ಇದೆಂತಹ ಪ್ರೀತಿ?

ಸಾಂದರ್ಭಿಕ ಚಿತ್ರ (AI)
ಕೋಮುಗಲಭೆಗಳಿಗಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆ, ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಹಲ್ಲೆ, ದೌರ್ಜನ್ಯಗಳಿಗಾಗಿ ಮಾಧ್ಯಮಗಳಲ್ಲಿ ಗುರುತಿಸಲ್ಪಡುತ್ತಿದೆ. ಯುವಕರು ಹಾಡುಹಾಗಲೇ ತಲವಾರು ಹಿಡಿದು ಒಂಟಿ ಮಹಿಳೆಯರ ಮೇಲೆ ಎರಗುವ ವಾತಾವರಣ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿದೆ. ಇತ್ತೀಚೆಗೆ ಬಂಟ್ವಾಳದಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಯುವಕನೊಬ್ಬ ಮಾರಕಾಸ್ತ್ರದಿಂದ ದಾಳಿ ಮಾಡಿದ್ದ. ವಿದ್ಯಾರ್ಥಿನಿ ಬಸ್ಸ್ಟ್ಯಾಂಡ್ನಲ್ಲಿ ಬಸ್ ಕಾಯುತ್ತಿದ್ದಾಗ ಈ ದಾಳಿ ನಡೆದಿದ್ದು, ಆಕೆ ಗಂಭೀರ ಗಾಯಗೊಂಡಿದ್ದಳು. ಯುವಕನ ಏಕಮುಖ ಪ್ರೀತಿಯೇ ಈ ದಾಳಿಗೆ ಕಾರಣವೆಂದು ಹೇಳಲಾಗಿತ್ತು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಬಂಟ್ವಾಳ ಸಮೀಪ ಇನ್ನೊಂದು ಭೀಕರ ಕೃತ್ಯ ನಡೆದಿದೆ. ಬಿ.ಸಿ.ರೋಡ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಮೀಪ ಯುವತಿಯೊಬ್ಬಳನ್ನು ಬೆಳ್ತಂಗಡಿಯ ಚೇತನ್ ಎಂಬಾತ ತಲವಾರಿನಿಂದ ಬರ್ಬರವಾಗಿ ಹಲ್ಲೆ ನಡೆಸಿ ಕೊಂದು ಹಾಕಿದ್ದಾನೆ. ಈ ಕೃತ್ಯಕ್ಕೂ ಯುವಕನ ಏಕಮುಖ ಪ್ರೀತಿಯೇ ಕಾರಣ ಎಂದು ಹೇಳಲಾಗುತ್ತಿದೆ. ವಿಪರ್ಯಾಸವೆಂದರೆ, ಯುವಕ ಯುವತಿಯ ದೂರದ ಸಂಬಂಧಿಯಂತೆ. ಇಂತಹದೇ ಘಟನೆಯೊಂದು ಬೆಂಗಳೂರಿನ ಜೀವನ್ ಭೀಮಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲೂ ನಡೆದಿದೆ. ಅಣ್ಣನ ಪ್ರೀತಿಯನ್ನು ನಿರಾಕರಿಸಿದ್ದಾಳೆ ಎಂದು ಯುವಕನೊಬ್ಬ ಯುವತಿಯನ್ನು ಇರಿದು ಕೊಂದಿದ್ದಾನೆ. ವಿಚ್ಛೇದಿತ ಯುವಕ ತನ್ನ ಹಿಂದಿನ ಮದುವೆಯನ್ನು, ತನಗೆ ಒಂದು ಮಗು ಇರುವುದನ್ನು ಮುಚ್ಚಿಟ್ಟು ಯುವತಿಯನ್ನು ಪ್ರೀತಿಸಿದ್ದಾನೆ. ಆದರೆ ಬಳಿಕ ಯುವತಿಗೆ ಸತ್ಯ ಗೊತ್ತಾಗಿದ್ದು ಯುವಕನನ್ನು ನಿರಾಕರಿಸಿದ್ದಾಳೆ. ಇದರಿಂದ ಯುವಕನ ತಮ್ಮ ರೊಚ್ಚಿಗೆದ್ದು ಯುವತಿಯನ್ನು ಕೊಂದು ಹಾಕಿದ್ದಾನೆ ಎಂದು ಪೊಲೀಸ್ ಮೂಲಗಳು ಹತ್ಯೆಗೆ ಕಾರಣವನ್ನು ನೀಡುತ್ತವೆ.
