Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಪ್ರಧಾನಿ ಮೋದಿಯಿಂದ ಆರೆಸ್ಸೆಸ್...

ಪ್ರಧಾನಿ ಮೋದಿಯಿಂದ ಆರೆಸ್ಸೆಸ್ ನಿರೀಕ್ಷಿಸುತ್ತಿರುವುದೇನು?

ವಾರ್ತಾಭಾರತಿವಾರ್ತಾಭಾರತಿ14 Jun 2024 9:07 AM IST
share
ಪ್ರಧಾನಿ ಮೋದಿಯಿಂದ ಆರೆಸ್ಸೆಸ್ ನಿರೀಕ್ಷಿಸುತ್ತಿರುವುದೇನು?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಆರೆಸ್ಸೆಸ್ ಸಂಚಾಲಕರಾಗಿರುವ ಮೋಹನ್ ಭಾಗವತ್ ಅವರು ಪ್ರಧಾನಿ ಮೋದಿಯ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದಾರೆ. ಬಿಜೆಪಿಯ ಸೋಲಿನ ಜೊತೆಗೆ ತನ್ನ ಅಂತರವನ್ನು ಕಾಪಾಡುವ ಪ್ರಯತ್ನದ ಭಾಗ ಇದು ಎನ್ನುವುದು ಮೇಲ್ನೋಟಕ್ಕೇ ಗೊತ್ತಾಗಿ ಬಿಡುತ್ತದೆ. ‘‘ನಿಜವಾದ ಸ್ವಯಂ ಸೇವಕ ದುರಹಂಕಾರಿಯಾಗಲು ಸಾಧ್ಯವಿಲ್ಲ. ಸಾರ್ವಜನಿಕ ಜೀವನದಲ್ಲಿ ಸಭ್ಯತೆಯಿಂದ ವರ್ತಿಸಬೇಕು’’ ಎಂದು ಅವರು ಪ್ರಧಾನಿ ಮೋದಿಯವರಿಗೆ ಕಿವಿ ಮಾತುಗಳನ್ನು ಆಡಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಸಹಿತ ಬಿಜೆಪಿ ನಾಯಕರು ಮಾಡಿದ ಭಾಷಣಗಳ ಬಗ್ಗೆ ಅವರು ಅಸಮ್ಮತಿಯನ್ನೂ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ವರ್ಷ ಕಳೆದರೂ ಹೊತ್ತಿ ಉರಿಯುತ್ತಲೇ ಇರುವ ಮಣಿಪುರ ಹಿಂಸಾಚಾರಕ್ಕೆ ಮೋದಿ ಆಡಳಿತವನ್ನು ಅವರು ಪರೋಕ್ಷವಾಗಿ ಹೊಣೆ ಮಾಡಿದ್ದಾರೆ. ‘‘ಮಣಿಪುರವನ್ನು ಸಹಜ ಸ್ಥಿತಿಗೆ ತರಲು ಸರಕಾರಕ್ಕೆ ಸಾಧ್ಯವಾಗಿಲ್ಲ. ಅಶಾಂತಿಯ ಬೀಡಾಗಿರುವ ಮಣಿಪುರದ ಪರಿಸ್ಥಿತಿಯನ್ನು ಸುಧಾರಣೆ ಮಾಡಬೇಕಾಗಿದೆ. ಕೇಂದ್ರ ಸರಕಾರ ಆದಷ್ಟು ಬೇಗ ಶಾಂತಿ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಬೇಕು’’ ಎಂದು ಅವರು ಆಗ್ರಹಿಸಿದ್ದಾರೆ. ಮೋದಿಯ ವಿರುದ್ಧ ನೀಡಿದ ಆರೆಸ್ಸೆಸ್ ಹೇಳಿಕೆಗೆ ವಿರೋಧ ಪಕ್ಷದ ನಾಯಕರು ಸಂಭ್ರಮಿಸಿದ್ದಾರೆ. ಪ್ರಧಾನಿ ಮೋದಿಯ ಆಡಳಿತದ ಬಗ್ಗೆ ಆರೆಸ್ಸೆಸ್ ಕೂಡ ಭ್ರಮನಿರಸನ ಹೊಂದಿದೆ ಎಂದು ಅವರು ಭಾಗವತ್ ಹೇಳಿಕೆಯನ್ನು ವ್ಯಾಖ್ಯಾನಿಸುತ್ತಿದ್ದಾರೆ. ಮೋದಿಯ ಟೀಕಾಕಾರರ ಪಾಲಿಗೂ ಆರೆಸ್ಸೆಸ್ ಹೇಳಿಕೆ ಖುಷಿ ತಂದಿದೆ. ಮೋದಿ ವಿರುದ್ಧ ಆರೆಸ್ಸೆಸ್ ಟೀಕೆಯೇನೋ ಸರಿ. ಆದರೆ ಅದು ಭಾರತದ ಕುರಿತಂತೆ, ಮಣಿಪುರದ ಕುರಿತಂತೆ ನಿಜವಾದ ಕಾಳಜಿಯನ್ನು ಹೊಂದಿದೆಯೆ? ನಿಜಕ್ಕೂ ಆರೆಸ್ಸೆಸ್ ಮೋದಿಯಿಂದ ಬಯಸುತ್ತಿರುವುದು ಏನು? ಇದು ಚರ್ಚೆಗೆ ಅರ್ಹವಾಗಿದೆ.

ಬಿಜೆಪಿ ಆರೆಸ್ಸೆಸ್‌ನ ರಾಜಕೀಯ ಮುಖ ಎನ್ನುವುದರಲ್ಲಿ ಎರಡು ಮಾತಿಲ್ಲ. ಜನಸಂಘದಿಂದ ರೂಪಾಂತರಗೊಂಡ ದಿನದಿಂದ ಇಂದಿನವರೆಗೆ ಬಿಜೆಪಿಯ ಸೋಲು-ಗೆಲುವಿನಲ್ಲಿ, ನೀತಿ-ನಿಲುವಿನಲ್ಲಿ ಆರೆಸ್ಸೆಸ್ ನಿರ್ಣಾಯಕ ಪಾತ್ರವನ್ನು ವಹಿಸುತ್ತಾ ಬಂದಿದೆ. ಬಿಜೆಪಿ ಸರಕಾರವನ್ನು ಬಳಸಿಕೊಂಡು ಅದು ಭಾರತದ ಪ್ರಜಾಸತ್ತೆಯ ಮೇಲೆ ಬಹಳಷ್ಟು ಹಸ್ತಕ್ಷೇಪಗಳನ್ನು ಮಾಡಿದೆ. ಆದರೆ ತನ್ನಿಂದಲೇ ಬಿಜೆಪಿ ಎನ್ನುವ ಆರೆಸ್ಸೆಸ್ ‘ಅಹಂಕಾರ’ಕ್ಕೆ ಸಣ್ಣದೊಂದು ಪೆಟ್ಟು ನೀಡಿದ್ದು ನರೇಂದ್ರ ಮೋದಿ. ಕಾರ್ಪೊರೇಟ್ ಶಕ್ತಿ ಮತ್ತು ಮಾಧ್ಯಮಗಳನ್ನು ಬಳಸಿಕೊಂಡು ಮೋದಿ ಬಿಜೆಪಿಯೊಳಗೆ ಸರ್ವಾಂತರ್ಯಾಮಿಯಾದರು. ತನ್ನನ್ನು ಮೀರಿ ಮೋದಿ ಬಿಜೆಪಿಯೊಳಗೆ ಬೆಳೆಯುತ್ತಿರುವುದು ಆರೆಸ್ಸೆಸ್‌ಗೆ ದುರಹಂಕಾರವಾಗಿ ಕಂಡಿದೆ. ಮೋದಿಯ ಈ ದುರಂಹಕಾರವನ್ನು ಆರೆಸ್ಸೆಸ್ ಪ್ರಶ್ನಿಸಿದೆಯೇ ಹೊರತು, ಅದರಲ್ಲಿ ಈ ದೇಶದ ಕುರಿತಂತೆ ಯಾವ ಕಾಳಜಿಯೂ ಇದ್ದಂತಿಲ್ಲ.

