ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಲು ಇರುವ ಅಡ್ಡಿಯೇನು?

ಸಾಂದರ್ಭಿಕ ಚಿತ್ರ
‘ಗೋವನ್ನು ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿರುವ ಬೆನ್ನಿಗೇ, ಕೇಂದ್ರ ಸರಕಾರವೂ ಗೋವನ್ನು ರಾಷ್ಟ್ರೀಯ ಪ್ರಾಣಿಯೆಂದು ಪರಿಗಣಿಸಲು ಹಿಂದೇಟು ಹಾಕಿದೆ. ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಅಥವಾ ದೇಶಾದ್ಯಂತ ಗೋಹತ್ಯೆ ನಿಷೇಧಿಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟನೆ ನೀಡಿದೆ. ಸಂದರ್ಶನವೊಂದರಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮಾತನಾಡುತ್ತಾ, ‘‘ಪ್ರಸ್ತುತ ಇಂತಹ ಯಾವುದೇ ವಿಷಯ ಸಂಪುಟದ ಪರಿಶೀಲನೆಯಲ್ಲಿ ಇಲ್ಲ. ಜಾನುವಾರು ಹತ್ಯೆ ನಿಯಮಗಳ ಜಾರಿ ವಿಷಯದಲ್ಲಿ ವಿವಿಧ ರಾಜ್ಯಗಳು ತಮ್ಮದೇ ಆದ ಪರಿಸ್ಥಿತಿ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತವೆ’’ ಎಂದು ಹೆಗಲು ಜಾರಿಸಿಕೊಂಡಿದ್ದಾರೆ. ಗೋಹತ್ಯೆಯ ವಿಷಯದಲ್ಲಿ ಮಾತ್ರ ಪರಿಸ್ಥಿತಿಗೆ ಅನುಗುಣವಾಗಿ ಆಯಾ ರಾಜ್ಯಗಳೇ ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವ ಕೇಂದ್ರ ಸರಕಾರದ ಹೇಳಿಕೆಯೇ ಸಮಯ ಸಾಧಕತನದ್ದು. ಗೋವು ಇಡೀ ದೇಶದ ಪಾಲಿಗೆ ಪವಿತ್ರ ಪ್ರಾಣಿ ಎಂದು ಕೇಂದ್ರ ಸರಕಾರ ಭಾವಿಸುತ್ತದೆಯಾದರೆ, ಗೋವಿನ ವಿಷಯದಲ್ಲಿ ಇಡೀ ದೇಶಕ್ಕೆ ಒಂದೇ ರೀತಿಯ ಕಾನೂನನ್ನು ಜಾರಿಗೊಳಿಸಬೇಕಲ್ಲವೆ? ದೇಶಕ್ಕೆ ಒಂದೇ ಕಾನೂನು, ಒಂದೇ ಭಾಷೆ, ಒಂದೇ ಚುನಾವಣೆ ಇರಬೇಕು ಎಂದು ಪ್ರತಿಪಾದಿಸುವ ಬಿಜೆಪಿ ಸರಕಾರ, ಗೋಹತ್ಯೆಗೆ ಸಂಬಂಧ ಪಟ್ಟ ನಿಯಮಗಳನ್ನು ಮಾತ್ರ ಆಯಾ ರಾಜ್ಯಗಳ ಪರಿಸ್ಥಿತಿಗೆ ತಕ್ಕಂತೆ ಅಳವಡಿಸಲು ನಿರ್ಧರಿಸಿರುವುದು ಯಾಕೆ? ಯಾಕೆಂದರೆ, ಹಲವು