ಈ ಮೂರು ಪ್ರಕರಣಗಳಲ್ಲಿ ಪ್ರೀತಿ ಒಂದು ನೆಪ ಮಾತ್ರ. ಯುವಕರೊಳಗಿದ್ದ ಕ್ರಿಮಿನಲ್ ಮನಸ್ಥಿತಿಯೇ ಇಂತಹ ಕೃತ್ಯವನ್ನು ಎಸಗುವಂತೆ ಮಾಡಿದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿ ಬಿಡುತ್ತದೆ. ಇಂತಹ ಯುವಕರ ಪ್ರೀತಿಯನ್ನು ಒಪ್ಪಿ ಮದುವೆಯಾದರೂ, ಎಂದಾದರೊಂದು ದಿನ ಇವರು ಕೈ ಹಿಡಿದ ಪತ್ನಿಯನ್ನು ಯಾವುದೋ ನೆಪದಲ್ಲಿ ಕೊಂದು ಹಾಕುವವರೇ ಆಗಿದ್ದಾರೆ. ತಾವು ಪ್ರೀತಿಸುವ ಜೀವ ತಮಗೆ ಸಿಕ್ಕಿಲ್ಲ ಎಂದು ನಿಜಕ್ಕೂ ಪ್ರೀತಿಸುವ ಯಾರೂ ಅವರನ್ನು ಕೊಂದು ಹಾಕುವುದಿಲ್ಲ. ಕೊಂದು ಹಾಕುವ ಮನಸ್ಥಿತಿಯನ್ನು ಹೊಂದಿದ ಯಾರೂ ಪ್ರೀತಿಸುವುದಕ್ಕೆ, ಪ್ರೀತಿಸಲ್ಪಡುವುದಕ್ಕೆ ಯೋಗ್ಯರೂ ಅಲ್ಲ. ಮಹಿಳೆಯರನ್ನು ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಮಾರಕಾಸ್ತ್ರಗಳಿಂದ ಇರಿದು ಕೊಂದು ಹಾಕುವವರು ಮೂಲತಃ ಕ್ರಿಮಿನಲ್ ಮನಸ್ಥಿತಿಯವರು ಅಥವಾ ಮಾನಸಿಕ ಅಸ್ವಸ್ಥರಾಗಿರುತ್ತಾರೆ. ಈ ಆರೋಪಿಗಳು ಒಂದೋ ಜೈಲಿನಲ್ಲಿರಬೇಕು ಅಥವಾ ಮಾನಸಿಕ ಆಸ್ಪತ್ರೆಯಲ್ಲಿರಬೇಕು. ನಾಗರಿಕ ಸಮಾಜದೊಳಗೆ ಇರುವುದಕ್ಕಂತೂ ಅನರ್ಹರಾಗಿದ್ದಾರೆ. ಇಂತಹ ಅಪರಾಧ ಕೃತ್ಯಗಳಿಗೆ ಕಾರಣವಾಗುವ ಏಕಮುಖ ಪ್ರೀತಿಯು ಪರೋಕ್ಷವಾಗಿ ಹೆಣ್ಣಿನ ಕುರಿತಂತೆ ಪುರುಷನ ಮನಸ್ಥಿತಿಯನ್ನೂ ಎತ್ತಿ ಹಿಡಿಯುತ್ತದೆ. ಪುರುಷನೊಬ್ಬ ಪ್ರೀತಿಯನ್ನು ವ್ಯಕ್ತಪಡಿಸಿದರೆ ಅದನ್ನು ತಿರಸ್ಕರಿಸುವ ಯಾವ ಹಕ್ಕೂ ಮಹಿಳೆಗಿಲ್ಲ ಎನ್ನುವ ಮನಸ್ಥಿತಿ ಇಂತಹ ಕೃತ್ಯಗಳಿಗೆ ಕಾರಣವಾಗುತ್ತದೆ. ಹೆಣ್ಣಿನ ನಿರಾಕರಣೆ ಪುರುಷಾಹಂಕಾರಕ್ಕೆ ಮಾಡುವ ಧಕ್ಕೆ, ಅಂತಿಮವಾಗಿ ಆ ಹೆಣ್ಣಿನ ವಿರುದ್ಧ ದಾಳಿಗೆ ಪ್ರೇರೇಪಿಸುತ್ತದೆ.
