Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ರಾಜಕೀಯ, ಧಾರ್ಮಿಕ ರ‍್ಯಾಲಿಗಳಿಗೆ ಈ...

ರಾಜಕೀಯ, ಧಾರ್ಮಿಕ ರ‍್ಯಾಲಿಗಳಿಗೆ ಈ ದೇಶದಲ್ಲಿ ನಿಷೇಧ ಎಂದು?

ವಾರ್ತಾಭಾರತಿವಾರ್ತಾಭಾರತಿ29 Sept 2025 7:26 AM IST
share
ರಾಜಕೀಯ, ಧಾರ್ಮಿಕ ರ‍್ಯಾಲಿಗಳಿಗೆ ಈ ದೇಶದಲ್ಲಿ ನಿಷೇಧ ಎಂದು?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಅಮಾಯಕರನ್ನು ಬಲಿ ಪಡೆಯದೇ ಈ ದೇಶದಲ್ಲಿ ರಾಜಕೀಯ ನಾಯಕನಾಗಿ ಹೊರಹೊಮ್ಮಲು ಸಾಧ್ಯವೇ ಇಲ್ಲವೆ? ತಮಿಳು ನಾಡಿನ ಕರೂರಿನಲ್ಲಿ ನಟ, ರಾಜಕಾರಣಿ ವಿಜಯ್ ಅವರ ರ‍್ಯಾಲಿಯಲ್ಲಿ ನಡೆದ ಭಾರೀ ಕಾಲ್ತುಳಿತ ದುರಂತದ ಬಳಿಕ ಈ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. ರಾಜಕಾರಣದಲ್ಲಿ ತನ್ನನ್ನು ತಾನು ಪ್ರತಿಷ್ಠಾಪಿಸಲು ಹೆಣಗಾಡುತ್ತಿರುವ ನಟ ವಿಜಯ್, ಕರೂರು-ಈರೋಡ್ ಹೆದ್ದಾರಿಯಲ್ಲಿರುವ ವೇಲು ಸಾಮಿಪುರಂ ಎಂಬಲ್ಲಿ ನಡೆಸಿದ ಬೃಹತ್ ರ‍್ಯಾಲಿ ಕಾಲ್ತುಳಿತ ದುರಂತದಲ್ಲಿ ಮುಕ್ತಾಯ ಕಂಡಿದೆ. ಸುಮಾರು 40 ಮಂದಿ ಮೃತಪಟ್ಟಿದ್ದು 50ಕ್ಕೂ ಅಧಿಕ ಮಂದಿ ದುರಂತದಲ್ಲಿ ಗಾಯಗೊಂಡಿದ್ದಾರೆ. ತಮ್ಮ ಮೆಚ್ಚಿನ ನಟನನ್ನು ನೋಡಲೆಂದು ಬಂದ ಮಕ್ಕಳು, ಮಹಿಳೆಯರು, ವೃದ್ದರೂ ಈ ಭೀಕರ ದುರಂತಕ್ಕೆ ಬಲಿಯಾಗಿದ್ದಾರೆ. ಮೇಲ್ನೋಟಕ್ಕೆ ಇದೊಂದು ಅಪಘಾತವಾಗಿದ್ದರೂ, ವಿವೇಕದ ಕಣ್ಣಿಂದ ನೋಡಿದರೆ ಇದೊಂದು ಭಾರೀ ಅಪರಾಧವೆನ್ನುವುದು ಸ್ಪಷ್ಟವಾಗಿ ಬಿಡುತ್ತದೆ. ತನ್ನ ರಾಜಕೀಯ ಮಹತ್ವಾಕಾಂಕ್ಷೆಗಾಗಿ ಇಂತಹದೊಂದು ದುರಂತವನ್ನು ನಟ ವಿಜಯ್ ಪ್ರಾಯೋಜಿಸಿದರೇ ಎನ್ನುವ ಅನುಮಾನ ಜನರಲ್ಲಿ ಹುಟ್ಟಿ ಬಿಟ್ಟಿದೆ.