ರಾಜ್ಯಗಳಲ್ಲಿ ಗೋಹತ್ಯೆಯನ್ನು, ಗೋಮಾಂಸ ಸೇವನೆಯನ್ನು ಬಿಜೆಪಿ ಬೆಂಬಲಿಸುತ್ತದೆ. ಕೇರಳ, ಗೋವಾ, ಈಶಾನ್ಯ ಭಾರತದಲ್ಲಿ ಗೋ ಹತ್ಯೆಯ ಕುರಿತಂತೆ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಲು ಬಿಜೆಪಿ ಹಿಂದೇಟು ಹಾಕುತ್ತಿದೆ. ಅಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಕಠಿಣವಾಗಿ ಜಾರಿಗೊಳಿಸಿದರೆ ಜನಸಾಮಾನ್ಯರಿಂದ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎನ್ನುವ ಭಯ ಅದನ್ನು ಕಾಡುತ್ತಿದೆ. ಆದುದರಿಂದಲೇ ಜನರಿಗೆ ತಕ್ಕಂತೆ, ರಾಜ್ಯಗಳಿಗೆ ತಕ್ಕಂತೆ ಗೋವಿನ ಕುರಿತ ಬಿಜೆಪಿಯ ಪ್ರೀತಿಯು ಬದಲಾಗುತ್ತಿದೆ. ಮುಖ್ಯವಾಗಿ, ಒಂದು ಸಮುದಾಯದ ವಿರುದ್ಧ ದ್ವೇಷ ಸಾಧಿಸುವುದಕ್ಕೆ ಬಿಜೆಪಿಗೆ ಗೋವು ಪವಿತ್ರವಾಗಿದೆಯೇ ಹೊರತು, ಉಳಿದಂತೆ ಗೋವಿನ ಕುರಿತಂತೆ ಇರುವ ಪ್ರೀತಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಒಂದು ವೇಳೆ ಕಡ್ಡಾಯವಾಗಿ ಗೋಹತ್ಯೆಯನ್ನು ನಿಷೇಧ ಮಾಡಿದ್ದಾದರೆ, ಜನರನ್ನು ವಿಭಜಿಸುವುದಕ್ಕಿರುವ ಪ್ರಮುಖ ಅಸ್ತ್ರವೇ ಬಿಜೆಪಿಯ ಪಾಲಿಗೆ ಇಲ್ಲವಾಗುತ್ತದೆ.
ಇತ್ತೀಚೆಗೆ ಈದ್ ಸಂದರ್ಭದಲ್ಲಿ ಪಶ್ಚಿಮಬಂಗಾಳದಲ್ಲಿ ಮುಸ್ಲಿಮ್ ಮುಖಂಡರು ಕುರ್ಬಾನಿಗಾಗಿ ‘ಗೋವುಗಳನ್ನು ಖರೀದಿ ಮಾಡದಂತೆ’ ಕರೆ ನೀಡಿದ್ದರು. ಇದು ಪಶ್ಚಿಮಬಂಗಾಳದ ರೈತರ ಮೇಲೆ ಭಾರೀ ಪರಿಣಾಮ ಬೀರಿತು. ಬರೇ ಪಶ್ಚಿಮಬಂಗಾಳ ಮಾತ್ರವಲ್ಲ ಇಡೀ ದೇಶದಲ್ಲಿ ಈ ಬಹಿಷ್ಕಾರ ಸದ್ದು ಮಾಡಿತು. ತಮ್ಮ ಅನುಪಯುಕ್ತ ಗೋವುಗಳನ್ನು ಖರೀದಿಸುವವರಿಲ್ಲದೆ ರೈತರು ಕಂಗಾಲಾದರು. ಅಷ್ಟೇ ಅಲ್ಲದೆ, ಗೋವಿನ ಹೆಸರಿನಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗೋಹತ್ಯೆ ವಿರುದ್ಧ ಕಠಿಣ ಕಾನೂನನ್ನು