ಹೆಣ್ಣಿನ ಮೇಲೆ ನಡೆಯುವ ಆ್ಯಸಿಡ್ ದಾಳಿಯೂ ‘ಹೆಣ್ಣಿಗೆ ಪಾಠ ಕಲಿಸುವ’ ಪುರುಷನ ಕ್ರಿಮಿನಲ್ ಮನಸ್ಥಿತಿಯ ಇನ್ನೊಂದು ಮುಖವಾಗಿದೆ. ಇಲ್ಲಿ ಹೆಣ್ಣಿನ ಮುಖವನ್ನು, ಸೌಂದರ್ಯವನ್ನು ಮತ್ತು ಆಕೆಯ ವ್ಯಕ್ತಿತ್ವವನ್ನು ಗುರಿ ಮಾಡಿ ದಾಳಿ ಮಾಡಲಾಗುತ್ತದೆ. ಆ್ಯಸಿಡ್ ದಾಳಿಗೊಳಗಾದ ಹೆಣ್ಣು ಇಲ್ಲಿ ಪ್ರತಿ ಕ್ಷಣವೂ ಸತ್ತು ಬದುಕಬೇಕಾಗುತ್ತದೆ. ಆದರೆ ದಾಳಿ ಮಾಡಿದವರಿಗೆ ಶಿಕ್ಷೆಯಾಗುವುದು ತೀರಾ ಕಡಿಮೆ. ಆದರೆ ಒಂಟಿ ಹೆಣ್ಣಿನ ಮೇಲೆ ಹಾಡುಹಗಲೇ ರೌಡಿಗಳು ದಾಳಿ ಮಾಡುವಂತೆ ತಲವಾರಿನಿಂದ ದಾಳಿ ಮಾಡುವ ವಾತಾವರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಮಾಣವಾಗಿರುವುದು ಕಳವಳಕಾರಿ. ಒಂದು ಕಾಲದಲ್ಲಿ ಸಂಘಪರಿವಾರ ನಾಯಕರು ‘‘ಯುವಕರು ತಲವಾರು ಹಿಡಿಯಿರಿ, ತ್ರಿಶೂಲ ಇಟ್ಟುಕೊಳ್ಳಿ, ಚಾಕು ಇಟ್ಟುಕೊಳ್ಳಿ’’ ಎಂದು ಸಾರ್ವಜನಿಕ ವೇದಿಕೆಯಲ್ಲಿ ಕರೆ ನೀಡುತ್ತಿದ್ದರು. ಇಂದು ಅದೇ ಯುವಕರು ಚಾಕು, ಚೂರಿಗಳನ್ನು ಒಂಟಿ ಹೆಣ್ಣು ಮಕ್ಕಳ ವಿರುದ್ಧ ಬಳಸಲು ಮುಂದಾಗಿರುವುದು ಆತಂಕಕಾರಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಹಲ್ಲೆ ಮತ್ತು ಹತ್ಯೆ ಈ ಎರಡೂ ಪ್ರಕರಣಗಳಲ್ಲಿ ಸಂತ್ರಸ್ತರು ಮತ್ತು ಆರೋಪಿಗಳು