ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವೇನು?

ಸಾಂದರ್ಭಿಕ ಚಿತ್ರ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಬೇಸಿಗೆಯ ಬಿಸಿಲಿನ ಗರಿಷ್ಠ ತಾಪಮಾನದಿಂದ ರಾಜ್ಯದ ಜನರು ಬಸವಳಿದು ಹೋಗಿದ್ದಾರೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಂತೂ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ. ಬಿಸಿಲಿನ ಪ್ರಖರತೆಯ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪ ತಾಳಿದೆ. ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ರಾಜ್ಯದ 16 ಜಿಲ್ಲೆಗಳ 48 ತಾಲೂಕುಗಳ 240 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.
ಮೇ ತಿಂಗಳ ಎರಡನೇ ವಾರದ ನಂತರ ತಾಪಮಾನ ಇನ್ನೂ ಗರಿಷ್ಠ ವನ್ನು ತಲುಪುವ ಸಂಭವವಿದೆ. ಇನ್ನೊಂದು ವಾರದಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಇನ್ನೂ ತೀವ್ರ ಸ್ವರೂಪ ತಾಳಲಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವರದಿ ಮಾಡಿದೆ.
ಈ ಉರಿ ಬೇಸಿಗೆಯ ಜೊತೆಗೆ ಎಲ್ಲೆಡೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಬಯಲು ಸೀಮೆ, ಕರಾವಳಿ, ಮಲೆನಾಡು, ಸೇರಿದಂತೆ ರಾಜ್ಯದ ಬಹುತೇಕ ಕಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಪರಿಸ್ಥಿತಿ ಇಷ್ಟು ಗಂಭೀರ ಸ್ವರೂಪ ತಾಳುತ್ತಿದ್ದರೂ ಅಧಿಕೃತವಾಗಿ ಬರಗಾಲದ ಘೋಷಣೆಯಾಗಿಲ್ಲ ಎಂದು ನೆಪ ಮುಂದೆ ಮಾಡಿ ಕುಡಿಯುವ ನೀರಿಗೆ ಅನುದಾನ ಬಿಡುಗಡೆ ಮಾಡಲು ಸಂಬಂಧಿಸಿದವರು ನಿರಾಕರಿಸುತ್ತಿದ್ದಾರೆ. ಆದರೆ ಇಂಥ ಗಂಭೀರ ಪರಿಸ್ಥಿತಿಯಲ್ಲಿ ಇದಾವುದೂ ಅಡ್ಡಿಯಾಗಬಾರದು. ಇನ್ನಾದರೂ ರಾಜ್ಯ ಸರಕಾರ ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಮಂತ್ರಿಗಳು ತಮಗೆ ಸಂಬಂಧಿಸಿದ ಜಿಲ್ಲೆಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಪರಿಸ್ಥಿತಿ ಬಗ್ಗೆ ಪ್ರತ್ಯಕ್ಷ ಪರಿಶೀಲನೆ ನಡೆಸಬೇಕು. ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ ಅವರಿಂದ ಅಗತ್ಯ ಮಾಹಿತಿಯನ್ನು ಪಡೆದು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ಕೊಳವೆ ಬಾವಿಗಳನ್ನು ಕೊರೆಸುವುದು, ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ತೆಗೆದುಕೊಳ್ಳುವುದು, ಕುಡಿಯುವ ನೀರಿನ ಕೊರತೆಯನ್ನು ಎದುರಿಸುವ ಹಳ್ಳಿಗಳಿಗೆ ಟ್ಯಾಂಕರ್ಗಳ ಮೂಲಕ ನೀರು ಪೂರೈಸುವುದು ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳುವುದು ತುರ್ತು ಅಗತ್ಯವಾಗಿದೆ.
ಇದೇನು ಈ ವರ್ಷದ ಸಮಸ್ಯೆ ಮಾತ್ರವಲ್ಲ, ಪ್ರತಿವರ್ಷ ಬೇಸಿಗೆ ಬಂದಾಗ ಜನಸಾಮಾನ್ಯರು ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಪರದಾಡುವುದು ಹೊಸದಲ್ಲ. ಚುನಾವಣೆಯ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆ ಹರಿಸುವುದಾಗಿ ಭರವಸೆ ನೀಡುವ ಜನಪ್ರತಿನಿಧಿಗಳು ಚುನಾಯಿತರಾಗಿ ಬಂದ ನಂತರ ತಮ್ಮ ಅಧಿಕಾರ ರಾಜಕಾರಣದಲ್ಲಿ ಮುಳುಗಿ ಬಿಡುತ್ತಾರೆ. ನೀರು ಪೂರೈಕೆಗೆ ಹಣಕಾಸಿನ ತೊಂದರೆ ಇಲ್ಲವೆಂದು ಸಂಬಂಧಿಸಿದ ಮಂತ್ರಿಗಳು ಹೇಳುತ್ತಾರೆ. ಆದರೆ ಗ್ರಾಮ ಪಂಚಾಯತ್ಗಳಿಗೆ ಅನುದಾನ ಬಂದಿಲ್ಲವೆಂದು ಪಂಚಾಯತ್ನವರು ಹೇಳುತ್ತಾರೆ. ಇಂಥ ತಾಂತ್ರಿಕ ಸಮಸ್ಯೆಗಳು ಕುಡಿಯುವ ನೀರಿನ ಪೂರೈಕೆಗೆ ಅಡ್ಡಿಯಾಗಬಾರದು.