ಕೋಟೆ ಸೂರೆ ಹೋದ ಮೇಲೆ ಮಣಿಪುರದ ದಿಡ್ಡಿ ಬಾಗಿಲು ಹಾಕಲು ಹೊರಟಿದ್ದಾರೆ ಆರೆಸ್ಸೆಸ್‌ನ ಭಾಗವತ್. ಮಣಿಪುರ ಹಿಂಸಾಚಾರವನ್ನು ಬಿಜೆಪಿ ಮತ್ತು ಆರೆಸ್ಸೆಸ್ ಜಂಟಿಯಾಗಿ ಪ್ರಾಯೋಜಿಸಿದ್ದವು. ಮಣಿಪುರದ ಪ್ರಬಲ ಮೈತೈ ಸಮುದಾಯವನ್ನು ಅಲ್ಲಿನ ಕುಕಿ ಸಮುದಾಯದ ವಿರುದ್ಧ ಎತ್ತಿ ಕಟ್ಟಿರುವುದು ಸಂಘಪರಿವಾರವೇ ಆಗಿದೆ. ಎರಡು ಬುಡಕಟ್ಟು ಸಮುದಾಯದ ನಡುವಿನ ಸಂಘರ್ಷಕ್ಕೆ ಹಿಂದೂ-ಕ್ರಿಶ್ಚಿಯನ್ ರೂಪವನ್ನು ಕೊಟ್ಟಿರುವುದು ಕೂಡ ಹಿಂದುತ್ವ ಸಂಘಟನೆಗಳೇ ಆಗಿವೆ. ಮಣಿಪುರದ ಭೂಮಿಯ ಮೇಲಿನ ಬುಡಕಟ್ಟು ಸಮುದಾಯದ ಹಕ್ಕುಗಳನ್ನು ದುರ್ಬಲಗೊಳಿಸುವುದಕ್ಕೋಸ್ಕರ ಮೈತೈ ಸಮುದಾಯಕ್ಕೂ ಮೀಸಲಾತಿಯನ್ನು ನೀಡಲು ಅಲ್ಲಿನ ಸರಕಾರ ಮುಂದಾಯಿತು. ಬುಡಕಟ್ಟು ಸಮುದಾಯದ ನಡುವೆ ಹಿಂದುತ್ವವಾದಿ ಚಿಂತನೆಗಳನ್ನು ಬಿತ್ತಿ ಅವರನ್ನು ಹಿಂಸಾಚಾರಕ್ಕೆ ಪ್ರೇರೇಪಿಸಿದ್ದು, ಕುಕಿಗಳ ವಿರುದ್ಧ ಮೈತೈ ಸಮುದಾಯವನ್ನು ಎತ್ತಿ ಕಟ್ಟಿದ್ದು ಯಾರು ಎನ್ನುವುದು ಗುಟ್ಟಿನ ವಿಷಯವೇನೂ ಅಲ್ಲ. ನೂರಾರು ಚರ್ಚುಗಳನ್ನು ಧ್ವಂಸಗೊಳಿಸಿ, ಕುಕಿಗಳ ಮೇಲೆ ಭೀಕರ ಹಿಂಸಾಚಾರ ನಡೆಯುತ್ತಿರುವಾಗ ಅದನ್ನು ಸಮರ್ಥಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆಗಳನ್ನು ನೀಡಿರುವುದು ಕೂಡ ಸಂಘಪರಿವಾರ ಕಾರ್ಯಕರ್ತರೇ. ಮಣಿಪುರದಲ್ಲಿ ನಡೆಯುತ್ತಿರುವ ಸರ್ವ ಅಕ್ರಮ, ಅನಾಚಾರ, ಮಾದಕ ದ್ರವ್ಯ ವ್ಯಾಪಾರಗಳೆಲ್ಲವೂ ಕುಕಿಗಳಿಂದಲೇ ನಡೆಯುತ್ತಿವೆ ಎಂದು ಪ್ರತಿಪಾದಿಸುತ್ತಾ ಅವರ ಮೇಲಿನ ದೌರ್ಜನ್ಯಗಳನ್ನು ಸಂಘಪರಿವಾರ ಸಮರ್ಥಿಸತೊಡಗಿತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇದೇ ಭಾಗವತ್ ಅವರು ‘‘ಮಣಿಪುರ ಹಿಂಸಾಚಾರಕ್ಕೆ ಹೊರಗಿನ ಶಕ್ತಿಗಳು ಕಾರಣ’’ ಎಂಬ ಹೇಳಿಕೆಯನ್ನು ನೀಡಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಬೇಕು ಎಂದು ಅವರು ಆಗ್ರಹಿಸಬಹುದಾಗಿತ್ತು. ಪ್ರಧಾನಿ ಮೌನ ಮುರಿಯಬೇಕು