ತಮಿಳುನಾಡಿನಲ್ಲಿ ಸಿನೆಮಾ ಮತ್ತು ರಾಜಕೀಯ ಇವುಗಳ ನಡುವಿನ ಪರದೆ ತೀರಾ ತೆಳುವಾದುದು. ಜನರು ಸಿನೆಮಾ ತಾರೆಯರ ಮೂಲಕ ತಮ್ಮ ಕನಸುಗಳ ಬೆನ್ನು ಹತ್ತುತ್ತಾರೆ. ತಮಿಳುನಾಡಿನ ಜನರು ಸಿನೆಮಾ ಸ್ಟಾರ್‌ಗಳನ್ನು ಎತ್ತರಕ್ಕೆ ಬೆಳೆಸಿದಷ್ಟು ಬೇರಾವ ರಾಜ್ಯಗಳ ಜನರೂ ಬೆಳೆಸಿಲ್ಲ. ರಜನೀಕಾಂತ್, ಜಯಲಲಿತಾರಂತಹ ನಟ, ನಟಿಯರು ಕರ್ನಾಟಕದಲ್ಲೇ ಉಳಿದು ಬಿಟ್ಟಿದ್ದರೆ ಇಷ್ಟು ಎತ್ತರಕ್ಕೆ ಏರುತ್ತಿರಲಿಲ್ಲವೇನೋ. ಇಷ್ಟಾದರೂ ಜಯಲಲಿತಾ ಅವರ ಬಳಿಕ ಇತರ ತಮಿಳು ಸಿನೆಮಾ ನಟರಿಗೆ ಮತ್ತೊಮ್ಮೆ ರಾಜಕೀಯ ಚುಕ್ಕಾಣಿಯನ್ನು ಕೈಗೆ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಅಂತಹ ರಜನಿಕಾಂತ್ ಕೂಡ ಈ ಪ್ರಯತ್ನದಲ್ಲಿ ವಿಫಲರಾದರು. ಕಮಲ್ ಹಾಸನ್ ರಾಜಕೀಯ ಪಕ್ಷವನ್ನು ಸ್ಥಾಪಿಸಿದರಾದರೂ ಇದ್ದೂ ಇಲ್ಲದಂತಿದ್ದಾರೆ. ವಿಜಯಕಾಂತ್ ಸಣ್ಣ ಮಟ್ಟಿಗೆ ಯಶಸ್ವಿಯಾದರೂ ಪೂರ್ಣ ಪ್ರಮಾಣದಲ್ಲಿ ತಮಿಳರ ಮನಸ್ಸನ್ನು ರಾಜಕೀಯ ಕ್ಷೇತ್ರದಲ್ಲಿ ಗೆಲ್ಲಲು ವಿಫಲವಾದರು. ಇದಕ್ಕೆ ಕಾರಣವೂ ಇದೆ. ಎಂಜಿಆರ್, ಕರುಣಾನಿಧಿ, ಜಯಲಲಿತಾ ಬರೇ ತಮ್ಮ ಸಿನಿಮಾ ವರ್ಚಸ್ಸನ್ನು ಬಳಸಿಕೊಂಡು ಮುಂದೆ ಬಂದವರಲ್ಲ. ರಾಜಕೀಯವಾಗಿ ಅವರು ತಳಸ್ತರದ ಜನರ ಬಗ್ಗೆ ಆಳವಾಗಿ ಚಿಂತಿಸಿದ್ದರು. ತಮಿಳು ನಾಡಿನ ದ್ರಾವಿಡ ಚಳವಳಿಯನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಸಿಕೊಂಡು ರಾಜಕೀಯವಾಗಿ ಮೇಲೇರಿದರು. ತಮಿಳು ಅಸ್ಥಿತೆ ಇಂದಿಗೂ ಉತ್ತರ ಭಾರತಕ್ಕೆ ಸವಾಲು ಹಾಕುವಂತೆ ಗಟ್ಟಿಯಾಗಿ ನಿಂತಿರುವುದು ಈ ಕಾರಣಕ್ಕೆ. ರಜನಿಕಾಂತ್, ಕಮಲ್ ಹಾಸನ್ ಅವರು ತಮ್ಮ ತಾರಾ ವರ್ಚಸ್ಸನೇ ಬಂಡವಾಳವಾಗಿಸಿಕೊಂಡರು. ಸೈದ್ಧಾಂತಿಕವಾಗಿ ಅವರು ದುರ್ಬಲರಾಗಿದ್ದ ಕಾರಣ ತಳಸ್ತರದ ತಮಿಳರನ್ನು ರಾಜಕೀಯವಾಗಿ ತಲುಪಲು ವಿಫಲರಾದರು. ಇದೀಗ ತಮಿಳು ಜನರನ್ನು ರಾಜಕೀಯವಾಗಿ ತಲುಪಲು ಯತ್ನಿಸುತ್ತಿರುವ ನಟ ವಿಜಯ್‌ಗೆ ಇದರ ಅರಿವು ಇದ್ದಂತಿದೆ. ಆದುದರಿಂದಲೇ, ಅವರು ತಮಿಳು ಅಸ್ಥಿತೆಯ ಚುಂಗನ್ನು ಹಿಡಿದುಕೊಂಡು ರಾಜಕೀಯವಾಗಿ ಮೇಲೇರಲು ಶತಪ್ರಯತ್ನ ಪಡುತ್ತಿದ್ದಾರೆ.

