇರಾನ್ ನಾಗರಿಕರ ಧೀರೋದ್ಧಾತತೆಯ ಮುಂದೆ ಟುಸ್ಸಾಯಿತು. ಅಮೆರಿಕವು ಯುದ್ಧಾರಂಭಕ್ಕೆ ಮುನ್ನ, ಇದು ಇರಾನ್ ಜನರ ಪರವಾಗಿ ನಡೆಸಲಿರುವ ಹೋರಾಟ ಎಂದು ಬಿಂಬಿಸುವ ಪ್ರಯತ್ನ ನಡೆಸಿತು. ಅಲ್ಲಿ ನ ಸಂತ್ರಸ್ತ ಮಹಿಳಾ ಪ್ರತಿಭಟನಕಾರರ ಜೊತೆಗೆ ತಾನಿದ್ದೇನೆ ಎಂದು ಹೇಳಿಕೊಂಡಿತು. ಆದರೆ ಯುದ್ಧ ಆರಂಭವಾದ ಮೊದಲ ದಿನವೇ ಹೆಣ್ಣು ಮಕ್ಕಳ ಶಾಲೆಯ ಮೇಲೆ ದಾಳಿ ನಡೆಸಿ ೧೫೦ಕ್ಕೂ ಅಧಿಕ ವಿದ್ಯಾರ್ಥಿನಿಯರನ್ನು ಕೊಂದು ಹಾಕಿತು. ಅಷ್ಟೇ ಅಲ್ಲ, ಅಲ್ಲಿನ ಆಸ್ಪತ್ರೆ ಸಹಿತ ಸಾರ್ವಜನಿಕ ಸೇವೆಗಳ ಮೇಲೆ ಎಗ್ಗಿಲ್ಲದೆ ದಾಳಿ ನಡೆಸಿತು. ಯಾರನ್ನು ಅಮೆರಿಕ ಸರ್ವಾಧಿಕಾರಿಗಳು ಎಂದು ಕರೆದಿತ್ತೋ, ಅವರೆಲ್ಲರನ್ನು ಕೊಂದು ಹಾಕಿದ ಬಳಿಕವೂ ಅಮೆರಿಕ ಯುದ್ಧ ನಿಲ್ಲಿಸಲಿಲ್ಲ. ಯಾಕೆಂದರೆ, ಇರಾನ್ನಲ್ಲಿರುವ ಸರ್ವಾಧಿಕಾರ ಅಮೆರಿಕದ ಸಮಸ್ಯೆಯೇ ಆಗಿರಲಿಲ್ಲ. ಅಮೆರಿಕಕ್ಕೆ ಇರಾನ್ನ ತೈಲ ಸಂಪತ್ತಿನ ಮೇಲೆ ನಿಯಂತ್ರಣದ ಅಗತ್ಯವಿತ್ತು. ಅದಕ್ಕಾಗಿ ಅಲ್ಲಿನ ನಿಯಂತ್ರಣದಲ್ಲಿರುವ ಸರಕಾರ ರಚಿಸುವುದು ಅದರ ಗುರಿಯಾಗಿತ್ತು.
ಮೇಲ್ಸ್ತರದ ನಾಯಕರನ್ನು ಕೊಂದುಹಾಕುವುದರೊಂದಿಗೆ ಇರಾನ್ ತನಗೆ ಶರಣಾಗುತ್ತದೆ ಎನ್ನುವ ಅಮೆರಿಕದ ತಂತ್ರ ಅಲ್ಲಿ ನಾಗರಿಕರಿಂದಲೇ ಬುಡಮೇಲಾಯಿತು. ನಿಜವಾದ ಯುದ್ಧ ಆರಂಭವಾದದ್ದೇ ಈ ಎಲ್ಲ ನಾಯಕರು ತಮ್ಮ ಪ್ರಾಣಗಳನ್ನು ಅರ್ಪಿಸಿದ ಬಳಿಕ. ಆವರೆಗೆ ಇರಾನ್ ಸರಕಾರದ ಜೊತೆಗೆ ಭಿನ್ನಮತವನ್ನು ಹೊಂದಿದ್ದ ನಾಗರಿಕರೂ ದೇಶದ ಪರವಾಗಿ ಸಂಘಟಿತವಾಗಿ ನಿಲ್ಲಬೇಕಾದ ಸ್ಥಿತಿಯನ್ನು ಸ್ವತಃ ಟ್ರಂಪ್ ನಿರ್ಮಾಣ ಮಾಡಿದರು. ನಿಜಕ್ಕೂ ಇರಾನ್ನ ನಾಗರಿಕರ ಬಗ್ಗೆ, ಅಲ್ಲಿನ ಪ್ರಜಾಸತ್ತೆಯ ಬಗ್ಗೆ ಮತ್ತು ಮಹಿಳೆಯರ ಬಗ್ಗೆ ಅಮೆರಿಕಕ್ಕೆ ಕಾಳಜಿಯಿದ್ದಿದ್ದರೆ ಎರಡು ದಿನಗಳ ನಾಶ, ನಷ್ಟದ ಬಳಿಕವಾದರೂ ದಾಳಿಯನ್ನು ನಿಲ್ಲಿಸುತ್ತಿತ್ತು. ವಿಪರ್ಯಾಸವೆಂದರೆ, ಕಡೆಯದಾಗಿ ಇರಾನ್ನ ವಿದ್ಯುತ್ ಸ್ಥಾವರಗಳು, ಸೇತುವೆಗಳ ಮೇಲೆ ದಾಳಿ ನಡೆಸಲಿದ್ದೇನೆ ಎನ್ನುವ ಬೆದರಿಕೆಯನ್ನು ಅವರು ಒಡ್ಡಿದರು. ಇಡೀ ಇರಾನ್ ನಾಗರಿಕತೆಯನ್ನೇ ಸರ್ವನಾಶ ಮಾಡುತ್ತೇನೆ ಎಂದು ಘೋಷಿಸಿದರು. ಟ್ರಂಪ್ ಈ ಮೂಲಕ ಇರಾನ್ನ ಜನರಿಗೇ ನೇರ ಬೆದರಿಕೆಯನ್ನು ಒಡ್ಡಿದ್ದರು. ನೀವು ಸರಕಾರದ ವಿರುದ್ಧ ಧ್ವನಿಯೆತ್ತದೇ ಇದ್ದರೆ ನಿಮ್ಮನ್ನು ಸಾಮೂಹಿಕವಾಗಿ ಸರ್ವನಾಶ ಮಾಡುತ್ತೇನೆ ಎನ್ನುವ ಬೆದರಿಕೆಯದು. ಹಿಟ್ಲರ್ ಯಹೂದಿಗಳ ವಿರುದ್ಧವೂ ಇಂತಹ ಭೀಕರ ಬೆದರಿಕೆ ಒಡ್ಡಿರಲಿಲ್ಲ. ಈ ಘೋಷಣೆಯೊಂದಿಗೆ ಅಮೆರಿಕ ತಾನೇನೆನ್ನುವುದನ್ನು ಜಗತ್ತಿನ ಮುಂದೆ ಜಾಹೀರು ಪಡಿಸಿತು.
ತಾತ್ಕಾಲಿಕ ಕದನ ವಿರಾಮ ಘೋಷಿಸುವ ಅನಿವಾರ್ಯತೆಯನ್ನು ಟ್ರಂಪ್ಗೆ ನಿರ್ಮಿಸುವ ಮೂಲಕ ಇರಾನ್ ಅಪಾರ ಸಾವುನೋವು, ನಾಶ ನಷ್ಟದ ನಡುವೆಯೂ ಯುದ್ಧವನ್ನು ಗೆದ್ದುಕೊಂಡಿದೆ. ಈ ಗೆಲುವು ಇರಾನ್ನ ನಾಗರಿಕರಿಗೆ ನೇರವಾಗಿ ಸಲ್ಲಬೇಕಾಗಿದೆ. ಇರಾನ್ನ ನಾಗರಿಕರ ಧೈರ್ಯ, ಆತ್ಮಾಭಿಮಾನದ ಮುಂದೆ ಅಮೆರಿಕದ ಕ್ಷಿಪಣಿಗಳು ಶಕ್ತಿಹೀನವಾಯಿತು. ೪೮ ಗಂಟೆಗಳಲ್ಲಿ ಶರಣಾಗದಿದ್ದರೆ ಇಡೀ ಇರಾನ್ನ ನಾಗರಿಕತೆಯೇ ನಿರ್ನಾಮವಾಗಲಿದೆ ಎನ್ನುವ ಟ್ರಂಪ್ನ ಬೆದರಿಕೆಯಲ್ಲಿ ಹತಾಶೆಯ ಪರಮಾವಧಿಯಿತ್ತು. ಸರ್ವಾಧಿಕಾರಿಯೊಬ್ಬನ ಆಕ್ರಂದನವಿತ್ತು. ಇಡೀ ವಿಶ್ವವೇ ಟ್ರಂಪ್ನ ಮಾತಿನಲ್ಲಿರುವ ಲಜ್ಜೆಗೇಡಿತನಕ್ಕೆ, ಕ್ರೌರ್ಯಕ್ಕೆ ತಲೆತಗ್ಗಿಸಿತ್ತು. ‘ನಾಳೆ ಏನಾಗಬಹುದು’ ಎನ್ನುವ ಆತಂಕದಲ್ಲಿ ಜಗತ್ತು ನಿದ್ದೆಗೆಟ್ಟು ಕುಳಿತಿತ್ತು. ಅದಾಗಲೇ ಭಾರೀ ನಾಶ ನಷ್ಟಗಳನ್ನು ಎದುರಿಸಿದ್ದ ಇರಾನ್ ನಾಗರಿಕರು ಈ ಬೆದರಿಕೆಗೆ ತಲೆಬಾಗಿ ಇರಾನ್ನ ಸರಕಾರದ ಮೇಲೆ, ಸೇನೆಯ ಮೇಲೆ ಒತ್ತಡಗಳನ್ನು ಹಾಕುತ್ತಾರೆ ಎಂದು ಟ್ರಂಪ್ ಭಾವಿಸಿದ್ದರೆ ಅದು ತಿರುವು ಮುರುವಾಯಿತು. ತಮ್ಮ ಸೇತುವೆಗಳನ್ನು, ತಮ್ಮ ವಿದ್ಯುತ್ ಸ್ಥಾವರಗಳನ್ನು ರಕ್ಷಿಸುವುದಕ್ಕೆ ಇರಾನ್ ನಾಗರಿಕರು ಬೀದಿಗಿಳಿದರು. ಅವುಗಳ ಸುತ್ತ ಮಾನವ ಸರಪಳಿಗಳನ್ನು ಕಟ್ಟಿ ನಿಂತರು. ಕಲಾವಿದರು, ಹಿರಿಯರು, ಯುವಕರು, ಮಕ್ಕಳು, ಮಹಿಳೆಯರು ಎನ್ನದೇ ಎಲ್ಲ ವರ್ಗದ ಜನರು ಈ ಮಾನವ ಸರಪಳಿಯಲ್ಲಿ ಭಾಗಿಯಾದರು. ಇರಾನ್ನ ಯಾವುದೇ ಕ್ಷಿಪಣಿಗಳು ಮಾಡಿದ ಹಾನಿಗಿಂತ ಈ ಮಾನವ ಸರಪಳಿಗಳು ಅಮೆರಿಕದ ದುರಹಂಕಾರಕ್ಕೆ ಹೆಚ್ಚು ಹಾನಿಯನ್ನು ಮಾಡಿದವು. ಕೈಯಲ್ಲಿ ಯಾವುದೇ ಆಯುಧಗಳನ್ನು ಹೊಂದಿರದ ಈ ನಾಗರಿಕರು ‘‘ಬನ್ನಿ, ನಮ್ಮನ್ನು ಕೊಲ್ಲಿ’’ ಎಂದು ಕ್ಷಿಪಣಿಗಳಿಗೆ ಎದೆಯೊಡ್ಡಿ ನಿಂತಿದ್ದು ಒಂದು ಐತಿಹಾಸಿಕ ಘಟನೆಯೇ ಸರಿ. ಮಹಾತ್ಮ್ಮಾ ಗಾಂಧೀಜಿ ಬ್ರಿಟಿಷರ ವಿರುದ್ಧ ಪ್ರದರ್ಶಿಸಿದ ಅಹಿಂಸೆಯ ಆಯುಧವನ್ನು ಹಿಡಿದು ಇರಾನ್ ನಾಗರಿಕರು ಟ್ರಂಪ್ ಸವಾಲನ್ನು ಎದುರಿಸಿದರು. ಹಾರ್ಮುಝ್ ಜಲಸಂಧಿಗಿಂತ ದೊಡ್ಡ ಸವಾಲಾಗಿ ನಿಂತದ್ದು ಈ ಮಾನವ ಸರಪಳಿಯ ಗೋಡೆಯಾಗಿತ್ತು. ಯಾವ ನಾಗರಿಕರನ್ನು ನೆಪವಾಗಿಟ್ಟುಕೊಂಡು ಟ್ರಂಪ್ ಇರಾನ್ನ ಮೇಲೆ ದಾಳಿ ನಡೆಸಿದರೋ ಅದೇ ನಾಗರಿಕರು ಟ್ರಂಪ್ನ ಅಟ್ಟಹಾಸಕ್ಕೆ ಎದೆಯೊಡ್ಡಿ ನಿಂತಿದ್ದರು.