ಒಂದೇ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಪ್ರಕರಣ ಕೋಮು ಉದ್ವಿಗ್ನತೆಗೆ ಕಾರಣವಾಗಿಲ್ಲ. ಒಂದು ವೇಳೆ ಇಲ್ಲಿ ಹತ್ಯೆ ಮಾಡಿದಾತ ಬೇರೆ ಸಮುದಾಯಕ್ಕೆ ಸೇರಿದ್ದರೆ ಇದೇ ಹತ್ಯೆಯನ್ನು ಮುಂದಿಟ್ಟುಕೊಂಡು ಕೆಲವು ರಾಜಕೀಯ ಪಕ್ಷದ ನಾಯಕರು ಇನ್ನಷ್ಟು ಹತ್ಯೆಗಳಿಗೆ ವೇದಿಕೆ ನಿರ್ಮಾಣ ಮಾಡುತ್ತಿದ್ದರು. ವಿಪರ್ಯಾಸವೆಂದರೆ ಇಂತಹ ಹತ್ಯೆಗಳು ನಡೆದಾಗ ಆಯಾ ಧರ್ಮದ ಮುಖಂಡರು ಎಚ್ಚೆತ್ತು ತಮ್ಮದೇ ಸಮುದಾಯದ ಜನರಿಗೆ ಎಚ್ಚರಿಕೆಯ ಮಾತುಗಳನ್ನು ಆಡಲು ಸಿದ್ಧರಿರುವುದಿಲ್ಲ. ತಮ್ಮದೇ ಸಮುದಾಯದ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯಗಳು ಖಂಡನೆಗೆ, ಟೀಕೆಗೆ ಅರ್ಹವಾಗಬೇಕಾದರೆ ಆ ದೌರ್ಜನ್ಯವನ್ನು ಇನ್ನೊಂದು ಧರ್ಮ, ಸಮುದಾಯಕ್ಕೆ ಸೇರಿದ ಯುವಕರು ಎಸಗಿರಬೇಕು ಎನ್ನುವ ಅಲಿಖಿತ ನಿಯಮವೊಂದು ಕರಾವಳಿಯಲ್ಲಿದೆ. ಪುತ್ತೂರಿನಲ್ಲಿ ನಡೆದ ಯಾವುದೋ ಒಂದು ಸಣ್ಣ ಪ್ರಕರಣಕ್ಕೆ ರೆಕ್ಕೆ ಪುಕ್ಕ ಕಟ್ಟಿ ಅದನ್ನು ‘ಭಯಾನಕ’ವಾಗಿಸಲು ನೋಡಿದ ಬಿಜೆಪಿ ಮತ್ತು ಸಂಘಪರಿವಾರ ಮುಖಂಡರು ಬಂಟ್ವಾಳದಲ್ಲಿ ಹಾಡಹಗಲೇ ಹೆಣ್ಣೊಬ್ಬಳನ್ನು ಬರ್ಬರವಾಗಿ ಕೊಂದು ಹಾಕಿದ ಪ್ರಕರಣವನ್ನು ಕಂಡೂ ಕಾಣದಂತೆ ಇರುವುದಕ್ಕೆ ಇದೇ ಕಾರಣ.