ರಾಜ್ಯದಲ್ಲಿ ಕೆರೆ, ಬಾವಿಗಳಿಗೆ ಕೊರತೆಯಿಲ್ಲ. ಆದರೆ ನಗರ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಬಹುತೇಕ ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಬಡಾವಣೆಗಳನ್ನು ಮಾಡಿದೆ.ಇನ್ನುಳಿದ ಕೆರೆಗಳಲ್ಲಿ ಹೂಳು ತುಂಬಿದೆ. ಅವುಗಳ ನೀರನ್ನು ಪ್ರಾಣಿ ಪಕ್ಷಿಗಳೂ ಕುಡಿಯುವುದಿಲ್ಲ. ಕೊಳವೆ ಬಾವಿಗಳನ್ನು ಕೊರೆಸುವ ಬದಲಾಗಿ ಈ ಕೆರೆಗಳ ಹೂಳನ್ನು ತೆಗೆದು ಸ್ವಚ್ಛ ಗೊಳಿಸಿದರೆ ಎಂಥ ಬೇಸಿಗೆ ಬಂದರೂ ತೊಂದರೆಯಾಗುವುದಿಲ್ಲ. ಇನ್ನು ನದಿಗಳ ಪರಿಸ್ಥಿತಿ ಅತ್ಯಂತ ದಾರುಣವಾಗಿದೆ. ಅನೇಕ ಕಡೆ ಕೈಗಾರಿಕೆಗಳ ತ್ಯಾಜ್ಯ ನದಿ ನೀರಿನಲ್ಲಿ ಸೇರುವುದರಿಂದ ನದಿ ನೀರು ಕುಡಿಯಲಾಗದಷ್ಟು ಮಲಿನವಾಗಿ ಹೋಗಿದೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಲ್ಪಿಸಲು ಸಾಧ್ಯವಾಗಿಲ್ಲ. ಕೊಳವೆ ಬಾವಿಗಳನ್ನು ಕೊರೆಸಿದರೂ ಅಲ್ಲಿನ ನೀರಿನಲ್ಲಿ ಯುರೇನಿಯಂ ಕಂಡು ಬಂದಿರುವುದರಿಂದ ನದಿ ನೀರನ್ನು ಬಳಸುವ ಜನರ ಆರೋಗ್ಯ ಹದಗೆಡುತ್ತಿದೆ. ಇದರಿಂದ ಮೂತ್ರಪಿಂಡ ಕಾಯಿಲೆ, ಕ್ಯಾನ್ಸರ್ನಂಥ ಮಾರಕ ವ್ಯಾಧಿಗಳು ಕಾಣಿಸಿಕೊಳ್ಳುತ್ತಿವೆ. ಅಷ್ಟೇ ಅಲ್ಲ ಈ ಕಲುಷಿತ ನೀರಿನಿಂದ ಜನರ ರೋಗ ನಿರೋಧಕ ಶಕ್ತಿ ಕ್ರಮೇಣ ಕ್ಷೀಣಿಸುತ್ತದೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಾಗಲೆಲ್ಲ, ಸರಕಾರ ಕೊಳವೆ ಬಾವಿಗಳನ್ನು ಕೊರೆಸಲು ಮುಂದಾಗುತ್ತದೆ. ಆದರೆ ಇವುಗಳ ದುಷ್ಪರಿಣಾಮದ ಬಗ್ಗೆ ಯೋಚಿಸುವುದಿಲ್ಲ. ಜನಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ ನೀರಿನ ಬಳಕೆಯೂ ಜಾಸ್ತಿಯಾಗುತ್ತದೆ. 2030ನೇ ಇಸವಿಗೆ ಈ ಸಮಸ್ಯೆ ಇನ್ನೂ ಉಲ್ಬಣಿಸುವ ಸಂಭವವಿದೆ.