ಎಂದು ಒತ್ತಾಯಿಸಬಹುದಾಗಿತ್ತು. ಆದರೆ ಅಂತಹ ಯಾವ ಪ್ರಯತ್ನವೂ ಅವರಿಂದ ನಡೆಯಲಿಲ್ಲ. ಈ ಕಾರಣದಿಂದಲೇ, ಇದೀಗ ಮಣಿಪುರದ ಕುರಿತಂತೆ ಭಾಗವತ್ ಸುರಿಸುತ್ತಿರುವ ಮೊಸಳೆ ಕಣ್ಣೀರು ಪ್ರಶ್ನಾರ್ಹವಾಗಿದೆ. ಮಣಿಪುರ ಹಿಂಸಾಚಾರ ತನ್ನ ಕೈ ಮೀರಿದೆ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಅದರ ಹೊಣೆಯನ್ನು ಮೋದಿಯ ತಲೆಗೆ ಕಟ್ಟಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಆರೆಸ್ಸೆಸ್ ಯತ್ನಿಸುತ್ತಿದೆ.

ಆರೆಸ್ಸೆಸ್ ಬೇಲಿ ಮೇಲಿನ ಗೋಸುಂಬೆಯಂತೆ ಸಮಯಕ್ಕೆ ತಕ್ಕಂತೆ ಬಣ್ಣ ಬದಲಿಸುತ್ತಾ ಬಂದಿದೆ. ಪಾಕಿಸ್ತಾನದ ಜೊತೆಗೆ ಯುದ್ಧವಾಗಬೇಕು ಎಂಬಂತಹ ಹೇಳಿಕೆಯನ್ನು ನೀಡಿದ್ದ ಆರೆಸ್ಸೆಸ್, ಸಮಯ ಬಂದಾಗ ‘ಪಾಕಿಸ್ತಾನ ನಮ್ಮ ಸೋದರ ದೇಶ’ ಎಂದೂ ಬಾಯಿ ತುಂಬಾ ಮಮತೆಯನ್ನು ಸುರಿಸಿದೆ. ಭಾರತ ಹಿಂದೂ ರಾಷ್ಟ್ರ ಎಂದ ಆರೆಸ್ಸೆಸ್, ಇದು ಹಲವು ಧರ್ಮಗಳ ವೈವಿಧ್ಯತೆಯ ನಾಡು ಎಂದೂ ಪ್ರತಿ ಹೇಳಿಕೆಯನ್ನು ನೀಡಿದೆ. ಹಲವು ಬಾರಿ ಮೀಸಲಾತಿಯ ವಿರುದ್ಧ ಹೇಳಿಕೆಯನ್ನು ನೀಡಿರುವ ಆರೆಸ್ಸೆಸ್, ಅಗತ್ಯ ಬಿದ್ದಾಗ ಮೀಸಲಾತಿಯನ್ನು ಎತ್ತಿ ಹಿಡಿದಿದೆ. ಮೋದಿಯನ್ನು ಮುಂದಿಟ್ಟು ಆರೆಸ್ಸೆಸ್ ಮಾಡಿದ ಹಿಂದುತ್ವದ ಪ್ರಯೋಗಗಳೆಲ್ಲವೂ ಭಾಗಶಃ ವಿಫಲವಾಗಿದೆ. ಮೋದಿ ನೇತೃತ್ವದ ಸರಕಾರ ಮಾಡಿದ ಆರ್ಥಿಕ ಅಧ್ವಾನಗಳು ದೇಶವನ್ನು ಎಲ್ಲಿಗೆ ತಂದು ನಿಲ್ಲಿಸಿದೆ ಮತ್ತು ಅದು ಭವಿಷ್ಯದಲ್ಲಿ ದೇಶಕ್ಕೆ ಮಾಡಬಹುದಾದ ಹಾನಿಗಳೇನು ಎನ್ನುವುದು ಆರೆಸ್ಸೆಸ್‌ಗೆ ಅರ್ಥವಾಗತೊಡಗಿದೆ. ಇದೀಗ ಬಿಜೆಪಿ ಇತರ ಪಕ್ಷಗಳ ಬೆಂಬಲವಿಲ್ಲದೆ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎನ್ನುವ ಸ್ಥಿತಿಗೆ ಬಂದು ನಿಂತಿದೆ. ಈ ಕಾರಣದಿಂದಲೇ ಮೋದಿಯ ಜೊತೆಗೆ ಅದು ಅಂತರವನ್ನು ಕಾಯಲು ಮುಂದಾಗುತ್ತಿದೆ. ಮೋದಿಯನ್ನು ಟೀಕಿಸಿ ಎನ್‌ಡಿಎ ಒಳಗಿರುವ ಇತರ ಪಕ್ಷಗಳಿಗೆ ಹತ್ತಿರವಾಗಲು ಮುಂದಾಗಿದೆ.