ಜಾರಿಗೆ ತರಲು ಮುಸ್ಲಿಮ್ ಮುಖಂಡರೇ ಒತ್ತಾಯಿಸಿದ್ದಾರೆ. ದೇಶಾದ್ಯಂತ ಮುಸ್ಲಿಮ್ ಸಂಘಟನೆಗಳು ‘‘ಗೋವುಗಳನ್ನು ರಾಷ್ಟ್ರೀಯ ಪ್ರಾಣಿ’’ ಎಂದು ಘೋಷಿಸಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಎಂದು ಒತ್ತಾಯಿಸಿದ್ದಾರೆ. ಹೀಗೆ ಗೋಮಾಂಸ ಸೇವಿಸುವ ಒಂದು ವರ್ಗವೇ ಗೋವಿಗಾಗಿ ತಮ್ಮ ಆಹಾರವನ್ನು ತ್ಯಜಿಸಲು ಮುಂದಾಗಿದ್ದರೂ ಬಿಜೆಪಿ ಯಾಕೆ ದೇಶದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧಕ್ಕೆ ಮುಂದಾಗುತ್ತಿಲ್ಲ? ಎನ್ನುವ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ. ಗೋಹತ್ಯೆ ನಿಷೇಧವಾಗಬೇಕು, ಗೋವುಗಳ ಮಾಂಸವನ್ನು ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಸೇವಿಸುವುದನ್ನು ತಡೆಯಬೇಕು. ಅದಕ್ಕಾಗಿ ಮೊದಲು ಭಾರತದಿಂದ ಗೋಮಾಂಸ ರಫ್ತು ನಿಲ್ಲಬೇಕು. ಇದರ ಮೊದಲ ಹೆಜ್ಜೆಯಾಗಿ ‘ಗೋವನ್ನು ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಬೇಕು ಎಂದು ಮುಸ್ಲಿಮ್ ಸಂಘಟನೆಗಳು ಒತ್ತಾಯಿಸುತ್ತಿವೆ. ಆದರೆ ಕೇಂದ್ರ ಸರಕಾರ ಜಾಣಕಿವುಡು ನಟಿಸುತ್ತಿದೆ.
ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸುವುದಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಕೂಡ ನಿರಾಕರಿಸಿದ್ದಾರೆ. ‘‘ಗೋಮಾತೆ ನಮ್ಮ ರಾಷ್ಟ್ರಮಾತೆ. ತಾಯಿ ಮಗುವಿನ ನಡುವಿನ ಬಾಂಧವ್ಯಕ್ಕೆ ಅಧಿಕೃತ ಮಾನ್ಯತೆ ಅಗತ್ಯವಿದೆಯೆ? ತಾಯಿಯನ್ನು ಗೌರವಿಸು ಎಂದು ಹೇಳಬೇಕಾದ ಸ್ಥಿತಿ ನಮಗೆ ಬಂದಿಲ್ಲ’’ ಎಂದಿದ್ದಾರೆ. ಆದರೆ ಇಲ್ಲಿ ಗೋಮಾತೆಯನ್ನು ತಾಯಿ ಎಂದು ಗೌರವಿಸುವ ಉದ್ದೇಶದಿಂದ ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸುವುದಲ್ಲ. ಗೋವನ್ನು ಹತ್ಯೆ ಮಾಡಿ ಅದರ ಮಾಂಸವನ್ನು ರಫ್ತು ಮಾಡದಂತೆ ತಡೆಯುವುದಕ್ಕಾಗಿ ಈ ಮಾನ್ಯತೆಯನ್ನು ಕೊಡಲು ಒತ್ತಾಯಿಸಲಾಗುತ್ತಿದೆ. ಇಷ್ಟಕ್ಕೂ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು ಎಂದು ಮೊದಲು ಒತ್ತಾಯಿಸಿದವರು ಉಡುಪಿಯ ಈ ಹಿಂದಿನ ಮಠಾಧೀಶರಾಗಿದ್ದ ಪೇಜಾವರ ಶ್ರೀಗಳು. ‘ದೇಶದ ರಾಷ್ಟ್ರೀಯ ಪ್ರಾಣಿಯಾಗಿ ಹುಲಿಯ ಬದಲಿಗೆ ಗೋವನ್ನು ಘೋಷಿಸಬೇಕು. ಹುಲಿ ದೇಶದ ರಾಷ್ಟ್ರೀಯಪ್ರಾಣಿಯಾಗಿರುವುದು ಪರೋಕ್ಷವಾಗಿ ತಾಮಸ ಗುಣವನ್ನು ಎತ್ತಿ ಹಿಡಿದಂತಾಗಿದೆ’’ ಎಂದು ಅವರು ಹೇಳಿಕೆ ನೀಡಿದ್ದರು. ರಾಮನನ್ನು ಇಡೀ ದೇಶ ಹೃದಯದಲ್ಲಿಟ್ಟು ಪೂಜಿಸುತ್ತಿದೆ. ಹಾಗೆಂದು ರಾಮಮಂದಿರ ನಿರ್ಮಾಣ ಮಾಡಿಲ್ಲವೆ? ಹೀಗಿರುವಾಗ ಇಡೀ ದೇಶ ಮಾತೆಯೆಂದು ಪೂಜಿಸುವ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ ಅದನ್ನು ಸಂರಕ್ಷಿಸುವುದಕ್ಕೆ ಇರುವ ಅಡ್ಡಿಯಾದರೂ ಏನು? ಸುಪ್ರೀಂಕೋರ್ಟ್ ಕೂಡ ಗೋಹತ್ಯೆಯ ಕುರಿತಂತೆ ಸಮಯ ಸಾಧಕತನವನ್ನು ಮೆರೆಯುತ್ತಿದೆ. ಒಂದೆಡೆ, ಗೋವಿನ ಹೆಸರಿನಲ್ಲಿ ದೇಶಾದ್ಯಂತ ಮನುಷ್ಯರ ಮೇಲೆ ನಡೆಯುತ್ತಿರುವ ದಾಳಿಗಳನ್ನು ನೋಡಿಯೂ ನೋಡದಂತೆ ನಟಿಸುತ್ತಿದೆ. ಮಗದೊಂದೆಡೆ, ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ ಎಂದು ಒತ್ತಾಯಿಸಿದ ಅರ್ಜಿದಾರರಿಗೆ ಎಚ್ಚರಿಕೆಯನ್ನು ನೀಡುತ್ತದೆ. ಆದರೆ ಕೆಲವು ವರ್ಷಗಳ ಹಿಂದೆ ಅಲಹಾಬಾದ್ ಹೈಕೋರ್ಟ್ ಪ್ರಕರಣವೊಂದರ ವಿಚಾರಣೆ ನಡೆಸುತ್ತಾ ‘‘ಈ ದೇಶದಲ್ಲಿ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು. ಗೋ ರಕ್ಷಣೆಯನ್ನು ಹಿಂದೂಗಳ ಮೂಲಭೂತ ಹಕ್ಕಾಗಿರಿಸಿಕೊಳ್ಳಬೇಕು’’ ಎಂದು ಹೇಳಿತ್ತು. ಒಬ್ಬ ಹೈಕೋರ್ಟ್ ನ್ಯಾಯಾಧೀಶರು ತೀರ್ಪು ನೀಡುವ ಸಂದರ್ಭದಲ್ಲಿ ಇಂತಹದೊಂದು