ಇದು ತಾತ್ಕಾಲಿಕ ಕದನವಿರಾಮ ಎನ್ನುವುದು ಸ್ಪಷ್ಟ. ಹಾರ್ಮುಝ್ ಜಲಸಂಧಿಯನ್ನು ಬಳಸಿಕೊಂಡು ಇರಾನ್ ನಡೆಸಿದ ಮಾಡು-ಮಡಿ ಹೋರಾಟ ಅಮೆರಿಕ-ಇಸ್ರೇಲ್ ಎನ್ನುವ ಬಲಿಷ್ಠ ದೇಶಗಳ ‘ಹೇಡಿತನ’ವನ್ನು ಜಗಜ್ಜಾಹೀರು ಮಾಡಿತು. ಅವುಗಳ ಮುಖವಾಡವನ್ನು ಹರಿದು ಹಾಕಿತು. ಅಮೆರಿಕ, ಇದೀಗ ಆದ ನಷ್ಟವನ್ನು ತುಂಬಿಸಿಕೊಳ್ಳುವ ಬಗೆ ಹೇಗೆ ಎಂದು ಯೋಚಿಸುತ್ತಿದೆ. ಮಧ್ಯಸ್ಥಿಕೆ ವಹಿಸುವ ನೆಪದಲ್ಲಿ ಪಾಕಿಸ್ತಾನ ಎನ್ನುವ ಲಂಗೋಟಿಯ ಮೂಲಕ ಅದು ತನ್ನ ನಗ್ನದೇಹವನ್ನು ಮುಚ್ಚಿಕೊಳ್ಳಲು ಮುಂದಾಗಿದೆ. ಪಾಕಿಸ್ತಾನದ ಮಧ್ಯಸ್ಥಿಕೆಯ ಮೂಲಕ ಕೊನೆಗೂ ಅದು ಕದನ ವಿರಾಮ ಕೊಡುಗೆಯನ್ನು ಮುಂದಿಟ್ಟಿದೆ. ಇದೇ ಸಂದರ್ಭದಲ್ಲಿ ಈ ಕದನವಿರಾಮಕ್ಕೆ ಇಸ್ರೇಲ್ ಎಷ್ಟರಮಟ್ಟಿಗೆ ಸಹಕರಿಸುತ್ತದೆ ಎನ್ನುವುದರ ಆಧಾರದ ಮೇಲೆ ಮಧ್ಯಪ್ರಾಚ್ಯ ಸಂಘರ್ಷ ನಿಂತಿದೆ. ಇರಾನ್-ಅಮೆರಿಕ ಯುದ್ಧ ಆ ದೇಶಗಳಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಅದರ ಪರಿಣಾಮಗಳನ್ನು ಇಡೀ ಜಗತ್ತು ಬೇರೆ ಬೇರೆ ರೂಪದಲ್ಲಿ ಅನುಭವಿಸುತ್ತಿದೆ. ಒಂದು ಸಣ್ಣ ದೇಶದ ವಿರುದ್ಧ ಬಲಿಷ್ಠ ರಾಷ್ಟ್ರಗಳು ನಡೆಸಿದ ಏಕಮುಖ ದಾಳಿಯನ್ನು ಮೌನವಾಗಿ ನಿಂತು ನೋಡಿದ ಪರಿಣಾಮವನ್ನು ಭಾರತವೂ ಸೇರಿದಂತೆ ಎಲ್ಲ ದೇಶಗಳು ಉಣ್ಣುತ್ತಿವೆ. ಈ ಕದನ ವಿರಾಮವನ್ನು ಶಾಶ್ವತ ಯುದ್ಧ ವಿರಾಮವಾಗಿ ಪರಿವರ್ತಿಸುವಲ್ಲಿ ಎಲ್ಲ ದೇಶಗಳು ಮುಂದಡಿಯಿಡಲು ಶ್ರಮಿಸದೇ ಇದ್ದರೆ ಭವಿಷ್ಯದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ದೇಶಗಳು ಸಾಕಷ್ಟು ಆರ್ಥಿಕ ಹಿಂಜರಿಕೆಯನ್ನು ಎದುರಿಸಬೇಕಾಗಬಹುದು. ಅಮೆರಿಕವು ಇರಾನ್ ವಿರುದ್ಧ ನೇರ ಯುದ್ಧ ಘೋಷಿಸಿದ್ದರೆ, ಅಭಿವೃದ್ಧಿ ಹೊಂದುತ್ತಿರುವ ದೇಶಗಳ ವಿರುದ್ಧ ಪರೋಕ್ಷ ಯುದ್ಧ ಘೋಷಿಸಿದೆ ಎನ್ನುವ ಎಚ್ಚರಿಕೆ ನಮ್ಮಲ್ಲಿ ಇರಬೇಕಾಗಿದೆ. ಇರಾನ್ ನಾಗರಿಕರು ಪ್ರದರ್ಶಿಸಿದ ಪ್ರಬುದ್ಧತೆಯನ್ನು ವಿಶ್ವದ ಎಲ್ಲ ಶಾಂತಿಪ್ರಿಯ ನಾಗರಿಕರು ಸಂಘಟಿತವಾಗಿ ಪ್ರದರ್ಶಿಸಿ ಈ ಯುದ್ಧವನ್ನು ಗೆಲ್ಲಬೇಕಾದ ಅನಿವಾರ್ಯ ಜಗತ್ತಿಗಿದೆ.