ಕರಾವಳಿಯಲ್ಲಿ ಹಿಂಸಾ ಮನಸ್ಥಿತಿ ಹೇಗೆ ಯುವಕರನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ ಎನ್ನುವುದಕ್ಕೆ ಬಂಟ್ವಾಳದ ಘಟನೆ ಉದಾಹರಣೆಯಾಗಿದೆ. ಇಲ್ಲಿ ಪ್ರೀತಿ ಒಂದು ನೆಪ ಮಾತ್ರವಾಗಿದೆ. ಒಂದೆಡೆ ಗಾಂಜಾ, ಡ್ರಗ್ಸ್ ಯುವಕರನ್ನು ದಾರಿ ತಪ್ಪಿಸಿದರೆ ಇನ್ನೊಂದೆಡೆ, ಯುವಕರ ಕೈಗೆ ಧರ್ಮ, ಸಂಸ್ಕೃತಿಯ ಹೆಸರಿನಲ್ಲೇ ಚಾಕು, ಚೂರಿಗಳನ್ನು ಹಂಚುವ ಕೆಲಸ ನಡೆಯುತ್ತಿದೆ. ರಾಜಕೀಯ ನಾಯಕರೇ ಇದರ ನೇತೃತ್ವವನ್ನು ವಹಿಸಿದ್ದಾರೆ. ನೆರೆಮನೆಗೆ ಬಿದ್ದ ಬೆಂಕಿ ತನ್ನ ಮನೆಯನ್ನು ಸುಡುವುದಕ್ಕೆ ಹೆಚ್ಚು ಸಮಯಬೇಕಾಗಿಲ್ಲ. ಯುವ ತಲೆಮಾರಿನ ತಲೆಯಲ್ಲಿ ಹಿಂಸೆ, ದ್ವೇಷವನ್ನು ತುಂಬಿಸಿದರೆ ಅದು ಒಂದಲ್ಲ ಒಂದು ದಿನ ತಮ್ಮವರನ್ನೇ ಬಲಿತೆಗೆದುಕೊಳ್ಳಬಹುದು. ಇದನ್ನು ಕರಾವಳಿಯ ಎಲ್ಲ ಧರ್ಮ, ಸಮುದಾಯದ ಜನರು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಇಂದು ಎಲ್ಲ ಧರ್ಮದ ಜನರು ಧರ್ಮ ಜಾಗೃತಿಯ ಹೆಸರಿನಲ್ಲಿ ತಮ್ಮ ತಮ್ಮ ಸಮುದಾಯದ ಯುವಕರಿಗೆ ನೈತಿಕತೆ ಪ್ರಜ್ಞೆಯನ್ನು ತುಂಬುವ ಕೆಲಸವನ್ನು ಮಾಡಬೇಕು. ಇದರ ಜೊತೆ ಜೊತೆಗೆ ಪೊಲೀಸ್ ಇಲಾಖೆ ಕೂಡ ಎಚ್ಚೆತ್ತು ಕಾನೂನನ್ನು ಬಿಗಿ ಗೊಳಿಸಬೇಕು. ಇತ್ತ ಪ್ರೀತಿ ಪ್ರೇಮ ಎಂದು ಹಿಂದೆ ಬೀಳುವ ಯುವಕರ ಬಗ್ಗೆ ಯುವತಿಯರೂ ಜಾಗರೂಕರಾಗಬೇಕಾಗಿದೆ. ಯಾವನೇ ಯುವಕ ಪ್ರೀತಿ, ಪ್ರೇಮದ ಹೆಸರಿನಲ್ಲಿ ಪದೇ ಪದೇ ಹಿಂಬಾಲಿಸುವುದು, ಕಿರುಕುಳ ಕೊಡುವುದು ಮಾಡಿದರೆ ಆತನ ವಿರುದ್ಧ ತಕ್ಷಣ ಪೊಲೀಸ್ ಠಾಣೆಗೆ ತಿಳಿಸುವುದು ಉಚಿತ ಮತ್ತು ಇಂತಹ ದೂರುಗಳು ಬಂದಾಗ ಪೊಲೀಸ್ ಇಲಾಖೆಯೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಹೆಣ್ಣು ಮಕ್ಕಳು ಹಗಲಿನಲ್ಲೇ ಒಂಟಿಯಾಗಿ ಓಡಾಡುವುದು ಹೆದರಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ಬುದ್ಧಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆಗೆ ಯಾವ ಕಾರಣಕ್ಕೂ ಭೂಷಣವಲ್ಲ.