ಹಳ್ಳಿಗಳ ಪರಿಸ್ಥಿತಿ ಹಾಳಾಗಿ ಅಲ್ಲಿನ ಜನ ನಗರಗಳಿಗೆ ಸಾವಿರಾರು ಸಂಖ್ಯೆಯಲ್ಲಿ ವಲಸೆ ಬರುತ್ತಿರುವುದರಿಂದ ಜನಸಂಖ್ಯಾ ಭಾರದಿಂದ ಮಹಾನಗರಗಳು ತತ್ತರಿಸಿ ಹೋಗಿವೆ. ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಶಾಶ್ವತವಾದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಎಲ್ಲದಕ್ಕೂ ಕೊಳವೆ ಬಾವಿಯ ನಿರ್ಮಾಣದಂತಹ ಯೋಜನೆಗಳು ಪ್ರಯೋಜನಕಾರಿಯಲ್ಲ. ಕೋಲಾರ ಹಾಗೂ ಚಿಕ್ಕ ಬಳ್ಳಾಪುರ ಜಿಲ್ಲೆಗಳಲ್ಲಿ ಮಳೆಗಾಲದಲ್ಲಿ 800 ಮಿಲಿ ಮೀಟರ್ನಷ್ಟು ಮಳೆಯಾಗುತ್ತದೆ. ಇದನ್ನು ವ್ಯವಸ್ಥಿತವಾಗಿ ಹಿಡಿದಿಟ್ಟುಕೊಳ್ಳುವ ಯೋಜನೆಯನ್ನು ರೂಪಿಸಿದರೆ, ಪ್ರತೀ ಹೆಕ್ಟೇರ್ಗೆ 800 ಲಕ್ಷ ಲೀಟರ್ ನೀರು ಸಿಗುತ್ತದೆ. ಅದನ್ನು ಕುಡಿಯುವ ನೀರಿಗಾಗಿ ಬಳಸಿಕೊಳ್ಳಬಹುದಾಗಿದೆ. ಈ ವಿಧಾನದ ಬಗ್ಗೆ ಸರಕಾರ ಯೋಚಿಸಿ ಕ್ರಮ ಕೈಗೊಳ್ಳಬೇಕಾಗಿದೆ.
ಈ ನೀರಿನ ಸಮಸ್ಯೆಗೆ ಯಾರು ಕಾರಣ? ನಾವು ಕೆರೆ ಕಟ್ಟೆಗಳನ್ನು ಸುವ್ಯವಸ್ಥಿತವಾಗಿ ಇಟ್ಟುಕೊಂಡಿದ್ದರೆ, ನೀರಿನ ದುಂದು ಬಳಕೆಗೆ ಕಡಿವಾಣ ಹಾಕಿದ್ದರೆ, ಮರಳು ಗಣಿಗಾರಿಕೆಗೆ ಕಡಿವಾಣ ಹಾಕಿದ್ದರೆ, ನಮ್ಮ ಹಿರಿಯರು ನಿರ್ಮಿಸಿದ ಕೆರೆಗಳನ್ನು ಕಾಪಾಡಿಕೊಂಡಿದ್ದರೆ, ಕಾಡುಗಳು ಹಾಳಾಗಿ ಹೋಗುತ್ತಿರುವುದನ್ನು ತಡೆದಿದ್ದರೆ ಹೀಗಾಗುತ್ತಿರಲಿಲ್ಲ. ಎಲ್ಲದಕ್ಕೂ ಸರಕಾರವನ್ನು ದೂರುವುದರಲ್ಲಿ ಅರ್ಥವಿಲ್ಲ.
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಾಗಲೆಲ್ಲ, ಖಾಸಗಿ ನೀರಿನ ಟ್ಯಾಂಕರ್ ಮಾಫಿಯಾದ ಹಾವಳಿಯನ್ನು ತಡೆಗಟ್ಟಲು ಸರಕಾರ ಕ್ರಮ ಕೈಗೊಳ್ಳಬೇಕು. ಜನಸಾಮಾನ್ಯರ ಅಸಹಾಯಕ ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಂಡು ಟ್ಯಾಂಕರ್ ಮಾಲಕರು ಸುಲಿಗೆಗೆ ಮುಂದಾಗುತ್ತಾರೆ. ಇದಕ್ಕೆ ಅವಕಾಶ ನೀಡಬಾರದು. ಇದರಲ್ಲಿ ಜನಪ್ರತಿನಿಧಿಗಳ ಪಾತ್ರ ಮುಖ್ಯವಾಗಿದೆ.ತಮ್ಮನ್ನು ಚುನಾಯಿಸಿದ ಜನರ ಕುಡಿಯುವ ನೀರಿನಂಥ ಸಮಸ್ಯೆಗಳನ್ನು ನಿವಾರಿಸಲು ಅಗತ್ಯದ ಕ್ರಮಗಳನ್ನು ಕೈಗೊಳ್ಳಬೇಕು.