ತನ್ನ ಅಭಿಮಾನಿ ಸಂಘದ ಮೂಲಕವೇ ರಾಜಕೀಯಕ್ಕೆ 2009ರಲ್ಲಿ ಕಾಲಿಟ್ಟ ವಿಜಯ್ ಆರಂಭದಲ್ಲಿ ಎಐಡಿಎಂಕೆಯನ್ನು ಬೆಂಬಲಿಸಿದರು. 2021ರ ತಮಿಳುನಾಡಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದರು. ಇದೇ ಸಂದರ್ಭದಲ್ಲಿ ಎಐಡಿಎಂಕೆ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡುತ್ತಾ ತಮಿಳುನಾಡಿನ ಹಿತಾಸಕ್ತಿಯನ್ನು ಬಲಿಕೊಡುತ್ತಿರುವುದನ್ನು ಗಮನಿಸಿ ವಿಜಯ್ ಸೈದ್ದಾಂತಿಕವಾಗಿ ತನ್ನನ್ನು ತಾನು ಸ್ಪಷ್ಟವಾಗಿ ಗುರುತಿಸಿಕೊಳ್ಳತೊಡಗಿದರು. ಕೇಂದ್ರದ ಪೌರತ್ವ ಕಾಯ್ದೆಯ ವಿರುದ್ದ ಸ್ಪಷ್ಟ ಧ್ವನಿಯಲ್ಲಿ ಮಾತನಾಡಿ ಅಲ್ಪಸಂಖ್ಯಾತರ ಬೆಂಬಲವನ್ನು ತನ್ನದಾಗಿಸಿಕೊಂಡರು. ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆಯೂ ತಮಿಳು ಹಿತಾಸಕ್ತಿಯನ್ನು ಎತ್ತಿ ಹಿಡಿದು ಯುವಜನರಿಗೆ ಇನ್ನಷ್ಟು ಹತ್ತಿರವಾದರು. ರಾಜಕೀಯವಾಗಿ ರಜನಿಕಾಂತ್ ಮತ್ತು ಕಮಲ್ ಹಾಸನ್‌ಗಿದ್ದ ಗೊಂದಲಗಳು ವಿಜಯ್ ಅವರಲ್ಲಿ ಇರಲಿಲ್ಲ. ಆದುದರಿಂದಲೇ ನಿಧಾನಕ್ಕೆ ಅವರ ಜನಪ್ರಿಯತೆ ತಮಿಳುನಾಡಿನಲ್ಲಿ ವ್ಯಾಪಕವಾಗತೊಡಗಿತ್ತು. ಡಿಎಂಕೆಗೇ ಅವರು ನೇರ ಸವಾಲಾಗತೊಡಗಿದರು. ಡಿಎಂಕೆಯೊಳಗೂ ಸಣ್ಣದೊಂದು ಆತಂಕ, ಕಳವಳ ವಿಜಯ್ ಕುರಿತಂತೆ ಮೂಡಿತ್ತು. ವಿಜಯ್ ರಾಜಕೀಯವಾಗಿ ಬೆಳೆದ ಹಾಗೆ ಅದು ಡಿಎಂಕೆಗೆ ಹಿನ್ನಡೆಯಾಗಬಹುದು ಎನ್ನುವ ಅಭಿಪ್ರಾಯವೂ ಇದೆ. ಈ ಹಿನ್ನೆಲೆಯಲ್ಲಿ ಕರೂರಿನಲ್ಲಿ ಸೇರಿದ ಭಾರೀ ಜನಸಮೂಹ ಡಿಎಂಕೆಯನ್ನು ಇನ್ನಷ್ಟು ಕಂಗೆಡುವ ಹಾಗೆ ಮಾಡಿದ್ದರೆ ಅಚ್ಚರಿಯೇನೂ ಇಲ್ಲ. ಆದರೆ ಜನರನ್ನು ಸೇರಿಸುವ ಭರದಲ್ಲಿ ಅದನ್ನು ನಿಭಾಯಿಸಲಾಗದೆ ವಿಜಯ್ ಪರೋಕ್ಷವಾಗಿ ದುರಂತಕ್ಕೆ ಕಾರಣವಾದರು.