ಆರೆಸ್ಸೆಸ್‌ನ ಇತಿಹಾಸವನ್ನು ಅರಿತವರಿಗಷ್ಟೇ ಅದರ ಸದ್ಯದ ನಡೆ ಅರ್ಥವಾಗಬಹುದು. ಅವರು ಮೊಗಲರ ಜೊತೆಗೂ ಇದ್ದರು. ಬಳಿಕ ಬ್ರಿಟಿಷರ ಜೊತೆಗೂ ಸೇರಿಕೊಂಡರು. ಒಡೆಯರ ಜೊತೆಗೂ ಇದ್ದರು. ಒಡೆಯರ್ ಪತನವಾಗುತ್ತಿದ್ದಂತೆಯೇ ಬಳಿಕ ಹೈದರ್, ಟಿಪ್ಪು ಜೊತೆಗೂ ಸೇರಿಕೊಂಡರು. ಟಿಪ್ಪು ಅವಸಾನದ ಬಳಿಕ ಬ್ರಿಟಿಷರ ಜೊತೆಗೆ ಕೈ ಜೋಡಿಸಿಕೊಂಡರು. ಸ್ವಾತಂತ್ರ್ಯ ಹೋರಾಟದ ನಟನೆಯನ್ನೂ ಮಾಡುತ್ತಲೇ ಬ್ರಿಟಿಷರಿಂದ ಗುಟ್ಟಾಗಿ ಪಿಂಚಣಿಯನ್ನು ತೆಗೆದುಕೊಂಡರು. ನೇತಾಜಿಯ ಸೇನೆ ಸೇರದಂತೆ ಯುವಕರನ್ನು ತಡೆದರು. ಹಿಟ್ಲರ್ ಸೇನೆಗೆ ವಿಜಯ ದೊರಕಿದ ವದಂತಿ ಹರಡಿದಾಕ್ಷಣ ಜರ್ಮನಿ ಭಾಷೆ ಕಲಿತು ಅವರ ಸ್ವಾಗತಕ್ಕೆ ಸಿದ್ಧರಾದರು. ಈ ಎಲ್ಲಾ ಹಿನ್ನೆಲೆಯಿರುವ ಆರೆಸ್ಸೆಸ್‌ನ ನಾಯಕರು, ಪ್ರಧಾನಿ ಮೋದಿ ದುರ್ಬಲರಾಗುತ್ತಿದ್ದಂತೆಯೇ ಅವರ ವಿರುದ್ಧ ಹೇಳಿಕೆ ನೀಡುವುದು ಸಹಜವೇ ಆಗಿದೆ. ಆರೆಸ್ಸೆಸ್ ಎನ್ನುವ ಸಿದ್ಧಾಂತ ಯಾವ ಪಾತ್ರೆಯಲ್ಲಿ ಬೇಕಾದರೂ ಸೇರಿಕೊಂಡು ಆ ಪಾತ್ರೆಯ ಆಕಾರಕ್ಕೆ ತಕ್ಕಂತೆ ತನ್ನನ್ನು ಒಗ್ಗಿಸಿಕೊಳ್ಳುತ್ತದೆ ಎನ್ನುವ ಎಚ್ಚರಿಕೆ ನಮ್ಮಲ್ಲಿ ಇರಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X