ಹೇಳಿಕೆಯನ್ನು ನೀಡಬಹುದು ಎಂದರೆ, ಗೋವಿನ ಬಗ್ಗೆ ಕಾಳಜಿಯಿರುವ ವ್ಯಕ್ತಿಯೊಬ್ಬ ಈ ಬಗ್ಗೆ ಕಾನೂನು ತರಲು ಸುಪ್ರೀಂಕೋರ್ಟನ್ನು ಯಾಕೆ ಒತ್ತಾಯಿಸ ಬಾರದು? ಒಂದು ಸಮುದಾಯದ ಮೇಲೆ ದಾಳಿ ನಡೆಸುವ ಉದ್ದೇಶಕ್ಕಾಗಿ ಗೋವಿನ ಮೇಲೆ ವ್ಯಕ್ತಪಡಿಸುವ ಪ್ರೀತಿ ಬೂಟಾಟಿಕೆಯದ್ದು ಮಾತ್ರವಲ್ಲ, ಇದು ತಾಯಿ ಎನ್ನುವ ಮೌಲ್ಯಕ್ಕೆ ಮಾಡುವ ದ್ರೋಹ. ಮೊದಲು ಕೇಂದ್ರ ಸರಕಾರ ‘‘ವಿದೇಶಕ್ಕೆ ರಫ್ತಾಗುವ ಮಾಂಸಗಳಲ್ಲಿ ಗೋಮಾಂಸ ಇಲ್ಲ’’ ಎಂದು ಸ್ಪಷ್ಟವಾಗಿ ಹೇಳಲಿ. ವಿದೇಶಗಳಿಗೆ ಗೋಮಾಂಸ ಸಾಗಾಟ ಮಾಡಲು ಗೋಹತ್ಯೆ ಮಾಡಬಹುದು ಎಂದಾದರೆ, ಗೋಮಾಂಸವನ್ನು ಆಹಾರವಾಗಿ ಬಳಸುವ ದೇಶದೊಳಗಿರುವ ಬಹುಸಂಖ್ಯಾತ ಸಮುದಾಯಗಳಿಗೆ ಯಾಕೆ ನಿಷೇಧ? ಈ ಪ್ರಶ್ನೆಗೆ ಸರಕಾರ ಉತ್ತರಿಸಲೇಬೇಕು. ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಅಗತ್ಯವಿಲ್ಲ ಎನ್ನುವ ಆದಿತ್ಯನಾಥ್, ವಿದೇಶಗಳಿಗೆ ಗೋಮಾಂಸ ರಫ್ತಾಗುತ್ತಿರುವ ಬಗ್ಗೆ ಏನನ್ನುತ್ತಾರೆ? ಗೋವನ್ನು ನಿಜಕ್ಕೂ ಮಾತೃ ಸ್ಥಾನದಲ್ಲಿ ಇಟ್ಟಿರುವುದು ನಿಜವೇ ಆಗಿದ್ದರೆ ಗೋಮಾಂಸ ರಫ್ತಿನಲ್ಲಿ ಉತ್ತರ ಪ್ರದೇಶ ಯಾಕೆ ಮೊದಲ ಸ್ಥಾನದಲ್ಲಿದೆ? ಗೋವಿನ ಕುರಿತಂತೆ, ಗೋಮಾಂಸದ ಕುರಿತಂತೆ ಕೇಂದ್ರ ಸರಕಾರ ತನ್ನ ದ್ವಂದ್ವ ನೀತಿಯನ್ನು ಕೈ ಬಿಡದೇ ಇದ್ದರೆ, ಭಾರತದಲ್ಲಿ ಗೋವು ಅಳಿವಿನಂಚಿಗೆ ತಲುಪುವುದರಲ್ಲಿ ಸಂಶಯವಿಲ್ಲ. ಯಾಕೆಂದರೆ ಈ ದೇಶದಲ್ಲಿ ಗೋವುಗಳನ್ನು ಸಾಕುವುದು ಪೂಜಿಸುವುದಕ್ಕಲ್ಲ, ಆರ್ಥಿಕವಾಗಿ ಸಬಲರಾಗುವುದಕ್ಕೆ. ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಹೈನೋದ್ಯಮ ನಷ್ಟಕ್ಕೀಡಾಗಿ ರೈತರು ಗೋಸಾಕಣೆಯನ್ನೇ ನಿಲ್ಲಿಸಿದರೆ ಅಚ್ಚರಿಯಿಲ್ಲ. ಇದು ಭಾರತದ ಆರ್ಥಿಕತೆಯ ಗಾಯಗಳ ಮೇಲೆ ಇನ್ನೊಂದು ಬರೆ ಎಳೆದಂತಾಗಬಹುದು.