ದುರಂತವನ್ನು ಸ್ವತಂತ್ರವಾಗಿ ತನಿಖೆ ನಡೆಸಲು ಸ್ವತ ವಿಜಯ್ ಮನವಿ ಮಾಡಿದ್ದಾರೆ ಮಾತ್ರವಲ್ಲ, ಈ ಕಾಲ್ತುಳಿತದ ಹಿಂದೆ ಪಿತೂರಿಯಿದೆ ಎಂದು ಆರೋಪಿಸಿದ್ದಾರೆ. ಆದರೆ ಈ ಪಿತೂರಿಯ ಉರುಳಿಗೆ ವಿಜಯ್ ಸುಲಭದಲ್ಲಿ ಯಾಕೆ ಕೊರಳನ್ನು ಕೊಟ್ಟರು ಎನ್ನುವ ಪ್ರಶ್ನೆಯೂ ನಿರ್ಲಕ್ಷಿಸುವಂತಹದಲ್ಲ. ಪೊಲೀಸರು ರ್ಯಾಲಿಗೆ ಮುನ್ನ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ನೀಡಿದ್ದರು. ಹಲವು ನಿರ್ಬಂಧಗಳನ್ನು ವಿಧಿಸಿದ್ದರು. ಆದರೆ ಬಹುತೇಕ ನಿರ್ಬಂಧಗಳನ್ನು ಪಾಲಿಸಿರಲಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ. ಕಾಲ್ತುಳಿತಕ್ಕೆ ಮೊದಲೇ ಜನರು ನೀರಿಗಾಗಿ ಹಾಹಾಕಾರ ಪಡುತ್ತಿದ್ದರು. ಉಸಿರಾಡಲು ಸಾಧ್ಯವಿಲ್ಲದೆ ಜನಸಂದಣಿಯಲ್ಲಿ ಒದ್ದಾಡುತ್ತಿದ್ದರು. ಇವೆಲ್ಲದರ ನಡುವೆ, ಕಾರ್ಯಕ್ರಮಕ್ಕೆ ವಿಜಯ್ ತಡವಾಗಿ ಆಗಮಿಸಿರುವುದು ಕೂಡ ಜನರ ಸಹನೆಯನ್ನು ಕೆಡಿಸಿತ್ತು. ಸೇರಿದ ಭಾರೀ ಜನಸಂದಣಿಯನ್ನು ಕಂಡ ಬಳಿಕವಾದರೂ ವಿಜಯ್ ಎಚ್ಚೆತ್ತುಕೊಳ್ಳಬೇಕಾಗಿತ್ತು. ಆದರೆ ಜನರನ್ನು ಹುಚ್ಚೆಬ್ಬಿಸುವ ಮಾತುಗಾರಿಕೆಗೆ ಇಳಿದರು. ತನಗಾಗಿ ಸೇರಿದ ಅಷ್ಟೂ ಜನರ ಪ್ರಾಣ, ಮಾನವನ್ನು ಕಾಪಾಡುವುದು ತನ್ನ ಹೊಣೆಗಾರಿಕೆ ಎನ್ನುವುದನ್ನು ಅರಿಯದೆ ಬೇಜವಾಬ್ದಾರಿಯಿಂದ ವರ್ತಿಸಿದ ನಾಯಕ, ಇಡೀ ತಮಿಳುನಾಡಿನ ಜವಾಬ್ದಾರಿಯನ್ನು ಹೇಗೆ ಕೈಗೆತ್ತಿಕೊಳ್ಳಬಲ್ಲ?

ಈ ಹಿಂದೆ ಹಲವು ಭಯಾನಕ ಕಾಲ್ತುಳಿತಗಳು ಸಂಭವಿಸಿವೆಯಾದರೂ ಅದರಿಂದ ಈ ದೇಶ ಯಾವುದೇ ಪಾಠವನ್ನು ಕಲಿತಿಲ್ಲ. ಇತ್ತೀಚೆಗಷ್ಟೇ ಕುಂಭಮೇಳದಲ್ಲಿ ನಡೆದ ದುರಂತ, ಬೆಂಗಳೂರಿನಲ್ಲಿ ಕ್ರಿಕೆಟ್ ಹೆಸರಿನಲ್ಲಿ ನಡೆದ ಕಾಲ್ತುಳಿತ, ಇದೀಗ ವಿಜಯ್ ರಾಜಕೀಯ ರ್ಯಾಲಿಯಲ್ಲಿ ನಡೆದ ದುರಂತ ಇವೆಲ್ಲವೂ ಈ ರಾಜಕೀಯ ಮತ್ತು ಧಾರ್ಮಿಕ ರ್ಯಾಲಿಗಳ ವಿರುದ್ಧ ಕಠಿಣ ಕಾನೂನನ್ನು ಜಾರಿಗೊಳಿಸಲು ಧಾರಾಳ ಸಾಕು. ಆದರೆ ಸರಕಾರ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಕೊರೋನ ಈ ದೇಶವನ್ನು ಮುಕ್ಕಿ ತಿನ್ನುತ್ತಿದ್ದ ಹೊತ್ತಿನಲ್ಲಿ ಪ್ರಧಾನಿ ಮೋದಿಯವರೇ ಪಶ್ಚಿಮಬಂಗಾಳದಲ್ಲಿ ಲಕ್ಷಾಂತರ ಜನರನ್ನು ಸೇರಿಸಿ 'ಅದನ್ನು ತನ್ನ ಪಕ್ಷದ ಸಾಧನೆ' ಎಂಬಂತೆ ಬಿಂಬಿಸಿಕೊಂಡಿದ್ದರು. ಈ ದೇಶದಲ್ಲಿ ಕೊರೋನ ವ್ಯಾಪಕವಾಗಲು ಪ್ರಧಾನಿ ನೇತೃತ್ವದ ರ್ಕ್ಯಾಲಿಗಳ ಪಾತ್ರವೂ ಬಹು ದೊಡ್ಡದಿದೆ. ಇದು ಮಾಡಿದ ಅನಾಹುತ ಯಾವುದೇ ಕಾಲ್ತುಳಿತ ದುರಂತಕ್ಕಿಂತ ಕಡಿಮೆಯಿಲ್ಲ. ಧರ್ಮದ ಹೆಸರಿನಲ್ಲಿ, ರಾಜಕೀಯ, ಕ್ರೀಡೆಯ ಹೆಸರಿನಲ್ಲಿ ಲಕ್ಷಾಂತರ ಜನರನ್ನು ಸೇರಿಸುವ, ರ್ಯಾಲಿ ನಡೆಸುವುದರ ವಿರುದ್ದ ಕಠಿಣ ಕಾಯ್ದೆಯನ್ನು ಜಾರಿಗೊಳಿಸಲು ಸರಕಾರವನ್ನು ಒತ್ತಾಯಿಸುವುದಕ್ಕಾಗಿ ಒಂದು ಆಂದೋಲನವನ್ನು ಜನಸಾಮಾನ್ಯರೇ ರೂಪಿಸಬೇಕಾಗಿದೆ. ಹಾಗೆಯೇ ರಾಜಕಾರಣಿಗಳು, ನಟರು ಕರೆ ನೀಡಿದಾಕ್ಷಣ ನಾ ಮುಂದು, ತಾ ಮುಂದೆ ಎಂದು ಅಲ್ಲಿಗೆ ಧಾವಿಸುವ ಜನಸಾಮಾನ್ಯರೂ ಕೂಡ ಈ ದುರಂತದ ಸಮಾನ ಪಾಲುದಾರರು. ಯಾವುದೇ ರಾಜಕೀಯ, ಧಾರ್ಮಿಕ ರ್ಯಾಲಿಗಳಲ್ಲಿ ತಾವು ಭಾಗವಹಿಸುವುದಿಲ್ಲ ಎಂದು ಈ ದೇಶದ ಜನತೆ ಸ್ವಯಂ ನಿರ್ಧಾರ ತೆಗೆದುಕೊಂಡಾಗ ರಾಜಕಾರಣಿಗಳೂ ಈ ಬಗ್ಗೆ ಗಂಭೀರವಾಗಿ ಯೋಚಿಸಲು ಆರಂಭಿಸುತ್ತಾರೆ. ಜನರನ್ನು ಸಾಮೂಹಿಕವಾಗಿ ಸಾಯಿಸುವ ರಾಜಕೀಯ, ಧಾರ್ಮಿಕ ರ್ಯಾಲಿಗಳಿಗಾಗಿ ಆಯಾ ಪಕ್ಷ, ಧರ್ಮದ ಸಂಘಟಕರನ್ನು ನೇರ ಹೊಣೆ ಮಾಡಿ ಅವರಿಗೆ ಕಠಿಣ ಶಿಕ್ಷೆ ವಿಧಿಸಲು ಮುಂದಾದಾಗ ಇಂತಹ ಅವಘಡಗಳು, ದುರಂತಗಳು ಈ ದೇಶದಲ್ಲಿ ಕಡಿಮೆಯಾಗಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X